ನಿತ್ಯಹರಿದ್ವರ್ಣ ಕಾಡುಗಳಿಂದ ಅವೃತ್ತವಾಗಿ ಅತ್ಯಂತ ರಮಣೀಯ ಸೌಂದರ್ಯವನ್ನು ಹೊಂದಿರುವ, ಅನೇಕ ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯನ್ನು ನಮ್ಮ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶ ಎಂದು ಏಕೆ ಕರೆಯುತ್ತಾರೆ ಎಂಬುದೇ ಅತ್ಯಂತ ಯಕ್ಷಪ್ರಶ್ನೆಯಾಗಿದೆ. ನಾವಿಂದು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಹೆಚ್ಚಾಗಿ ಗಿರಿಜನರಾದ ಸೋಲಿಗರೇ ಇರುವ ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲಸಿರುವ ಅವರ ಆರಾಧ್ಯ ದೈವ ಶೀ ರಂಗನಾಥಸ್ವಾಮಿಯ ಕುರಿತಾದ ವಿಶೇಷತೆಗಳು ಮತ್ತು ಸ್ಥಳ ಪುರಾಣಗಳನ್ನು ತಿಳಿಯೋಣ ಬನ್ನಿ.
ಯಳಂದೂರಿನಿಂದ ಕೇವಲ 24ದೂರವಿದ್ದರೂ, ಸುಂದರವಾದ ಪ್ರಕೃತಿ ತಾಣಗಳ ಮಧ್ಯೆ ಬೆಟ್ಟಗುಡ್ಡಗಳ 27 ಹೇರ್ ಪಿನ್ ತಿರುವು ಮುರುವು ರಸ್ತೆಗಳನ್ನು ದಾಟಿ ಬೆಟ್ಟದ ತಪ್ಪಲನ್ನು ತಲುಪಲು ಸುಮಾರು 45 ನಿಮಿಷಗಳಷ್ಟು ಸಮಯ ಬೇಕಾಗುತ್ತದೆ. ಇಲ್ಲಿರುವ ವಿವಿಧ ವನ್ಯಮೃಗಗಳ ಶಾಂತಿಗೆ ಧಕ್ಕೆ ಮಾಡಬಾರದೆಂಬ ಉದ್ದೇಶದಿಂದ ಈ ಬೆಟ್ಟಕ್ಕೆ ಬೆಳಿಗ್ಗೆ 6:00 ರಿಂದ ಸಂಜೆ 6:00ರ ವರೆಗೆ ಮಾತ್ರಾ ಪ್ರವೇಶವನ್ನು ನೀಡಲಾಗುತ್ತದೆ. ಅಲ್ಲಿರುವ ಅರಣ್ಯಾಧಿಕಾರಿಗಳು ಸಹಜವಾಗಿ ವಾಹನಗಳನ್ನು ಬಿಡುತ್ತಾರಾದರೂ, ಅನುಮಾನ ಬಂದರೆ ತಪಾಸಣೆ ಮಾಡಲೂ ಸಹಾ ಹಿಂಜರಿಯುವುದಿಲ್ಲ. ಅದೃಷ್ಟವಿದ್ದಲ್ಲಿ ಬೆಟ್ಟಗುಡ್ಡಗಳ ನಡುವೆ ಇರುವ ಸಣ್ಣ ಸಣ್ಣ ನೀರಿನ ಕೊಳ್ಳಗಳಲ್ಲಿ ನೀರು ಕುಡಿಯಲು ಬರುವ ಆನೆ, ಜಿಂಕೆ ಯಲ್ಲದೇ ಇನ್ನೂ ಕೆಲವು ವನ್ಯಮೃಗಗಳನ್ನು ಕಾಣಬಹುದಾಗಿದೆ. ಬೆಟ್ಟದ ರಮಣೀಯ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಮಾರ್ಗದ ಮಧ್ಯೆ ಅಲ್ಲಲ್ಲಿ ವೀಕ್ಷಣಾ ಸ್ಥಳಗಳಿದ್ದು ಅಲ್ಲಿಂದ ಸುತ್ತಮುತ್ತಲಿನ ಕಮರಿಗಳನ್ನು ನೋಡಲು ಬಲು ಸುಂದರವಾಗಿದೆ. ಬೆಳಕು ಮತ್ತು ಮೋಡಗಳ ನಡುವಿನ ಕಣ್ಣಾಮುಚ್ಚಾಲೆಗಳ ನಡುವೆ ಈ ಪ್ರದೇಶ ಅತ್ಯಂತ ಬೆಳ್ಳಗೆ ಕಾಣುವುದರಿಂದ ಈ ಪ್ರದೇಶವನ್ನು ಬಿಳಿಗಿರಿ ಎಂದು ಕರೆಯಲಾಗುತ್ತದೆ.
ಬಿಳಿಗಿರಿ ರಂಗನಾಥ ಸ್ವಾಮಿಯ ತಪ್ಪಲಿನಿಂದ ಬೆಟ್ಟದ ಮೇಲಕ್ಕೆ ಹೋಗಲು ಎರಡು ಮಾರ್ಗಗಳಿದ್ದು ದೇಹದಲ್ಲಿ ಕಸುವು ಇದ್ದವರು ಸ್ವಾಮಿಯ ರಥದ ಬಳಿಯಲ್ಲಿರುವ ಸುಮಾರು 500+ ಮೆಟ್ಟಿಲುಗಳನ್ನು ಹತ್ತಿಕೊಂಡು ಹೊಸದಾಗಿ ಕಟ್ಟಿರುವ ರಾಜಗೋಪುರದ ಮೂಲಕ ಪ್ರವೇಶಿಸುವುದು ಒಂದು ಮಾರ್ಗವಾದರೆ, ಮತ್ತೊಂದು ಕೇವಲ 150 ಮೆಟ್ಟಿಲುಗಳನ್ನು ಹತ್ತುವ ಮೂಲಕವೂ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.
ಶ್ರೀ ಬಿಳಿಗಿರಿ ರಂಗನ ಕುರಿತಾಗಿ ಅನೇಕ ಬಗೆಯ ಜನಪದ ಕಥೆಗಳು ಮತ್ತು ಕಾವ್ಯಗಳು ಈ ಪ್ರದೇಶದಲ್ಲಿ ಲಭ್ಯವಿದೆ. ಇವಲ್ಲದೇ ಹೆಂಗಸರ ಹಾಡ್ಗತೆಗಳೂ ಬಿಡಿಗೀತೆಗಳೂ ವೃತ್ತಿಗಾಯಕರೆಂದೇ ಪ್ರಸಿದ್ದಿ ಪಡೆದಿರುವ ನೀಲಗಾರರಂತೂ ಇಡೀ ರಾತ್ರಿ ಬಿಳಿರಂಗನ ಕುರಿತಾಗಿಯೇ ಕಥೆ ಹೇಳುವಷ್ಟು ಸುದೀರ್ಘವಾದ ಕಾವ್ಯ ಸಂಪತ್ತಿದೆ. ಈ ಎಲ್ಲ ಬಗೆಯ ಹಾಡು ಕಾವ್ಯಗಳಲ್ಲಿ ಶೃಂಗಾರ ಹಾಗೂ ಹಾಸ್ಯ ರಸಗಳೇ ಪ್ರಧಾನವಾಗಿದ್ದು, ಎಲ್ಲದ್ದರಲ್ಲೂ ರಂಗನಾಥನನ್ನು ದೇವರಂತೆ ಕಾಣದೇ ತಮ್ಮ ಬಂಧುವೋ ಇಲ್ಲವೂ ಸಖನೋ ಎನ್ನುವಂತ ಆಪ್ಯಾಯಮಾನದ ವರ್ಣನೆಯಿದ್ದು ಅಂತಿಮವಾಗಿ ಆತನಿಗೆ ಶರಣು ಹೋಗುವ ಭಕ್ತಿಭಾವ ಅಥವಾ ಶರಣಾಗತಿ ಭಾವದ ಕಥನವಾಗಿದೆ.
ಕುತೂಹಲಕಾರಿಯಾದ ಅಂಶವೆಂದರೆ, ಇಲ್ಲಿರುವ ದೇವರು ವೆಂಕಟರಮಣಸ್ವಾಮಿಯಾದರೂ ಆತನನ್ನು ರಂಗನಾಥಸ್ವಾಮಿ ಎಂದು ಕರೆಯಲಾಗುತ್ತದ. ಇಲ್ಲಿನ ಒಂದು ಕತೆಯ ಪ್ರಕಾರ, ತಿರುಪತಿಯ ವೆಂಕಟರಮಣಸ್ವಾಮಿ ಶ್ರೀರಂಗಪಟ್ಟಣದ ಆದಿರಂಗ ರಂಗನಾಥಸ್ವಾಮಿ , ಶಿವನಸಮುದ್ರದ ಮಧ್ಯರಂಗ ಶ್ರೀರಂಗ ಸ್ವಾಮಿ, ತಿರುಚ್ಚಿ ಬಳಿಯ ಶ್ರೀರಂಗಂನ ಅಂತ್ಯರಂಗ ಮತ್ತು ಈ ಬಿಳಿಗಿರಿರಂಗ ಇವರೆಲ್ಲರೂ ಅಣ್ಣ ತಮ್ಮಂದಿರಂತೆ. ಅದೊಂದು ಬಾರಿ ಹಿರಿಯಣ್ಣ ತಿರುಪತಿ ವೆಂಕಟರಮಣನಿಗೆ ವಿಪರೀತವಾದ ತಲೆನೋವು ಕಾಣಿಸಿಕೊಂಡಾಗ, ಅದರ ನಿವಾರಣೆಗಾಗಿ ಸೀಗೆಕಾಯಿ ಅಂಜನದ ಪಟ್ಟು ಕಟ್ಟಿ ಸ್ನಾನ ಮಾಡುವ ಸಲುವಾಗಿ ತನ್ನ ತಮ್ಮಂದಿರಿಗೆ ಸೀಗೆಕಾಯಿ ತೆಗೆದುಕೊಂಡು ಬರಲು ಸೂಚಿಸರಂತೆ, ಅಣ್ಣನ ಆಣತಿಯ ಮೇರೆಗೆ ಸೀಗೇಕಾಯಿ ತರಲು ಹೊರಟ ಆ ನಾಲ್ವರೂ ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿದರೇ ಹೊರತು ಸೀಗೆಕಾಯಿ ತೆಗೆದುಕೊಂಡು ಬರಲಿಲ್ಲ. ಹಾಗಾಗಿ ಇಂದಿಗೂ ತಿರುಪತಿಯ ವೆಂಕಟೇಶ್ವರಸ್ವಾಮಿ ತನ್ನ ತಮ್ಮಂದಿರು ಸೀಗೆಕಾಯಿ ತರುತ್ತಾರೆಂಬ ನಿರೀಕ್ಷೆಯಲ್ಲೇ ತಲೆನೋವನ್ನು ಸಹಿಸಿಕೊಂಡೇ ಇರುವ ಕಾರಣ ತಿರುಪತಿ ದೇವಾಯದಲ್ಲಿ ಇಂದಿಗೂ ತೆಂಗಿನಕಾಯಿ ಒಡೆಯುವಂತಿಲ್ಲ. ಆದೇ ರೀತೀಯಲ್ಲಿ ತಿರುಪತಿ ವೆಂಕಟೇಶ್ವರಸ್ವಾಮಿಯ ಹಣೆಯ ತುಂಬ ವ್ಯಾಪಿಸಿರುವ ನಾಮಗಳು ಸ್ವಾಮಿಯ ತಲೆನೋವಿಗಾಗಿ ಹಾಕಿದ ಸೀಗೆಕಾಯಿ ಅಂಜನದ ಪಟ್ಟು ಎಂದೂ ಸಹಾ ಅಲ್ಲಿನ ಜನರು ನಂಬುತ್ತಾರೆ.
ಇನ್ನೊಂದು ದಂತ ಕತೆಯ ಪ್ರಕಾರ, ಅದೊಮ್ಮೆ ಶ್ರೀ ವೆಂಕಟೇಶ್ವರ ಸ್ವಾಮಿಯ ಪತ್ನಿ ಅಲಮೇಲು ಮಂಗಮ್ಮ ಅಭ್ಯಂಜನ ಸ್ನಾನ ಮಾಡುವ ಸಲುವಾಗೊ ತನ್ನಪತಿಗೆ ಸೀಗೆಕಾಯಿ ತರಲು ಕೇಳಿಕೊಂಡಾಗ, ಸ್ವಾಮಿಯು ಸೀಗೆಕಾಯಿಯನ್ನು ಅರಸೀ ಈ ಶ್ವೇತಾದ್ರಿಯ ಅರಣ್ಯಕ್ಕೆ ಬಂದಾಗ, ಅಲ್ಲಿನ ಸ್ಥಳೀಯ ಸೋಲಿಗ ಬುಡಕಟ್ಟಿನ ಸುಂದರಿ ಕುಸುಮಾಲೆ ಎಂಬ ಹುಡುಗಿಯನ್ನು ನೋಡಿ ಅವಳಲ್ಲಿ ಅನುರಕ್ತನಾಗಿ ಅವಳನ್ನು ವರಿಸಿ ಅಲ್ಲಿಯೇ ನೆಲಸಿದನಂತೆ. ಹಾಗಾಗಿ ಇಂದಿಗೂ ಸಹಾ ಬಿಳಿಗಿರಿ ರಂಗಸ್ವಾಮಿಯನ್ನು ತಮ್ಮ ಭಾವನೆಂದೇ ಇಲ್ಲಿನ ಸೋಲಿಗ ಗಿರಿಜನರು ಭಾವಿಸುತ್ತಾರಲ್ಲದೇ, ಇಂದಿಗೂ ಬಿಳಿಗಿರಿ ರಂಗನಾಥಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ಈ ಸೋಲಿಗರು ಸ್ವಾಮಿಯನ್ನು ಭಾವಾಜಿ ಭಾವಾಜಿ ಎಂದೇ ಭಕ್ತಿ ಭಾವದಿಂದ ಕರೆಯುತ್ತಾ, ತಾವು ತಂದಿದ್ದ ಮೆಕ್ಕೆಸೌತೆ, ಗುಡಿಮೆ ಕಾಯಿಗಳನ್ನು ತೇರಿಗೆ ಎಸೆಯುವ ಸಂಪ್ರದಾಯವಿದೆ.
ಮತ್ತೊಂದು ದಂತಕಥೆಯ ಪ್ರಕಾರ, ವಸಿಷ್ಠ ಋಷಿಗಳು ಈ ಬೆಟ್ಟಗಳ ಮೇಲೆ ವೆಂಕಟೇಶ್ವರಸ್ವಾಮಿಯ ಕುರಿತಾಗಿ ತಪಸ್ಸು ಮಾಡಿ, ಸ್ವಾಮಿಯನ್ನು ಒಲಿಸಿಕೊಂಡ ಕುರುಹಾಗಿ ಆ ಸ್ಥಳದಲ್ಲಿ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಆತನನ್ನು ರಂಗನಾಥ ಎಂದೂ ಕರೆಯುತ್ತಾರೆ. ದೇವಾಲಯದ ಆರಾಧ್ಯ ದೈವವಾದ ರಂಗನಾಥಸ್ವಾಮಿಯ ಬಗ್ಗೆ ಇನ್ನೂ ಅನೇಕ ಆಸಕ್ತಿದಾಯಕ ಜಾನಪದ ಕಥೆಗಳಿದ್ದು, ಇಂದಿಗೂ ದೇವಾಲಯದ ಗರ್ಭಗುಡಿಯಲ್ಲಿ ಒಂದು ದೊಡ್ಡ ಜೋಡಿ ಚಪ್ಪಲಿಯನ್ನು ಇಡಲಾಗಿದ್ದು, ಭಗವಂತನು ಪ್ರತಿದಿನ ರಾತ್ರಿ ಆಚಪ್ಪಲಿಯನ್ನು ಧರಿಸಿ ಕಾಡಿನಲ್ಲಿ ತಿರುಗುತ್ತಾನೆ ಎಂದೇ ಇಲ್ಲಿನ ಜನರು ನಂಬುತ್ತಾರಲ್ಲದೇ, ಆ ಚಪ್ಪಲಿಗಳು ಸವೆದು ಹೋದಂತೆಲ್ಲಾ ಕಾಲ ಕಾಲಕ್ಕೆ ಅವುಗಳನ್ನು ಬದಲಾಯಿಸುತ್ತಾರೆ. ಹಾಗಾಗಿಯೇ, ಬಿಳಿರಂಗನ ಬೆಟ್ಟದ ಸಮೀಪದ ಬೂದಿ ತಿಟ್ಟು ಗ್ರಾಮದ ಗ್ರಾಮಸ್ಥರು ಇಂದಿಗೂ ಸಹಾ ಸ್ವಾಮಿಗೆ ನೈವೇದ್ಯವಾಗಿ ಚಪ್ಪಲಿಯನ್ನೇ ಅರ್ಪಿಸುತ್ತಾರೆ
ಈ ಪವಿತ್ರ ಸ್ಥಳದ ಬಗ್ಗೆಯ ಉಲ್ಲೇಖವು ಬ್ರಹ್ಮಾಂಡ ಪುರಾಣದ ತೀರ್ಥ ಪ್ರಶಂಸಾರ ಖಾಂಡದಲ್ಲಿ ಲಭ್ಯವಿದ್ದು, ಅದರ ಪ್ರಕಾರ, ಈ ಸ್ಥಳವನ್ನು ಚಂಪಕಾರಣ್ಯ (ಚಂಪಕದ ಹೂವಿನ ಕಾಡು ಅರ್ಥಾತ್ ಸಂಪಿಗೆ ಹೂವು) ಮತ್ತು ಗಜಾರಣ್ಯ (ಆನೆ ಕಾಡು) ಎಂದು ಕರೆಯಲಾಗಿದೆ. ಇದರ ಪ್ರತೀಕ ಎನ್ನುವಂತೆ ಇಂದಿಗೂ ಆ ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯ ಆನೆಗಳು ಕಾಣಬಹುದಾಗಿದೆ.
ಪ್ರಸ್ತುತವಿರುವ ಈ ದೇವಾಲಯವನ್ನು ರಾಜ ವಿಷ್ಣುವರ್ಧನ ನಿರ್ಮಿಸಿದ ಕಾರಣ, ಈ ದೇವಾಲಯದ ವಾಸ್ತುಶಿಲ್ಪವು ದ್ರಾವಿಡ ನಿರ್ಮಾಣ ಶೈಲಿಯನ್ನು ಹೋಲುತ್ತದೆ. ಅದೇ ರೀತಿ ಆ ದೇವಾಲಯದಲ್ಲಿ ಇರುವ ತಾಮ್ರದ ಶಿಲಾಶಾಸನದ ಅನ್ವಯ 1667 ರ ಆಸುಪಾಸಿನಲ್ಲಿ ಈ ದೇವಾಲಯವನ್ನು ಹದಿನಾಡು ಪಾಳೆಯಗಾರ ಶ್ರೀ ಮುದ್ದುರಾಜು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ಮತ್ತು ತಾಯಿ ರಂಗನಾಯಕಿಯವರಿಗೆ ಪ್ರತ್ಯೇಕ ದೇವಾಲಯಗಳು ಅಕ್ಕಪಕ್ಕದಲ್ಲೇ ಇದೆ. ಮೈಸೂರು ಸಂಸ್ಥಾನದ ಹಿಂದಿನ ಮಹಾರಾಜರುಗಳು ಈ ಬೆಟ್ಟವನ್ನು ಪೂರ್ಣಯ್ಯ ದೇವರಿಗೆ ಮತ್ತು ಎರಡು ಗ್ರಾಮಗಳನ್ನು ದೇವಸ್ಥಾನಕ್ಕೆ ದತ್ತಿ ಗ್ರಾಮಗಳಾಗಿ ಕೊಟ್ಟರು ಎನ್ನಲಾಗಿದೆ.
ಬಿಳಿಗಿರಿ ರಂಗನಾಥನ ಮುಖ್ಯ ದೇವಾಲಯಕ್ಕೆ ಹೋಗುವ ದಾರಿಯಲ್ಲೇ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯ, ಶ್ರೀ ಆಂಜನೇಯಸ್ವಾಮಿ ದೇವಾಲಯ ಮತ್ತು ಶ್ರೀ ಗಜೇಂದ್ರಸ್ವಾಮಿ ದೇವಾಲಯಗಳಿದ್ದು ಒಂದು ಪುರಾಣದ ಪ್ರಕಾರ ಗಜೇಂದ್ರ ಮೋಕ್ಷ ನಡೆದ ಸ್ಥಳ ಇದುವೇ ಆಗಿದೆ ಎನ್ನಲಾಗುತ್ತದೆ. ಕಾಲ ಕ್ರಮೇಣ ಶ್ರೀವೈಷ್ಣವರು ಈ ದೇವಾಲಯದಲ್ಲಿ ನಿತ್ಯ ಪೂಜೆ ಮಾಡುತ್ತಾ, ವೈಷ್ಣವ ಶಿಷ್ಯರಾದ ನಮ್ಮಾಳ್ವಾರ್, ರಾಮಾನುಜಾಚಾರ್ಯ ಮತ್ತು ವೆಂಕಟಾಚಾರ್ಯರ ವಿಗ್ರಹಗಳನ್ನೂ ಅಲ್ಲಿ ಕಾಣಬಹುದಾಗಿದೆ.
ದಶಾವತಾರದಲ್ಲಿ ಒಂದಾದ ಪರುಶುರಾಮರು ತನ್ನ ತಂದೆಯಾದ ಋಷಿ ಜಮದಗ್ನಿಯವರ ಆದೇಶದಂತೆ ತನ್ನ ತಾಯಿಯ ಶಿರಚ್ಛೇದವನ್ನು ಮಾಡದ ನಂತರ ಮಾತೃ ಹತ್ಯಾ ದೋಷದಿಂದ ಪಾರಾಗಲು ಇದೇ ಬೆಟ್ಟದಲ್ಲಿ ಶ್ರೀ ರಂಗನಾಥಸ್ವಾಮಿಯ ಕುರಿತಾಗಿ ತಪಸ್ಸು ಮಾಡಿದರು ಎನ್ನಲಾಗುತ್ತದೆ. ಹಾಗಾಗಿಯೇ ಬೆಟ್ಟದ ಸಮೀಪದಲ್ಲಿ ಉಗಮವಾಗುವ ಕಾವೇರಿ ನದಿಯ ಉಪನದಿಯನ್ನು ಭಾರ್ಗವಿ ಎಂದು ಪರುಶುರಾಮರ ಹೆಸರಿನಲ್ಲಿಯೇ ಕರೆಯಲಾಗುತ್ತಿದೆ, ಇದೇ ಕಾರಣದಿಂದ ಈ ದೇವಾಲಯಕ್ಕೆ ಭೇಟಿ ನೀಡಿ ಭಕ್ತಿ ಭಾವನೆಯಿಂದ ಭಗವಂತನನ್ನು ಧ್ಯಾನಿಸಿದರೆ ಅವರ ಎಲ್ಲಾ ನಕಾರಾತ್ಮಕ ಕರ್ಮಗಳೂ ನಾಶವಾಗುತ್ತದೆ ಎಂದು ನಂಬಲಾಗಿದೆ. ಅದೇ ರೀತಿಯಲ್ಲಿ ಸೀತಾದೇವಿಯನ್ನು ಹುಡುಕುತ್ತಾ ದಕ್ಷಿಣದ ಭಾಗದ ಕಡೆಯಲ್ಲಿ ರಾಮ ಮತ್ತು ಲಕ್ಷ್ಮಣರು ಬರುವಾಗ ಈ ಸ್ಥಳಕ್ಕೆ ಭೇಟಿ ನೀಡಿ ರಂಗನಾಥ ಸ್ವಾಮಿ ಮತ್ತು ಗಂಗಾಧರೇಶ್ವರ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು ಎಂದು ಹೇಳಲಾಗುತ್ತದೆ.
ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನವು ಪ್ರತೀ ದಿನ ಬೆಳಿಗ್ಗೆ 7:00 ರಿಂದ 2:00 ಗಂಟೆಯ ವರೆಗೆ ಮತ್ತು ಸಂಜೆ 4:00 pm – 8:00 ಗಂಟೆಯ ವರೆಗೆ ಭಕ್ತರಿಗೆ ತೆರೆದಿರುತ್ತದೆ ಪ್ರತೀ ಶುಕ್ರವಾರ ಮತ್ತು ಶನಿವಾರ ವಿಶೇಷ ಪೂಜೆಗಳು, ಶ್ರಾವಣ ಶನಿವಾರಗಳು ಮತ್ತು ಹಬ್ಬ ಹರಿದಿನಗಳಲ್ಲಿಯೂ ಸಹಾ ವಿಶೇಷ ಪೂಜೆಗಳು ನಡೆಯುತ್ತಿದ್ದು, ಜನವರಿ ತಿಂಗಳಲ್ಲಿ ರಥೋತ್ಸವ ನಡೆದರೆ, ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಯುವ ಬ್ರಹ್ಮ ರಥೋತ್ಸವಕ್ಕೆ ದೇಶ ವಿದೇಶಗಳಿಂದ ಸಾವಿರಾರು ಭಕ್ತಾದಿಗಳು ಇಲ್ಲಿಗೆ ಬಂದು ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ಗಿರಿಜನರಾದ ಸೋಲಿಗರ ಕಾರ್ಯ ಕ್ಷೇತ್ರವಾಗಿದ್ದ ಈ ಸುಂದರವಾದ ಪ್ರಕೃತಿತಾಣವನ್ನು ಖ್ಯಾತ ನಿರ್ದೇಶಕರಾದ ಶ್ರೀ ಪುಟ್ಟಣ್ಣ ಕಣಗಾಲರು 1971 ರಲ್ಲಿ ಬಿಡುಗಡೆ ಮಾಡಿದ ಶರಪಂಜರ ಚಿತ್ರದಲ್ಲಿ ನಾಯಕ ಗಂಗಾಧರ್ ಮತ್ತು ನಾಯಕಿ ಕಲ್ಪನಾ ಮತ್ತವರ ತಂಡ ಪ್ರವಾಸಕ್ಕೆಂದು ಈ ಕ್ಷೇತ್ರಕ್ಕೆ ಬಂದು ಸ್ವಾಮಿಯ ಕುರಿತಾದ ಬಿಳಿಗಿರೀ.. ರಂಗಯ್ಯಾ ಎಂಬ ಹಾಡು ಜನಪ್ರಿಯವಾದ ನಂತರ ಈ ಪ್ರಕೃತಿತಾಣ ಜಗತ್ಪ್ರಸಿದ್ಧವಾಗಿ ಪ್ರವಾಸಕ್ಕೆಂದು ಜನರು ತಂಡೋಪ ತಂಡವಾಗಿ ಬರಲು ಆರಂಭಿಸಿದರು ಎಂದು ಸ್ಥಳೀಯರು ಹೇಳುತ್ತಾರೆ.
ಬಿಳಿಗಿರಿ ರಂಗನಾಥಸ್ವಾಮಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನದ ಜೊತೆ ಅಲ್ಲಿಯ ರಮಣೀಯ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಂಡು ಅದರ ಅನುಭವವನ್ನು ನಮ್ಮೊಂಡಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಈ ವಾರಾಂತ್ಯ ಅಲ್ಲ, ಆದರೆ ಆದಷ್ಟು ಬೇಗ ಖಂಡಿತ. ಇದರ ಜೊತೆ ನನಗೆ ನೆನಪಾಗುವುದು ಮೈಸೂರು ಮಹಾರಾಜರು ದಸರಾ ಮೆರವಣಿಗೆಯಲ್ಲಿ ಏರಿ ಸಾಗುತ್ತಿದ್ದ ಆ ಭವ್ಯ ಆನೆ ಬಿಳಿಗಿರಿರಂಗ.
LikeLike
ಮೂರು ವಾರಗಳ ಹಿಂದೆ ಸ್ವಾಮಿಯ ದರ್ಶನ ಮಾಡುವ ಅವಕಾಶ ಸಿಕ್ಕಿತ್ತು
LikeLike
👌👌👌
LikeLike
Article is good and detailed sir. I wish you had mentioned Doddasampige on the banks of Bharghavi river, which is the most important pilgrimage point for soligas from centuries.
LikeLiked by 1 person