ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ನಮ್ಮಬೆಂಗಳೂರು ಒಂದು. ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ಹೆಮ್ಮೆಯ ವಿಷಯವಾಗಿದ್ದು, ಇಂದಿಗೂ ಸಹಾ ವಿವಿಧ ಬಡಾವಣೆಗಳಲ್ಲಿ ಊರ ಹಬ್ಬ, ಅಣ್ಣಮ್ಮ ಹಬ್ಬದ ಜೊತೆಗೆ ಬೆಂಗಳೂರಿನ ಬಸವನಗುಡಿಯಲ್ಲಿ ಆರಂಭವಾದ ಹೆಮ್ಮೆಯ ಕಡಲೇಕಾಯಿ ಪರಿಶೆಯನ್ನು ಈಗ ನಗರಾದ್ಯಂತ ವಿವಿಧ ಬಡಾವಣೆಗಳೂ ಸಹಾ ನಡೆಸಿಕೊಂಡು ಬರುತ್ತಿದ್ದು ಈ ಬಾರಿಯೂ ಸಹಾ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಡಿ. 2 ರಿಂದ 4ರವರೆಗೂ ಕಡಲೇ ಕಾಯಿ ಪರಿಶೆ ಆರಂಭವಾಗಿದ್ದು ಅದರ ಸಣ್ಣ ಝಲಕ್ಕನ್ನು ಕುಳಿತಲ್ಲಿಂದಲೇ ಆಹ್ಲಾದಿಸೋಣ ಬನ್ನಿ.
ಶ್ರಾವಣ ಮಾಸ ಮತ್ತು ಆಶ್ವಯುಜ ಮಾಸದ ಸಾಲು ಸಾಲು ಹಬ್ಬಗಳು ಮುಗಿದು ಇನ್ನೇನು ಮಾಗಿಯ ಚಳಿ ನಮ್ಮೆಲ್ಲರನ್ನು ಅಪ್ಪುವುದಕ್ಕೆ ಶುರುವಾಗುತ್ತಿದ್ದಂತೆಯೇ ಬರುವುದೇ ಕಾರ್ತೀಕ ಮಾಸ. ಶೈವಾರಾಧಕರಿಗೆ ಪ್ರತೀ ಕಾರ್ತೀಕ ಸೋಮವಾರವೂ ಅತ್ಯಂತ ಪುಣ್ಯಕರವಾದ ದಿನ. ಬಹುತೇಕರು ಕಾರ್ತೀಕ ಸೋಮವಾರ ಶ್ರಧ್ಥೆಯಿಂದ ದಿನವಿಡೀ ಉಪವಾಸ ಮಾಡಿ ಸಂಜೆ ಹತ್ತಿರದ ಶಿವ ದೇವಾಲಯಕ್ಕೆ ಹೋಗಿ ಶಿವದರ್ಶನ ಮಾಡಿಯೇ ಫಲಾಹಾರವನ್ನು ಸ್ವೀಕರಿಸುವ ಪದ್ದತಿಯನ್ನು ರೂಢಿಯಲ್ಲಿಟ್ಟುಕೊಂಡಿದ್ದಾರೆ. ಬೆಂಗಳೂರಿನವರಿಗೆ ಕಡೇ ಸೋಮವಾರ ಬಂದಿತೆಂದರೆ ಅವರೆಲ್ಲರ ಗಮನ ಬಸವನಗುಡಿಯ ಪ್ರತಿಷ್ಠಿತ ಕಡಲೇಕಾಯಿ ಪರಿಷೆಯತ್ತ ಹರಿಸುತ್ತಾರೆ.
ನೂರಾರು ವರ್ಷಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿದ್ದ ಕಡಲೇ ಪರಿಷೆಯನ್ನು ನಗರದ ಇನ್ನೂ ಹಲವಾರು ಬಡವಣೆಗಳ ನಾಗರೀಕರು ಅಯ್ಯೋ ನಮ್ಮ ಪ್ರದೇಶದಲ್ಲಿಯೂ ಇಂತಹ ಜಾತ್ರೆ/ಪರಿಷೆ ನಡೆದರೆ ಎಷ್ಟು ಚೆನ್ನಾ, ಎಲ್ಲರೂ ಹೋಗಿ ಸಂಭ್ರಮ ಪಡಬಹುದಿತ್ತು ಎಂದು ಯೋಚಿಸುತ್ತಿರುವಾಗಲೇ, ಮಲ್ಲೇಶ್ವರ ಮತ್ತು ಯಲಹಂಕದ ವೆಂಕಟಾಲದ ನಾಗರೀಕರು ಸೂಕ್ತವಾಗಿ ಸ್ಪಂದಿಸಿ, ಅವರ ಬಡಾವಣೆಗಳಲ್ಲಿಯೂ ಕಡಲೇ ಕಾಯಿ ಪರಿಷೆಯನ್ನು ಆಚರಿಸಲು ಆರಂಭಿಸಿದರು. ಎಲ್ಲರೂ ಒಂದೇ ಸಮಯದಲ್ಲಿ ಆಚರಿಸಿದರೆ ಭಕ್ತಾದಿಗಳಿಗೆ ಬರಲು ತೊಂದರೆ ಆಗಬಹುದೆಂದು ನಿರ್ಧರಿಸಿ ವೆಂಕಟಾಲದದಲ್ಲಿ ಪ್ರತೀ ವರ್ಷ ನವೆಂಬರ್ ತಿಂಗಳ ಮೊದಲ ಶನಿವಾರ, ಭಾನುವಾರ ಮತ್ತು ಸೋಮವಾರ ಅಲ್ಲಿನ ಯುವವೇದಿಕೆಯ ನೇತೃತ್ವದಲ್ಲಿ ಕಡಲೇಕಾಯಿ ಪರಿಷೆ ಏರ್ಪಡಿಸಲು ನಿರ್ಧರಿಸಿದರೆ, ಮಲ್ಲೇಶ್ವರ ಬಡಾವಣೆಯವರು ಪ್ರತೀ ವರ್ಷದ ಕಾರ್ತೀಕ ಮಾಸದ ಮೂರನೇ ಸೋಮವಾರಕ್ಕೆ ಮುಂಚಿನ ಎರಡು ದಿನಗಳು ಅಂದರೆ ಕಾರ್ತೀಕ ಮಾಸದ ಎರಡನೇ ಶನಿವಾರ, ಭಾನುವಾರ ಮತ್ತು ಮೂರನೇ ಸೋಮವಾರ ಮಲ್ಲೇಶ್ವರದ 15ನೇ ಅಡ್ಡರಸ್ತೆ, ದೇವಸ್ಥಾನಗಳ ಸಂಕೀರ್ಣವಾದ ಕಾಡು ಮಲ್ಲೇಶ್ವರ ಸ್ವಾಮಿಯ ಎದುರಿಗೆ ಅತ್ಯಂತ ಸಂಭ್ರಮ ಸಡಗರಗಳಿಂದ ವಿಜೃಂಭಣೆಯಿಂದ ಕಳೆದ 11 ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದ್ದು ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಜನರನ್ನು ಆಕರ್ಷಿಸುತ್ತಲೇ ಇದೆ.
ಕಾಡುಮಲ್ಲೇಶ್ವರ ಗೆಳೆಯರ ಬಳಗವು ಮುಜರಾಯಿ ಇಲಾಖೆಯ ಸಹಯೋಗದಲ್ಲಿ ಮಲ್ಲೇಶ್ವರದಲ್ಲಿ ಡಿ. 2 ರಿಂದ 4ರವರೆಗೂ ಪರಿಷೆಯನ್ನು ಆಯೋಜಿಸಿದ್ದು, ಈ ಬಾರಿಯ ಮಲ್ಲೇಶ್ವರದ ಪರಿಶೆಯಲ್ಲಿ ಪರಿಸರ ಉಳಿಸಿ, ಬೆಳೆಸಲು ಹಸಿರು ಚೈತನ್ಯೋತ್ಸವದ ಮೂಲಕ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯಲ್ಲದೇ, ಸುಮಾರು 800 ಕೆ.ಜಿಯಷ್ಟು ಕಡಲೆಕಾಯಿಗಳಿಂದ ಸಿಂಗರಿಸಿದ 20 ಅಡಿ ಎತ್ತರ ಬಸವಣ್ಣ ನೋಡಲು ಆಕರ್ಷಣೀಯವಾಗಿದ್ದು, ಅದರ ಮುಂದೆ ಪೋಟೋಗಳನ್ನು ತೆಗೆಸುಕೊಳ್ಳಲು ಜನರು ಮುಗಿ ಬಿದ್ದಿರುವುದನ್ನು ಕಾಣಬಹುದಾಗಿದೆ.
ಪ್ರತಿ ವರ್ಷದಂತೆಯೇ ಈ ಸಲವೂ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ಹಾಗೂ ರಂಗ ಮಂಟಪದಲ್ಲಿಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಡಿ. 3ರಂದು ಬೆಳಗ್ಗೆ 11.30ಕ್ಕೆ ಪಂಚಮ ಸಂಗೀತ ತಂಡದ ಎಲ್ ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ, ಸಂಜೆ ಮಧು ಮನೋಹರ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಡಾ. ರಾಜ್‌ಕುಮಾರ್ ಸವಿ ನೆನಪಿನಲ್ಲಿಮಧುರ ನೆನಪಿನ ಗಾಯನ ಕಾರ್ಯಕ್ರಮ ನಡೆಯಲಿದೆ. ಡಿ. 4ರ ಬೆಳಗ್ಗೆ 9.30ಕ್ಕೆ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 6.30ಕ್ಕೆ ಭವಾನಿ ಗಾನ ವೃಂದದ ವಿದೂಷಿ ಶೈಲಜಾ ಶ್ರೀನಾಥ್ ಮತ್ತು ತಂಡವು ಶಿವ ವೀಣಾ ಗಾನ ಸಂಗಮ ಕಾರ್ಯಕ್ರಮವನ್ನು ನಡೆಸಿಕೊಡಲಿದೆ.
ಮಲ್ಲೇಶ್ವಂ ಅಲ್ಲಾ ಬಾಸು ಇದು ಮಲ್ಲೇಶ್ವರ ಎನ್ನುವ ಭಿತ್ತಿಪತ್ರ ಮನಸ್ಸನ್ನು ಸೆಳೆದರೆ, ಅದೇ ರೀತಿಯಲ್ಲಿ ಈ ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಅವ್ಯಾಹತವಾಗಿ ಬಳಸುವುದನ್ನು ತಪ್ಪಿಸುವ ಸಲುವಾಗಿ, ಈ ಬಾರಿ ಬಿಬಿಎಂಪಿ ಅವರ ಜತೆಗೂಡಿ ಪ್ಲಾಸ್ಟಿಕ್‌ಮುಕ್ತ ಪರಿಷೆ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಯಾಕೆ ಪರಿಶೇಲಿ, ತನ್ನಿ ಬ್ಯಾಗು ಜೊತೆಯಲ್ಲಿ ಎನ್ನುವ ಬಿತ್ತಿ ಪತ್ರವನ್ನು ಎಲ್ಲೆಡೆಯಲ್ಲಿಯೂ ಪ್ರದರ್ಶನ ಮಾಡುತ್ತಿದ್ದರೂ ಸಹಾ, ಗ್ರಾಹಕರಿಗೆ ಮತ್ತು ವ್ಯಾಪಾರಿಗಳ ಮನಸ್ಸಿಗೆ ಅದು ಇನ್ನೂ ತಾಗದೇ, ಅವ್ಯಾಹತವಾಗಿ ಪ್ಲಾಸ್ಟಿಕ್ ಬಳಸುತ್ತಿದ್ದರೆ, ಪರಿಶೆಯ ಮೂಲೆಯಲ್ಲಿ ಭರವಸೆ ತಂಡದವರು ಅತ್ಯಂತ ಕಡಿಮೆಗೆ ಎಲ್ಲರಿಗೂ ಕೈಗೆಟುಕುವ ಬೆಲೆಗೆ ಆಕರ್ಷರ್ಣೀಯವಾದ ಪರಿಸರ ಸ್ನೇಹಿ ಬಟ್ಟೆಯ ಚೀಲಗಳನ್ನು ಮಾರುತ್ತಿದ್ದು ಅತ್ಯಂತ ಶ್ಲಾಘನೀಯವಾಗಿದ್ದು ಅದು ಎಲ್ಲರಿಗೂ ಇನ್ನೂ ತಲುಪದೇ ಇರುವುದು ವಿಷಾಧನೀಯವಾಗಿದೆ.
ಕಾಡು ಮಲ್ಲೇಶ್ವರ ದೇವಸ್ಥಾನದ ಎದುರಿಗಿರುವ 15ನೇ ಅಡ್ಡ ರಸ್ತೆಯಿಂದ ಹಿಡಿದು 8 ನೇ ಅಡ್ಡರಸ್ತೆಯವರೆಗೂ ಏಕವಾದ ರಸ್ತೆ ಅತ್ಯಂತ ಕಿರಿದಾಗಿದ್ದರೂ ಅಲ್ಲಿನ ಜನರ ಮನಸ್ಸು ಹಿರಿಯದಾಗಿರುವ ಕಾರಣ ರಸ್ತೆ ಇಕ್ಕೆಲಗಳಲ್ಲಿಯೂ ತರತರಹದ ಕಡಲೆಕಾಯಿಗಳು, ಕಡಲೇಪುರಿ, ಬೆಂಡು, ಬತ್ತಾಸು, ಕಲ್ಯಾಣ ಸೇವೆ, ಚೌಚೌ ಹೀಗೆ ಎಲ್ಲವೂ ಒಂದೇ ಜಾಗದಲ್ಲಿ ಸಿಗುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
ಜಾತ್ರೆ ಎಂದರೆ, ಬಣ್ಣ ಬಣ್ಣದ ಉಸಿರುಬುಡ್ಡೆ (ಬೆಲೂನ್) ಗಿರಿಗಿಟ್ಟಲೆ, ಬೊಂಬಾಯಿ ಮಿಠಾಯಿ, ಕಬ್ಬಿನ ಹಾಲು, ತರತರಹದ ಪೀಪೀಗಳು, ಮಣ್ಣಿನ ಗೊಂಬೆಗಳು, ಹೆಣ್ಣುಮಕ್ಕಳಿಗೆ ಬಣ್ಣ ಬಣ್ಣದ ಬಳೆಗಳು, ಹೀಗೇ ಒಂದೇ ಎರಡೇ ಈ ಎಲ್ಲವೂ ಒಂದೇ ಕಡೆ ಸಿಗುವ ಸ್ಥಳವಾಗಿದೆಯಲ್ಲದೇ, ಉಪ್ಪಿನ ಕಾಯಿ ಹಾಕಲು ಬಳಸುತ್ತಿದ್ದ ಪಿಂಗಾಣಿ ಜಾಡಿಗಳು, ಇನ್ನು ಅಪರೂಪವಾಗುತ್ತಿರುವ ಕಡಗೋಲು (ಮಂತು) ಲಟ್ಟಣಿಗೆಯಲ್ಲದೇ ಗೃಹಬಳಕೆಗೆ ಅನುಕೂಲವಾದ ಪ್ರಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆ ಪಗಾರಗಳು ಇಲ್ಲಿ ಲಭ್ಯವಿದೆ.
ಇನ್ನು ಮರದ ಮಣ್ಣಿನ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸಿನ ವಿವಿಧ ಆಕಾರದ ಬಗೆ ಬಗೆಯ ಬೊಂಬೆಗಳ ಅಂಗಡಿಯ ಮುಂದೆ ಚೌಕಾಸಿ ಮಾಡುತ್ತಾ ತಮ್ಮ ನೆಚ್ಚಿನ ಬೊಂಬೆಗಳನ್ನು ಖರೀದಿಸುತ್ತಿರುವುದನ್ನೂ ನೋಡಲು ನಿಜಕ್ಕೂ ಸಂತೋಷವೆನಿಸುತ್ತದೆ,
ಇದೆಲ್ಲದರ ಜೊತೆ, ಕರಿದ ಬೋಂಡ ಬಜ್ಜಿ, ಟ್ವಿಸ್ಟಡ್ ಆಲೂ, ಬಗೆ ಬಗೆಯ ಐಸಿ ಕ್ರೀಂ ಪಾನಿ ಪುರಿ, ಇಡ್ಲಿ ದೋಸೆ ಮುಂತಾದ ತಿನಿಸುಗಳ ಜೊತೆ ಬಹಳ ಹಿಂದೆ ಸಿಗುತ್ತಿದ್ದ ಗೋಲೀ ಸೋಡಾ ಕೂಡಾ ಲಭ್ಯವಿದ್ದು 25 ರೂಪಾಯಿಯಷ್ಟು ದುಬಾರಿ ಎನಿಸಿದರೂ ಒಮ್ಮೆ ಕುಡಿಯಲು ಮಜ ಎನಿಸುತ್ತದೆ
ಪಬ್, ಬಾರು, ಶಾಪಿಂಗ್ ಮಾಲುಗಳು, ಮಲ್ಟಿಪ್ಲೆಕ್ಸ್ಗಳು ವರ್ಷದ ಮುನ್ನೂರ ಅರವತ್ತೈದು ದಿನವೂ ಇದ್ದೇ ಇರುತ್ತದೆ. ನಮ್ಮೆಲ್ಲರ ಕೆಲಸಗಳ ಮಧ್ಯೆಯೂ ಅಲ್ಪ ಸ್ವಲ್ಪ ಬಿಡುವು ಮಾಡುಕೊಂಡು ಒಮ್ಮೆ ಇಂತಹ ಗ್ರಾಮೀಣ ಸೊಗಡಿನ ಹಬ್ಬಗಳನ್ನು ನಾವೆಲ್ಲರೂ ಸಕುಟುಂಬ ಸಮೇತವಾಗಿ ಭಾಗವಹಿಸುವುದರ ಮೂಲಕ ನಮ್ಮ ಸಂಪ್ರದಾಯ, ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮ ಕೈಯಲ್ಲೇ ಇದೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ