ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ

ಕೆಲವರ್ಷಗಳ ಹಿಂದೆ ಕುಟುಂಬದೊಡನೆ ಮಲೇಷ್ಯಾ ದೇಶದ ರಾಜಧಾನಿ ಕೌಲಾಲಾಂಪುರಿನ್ಗ ಜೆಂಟಿಂಗ್ ಎಂಬ ಪ್ರದೇಶಕ್ಕೆ ಹೋಗಿದ್ದೆವು. ಇಡೀ ದಿನ ಅಲ್ಲಿನ ವಿವಿಧ ರೀತಿಯ ಆಟಗಳಲ್ಲಿ ಭಾಗವಹಿಸಿ ಸಂಜೆ ಅಲ್ಲಿಯೇ ಇದ್ದ ಕ್ಯಾಸಿನೋ ಒಳಗೆ ಹೋಗಲು ಪ್ರಯತ್ನಿಸಿದಾಗ, ಆಲ್ಲಿದ್ದ ಕಾವಲುಗಾರರು ನಮ್ಮನ್ನು ತಡೆದು ಸರಿ ನೀವು ಈ ಬಟ್ಟೆಗಳನ್ನು ಧರಿಸಿಹೋಗಲು ಸಾಧ್ಯವಿಲ್ಲ. ಕೇವಲ Formal dress ಹಾಕಿಕೊಂಡವರಿಗೆ ಮಾತ್ರವೇ ಇಲ್ಲಿ ಪ್ರವೇಶ. ನೀವು Casual dressನಲ್ಲಿ ಇರುವುವುದರಿಂದ ಒಳಗೆ ಬಿಡಲಾಗುವುದಿಲ್ಲ ಎಂದಾಗ ಮರು ಮಾತಿಲ್ಲದೇ ಹೊರಗೆ ಬಂದಿದ್ದೆವು.

ಜೂಜಾಟವಾಡುವಂತಹ ಕ್ಯಾಸಿನೋಗಳಲ್ಲಿಯೇ ವಸ್ತ್ರ ಸಂಹಿತೆ ಜಾರಿಗೆಯಾಗಿರುವಾಗ ನಮ್ಮ ಶ್ರದ್ಧಾ ಭಕ್ತಿ ಕೇಂದ್ರಗಳಾದ ಮಂದಿರ ಮಠಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದರೆ ಏಕೀ ಆಕ್ರೋಶ? ಕೆಲ ದಿನಗಳ ಹಿಂದೆ ಬೆಂಗಳೂರಿನ ದೇವಾಲಯದಲ್ಲೂ ಹೀಗೆ ಆಗಿತ್ತು. ದೇವಾಲಯಕ್ಕೆ ತುಂಬು ಬಸುರಿ ಹೆಂಡತಿಯೊಂದಿಗೆ ಬರ್ಮುಡ ಹಾಕಿಕೊಂಡು ದೇವಾಲಯದೊಳಗೆ ಬರುತ್ತಿರುವ ವ್ಯಕ್ತಿಯೊಬ್ಬರನ್ನು ತಡೆಯಲು ಯತ್ನಿಸಿದ ಆ ದೇವಾಲಯದ ಕಾವಲುಗಾರರನ್ನು ಹೀನಾ ಮಾನವಾಗಿ ಬೈಯುತ್ತಿದ್ದದ್ದನ್ನು ಗಮನಿಸಿದ ನಾನು, ನೋಡಿ, ಹೀಗೆಲ್ಲಾ ಬರಬಾರದು. ಈ ದೇವಾಲಯದಲ್ಲೂ ವಸ್ತ್ರ ಸಂಹಿತೆ ಇದೆ ಎಂದಾಗ, ಆತ ನನ್ನನ್ನೊಮ್ಮೆ ಅಡಿಯಿಂದ ಮುಡಿಯವರೆಗೂ ನೋಡಿ, ನಾನು ಯಾವ ರೀತಿಯ ಉಡುಪನ್ನು ಧರಿಸಿದ್ದೆ ಪಂಚೆ ಮತ್ತು ಅಂಗಿಯನ್ನು ಹಾಕಿದ್ದನ್ನು ಗಮನಿಸಿ, ನನ್ನೊಡನೆ ಹೆಚ್ಚು ಮಾತನಾಡದೇ ತನ್ನ ಪಾಡಿಗೇ ತಾನು ಬಡಬಡಿಸಿಕೊಂದು ದುರು ದುರು ಎಂದು ಹೊರಗೆ ಹೋರಟು ಹೋದ. ಆದರೆ ಆತನ ಗರ್ಭಿಣಿ ಹೆಂಡತಿ ಮಾತ್ರಾ, ದೇವಾಲಯದ ಶಾಂತತೆಯ ಬಗ್ಗೆ ಕೊಂಚವೂ ತಲೆ ಕೆಡಸಿಕೊಳ್ಳದೇ, ಏರು ಧನಿಯಲ್ಲಿ ನನಗೀಗ 8 ತಿಂಗಳಾಗಿದೆ. ಈ ದೇವಾಲಯದಲ್ಲಿ ನನಗೆ ಏನಾದರೂ ಆದಲ್ಲಿ ನನ್ನನ್ನು ನೀನು ನೋಡಿಕೊಳ್ತೀಯಾ? ಎಂದು ಕೂಗಾಡ ತೊಡಗಿದಳು. ಅಮ್ಮಾ ತಾಯಿ ನೀವು ದೇವಾಲಯಕ್ಕೆ ದೇವರನ್ನು ನೋಡಲು ಬಂದಿದ್ದೀರಿ. ಶಾಂತ ಚಿತ್ತದಿಂದ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ ಎಂದು ಪರಿ ಪರಿಯಾಗಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಆಕೆ ಇರದೇ ಹೋದದ್ದು ನಿಜಕ್ಕೂ ದುರಾದೃಷ್ಟಕರ.

ಇಷ್ಟೆಲ್ಲಾ ನಡೆಯುತ್ತಿದ್ದರೂ, ಬೇರೇ ಯಾರೂ ಸಹಾ ನಮ್ಮ ಪರವಾಗಿ ಮಾತನಾಡಲು ಬಾರದೇ ಹೋದನದ್ದೂ ಸಹಾ ವಿಪರ್ಯಾಸವೇ ಸರು. ನನಗೂ ಆಕೆಯೊಂದಿಗೆ ವಿತಂಡ ವಾದ ಮಾಡಲು ಸಮಯ ಇಲ್ಲದ ಕಾರಣ, ಸುಮ್ಮನೇ ದೇವರಿಗೆ ಕೈ ಮುಗಿದು, ತಾಯೀ, ಇಂತಹವರಿಗೆ ಒಳ್ಳೆಯ ಬುದ್ದಿ ಕೊಡಮ್ಮಾ ಎಂದು ಕೇಳಿಕೊಂಡು ಸುಮ್ಮನೆ ಹೊರಬಂದಿದ್ದೆ

dc5ಮುರುಡೇಶ್ವರ ದೇವಸ್ಥಾನವು ಉತ್ತರಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲೊಂದಾಗಿದ್ದು. ಭಕ್ತರು ಬೇಡಿದ್ದನ್ನು ಈಡೇರಿಸುತ್ತಾನೆಂಬ ನಂಬಿಕೆ ಇರುವ ಒಂದು ಕಾರಣಿಕ ಸ್ಥಳವಾಗಿದ್ದು, ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯವನ್ನು ನೀಡುವ ಪುಣ್ಯಕ್ಷೇತ್ರವಾಗಿದೆ. ಇತ್ತೀಚೆಗೆ ಅಲ್ಲಿಗೆ ಹೋಗಿದ್ದಾಗ ವಸ್ತ್ರ ಸಂಹಿತೆಯ ಕುರಿತಾಗಿ ಆ ದೇವಸ್ಥಾನದಲ್ಲಿ ಹಾಕಿದ್ದ ಫಲಕವೊಂದು ಬಹಳ ಗಮನ ಸೆಳೆದಿತ್ತು. ದೇವಸ್ಥಾನದ ಪಾವಿತ್ರ್ಯವನ್ನು ಉಪಾಸನೆ ಮಾಡಿದರೆ ಮಾತ್ರ ಅಲ್ಲಿರುವ ದೈವತ್ವದ ಅನುಭವವನ್ನು ಪಡೆಯಬಹುದು. ಹಿಂದೂ ಸಂಸ್ಕೃತಿಯ ಪ್ರಕಾರ ಉಡುಪುಗಳನ್ನು ಧರಿಸುವುದರಿಂದ ಈಶ್ವರಿ ಚೈತನ್ಯದ ಲಾಭವಾಗುತ್ತದೆ ಮತ್ತು ದೇವತೆಯ ತತ್ವದ ಅನುಭೂತಿ ಬರುತ್ತದೆ. ಪಾಶ್ಚಾತ್ಯ ಉಡುಪುಗಳನ್ನು ಧರಿಸುವುದರಿಂದ ಮತ್ತು ಕೂದಲು ಬಿಚ್ಚಿಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ವಿದೇಶಿ ಸಂಸ್ಕೃತಿಯ ರಜ-ತಮ ಪ್ರಧಾನ ಉಡುಪುಗಳಿಂದ ದೇವಸ್ಥಾನದ ಸಾತ್ವಿಕತೆಗೆ ಭಂಗ ಉಂಟಾಗಿ ಭಾವಿಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದು ಅದರಲ್ಲಿ ತಿಳಿಸಲಾಗಿದೆ.

ಹಾಗೆಯೇ ಮುಂದುವರೆಸಿ ಅತ್ಯಂತ ಪವಿತ್ರ ಹಾಗೂ ಚೈತನ್ಯಮಯ ದೇವಸ್ಥಾನಗಳಲ್ಲಿ ಅವುಗಳ ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತರ ಆದ್ಯ ಕರ್ತವ್ಯವೇ ಆಗಿದೆ. ಅದುದರಿಂದ ಶ್ರೀಮುರುಡೇಶ್ವರ ದೇವಸ್ಥಾನದಲ್ಲಿ ಭಕ್ತರು ಸಾತ್ವಿಕ ಉಡುಪುಗಳನ್ನು ಧರಿಸಿ ಬರಬೇಕೆಂಬ ನಿಯಮವನ್ನು ಹಾಕಿ ಅದರ ಪಾವಿತ್ರ್ಯವನ್ನು ಕಾಪಾಡಬೇಕಾಗಿದೆ. ಈ ಮೂಲಕ ಎಲ್ಲಾ ಶ್ರದ್ಧಾಳು ಮತ್ತು ಮಹಿಳೆಯರು ಇಂತಹ ಧರ್ಮಜಾಗೃತಿಯ ಪ್ರಯತ್ನವನ್ನ ಪಾಲಿಸಿದರೆ ಮುರುಡೇಶ್ವರ ದೇವರ ಕೃಪೆಯು ನಿಶ್ಚಿತವಾಗಿಯೂ ನಮ್ಮೆಲ್ಲರ ಮೇಲಾಗುವುದು ಎಂದು ತಿಳಿಸಲಾಗಿದೆ ದೇವಾಲಯಕ್ಕೆ ಬರುವ ಪುರುಷರು ಧೋತಿ/ಪಂಚೆ ಅಥವಾ ಪ್ಯಾಂಟ್ ಧರಿಸಬಹುದು. ಮಹಿಳೆಯರು ಸೀರೆ ಅಥವಾ ಚೂಡಿದಾರ್ ಗಳನ್ನು ಮಾತ್ರವೇ ಧರಿಸಿ ದೇವಾಲಯಕ್ಕೆ ಬರಬೇಕು ಎಂಬುದಾಗಿ ತಿಳಿಸಲಾಗಿತ್ತು.

dc3ದಕ್ಷಿಣ ಕನ್ನಡದ ಬಹುತೇತ ದೇವಾಲಯಗಳಲ್ಲಿ ಕೇವಲ ವಸ್ತ್ರ ಸಂಹಿತೆಯಲ್ಲದೇ, ದೇವರ ದರ್ಶನಕ್ಕೆ ದೇವಾಲಯದ ಒಳಗೆ ಬರುವ ಗಂಡಸರಿಗೆ ಕೇವಲ ಬರೀ ಶರ್ಟು ಮಾತ್ರವಲ್ಲ ಬನಿಯನ್ ಕೂಡ ತೆಗೆದು ಹೋಗ ಬೇಕೆಂಬ ನಿಯಮವಿದೆ. ಅದೇ ರೀತಿ ಕೇರಳದ ಬಹುತೇಕ ದೇವಲಯ ಮತ್ತು ತಮಿಳುನಾಡಿನ ಕೆಲವು ದೇವಾಲಯಗಳಲ್ಲಿ ಗಂಡಸರು ಖಡ್ಡಾಯವಾಗಿ ಪಂಚೆಯನ್ನೇ ಧರಿಸಿ ದೇವಾಲಯವನ್ನು ಪ್ರವೇಶಿಸಬೇಕೆಂಬ ನಿಯಮವು ಶತ ಶತಮಾನಗಳಿಂದಲೂ ಜಾರಿಯಲ್ಲಿದೆ. ಈ ರೀತಿಯಾಗಿ ಸೂಕ್ತ ವಸ್ತ್ರಸಂಹಿತೆಯನ್ನು ಪಾಲಿಸಿಕೊಂದು ದೇವಾಲಯಗಳಿಗೆ ಹೋಗುವ ಹಿಂದಿರುವ ಉದ್ದೇಶಗಳನ್ನು ತಿಳಿದುಕೊಂಡಲ್ಲಿ ಖಂಡಿತವಾಗಿಯೂ ಯಾರೂ ಸಹಾ ಮುಂದೆ ದೇವಾಲಯಗಳಿಗೆ ಹೋಗುವಾಗ ಈ ನಿಯಮಗಳನ್ನು ಮೀರಿ ಹೋಗುವುದಿಲ್ಲ ಎನ್ನುವುದೇ ನನ್ನ ವಯಕ್ತಿಯ ಅಭಿಪ್ರಾಯವಾಗಿದೆ.

ಹಿಂದೂಗಳ ಪವಿತ್ರ ದೇವಾಲಯಗಳನ್ನು ನಿರ್ಮಿಸುವ ಮುನ್ನಾ ಸೂಕ್ತವಾದ ವಾಸ್ತು ತಜ್ಞರನ್ನು ಸಂಪರ್ಕಿಸಿ ವಾಸ್ತು ಶಾಸ್ತ್ರಾಧಾರಿತವಾಗಿ ಸರಿಯಾದ ಆಯವನ್ನು ಗುರುತಿಸಿ ಅದೇ ಪ್ರಕಾರವೇ ದೇವಾಲಯವನ್ನು ನಿರ್ಮಿಸಿವುದಲ್ಲದೇ, ನಂತರ ಗರ್ಭಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪನೇ ಮಾಡುವಾಗಲೂ ಸಹಾ ಸೂಕ್ತವಾದ ಸಮಯವನ್ನು ನೋಡಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ಶಾಸ್ತ್ರೋಕ್ತವಾಗಿ ನಿರ್ಮಿಸಿದ ದೇವಾಲಯಗಳಲ್ಲಿ ನಿತ್ಯ ನಡೆಯುವ ಪೂಜೆ ಪುನಸ್ಕಾರಳು, ಗಂಟಾನಾದ, ಲಯಬದ್ಧವಾದ ಮಂತ್ರೋಚ್ಚಾರಣೆಯಿಂದ ಧನಾತ್ಮಕ ಶಕ್ತಿಯು ಅಲ್ಲಿ ಉತ್ಪತ್ತಿಯಾಗುತ್ತದೆ.

ಗಂಡಸರುಗಳು ಮೇಲು ಉಡುವನ್ನು ತೆಗೆದು ದೇವಾಲಯದ ಗರ್ಭಗುಡಿಯನ್ನು ಪ್ರದಕ್ಷಿಣೆ ಹಾಕುವ ಮೂಲಕ ಹೆಚ್ಚಿನ ಧನಾತ್ಮಕ ಶಕ್ತಿಗಳನ್ನು ಪಡೆದುಕೊಳ್ಳುವಂತಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಅತ್ಯಂತ ಸುಲಭವಾಗಿ ತಿಳಿಸಬೇಕೆಂದರೆ, ನಾವು ಚಿಕ್ಕವರು ಇರುವಾಗ, ಬಾಚಣಿಗೆ ಇಲ್ಲವೇ ಸ್ಕೇಲ್ ತೆಗೆದುಕೊಂಡು ಅದನ್ನು ತಲೆಯ ಕೂದಲಿಗೆ ಕೆಲಕಾಲ ಉಜ್ಜಿ ನೆಲದ ಮೇಲಿರುವ ಕಾಗದ ಚೂರುಗಳ ಬಳಿ ಇರಿಸಿದಲ್ಲಿ, ಕಾಗದ ಚೂರುಗಳು ಆಯಸ್ಕಾಂತೀಯ ರೂಪದಲ್ಲಾ ಆ ಬಾಚಣಿಗೆ ಇಲ್ಲವೇ ಸ್ಕೇಲಿಗೆ ಅಂಟಿಕೊಳ್ಳುತ್ತವೆ. ಈಗ ಅದೇ ಪ್ರಯೋಗವನ್ನು ಪುರುಷರ ದೇಹದ ಗುಣಲಕ್ಷಣಗಳೊಂದಿಗೆ ಹೋಲಿಸಿದಲ್ಲಿ ಸುಲಭವಾಗಿ ಅರ್ಥವಾಗುತ್ತದೆ. ಸಾಮಾನ್ಯವಾಗಿ ಬಹುತೇಕ ಪುರುಷರು ತಮ್ಮ ಎದೆಯ ಭಾಗದಲ್ಲಿ ಹೆಚ್ಚಿನ ಕೂದಲನ್ನು ಹೊಂದಿರುತ್ತಾರೆ. ಹೀಗೆ ತಮ್ಮ ಮೇಲುಡುಪು ತೆಗೆಯುವ ಮೂಲಕ ಈ ಕೂದಲುಗಳು ತಮ್ಮ ಸುತ್ತ ಇರುವ ಧನಾತ್ಮಕ ಶಕ್ತಿಯನ್ನು ಸ್ವೀಕರಿಸಿ ನೇರವಾಗಿ ಹೃದಯಕ್ಕೆ ತಲುಪಿಸುತ್ತವೆ. ಅದೇ ರೀತಿಯಲ್ಲಿ ಎಲ್ಲರೂ ಸಹಾ ತಮ್ಮ ಕೈಗಳನ್ನು ಮೇಲಕ್ಕೆತ್ತಿ ದೇವರಿಗೆ ಸಮಸ್ಕಾರ _/\_ ಮಾಡುವಾಗಲೂ ಸಹಾ, ಕಂಕುಳಿನ ಕೆಳಗಿನ ಕೂದಲುಗಳಿಂದಲೂ ಸಕಾರಾತ್ಮಕ ಶಕ್ತಿಯನ್ನು ದೇಹಕ್ಕೆ ಹೀರಿಕೊಳ್ಳುವುದರಲ್ಲಿ ಸಹಕಾರಿಯಾಗಿದೆ.

dc4ಮತ್ತೊಂದು ಅಭಿಪ್ರಾಯದ ಪ್ರಕಾರ ದಕ್ಷಿಣ ಭಾರತದ ಬಹುತೇಕ ಪುರಾತನ ದೇವಾಲಯಗಳಲ್ಲಿ ಕೇವಲ ಹೆಬ್ಬಾಗಿಲ ಹೊರತಾಗಿ ಬೇರಾವ ಕಿಟಕಿ ಬಾಗಿಲುಗಳು ಇರದೇ ಇರುವ ಕಾರಣ ಅಲ್ಲಿನ ವಾತಾವರಣ ಬಹಳ ಬಿಸಿ ಮತ್ತು ಆದ್ರ ವಾತವರಣವಾಗಿರುತ್ತದೆ. ಅದರಲ್ಲೂ ಸಹಾ ಗರ್ಭಗುಡಿಯಲ್ಲಿ ದೀಪ ಮತ್ತು ದೂಪಗಳನ್ನು ಹೆಚ್ಚಾಗಿ ಹಚ್ಚುವ ಕಾರನ, ಇದು ಇನ್ನೂ ಹೆಚ್ಚಾಗಿರುತ್ತದೆ ಅಂತಹ ಸಂಧರ್ಭದಲ್ಲಿ ಗಂಡಸರು ತಮ್ಮ ಮೇಲು ಉಡುಪನ್ನು ತೆಗೆಯುವ ಮೂಲಕ ಸುಲಭವಾಗಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಬಹುದು ಎನ್ನುವುದನ್ನು ಸಹಾ ಒಪ್ಪಬಹುದಾಗಿದೆ. ಇದೇ ಕಾರಣದಿಂದಾಗಿಯೇ ದಕ್ಷಿಣ ಭಾರತದ ಅರ್ಚಕರು ಮೇಲುಡುಪನ್ನು ಧರಿಸುವುದಿಲ್ಲ. ಆದೇ ಉತ್ತರ ಭಾರತದಲ್ಲಿ ಹೆಚ್ಚಾಗಿ ತಣ್ಣನೆಯ ಪ್ರದೇಶವಾಗಿದ್ದು ವಾತಾವರಣ ಅತ್ಯಂತ ಶೀತಲಮಯವಾಗಿರುವುದರಿಂದ ಅಲ್ಲಿನ ಅರ್ಚಕರು ಮೇಲಂಗಿ ಧರಿಸಿಯೇ ದೇವರ ಪೂಜೆ ಮಾಡುತ್ತಾರೆ.

ಮತ್ತೊಂದು ಅಭಿಪ್ರಾಯದ ಪ್ರಕಾರ, ಊಟ ತನ್ನಿಷ್ಟ, ನೋಟ ಪರರ ಇಷ್ಟ ಎನ್ನುವ ಗಾದೆ ಮಾತಿನ ಅನ್ವಯ, ತಮ್ಮ ಗೌರವ ಕಾಪಾದಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಇತರರನ್ನು ಮೆಚ್ಚಿಸುವ ಸಲುವಾಗಿ ಚಂದನೆಯ ಬಟ್ಟೆಗಳನ್ನು ಧರಿಸುವ ಮೂಲರ ತಾವು ಎಲ್ಲರಿಗಿಂತಲೂ ಹೆಚ್ಚು ಎಂಬ ಮನೋಭಾವನೆಯನ್ನು ಬೆಳಸಿಕೊಂಡಿರುತ್ತಾರೆ. ಆದರೆ ಸರ್ವಶಕ್ತಿವಂತನಾದ ನಮ್ಮೆಲ್ಲರ ಜನನಕ್ಕೆ ಕಾರಣೀಭೂತನಾದ ಭಗವಂತನ ಮುಂದೆ ನಾವೆಲ್ಲರೂ ಸಣ್ಣವರಾಗಿದ್ದು, ತಮ್ಮ ಮೇಲರಿಮೆಯ ಗೌರವದ ಸಂಕೇತವಾಗಿ ತಮ್ಮ ಮೇಲಿನ ಉಡುಪನ್ನು ಎಲ್ಲರೂ ತೆಗೆದು ಹಾಕುವ ದೇವರ ಮುಂದೆ ಯಾವುದೇ ಮೇಲು ಕೀಳರಿಮೆ ಇಲ್ಲದೇ ಸಮಾನರು ಎನ್ನುವುದರ ದ್ಯೋತಕವಾಗಿದೆ ಎಂದರೂ ತಪ್ಪಾಗದು.

ಕೆಲ ದಿನಗಳ ಹಿಂದೇ ಇದೇ ವಿಷಯದ ಕುರಿತಾಗಿ ಆರೋಗ್ಯಕರವಾದ ಚರ್ಚೆ ನಡೆಯುತ್ತಿದ್ದ ಸಂಧರ್ಭದಲ್ಲಿ ದೇವಾಲಯದಲ್ಲಿ ಗಂಡಸರ ಮೇಲಿನ ಬಟ್ಟೆಯನ್ನು ಬಿಚ್ಚಿಸುವುದು ಅವರು ಬ್ರಾಹ್ಮಣರು ಹೌದೋ ಇಲ್ಲವೋ ಎಂಬುದನ್ನು ತಿಳಿಯುವುದಕ್ಕಾಗಿ. ಅವರು ಜನಿವಾರ ಧರಿಸಿದ್ದರೆ ಬ್ರಾಹ್ಮನರು ಇಲ್ಲದೇ ಹೋದಲ್ಲಿ ಶೂದ್ರರು ಎಂಬ ವಿತಂಡವಾದವನ್ನು ಮಾಡಿದಾಗ, ನಾನು ಅಷ್ಟೇ ನಿರ್ಲಿಪ್ತನಾಗಿ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರೂ ಯಜ್ಞೋಪವಿತವನ್ನು ಧಾರಣೆ ಮಾಡಬೇಕೆಂಬ ನಿಯಮವಿದ್ದು, ಕೇವಲ ಬ್ರಾಹ್ಮಣರಲ್ಲದೇ ಕ್ಷತ್ರಿಯರು, ವೈಶ್ಯರ ಅಲ್ಲದೇ ಇನ್ನೂ ಅನೇಕರು ಯಜ್ಞೋಪವಿತವನ್ನು ಧರಿಸುತ್ತಾರೆ. ಆ ರೀತಿಯಾಗಿ ಯಜ್ಞೋಪವಿತವನ್ನು ಧರಿಸುವವರು ನೇಮ ನಿಷ್ಠೆಗಳನ್ನು ಪಾಲಿಸಬೇಕು. ಹಾಗಾಗಿ ಸುಮ್ಮನೇ ಅಸಂಬದ್ಧವಾಗಿ ಮಾತಾನಾಡಿ ಅಳಿದುಳಿರುವ ಗೌರವವನ್ನೂ ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದೆ.

dc2ಹೀಗೆ ಹಿಂದೂಗಳ ಪ್ರತಿಯೊಂದು ಆಚರಣೆಗಳ ಹಿಂದೆಯೂ ವೈಜ್ಞಾನಿಕ ತರ್ಕವನ್ನು ಹೊಂದಿರುವ ಕಾರಣ ಹಿಂದೂಪರ ಸಂಘಟನೆಗಳು ಜನವರಿ 10, ಬುಧವಾರದಿಂದ ಬೆಂಗಳೂರಿನ ಎಲ್ಲಾ ದೇವಾಲಯಗಳಲ್ಲಿಯೂ ಪುರುಷರು ಮತ್ತು ಮಹಿಳೆಯರಿಗೆ ಡ್ರೆಸ್ ಕೋಡ್‌ಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಕೋರಿ ಫಲಕಗಳನ್ನು ಅಳವಡಿಸಲು ಪ್ರಾರಂಭಿಸಿದ್ದು, ದೇವಾಲಯದ ಆಡಳಿತ ಮಂಡಳಿಗೂ ಭಕ್ತಾದಿಗಳಲ್ಲಿ ಈ ಕುರಿತಂತೆ ಜಾಗೃತಿ ಮೂಡಿಸಲು ಕೇಳಿಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.

dc1ಹಿಂದೂಪರ ಸಂಘಟನೆಗಳು ನಿಗದಿ ಮಾಡಿರುವ ವಸ್ತ್ರ ಸಂಹಿತೆಯಂತೆ ಪುರುಷರು ಶಾರ್ಟ್ಸ್, ಡಿಸ್ಟ್ರೆಸ್ಡ್ ಜೀನ್ಸ್, ಟಿ-ಶರ್ಟ್ ಅನ್ನು ಧರಿಸಿದರೆ ಪ್ರವೇಶ ಸಿಗುವುದಿಲ್ಲ ಅದೇ ರೀತಿಯಲ್ಲಿ ಮಹಿಳೆಯರು ಎದೆಯನ್ನು ತೋರಿಸುವ ಬಟ್ಟೆಗಳಳು ಇಲ್ಲವೇ ಶಾರ್ಟ್ಸ್, ಮಿಡಿ ಮತ್ತು ಡಿಸ್ಟ್ರೆಸ್ಡ್ ಜೀನ್ಸ್ ಧರಿಸಿ ದೇವಾಲಯದ ಒಳಗೆ ಪ್ರವೇಶಿಸಬಾರದು ಎಂದು ಕೋರಿತುವುದು ಸ್ವಾಗತಾರ್ಹವಾಗಿದೆ.

dc6ದೇವರೇನು ಇಂತಹ ಬಟ್ಟೆಯಲ್ಲಿಯೇ ದೇವಾಲಯಗಳಿಗೆ ಬರಬೇಕು ಎಂದು ಹೇಳಿದ್ದಾರೆಯೇ? ಇಲ್ಲವೇ ಶಾಸ್ತ್ರ ಸಂಪ್ರದಾಯದಲ್ಲಿ ಹಾಗಿದೆಯೇ? ಎಂದು ವಿತಂಡ ವಾದ ಮಾಡುವ ಬದಲು, ಕ್ಯಾಸಿನೋ, ಪಾರ್ಟಿಗಳಿಗೆ ಹೋಗುವಾಗ ಹೇಗೆ ಅಲ್ಲಿನ Dress code ಅನುಸರಿಸುತ್ತೇವೆಯೋ ಅದೇ ರೀತಿ ಹಿಂದೂ ದೇವಾಲಯಗಳಿಗೆ ಹೋಗುವಾಗ ಸ್ವಾತ್ವಿಕ ಉಡುಪನ್ನು ಧರಿಸಿಕೊಂಡು ಹೋಗೋಣ ಮತ್ತು ದೇವಾಲಯದಲ್ಲಿ ಹೆಚ್ಚಿನ ಧನಾತ್ಮಕ ಅಂಶಗಳನ್ನು ಪಡೆದುಕೊಳ್ಳೊಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment