ಬ್ರಿಗೇಡ್ ರಸ್ತೆಯ ಸಪ್ಪರ್ಸ್ ಯುದ್ಧ ಸ್ಮಾರಕ

ಬೆಂಗಳೂರಿನ ಬ್ರಿಗೇಡ್ ರಸ್ತೆ ಅಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದೇ, ಮೋಜು ಮಸ್ತಿ, ಬೆಂಗಳೂರಿನ ಹೃದಯಭಾಗದಲ್ಲಿರುವ ಅತ್ಯಂತ ಜನನಿಬಿಡ ವ್ಯಾಪಾರಿ ಸ್ಥಳಗಳಲ್ಲಿ ಒಂದಾಗಿರುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಗಳಲ್ಲಿ ಅಡ್ಡಾಡುವುದೇ ಒಂದು ಕಾಲದಲ್ಲಿ ಪ್ರತಿಷ್ಟೆಯ ಸಂಕೇತ ಎನಿಸಿಕೊಳ್ಳುತ್ತಿತ್ತು ಮತ್ತು ಈಗಲೂ ಸಹಾ ಅಂತಹದ್ದೇ ಪರಿಸ್ಥಿತಿ ಇದೆ ಎಂದರೂ ತಪ್ಪಾಗದು. ಇಂತಹ ವಾಣಿಜ್ಯ ರಸ್ತೆಗಳ ತುದಿಯಲ್ಲಿರುವ ಮತ್ತೊಂದು ಗಮನಾರ್ಹವಾದ ಹೆಗ್ಗುರುತಾದ ಸಪ್ಪರ್ಸ್ ಯುದ್ಧ ಸ್ಮಾರಕ  (ವಾರ್ ಮೆಮೋರಿಯಲ್)  ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

MEGಸಾಧಾರಣವಾಗಿ ಎಲ್ಲ ಊರುಗಳಲ್ಲಿಯೂ ತಮ್ಮ ಪ್ರದೇಶವನ್ನು ಶತ್ರುಗಳ ಆಕ್ರಮಣದಿಂದ ತಡೆದ ವೀರ ಮತ್ತು ಶೂರರ ಕುರಿತಾಗಿ ವೀರಕಲ್ಲುಗಳನ್ನು ಸ್ಥಾಪಿಸುವುದನ್ನು ನೋಡಿದ್ದೇವೆ. ಅದೇ ರೀತಿಯಲ್ಲೇ ಮೊದಲ ವಿಶ್ವಯುದ್ಧ ನಡೆದ ಸಂದರ್ಭದಲ್ಲಿ ಅಂದಿನ ಬ್ರಿಟೀಷ್ ಸೈನ್ಯದ ಬಾಗವಾಗಿ ಶತ್ರುಗಳ ವಿರುದ್ದ ಹೋರಾಟ ನಡೆಸಿ ಹುತಾತ್ಮರಾದ ಮದ್ರಾಸ್ ಸಪ್ಪರ್ಸ್ ಮತ್ತು ಮೈನರ್ಸ್ ನಂತರದ ದಿನಗಳಲ್ಲಿ ಅದು ಮದ್ರಾಸ್ ಇಂಜಿನಿಯರ್ ಗ್ರೂಪಿನ (MEG) ಸೈನಿಕರಿಗೆ ಸಮರ್ಪಿತವಾದ ಸ್ಮಾರಕವಾಗಿದೆ.

tippu_died1799 ರಲ್ಲಿ ಟಿಪ್ಪು ಸುಲ್ತಾನನ ಪತನದ ನಂತರ ಬ್ರಿಟೀಷ್ ಸೇನೆ ಶ್ರೀರಂಗಪಟ್ಟಣದಲ್ಲಿಯೇ ಬೀಡು ಬಿಟ್ಟಿದ್ದ ಬ್ರಿಟಿಷರ ಸೈನಿಕರಿಗೆ ನಿರಂತವಾಗಿ ಯುದ್ದ ಭತ್ಯೆಯನ್ನು (War allowance) ಕೊಡುತ್ತಲೇ ಇರುತ್ತಾರೆ. ಅದೊಮ್ಮೆ ಇಂಗ್ಲೇಂಡಿನಿಂದ ಬಂದ ಲೆಕ್ಕ ಪರಿಶೋಧಕರು ಯುದ್ಧ ಮುಗಿದು ಏಳು ವರ್ಷಗಳು ಕಳೆದರೂ ಇನ್ನೂ ಏಕೆ ಭತ್ಯೆ ಕೊಡುತ್ತಿದ್ದೀರೀ? ಎಂದು ಆಕ್ಷೇಪಣೆ ಎತ್ತಿದಾಗ ಎಚ್ಚೆತ್ತು ಕೊಂಡ ಲಾರ್ಡ್ ವೆಲ್ಲೆಸ್ಲಿ ಯಾವುದೇ ಮುನ್ಸೂಚನೆಯನ್ನೂ ನೀಡದೇ ಸೈನಿಕರ ಯುದ್ದ ಭತ್ಯೆಯನ್ನು ನಿಲ್ಲಿಸುತ್ತಾನೆ. ಅದಾಗಲೇ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದ ಸೈನಿಕರಿಗೆ ಹೀಗೆ ಏಕಾಏಕಿ ತಮ್ಮ ಹೆಚ್ಚಿನ ಆದಾಯ ಕಡಿತಗೊಂಡ ಪರಿಣಾಮ ಸೈನಿಕರು ಬಂಡೆದ್ದು ಶ್ರೀರಂಗ ಪಟ್ಟಣಕ್ಕೇ ಸುಮಾರು ದಿನಗಳ ಕಾಲ ಮುತ್ತಿಗೆ ಹಾಕುತ್ತಾರೆ. ಆಗ ಪರಿಸ್ಥಿಯನ್ನು ತಹಬದಿಗೆ ತರಲು ಮಹಾರಾಣಿ ಅಮ್ಮಣ್ಣಿಯವರು ಮೈಸೂರಿನಿಂದ 1000 ಯೋಧರನ್ನು ಕಳುಹಿಸಿ ಸೈನಿಕರನ್ನು ಹತ್ತಿಕ್ಕೆ ಶಾಂತಿ ಸುವ್ಯವಸ್ಥೆಯನ್ನು ತಂದು ಬ್ರಿಟಿಷರನ್ನು ರಕ್ಷಿಸುತ್ತಾರೆ. ಈ ರೀತಿಯಾದ ಸಿಪಾಯಿ ದಂಗೆಯಿಂದ ಎಚ್ಚೆತ್ತು ಕೊಂಡ ಬ್ರಿಟೀಷರು ತಮಗೆ ಶ್ರೀರಂಗ ಪಟ್ಟಣ ಹೆಚ್ಚು ಸುರಕ್ಷಿತ ಸ್ಥಳವಲ್ಲವೆಂದು ಭಾವಿಸಿ ಶ್ರೀರಂಗಪಟ್ಟಣದಲ್ಲಿ ನೆಲೆಗೊಂಡಿದ್ದ ಬ್ರಿಟಿಷ್ ಪಡೆಗಳು ಬೆಂಗಳೂರಿನ ಸಿವಿಲ್ ಮತ್ತು ಮಿಲಿಟರಿ ಸ್ಟೇಷನ್‌ಗೆ ಸ್ಥಳಾಂತರಗೊಂಡು ಬೆಂಗಳೂರಿನ ದಂಡಿನ ಪ್ರದೇಶದಲ್ಲಿ ನೆಲೆಗೊಳ್ಳುತ್ತವೆ. ಇದೇ ಸಮಯದಲ್ಲಿಯೇ ಮದ್ರಾಸ್ ಪಯೋನಿಯರ್ಸ್ ರೆಜಿಮೆಂಟ್ ಆರಂಭವಾಯಿತು ಎಂದೇ ನಂಬಲಾಗಿದ್ದು ಇದರ ಕುರಿತಾದ ಯಾವುದೇ ಹೆಚ್ಚಿನ ಅಧಿಕೃತ ದಾಖಲೆಗಳು ಲಭ್ಯವಿಲ್ಲವಾಗಿದೆ.

meg2ಮದ್ರಾಸ್ ಪಯೋನಿಯರ್ಸ್ ರೆಜಿಮೆಂಟ್ ಪಯೋನಿಯರ್ಸಿನ ಯೋಧರು ಬಹಳ ಸಾಹಸಿಗಳು, ಶ್ರಮಜೀವಿಗಳು ಮತ್ತು ಸ್ವಾಮಿನಿಷ್ಠರಾಗಿದ್ದು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹಾ ಶತ್ರುಗಳಿಗೆ ಎದೆಯೊಡ್ಡಿ ಯುದ್ದವನ್ನು ಮಾಡುತ್ತಿದ್ದ ಕಾರಣ, 1914-18ರ ನಡುವೆ ನಡೆದ ಪ್ರಥಮ ವಿಶ್ವ ಸಮರದಲ್ಲಿ ಬ್ರಿಟೀಶರು ಈ ಸೈನಿಕರನ್ನು ಪ್ರಪಂಚದಾದ್ಯಂತ ಕರೆದುಕೊಂಡು ಹೋಗಿ ಶತ್ರುಗಳ ವಿರುದ್ಧ ಯುದ್ದದಲ್ಲಿ ಹೋರಾಟ ನಡೆಸಿದ್ದರು. ಹೀಗೆ ಕರೆದುಕೊಂಡು ಹೋದ ಅನೇಕ ಸೈನಿಕರು ಅಲ್ಲಿನ ಯುದ್ಧಗಳಲ್ಲಿ ಹುತಾತ್ಮರಾದಾಗ ಅವರ ನೆನಪಿನಲ್ಲಿ ಬರ್ಮಾ, ಪೂರ್ವ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ವಾಯುವ್ಯ ಫ್ರಾಂಟಿಯರ್ ಪ್ರಾಂತ್ಯ ಸೇರಿದಂತೆ ಹಿಂದಿನ ಬ್ರಿಟಿಷ್ ವಸಾಹತುಗಳಲ್ಲಿ ಬ್ರಿಟಿಷ್ ಸೇನೆಯ ಪರವಾಗಿ ವಿವಿಧ ಯುದ್ಧ ವಲಯಗಳಲ್ಲಿ ಮಡಿದ ಸೈನಿಕರ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಲಾಯಿತು. ಅದೇ ರೀತಿಯಂತೆಯೇ ಬೆಂಗಳೂರಿನ ಮದ್ರಾಸ್ ಪಯೋನಿಯರ್ಸ್ ರೆಜಿಮೆಂಟಿನ ಹುತಾತ್ಮರಾದ 449 ಸೈನಿಕರ ನೆನಪಿನಾರ್ಥ 1928ರಲ್ಲಿ ಅಂದಿನ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶವಾಗಿದ್ದ ಬ್ರಿಗೇಡ್ ರಸ್ತೆಯ ತುದಿಯಲ್ಲಿ ಭವ್ಯವಾಗಿ ಯುದ್ಧ ಸ್ಮಾರಕವನ್ನು  ಕ್ಯಾಪ್ಟನ್ ಟಾಸ್ಕರ್ ಟೇಲರ್  ನಿರ್ಮಿಸಿ ಅದಕ್ಕೆ ಸ್ಯಾಪರ್ಸ್ ವಾರ್ ಮೆಮೋರಿಯಲ್ ಎಂದು ಹೆಸರಿಸಲಾಗುತ್ತದೆ. ಇದು ಮೊದಲನೆಯ ಮಹಾಯುದ್ಧದಲ್ಲಿ ಬಲಿಯಾದ ಸೈನಿಕರ ನೆನಪಿಗಾಗಿ ಪ್ರಪಂಚದಾದ್ಯಂತದ ನಿರ್ಮಿಸಲಾದ ಯುದ್ಧ ಸ್ಮಾರಕಗಳನ್ನೇ ಹೋಲುವುದು ಗಮನಾರ್ಹವಾಗಿದೆ.

sap3ಪೂರ್ವ ಆಫ್ರಿಕಾ 1914-18 ಶೀರ್ಷಿಕೆಯೊಂದಿಗೆ ಸ್ಯಾಪರ್ಸ್ ಯುದ್ಧ ಸ್ಮಾರಕದ ಎರಡನೇ ಮುಖವನ್ನು 61 ನೇ KGO ಪಯೋನಿಯರ್‌ಗಳ ಸೈನಿಕರಿಗೆ ಸಮರ್ಪಿಸಲಾಗಿದೆ ಮತ್ತು ನಾಲ್ಕು ಬ್ರಿಟಿಷ್ ಅಧಿಕಾರಿಗಳು, ಎಂಟು ಭಾರತೀಯ ಅಧಿಕಾರಿಗಳು ಮತ್ತು 223 ನಿಯೋಜಿಸದ ಅಧಿಕಾರಿಗಳು ಮತ್ತು ಪಯೋನಿಯರ್‌ಗಳಿಗೆ ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ಶಾಸನಗಳಿವೆ. ಮದ್ರಾಸ್ ಪಯೋನಿಯರ್ಸ್ ಘಟಕಗಳನ್ನು ಮದ್ರಾಸ್‌ನಲ್ಲಿ ಬೆಳೆಸಿದ್ದರಿಂದ, ಅದರ ಶ್ರೇಣಿಯಲ್ಲಿ ಸಾಕಷ್ಟು ತಮಿಳು ಮಾತನಾಡುವ ಸೈನಿಕರು ಇದ್ದ ಕಾರಣ, ಇಂಗ್ಲಿಷ್ ಶಾಸನಗಳ ಜೊತೆಗೆ ತಮಿಳು ಶಾಸನಗಳನ್ನು ಸ್ಯಾಪರ್ಸ್ ವಾರ್ ಮೆಮೋರಿಯಲ್‌ನಲ್ಲಿ ಪ್ರತಿಫಲಿಸುತ್ತದೆ. KGO ಎಂಬುದು ಕಿಂಗ್ ಜಾರ್ಜ್ ಅವರ ಸ್ವಂತ ಪ್ರವರ್ತಕರು ಎಂಬ ಪದದ ಉಲ್ಲೇಖವಾಗಿದೆ. ಈ ಪ್ರವರ್ತಕರು ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ಆರಂಭವಾಗಿ ಕೆಲ ವರ್ಷಗಳ ಕಾಲ ಮದರಾಸಿನಲ್ಲಿದ್ದು ನಂತರ ಇದರ ಕೇಂದ್ರವು 1800ರ ದಶಕದ ಆರಂಭದಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ನಂತರ ಆಂಧ್ರಪ್ರದೇಶ, ಮಡಿಕೇರಿ, ಧವಳೇಶ್ವರಂ ಮುಂತಾದ ಕಡೆಯಲ್ಲೆಲ್ಲಾ ಪ್ರವಾಸ ಮಾಡಿ ಅಂತಿಮವಾಗಿ 1865 ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಲ್ಲದೇ ಇಲ್ಲಿಯೇ ಶಾಶ್ವತವಾಗಿ ನೆಲೆಗೊಂಡಿತು.

sapa3ಸ್ಮಾರಕದ ಇತರ ಎರಡು ಮುಖಗಳನ್ನು ಮೆಸೊಪಟ್ಯಾಮಿಯಾ 1916-18 ಮತ್ತು ನಾರ್ತ್ ವೆಸ್ಟ್ ಫ್ರಾಂಟಿಯರ್ಸ್ 1915 ಎಂದು ಹೆಸರಿಸಲಾಗಿದ್ದು ಇದರಲ್ಲಿ ಪ್ರಥಮ ವಿಶ್ವ ಸಮರದಲ್ಲಿ 73 ಸೈನಿಕರನ್ನು ಕಳೆದುಕೊಂಡ ಅಫ್ಘಾನಿಸ್ತಾನ ಮೂಲದ 64 ಪಯೋನಿಯರ್‌ಗಳಿಗೆ ಮತ್ತು 140 ಸೈನಿಕರನ್ನು ಕಳೆದುಕೊಂಡ ಬರ್ಮಾ ಮೂಲದ 81 ಪಯೋನಿಯರ್‌ಗಳಿಗೆ ಸಮರ್ಪಿಸಲಾಗಿದೆ.

forming_dayನಿಜ ಹೇಳಬೇಕೆಂದರೆ, 1800 ರ ದಶಕದ ಉತ್ತರಾರ್ಧದಲ್ಲಿ ಪೂರ್ವ ಬೆಂಗಳೂರು ಬ್ರಿಟಿಷ್ ಸೈನ್ಯದ ಕಂಟೋನ್ಮೆಂಟ್ ಆಗುವುದಕ್ಕಿಂತಲೂ ಮುಂಚೆಯೇ ಈ ಮದ್ರಾಸ್ ಪಯೋನಿಯರ್ಸ್ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅದು 1780 ಕ್ಕೂ ಹಿಂದಿನದು ಎಂದೂ ಸಹಾ ಕೆಲವರು ಹೇಳುತ್ತಾರೆ. ಪಯೋನಿಯರ್‌ಗಳ ಎರಡು ಕಂಪನಿಗಳನ್ನು ಆಗಿನ ಮದ್ರಾಸ್ ಸರ್ಕಾರವು ಸೆಪ್ಟೆಂಬರ್ 30, 1780 ರಂದು ಅಧಿಕೃತವಾಗಿ ಮಂಜೂರು ಮಾಡಿತ್ತು ಇದೇ ಕಾರಣದಿಂದಾಗಿಯೇ ಮದ್ರಾಸ್ ಸಪ್ಪರ್ಸ್, ಸೆಪ್ಟೆಂಬರ್ 30 ನ್ನು ತಮ್ಮ ರೈಸಿಂಗ್ ಡೇ ಎಂದು ಇಂದಿಗೂ ಆಚರಿಸುತ್ತಾರೆ. ಈ ಸ್ಮಾರಕದಲ್ಲಿ ಉಲ್ಲೇಖಿಸಲಾದ 61 ನೇ ಪಯೋನಿಯರ್‌ಗಳನ್ನು 1758 ರಲ್ಲಿಯೇ ಕಟ್ಟಿ ಬೆಳೆಸಲಾಗಿತ್ತು.

ಬ್ರಿಗೇಡ್ ರಸ್ತೆಯಲ್ಲಿ ಇದ್ದರೂ ಸಹಾ ಈ ಸ್ಮಾರಕದ ಬಗ್ಗೆ ಯಾರು ಸಹಾ ಹೆಚ್ಚಿನ ಆಸ್ಥೆ ವಹಿಸದೇ ಇದ್ದ ಕಾರಣ, ಸರಿಯಾದ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಗೆ ತಲುಪಿತ್ತು. ಒಂದು ದಶಕದ ಹಿಂದೆ ಯುದ್ಧ ಸ್ಮಾರಕವಿದ್ದ ಉದ್ಯಾನದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾದಾಗ, ನಿವೃತ್ತ ಸೈನ್ಯಾಧಿಕಾರಿಗಳು ಅಂದಿನ ಬೆಂಗಳೂರು ಉಸ್ತುವಾರಿ ಸಚಿವರ ಬಳಿ ನಿಯೋಗವನ್ನು ಕರೆದುಕೊಂಡು ಹೋಗಿ ಈ ಯುದ್ಧ ಸ್ಮಾರಕದ ಐತಿಹಾಸಿಕ ಹಿನ್ನಲೆಯನ್ನು ವಿವರಿಸಿದ ನಂತರ ಅಲ್ಲಿ ಶೌಚಾಲಯವನ್ನು ನಿರ್ಮಿಸಿಸುವ ಕಾರ್ಯವನ್ನು ನಿಲ್ಲಿಸಲಾಯಿತಲ್ಲದೇ, ಟೆಂಡರ್‌ಶೂರ್ ಯೋಜನೆಯಡಿಯಲ್ಲಿ ಬೆಂಗಳೂರು ಕೇಂದ್ರ ವ್ಯಾಪಾರ ಜಿಲ್ಲೆಯ ಅಭಿವೃದ್ಧಿಯು ಸ್ಮಾರಕವನ್ನು ರಿಯಲ್ ಎಸ್ಟೇಟ್ ಸಂಸ್ಥೆಯಯೊಂದಕ್ಕೆ ಆ ಸ್ಮಾರಕದ ಉದ್ಯಾನವನವನ್ನು ನಿರ್ವಹಿಸುವ ಅವಕಾಶವನ್ನು ಕೊಟ್ಟಿದಲ್ಲದೇ ಆದನ್ನು ನಿರ್ಬಂಧಿತ ಉದ್ಯಾನವನದಿಂದ ಸಾರ್ವಜನಿಕ ಪ್ಲಾಜಾಕ್ಕೆ ಪರಿವರ್ತಿಸಲು ಅನುವು ಮಾಡಿಕೊಟ್ಟ ಪರಿಣಾಮ ಆ ಸ್ಮಾರಕವನ್ನು ಜೀರ್ಣೋದ್ಧಾರ ಮಾಡಿದ್ದಲ್ಲದೇ ಆಕರ್ಷಕವಾದ ಫೋಕಸ್ ವಿದ್ಯುತ್ ದೀಪಗಳನ್ನು ಅದರ ಸುತ್ತಲೂ ಅಳವಡಿಸಿದ ಕಾರಣ ಇಂದಿಗೂ ರಾತ್ರಿಯ ವೇಳೆಯಲ್ಲೂ ಸಹಾ ಸಾರ್ವಜನಿಕರು ವೀಕ್ಷಿಸಬಹುದಾದಂತಹ ಸುಸ್ಥಿಯಲ್ಲಿರುವುದು ನಿಜಕ್ಕೂ ಶ್ಲಾಘನೀಯವಾದ ಕೆಲಸವಾಗಿದೆ.

ಇಂದು ಪ್ರತಿ ದಿನ ಬೆಳಿಗ್ಗೆ ಬಿಬಿಎಂಪಿ ನೈರ್ಮಲ್ಯ ಕಾರ್ಯಕರ್ತರು ಸ್ಮಾರಕದ ಸುತ್ತಮತ್ತಲು ಸ್ವಚ್ಚಗೊಳಿಸಿ ಹೋಗುತ್ತಾರೆ. ಬೆಳಕು ಹರಿದಂತೆಲ್ಲಾ, ಇದೇ ಸ್ಮಾರಕದ ಪಕ್ಕದಲ್ಲಿಯೇ G3 ಬಸ್ ನಿಲ್ದಾಣ ಇರುವ ಕಾರಣ, ಬಸ್ಸಿಗೆ ಕಾಯುವ ಪ್ರಯಾಣಿಕರು ಆ ಸ್ಮಾರಕದ ಬಳಿ ಸ್ಥಾಪಿಸಿರುವ ಒಂದೆರಡು ಬೆಂಚುಗಳ ಮೇಲೆ ಕೆಲಹೊತ್ತು ಕುಳಿತು ಬಸ್ ಬಂದ ನಂತರ ಹೋಗುತ್ತಾರೆ ಅದೇ ರೀತಿಯಲ್ಲಿ ಬ್ರಿಗೇಡ್ ರಸ್ತೆಯ ಮೇಲೆ ಸಣ್ಣ ಪುಟ್ಟ ವ್ಯಾಪಾರ ಮಾಡುವ ಮಾರಾಟಗಾರರು ತಮ್ಮ ಆಯಾಸವನ್ನು ಪರಿಹರಿಸಿಕೊಳ್ಳಲು ಇದೇ ಕಲ್ಲು ಬೆಂಚುಗಳನ್ನು ಆಶ್ರಯಿಸುತ್ತಾರೆ. ಇವರು ಯಾರಿಗೂ ಸಹಾ. ಮದ್ರಾಸ್ ಪಯೋನಿಯರ್‌ಗಳ ಆ ಮೂರು ಬೆಟಾಲಿಯನ್‌ಗಳ ಅದೆಷ್ಟೋ ಬ್ರಿಟಿಷ್ ಮತ್ತು ಭಾರತೀಯ ಅಧಿಕಾರಿಗಳು, ಎನ್‌ಜಿಒಗಳು ಮತ್ತು ಪ್ರವರ್ತಕರು ಪ್ರಥಮ ವಿಶ್ವ ಯುದ್ದದಲ್ಲಿ ಹುತಾತ್ಮರಾಗಿದ್ದಕ್ಕೆ ಕಟ್ಟಿದ ಸ್ಮಾರಕ ಇದು ಎಂದು ತಿಳಿಯದೇ ಇರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಸ್ಯಾಪರ್ಸ್ ಯುದ್ದ ಸ್ಮಾರಕದ ಬಗ್ಗೆ ಇಷ್ಟೆಲ್ಲಾ ಮಾಹಿತಿಯನ್ನು ತಿಳಿದ ನಂತರ, ಮುಂದಿನ ಬಾರಿ ಬೆಂಗಳೂರಿನ ಹೃದಯಭಾಗದ ಬ್ರಿಗೇಡ್ ರಸ್ತೆಗೆ ಶಾಂಪಿಗ್ ಹೋದಾಗ, ಖಂಡಿತವಾಗಿಯೂ ಸಮಯ ಮಾಡಿಕೊಂಡು ಈ ಯುದ್ಧ ಸ್ಮಾರಕ ಇರುವ ಸ್ಥಳವನ್ನು ನೋಡಿಕೊಂಡು ಆ ಯುದ್ದದಲ್ಲಿ ಮಡಿದ ಸೈನಿಕರಿಗೊಂದು ಶ್ರದ್ಧಾಪೂರ್ವಕ ಗೌರವವನ್ನು ಸಲ್ಲಿಸುತ್ತೀರೀ ಅಲ್ವೇ?

ಏನಂತೀರಿ?
ಸೃಷ್ಟಿಕರ್ತ, ಉಮಾಸುತ

ಈ ಲೇಖನ ಸಂಪದ ಸಾಲು ಪತ್ರಿಕೆಯ 2023ರ ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿದೆ.

WhatsApp Image 2023-07-22 at 19.53.47

Leave a comment