ಶತಮಾನಗಳಿಂದಲೂ ಉದ್ಯಾನ ನಗರೀ ಎಂದೇ ಹೆಸರುವಾಸಿಯಾಗಿದ್ದ ಬೆಂಗಳೂರು ಇತ್ತೀಚಿನ ಕೆಲವು ದಶಕಗಳಿಮ್ದ ಭಾರತದ ಸಿಲಿಕಾನ್ ಸಿಟಿ ಎಂದೂ ಹೆಸರಾಗಿದೆ. ಹೀಗೆ ಸಿಲಿಕಾನ್ ಸಿಟಿ ಎಂಬ ಹೆಸರು ಬರಲು ಬೆಂಗಳೂರಿನ ವೈಟ್ ಫೀಲ್ಡ್ ಪ್ರದೇಶದಲ್ಲಿ ಇರುವ ಸಾವಿರಾರು ಸಾಫ್ಟ್ವೇರ್ ಕಂಪನಿಗಳು ಕಾರಣವಾಗಿದೆ ಎಂದರೂ ತಪ್ಪಾಗದು. ಇದೇ ವೈಟ್ ಫೀಲ್ಡ್ ನಿಂದ ಕೇವಲ ಅರ್ಧಗಂಟೆ ಪ್ರಯಾಣಿಸಿದಲ್ಲಿ ಪುರಾಣ ಪ್ರಸಿದ್ಧವಾದ ಕಲ್ಕುಂಟೆ ಅಗ್ರಹಾರ ಎಂಬ ಗ್ರಾಮವಿದ್ದು ಅಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಐತಿಹ್ಯವನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಸಾಮಾನ್ಯವಾಗಿ ಬಹಳಷ್ಟು ಊರುಗಳಲ್ಲಿ ಅಗ್ರಹಾರ ಎಂಬ ಪ್ರದೇಶಗಳು ಇರುವುದನ್ನು ನಾವು ನೋಡಿದ್ದೇವೆ, ಅಗ್ರಹಾರ ಎಂದರೆ ಧಾರ್ಮಿಕ ಉದ್ದೇಶಗಳಿಗಾಗಿ ಮತ್ತು ದೇವಾಲಯವನ್ನು ನಿರ್ವಹಿಸುವ ಸಲುವಾಗಿ ಕೆಲವು ಬ್ರಾಹ್ಮಣ ಅರ್ಚಕ ಕುಟುಂಬಗಳಿಗೆ ಮಹಾರಾಜರುಗಳು ದಾನವಾಗಿ ನೀಡಿರುವ ಭೂಮಿ ಇಲ್ಲವೇ ಗ್ರಾಮಗಳಾಗಿವೆ. ಅಗ್ರಹಾರ ಎಂದರೆ ಮನೆಗಳ ಮಾಲೆ ಎಂಬ ಅರ್ಥವೂ ಬರುತ್ತದೆ. ಹಾಗಾಗಿಯೇ ಬಹಳಷ್ಟು ಅಗ್ರಹಾರಗಳಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಬ್ರಾಹ್ಮಣರ/ಅರ್ಚಕರ ಮನೆಗಳ ಸಾಲುಗಳಳಿದ್ದು ಅವುಗಳ ಮಧ್ಯದಲ್ಲಿ ಗ್ರಾಮ ದೇವರ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಹೀಗೆ ದೇವಾಲಯದ ಸುತ್ತಲೂ ಹಾರದಂತೆ ಮನೆಗಳನ್ನು ಕಾಣಬಹುದಾಗಿದ್ದು, ಇದೇ ರೀತಿಯಲ್ಲೇ ದೇವಾಲಯದ ಸುತ್ತಲೂ ನೆಲೆಸಿರುವ ದೇವಾಲಯದ ಅರ್ಚಕರ ಸಮುದಾಯವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿರುವ ಈ ಕಲ್ಕುಂಟೆ ಅಗ್ರಹಾರದಲ್ಲಿಯೂ ಕಾಣಬಹುದಾಗಿರುವುದು ವಿಶೇಷವಾಗಿದೆ.
ಇತಿಹಾಸದ ಪ್ರಕಾರ, ಶ್ರೀ ರಾಮಾನುಜಾಚಾರ್ಯರ ತತ್ವಗಳನ್ನು ಅನುಸರಿಸುವ ವೈಷ್ಣವ ತಮಿಳು ಬ್ರಾಹ್ಮಣರು ಅರ್ಥಾತ್ ಅಯ್ಯಂಗಾರ್‌ಗಳು ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವಂತೆ, ನೂರಾರು ವರ್ಷಗಳ ಹಿಂದೆ ಕಾಂಚೀಪುರಂನಿಂದ 10 ಕಿಲೋಮೀಟರ್ ದೂರದಲ್ಲಿರುವ ದೂಸಿ ಎಂಬ ಹಳ್ಳಿಯಿಂದ ಐದಾರು ಕುಟುಂಬಗಳು ಈ ಕಲ್ಕುಂಟೆ ಗ್ರಾಮಕ್ಕೆ ವಲಸೆ ಬಂದು ಇವರನ್ನು ಕಲ್ಕುಂಟೆ ಅಯ್ಯಂಗಾರ್ ಎಂದು ಕರೆಯಲಾಗುತ್ತದೆ. ಹಾಗೆ ವಲಸೆ ಬಂದ ಕುಟುಂಬಗಳನ್ನು ಕಿಡಂಬಿ ಕುಟುಂಬ, ಚಕ್ರವರ್ತಿಗಳು, ಪೆರುಮಾಳ್ ಕುಟುಂಬ, ತೊಗರೆ ಕುಟುಂಬ ಮತ್ತು ಗೋಮಾತಮ್ ಕುಟುಂಬ ಎಂದು ಕರೆಯಲಾಗುತ್ತದೆ. ಇವರಿಗೆ ವಿಜಯನಗರ ನಂತರ ಮೈಸೂರು ರಾಜಾಶ್ರಯ ಸಿಕ್ಕಿದ ಕಾರಣ ನೆಮ್ಮದಿಯಿಂದ ಜೀವನ ನಡೆಸಿಕೊಂಡು ಹೋಗುವಂತಾಗಿದೆ.
ಇನ್ನು ಈ ಊರಿಗೆ ಕಲ್ಕುಂಟೆ ಎಂಬ ಹೆಸರು ಬಂದಿರುವುದಕ್ಕೆ ಎರಡು ಕತೆಗಳಿದ್ದು ಅವುಗಳಲ್ಲಿ ಒಂದು ಕಲ್ಕಂಡ್ ಎಂಬ ತಮಿಳು ಪದದಿಂದ ಆ ಊರಿನ ಹೆಸರು ಕಲ್ಕುಂಟೆ ಎಂದಾಗಿದೆ ಎನ್ನಲಾಗುತ್ತದೆ. ಕಲ್ಕಂಡ್ ಎಂದರೆ ಕನ್ನಡದಲ್ಲಿ ಕಲ್ಲು ಸಕ್ಕರೆ ಎಂಬರ್ಥ ಇದೆ. ಮತ್ತೊಂದು ಇತಿಹಾಸದ ಪ್ರಕಾರ, ಇಲ್ಲಿರುವ ಊರಿನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಉತ್ಸವ ಮೂರ್ತಿಯು ಮೈಸೂರು ಮಹಾರಾಜರ ಸನ್ನಿಧಿಯಲ್ಲಿತ್ತು. ಆನಂತರದ ದಿನಗಳಲ್ಲಿ ಮೈಸೂರು ಸಂಸ್ಥಾನವನ್ನು ಮೋಸದಿಂದ ಹೈದರ್ ಅಲಿ ವಶಪಡಿಸಿಕೊಂಡು ನಂತರ ಆತನ ಮಗ ಟಿಪ್ಪು ಸುಲ್ತಾನ್ ಆಳ್ವಿಕೆ ನಡೆಸುತ್ತಿದ್ದಂತಹ ಕಾಲದಲ್ಲಿ ಅರಮನೆಯಲ್ಲಿದ್ದ ದೇವರುಗಳಿಗೆ ನಿತ್ಯ ಪೂಜೆ ಸಲ್ಲಿಸದೇ ಇದ್ದ ಕಾರಣ, ಈ ಊರಿನ ಅರ್ಚಕರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸವ ಮೂರ್ತಿಯನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಮನವಿ ಸಲ್ಲಿಸಿದಾಗ, ಟಿಪ್ಪು ಸುಲ್ತಾನ್ ಅದನ್ನು ನೀಡಲು ನಿರಾಕರಿಸುತ್ತಾನೆ. ಹೇಗಾದರೂ ಮಾಡಿ ಅಲ್ಲಿಂದ ಮೂರ್ತಿಯನ್ನು ತೆಗೆದುಕೊಂಡು ಬರಬೇಕೆಂದು ಗ್ರಾಮಸ್ಥರು ಯೋಚಿಸುತ್ತಿರುವಾಗಲೇ, ಅದೇ ಶ್ರೀ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿ ಕಳ್ಳತನವಾಯಿತೆಂಬ ವಿಷಯ ತಿಳಿದು ಗಾಭರಿಗೊಂಡು ಆ ಉತ್ಸವಮೂರ್ತಿಯನ್ನು ಹುಡುಕುತ್ತಿರುವಾಗ, ಆ ದೇವರನ್ನು ಕದ್ದ ಕಳ್ಳರು ಅದನ್ನು ಶ್ರೀರಂಗಪಟ್ಟಣದ ಬಳಿಯ ಒಂದು ಹಳ್ಳಿಯ ಕೆರೆಯ ಬಳಿಯ ಒಂದು ಕಲ್ಲು ಮಣ್ಣುಗಳ ಗುಂಡಿಯಲ್ಲಿ ಹಾಕಿ ಹೋಗಿದ್ದದ್ದು ಪತ್ತೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆ ಉತ್ಸವ ಮೂರ್ತಿಯ ಪೀಠವು ಭಿನ್ನವಾದ ಕಾರಣ, ಭಿನ್ನಗೊಂಡ ಮೂರ್ತಿಯನ್ನು ಪೂಜಿಸುವುದು ನಮ್ಮ ಧರ್ಮದಲ್ಲಿ ನಿಶಿದ್ಧ ಎಂಬ ತೀರ್ಮಾನಕ್ಕೆ ಬಂದಾಗ ಸ್ವತಃ ಸ್ವಾಮಿಯೇ ಆಶರೀರವಾಣಿಯಲ್ಲಿ, ನನ್ನ ದೇಹಕ್ಕೇನೂ ಭಿನ್ನವಾಗದೇ, ಕೇವಲ ಪೀಠ ಮಾತ್ರಾವೇ ಸ್ವಲ್ಪ ಭಿನ್ನವಾಗಿರುವ ಕಾರಣ, ಅದು ಪೂಜಿಸಲು ಯೋಗ್ಯವಾಗಿದೆ ಎಂದು ತಿಳಿಸಿದ ಕಾರಣ, ಸಂತೋಷದಿಂದ ಆಮೂರ್ತಿಯನ್ನು ತಮ್ಮ ಊರಿನ ದೇವಾಲಯಕ್ಕೆ ತಂದು ಶ್ರೀ ರಂಗನಾಥನ ಉತ್ಸವ ಮೂರ್ತಿಯಾಗಿ ಕೇಶವ ಎಂದು ನಾಮಕರಣ ಮಾಡಲಾಯಿತು. ಕದ್ದ ಕೇಶವ ದೇವರು ಕೆರೆಯ ಬಳಿ ದೊರೆತ ಕಾರಣ, ಕನ್ನಡದಲ್ಲಿ ಕುಂಟೆ ಎಂದರೆ ಸರೋವರ ಇಲ್ಲವೇ ಜಮೀನು ಎಂಬ ಅರ್ಥ ಇರುವ ಕಾರಣ ಅಂದಿನಿಂದ ಈ ಗ್ರಾಮವು ಕಲ್ಕುಂಟೆ ಎಂದೇ ಪ್ರಸಿದ್ಧಿಯಾಗಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಇನ್ನು ಕಲ್ಕುಂಟೆಯಲ್ಲಿ ಇರುವ ಶ್ರೀ ರಂಗನಾಥ ಸ್ವಾಮಿಯ ಹಿಂದೆಯೂ ಒಂದು ರೋಚಕವಾದ ಕಥೆ ಇದೆ. ಅದೊಮ್ಮೆ ಕೋಲಾರ ಜಿಲ್ಲೆಯ ವೊಕ್ಕಲೇರಿ ಗ್ರಾಮದಲ್ಲಿ ತಾನು ಇದ್ದೇನೆ ಎಂಬ ಕನಸೊಂದು ಅಲ್ಲಿನ ಗ್ರಾಮಸ್ಥರಿಗೆ ಬಿದ್ದಿತಂತೆ. ಅದೇ ಸಮಯದಲ್ಲೇ ಅಲ್ಲಿನ ದೇವಾಲಯದ ಅರ್ಚಕರಾದ ಶ್ರೀ ಶ್ರೀನಿವಾಸ ಭಟ್ಟರ ಕನಸ್ಸಿನಲ್ಲೂ ಸ್ವಾಮಿ ಕಾಣಿಸಿಕೊಂಡು ತನ್ನ ವಿಗ್ರಹವನ್ನು ಕಲ್ಕುಂಟೆಯಲ್ಲಿರುವ ದೇವಾಲಯಕ್ಕೆ ಕೊಡಬೇಕೆಂದು ಆಜ್ಞಾಪಿಸಿದನಂತೆ. ಕನಸ್ಸಿನಲ್ಲಿ ಭಗವಂತ ಕಾಣಿಸಿಕೊಂಡಿದ್ದನ್ನು ಆ ಗ್ರಾಮಸ್ಥರು ಆ ಅರ್ಚಕರ ಬಳಿ ತಿಳಿಸಿದಾಗ ತಮ್ಮಿಬ್ಬರಿಗೂ ಒಂದೇ ರೀತಿಯ ಕನಸು ಬಿದ್ದಿರುವುದರಿಂದ ಚಕಿತರಾಗಿ ಭಗವಂತನನ್ನು ಹುಡುಕಲು, ಗ್ರಾಮಸ್ಥರು ಗೋ ಪೂಜೆಯನ್ನು ಮಾಡಿದಾಗ ಆ ಗೋಮಾತೆಯು ಊರಿನ ಈಶಾನ್ಯ ಭಾಗದ ಕಡೆ ಹೋಗಿ ಅಲ್ಲಿಂದ ನೇರವಾಗಿ, ಕೋಲಾರ ಜಿಲ್ಲೆಯ ವಕ್ಲೇರಿ ಎಂಬ ಗ್ರಾಮದ ಕೆರೆಯ ಬಳಿಯ ಹುತ್ತವೊಂದರ ಬಳಿ ನಿಂತು, ಗೋಧೂಳಿ ಲಗ್ನದಲ್ಲಿ ಆ ಹುತ್ತದ ಮೇಲೆ ಗೋಮೂತ್ರವನ್ನು ಮಾಡುತ್ತದೆ. ಕೂಡಲೇ ಆ ಜಾಗವನ್ನು ಅಗೆದು ನೋಡಿದಾಗ, ಅಲ್ಲಿ ಸಾಕ್ಷಾತ್ ಶ್ರೀದೇವಿ, ಭೂದೇವಿ ಸಮೇತ ಶ್ರೀ ರಂಗನಾಥ ಸ್ವಾಮಿ ವಿಗ್ರಹವು ಕಂಡ ಕೂಡಲೇ, ಸಂತೋಷಗೊಂಡು ಗ್ರಾಮಸ್ಥರು ದೇವರ ಆಜ್ಞೆಯಂತೆ ಅದನ್ನು ಕಲ್ಕುಂಟೆ ಗ್ರಾಮಕ್ಕೆ ಸ್ಥಳಾಂತರ ಮಾಡಿ ಅಲ್ಲಿನ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಪ್ರತಿ ನಿತ್ಯ ಶೋಡಶೋಪಚಾರ ಪೂಜೆಯನ್ನು ಮಾಡಲು ಆರಂಭಿಸಿದ್ದಲ್ಲದೇ, ಹೀಗೆ ಕನಸಿನಲ್ಲಿ ಕಾಣಿಸಿಕೊಂಡ ರಂಗನಾಥನನ್ನು ಕೆನವಿಲ್ ಕಂಡ ಪೆರುಮಾಳ್ ಅರ್ಥಾತ್ ಕನಸಿನಲ್ಲಿ ಕಂಡ ಭಗವಂತ ಎಂದೂ ಕರೆಯಲಾರಂಭಿಸಿದರು.
ಇಲ್ಲಿರುವ ಅನಂತಶಯನ ಭಂಗಿಯಲ್ಲಿರುವ ಶ್ರೀ ರಂಗನಾಥಸ್ವಾಮಿಯು ಈಶಾನ್ಯ ದಿಕ್ಕಿಗೆ ಮುಖಮಾಡಿದ್ದು, ಅವನಿಗೆ ನಾಲ್ಕು ತೋಳುಗಳಿವೆ. ಶ್ರೀ ದೇವಿ ಮತ್ತು ಭೂದೇವಿಯು ಭಗವಂತನ ಪಾದಕಮಲಗಳಲ್ಲಿ ಕುಳಿತಿದ್ದಾರೆ. ಭಗವಂತನು ಅಳತೆಯ ಪಾತ್ರೆಯಾದ ಕೊಳಗವನ್ನು ದಿಂಬಿನಂತೆ ಇಟ್ಟುಕೊಂಡು ಮಲಗಿರುವುದು ವಿಶೇಷವಾಗಿದೆ. ಬ್ರಹ್ಮನು ಆತನ ನಾಭಿಯಿಂದ ಹೊರಹೊಮ್ಮುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುವಂತಿದೆ ಆದಿಶೇಷನ ಕೆಳಗೆ ಭಗವಂತನ ಜೊತೆಗೆ ಗರುಡನೂ ಇರುವುದು ವಿಶೇಷವಾಗಿದೆ. ಕಲ್ಕುಂಟೆಯ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವು ಸುಮಾರು 800 ವರ್ಷಗಳಷ್ಟು ಹಳೆಯದು ಆದರೆ ಇಲ್ಲಿರುವ ಮೂರ್ತಿಯು ಸುಮಾರು 1500-2000 ವರ್ಷಕ್ಕೂ ಹಳೆಯದಾಗಿರಬಹುದು ಸುಮಾರು 1000 ವರ್ಷಗಳ ಕಾಲ ನೀರಿನಲ್ಲೇ ಮುಳುಗಡೆಯಾಗಿತ್ತು ಎಂದೇ ನಂಬಲಾಗಿದೆ. ಇಲ್ಲಿರುವ ಮೂರ್ತಿ ಸ್ವಯಂಭೂ ಎಂದೇ ಹೆಸರಾಗಿದ್ದರೂ, ಬಹುಶಃ ಈ ಮೂರ್ತಿಯು ವಿಜಯನಗರದ ಹಂಪಿಯ ದೇವಾಯದಲ್ಲಿದ್ದ ಮೂರ್ತಿ ಇರಬಹುದು ಎಂದು ಪ್ರಸ್ತುತ ದೇವಾಲಯದ ಅರ್ಚಕರಾದ ಶ್ರೀ ಶೇಷಾದ್ರಿಯವರು ತಿಳಿಸುತ್ತಾರೆ. ಅದಕ್ಕೆ ಪುರಾವೆ ಎನ್ನುವಂತೆ ವಿಗ್ರಹವೇ ಇಲ್ಲದಿರುವ ಹಂಪೆಯ ಒಂದು ವಿಷ್ಣು ದೇವಾಲಯದ ಗರ್ಭಗುಡಿಯ ಅಳತೆ ಇಲ್ಲಿನ ವಿಗ್ರಹದ ಆಳತೆಗೆ ಸರಿಹೊಂದುವುದನ್ನು ತಿಳಿಸುವ ಮೂಲಕ ಅಚ್ಚರಿಯನ್ನು ಮೂಡಿಸುತ್ತಾರೆ.
ಇಲ್ಲಿನ ರಂಗನಾಥ ದೇವರು ಭಕ್ತರು ನೀಡುವ ನೈವೇದ್ಯ ಅಥವಾ ಭೋಗವನ್ನು ಇಷ್ಟಪಡುವ ಕಾರಣ, ಭಕ್ತದಾದಿಗಳು ಪ್ರೀತಿಯಿಂದ ಈತನನ್ನು ಪ್ರಸಾದ ಪ್ರಿಯ ರಂಗನಾಥ ಎಂದು ಕರೆಯುತ್ತಾರೆ. ಹಬ್ಬ ಹರಿದಿನಗಳು ಮತ್ತು ವಿಶೇಷ ದಿನಗಳು ಹಾಗೂ ಉತ್ಸವದ ಸಮಯದಲ್ಲಿ ಈ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ಪುಳಿಯೋಗರೆ ಮತ್ತು ಸಕ್ಕರೆ ಪೊಂಗಲ್ ರುಚಿ ಬೇರೆ ಕಡೆ ಸಿಗುವುದಿಲ್ಲ ಎಂದು ಸವಿದವರು ಹೇಳುತ್ತಾರೆ. ವಿಜಯನಗರದ ಅರಸರ ಕಾಲದಲ್ಲಿ ದೇವಾಲಯದ ಭವ್ಯತೆಯು ಉತ್ತುಂಗದಲ್ಲಿದ್ದ ಸಮಯದಲ್ಲಿ ಇಲ್ಲಿನ ದೇವರಿಗೆ ಪ್ರತೀ ದಿನ ಸುಮಾರು ಇನ್ನೂರು ಕೆಜಿಯಷ್ಟು ಅನ್ನವನ್ನು ನೈವೇದ್ಯಮಾಡಿ ನಂತರ ಸಂತರ್ಪಣೆ ಮಾಡಲಾಗುತ್ತಿತ್ತಂತೆ.
ಇನ್ನು ದೇವಾಲಯದ ವಾಸ್ತುಶಿಲ್ಪದ ಬಗ್ಗೆ ಹೇಳಬೇಕೆಂದರೆ, ಈ ದೇವಾಲಯ ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾಗಿದ್ದು ರಾಜಗೋಪುರ ಮತ್ತು ಪ್ರಾಕಾರವನ್ನು ಹೊಂದಿದೆ. ರಾಜಗೋಪುರವು ಆನೆಗಳ ಮೇಲೆ ಮಾವುತರನ್ನು ಹೊಂದಿದೆ. ದೇವಾಲಯದ ಸಂಕೀರ್ಣದಲ್ಲಿ ಅಪರೂಪದ ಎನ್ನುವಂತೆ ದೊಡ್ಡದಾದ ಗಂಟೆಗೆ ಒಂದು ಸಣ್ಣ ಮಂಟಪವನ್ನು ಕಟ್ಟಲಾಗಿದ್ದು ಅದನ್ನು ಪುಣ್ಯಕೋಟಿ ವಿಮಾನ ಎಂದು ಕರೆಯಲಾಗುತ್ತದೆ. ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಗಳು ಮತ್ತು ಪವಿತ್ರ ಸಂದರ್ಭದಲ್ಲಿ ಮಾತ್ರವೇ ಆ ಗಂಟೆಯನ್ನು ಬಾರಿಸುವುದು ವಿಶೇಷವಾಗಿದೆ. ಇನ್ನು ಗಮನಾರ್ಹವಾದ ಅಂಶವೆಂದರೆ ಯಾವ ಯಾವ ಸಮಯದಲ್ಲಿ ಈ ಗಂಟೆಯನ್ನು ಬಾರಿಸಬೇಕು ಎಂಬುದರ ಸವಿವರಗಳ ಕುರಿತಾದ ವಿವರಗಳನ್ನು ಸಹಾ ಅಲ್ಲಿ ಶಿಲಾನ್ಯಾಸ ಮಾಡಲಾಗಿದೆ. ಇನ್ನು ಗರ್ಭಗುಡಿಯ ಹೊರಗೆ. ಶ್ರೀವೈಶ್ಣವರ ವಿವಿಧ ಆಳ್ವಾರರು ಮತ್ತು ಆಚಾರ್ಯರಿಗೆ ಪ್ರತ್ಯೇಕ ಬಲಿಪೀಠಗಳಿದ್ದು ಪ್ರತೀ ದಿನವೂ ಅತ್ಯಂತ ನಿಷ್ಟೆ ನಿಯಮಗಳಿಂದ ಇಲ್ಲಿ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ.
ಪ್ರತಿ ವರ್ಷ ಮಾಘ ಮಾಸದಲ್ಲಿ 13 ದಿನಗಳ ಕಾಲ ವಿವಿಧ ಉತ್ಸವ ನಡೆದು ಪುಬ್ಬಾ ನಕ್ಷತ್ರದ ದಿನ ನಡೆಯುವ ಬ್ರಹ್ಮ ರಥೋತ್ಸವದಂದು ಶ್ರೀ ರಂಗನಾಥ ಸ್ವಾಮಿಗೆ ಪಾಂಚರಾತ್ರ ಆಗಮಗಳ ಪ್ರಕಾರ ಪೂಜೆಗಳು ನಡೆದರೆ, ಕಾರ್ತೀಕ ಮಾಸ ಮತ್ತು ಧನುರ್ಮಾಸದಲ್ಲಿ ಮತ್ತು ವೈಕುಂಠ ಏಕಾದಶಿಯಂದು ಭಗವಂತನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ.
ಬೆಂಗಳೂರಿನ ಮೆಜೆಸ್ಟಿಕ್ ನಿಂದ ಹಲವಾರು ಬಸ್ಸುಗಳ ಮೂಲಕ ನೇರವಾಗಿ ಕಲ್ಕುಂಟೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಬರಬಹುದಾಗಿದೆ. ಇನ್ನು ಸ್ವಂತ ವಾಹನದ ಮೂಲಕ ಬರುವವರು, ಸುಮಾರು 37 ಕಿಮೀ ದೂರದ ಪ್ರಯಾಣವನ್ನು ಕೃಷ್ಣರಾಜಪುರ, ವೈಟ್ ಫೀಲ್ಡ್ ಐಟಿ ಪಾರ್ಕ್ ದಾಟಿಕೊಂಡು ಸಮೇತನ ಹಳ್ಳಿಯನಂತರ ಐದಾರು ಕಿಮೀ ದೂರದಲ್ಲೇ ಕಲ್ಕುಂಟೆ ಅಗ್ರಹಾರವಿದೆ.
ಪ್ರತೀ ದಿನ ಬೆಳಿಗ್ಗೆ 8-10 ಗಂಟೆ ಮತ್ತು ಸಂಜೆ 5.30- 7.30 ಗಂಟೆಯವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ಮಾಡಬಹುದಾಗಿದ್ದು ಶನಿವಾರ ಮತ್ತು ಭಾನುವಾರ ಹಾಗೂ ವಿಶೇಷ ದಿನಗಳಂದು, ಬೆಳಿಗ್ಗೆ 8-12 ಗಂಟೆಯ ವರೆಗೆ ಮತ್ತು ಸಂಜೆ 5-8 ಗಂಟೆಯವರೆಗೆ ವಿವಿಧ ಸೇವೆಗಳನ್ನು ಮಾಡಿಸುವ ಮೂಲಕ ದೇವರ ದರ್ಶನ ಪಡೆಯ ಬಹುದಾಗಿದೆ.
ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಸ್ವಾಮಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಮೇಲೆ ತಿಳಿಸಿರುವ ಸಮಯಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆದು ಆತನ ಕೃಪಾಶೀರ್ವಾದಕ್ಕೆ ಪಾತ್ರರಾಗ್ತೀರೀ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ
ನಾಳೆ ಚನ್ನಪಟ್ಟಣದ ಬಳಿಯ ಅಪ್ರಮೇಯ ದೇವಸ್ಥಾನಕ್ಕೆ ಹೋಗುತ್ತಿದ್ದು, ಆದಷ್ಟು ಬೇಗ
ಕಲ್ಕುಂಟೆ ಕಾರ್ಯಕ್ರಮವೂ ಪಟ್ಟಿಗೆ ಸೇರಿದೆ. ವಿವರಗಳಿಗೆ ಧನ್ಯವಾದಗಳು.
LikeLiked by 1 person
ಚನ್ನಪಟ್ಟಣದ ಬಳಿಯ ದೊಡ್ಡಮಳೂರಿನ ಅಪ್ರಮೇಯ ಸ್ವಾಮಿ ಅರ್ಥಾತ್ ಬೆಣ್ಣೆ ಕೃಷ್ಣನನ್ನು ಮಕ್ಕಳಾಗದವರು ಭಕ್ತಿಯಿಂದ ಬೇಡಿಕೊಂಡಲ್ಲಿ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.
ಸಮಯ ಇದ್ದಲ್ಲಿ ಕೆರೆತೊಂಡನೂರು ಮತ್ತು ಮೇಲುಕೋಟೆಗೆ ಹೋಗಿ ಬನ್ನಿ
LikeLike
Excellent maahiti saar🙏🙏
LikeLiked by 1 person
ಧನ್ಯೋಸ್ಮಿ
LikeLike
Nice temple nice photo
LikeLiked by 1 person