ದಿಢೀರ್ ಓಟ್ಸ್  ದೋಸೆ

ಇತ್ತೀಚಿನ ದಿನಗಳಲ್ಲಿ  ಆರೋಗ್ಯದ ಕಡೆ ಎಲ್ಲರೂ ಕಾಳಜಿ ವಹಿಸುತ್ತಿರುವ ಕಾರಣ, ತೀರ್ಥ ತೆಗೆದುಕೊಂಡರೆ ಶೀತ  ಮಂಗಳಾರತೀ ತೆಗೆದುಕೊಂಡರೆ ಉಷ್ಣ ಅನ್ನುವ ರೀತಿಯಲ್ಲಿ ಆಡುತ್ತಾರೆ. ಹಾಗಾಗಿ  ಪ್ರತಿಯೊಂದು ಆಹಾರವನ್ನು ಸೇವಿಸುವಾಗಲೂ ಅದರ  ಕ್ಯಾಲೋರಿಗಳನ್ನು ಲಕ್ಕಾಚಾರ ಹಾಕಿ ಗುಣಾಕಾರ ಭಾಗಕಾರ ಹಾಗಿದ ಮೇಲೆನೇ ತಿನ್ನೋದು.   ಹಾಗಾಗಿ  ಕಡಿಮೆ ಕ್ಯಾಲೋರಿ ಇರುವ , ಆರೋಗ್ಯಕರವಾಗಿಯೂ, ರುಚಿಕರವಾಗಿರುವ ಮತ್ತು  ದಿಢೀರ್ ಎಂದು ತಯಾರಿಸಬಹುದಾದ ಓಟ್ಸ್ ದೋಸೆಯನ್ನು ಮಾಡುವ ವಿಧಾನವನ್ನು  ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ.

ಸುಮಾರು 4-5  ಜನರಿಗೆ ಆಗುವಷ್ಟು ದಿಢೀರ್ ಓಟ್ಸ್ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು

  • ಓಟ್ಸ್ – 1 ಬಟ್ಟಲು
  • ಅಕ್ಕಿ ಹಿಟ್ಟು 1/2 ಬಟ್ಟಲು
  • ರವೆ – 1/2 ಬಟ್ಟಲು
  • ಅಡುಗೆ ಎಣ್ಣೆ – 1/4 ಬಟ್ಟಲು
  • ಹುಳಿ ಮೊಸರು – 1 ಬಟ್ಟಲು
  • ಚಿಟಿಕೆ ಇಂಗು
  • ರುಚಿಗೆ ತಕ್ಕಷ್ಟು ಉಪ್ಪು
  • ಕತ್ತರಿಸಿದ ಈರುಳ್ಳಿ – 1/4 ಬಟ್ಟಲು
  • ಕತ್ತರಿಸಿದ ಪಾಲಾಕ್ ಸೊಪ್ಪು – 1/4 ಬಟ್ಟಲು
  • ಕತ್ತರಿಸಿದ ಟೊಮ್ಯಾಟೋ -1/4 ಬಟ್ಟಲು
  • ತುರಿದ ಕ್ಯಾರೆಟ್ – 1/4 ಬಟ್ಟಲು
  • ಕತ್ತರಿಸಿದ ಹಸೀ ಮೆಣಸಿನಕಾಯಿ – 6-8
  • ಕತ್ತರಿಸಿದ ಕೊತ್ತಂಬರಿ ಸೊಪ್ಪು – 2-3 ಚಮಚ
  • ತುರಿದ ಶುಂಠಿ – 1/4 ಚಮಚ
  • ನಿಂಬೇ ರಸ – 1 ಚಮಚ

ಓಟ್ಸ್  ದೋಸೆ ಹಿಟ್ಟನ್ನು ತಯಾರಿಸಿಕೊಳ್ಳುವ ವಿಧಾನ

  • ಓಟ್ಸ್ ಅನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ನಯವಾಗಿ  ಪುಡಿ  ಮಾಡಿಕೊಳ್ಳಬೇಕು.
  • ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಪುಡಿಮಾಡಿದ ಓಟ್ಸ್ ಸೇರಿಸಿ ಅದರ ಜೊತೆಗೆ   ಹೆಚ್ಚಿನ ಪ್ರೋಟೀನ್ ಇರುವ ಅಕ್ಕಿ ಹಿಟ್ಟು ಮತ್ತು  ದೋಸೆ ಗರಿ ಗರಿಯಾಗಿ ಬರಲು ರವೆಯನ್ನು ಸೇರಿಸಿಕೊಳ್ಳಿ.
  • ರುಚಿಗೆ ತಕ್ಕಷ್ಟು ಉಪ್ಪನ್ನು  ಸೇರಿಸಿ ಅದರ ಜೊತೆ ಪರಿಮಳ ಹೆಚ್ಚಿಸಲು ಚಿಟುಕಿ ಇಂಗನ್ನು ಸೇರಿಸಿ.
  • ಒಂದು ಕಪ್ ಮೊಸರನ್ನು ಮೇಲೆ ತಿಳಿಸಿದ ಮಿಶ್ರಣಕ್ಕೆ ಬೆರೆಸಿಕೊಂಡು ಚೆನ್ನಾಗಿ ಕಲೆಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ನೀರನ್ನು  ಸೇರಿಸಿ.
  • ಸಿದ್ಧ ಪಡಿಸಿದ ದೋಸೆ ಹಿಟ್ಟನ್ನು 15 ನಿಮಿಷಗಳ ಕಾಲ ಹುದುಗು ಬರಲು  ಬಿಡಿ.

ದೋಸೆಯ  ರುಚಿಯನ್ನು ಹೆಚ್ಚಿಸಲು  ತರಕಾರಿಗಳನ್ನು ಸೇರಿಸುವುದು (ಐಚ್ಛಿಕ)

  • ಅಗಲವಾದ ಪಾತ್ರೆಯನ್ನು ತೆಗೆದು ಕೊಂಡು ಅದಕ್ಕೆ ಚೆನ್ನಾಗಿ ತೊಳೆದು  ಕತ್ತರಿಸಿದ ಪಾಲಕ್ ಸೊಪ್ಪನ್ನು ಸೇರಿಸಿ.
  • ಆ ಪಾತ್ರೆಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ತುರಿದ ಶುಂಠಿಯನ್ನು ಸೇರಿಸಿ.
  • ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಮತ್ತು ಕತ್ತರಿಸಿದ ಟೊಮೆಟೊ ಕೂಡ ಸೇರಿಸಿ.
  • ರುಚಿ ಮತ್ತು ಜೀರ್ಣಕ್ರಿಯನ್ನು ಹೆಚ್ಚಿಸಲು ನಿಂಬೆ ರಸ ಸೇರಿಸಿ.
  • ಈಗ ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು ಸೇರಿಸಿ
  • ಈ ತರಕರಿ ಮಿಶ್ರಣವನ್ನು ಹುದುಗಲು ಬಿಟ್ಟಿದ್ದ ಓಟ್ಸ್  ದೋಸೆ ಹಿಟ್ಟಿಗೆ ಚೆನ್ನಾಗಿ ಬೆರೆಸಿ ಕೊಳ್ಳಿ.

ಓಟ್ಸ್  ದೋಸೆ ಮಾಡುವ ವಿಧಾನ.

  • ಒಲೆಯ ಮೇಲೆ ಸಾಧರಣ ಕಾವಲಿಯನ್ನಾಗಲೀ ಅಥವಾ ನಾನ್‌ಸ್ಟಿಕ್ ಕಾವಲಿಯನ್ನು ಇಟ್ಟು ಅದು ಬಿಸಿಯಾದ ಮೇಲೆ ಅರ್ಧ ಚಮಯ ಎಣ್ಣೆ ಹಾಕಿ ( ನಾನ್ ಸ್ಟಿಕ್ ಕಾವಲಿಯಲ್ಲಿ ಎಣ್ಣೆ ಐಚ್ಛಿಕ)
  • ಕಾವಲಿ ಕಾದ ನಂತರ ತರಕಾರಿ ಹಾಕಿ ಸಿದ್ಧ ಪಡಿಸಿಟ್ಟು ಕೊಂಡಿದ್ದ ದೋಸೆ ಹಿಟ್ಟನ್ನು ಸುರಿದು  ಗುಂಡಗೆ ಸ್ವಲ್ಪ ಹರಡಿ. ತುಂಬಾ ತೆಳ್ಳಗೆ ಹರಡಬೇಡಿ.
  • ದೋಸೆಯ ರುಚಿಯನ್ನು ಹೆಚ್ಚಿಸಲು ಓಟ್ಸ್  ದೋಸೆಯ ಅಂಚುಗಳಲ್ಲಿ ಒಂದು ಚಮಚ ಎಣ್ಣೆಯನ್ನು ಸಿಂಪಡಿಸಿ
  • ಒಲೆಯನ್ನು ಸಣ್ಣ ಉರಿಯಲ್ಲಿಟ್ಟು ಕಾವಲಿಯ ಮೇಲೆ ಮುಚ್ಚಳದಿಂದ  ಮುಚ್ಚಿ ಸುಮಾರು 2 ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.
  • 2 ನಿಮಿಷಗಳ ನಂತರ ದೋಸೆಯನ್ನು ಮಗುಚಿ ಹಾಕಿ  ಮುಚ್ಚಳದಿಂದ ಮುಚ್ಚಿ   ಇನ್ನೊಂದು ಬದಿಯಲ್ಲಿಯೂ ಕೂಡಾ ಚೆನ್ನಾಗಿ   ಒಂದು ನಿಮಿಷ ಬೇಯಿಸಿದಲ್ಲಿ ರುಚಿ ರುಚಿಯಾದ, ಬಿಸಿ ಬಿಸಿಯಾದ ಗರಿ ಗರಿಯಾದ ಮತ್ತು ಆರೋಗ್ಯಕರವಾದ ದಿಢೀರ್ ಓಟ್ಸ್  ದೋಸೆ ಸವಿಯಲು ಸಿದ್ಧ.

 

WhatsApp Image 2020-06-09 at 12.32.15 PMಓಟ್ಸ್  ದೋಸೆಯನ್ನು  ಟೊಮೆಟೊ ಸಾಸ್ ಅಥವಾ ಯಾವುದೇ ಚಟ್ನಿಯೊಂದಿಗೆ  ಬಿಸಿ ಬಿಸಿಯಾಗಿ ತಿನ್ನಲು ಮಜವಾಗಿರುತ್ತದೆ.

ದಿಢೀರ್ ಓಟ್ಸ್ ದೋಸೆಯನ್ನು ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ್ದೇವೆ.  ಇನ್ನೇಕೆ ತಡಾ,  ನೋಡ್ಕೊಳೀ, ಮಾಡ್ಕೊಳೀ, ತಿನ್ಕೋಳಿ

ಏನಂತೀರೀ?

oats_veg_dosaಮನದಾಳದ ಮಾತುಕ್ಯಾಲೋರಿ ಗಮನದಲ್ಲಿಟ್ಟು ಕೊಂಡು ಆರೋಗ್ಯಕರವಾದ ಆಹಾರವನ್ನು ತಿನ್ನುಲು ಬಯಸುವವರಿಗೆ ಈ  ಓಟ್ಸ್  ದೋಸೆಯಂತೂ ನಿಜಕ್ಕೂ ಆರೋಗ್ಯಕರ. ಅದರ ಜೊತೆ ತಾಜಾ ತಾಜಾ ತರಕಾರಿಗಳನ್ನು ಸೇರಿಸಿದರಂತೂ ಇನ್ನೂ ಪೌಷ್ಟಿಕರ. ಇನ್ನು ನಾನ್ ಸ್ಟಿಕ್ ಕಾವಲಿ ಬಳೆಸಿದರೆ ಎಣ್ಣೆಯ ರಹಿತ ದೋಸೆಯನ್ನು ತಯಾರಿಸಿಕೊಳ್ಳಬಹುದು. ರುಚಿಗೆ  ಎಣ್ಣೆಯನ್ನು ಬಳಸಲು ಇಚ್ಚಿಸುವವರು,  ಸ್ವಲ್ಪ ಹಣ ಹೆಚ್ಚಾದರೂ ಪರವಾಗಿಲ್ಲ ಎಂದು  ಶುದ್ಧವಾದ ಗಾಣದಲ್ಲಿ ಅರೆದ ಎಣ್ಣೆಯನ್ನೇ ಬಳೆಸಿದಲ್ಲಿ ಉತ್ತಮ.

Leave a comment