ನಮಗೆಲ್ಲರಿಗೂ ವೀರ ಸಾವರ್ಕರ್ ಅವರ ಪರಿಚಯವಿದೆ, ಆದರೆ ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್ ಯಾರು? ಎಂಬ ಪ್ರಶ್ನೆ ಬಹುತೇಕರಲ್ಲಿ ಮೂಡುವುದು ಸಹಜ. ಗಣೇಶ ದಾಮೋದರ ಸಾವರ್ಕರ್, ವಿನಾಯಕ ದಾಮೋದರ ಸಾರ್ವರ್ಕರ್ ಮತ್ತು ನಾರಾಯಣ ದಾಮೋದರ ಸಾವರ್ಕರ್ ಜೊತೆಗೆ ಮೈನಾಬಾಯಿ ಇವರೆಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದು, ಭಾರತದ ಸ್ವಾತ್ರಂತ್ಯಕ್ಕಾಗಿ ತಮ್ಮ ಇಡೀ ಜೀವನವನ್ಣೇ ಮುಡುಪಾಗಿಟ್ಟ ಧೀರೋದ್ದಾತ ಕುಟುಂಬದ ಸದಸ್ಯರಾಗಿದ್ದು ಬಾಬಾರಾವ್ ಸಾವರ್ಕರ್ ಎಂದೇ ಜನಮಾನಾದಲ್ಲಿ ಚಿರಪರಿಚತರಾಗಿದ್ದ ಶ್ರೀ ಗಣೇಶ ದಾಮೋದರ ಸಾವರ್ಕರ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳನ್ನು ತಿಳಿದುಕೊಳ್ಳೋಣ.
ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗೂರ್ ಗ್ರಾಮದ ಶ್ರೀ ದಾಮೋದರ ಸಾವರ್ಕರ್ ಮತ್ತು ರಾಧಾಭಾಯಿ ಸಾವರ್ಕರ್ ದಂಪತಿಗಳ ಹಿರಿಯ ಮಗನಾಗಿ ಗಣೇಶರು ಜೂನ್ 13, 1879 ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಭಾರತ ಕಥಾ ಸಂಗ್ರಹ, ಪಾಂಡವಪ್ರಾ ಆಪ್, ರಾಮವಿಜಯ, ಹರಿವಿಜಯ, ಶಿವಲೀಲಾಮೃತ ಮತ್ತು ಜೈಮಿನಿ ಅಶ್ವಮೇಧ ಮುಂತಾದ ಗ್ರಂಥಗಳನ್ನು ಅಧ್ಯಯನ ಮಾಡಿದ್ದಲ್ಲದೇ, ನಾಸಿಕ್‌ನಲ್ಲಿ ಬಾಲಬುವಾ ಎಂಬ ವೈದ್ಯರ ಪರಿಚಯವಾಗಿ ಅವರಿಂದ ಯೋಗಾಸನವನ್ನೂ ಕಲಿತು. ಪ್ರತಿ ದಿನ 14-15 ಗಂಟೆಗಳ ಕಾಲ ಯೋಗಾಭ್ಯಾಸ ಮಾಡುತ್ತಾ, ಬಹಳ ಚುರುಕಿನ ಹುಡುಗ ಎಂದೇ ಪ್ರಸಿದ್ಧರಾಗಿರುತ್ತಾರೆ. ಅವರಿಗೆ ಕೇವಲ ಹದಿಮೂರು ವರ್ಷದವರಿದ್ದಾಗ ತಾಯಿ ರಾಧಾಭಾಯಿ ಆವರ ನಿಧನರಾದರೆ, ಅದಾದ ಕೆಲವೇ ವರ್ಷಗಳಲ್ಲಿ ಭಯಂಕರ ಸಾಂಕ್ರಾಮಿಕ ರೋಗವಾದ ಪ್ಲೇಗ್ ನಿಂದ ಅವರ ತಂದೆಯವರೂ ನಿಧನರಾದಾಗ, ಇಬ್ಬರು ತಮ್ಮಂದಿರು ಮತ್ತು ತಂಗಿಯ ಕುಟುಂಬದ ಸಂಪೂರ್ಣ ನಿರ್ವಹಣೆ ಗಣೇಶರ ಮೇಲೆ ಬಿದ್ದ ಕಾರಣ, ತಮ್ಮ ವಿದ್ಯಾಭ್ಯಾಸವನ್ನು ಮೊಟುಕು ಗೊಳಿಸಿ ತಮ್ಮ ಕಿರಿಯ ಸಹೋದರರಾದ ವಿನಾಯಕ್ ಮತ್ತು ನಾರಾಯಣ ಮತ್ತು ತಂಗಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿಸುತ್ತಾರೆ.
1905ರಲ್ಲಿ ಬ್ರಿಟೀಷರು ಬಂಗಾಳದ ವಿಭಜನೆಯನ್ನು ಮಾಡಿದಾಗ ಅದರ ವಿರುದ್ಧ ನಡೆದ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದದ್ದಲ್ಲದೇ, 1906 ರಲ್ಲಿ, ಅವರ ತಮ್ಮ ವಿನಾಯಕ್ ಸ್ಥಾಪಿಸಿದ ಅಭಿನವ ಭಾರತದ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಗಣೇಶರು ವಹಿಸಿಕೊಳ್ಳುತ್ತಾರೆ. ಇನ್ನು ಪೂನಾ ಮತ್ತು ಬಾಂಬೆಯಲ್ಲಿನ ಅನೇಕ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಅಭಿನವ ಭಾರತದ ನಿಷ್ಠ ಸದಸ್ಯರಾಗಿ, ಬಾಬಾರಾವ್ ಅವರ ಕ್ರಾಂತಿಕಾರಿ ವಿಚಾರಗಳಿಂದ ಪ್ರೇರಿತವಾಗಿ ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ಮಹಾರಾಷ್ಟ್ರದ ವಿವಿಧ ಪ್ರಾಂತ್ಯ, ಕರ್ನಾಟಕ ಮತ್ತು ಮಧ್ಯಪ್ರದೇಶಗಳಿಗೆ ಹೋಗಿ ಅಲ್ಲೆಲ್ಲಾ ಅಭಿನವ ಭಾರತ ಶಾಖೆಗಳನ್ನು ಆರಂಭಿಸಿದ್ದಲ್ಲದೇ, ಅಭಿನವ ಭಾರತದ ಸದಸ್ಯರು ಅಲ್ಲಿನ ಸರ್ಕಾರಿ ಸೇವೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಗಳಿಸಿದ್ದರೇ ಇನ್ನೂ ಕೆಲವರು ದೆಹಲಿಯ ಸೆಕ್ರೆಟರಿಯೇಟ್‌ನಲ್ಲಿಯೂ ಕೆಲಸ ಗಿಟ್ಟಿಸಿಕೊಂಡು ತನ್ಮೂಲಕ ಬ್ರೀಟಿಷರ ಆಡಳಿತ ಕೇಂದ್ರವಾಗಿದ್ದ ಬಂಗಾಳದೊಂದಿಗೆ ಸಹಾ ಉತ್ತಮ ಸಂಪರ್ಕವನ್ನು ಸ್ಥಾಪಿಸುವುದರಲ್ಲಿ ಯಶಸ್ವಿಯಾಗುತ್ತಾರೆ.
ಇನ್ನು ವಿನಾಯಕರು ಶಿಕ್ಷಣದ ನೆಪದಲ್ಲಿ ದಬ್ಬಾಳಿಕೆಯ ತವರು ಪ್ರದೇಶದಿಂದ ಭಾರತೀಯ ಸ್ವಾತಂತ್ರ್ಯದ ಉದ್ದೇಶವನ್ನು ಮತ್ತಷ್ಟು ಹೆಚ್ಚಿಸಲು ಲಂಡನ್‌ಗೆ ತೆರಳಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಧ್ಯೇಯದಿಂದ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಬ್ರೀಟೀಷರ ವಿರುದ್ಧ ಹೋರಾಡುವಂತೆ ಪ್ರೇರೇಪಣೆ ಮಾಡುವುದಲ್ಲದೇ, ಅಲ್ಲಿಂದ ರಹಸ್ಯವಾಗಿ ಶಸ್ತ್ರಾಸ್ತ್ರ ಅದರಲ್ಲೂ ವಿಶೇಷವಾಗಿ ಹೊಸ ಹೊಸಾ ಬಂದೂಕುಗಳನು ಬೈಬಲ್ ಪುಸ್ತಕದಲ್ಲಿ ಇಟ್ಟು ಕಳುಹಿಸುತ್ತಿರುತ್ತಾರೆ. ಹೀಗೆ ತಮ್ಮ ಕಳುಹಿಸಿದ ಶಸ್ತ್ರಾಸ್ತ್ರಗಳನ್ನು ಬಾಬಾರಾವ್ ಸಾವರ್ಕರ್ ಅವರು ಭಾರತೀಯ ಯುವಕರಿಗೆ ವಿತರಿಸುವ ಮೂಲಕ ಭಾರತದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಏಳುವಂತೆ ಮಾಡುವ ಕ್ರಾಂತಿಕಾರಿ ಚಟುವಟಿಕೆಗಳ ಮೂಲಕ ಕೇವಲ ಮಹಾರಾಷ್ಟ್ರವಲ್ಲದೇ, ಬಂಗಾಳ, ಮದ್ರಾಸ್ ಮತ್ತು ಪಂಜಾಬ್‌ನಲ್ಲಿ ಪ್ರಾಂತ್ಯದಲ್ಲಿ ಜನಪ್ರಿಯವಾಗಿದ್ದರು. ಇದಕ್ಕೆ ಪೂರಕವಾಗಿ ವಿನಾಯಕರ ಸಲಹೆಗೆ ಮೇರೆಗೆ ಅವರ ಸ್ನೇಹಿತರಾದ ಪಾಂಡುರಂಗ ಬಾಪಟ್ ಅವರು ರಷ್ಯಾಕ್ಕೆ ಹೋಗಿ ಅಲ್ಲಿ ಬಾಂಬ್ ತಯಾರಿಸುವುದನ್ನು ಕಲಿತುಕೊಂಡು ಅದನ್ನು ಗಣೇಶ್ ಸಾವರ್ಕರ್ ಅವರಿಗೆ ಹೇಳಿಕೊಡುತ್ತಾರೆ. ಹೀಗೆ ಬಾಂಬ್ ತಯಾರಿಸುವ ತಂತ್ರಗಳನ್ನು ಕಲಿತ ಬಾಬಾರಾವ್ ಆ ಕಲೆಯನ್ನು ದೇಶಾದ್ಯಂತ ಹಂಚಿಹೋಗಿದ್ದ ಕ್ರಾಂತಿಕಾರಿಗಳಿಗೆ ಕಲಿಸಿಕೊಡುತ್ತಾರೆ.
ತಮ್ಮ ಅಭಿನವ ಭಾರತದ ಸದಸ್ಯರುಗಳಿಗೆ ಸ್ವಾತ್ರಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಲು, ಶ್ರೀ ಅರಬಿಂದೋ ಘೋಷ್, ಲೋಕಮಾನ್ಯ ತಿಲಕ್, ದೇಶಪಾಂಡೆ, ಎಸ್.ಎಂ.ಪರಾಂಜಪೆ ಮುಂತಾದವರುಗಳನ್ನು ಕರೆಸುತ್ತಿದ್ದದ್ದಲ್ಲದೇ, ದಸರಾ ಮತ್ತು ಶಿವಾಜಿ ಜಯಂತಿಯಂತಿಯಂದು ಸ್ಥಳೀಯವಾಗಿ ಅಭಿನವ ಭಾರತದ ಸದಸ್ಯರುಗಳು ಮೆರವಣಿಗೆಗಳನ್ನು ಮಾಡುತ್ತಾ, ಸ್ವಾತಂತ್ರ್ಯಲಕ್ಷ್ಮಿ ಕೀ ಜೈ, ಶಿವಾಜಿ ಮಹಾರಾಜ್ ಕಿ ಜೈ ಎಂಬ ಘೋಷಣೆಯನ್ನು ಕೂಗುತ್ತಿದ್ದ ಸಂದರ್ಭದಲ್ಲೇ, ಬಾಬಾರಾವ್ ಅವರು ವಂದೇ ಮಾತರಂ ಘೋಷಣಯನ್ನೂ ಕೂಗಿದ್ದರಿಂದ ಕುಪಿತರಾದ, ಸ್ಥಳೀಯ ಬ್ರಿಟಿಷ್ ಪೊಲೀಸ್ ಅಧಿಕಾರಿ ಬಾಬಾರಾವ್ ಅವರ ತಲೆಗೆ ಬಲವಾಗಿ ಹೊಡೆದಾಗ, ಅದಕ್ಕೆ ಪ್ರತಿಕಾರವಾಗಿ ಬಾಬಾರಾವ್ ಅ ಆಧಿಕಾರಿಯ ಕತ್ತು ಹಿಡಿದು ಥಳಿಸಿದ್ದನ್ನೇ ಮೂಲ ಮಾಡಿಕೊಂಡು, ಅವರನ್ನು ಬಂಧಿಸಿ, ಸುಮಾರು ಒಂದು ವರ್ಷಗಳ ಕಾಲ ವಿಚಾರಣೆಗೆ ಒಳಪಡಿಸಿ ಆವರಿಗೆ ಒಂದು ತಿಂಗಳ ಜೈಲುವಾಸದ ಶಿಕ್ಷೆಯಾಗುತ್ತದೆ. ಈ ಪ್ರಕರಣ, ಮಹಾರಾಷ್ಟ್ರದಾದ್ಯಂತ ವಂದೇ ಮಾತರಂ ಪ್ರಯೋಗ ಎಂದೇ ಪ್ರಸಿದ್ಧಿ ಪಡೆಯುತ್ತದೆ.
ಒಂದು ತಿಂಗಳ ನಂತರ ಬಿಡುಗಡೆಯಾದರೂ, ಬಾಬಾರಾವ್ ಅವರ ಮೇಲೆ ಪೋಲೀಸರು ನಿರಂತರ ನಿಗಾ ಇರಿಸಿದ್ದನ್ನು ಗಮನಿಸಿ ಸುಮಾರು 7-8 ತಿಂಗಳುಗಳ ಕಾಲ ಭೂಗತರಾಗಿ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿದ್ದ ಅಭಿನವ ಭಾರತದ ಶಾಖೆಗಳಿಗೆ ಭೇಟಿ ನೀಡಿದ ಬಾಬಾರಾವ್ ಆರು ಅಲ್ಲಿನ ಯುವ ಕ್ರಾಂತಿಕಾರಿಗಳಿಗೂ ಬಾಂಬ್ ತಯಾರಿಕೆಯ ವಿಧಾನಗಳನ್ನು ಕಲಿಸುವಲ್ಲಿ ಯಶಸ್ವಿಯಾದರು. ದುರಾದೃಷ್ಟವಷಾತ್ ಫೆಬ್ರವರಿ 28, 1909 ರಂದು ಅವರು ಅಭಿನವ್ ಭಾರತದ ಮತ್ತೊಬ್ಬ ಸದಸ್ಯ ಮತ್ತು ಅವರ ಸೋದರಸಂಬಂಧಿ ಆಗಿದ್ದ V.M. ಭಟ್ ಅವರೊಂದಿಗೆ ಸಭೆ ನಡೆಸುತ್ತಿದ್ದಾಗಲೇ ಬಂಧನಕ್ಕೊಳಗಾಗಿ, ನಾಸಿಕ್ ಜೈಲಿಗೆ ಕರೆದೊಯ್ಯುವ ಹಾದಿಯಲ್ಲಿ ಅಲ್ಲಿನ ಅಧಿಕಾರಿಯೊಬ್ಬರು, ನೀವು ಬ್ರಿಟಿಷರನ್ನು ಹೇಗೆ ಹೊರದಬ್ಬಲು ಉದ್ದೇಶಿಸಿದ್ದೀರಿ? ಎಂದು ಕೇಳಿದ ಪ್ರಶ್ನೆಗೆ ಬಹಳ ಶಾಂತಚಿತ್ತದಿಂದ ನಾವು ಅರ್ಹರಾದಾಗ ನಮಗೆ ಸ್ವಾತಂತ್ರ್ಯ ನೀಡುವುದಾಗಿ ಬ್ರಿಟಿಷರೇ ಭರವಸೆ ನೀಡಿದ್ದಾರೆ. ಹಾಗಾಗಿ ನಾವು ಸ್ವಾತಂತ್ರ್ಯಕ್ಕಾಗಿ ನಮ್ಮ ಬಯಕೆಯನ್ನು ತೀವ್ರಗೊಳಿಸುವ ಮೂಲಕ ನಮ್ಮನ್ನು ಅರ್ಹರನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅದು ಯಶಸ್ವಿಯಾದಾಗ, ಬ್ರಿಟಿಷರೇ ನಮಗೆ ಮುಲಾಚಿಲ್ಲದೇ ಸ್ವಾತಂತ್ರ್ಯ ನೀಡಲೇ ಬೇಕಾಗುತ್ತದೆ ಎಂಬ ಉತ್ತರ ನೀಡಿದ್ದನ್ನು ಕೇಳಿ ಆ ಅಧಿಕಾರಿ ದಂಗಾಗಿ ಹೋಗಿದ್ದಂತೆ .
ಭಾರತೀಯರಲ್ಲಿ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಪ್ರಪ್ರಥಮ ಬಾರಿಗೆ ಮೂಡಿಸಿದ್ದ ಬಾಬಾರಾವ್ ಅವರನ್ನು ಕಾಟಾಚಾರವಾಗಿ ತನಿಖೆ ನಡೆಸಿ ರಾಜನ ವಿರುದ್ಧ ದೇಶದ್ರೋಹಕ್ಕೆ ಸಹಾಯ ಮಾಡುವುದು ಮತ್ತು ಪ್ರೋತ್ಸಾಹಿದರು ಎಂಬ ಆರೋಪದಡಿಯಲ್ಲಿ ಅವರಿಗೆ ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತಲ್ಲದೇ, ಅವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ನಾಸಿಕ್ಕಿನಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಬಾಬಾರಾವ್ ಅವರಿಗೆ ಬ್ರಿಟಿಷ್ ಅಧಿಕಾರಿಗಳು ಕೈಕಾಲುಗಳೊಂದಿಗೆ ಸರಪಳಿಯನ್ನು ತೊಡಿಸಿ, ನಗರಾದ್ಯಂತ ಮೆರವಣಿಗೆ ಮಾಡವ ಮೂಲಕ ನಾಸಿಕ್ಕಿನ ಜನರ ಆತ್ಮಸ್ಥೈರ್ಯವನ್ನು ಕುಗ್ಗಿಸಿದ್ದಲ್ಲದೇ, ತಮ್ಮ ವಿರುದ್ಧ ಹೋರಾಟ ನಡೆಸುವವರಿಗೆ ಇಂತಹದ್ದೇ ಶಿಕ್ಷೆ ದೊರೆಯುತ್ತದೆ ಎಂಬ ಭಯವನ್ನು ಮೂಡಿಸಲು ಸಫಲರಾದ ಕಾರಣ, ಅಲ್ಲಿನ ಯಾವ ಜನರೂ ಬಾಬಾರಾವ್ ಅವರನ್ನು ನೋಡಲು ನಾಸಿಕ್ ನಿಲ್ದಾಣಕ್ಕೆ ಬರಲಿಲ್ಲ.
ಇದೇ ತೀರ್ಪನ್ನು ಬಾಂಬೆ ಉಚ್ಚ ನ್ಯಾಯಾಲಯವೂ ಸಹಾ ಎತ್ತಿ ಹಿಡಿದ ನಂತರ, ಆವರನ್ನು ಅಂಡಮಾನ್‌ನ ಸೆಲ್ಯುಲಾರ್ ಜೈಲಿಗೆ ವರ್ಗಾವಣೆ ಮಾಡಲಾಯಿತು. ಬಾಬಾರಾವ್ ಅವರನ್ನು ಗಡಿ ಪಾರು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಸಿಕ್ಕಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀ ಜಾಕ್ಸನ್ ಅವರನ್ನು ಕೃಷ್ಣಾಜಿ ಗೋಪಾಲ್ ಕರ್ವೆ, ವಿನಾಯಕ್ ನಾರಾಯಣ ದೇಶಪಾಂಡೆ ಮತ್ತು ಅನಂತ್ ಕನ್ಹೆರೆ ಅವರನ್ನೊಳಗೊಂಡ 21, 1909 ರಂದು ನಾಸಿಕ್‌ನ ವಿಜಯಾನಂದ್ ಥಿಯೇಟರ್‌ನಲ್ಲಿ ಜಾಕ್ಸನ್‌ರನ್ನು ಹತ್ಯೆ ಮಾಡುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡರೆ, ವೀರ ಸಾವರ್ಕರ್ ಅವರಿಂದ ಪ್ರೇರಿತನಾಗಿ ಲಂಡನ್ನಿನ ಇಂಪೀರಿಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಆಯೋಜಿಸಿದ್ದ ‘ಅಟ್ ಹೋಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬ್ರಿಟಿಷ್ ಅಧಿಕಾರಿ ಸರ್ ಕರ್ಜನ್-ವಿಲ್ಲಿಯನ್ನು ಕೊಂದ ಮದನ್ ಲಾಲ್ ಡಿಂಗ್ರಾ ಸಹಾ ತನ್ನ ವಿಚಾರಣೆಯ ಸಮಯದಲ್ಲಿ ದೇಶಭಕ್ತ ಭಾರತೀಯ ಯುವಕರ ಅಮಾನವೀಯ ಗಲ್ಲಿಗೇರಿಸುವಿಕೆ ಮತ್ತು ಗಡೀಪಾರುಗಳಿಗೆ ಪ್ರತೀಕಾರವಾಗಿ ನಾನು ಬ್ರಿಟೀಷ್ ಆಧಿಕಾರಿಯನ್ನು ಕೊಂದೆ ಎಂದು ಹೇಳುವ ಮೂಲಕ ಗಣೇಶ್ ಸಾವರ್ಕರ್ ಅವರ ಗಡೀಪಾರು ಬಗ್ಗೆಯೂ ಉಲ್ಲೇಖಿಸಿದದ್ದು ಗಮನಾರ್ಹವಾಗಿದೆ.
1910 ರಲ್ಲಿ, ಅಂಡಮಾನ್‌ನ ಸೆಲ್ಯುಲಾರ್ ಜೈಲಿಗೆ ಬಾಬಾರಾವ್ ಅವರನ್ನು ಕರತಂದು ಕೈದಿಗಳ ಚಿತ್ರಹಿಂಸೆಗಾಗಿ ಕುಖ್ಯಾತನಾಗಿದ್ದ ಸ್ಯಾಡಿಸ್ಟ್ ಐರಿಶ್ ಜೈಲರ್, ಡೇವಿಡ್ ಬ್ಯಾರಿ, ಬಾಬಾರಾವ್ ಅವರ ಕೈಕಾಲುಗಳಿಗೆ ಸಂಕೊಲೆಯನ್ನು ತೊಡಿಸಿ ಬಹಳ ಕಾಲ ಎಣ್ಣೆಯನ್ನು ತೆಗೆಯುವ ಗಾಣಕ್ಕೆ ದೂಡಿ ಬಹಳ ಯಾತನಾಮಯ ಶಿಕ್ಷೆಯನ್ನು ನೀಡಲಾಗಿತ್ತು. ಇದರ ಜೊತೆಯಲ್ಲಿ ಜೈಲಿನ ಸಣ್ಣ ಮೇಲ್ವಿಚಾರಕರು ಬಹುತೇಕರು ಮುಸ್ಲಿಮರಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾವುದೇ ಕನಿಕರವನ್ನು ತೋರದೇ, ಮತ್ತಷ್ಟು ವಿಕೃತ ಮನಸ್ಸಿನವರಾಗಿದ್ದು. ಕೈದಿಗಳಿಗೆ ನೀಡುವ ಆಹಾರಕ್ಕೆ ಸೀಮೆಎಣ್ಣೆ ಸೇರಿಸುವ ಮೂಲಕ ಅದನ್ನು ಸೇವಿಸುವ ಕೈದಿಗಳಿಗೆ ಹೊಟ್ಟೆ ನೋವು ಮತ್ತು ರಕ್ತಸಿಕ್ತ ವಾಂತಿ ಮಾಡಿಕೊಳ್ಳುವುದನ್ನು ನೋಡಿ ವಿಕೃತವಾಗಿ ಸಂತೋಷ ಪಡುತ್ತಿದ್ದರು. ಈ ಇಂತಹ ವಿಕೃತಿಗಳಿಗೆ ಬಾಬಾರಾವ್ ಸಹಾ ಕೂಡ ಬಲಿಯಾಗಿದ್ದರು. ಇವರ ನಿರಂತರ ಚಿತ್ರಹಿಂಸೆಯಿಂದ ತಪ್ಪಿಸಿಕೊಳ್ಳ ಬೇಕೆಂದರೆ ಕೈದಿಗಳು ಇಸ್ಲಾಂಗೆ ಮತಾಂತರ ಅಗ ಬೇಕೆಂಬ ಒತ್ತಾಯವನ್ನೂ ಮಾಡಲಾಗುತ್ತಿತ್ತು. ಈ ರೀತಿಯಾಗಿ ಮುಸ್ಲಿಂ ವಾರ್ಡನ್ ಗಳ ವಿರುದ್ದ ವಿರುದ್ಧ ಬಾಬರಾವ್ ಪ್ರತಿಭಟನೆ ನಡೆಸಿ ಕೈದಿಗಳನ್ನು ಜಾಗೃತಗೊಳಿಸಲು ಪ್ರಯತ್ನಿಸಿದ ಪ್ರತಿಫಲವಾಗಿ ಅವರ ಶಿಕ್ಷೆಯ ತೀವ್ರತೆ ಮತ್ತಷ್ಟು ಹೆಚ್ಚಿತ್ತು. ಖೈದಿಗಳಿಗೆ ಪರಸ್ಪರ ಸಂವಹನ ನಡೆಸಲು ಯಾವ ರೀತಿಯೂ ಅವಕಾಶವಿರಲಿಲ್ಲ. ಜುಲೈ 4, 1911 ರಂದು ಸೆಲ್ಯುಲಾರ್ ಜೈಲಿಗೆ ಸಾಗಿಸಲ್ಪಟ್ಟ ಬಾಬಾರಾವ್ ಅವರ ತಮ್ಮ ವಿನಾಯಕ ಸಾವರ್ಕರ್ ಅವರು ಎರಡು ವರ್ಷಗಳ ನಂತರವಷ್ಟೇ ತಮ್ಮ ಅಣ್ಣ ಬಾಬಾರಾವ್ ಅವರನ್ನು ಭೇಟಿ ಮಾಡಿದಾಗಲೇ, ತಮ್ಮ ತಮ್ಮನೂ ಅಹಾ ಇದೇ ಜೈಲಿಗೆ ಬಂದಿರುವ ವಿಷಯ ತಿಳಿಯುತ್ತದೆ.
ಆಗ ಬಾಬಾರಾವ್ ಅವರು ನನ್ನ ತಮ್ಮ ದೇಶ ವಿದೇಶಗಳಲ್ಲಿ ಭಾರತೀಯರನ್ನು ಜಾಗೃತಗೊಳಿಸಿ ಭಾರತವನ್ನು ಬ್ರಿಟೀಷರಿಂದ ಸ್ವಾತ್ರಂತ್ರ್ಯಗೊಳಿಸಿ ನಮ್ಮೆಲ್ಲರನ್ನು ಬಂಧ ಮುಕ್ತ ಮಾಡುತ್ತೀಯೇ ಎಂಬ ಭಾವನೆಯಿಂದಲೇ ಇವರು ಕೊಡುತ್ತಿರುವ ಕಷ್ಟವನ್ನೆಲ್ಲಾ ಸಹಿಸಿಕೊಂಡು ಹೋಗುತ್ತಿದ್ದರೆ ನೀನೂ ಸಹಾ ಇದೇ ನರಕದಲ್ಲೇ ಕೊಳೆಯುವಂತಾದರೆ, ಇನ್ನು ಭಾರತವನ್ನು ಸ್ವಾತ್ರಂತ್ರ್ಯಗೊಳಿಸುವವರು ಯಾರು? ಎಂದು ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ದೇಶದ ಬಗ್ಗೆಯೇ ಚಿಂತನೆ ನಡೆಸಿದ್ದರಂತೆ.
1919 ರ ಅಂತ್ಯದ ವೇಳೆಗೆ, ಸೆರೆಮನೆಯ ಕಠಿಣ ಶಿಕ್ಷೆಗಳಿಂದಾಗಿ ಬಾಬಾರಾವ್ ಅವರ ಆರೋಗ್ಯವು ಗಣನೀಯವಾಗಿ ಹದಗೆಟ್ಟಿತಲ್ಲದೇ, ಅವರ ತೂಕವು 45 ಕೆಜಿಗಳಷ್ಟು ಕಡಿಮೆಯಾಗಿ ಕೃಶಕಾಯವಾಗಿದ್ದಲ್ಲದೇ, ಕ್ಷಯರೋಗಕ್ಕೂ ತುತ್ತಾಗಿ ಹೋದರೂ, ಸರಿಯಾದ ವೈದ್ಯಕೀಯ ಚಿಕಿತ್ಸೆ ಮತ್ತು ಚೇತರಿಸಿಕೊಳ್ಳುವ ಸಮಯದ ಮೂಲಭೂತ ಹಕ್ಕನ್ನು ನಿರಾಕರಿಸಿದ ಪರಿಣಾಮ ಬಾಬಾರಾವ್ ತೀವ್ರವಾಗಿ ಅನಾರೋಗ್ಯ ಪೀಡಿತರಾದರು. ಈ ವಿಷಯ ತಿಳಿದು 1921 ರಲ್ಲಿ, ಸುಮಾರು 70,000 ಸಹಿಗಳೊಂದಿಗೆ ಭಾರತೀಯ ಸಾರ್ವಜನಿಕ ಅಭಿಪ್ರಾಯದ ನಿರಂತರ ಒತ್ತಡದ ಜೊತೆಗೆ ಬಾಲಗಂಗಾಧರ ತಿಲಕ್ ಮತ್ತು ಸುರೇಂದ್ರನಾಥ ಬ್ಯಾನರ್ಜಿ ಅವರು ಬ್ರಿಟೀಷ್ ಸರ್ಕಾರಕ್ಕೆ ಮೇಲಿಂದ ಮೇಲೆ ಜ್ಞಾಪಕ ಪತ್ರಗಳನ್ನು ಬರೆದು ಒತ್ತಾಯ ಹೇರಿದ ಪರಿಣಾಮ. ಭಾರತದ ಬ್ರಿಟಿಷ್ ಸರ್ಕಾರವು ಬಾಬಾರಾವ್ ಅವರನ್ನು ಅಂಡಮಾನ್ ಜೈಲಿನಿಂದ ಭಾರತದ ಇತರೇ ಜೈಲಿಗೆ ವರ್ಗಾಯಿಸಲು ನಿರ್ಧರಿಸಿತು. ಅಂಡಮಾನ್ ನಿಂದ ಬಿಡುಗಡೆಯಾದ ಸಂಭ್ರಮದಲ್ಲಿರುವ ಸಹ ಖೈದಿಗಳಿಗೆ ತಮ್ಮ ವಿದಾಯ ಭಾಷಣದಲ್ಲಿ ವಿನಾಯಕ ಸಾವರ್ಕರ್ ಅವರು ಏಕ್ ದೇವ್, ಏಕ್ ದೇಶ್, ಏಕ್ ಆಶಾ, ಏಕ್ ಜಾತಿ, ಏಕ್ ಜೀವ್, ಏಕ್ ಭಾಷಾ ಅಂದರೆ, ಒಂದು ನಂಬಿಕೆ, ಒಂದು ರಾಷ್ಟ್ರ, ಒಂದು ಜನಾಂಗ, ಒಂದು ಭಾಷೆ, ಏಕೀಕೃತ ಭರವಸೆ ಮತ್ತು ಏಕೀಕೃತ ಜೀವಿ ಎಂಬ ಸಂದೇಶವನ್ನು ನೀಡಿದ್ದದ್ದು ಗಮನಾರ್ಹವಾಗಿತ್ತು.
ಅಂಡಮಾನ್ ನಿಂದ ಕಲ್ಕತ್ತಾಗೆ ಕರೆತಂದು ಅಲ್ಲಿನ ಅಲಿಪುರ ಜೈಲಿನಲ್ಲಿ ಆರಂಭದಲ್ಲಿ ಇರಿಸಿ ನಂತರ ಬಿಜಾಪುರ ಜೈಲಿಗೆ ವರ್ಗಾಯಿಸಿ. ಸುಮಾರು ಎಂಟು ತಿಂಗಳ ಕಾಲ ಏಕಾಂತ ಸೆರೆಮನೆಯಲ್ಲಿ ಇರಿಸಿದ ನಂತರ 1922ರ ಜನವರಿಯಲ್ಲಿ ಸಾಬರಮತಿ ಜೈಲಿಗೆ ಸ್ಥಳಾಂತರಿಸಲಾಯಿತು. ದಿನದಿಂದ ದಿನಕ್ಕೆ ಬಹಲ ದುರ್ಬಲನಾಗಿ, ಸಾಯುವ ದಿನಗಳ ಎಣಿಕೆಯನ್ನು ತಲುಪಿದ್ದನ್ನು ಗಮನಿಸಿದ, ಸಿಂಧಿ ನಾಯಕ ಜೈರಾಮದಾಸ್ ದೌಲತ್ರಾಮ್ ಮತ್ತು ಬಾಬಾರಾವ್ ಅವರ ಕಿರಿಯ ಸಹೋದರ ನಾರಾಯಣ ಸಾವರ್ಕರ್ ಅಲ್ಲಿನ ಪ್ರಾಂತ್ಯದ ಆಡಳಿತಗಾರರಿಗೆ ಮೇಲಿಂದ ಮೇಲೆ ಪತ್ರ ಬರೆಯುವ ಮೂಲಕ ಅವರ ಬಿಡುಗಡೆಗೆ ಒತ್ತಡ ಹೇರತೊಡಗಿದರು, ಅಕಸ್ಮಾತ್ ಬಾಬಾರಾವ್ ಆವರು ಜೈಲಿನಲ್ಲೇ ಸತ್ತರೆ ಸಾರ್ವಜನಿಕರು ದಂಗೆಗೆ ಏಳಬಹುದು ಎಂಬ ಕಾರಣದಿಂದಾಗಿ ಸುಮಾರು 13 ವರ್ಷಗಳ ಕಾಲ ಭಯಂಕರ ನರಕ ಯಾತನೆಯನ್ನು ಅನುಭವಿಸಿದ ನಂತರ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಜೈಲಿನಿಂದ ಬಿಡುಗಡೆಯಾಗಿ ಆರೋಗ್ಯ ಕೊಂಚ ಮಟ್ಟಿಗೆ ಸುಧಾರಣೆ ಆಗುತ್ತಿದ್ದಂತೆಯೇ, ಬಾಬಾರಾವ್ ಹಿಂದೂ ರಾಷ್ಟ್ರವನ್ನು ನಾಶಮಾಡುವ ಶಕ್ತಿಗಳ ವಿರುದ್ಧ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಲದೇ, ಗಾಂಧಿಯವರ ತೀವ್ರವಾದ ಸತ್ಯ ಮತ್ತು ಅಹಿಂಸಾತ್ಮಕ ರಾಜಕೀಯದ ಕಲ್ಪನೆಯನ್ನು ತೀವ್ರವಾಗಿ ಪ್ರಶ್ನಿಸಲು ಪ್ರಾರಂಭಿಸಿದರು. ಭಾರತೀಯ ಜನರ ರಾಜಕೀಯ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲು ಶತಂ ಪ್ರತಿ ಶತಯಂ ಅರ್ಥಾತ್ ತಂತ್ರಕ್ಕೆ ತಕ್ಕ ಕುತ್ರಂತ್ರದ ಮೇಲೆಯೇ ಹೋರಾಟ ನಡೆಸಬೇಕೆಂದು ಹೇಳುತ್ತಿದ್ದರು. ನಂತರ ಹಿಂದೂ ಮಹಾಸಭಾದ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದಲ್ಲದೇ 1923-24 ರಲ್ಲಿ ಹಿಂದೂ ಯುವಕರಿಗಾಗಿ ತರುಣ್ ಹಿಂದೂ ಸಭಾ (ಯಂಗ್ ಇಂಡಿಯಾ ಕಾನ್ಫರೆನ್ಸ್) ಎಂಬ ಸಂಘಟನೆಯನ್ನು ಸ್ಥಾಪಿಸಿ, ರಾಜ್ಯಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿ ತರುಣ್ ಹಿಂದೂ ಸಭಾದ ಸುಮಾರು ಮೂವತ್ತು ಶಾಖೆಗಳನ್ನು ಸ್ಥಾಪಿಸಿ ಐನೂರಕ್ಕೂ ಹೆಚ್ಚು ಯುವಕರನ್ನು ತರಭೇತಿ ಗೊಳಿಸಿದ್ದರು. ಇದೇ ಸಮಯದಲ್ಲಿ. ಆರ್‌ಎಸ್‌ಎಸ್ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡಗೇವಾರ್, ಡಾಕ್ಟರ್ ಜೀ ಬಾಬಾರಾವ್ ಅವರನ್ನು ನಾಗ್ಪುರದಲ್ಲಿ ಭೇಟಿಯಾದಾಗ, ತರುಣ್ ಸಭಾದ ನಾಗ್ಪುರ ಘಟಕದ ಜವಾಬ್ದಾರಿಯನ್ನು ಡಾ.ಹೆಡಗೇವಾರ್ ಅವರಿಗೆ ವಹಿಸಲು ಬಾಬಾರಾವ್ ಬಯಸಿದ್ದರಾದರೂ, ಡಾಕ್ಟರ್ ಜೀ ಆವರು 1925ರ ವಿಜಯ ದಶಮಿಯಂದು ತಮ್ಮದೇ ಆದ ಸಂಘವನ್ನು ಆರಂಭಿಸಿದ ಸಂದರ್ಭದಲ್ಲಿ ನಾಗ್ಪುರದಲ್ಲಿ ಉಪಸ್ಥಿತರಿದ್ದ ಬಾಬಾರಾವ್, ಹಿಂದೂಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಹೊಸ ಹಿಂದೂ ಸಂಘಟನೆಯನ್ನು ರಚಿಸಲಾಗಿರುವುದು ಬಹಳ ಸಂತೋಷಕರ ವಿಷಯ ಎಂದು ತಿಳಿಸಿದ್ದಲ್ಲದೇ ನಂತರದ ದಿನಗಳಲ್ಲಿ ಆರ್‌ಎಸ್‌ಎಸ್‌ನ ಗುರಿಗಳು ಮತ್ತು ಚಾಲನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಆಗಾಗ್ಗೆ ಡಾ.ಜೀ ಬಾಬಾರಾವ್ ಅವರನ್ನು ಸಂಪರ್ಕಿಸುತ್ತಿದ್ದರು. ಅಭಿನವ್ ಭಾರತ್ ಮತ್ತು ತರುಣ್ ಸಭೆಗೆ ಔಪಚಾರಿಕ ಪ್ರಮಾಣವಚನವನ್ನು ಬಾಬಾರಾವ್ ಅವರು ಅದಾಗಲೇ ರಚಿಸಿದ್ದ ಕಾರಣ, ಸಂಘದ ಪ್ರತಿಜ್ಞೆಯನ್ನೂ ಸಹಾ ಸಿದ್ಧಪಡಿಸುವಂತೆ ಬಾಬಾರಾವ್ ಅವರನ್ನು ಕೇಳಿಕೊಂಡಾಗ ಅದನ್ನು ಸಂತೋಷದಿಂದ ಒಪ್ಪಿಕೊಂಡು ಸಿದ್ಧ ಪಡಿಸಿಕೊಟ್ಟಿದ್ದರು. ತಮ್ಮ ಸ್ವಂತ ಆರೋಗ್ಯ ಮತ್ತು ಬಲಿಷ್ಟ ಹಿಂದೂ ಸಂಘಟನೆಯ ಅಗತ್ಯವನ್ನು ಪರಿಗಣಿಸಿ, ಒಂದೇ ಗುರಿ ಮತ್ತು ಉದ್ದೇಶಗಳನ್ನು ಹೊಂದಿದ್ದ ಹೊಸದಾಗಿ ರಚಿಸಲಾದ RSS ನೊಂದಿಗೆ ತಮ್ಮ ತರುಣ್ ಸಭಾವನ್ನು 1932 ವಿಲೀನಗೊಳಿಸಿದ ನಂತರ, ಬಾಬಾರಾವ್ ಡಾ. ಹೆಡ್ಗೆವಾರ್ ಅವರೊಂದಿಗೆ ಸಂಘದ ಜಾಲದ ವಿಸ್ತರಣೆಗಾಗಿ ಮಹಾರಾಷ್ಟ್ರದ ಮೂಲೆ ಮೂಲೆಗಳಿಗೆ ಪ್ರವಾಸ ಮಾಡಿದ್ದಲ್ಲದೇ ತಮ್ಮ ಉಳಿದ ಜೀವನವನ್ನು ಸಂಘಕ್ಕಾಗಿಯೇ ಮೀಸಲಿಟ್ಟರು. ಮಾರ್ಚ್ 16, 1945 ರಂದು ವಯೋಸಹಜವಾಗಿ ಬಾಬಾರಾವ್ ಅವರು ನಿಧನರಾದರು.
ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಹಿಂದೂಗಳ ಜಾಗೃತಿಗಾಗಿ ನಿಸ್ವಾರ್ಥವಾಗಿ ತಮ್ಮ ಇಡೀ ಕುಟುಂಬ ಮತ್ತು ತಮ್ಮ ಜೀವಮಾನವನ್ನೇ ಸವೆಸಿದಂತಹ ಮಹಾನ್ ಚೇತನವಾದ ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್ ಎಲ್ಲರ ಪ್ರೀತಿಯ ಬಾಬಾರಾವ್ ಅವರ ಜಯಂತಿಯಂದು ಅವರನ್ನು ನೆನೆಸಿಕೊಂಡು ಅವರಿಗೊಂದು ಒಂದು ಗೌರವ ಪೂರ್ವಕ ವಂದನೆಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವೇ ಹೌದು.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ