ಬೇಬಿ ಕಾರ್ನ್ ಸ್ಯಾಟೇ

ಬೇಬಿಕಾರ್ನ್ ಅಂದ ಕೂಡಲೇ ನಮಗೆ ಥಟ್ ಅಂತಾ ನೆನಪಾಗೋದೇ ಬೇಬೇ ಕಾರ್ನ್ ಮಂಚೂರಿಯನ್. ಅದರ ಹೊರತಾಗಿ ಕೆಲವರು ಪಲ್ಯ ಮತ್ತು ಗೊಜ್ಜು ಮಾಡಲೂ ಸಹಾ ಬಳೆಸುತ್ತಾರೆ. ಇದರ ಹೊರತಾಗಿಯೂ ಬೇಬೀಕಾರ್ನ್ ಬಳಸಿಕೊಂಡು ರುಚಿಕರವಾದ ಸ್ಯಾಟೇ ತಯಾರಿಸುವ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಬೇಬಿ ಕಾರ್ನ್ ಸ್ಯಾಟೇ ತಯಾರಿಸಲು ಬೇಕಾಗುವ  ಪದಾರ್ಥಗಳು

  • ಗೋಡಂಬಿ 1/2 ಕಪ್
  • ಕಡಲೇಕಾಯಿ ಬೀಜ 1/2 ಕಪ್
  • ಮೈದಾ 1 ಕಪ್
  • ಜೋಳದ ಹಿಟ್ಟು 1/2 ಕಪ್
  • ಚಿಟುಕೆ ಅಡುಗೆ ಸೋಡಾ
  • ಸಕ್ಕರೆ 1/2 ಚಮಚ
  • ಬ್ಯಾಡಿಗೆ ಮೆಣಸಿನಕಾಯಿ 15
  • ಬೇಬಿ ಕಾರ್ನ್ 1 ಪ್ಯಾಕೆಟ್
  • ಶುಂಠಿ 1/2 ಇಂಚು
  • ಬೆಳ್ಳುಳ್ಳಿ 15 ಎಸಳು
  • ಹಸೀಮೆಣಸಿನಕಾಯಿ 8
  • ಟೊಮೆಟೊ ಸಾಸ್ 2 ಚಮಚ
  • ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು
  • ರುಚಿಗೆ ತಕ್ಕಷ್ಟು ಉಪ್ಪು

ಬೇಬಿ ಕಾರ್ನ್ ಸ್ಯಾಟೇ ತಯಾರಿಸುವ ವಿಧಾನ

WhatsApp Image 2020-05-09 at 9.09.39 PM

 

  • ಬ್ಯಾಡಿಗೆ ಮೆಣಸಿನಕಾಯಿಯನ್ನು 1 ಗಂಟೆ ಬಿಸಿ ನೀರಿನಲ್ಲಿ ನೆನೆಸಿಕೊಂಡು ಅದನ್ನು ಚೆನ್ನಾಗಿ ಗಟ್ಟಿಯಾಗಿ ರುಬ್ಬಿಕೊಳ್ಳ ಬೇಕು
  • ಮೊದಲು ಬೇಬಿ ಕಾರ್ನ್‌ಗಳನ್ನು ಸುಮಾರು 4 -6 ನಿಮಿಷಗಳಷ್ಟು ಕಾಲ ಹಬೆಯಲ್ಲಿ ಬೇಯಿಸಿ  ಅದನ್ನು ಆರಲು ಬಿಡಿ.
  • ಶುಂಠಿ, ಬೆಳ್ಳುಳ್ಳಿ ಮತ್ತು ಹಸೀ ಮೆಣಸಿನಕಾಯಿಯನ್ನೂ ಸಹಾ ಚೆನ್ನಾಗಿ ರುಬ್ಬಿ ಪೇಸ್ಟ್  ಮಾಡಿಕೊಳ್ಳಬೇಕು
  • ಕಡಲೇಕಾಯಿಯನ್ನು ಬಾಣಲೆಯಲ್ಲಿ ಸ್ವಲ್ಪ ಹುರಿದು, ಮೇಲಿನ ಸಿಪ್ಪೆಯನ್ನು ತೆಗೆದು ಅದರ ಜೊತೆಗೆ ಗೋಡಂಬಿಯನ್ನೂ ಸ್ವಲ್ಪ ಹುರಿದು, ಎರಡನ್ನೂ ನುಣ್ಣಗೆ ಪುಡಿ ಮಾಡಿಟ್ಟು ಕೊಳ್ಳಬೇಕು. .
  • ಮೈದಾ ಮತ್ತು ಜೋಳದ ಹಿಟ್ಟು ಮತ್ತು ಚಿಟುಕಿ ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ದೋಸೆ ಹಿಟ್ಟಿನ ಹದ ಬರುವಂತೆ ತಿರುವಿಕೊಂಡು ಹಬೆಯಲ್ಲಿ ಬೇಯಿಸಿಟ್ಟು ಕೊಂಡಿದ್ದ ಬೇಬಿ ಕಾರ್ನ್ಗಳನ್ನು ಹಿಟ್ಟಿನಲ್ಲಿ   ಚೆನ್ನಾಗಿ ಅದ್ದಿ  ಸುಮಾರು ಹತ್ತು ನಿಮಿಷಗಳಷ್ಟು ಸಮಯ, ಹಿಟ್ಟು ಮತ್ತು ಬೇಬೀಕಾರ್ನ್ ನೆನೆಯುವಂತೆ  ಬಿಡಬೇಕು.
  • ದಪ್ಪ ತಳದ ಬಾಣೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ  ಮಿಶ್ರಣದಲ್ಲಿ ನೆನೆಸಿಟ್ಟು ಕೊಂಡಿದ್ದ ಬೇಬಿ ಕಾರ್ನ್ಗಳನ್ನು ಹಾಕಿ  ಚೆನ್ನಾಗಿ  ಕರಿದು ಅದು ತಣ್ಣಗಾಗಲು ಬಿಡಬೇಕು.
  • ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ನಂತರ, ಶುಂಠಿ, ಬೆಳ್ಳುಳ್ಳಿ ಮತ್ತು ಹಸೀಮೆಣಸಿನಕಾಯಿ ಪೇಸ್ಟ್ ಹಾಕಿ ಹಸೀ ಹೋಗುವ ವರೆಗೂ ಬಾಡಿಸಿಕೊಳ್ಳಬೇಕು
  • ಬಾಣಲೆಗೆ ಬ್ಯಾಡಗೀ ಮೆಣಸಿನಕಾಯಿ ಪೇಸ್ಟ್,,  ಟೊಮೆಟೊ ಸಾಸ್, ಚಿಟಿಕೆ  ಉಪ್ಪು,  ಸಕ್ಕರೆ ಅದಕ್ಕೆ ಹಾಕಿ, ಅರ್ಧ ಚಮಚ ಜೋಳದ ಹಿಟ್ಟನ್ನು ಅರ್ಧ ಕಪ್ ನೀರಿನಲ್ಲಿ ಚೆನ್ನಾಗಿ ಬೆರೆಸಿ ಅದಕ್ಕೆ ಹಾಕಿ ಕುದಿಸಿದರೆ ಸಾಸ್ ಸಿದ್ಧ.
  • ಈ ಮಿಶ್ರಣ ಕುದಿಯುವ ಹಂತಕ್ಕೆ ಬಂದಾಗ ಗೋಡಂಬಿ ಸೇರಿಸಿ ನೆಲಗಡಲೆ ಪುಡಿ ಸೇರಿಸಿ ಚೆನ್ನಾಗಿ ತಿರುವಿ ಆರಲು ಬಿಡಬೇಕು.
  • ಎಲ್ಲರಿಗೂ ಬಡಿಸುವ ಮೊದಲು ಕರಿದಿಟ್ಟು ಕೊಂಡಿದ್ದ ಬೇಬಿ ಕಾರ್ನ್ಗಳಿಗೆ ಟೂಟ್ ಪೀಕ್ ಗಳನ್ನು ಚುಚ್ಚಿ ಅದನ್ನು ಸಿದ್ಧ ಪಡಿಸಿಟ್ಟು ಕೊಂಡಿದ್ದ ಸಾಸ್ ನಲ್ಲಿ ಅದ್ದಿ ಒಂದು ತಟ್ಟೆಯಲ್ಲಿ  ಜೋಡಿಸಿಟ್ಟು ಅಲಂಕಾರಿಕವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದಲ್ಲಿ  ಗರಿ ಗರಿಯಾದ ರುಚಿ ರುಚಿಯಾದ ಬೇಬಿ ಕಾರ್ನ್ ಸ್ಯಾಟೇ ಸಿದ್ಧ.

WhatsApp Image 2020-05-09 at 8.38.28 PM

ಧಿಡೀರ್ ಅಂತ ಮನೆಯಲ್ಲಿಯೇ ಬೇಬಿ ಕಾರ್ನ್ ಸ್ಯಾಟೇ ಸುಲಭವಾಗಿ ಹೇಗೆ ಮಾಡೋದು ಅಂತಾ ಹೇಳಿಕೊಟ್ಟಿದ್ದೇವೆ.

ಓದ್ಕೋಳ್ಳಿ, ಮಾಡ್ಕೋಳ್ಳಿ, ತಿಂದ್ಕೋಳ್ಳಿ

ಏನಂತೀರೀ?

ಈ ಪಾಕವಿಧಾನವನ್ನು ತಿಳಿಸಿಕೊಟ್ಟವರು : ಮೈಸೂರಿನ ಶ್ರೀಮತಿ ರೂಪ

#ನಳಪಾಕ
#ಬೇಬಿ ಕಾರ್ನ್ ಸ್ಯಾಟೇ
#ಏನಂತೀರೀ?

ಮನದಾಳದ ಮಾತು :  ಮಸಾಲೆಯುಕ್ತ ಬೇಬಿಕಾರ್ನ್ ಸ್ಯಾಟೆ  ಅತ್ಯಂತ ರುಚಿಕರವಾಗಿದ್ದು  ಸಂಜೆ ಟೀ ಸಮಯದ ಅತ್ಯುತ್ತಮ ತಿಂಡಿಯಾಗಿದೆ. ಯಾವುದೇ ಸಣ್ಣ ಪುಟ್ಟ ಸಭೆ ಸಮಾರಂಭಗಳಲ್ಲಿ  ಸುಲಭವಾಗಿ ತಯಾರಿಸುವ ಸ್ಟಾಟರ್ಸ್  ಕೂಡಾ ಇದಾಗಿದೆ. ಬೇಬಿ ಕಾರ್ನ್ ಅತ್ಯಂತ ಕಡಿಮೆ ಕ್ಯಾಲೋರಿ ತರಕಾರಿಯಾಗಿದ್ದು, ಕೋಸುಗಡ್ಡೆ, ಹೂಕೋಸು ರೀತಿಯಲ್ಲಿ ಇದರಲ್ಲೂ ಅತ್ಯಂತ ಕ್ಯಾಲೊರಿ ಅಂಶವಿರುವ ಕಾರಣ ಇದದಲ್ಲಿ  ಕೊಬ್ಬಿನ ಅಂಶ  ತುಂಬಾ ಕಡಿಮೆ ಇದ್ದು   ತೂಕ ಇಳಿಸಿಕೊಳ್ಳುವವರಿಗೆ ಬೇಬಿಕಾರ್ನ್ ಅತ್ಯುತ್ತಮ ತರಕಾರಿಯಾಗಿದೆ  ಬೇಬಿ ಕಾರ್ನ್‌ನಲ್ಲಿ ಪೊಟ್ಯಾಸಿಯಮ್ ಮತ್ತು ಫೋಲಿಕ್ ಆಮ್ಲವು ಕೂಡಾ  ಅಧಿಕವಾಗಿರುವ ಕಾರಣ ಸಾಧಾರಣ ಜೋಳದಕ್ಕಿಂತಲೂ ಹೆಚ್ಚು  ಆರೋಗ್ಯಕರವಾಗಿರುತ್ತದೆ.

Leave a comment