
ಬ್ರಿಟೀಷರಿಂದ ಬಂದ ಅನೇಕ ಆಟಗಳಲ್ಲಿ ಕ್ರಿಕೆಟ್ ಸಹಾ ಒಂದಾಗಿದ್ದು ಬ್ರಿಟೀಷರು ತಮ್ಮ ವಸಾಸತು ದೇಶಗಳಲ್ಲಿ ಈ ಆಟವನ್ನು ಸಾಧ್ಯವಾದಷ್ಟು ಪರಿಚಯಿಸಿದ ಪರಿಣಾಮ ಭಾರತದಲ್ಲಿಯೂ ಕ್ರಿಕೆಟ್ ಆಟ ಅತ್ಯಂತ ಜನಪ್ರಿಯ ಆಟವಾಗಿದೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ವಿಶ್ವ ಕಪ್ ಗೆದ್ದ ನಂತರವಂತೂ ಭಾರತದಲ್ಲಿ ಕ್ರಿಕೆಟ್ ಆಟ ಅತ್ಯಂತ ವೇಗವಾಗಿ ಪ್ರಸಿದ್ಧಿಯನ್ನು ಪಡೆದು, ಇಡೀ ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಕ್ರಿಕೆಟ್ ಆಟದ ಅಭಿಮಾನಿಗಳು ಭಾರತದಲ್ಲೇ ಇದ್ದು ನಮ್ಮ ದೇಶದಲ್ಲಿ ಕ್ರಿಕೆಟ್ ಎನ್ನುವುದು ಒಂದು ರೀತಿಯ ಧರ್ಮದಂತೆ ಆವರಿಸಿಕೊಂಡಿದೆ ಎಂದರೂ ತಪ್ಪಾಗದು. ಪ್ರಸ್ತುವಾಗಿ ನಮ್ಮ ದೇಶದಲ್ಲಿ ಏಕ ದಿನ ಅಂತರಾಷ್ಟ್ರೀಯ ವಿಶ್ವಕಪ್ ನಡೆಯುತ್ತಿದ್ದು, ಬಾಂಗ್ಲಾ ದೇಶ ಮತ್ತು ಶ್ರೀಲಂಕ ನಡುವಿನ ಇಂದಿನ ಪಂದ್ಯದಲ್ಲಿ ಶ್ರೀಲಂಕ ತಂಡದ ಸವ್ಯಸಾಚಿ ಆಟಗಾರ ಏಂಜಿಲೋ ಮಾಥ್ಯೂಸ್ ಕ್ರಿಕೆಟ್ ಜಗತ್ತಿನಲ್ಲೇ ಅತ್ಯಂತ ಅಪರೂಪವಾದ ಟೈಮ್ ಔಟ್ ಆಗಿರುವುದು ವಿಶೇಷವಾಗಿದ್ದು ಆ ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಕ್ರಿಕೆಟ್ ಆಟದಲ್ಲಿ ದಾಂಡಿಗರಿಗೆ ಆದಷ್ಟೂ ಹೆಚ್ಚು ರನ್ ಗಳಿಸುವುದು ಉದ್ದೇಶವಾಗಿದ್ದರೆ, ಇನ್ನು ಚಂಡನ್ನು ಎಸೆಯುವವರಿಗೆ ದಾಂಡಿಗರನ್ನು ಔಟ್ ಆಡುವ ಧಾವಂತವಿದ್ದು, ಚಂಡು ಮತ್ತು ಡಾಂಡುಗಳ ನಡುವಿನ ರೋಚಕದ ಆಟವೇ ಕ್ರಿಕೆಟ್ ಆಟವಾಗಿದೆ.

ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳ ನಡುವೆ ವಿಶ್ವಕಪ್ ಪಂದ್ಯಾವಳಿಯ 38ನೇ ಪಂದ್ಯವಾಗಿ ನವೆಂಬರ್ 6, 2023 ರಂದು ದೆಹಲಿಯ ಅರುಣ್ ಜೈಟ್ಲಿ ಮೈದಾನದಲ್ಲಿ ನಡೆದ ಪಂದ್ಯವಳಿಯ 24ನೇ ಓವರಿನ 2 ನೇ ಎಸೆತದಲ್ಲಿ 41 ರನ್ ಗಳಿಸಿದ್ದ ಸದೀರ ಸಮರ ವಿಕ್ರಮ ಶಕೀಬ್ ಅವರ ಬೌಲಿಂಗಿನಲ್ಲಿ ಮಹಮ್ಮದುಲ್ಲಾ ಹಿಡಿದ ಕ್ಯಾಚಿಕೆ ಔಟ್ ಆದಾಗ, ತಂಡದ ಮೊತ್ತ 135-4 ಆಗಿತ್ತು. ಒಬ್ಬ ಆಟಗಾರ ಔಟಾದ ನಂತರ ಮತ್ತೊಬ್ಬ ಆಟಗಾರ ಕ್ರೀಸಿನೊಳಗೆ ಬರಲು ಕ್ರಿಕೆಟ್ ಆಟದ ನಿಯಮದ ಪ್ರಕಾರ 2 ನಿಮಿಷಗಳ ಒಳಗೆ ಇರಬೇಕು ಎಂಬುದಾಗಿದ್ದು, ಸಮರ ವಿಕ್ರಮ ಔಟಾದ ನಂತರ ಮೈದಾನಕ್ಕೆ ಬರಲು ಮುಂದಾಗಿದ್ದ ಏಂಜಿಲೋ ಮಾಥ್ಯೂಸ್ ಅವರ ಹೆಲ್ಮೆಟ್ಟಿನ ಪಟ್ಟಿಯಲ್ಲಿ ಏನೋ ಸಮಸ್ಯೆಯಾಗಿ, ಅದನ್ನು ಸರಿಪಡಿಸಿಕೊಂಡು ಕ್ರೀಸಿಗೆ ಬರಲು ಸ್ವಲ್ಪ ಸಮಯ ಹಿಡಿದಿದೆ. ಬಾರೀ ಅಪಾಯಕಾರಿ ಆಟಗಾರನಾದ ಮಾಥ್ಯೂಸ್ ಅವರನ್ನು ಆದಷ್ಟು ಬೇಗನೇ ಔಟ್ ಮಾಡಬೇಕೆಂದು ಹವಣಿಸುತ್ತಿದ್ದ ಬಾಂಗ್ಲಾ ಆಟಗಾರರಿಗೆ ಮಾಥ್ಯೂಸ್ ತಡವಾಗಿ ಬಂದದ್ದೇ ವರವಾಗಿ ಪರಿಗಣಿಸಿ ಬೌಲರ್ ಶಕೀಬ್ ತಡವಾಗಿ ಬಂದಿದ್ದಕ್ಕಾಗಿ ಟೈಮ್ ಔಟ್ ಗೆ ಅಂಪೈರ್ ಬಳಿ ಮನವಿ ಮಾಡಿದ್ದಾರೆ.

ಅಂಪೈರ್‌ಗಳು ಪರಸ್ಪರ ಸಮಾಲೋಚಿಸಿ ನಿಯಮಗಳ ಪ್ರಕಾರ ಔಟ್ ಎಂದು ಘೋಷಿಸಲು ಮುಂದಾದಾಗ, ಮಾಥ್ಯೂಸ್ ಪರಿ ಪರಿಯಾಗಿ ಬೌಲರ್ ಶಕೀಬ್ ಮತ್ತು ಪಂದ್ಯದ ಅಂಪೈರ್ ಅವರೊಂದಿಗೆ ತಾನು ತಡವಾಗಿ ಬರಲು ಆದ ಸಮಸ್ಯೆಯನ್ನು ವಿವರಿಸಿಕೊಂಡರೂ ಸುಂಕದವನ ಮುಂದೆ ಸಂಕಟವನ್ನು ಹೇಳಿಕೊಂಡರೆ ಏನೂ ಪ್ರಯೋಜನವಾಗದು ಎನ್ನುವಂತೆ, ಬಾಂಗ್ಲಾ ದೇಶದ ಆಟಗಾರರು ತಾವು ಮಾಡಿದ ಮನವಿಯನ್ನು ಹಿಂಪಡೆಯಲು ಮನಸ್ಸು ಮಾಡದ ಕಾರಣ, ವಿಧಿ ಇಲ್ಲದೇ ಅಂಪೈರ್‌ಗಳು ಶಕೀಬ್ ಅವರ ಮನವಿಯನ್ನು ಪುರಸ್ಕರಿಸಿ ಮಾಥ್ಯೂಸ್ ಟೈಮ್ ಔಟ್ ಎಂದು ಘೋಷಿಸುವ ಮೂಲಕ, ಯಾವುದೇ ಚೆಂಡನ್ನು ಎದುರಿಸದೇ, ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಟೈಮ್ ಔಟ್ ಅದ ಆಟಗಾರ ಎಂಬ ವಿಲಕ್ಷಣ ದಾಖಲೆಗೆ ಶ್ರೀಲಂಕ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಪಾತ್ರರಾಗಿರುವುದು ಬೇಸರದ ಸಂಗತಿಯಾಗಿದೆ..
ಈ ಹಿಂದೆಯೂ ಈ ರೀತಿಯಾಗಿ ಅನೇಕ ದಾಂಡಿಗರು ಕ್ರೀಸಿಗೆ ತಡವಾಗಿ ಬಂದ ಉದಾಹರಣೆಗಳು ಇದ್ದು, ಶಕೀಬ್ ಮಾಥ್ಯೂಸ್ ಅವರ ಔಟ್ ಬಗ್ಗೆ ಕೇಳಿದ್ದು, ಕ್ರಿಕೆಟ್ ನಿಯಮಗಳ ಪ್ರಕಾರ ಸರಿಯಾಗಿದ್ದರೂ, ಕ್ರಿಕೆಟ್ ಆಟವನ್ನು ಸಭ್ಯರ ಅರ್ಥಾತ್ ಜೆಂಟಲ್ ಮ್ಯಾನ್ ಆಟ ಎಂದು ಕರೆಯಲಾಗುವ ಕಾರಣ, ಈ ವಿಷಯದಲ್ಲಿ ಶಕೀಬ್ ಅವರು ಕ್ರೀಡಾ ಮನೋಭಾವವನ್ನು ತೋರಿಸಲಿಲ್ಲ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಅಭಿಪ್ರಾಯವಾಗಿದೆ..
ಈ ಕುರಿತಂತೆ ಪಂದ್ಯದ ನಾಲ್ಕನೇ ಅಂಪೈರ್ ಆಗಿದ್ದ ಶ್ರೀ ಆಡ್ರಿಯನ್ ಹೋಲ್ಡ್‌ಸ್ಟಾಕ್ ಅವರು ವಿವರಿಸುತ್ತಾ, 2023ರ ವಿಶ್ವಕಪ್‌ನ ಕಾನೂನುಗಳು ಎಂಸಿಸಿ ಕಾನೂನುಗಳನ್ನು ಅನುಸರಿಸುತ್ತದೆ. ಎಂದು ಹೇಳಿದ್ದಲ್ಲದೇ, ಒಂದು ವಿಕೆಟ್ ಬಿದ್ದ ನಂತರ, ಕ್ರೀಸ್‌ಗೆ ಬರುವ ಬ್ಯಾಟರ್ ಎರಡು ನಿಮಿಷಗಳಲ್ಲಿ ಚೆಂಡನ್ನು ಸ್ವೀಕರಿಸುವ ಸಿದ್ಧವಾಗಿರಬೇಕು. ವಿಕೆಟ್ ಬಿದ್ದ ಬಳಿಕ ಟಿವಿ ಅಂಪೈರ್ ಎರಡು ನಿಮಿಷಗಳ ಕಾಲ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಆನ್-ಫೀಲ್ಡ್ ಅಂಪೈರ್‌ಗಳಿಗೆ ಸಂದೇಶವನ್ನು ರವಾನಿಸುತ್ತಾರೆ. ಏಂಜೆಲೊ ಮ್ಯಾಥ್ಯೂಸ್ ಅವರು ಹೆಲ್ಮೆಟ್ ಹಿಡಿದು ಮೈದಾದಕ್ಕೆ ಬರುವುದಕ್ಕೆ ಮೊದಲೇ ಎರಡು ನಿಮಿಷಗಳ ಅವಧಿಯನ್ನು ಮೀರಿದ್ದ ಕಾರಣದಿಂದಲೇ, ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರು ಆನ್-ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಅವರಿಗೆ ಟೈಮ್ ಔಟ್ ಮನವಿ ಮಾಡಿದರು ಎಂದು ಸ್ಪಷ್ಟ ಪಡಿಸಿದರು. ಪ್ರತಿಯೊಬ್ಬ ಆಟಗಾರರೂ ಆಟವಾಡಲು ಕ್ರೀಸ್‌ಗೆ ಬರುವುದಕ್ಕಿಂತ ಮುನ್ನವೇ ತಮ್ಮ ಎಲ್ಲಾ ಉಪಕರಣಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳುವುದು ಆಟಗಾರನ ಮೂಲಭೂತ ಕರ್ತವ್ಯವಾಗಿದ್ದು, ಒಬ್ಬ ಆಟಗಾರ ಔಟಾದ ನಂತರದ ಎರಡು ನಿಮಿಷಗಳಲ್ಲಿ ಬಾಲ್ ಎದುರಿಸಲು ನೀವು ಸಿದ್ಧರಾಗಿರಬೇಕು, ಎಂಬ ಸಲಹೆಯನ್ನು ನೀಡಿದ್ದದ್ದು ಗಮನಾರ್ಹವಾಗಿದೆ.
ಕ್ರಿಕೆಟ್ ಆಟದಲ್ಲಿ 10-12ಕ್ಕೂ ಹೆಚ್ಚಿನ ವಿಭಿನ್ನ ರೀತಿಯ ಔಟ್‌ಗಳನ್ನು ಕಾಣಬಹುದಾಗಿದ್ದು ಅವುಗಳು ಹೀಗಿವೆ.
ಬೌಲ್ಡ್ : ಬೌಲರ್‌ನ ಎಸೆತವು ನೇರವಾಗಿಯೋ ಇಲ್ಲವೇ, ಬ್ಯಾಟ್, ಪ್ಯಾಡ್ ಅಥವಾ ಹೆಲ್ಮೆಟ್‌ನಂತಹ ಯಾವುದೇ ಉಪಕರಣಗಳಿಗೆ ತಾಕಿಯೂ, ವಿಕೆಟ್ ಗಳಿಗೆ ಬಡಿದು ವಿಕೆಟ್ ಮೇಲಿರುವ ಬೇಲ್ಸ್ ಉರುಳಿ ಹೋದಲ್ಲಿ Bowled ಎಂದು ಪರಿಗಣಿಸಲಾಗುತ್ತದೆ.

ಕ್ಯಾಚ್ : ಬೌಲರ್ ಎಸೆದ ಚಂಡನ್ನು ಬ್ಯಾಟ್ಸ್ ಮನ್ ಹೊಡೆದಾಗ ಚಂಡು ನೆಲವನ್ನು ಮುಟ್ಟುವ ಮೊದಲು ಮೈದಾನದಲ್ಲಿರುವ ಯಾವುದೇ ಫೀಲ್ಡರ್ ಕೈ ಅಥವಾ ದೇಹದ ಯಾವುದೇ ಭಾಗಗಳಿಂದ ಹಿಡಿದಾಗ Catch ಎಂದು ಪರಿಗಣಿಸಲಾಗುತ್ತದೆ. ಇದಲ್ಲದೇ, ಬೌಲರ್ ಸ್ವತಃ ಕ್ಯಾಚ್ ತೆಗೆದುಕೊಂಡರೆ, ಅದನ್ನು ಕ್ಯಾಟ್ & ಬೌಲ್ಡ್ ಎನ್ನಲಾಗುತ್ತದೆ. ಅದೇ ರೀತಿ ವಿಕೆಟ್ ಕೀಪರ್ ಚಂಡನ್ನು ಹಿಡಿದರೆ ಕಾಟ್ ಬಿಹೈಂಡ್ ದ ವಿಕೆಟ್ ಎನ್ನಲಾಗುತ್ತದೆ.
ಲೆಗ್ ಬಿಫೋರ್ ವಿಕೆಟ್ : ಬೌಲರ್ ಎಸೆದ ಚಂಡು ಬ್ಯಾಟಿಗೆ ಸರಿಯಾಗಿ ತಾಗದೇ ವಿಕೆಟ್ ತಾಗುವ ಮುನ್ನಾ ದಾಂಡಿಗನ, ಪ್ಯಾಡ್ ಅಥವಾ ಗ್ಲೌಸ್‌ಗೆ ಬಡಿದಾಗ, ಚಂಡು ನಿಶ್ಚಯವಾಗಿಯೂ ವಿಕೆಟ್ಟಿಗೆ ತಾಗುತ್ತದೆ ಎಂಬುದನ್ನು ಪರಿಗಣಿಸಿ ಅಂಪೈರ್ ಲೆಗ್ ಬಿಫೋರ್ ವಿಕೆಟ್ ಅರ್ಥಾತ್ LBW ಎಂಬ ತೀರ್ಪನ್ನು ನೀಡ ಬಹುದಾಗಿದೆ. ಈ ರೀತಿಯ ಔಟಿನ ಹಿಂದೆ ಬಹಳ ರೀತಿಯ ವಿವಾದಗಳು ಇರುವ ಕಾರಣ, ಈ ರೀತಿಯಾಗಿ ಔಟ್ ಆದ ಆಟಗಾರ ಅದರ ಕುರಿತಾಗಿ ಮನವಿ ಸಲ್ಲಿಸಿದಾಗ, ಆಧುನಿಕ ತಂತ್ರಜ್ಞಾನವನ್ನು ಬಳಸಿ ಚಂಡು ನಿಶ್ಚಯವಾಗಿಯೂ ವಿಕೆಟ್ಟಿಗೆ ತಗುಲುತ್ತಿತ್ತೇ ಎಂಬುದನ್ನು ತೀರ್ಮಾನಿಸಿ ಮನವಿಯನ್ನುಪುರಸ್ಕರಿಸುವ /ತಿರಸ್ಕರಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಸ್ಟಂಪ್ಡ್ : ಬೌಲರ್ ಎಸೆದ ಚಂಡನ್ನು ಹೊಡೆಯುವ ಭರದಲ್ಲಿ ದಾಂಡಿಗ ಕ್ರೀಸಿನ ಹೊರಗೆ ದಾಟಿದ ಕೂಡಲೇ, ವಿಕೆಟ್ ಕೀಪರ್ ಆ ಚಂಡನ್ನು ಹಿಡಿದು ವಿಕೆಟ್ಟಿಗೆ ತಾಕಿಸಿದಾಗ Stumped ಎಂಬ ನಿಯಮದ ಅಡಿಯಲ್ಲಿ ಔಟ್ ಆಗಬಹುದಾಗಿದೆ. ಈ ಕುರಿತಂತೆ ಖಚಿತತೆಯನ್ನು ಪರೀಕ್ಷಿಸಿಕೊಳ್ಳುವ ಸಲುವಾಗಿ ಮೈದಾನದಲ್ಲಿರುವ ಅಂಪೈರ್ ಮೈದಾನದ ಹೊರಗಿರುವ ಮೂರನೇ ಅಂಪೈರ್ ಅವರನ್ನು ಸಂಪರ್ಕಿಸಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಚಂಡು ವಿಕೆಟ್ಟಿಗೆ ತಗುಲುದಿದಾಗ, ದಾಂಡಿಗ ಕ್ರೀಸ್ ಹೊರಗಿದ್ದನೇ ತೀರ್ಮಾನಿಸಿ ಮನವಿಯನ್ನುಪುರಸ್ಕರಿಸುವ /ತಿರಸ್ಕರಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ರನ್ ಔಟ್ : ಬೌಲರ್ ಎಸೆದ ಚಂಡನ್ನು ಬಾರಿಸಿದ ದಾಂಡಿಗ ಕ್ಶೇತ್ರರಕ್ಷನು ಹಿಡಿಯುವ ಮುನ್ನವೇ ಒಂದು ವಿಕೆಟ್ಟಿನ ಒಂದು ಬದಿಯಿಂದ ಮತ್ತೊಂದು ಬದಿಗೆ ಹೊದಲ್ಲಿ ಒಂದು ರನ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ಒಂದು ತುದಿಯಿಂದ ಮತ್ತೊಂದು ತುದಿಗೆ ಹೋಗುವ ಮೊದಲೇ ಕ್ಷೇತ್ರ ರಕ್ಷಕ ವಿಕೆಟ್ಟಿಗೆ ಚಂಡನ್ನು ತಾಗಿಸಿದಲ್ಲಿ, Run Out ಎಂಬ ನಿಯಮದ ಅಡಿಯಲ್ಲಿ ಔಟ್ ಆಗಬಹುದಾಗಿದೆ. ಈ ಕುರಿತಂತೆಯೂ ಖಚಿತತೆಯನ್ನು ಪರೀಕ್ಷಿಸಿಕೊಳ್ಳುವ ಸಲುವಾಗಿ ಮೈದಾನದಲ್ಲಿರುವ ಅಂಪೈರ್ ಮೈದಾನದ ಹೊರಗಿರುವ ಮೂರನೇ ಅಂಪೈರ್ ಅವರನ್ನು ಸಂಪರ್ಕಿಸಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಚಂಡು ವಿಕೆಟ್ಟಿಗೆ ತಗುಲುದಿದಾಗ, ದಾಂಡಿಗ ಕ್ರೀಸ್ ಹೊರಗಿದ್ದನೇ ತೀರ್ಮಾನಿಸಿ ಮನವಿಯನ್ನುಪುರಸ್ಕರಿಸುವ /ತಿರಸ್ಕರಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಹಿಟ್ ವಿಕೆಟ್ : ಬೌಲರ್ ಎಸೆದ ಚಂಡನ್ನು ಬ್ಯಾಟ್ಸ್ ಮನ್ ಆಡಲು ಮುಂದಾದಾಗ, ಅಜಾಗರುಕತೆಯಿಂದ ಆತನ, ಬ್ಯಾಟ್, ಇಲ್ಲವೇ ಪ್ಯಾಡ್ ಅಥವಾ ಆತ ಧರಿಸಿದ ಯಾವುದೇ ಉಪಕರಣಗಳು ವಿಕೆಟ್ಟಿಗೆ ಬಡಿದು ಬೇಲ್ಸ್ ಉರುಳಿದಾಗ ಅದನ್ನು Hit Wicket ಎಂದು ಪರಿಗಣಿಸಲಾಗುತ್ತದೆ. 1975 ರಲ್ಲಿ ಇಂಗ್ಲೇಂಡಿನಲ್ಲಿ ನಡೆದ ಪುಡೆಂನ್ಷಿಯಲ್ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಅವರ ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಆರಂಭಿಕ ದಾಂಡಿಗ ರಾಯ್ ಫ್ರೆಡೆರಿಕ್ಸ್ ಬಲವಾಗಿ ಹೊಡೆದ ಚಂಡು ಸಿಕ್ಸರ್ ಹೋಗುವ ಮುನ್ನವೇ ಆಯತಪ್ಪಿ ವಿಕೆಟ್ ಮೇಲೆ ಬೀಳುವ ಮೂಲಕ ಹಿಟ್-ವಿಕೆಟ್ ಮೂಲಕ ಔಟ್ ಆದ ಮೊತ್ತ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಚೆಂಡನ್ನು ಎರಡು ಬಾರಿ ಹೊಡೆಯುವುದು : ಬೌಲರ್ ಎಸೆದ ಚಂಡನ್ನು ದಾಂಡಿಗನು ಒಂದು ಬಾರಿ ಹೊಡೆಯುವ ನಿಯಮವಿದ್ದು, ಅಕಸ್ಮಾತ್ ದಾಂಡಿಗ ಚೆಂಡನ್ನು ಎರಡು ಬಾರಿ ಅಚಾತುರ್ಯದಿಂದಲೋ ಅಥವಾ ಅಜಾಗರೂಕತೆಯಿಂದ ಹೊಡೆದಾಗ, ಎದುರಾಳಿಯ ತಂಡವರು ಮನವಿಯನ್ನು ಸಲ್ಲಿಸಿದಲ್ಲಿ Hit The Ball Twice ಎಂಬ ನಿಯಮದಡಿಯಲ್ಲಿ ಔಟ್ ಆಗಬಹುದಾಗಿದೆ.
ಫೀಲ್ಡರ್ ಅನ್ನು ತಡೆಯುವುದು: ದಾಂಡಿಗ ಹೊಡೆದ ಚಂಡನ್ನು ತಡೆಯಲು ಕ್ಷೇತ್ರರಕ್ಷಕ ಮುಂದಾದಾಗ, ದಾಂಡಿಗನೇನಾದರೂ ಉದ್ದೇಶಪೂರ್ವಕವಾಗಿ ಕ್ಶೇತ್ರರಕ್ಷಕನ್ನು ಅಡ್ಡಿಪಡಿಸಿದಲ್ಲಿ ಅಥವಾ ಕ್ಷೇತ್ರ ರಕ್ಷಕ ರನ್ ತಡೆಯುವ ನಿಟ್ಟಿನಲ್ಲಿ ವಿಕೆಟ್ ಕಡೆಗೆ ಚಂಡನ್ನು ಎಸೆದಾಗ, ಅದು ವಿಕೆಟ್ ಬಡಿಯುವ ಮುನ್ನವೇ ಉದ್ದೇಶ ಪೂರ್ವಕವಾಗಿ ತಡೆದಲ್ಲಿ Obstructing The Field ಎಂಬ ನಿಯಮದ ಅಡಿಯಲ್ಲಿ ಔಟ್ ಆಗಬಹುದಾಗಿದೆ. ಈ ಹಿಂದೆ ಪಾಕೀಸ್ಥಾನದ ಆಟಗಾರ ಇನ್‌ಜಮಾಮ್ ಉಲ್ ಹಕ್ ಭಾರತದ ವಿರುದ್ಧ ಒಂದು ಪಂದ್ಯದಲ್ಲಿ ಕ್ಷೇತ್ರರಕ್ಷರನ್ನು ಅಡ್ಡಿಪಡಿಸಿದ್ದಕ್ಕಾಗಿ ವಿಕೆಟ್ ಕಳೆದುಕೊಂಡಿದ್ದರೆ, 2021ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ದನುಷ್ಕ ಗುಣತಿಲಕ ಸಹಾ ಬೌಲರ್ ಪೋಲಾರ್ಡ್ ಅವರನ್ನು ಅಡ್ಡಪಡಿಸಿದ್ದಕ್ಕಾಗಿ ಔಟ್ ಆಗಿರುವುದು ಗಮನಾರ್ಹವಾಗಿದೆ.
ನಿವೃತ್ತಿ ಹೊಂದುವುದು : ಆಟದ ಮಧ್ಯದಲ್ಲಿ ಗಾಯ ಅಥವಾ ಅನಾರೋಗ್ಯದಿಂದಾಗಿ ಯಾವುದೇ ಅಥವಾ ಯಾರದ್ದೇ ಒತ್ತಡವಿಲ್ಲದೇ, ಸ್ವತಃ ದಾಂಡಿಗ ತನಗೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದಾಗ, ಸ್ವತಃ ತಾನೇ ನಿವೃತ್ತಿ ಘೋಷಿಸಿಕೊಳ್ಳುವ ಮೂಲಕ retired hurt ಎಂಬ ನಿಯಮದ ಅಡಿಯಲ್ಲಿ ಔಟ್ ಆಗಬಹುದಾಗಿದೆ.

ಚೆಂಡನ್ನು ತಡೆಯುವುದು : ಬೌಲರ್ ಎಸೆದ ಚಂಡನ್ನು ಬ್ಯಾಟ್ಸ್ ಮನ್ ಹೊಡೆದ ನಂತರ ಅದನ್ನು ಕ್ಷೇತ್ರರಕ್ಶಕ ಹಿಡಿಯುವ ಮುನ್ನವೇ ಉದ್ದೇಶಕಪೂರ್ವವಾಗಿ ಬ್ಯಾಟ್ಸ್‌ಮನ್ ಕೈಯಿಂದ ಚೆಂಡನ್ನು ಮುಟ್ಟಿದಾಗ, ಆಂತಹ ಆಟಗಾರರನ್ನು Handle The Ball ಎಂಬ ಎಂಬ ನಿಯಮದ ಅಡಿಯಲ್ಲಿ ಔಟ್ ಆಗಬಹುದಾಗಿದೆ. 1986 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಗ್ರೆಗ್ ಮ್ಯಾಥ್ಯೂಸ್ ಅವರ ಫ್ಲೈಟ್ ಎಸೆತವನ್ನು 15 ರನ್ ಗಳಿಸಿ ಆಡುತ್ತಿದ್ದ ಮೊಹಿಂದರ್ ಅಮರನಾಥ್ ಆಡಿದ ನಂತರ, ಚಂಡು ವಿಕೆಟ್ಟಿಗೆ ಬಡಿಯುತ್ತಿದೆ ಎಂಬುದನ್ನು ಗಮನಿಸಿ ಅಮರ್ ನಾಥ್ ತನ್ನ ಕೈಗಳಿಂದ ಚೆಂಡನ್ನು ತಡೆದ ಕಾರಣ ಔಟಾಗಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.
ದೇವನೊಬ್ಬ ನಾಮ ಹಲವು ಎನ್ನುವಂತೆ ಕ್ರಿಕೆಟ್ ಆಟ ಒಂದೇ ಆದರೂ ಈ ರೀತಿಯಾಗಿ ಹಲವಾರು ರೀತಿಯಲ್ಲಿ ಔಟ್ ಆಗುವುದು ಪಂದ್ಯದ ನಿಯವಾಗಿದೆ ಎನ್ನುವುದೇ ಸತ್ಯವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ