ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ

ಕರ್ನಾಟಕ ಎಂದರೆ ಥಟ್ ಅಂತಾ ನೆನಪಾಗೋದೇ ಶಿಲ್ಪಕಲೆಗಳ ಬೀಡು. ಬೇಲೂರು ಹಳೇಬೀಡು, ಹಂಪೆ, ಐಹೋಳೆ ಬದಮಿ, ಪಟ್ಟದ ಕಲ್ಲು, ಶ್ರವಣಬೆಳಗೊಳ, ಸೋಮನಾಥಪುರದಂತಹ ಸುಂದರವಾದ ಕಲ್ಲಿನ ಕೆತ್ತನೆಯ ಪ್ರದೇಶ. ಅದೇ ರೀತಿ ರಾಮಯಣ ಎಂದ ತಕ್ಷಣ ರಾಮ ಸೀತೆ ಲಕ್ಷ್ಮಣರ ಜೊತೆ ನೆನಪಾಗೋದೇ ರಾಮನ ಪರಮ ಭಕ್ತ ರಘುವೀರ ಸಮರ್ಥ ಹನುಮಂತ. ಹೀಗೆ ಭಾರತ ದೇಶ ಅಸ್ಮಿತೆ ಮತ್ತು ಅಸ್ತಿತ್ವದೊಂದಿಗೆ ಕರ್ನಾಟಕದ ಅವಿನಾಭಾವ ಸಂಬಂಧ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆ ಆಗುತ್ತಿರುವ ಶುಭ ಸಂಧರ್ಭದಲ್ಲಿಿ ಅಂದಿನಿಂದ ಆ ಭವ್ಯ ಮಂದಿರದಲ್ಲಿ ವಿರಾಜಮಾನವಾಗುತ್ತಿರುವ ಕೃಷ್ಣವರ್ಣದ ಸಾಲಿಗ್ರಾಮ ಶಿಲೆಯು ಕರ್ನಾಟಕದಿಂದಲೇ ತೆಗೆದುಕೊಂಡು ಹೋಗಿದ್ದು ಮುದ್ದು ಮುಖದ ಹಸನ್ಮುಖಿ ಧನುರ್ಧಾರಿ ಪ್ರಭು ಶ್ರೀರಾಮನನ್ನು ಕೆತ್ತಿದ ಶ್ರೀ ಅರುಣ್ ಯೋಗಿರಾಜ್ ಸಹಾ ಕರ್ನಾಟಕದವರೇ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಶ್ರೀರಾಮನ ವಿಗ್ರಹಕ್ಕೆ ಕಲ್ಲು ಸಿಕ್ಕಿದ್ದು ಹೇಗೆ ಎಂಬುದರ ಸಂಪೂರ್ಣ ವಿವರಗಳು ಇದೋ ನಿಮಗಾಗಿ

shile1ಸಾಮನ್ಯವಾಗಿ ಯಾವುದೋ ಬೇಡವಾದ ವಸ್ತುವಿಗೆ ಇದ್ದಕ್ಕಿದ್ದಂತೆಯೇ ಅತ್ಯಂತ ಹೆಚ್ಚಿನ ಬೆಲೆ ಸಿಕ್ಕಿದಾಗ, ಹೇ ನೋಡಪ್ಪಾ ಕಲ್ಲಿಗೂ ಚಿನ್ನದ ಬೆಲೆ ಬಂದಿದೆ ಎಂದು ಹೇಳುವುದು ಸಹಜ ವಾಡಿಕೆಯಾಗಿದೆ. ಅದೇ ರೀತಿಯಲ್ಲೇ, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಶ್ರೀ ರಾಮನ ಮೂರ್ತಿಯ ಕೆತ್ತನೆಗೆ ಬಳಸಲಾದ ಕೃಷ್ಣಶಿಲೆಯೂ ಒಂದು ಕಾಲದಲ್ಲಿ ಆ ಭೂಮಿಯ ಮಾಲಿಕರಿಗೆ ಬೇಡವಾದ ವಸ್ತುವಾಗಿತ್ತು ಎಂದು ಹೇಳಿದರೆ ಅಚ್ಚರಿ ಎನಿಸುತ್ತದೆ ಅಲ್ವೇ? ಹೌದು ನಿಜ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಸಮೀಪದ ಗುಜ್ಜೇಗೌಡನಪುರ ರವಿ ಎನ್ನುವವರ ಜಮೀನಿನ ಮಧ್ಯೆ ಬೃಹತ್ ಗಾತ್ರದ ಬಂಡೆಯೊಂದು ಇದ್ದು ಅದು ಅವರ ಕೃಷಿ ಚಟುವಟಿಕೆಗೆ ಅಡ್ಡಿಯನ್ನು ಮಾಡುತ್ತಿತ್ತು. ಇರುವುದೇ ಅಂಗೈಯಗಲದ ಜಾಗ ಅದರಲ್ಲೂ ಈ ದೊಡ್ಡ ಬಂಡೆ. ಛೇ ನಮಗೇ ಹೀಗೆ ಆಗಬೇಕೆ? ಎಂಬ ಬೇಸರದಿಂದ ಹೇಗಾದರೂ ಮಾಡಿ ಆ ಬಂಡೆಯನ್ನು ಒಡೆಸಿ ಭೂಮಿಯನ್ನು ಸಮತಟ್ಟು ಮಾಡಿ ಕೃಷಿ ಚಟುವಟಿಕೆಗೆ ಉಪಯೋಗಿಸಿ ಕೊಳ್ಳಬೇಕು ಎಂಬ ಆಲೋಚನೆ ಮಾಡುತ್ತಿದ್ದ ಸಂಧರ್ಭದಲ್ಲಿಯೇ ಅವರಿಗೆ ಗ್ರಾನೈಟ್ ವ್ಯವಹಾರವನ್ನು ಮಾಡುವ ಶ್ರೀನಿವಾಸ್ ಎಂಬ ತಮ್ಮ ಸ್ನೇಹಿತನ ನೆನಪಾಗಿ, ಅವರಿಗೆ ಕರೆ ಮಾಡಿ ದಯವಿಟ್ಟು  ಈ ಬಂಡೆಯನ್ನು ತಮ್ಮ ಜಮೀನಿನ ಮಧ್ಯದಿಂದ ಹೊರ ತೆಗೆದು ತಮ್ಮ ಜಮೀನನ್ನು ಸಮತಟ್ಟು ಮಾಡಿಕೊಟ್ಟಲ್ಲಿ ತಾವು ಅಲ್ಲಿ ಉಳುಮೆ ಮಾಡಿ, ಬೇಸಾಯ ಮಾಡುತ್ತೇವೆ ಎಂದು ಕೇಳಿಕೊಳ್ಳುತ್ತಾರೆ. ಗೆಳೆಯನ ಮನವಿಗೆ ಸ್ಪಂದಿಸಿದ ಶ್ರೀನಿವಾಸ್ ಅವರೂ ಸಹಾ ಬಂಡೆಯನ್ನು ಕತ್ತರಿಸಲು ಅಗತ್ಯವಿರುವ ಯಂತ್ರೋಪಕರಣಗಳನ್ನು ತಂದು ಆ ಬೃಹತ್ ಬಂಡೆಯನ್ನು ಮೂರು ಭಾಗಗಳಾಗಿ ಆ ಕಲ್ಲುಗಳನ್ನು ಅದೇ ಜಮೀನಿನ ಒಂದು ಬದಿಗೆ ಸರಿಸಿ ಉಳುಮೆ ಮಾಡಲು ಅನುವಾಗುವಂತೆ ಭೂಮಿಯನ್ನು ಸಮತಟ್ಟು ಮಾಡಿಕೊಟ್ಟಾಗಲೂ ಕಲ್ಲಿನ ಮಾಲಿಕ ರವಿಯವರಿಗಾಗಲೀ ಕಲ್ಲನ್ನು ಕತ್ತರಿಸಿದ ಶ್ರೀನಿವಾಸ್ ಅವರಿಗಾಗಲಿ ಆ ಕಲ್ಲಿನ ಮಹತ್ವದ ಅರಿವಿರಲಿಲ್ಲ.

ಜಮೀನಿನ ಪಕ್ಕದದಲ್ಲಿ ಸುಮ್ಮನೆ ಬಿದ್ದ ಕಲ್ಲನ್ನು ಯಾವುದಾದರೂ ಶಿಲ್ಪಿಗಳಿಗೆ ಕೊಟ್ಟಲ್ಲಿ ಸುಂದರವಾದ ಮೂರ್ತಿಯನ್ನು ಕೆತ್ತಬಹುದು ಎಂದು ಊರಿನವರೊಬ್ಬರ ಕೊಟ್ಟ ಸಲಹೆಯಂತೆ ಒಳ್ಳೆಯ ಶಿಲ್ಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ. ಕೊಪ್ಪಳದ ಶಿಲ್ಪಿಗಳಾದ ಶ್ರೀ ಪ್ರಕಾಶ್ ಅವರಿಗೆ ರಾಯಚೂರು ಮೂಲದವರೊಬ್ಬರು ಶ್ರೀ ವಿಜಯದಾಸರ ಮೂರ್ತಿ ತಯಾರಿಸಲು ಹೇಳಿರುತ್ತಾರೆ. ಆ ಮೂರ್ತಿಯಾಗಿ ಶಿಲೆಯನ್ನು ಹುಡುಕುತ್ತಿರುವ ವಿಷಯ ತಿಳಿದ ಶ್ರೀನಿವಾಸ್ ಅವರನ್ನು ಸಂಪರ್ಕಿಸಿದಾಗ, ಪ್ರಕಾಶ್ ಅವರು ತಮ್ಮ ಮಕ್ಕಳೊಂದಿಗೆ ಆ ಸ್ಥಳಕ್ಕೆ ಹೋಗಿ ಕಲ್ಲನ್ನು ಪರೀಕ್ಷಿಸಿ ಬಹಳ ಸಂತೋಷ ಪಟ್ಟರೂ ಅವರು ಕೆತ್ತನೆ ಮಾಡಲು ಮುಂದಾಗಿದ್ದ ಭವ್ಯವಾದ ಮೂರ್ತಿಗೆ ಅಗತ್ಯವಿದ್ದಷ್ಟು ಉದ್ದ ಇಲ್ಲ ಎನ್ನುವ ಕಾರಣದಿಂದ ಆ ಬಂಡೆಯನ್ನು ಖರೀಧಿಸಲಿರಲಿಲ್ಲ.

shilpi2ಕೊಪ್ಪಳದ ಖ್ಯಾತ ಶಿಲ್ಪ ಕಲಾವಿದ ಪ್ರಕಾಶ ಅವರು ತಂದೆಯವರೂ ಸಹಾ ಮಹಾನ್ ಶಿಲ್ಪಿಗಳಾಗಿದ್ದು ಅವರು ಹನುಮಂತನ ಭಕ್ತರಾಗಿದ್ದರು, ಅವರು ನಿಧನದರಾದ ನಂತರ 2007 ರಿಂದಲೂ ಪ್ರಕಾಶ್ ಅವರು ಪ್ರತಿನಿತ್ಯವೂ ಒಂದು ಹನುಮನ ಮೂರ್ತಿ ತಯಾರಿಸಿ ಆದರ ಪೂಜೆಯ ನಂತರವೇ ಅವರು ಊಟ ಮಾಡುವ ಸಂಕಲ್ಪವನ್ನು ರೂಢಿಯಲ್ಲಿಟ್ಟು ಕೊಂಡಿರುತ್ತಾರೆ. ಹೇಗೂ ಹಾರೋಹಳ್ಳಿಗೆ ಬಂದ್ದದ್ದಾಗಿದ್ದ ಕಾರಣ, ಅದೇ ಕಲ್ಲಿನಲ್ಲೊಂದು ಸಣ್ಣದಾದ ಆಂಜನೇಯನ ಪ್ರತಿಮೆಯನ್ನು ಕೆತ್ತಿ ಅದಕ್ಕೆ ಪೂಜೆ ಸಲ್ಲಿಸಿ ತಮ್ಮ ಊಟವನ್ನು ಮಾಡಿರುತ್ತಾರೆ. ಆ ರೀತಿಯಾಗಿ ಇದುವರೆವಿಗೂ 6141 ಮೂರ್ತಿಗಳನ್ನು ಕೆತ್ತಿರುವ ಹೆಗ್ಗಳಿಗೆ ಶ್ರೀ ಪ್ರಕಾಶ್ ಅವರದ್ದಾಗಿದೆ.

ಆದಾದ ಕೆಲವು ದಿನಗಳ ನಂತರ ಗುತ್ತಿಗೆದಾರ ಶ್ರೀನಿವಾಸ್ ಅವರಿಗೆ ಕಲ್ಲಿನ ಶಿಲ್ಪಗಳನ್ನು ಮಾಡುವ ಮತ್ತೊಬ್ಬ ಶಿಲ್ಪಿ ಶ್ರೀ ಮಾನಯ್ಯ ಬಡಿಗಾರ್ ಅವರ ಪರಿಚಯವಾಗಿ ಅವರು ಆ ಪ್ರದೇಶಕ್ಕೆ ಬಂದು ಅ ಕಲ್ಲನ್ನು ನೋಡಿದ ಕೂಡಲೇ ಅತ್ಯಂತ ಸಂತೋಷ ಪಟ್ಟು ಮೇಲ್ನೋಟಕ್ಕೆ ಈ ಕಲ್ಲು ದೇವರ ವಿಗ್ರಹಗಳನ್ನು ಕೆತ್ತಲು ಬಹಳ ಸೂಕ್ತವಾಗಿದೆ ಎಂಬ ಅಭಿಪ್ರಾಯ ಪಟ್ಟಿದ್ದಲ್ಲದೇ, ಅದನ್ನು ಅಧಿಕೃತವಾಗಿ ಪರಿಶೀಲಿಸುವ ಸಲುವಾಗಿ ಆ ಬಂಡೆಯ ತುಣುಕೊಂದನ್ನು ವೈಜ್ಞಾನಿಕ ಪರಿಶೀಲನೆಗಾಗಿ ಕೋಲಾರದ ಚಿನ್ನದ ಗಣಿ ಪ್ರದೇಶ ಕೆಜಿಎಫ್ ನಲ್ಲಿ ಇರುವ ಸರ್ಕಾರಿ ಸ್ವಾಮ್ಯದ Indian Institute of Rock Management Dept (IIRMD)ಗೆ ಕಳುಹಿಸಿ, ಆ ಕಲ್ಲಿನಿಂದ ವಿಗ್ರಹ ಕೆತ್ತಿದ ನಂತರ ಆ ವಿಗ್ರಹಕ್ಕೆ ವಿವಿಧ ರೀತಿಯ ವಸ್ತುಗಳಿಂದ ಪೂಜೆ ಮಾಡಿದಾಗ, ವಿವಿಧ ವಸ್ತುಗಳಿಮ್ದ ಅಭಿಷೇಕವನ್ನು ಮಾಡಿದಾಗ, ಆ ಶಿಲ್ಪದ ಮೇಲಾಗುವ ರಾಸಾಯನಿಕ ಬದಲಾವಣೆ ವಿವರಗಳ ಜೊತೆ ಅ ಶಿಲ್ಪ ವಿವಿಧ ಹವಾಮಾನದಲ್ಲಿ ಹೇಗೆ ಇರುತ್ತದೆ ಆಗುವುದು, ಎಂಬುದಾಗಿ ಕಂಡುಹಿಡಿಯುವಂತೆ ಕೇಳಿಕೊಂಡರು ಅವರ ಕೋರಿಕೆಯಂತೆ ಆ IIRMD ಯವರು ನೀಡಿದ ವರದಿಯಂತೆ ಈ ಬಂಡೆಯಲ್ಲಿ ವಿಗ್ರಹಗಳನ್ನು ತಯಾರು ಮಾಡಲು ತುಂಬಾ ಯೋಗ್ಯವಾಗಿದೆ ಎಂಬ ವರದಿ ಬಂದಿದ್ದು ಅವರಿಗೆ ತುಂಬಾ ಸಂತೋಷವನ್ನು ತರಿಸಿತ್ತು.

ಇದೇ ಸಮಯದಲ್ಲಿಯೇ ಅಯೋಧ್ಯೆಯಲ್ಲಿನ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದ್ದ ರಾಮಲಲ್ಲನ ಮೂರ್ತಿಯನ್ನು ಕೆತ್ತಲು ದೇಶಾದ್ಯಂತ ಸುಮಾರು ಹತ್ತಕ್ಕೂ ಹೆಚ್ಚಿನ ಖ್ಯಾತ ಶಿಲ್ಪಿಗಳನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅವರು ಸಂಪರ್ಕಿಸಿ ಅಂತಿಮವಾಗಿ ಕರ್ನಾಟಕದ ಇಬ್ಬರು ಮತ್ತು ರಾಜಸ್ಥಾನದ ಒಬ್ಬರನ್ನು ಆಯ್ಕೆ ಮಾಡಿದ್ದರು. ಹಾಗೆ ಆಯ್ಕೆಯಾದ ಮೂವರರಲ್ಲಿ ಈಗಾಗಲೇ ಕೇದಾರನಾಥದ ಶ್ರೀ ಶಂಕರಾಚಾರ್ಯರ ಪ್ರತಿಮೆ ಮತ್ತು ದೆಹಲಿಯ ಕರ್ತವ್ಯಪಥದ ಶ್ರೀ ಸುಬಾಷ್ ಚಂದ್ರಬೋಸ್ ಅವರ ಪ್ರತಿಮೆಯನ್ನು ಕೆತ್ತಿದ್ದ ಮೈಸೂರಿನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಸಹಾ ಒಬ್ಬರಾಗಿದ್ದು ಅವರಿಗೆ ಇಲ್ಲಿನ ಕಲ್ಲಿನ ವಿಚಾರ ಮತ್ತು IIRMD ವರದಿಯನ್ನು ತೋರಿಸಿದಾಗ ಅವರು ಅ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ ಖುದ್ದಾಗಿ ಆ ಬಂಡೆಯನ್ನೊಮ್ಮೆ ಪರೀಕ್ಷಿಸಿ ಸಂತೋಷದಿಂದ ಅಯೋಧ್ಯೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಿದ್ದಲ್ಲದೇ ಅಲ್ಲಿ ಆಯ್ಕೆಯಾದ ಮೂವರು ಶಿಲ್ಪಿಗಳು ತಮ್ಮ ಕಲ್ಪನೆಯ ರೂಪದಲ್ಲಿ ರಾಮಲಲ್ಲನ ಕೆತ್ತನೆಯನ್ನು ಮಾಡಲು ಮುಂದಾಗಿದ್ದರೂ ಸಹಾ, ಹೆಗ್ಗಡದೇವನ ಕೋಟೆಯ ಕಲ್ಲನಿವ ವಿಷಯವನ್ನು ಮಾತ್ರಾ ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು.

arun+yogiರಾಮ ಮಂದಿರದ ಉದ್ಘಾಟನೆಗೆ ಕೇವಲ ಹತ್ತು ದಿನ ಬಾಕಿ ಇದೆ ಎನ್ನುವಾಗ, ಆ ಮೂವರು ಶಿಲ್ಪಿಗಳಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ್ದ ವಿಗ್ರಹವನ್ನೇ ಅಧಿಕೃತವಾದ ವಿಗ್ರಹ ಎಂದು ಜಗಜ್ಜಾಹೀರಾತು ಪಡಿಸುತ್ತಿದ್ದಂತೆಯೇ, ಶ್ರೀ ರಾಮಲಲ್ಲಾ ಮೂರ್ತಿಯನ್ನು ನಿರ್ಮಿಸಿದ ಶಿಲ್ಪಿ ಮತ್ತು ಆ ಪ್ರತಿಮೆಯ ಶಿಲೆಯು ಮೈಸೂರಿನದ್ದು ಎಂಬ ವಿಷಯ ಬಹಿರಂಗವಾಗಿದ್ದೇ ತಡಾ, ಹಾರೋಹಳ್ಳಿಯ ಸುತ್ತಮುತ್ತಲಿನವರಲ್ಲದೇ ರಾಜ್ಯದ ಅನೇಕ ಕಡೆಯ ಜನರು ಆ ಬಂಡೆ ದೊರೆತ ಪವಿತ್ರ ಜಮೀನಿನ ಕಡೆ ಧಾವಿಸತೊಡಗಿದ್ದಲ್ಲದೇ, ಆ ಶಿಲೆ ದೊರೆತ ಜಮೀನನ್ನು ಬಹಳ ಭಕ್ತಿ ಭಾವನೆಯಿಂದ ಪೂಜ್ಯ ಭಾವನೆಯಿಂದ ನೋಡಲು ಆರಂಭಿಸಿದ್ದರು.

harohalli4ಇದೇ ಸಮಯದಲ್ಲಿಯೇ ಮೈಸೂರು ಅರಮನೆಯ ರಾಜಪುರೋಹಿತರಾದ ಶ್ರೀ ಪ್ರಹ್ಲಾದ್ ರಾವ್ ಮತ್ತವರ ಅ ಪ್ರದೇಶಕ್ಕೆ ಆಗಮಿಸಿ ಜಮೀನಿನ ಮಾಲಿಕರು, ಆ ಬಂಡೆಯನ್ನು ತೆಗೆದ ಗುತ್ತಿಗೆದಾರರು ಮತ್ತು ಅಲ್ಲಿನ ಜನರ ಸಮ್ಮುಖದಲ್ಲಿ ಗೋಧೂಳಿ ಲಗ್ನದಲ್ಲಿ ರಾಮದೇವರಿಗೆ ವಿಶೇಷ ಅಲಂಕಾರ ಮಾಡಿ ಹೋಮ, ರಾಮ ಭಜನೆ ಸೇರಿದಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೂಜಾ ಕಾರ್ಯಗಳನ್ನು ನೆರವೇರಿಸಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯವೆಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆ ಎಲ್ಲವೂ ನಡೆದ ನಂತರ ಶ್ರೀರಾಮನವಮಿಯಂತೆ ಪ್ರಸಾದ, ಪಾನಕ ಕೋಸಂಬರಿ ಮತ್ತು ಮಜ್ಜಿಗೆಯ ವಿತರಣೆಯನ್ನು ಮಾಡಿದ್ದಾರೆ.

ಹಾರೋಹಳ್ಳಿಯ ಬಂಡೆ ದೊರೆತ ಆ ಜಮೀನಿನ ಮಾಲಿಕರಾದ ಶ್ರೀ ಹನುಮಯ್ಯನವರ ಪುತ್ರರಾದ ರಾಮದಾಸ್ ಅವರು ಮಾತನಾಡಿ ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ಮೂರ್ತಿಯನ್ನು ತಮ್ಮ ಪೂರ್ವಜರಿಂದ ಬಂದ ಜಮೀನಿನಲ್ಲಿ ದೊರೆತ ಶಿಲೆಯಿಂದ ಕೆತ್ತನೆಯಾಗಿರುವುದು ನಮ್ಮೆಲ್ಲರ ಪೂರ್ವ ಜನ್ಮದ ಸುಕೃತ ಎಂದು ಬಣ್ಣಿಸಿದ್ದಾರೆ. ಸಹಸ್ರಾರು ವರ್ಷಗಳಿಂದಲೂ ಅನಾಥವಾಗಿ ಆ ಜಮೀನಿನಲ್ಲಿದ್ದ ಆ ಕೃಷ್ಣ ಶಿಲೆ ಆರಂಭದಲ್ಲಿ ಜಮೀನಿನ ಮಾಲೀಕರ ಉಳುಮೆಗೆ ಅಡ್ಡಿಯಾದ ಪರಿಣಾಮ ಅವರ ಕೋಪಕ್ಕೆ ಗುರಿಯಾಗಿದ್ದ ಕಲ್ಲಿಗೆ ಇಂದು ಏಕಾ ಏಕಿ ದೈವೀಸ್ವರೂಪ ಬಂದಿರುವುದನ್ನು ನೋಡಿದಾಗ ತುಳಸೀದಾಸರು ತಮ್ಮ ರಾಮಚರಿತ ಮಾನಸದಲ್ಲಿ ಬರೆದಿರುವ ದಾನೇ ದಾನೇ ಪರ್ ಲಿಖಾ ಹೋತಾ ಹೈ ಖಾನೇವಾಲೋಂಕಾ ನಾಮ್ ಅರ್ಥಾತ್ ಪ್ರತಿಯೊಂದು ಅಕ್ಕಿಯ ಕಾಳಿನ ಮೇಲೂ ಸಹಾ ಅದನ್ನು ತಿನ್ನುವವರ ಹೆಸರು ಬರೆದಿರುತ್ತದೆ ಎನ್ನುವಂತೆ, ಭಗವಂತ ಪ್ರತಿಯೊಂದು ಕಲ್ಲಿನ ಮೇಲೆಯೂ ಅದರ ಮೌಲ್ಯವನ್ನು ಬರೆದಿರುತ್ತಾನೆ ಎಂದರೂ ಅತಿಶಯವಾಗದು.

harohalli3ಇವೆಲ್ಲದರ ನಡುವೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಅಯೋಧ್ಯೆಯ ಬಾಲ ರಾಮನ ಮೂರ್ತಿ ಕೆತ್ತನೆಗೆ ಕಪ್ಪು ಶಿಲೆ ದೊರೆತ ಜಮೀನಿನ ಮಾಲಿಕರ ನಡುವೆ ಮಾತುಕತೆ ನಡೆದುದ್ದು ಈಗ ಆ ಜಾಗದಲ್ಲೇ ಅದೇ ಜನವರಿ 22 ರಂದೇ ಶ್ರೀರಾಮನ ಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ಮಾಡಿ ಎಲ್ಲರಿಂದಲೂ ದೇಣಿಗೆಯನ್ನು ಸಂಗ್ರಹಿಸಿ ಎಲ್ಲರ ಸಹಕಾರದಿಂದ ಅಲ್ಲೊಂದು ಸುಂದರವಾದ ರಾಮ ಮಂದಿರವನ್ನು ಕಟ್ಟಲು ಮುಂದಾಗಿದ್ದು, ಅಲ್ಲಿನ ಪ್ರತಿಮೆಯನ್ನೂ ಸಹಾ ಅರುಣ್ ಬಾಲರಾಜ್ ಅವರ ಕೈಯ್ಯಿಂದಲೇ ನಿರ್ಮಾಣ ಮಾಡಿಸಲು ಯೋಜಿಸಲಾಗಿದೆ. ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಶಿಲೆ ದೊರೆತ ಜಮೀನಿನ ಮಾಲೀಕರು, ಆ ಶಿಲೆಯನ್ನು ಹೊರತೆಗೆದ ಗುತ್ತಿಗೆದಾರ ಶ್ರೀನಿವಾಸ ಮತ್ತು ಅವರ ತಂಡದವರನ್ನು ಕೆಲದಿನಗಳಲ್ಲಿಯೇ ಅಯೋಧ್ಯೆಗೆ ಕಳುಹಿಸಿ ಅಲ್ಲಿ ಅವರಿಗಾಗಿಯೇ ವಿಶೇಷ ಪೂಜಾವನ್ನು ನರವೇರಿಸುವ ಸಂಕಲ್ಪವನ್ನೂ ಮಾಡಲಾಗಿದೆ.

harohalli1ಆ ಹಾರೋಹಳ್ಳಿಯಲ್ಲಿ ದಲಿತ ಸಮುದಾಯದ ಜಮೀನು ಮಾಲೀಕರು ತಮ್ಮ ಸಂತೋಷದಿಂದ ಉಚಿತವಾಗಿ ತಮ್ಮ ಕೃಷಿ ಜಮೀನನ್ನೇ ರಾಮ ಮಂದಿರಕ್ಕೆ ಕೊಡಲು ಒಪ್ಪಿರುವುದು ನಿಜಕ್ಕೂ ಸೌಹಾರ್ಧತೆಯ ಪ್ರತೀಕವಾಗಿದ್ದು ಕೇಳಿಸದೇ ಕಲ್ಲು ಕಲ್ಲಿನಲೂ ಕನ್ನಡ ನುಡಿ ಎಂಬ ಹಾಡಿನಂತೆ ಇನ್ನು ಮುಂದೆ ಅಯೋಧ್ಯೆಯ ಪ್ರಭು ಶ್ರೀರಾಮನ ಮಂದಿರದಲ್ಲಿ ಕೃಷ್ಣವರ್ಣದ ಧನುರ್ಧಾರಿ ಬಾಲ ರಾಮನನ್ನು ನೋಡಿದಾಗಲೆಲ್ಲಾ, ಆ ಶಿಲೆ ಮತ್ತು ಶಿಲ್ಪಿಯ ಜೊತೆ ಕರ್ನಾಟಕ ಮತ್ತು ಕನ್ನಡದ ಸೊಗಡು ಆಚಂದ್ರಾರ್ಕವಾಗಿರುತ್ತದೆ ಅಂದ್ರೂ ತಪ್ಪಾಗದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment