ಪ್ರತೀ ಬಾರೀ ಏಷ್ಯನ್ ಇಲ್ಲವೇ ವಿಶ್ವಮಟ್ಟದ ಕ್ರೀಡಾಕೂಟಗಳು ನಡೆದಾಗ ಪದಕಗಳ ಪಟ್ಟಿಯಲ್ಲಿ ಅಮೇರಿಕಾ, ಚೀನಾ, ಜಪಾನ್ ದೇಶಗಳದ್ದೇ ಪ್ರಾಬಲ್ಯ ಮೆರೆದರೆ, ನಮ್ಮ ಭಾರತದ ಕ್ರೀಡಾಪಟುಗಳ ಪದಕ ಪಟ್ಟಿ ಕೆಳಗಿನಿಂದ ಮೇಲೆ ನೋಡುವಂತಹ ಪರಿಸ್ಥಿತಿ ಇತ್ತು. ಬ್ರಿಟೀಷರು ಭಾರತವನ್ನು ಬಿಟ್ಟು ಹೋಗಿ 76 ವರ್ಷಗಳು ಕಳೆದರೂ, ಆವರು ಕಲಿಸಿಕೊಟ್ಟು ಹೋದ ಕ್ರಿಕೆಟ್ಟನ್ನು ನಾವೆಲ್ಲರೂ ಒಪ್ಪಿಕೊಂಡು ಅಪ್ಪಿಕೊಂಡ ಪರಿಣಾಮ ಇಂದು ಭಾರತದಲ್ಲಿ ಕ್ರಿಕೆಟ್ ಹೊರತಾಗಿ ಮತ್ತಾವುದೇ ಆಟಗಳು ಇಲ್ಲವೇನೋ ಎನ್ನುವಂತಿದೆ. ಆದರೆ ಇತ್ತೀಚಿಗೆ ಕ್ರೀಡಾಕ್ಷೇತ್ರಗಳತ್ತವೂ ಸರ್ಕಾರ ಗಮನ ಹರಿಸಿದ ಪರಿಣಾಮ ಕ್ರಿಕೆಟ್ ಹೊರತಾಗಿಯೂ ಹತ್ತು ಹಲವಾರು ಕ್ರಿಡೆಗಳಲ್ಲಿ ಅನೇಕ ಕ್ರೀಡಾಪಟುಗಳು ತಮ್ಮ ವಯಕ್ತಿಸಾಮಾರ್ಥ್ಯದಿಂದ ಭಾರತದ ಪತಾಕೆಯನ್ನು ವಿಶ್ವಮಟ್ಟಕ್ಕೆ ಏರಿಸುತ್ತಿದ್ದು ಅಂತಹವರುಗಳಲ್ಲಿ ಚಿನ್ನದ ಹುಡುಗ ಎಂದೇ ಗುರುತಿಸಿಕೊಂಡಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಕೂಡಾ ಒಬ್ಬರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.
ನೀರಜ್ ಚೋಪ್ರಾ ಹರಿಯಾಣದ ಖಂಡ್ರಾ ಪಾಣಿಪತ್‌ನಲ್ಲಿ ಡಿಸೆಂಬರ್ 24 1997ರಂದು ಕೃಷಿಪ್ರಧಾನವಾದ ಹರಿಯಾಣವಿ ರೋರ್ ಕುಟುಂಬದಲ್ಲಿ ಜನಿಸುತ್ತಾರೆ. ಚಿಕ್ಕವಯಸ್ಸಿನಿಂದಲೂ ತನ್ನ ವಯಸ್ಸಿಗೆ ಮೀರಿ ಬೆಳವಣಿಗೆಯನ್ನು ಹೊಂದಿದ್ದಲ್ಲದೇ ಅತ್ಯಂತ ದಪ್ಪವಾಗಿದ್ದ ಅಲ್ಲಿನ BVN ಪಬ್ಲಿಕ್ ಸ್ಕೂಲಿನ ಸಹಪಾಠಿಗಳಿಂದ ಪದೇ ಪದೇ ಕೀಟಲೆಗೆ ಒಳಗಾಗುತ್ತಿದ್ದದ್ದನ್ನು ಕಂಡ ಅವರ ತಂದೆ ಸಣ್ಣ ವಯಸ್ಸಿನಲ್ಲಿಯೇ ನೀರಜ್ ನನ್ನು ಹತ್ತಿರದ ಮದ್ಲೌಡಾದಲ್ಲಿ ವ್ಯಾಯಾಮಶಾಲೆಗೆ ಸೇರಿಸಿದ ನಂತರ ಸ್ವಲ್ಪ ದಿನಗಳಲ್ಲಿಯೇ ಪಾಣಿಪತ್‌ನ ಜಿಮ್ ಒಂದಕ್ಕೇ ಸೇರಿಸಿದ ನಂತರ ಸತತ ಪರಿಶ್ರಮದ ನಂತರ ಕ್ರಮೇಣ ಆತನ ದೇಹದ ತೂಕ ಇಳಿಯುತ್ತಾ ಬರುತ್ತದೆ. ಅದೇ ಸಮಯದಲ್ಲಿಯೇ ಪಾಣಿಪತ್‌ನ ಶಿವಾಜಿ ಸ್ಟೇಡಿಯಂನಲ್ಲಿ ಆಟವಾಡುತ್ತಿದ್ದಾಗ ಅಲ್ಲಿ ಕೆಲವು ಜಾವೆಲಿನ್ ಎಸೆತಗಾರರನ್ನು ನೋಡಿ, ಅದರಿಂದ ಪ್ರೇರೇಪಿತನಾಗಿ ಆವರೊಂದಿಗೆ ನೀರಜ್ ಸಹಾ ಜಾವೇಲಿನ್ ಎಸೆತದಲ್ಲಿ ಭಾಗವಹಿಸಲು ಆರಂಭಿಸುತ್ತಾರೆ.
ನೋಡ ನೋಡುತ್ತಿದ್ದಂತೆಯೇ ಜಾವೇಲಿನ್ ಎಸತದಲ್ಲಿ ಪರಿಣಿತನಾದದ್ದನ್ನು ಕಂಡ ಅವರ ತಂದೆ ಅವರನ್ನು ಪಾಣಿಪತ್ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ಕೇಂದ್ರಕ್ಕೆ ಕೆರೆದುಕೊಂಡು ಹೋಗಿ ಅಲ್ಲಿ ಅಲ್ಲಿ ಗಾಜಿಯಾಬಾದ್‌ನ ಜಾವೆಲಿನ್ ಎಸೆತಗಾರ ಅಕ್ಷಯ್ ಚೌಧರಿ ಅವರನ್ನು ಭೇಟಿ ಮಾಡಿಸಿ ಅವರೊಂದಿಗೆ ಪ್ರತಿನಿತ್ಯವೂ ಅಭ್ಯಾಸವನ್ನು ಮಾಡಿಸಲು ಆರಂಭಿಸುತ್ತಾರೆ. ಕೇವಲ 13 ವರ್ಷದ ಹುಡುಗ ಯಾವುದೇ ರೀತಿಯ ಹೆಚ್ಚಿನ ತರಭೇತಿ ಇಲ್ಲದೇ, ಸುಮಾರು 40-ಮೀಟರ್ ದೂರಕ್ಕೆ ಅನಾಯಾಸವಾಗಿ ಎಸೆಯುತ್ತಿದ್ದದ್ದನ್ನು ಗಮನಿಸಿದ ಚೌಧರಿ ಅವರು ತಾವೇ ಖುದ್ದಾಗಿ ಆತನಿಗೆ ಮೊದಲ ತರಬೇತುದಾರರಾಗಿದ್ದಲ್ಲ್ದದೆ, ನೀರಜ್ ನನ್ನು ಜಲಂಧರ್‌ಗೆ ಕರೆದುಕೊಂಡು ಹೋಗಿ ಅಲ್ಲಿನ ಜಾವೆಲಿನ್ ತರಬೇತುದಾರು ಮತ್ತು ಕೆಲವು ಹಿರಿಯ ಅನುಭವಿ ಕ್ರೀಡಾಪಟುಗಳಿಂದ ತರಭೇತಿ ಕೊಡಿಸಿದ ಕಾರಣ, ಮೊತ್ತ ಮೊದಲಬಾರಿಗೆ ಸ್ಥಳೀಯ ಮಟ್ಟದ ಕ್ರೀಡಾಕೂಟದಲ್ಲಿ ತನ್ನ ಮೊದಲ ಪದಕವನ್ನು ಗೆದ್ದ ನಂತರ ಜಿಲ್ಲಾ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕವನ್ನು ಪಡೆಯುತ್ತಾರೆ.
ಕ್ರೀಡೆಯಲ್ಲಿ ಆತನಿಗಿರುವ ಅಗಾಧ ಪ್ರತಿಭೆಯನ್ನು ಗುರುತಿಸಿದ ಚೌಧರಿ ಕೇವಲ 13 ವರ್ಷದ ಚೋಪ್ರಾನನ್ನು ಪಂಚಕುಲದಲ್ಲಿರುವ ಸಿಂಥೆಟಿಕ್ ರನ್‌ವೇ ಹೊಂದಿದ್ದ ತೌ ದೇವಿ ಲಾಲ್ ಕ್ರೀಡಾ ಸಂಕೀರ್ಣಕ್ಕೆ ಸೇರಿಸುತ್ತಾರೆ. ಅಲ್ಲಿ ಮೂಲತಃ ಓಟದ ತರಭೇತುದಾರರಾಗಿದ್ದ ನಸೀಮ್ ಅಹ್ಮದ್ ಅವರ ಬಳಿ ಸೇರಿಕೊಂಡ ನಂತರ ಜಾವೇಲಿನ್ ಎಸೆತದ ಜೊತೆಗೆ ದೂರದ ಓಟದಲ್ಲೂ ತರಬೇತಿ ಪಡೆದ್ದದ್ದಲ್ಲದೇ, ಜಾವೆಲಿನ್ ತರಬೇತುದಾರರ ಕೊರತೆಯಿಂದಾಗಿ, ಏಕಲವ್ಯನಂತೆ ಜೆಕ್ ದೇಶದ ಜಾವೇಲಿನ್ ಚಾಂಪಿಯನ್ ಜಾನ್ ಜೆಲೆಜ್ನಿ ಆವರ ವೀಡಿಯೊಗಳನ್ನು ನೋಡಿ ಅವರ ಶೈಲಿಯನ್ನೇ ಅನುಸರಿಸುತ್ತಾ, ಸುಮಾರು 55 ಮೀಟರ್‌ಗಳ ದೂರಕ್ಕೆ ಎಸೆಯುವ ಸಾಮರ್ಥ್ಯವನ್ನು ಗಳಿಸಿಕೊಂಡ ನಂತರ ಲಕ್ನೋದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ 27 ಅಕ್ಟೋಬರ್ 2012 ರಂದು, 68.40 ಮೀಟರ್‌ಗಳಷ್ಟು ದೂರ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನವನ್ನು ಗೆದ್ದನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಆಟದ ಜೊತೆ ಜೊತೆಯಲ್ಲೇ ಚಂಡೀಗಢದ ದಯಾನಂದ ಆಂಗ್ಲೋ-ವೇದಿಕ್ ಕಾಲೇಜಿನಲ್ಲಿ ಪಿಯೂಸಿ ಮುಗಿಸಿ, 2021ರಲ್ಲಿ, ಪಂಜಾಬ್‌ನ ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಸೇರಿಕೊಂಡಿರುವಾಗಲೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದಶನ ತೋರಿದ್ದನ್ನು ಗಮನಿಸಿದ ಭಾರತೀಯ ಸೇನೆಯು ಕ್ರೀಡಾ ಕೋಟಾದ ಅಡಿಯಲ್ಲಿ ಕೇವಲ 17ನೇ ವರ್ಷಕ್ಕೆ ಅವರಿಗೆ ನೈಬ್ ಸುಬೇದಾರ್ ಶ್ರೇಣಿಯೊಂದಿಗೆ ರಜಪೂತಾನ ರೈಫಲ್ಸ್‌ನಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಆಗಿ ನೇರ ನೇಮಕಾತಿಯನ್ನು ಮಾಡಿಕೊಂಡಿತು
ಪ್ರಸ್ತುತ ವಿವಿಧ ಕ್ರೀಡೆಗಳಲ್ಲಿ ಭಾರತೀಯರ ಸಾಧನೆಯ ಹಿಂದೆ ಭಾರತೀಯ ಸೈನ್ಯದ ಕೊಡುಗೆಯೂ ಅಪಾರವಾಗಿದ್ದು, ಹಾಕಿ, ಶೂಟಿಂಗ್, ಬಾಕ್ಸಿಂಗ್, ವೇಯ್ಟ್ ಲಿಫ್ಟಿಂಗ್, ಅಥ್ಲೆಟಿಕ್ಸ್ ಮುಂತಾದ ಆಟಗಳಲ್ಲಿ ಅನೇಕ ಸೈನಿಕರು ದೇಶದದ ಪರವಾಗಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸೈನ್ಯದಲ್ಲಿ ಸೈನಿಕನಾಗಿ ಭರ್ತಿಯಾದ ಯುವಕ ನೀರಜ್ ಚೋಪ್ರಾ ಅವರ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಅವನ್ನು ವಿದೇಶಕ್ಕೆ ಕಳುಹಿಸಿ ಸೂಕ್ತವಾದ ತರಬೇತಿಯನ್ನು ಕೊಡಿಸಿದ ಕಾರಣದಿಂದಾಗಿಯೇ ನೋಡ ನೋಡುತ್ತಿದ್ದಂತೆಯೇ ಎತ್ತರೆತ್ತರಕ್ಕೆ ಬೆಳೆದ ನೀರಜ್ 2018 ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು 2018 ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿ ಎರಡರಲ್ಲೂ ದೇಶಕ್ಕೆ ಚಿನ್ನದ ಪದಕಗಳನ್ನು ಗೆದ್ದು ಕೊಡುತ್ತಾರೆ.
2021ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಓಲಂಪಿಕ್ಸ್ ಕ್ರೀಡಾಕೂಟದಲ್ಲಿ 4 ಆಗಸ್ಟ್ 2021 ತಮ್ಮ ಚೊಚ್ಚಲ ಒಲಿಂಪಿಕ್ಸಿನಲ್ಲಿ ಅವರು 86.65 ಮೀಟರ್‌ಗಳನ್ನು ಎಸೆಯುವ ಮೂಲಕ ತಮ್ಮ ಅರ್ಹತಾ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸುತ್ತಾರೆ. ಆಗಸ್ಟ್ 7 ರಂದು ಫೈನಲ್‌ನಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ 87.58 ಮೀ ಎಸೆಯುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಒಲಿಂಪಿಯನ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ಸ್ವಾತಂತ್ರ್ಯದ ನಂತರದ ಮೊದಲ ಭಾರತೀಯ ಒಲಿಂಪಿಕ್ ಪದಕ ವಿಜೇತರಷ್ಟೇ ಅಲ್ಲದೇ, ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಭಾರತದ ಅತ್ಯಂತ ಕಿರಿಯ ಒಲಿಂಪಿಕ್ಸ್ ಆಟಗಾರ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ.
2022 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ಬೆಳ್ಳಿ ಪದಕಕ್ಕೇ ತೃಪ್ತರಾದ ನೀರಜ್ ಕೆಲವು ತಿಂಗಳುಗಳ ಕಾಲ ಅನಾರೋಗ್ಯಕ್ಕೆ ತುತ್ತಾಗುವ ಮೂಲಕ ಅನೇಕ ಕ್ರೀಡಾಕೂಟಗಳನ್ನು ತಪ್ಪಿಸಿಕೊಳ್ಳುವ ಮೂಲಕ ಈತನ ಭವಿಷ್ಯ ಅಲ್ಲಿಗೇ ಮುಕ್ತಯವಾಯಿತು ಎನ್ನುವಷ್ಟರಲ್ಲಿಯೇ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದ ನೀರಜ್ 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೇಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ಪರ ಫೈನಲ್ ತಲುಪಿದ ಮೂರ್ವರು ಸ್ಪರ್ಧಿಗಳಲ್ಲಿ ಮೊದಲಿಗರಾಗುತ್ತಾರೆ.
- 27.08.2023 ಫೈನಲ್ ಮೊದಲ ಸುತ್ತಿನಲ್ಲಿ ಫಿನ್‌ಲ್ಯಾಂಡ್‌ನ ಒಲಿವರ್ ಹೆಲಾಂಡರ್ 83.38 ಮೀಟರ್ ಎಸೆದು ಮುನ್ನಡೆ ಸಾಧಿಸಿದರೆ, ಬಹು ನಿರೀಕ್ಷಿತ ನೀರಜ್ ಚೋಪ್ರಾ ಅವರ ಮೊದಲ ಎಸೆತವೇ ಅನಿರೀಕ್ಷಿತವಾಗಿ ಫೌಲ್ ಆಗುತ್ತದೆ. ಭಾರದ ಉಳಿದ ಇಬ್ಬರು ಆಟಗಾರಾದ ಕಿಶೋರ್ ಜೆನಾ ಮತ್ತು ಡಿಪಿ ಮನು ಅವರುಗಳು ತಮ್ಮ ಮೊದಲ ಎಸೆತದಲ್ಲಿ 75.70ಮೀ ಮತ್ತು 78.44ಮೀ ದೂರ ಎಸೆದರೂ ಮೊದಲ ಮೂರರಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗುತ್ತಾರೆ.
- ಎರಡನೇ ಸುತ್ತಿನಲ್ಲಿ ಜಾಕುಬ್ ವಾಡ್ಲೆಚ್ 84.18 ಮೀ ಎಸೆದು ಭರವಸೆ ಮೂಡಿಸಿ ಮುನ್ನಡೆ ಸಾಧಿಸಿದ್ದಾಗ, ಛಲಬಿಡದ ತ್ರಿವಿಕ್ರಮನಂತೆ ನೀರಜ್ 88.17 ಮೀಟರ್‌ಗಳಷ್ಟು ದೂರವನ್ನು ಎಸೆದು ಎಲ್ಲರನ್ನೂ ಹಿಂದಿಕ್ಕುವ ಮೂಲಕ ಭಾರೀ ಮುನ್ನಡೆಯನ್ನು ಸಾಧಿಸುತ್ತಾರೆ.
- ಮೂರನೇ ಸುತ್ತಿನಲ್ಲಿ ಪಾಕಿಸ್ತಾನದ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಅರ್ಷದ್ ನದೀಮ್ 87.82 ಮೀಟರ್‌ಗಳಷ್ಟು ದೂರ ಎಸೆದರೆ, ನೀರಜ್ 86.32 ಮೀ ದೂರ ಎಸೆದರೂ ತಮ್ಮ ಹಿಂದಿನ ಅಮೋಘ ಎಸೆತದ ಮೂಲಕ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
- ನಾಲ್ಕನೇ ಸುತ್ತಿನಲ್ಲಿ ನೀರಜ್ 84.64 ಮೀ ಎಸೆದರೆ, ನದೀಮ್ 87.15 ಮೀ ಎಸೆಯುವ ಮೂಲಕ ದ್ವಿತೀಯ ಸ್ಥಾನಕ್ಕೆ ಏರುತ್ತಾರೆ.
- ಐದನೇ ಸುತ್ತಿನಲ್ಲಿ ನೀರಜ್ 87.73 ಮೀ ಎಸೆದರೆ, ನದೀಮ್ ಅವರ ಎಸೆತ ಫೌಲ್ ಆಗುವ ಮೂಲಕ ನೀರಜ್ ಅವರು ಅನಾಯಾಸವಾಗಿ ಮುನ್ನಡೆಯನ್ನು ಕಾಯ್ದುಕೊಂಡರು.
ಅಂತಿಮ ಸುತ್ತಿನಲ್ಲಿ ನೀರಜ್ ಅವರ 88.17 ಮೀ ದೂರ ಎಸೆದರೆ, ನದೀಮ್ ಕೇವಲ 81.86 ಮೀ ದೂರ ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ನೀರಜ್ ಭಾರತಕ್ಕೆ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.
ಕ್ರೀಡಾಜಗತ್ತಿನಲ್ಲಿ ತಮ್ಮ ವಿಶಿಷ್ಟ ಸಾಧನೆಗಳಿಗೆ ಅನೇಕ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ
- ಅರ್ಜುನ ಪ್ರಶಸ್ತಿ – 2018
- ವಿಶಿಷ್ಟ ಸೇವಾ ಪದಕ (VSM) – 2020 ಗಣರಾಜ್ಯೋತ್ಸವದ ಗೌರವಗಳು
- ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ – 2021 ( ಭಾರತದ ಅತ್ಯುನ್ನತ ಕ್ರೀಡಾ ಗೌರವ )
- ಪರಮ ವಿಶಿಷ್ಟ ಸೇವಾ ಪದಕ (PVSM) – 2022 ಗಣರಾಜ್ಯೋತ್ಸವದ ಗೌರವಗಳು
- ಪದ್ಮಶ್ರೀ – 2022
- ಟೈಮ್ಸ್ ಆಫ್ ಇಂಡಿಯಾ TOISA ವರ್ಷದ ಕ್ರೀಡಾಪಟು – 2021
- 27 ಆಗಸ್ಟ್ 2021 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪುಣೆಯ ಕಂಟೋನ್ಮೆಂಟ್‌ನ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ (ASI) ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಸ್ಟೇಡಿಯಂ ಎಂದು ಮರುನಾಮಕರಣ ಮಾಡುವ ಮೂಲಕ ನೀರಜ್ ಅವರ ಸಾಧನೆಯನ್ನು ಅಜರಾಮರವಾಗಿಸಿದ್ದಾರೆ.
ಇವೆಲ್ಲವೂ ರಾಷ್ಟ್ರೀಯ ಮಟ್ಟದ ಪುರಸ್ಕಾರಗಳಾದರೆ, ಸ್ವಿಟ್ಜರ್ಲೆಂಡ್ ಪ್ರವಾಸೋದ್ಯಮವು ನೀರಜ್ ಚೋಪ್ರಾ ಅವರನ್ನು ತನ್ನ ಸ್ನೇಹ ರಾಯಭಾರಿಯಾಗಿ ನೇಮಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.
ಸಣ್ಣ ವಯಸ್ಸಿನಲ್ಲೇ ತನ್ನ ವಯಸ್ಸಿಗೆ ಮೀರಿದಂತೆ ದಪ್ಪಗಿದ್ದ ಹುಡುಗ ಕೇವಲ ಮೈ ಭಾರ ಇಳಿಸಲು ವ್ಯಾಯಾಮ ಆರಂಭಿಸಿ, ತನ್ನ ಧೃಢತೆ, ಏಕಾಗ್ರತೆ ಮತ್ತು ಸತತ ಪರಿಶ್ರಮದಿಂದ ಜಾವೇಲಿನ್ ಎಸೆತದಲ್ಲಿ ಪರಿಣಿತಿ ಹೊಂದುವ ಮೂಲಕ ಭಾರತದ ಪರ ಚಿನ್ನದ ಹುಡುಗ ಎನಿಸಿಕೊಂಡಿರುವುದಲ್ಲದೇ ವಿಶ್ವಛಾಂಪಿಯನ್ ಆಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿರುವುದಲ್ಲದೇ, ಯಾವುದೇ ಕೆಲಸವನ್ನು ಮಾಡಲು ಅಸಾಧ್ಯ ಎಂದು ಕೈ ಕಟ್ಟಿಕೊಂಡು ಕುಳಿತಿರುವ ಇಂದಿನ ಯುವಜನತೆಗೆ ಮಾದರಿ ಆಗಿದ್ದಾರೆ ಎಂದರೂ ತಪ್ಪಾಗದು ಅಲ್ವೇ
ಏನಂತೀರೀ?
ಸೃಷ್ಟಿಕರ್ತ ಉಮಾಸುತ