ಮೊನ್ನೆ ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ಸುಮಾರು 500 ವರ್ಷಗಳ ಸತತ ಹೋರಾಟದ ನಂತರ ಪ್ರಭು ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣವಾಗಿದ್ದು ಅಲ್ಲಿ ಬಾಲರಾಮ ಅರ್ಥತ್ ರಾಮಲಲ್ಲನ ಸುಂದರವಾದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗಿದ್ದನ್ನು ಇಡೀ ಪ್ರಪಂಚವೇ ನಿಬ್ಬೆರಗಾಗಿ ನೋಡಿ ಸಂಭ್ರಮಿಸಿದ್ದಲ್ಲದೇ, ಪ್ರಪಂಚಾದ್ಯಂತ ಈ ಪುಷ್ಟ್ಯ ಮಾಸದಲ್ಲಿಯೇ ರಾಮನವಮಿ ಮತ್ತು ದೀಪಾವಳಿಯನ್ನು ಏಕಕಾಲದಲ್ಲಿ ಆಚರಿಸಿ ಸಂಭ್ರಮಿಸಿದೆ ಎಂದರೂ ತಪ್ಪಾಗದು. ಪ್ರಭು ಶ್ರೀರಾಮನನ್ನು ಕಣ್ತುಂಬಿಸಿಕೊಂಡು ಆತನ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಪ್ರತಿದಿನವೂ ಅಯೋಧ್ಯೆಗೆ ಹೋಗುತ್ತಿರುವ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಗೆ ಎಲ್ಲರೂ ಹೋಗಲು ಸಾಧ್ಯವಿಲ್ಲದ ಕಾರಣ, ತ್ರೇತಾಯುಗದಲ್ಲಿ ರಾವಣನ್ನು ಸಂಹರಿಸಿ ಸೀತಾದೇವಿಯೊಂದಿಗೆ ಪ್ರಭು ಶ್ರೀರಾಮನ ಪಟ್ಟಾಭಿಷೇಕವಾದಂತಹ ಸಂದರ್ಭದಲ್ಲಿ ಇದ್ದಂತಹ ಅದೇ ಭಂಗಿಯಲ್ಲೇ ಇರುವ ಸುಗ್ರೀವನಿಂದ ಪ್ರತಿಷ್ಠಾಪನೆ ಆಗಿರುವ ಶ್ರೀ ಪಟ್ಟಾಭಿರಾಮ ಮತ್ತು ಶ್ರೀ ರಾಮಚಂದ್ರನಿಂದಲೇ ಪ್ರತಿಸ್ಥಾಪಿಸಲ್ಪಟ್ಟಿರುವ ಶ್ರೀ ರಾಮೇಶ್ವರನನ್ನು ಬೆಂಗಳೂರಿನಿಂದ ಕೇವಲ 60 ಕಿ.ಮೀದೂರದಲ್ಲಿರುವ ರಾಮನಗರದ ಶ್ರೀ ರಾಮದೇವರ ಬೆಟ್ಟವನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ನೋಡೋಣ ಬನ್ನಿ.
ಬೆಂಗಳೂರಿನಿಂದ ಮೈಸೂರು ಕಡೆಯ ರಸ್ತೆಯಲ್ಲಿ ಬಿಡದಿ ದಾಟುತ್ತಿದ್ದಂತೆಯೇ ಸಿಗುವ ಪಟ್ಟಣವೇ ರೇಷ್ಮೆಯ ನಾಡು ಎಂದೇ ಪ್ರಖ್ಯಾತವಾದ ರಾಮನಗರ. ಕರ್ನಾಟಕದ ರಾಜಕೀಯದಲ್ಲಿ ಸದಾಕಾಲವೂ ಬಹಳ ಪ್ರಮುಖ ಪಾತ್ರವಹಿಸುವ ಈ ರಾಮನಗರಕ್ಕೆ ಐತಿಹಾಸಿಕ ಮತ್ತು ಪೌರಾಣಿಕವಾಗಿಯೂ ಹಿನ್ನಲೆ ಇದ್ದು, ಪುರಾಣ ಕಾಲದಲ್ಲಿ ಈ ಪ್ರದೇಶ ರಾಮಗಿರಿ, ಶಿವರಾಮಗಿರಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು ಎನ್ನಲಾಗಿದ್ದು, ತ್ರೇತಾಯುಗದಲ್ಲಿ ಶ್ರೀರಾಮ ದೇವರು ವನವಾಸಕಾಲದಲ್ಲಿ ಸೀತಾ ಲಕ್ಷ್ಮಣ ಸಮೇತರಾಗಿ ಅ ಊರಿನ ದಿಕ್ಕಿನಲ್ಲಿ 5 ಕಿ.ಮೀ. ದೂರದಲ್ಲೇ ಇರುವ ಬೆಟ್ಟದ ಮೇಲೆ ಕೆಲ ಕಾಲ ನೆಲಸಿದ ಕಾರಣ, ಅದು ರಾಮರಬೆಟ್ಟ ಎಂದೇ ಪ್ರಖ್ಯಾತವಾಗಿ ಆ ರಾಮರ ಬೆಟ್ಟದಿಂದಾಗಿ ಈ ಪ್ರದೇಶ ರಾಮನಗರ ಎಂದು ಪ್ರಖ್ಯಾತವಾಯಿತು ಎಂಬ ನಂಬಿಕೆ ಇದೆ.
ಬೆಂಗಳೂರಿನಿಂದ ಮೈಸೂರು ಎಕ್ಸಪ್ರೆಸ್ ರಸ್ತೆಯಿಂದ ಬಲ ಭಾಗಕ್ಕೆ ತಿರುಗಿ ಸುಮಾರು ಮೂರ್ಲಾಲ್ಕು ಕಿಮೀ ದೂರದ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದಂತೆಯೇ ಕೊಂಕಾಣಿ ಬುಡಕಟ್ಟಿನ ಸಣ್ಣ ಸಣ್ಣ ಮನೆ ಮುಂದೆ ಸಾಗಿ ಅಲ್ಲೇ ಸಿಗುವ ಸಣ್ಣ ಕೊಳವನ್ನು ದಾಟುತ್ತಿದ್ದಂತೆಯೇ ರಾಮದೇವರ ಬೆಟ್ಟ ಮತ್ತು ರಣಹದ್ದು ಅಭಯಾರಣ್ಯದ ಕಮಾನು ಸಿಗುತ್ತದೆ. ಈ ರಾಮದೇವರ ಬೆಟ್ಟವು ಭಾರತದ ಏಕೈಕ ರಣಹದ್ದು ಅಭಯಾರಣ್ಯವಾಗಿದ್ದು, ಸುದೀರ್ಘ ಕಾಲದಿಂದಲೂ ಈಜಿಪ್ಟಿನ ಮತ್ತು ಬಿಳಿ-ಬೆಂಬಲಿತ ರಣಹದ್ದುಗಳು ಈ ಪ್ರದೇಶದಲ್ಲಿ ಸುತ್ತುವರೆದ್ದದ್ದನ್ನು ಗಮನಿಸಿದ ಸರ್ಕಾರ, ರಣಹದ್ದುಗಳ ಸಂರಕ್ಷಣೆಗಾಗಿ 2012 ರಲ್ಲಿ ಅಧಿಕೃತವಾಗಿ ಸುಮಾರು 346.41 ಹೆಕ್ಟೇರ್ಗಳ ಪ್ರದೇಶವನ್ನು ರಣಹದ್ದುಗಳ ರಕ್ಷಿತ ಪ್ರದೇಶವಾಗಿ ಮೀಸಲಿರಿಸಲಾಯಿತು. ಇಲ್ಲಿ ಪ್ರತೀ ವಯಸ್ಕರಿಗೆ ರೂ. 25 ಮತ್ತು ಮಕ್ಕಳಿಗೆ 15 ರೂ ಅಲ್ಲದೇ ವಾಹನಗಳ ನಿಲುಗಡೆಗಾಗಿ 20 ರೂಗಳನ್ನು ಪಾವತಿಸುವ ಮೂಲಕ ಅಭಯಾರಣ್ಯವನ್ನು ಪ್ರವೇಶಿಸಬಹುದಾಗಿದೆ.
ಕುತೂಹಲಕಾರಿ ವಿಷಯವೇನೆಂದರೆ 1975ರ ಹಿಂದಿ ಚಿತ್ರರಂಗದ ಬ್ಲಾಕ್‌ಬಸ್ಟರ್ ಸಿನಿಮಾ ಆದ ಶೋಲೆ ಇದೇ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. 1975 ರ ಭಾರತೀಯ ಹಿಂದಿ-ಭಾಷೆಯ ಸಾಹಸ-ಸಾಹಸ ಚಲನಚಿತ್ರವಾಗಿದ್ದು, ಸಲೀಂ-ಜಾವೇದ್ ಅವರ ಚಿತ್ರ ಕಥೆಯನ್ನು ಜಿ. ಪಿ. ಸಿಪ್ಪಿ ಅವರ ನಿರ್ಮಿಸಿ ಅವರ ಮಗ ರಮೇಶ್ ಸಿಪ್ಪಿ ನಿರ್ದೇಶಿಸಿದ್ದ ವೀರು ಪಾತ್ರದಲ್ಲಿ ಧರ್ಮೇಂದ್ರ ಮತ್ತು ಜೈ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅವರಿಬ್ಬರಿಗೂ ನಾಯಕಿಯರಾಗಿ ಬಸಂತಿ ಪಾತ್ರದಲ್ಲಿ ಹೇಮಮಾಲಿನಿ ಮತ್ತು ರಾಧಾಳಾಗಿ ಜಯ ಬಾಧುರಿ ನಟಿಸಿದ್ದ ಚಿತ್ರವಾಗಿದ್ದು ಕಾಕತಾಳೀಯ ಎನ್ನುವಂತೆ ನಿಜ ಜೀವನದಲ್ಲಿ ಅದೇ ಜೋಡಿಗಳು ಸತಿ ಪತಿಗಳಾಗಿದ್ದಾರೆ. ಇನ್ನು ಅದೇ ಚಿತ್ರದಲ್ಲಿ ನಿರ್ದಯಿ ಡಕಾಯಿತ ಗಬ್ಬರ್ ಸಿಂಗ್ ಪಾತ್ರದಲ್ಲಿ ಅಮ್ಜದ್ ಖಾನ್ ಮತ್ತು ಆತನನ್ನು ಸೆರೆಹಿಡಿಯುವ ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಸಂಜೀವ್ ಕುಮಾರ್ ನಟಿಸಿದ್ದ ಚಿತ್ರ ಇದೇ ಪ್ರದೇಶದಲ್ಲಿಯೇ ನಡೆದಿದ್ದ ಕಾರಣ, ಅನೇಕ ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ಚಾರಣಿಗರು ಈ ಪ್ರದೇಶಕ್ಕೆ ಬರುತ್ತಿದ್ದದ್ದನ್ನು ಗಮನಿಸಿದ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಸುಮಾರು 120 ಎಕರೆ ವಿಸ್ತಾರದಲ್ಲಿ ಶೋಲೆ ಚಲನಚಿತ್ರದ ಪ್ರಮುಖ ಕ್ಷಣಗಳ ವರ್ಚುವಲ್ ರಿಯಾಲಿಟಿಯ ಮನರಂಜನೆಗಳು, ಸಾಹಸ ಆಟಗಳ ಜೊತೆಗೆ ಮತ್ತು ಕರಕುಶಲ ಕೇಂದ್ರಗಳನ್ನು ಒಳಗೊಂಡಿರುವ ರಾಮಗಢ ಎಂಬ ಶೋಲೆ ಚಿತ್ರದ ಪ್ರೇರಿತ ಥೀಮ್ ಪಾರ್ಕ್ ಒಂದನ್ನು ಸ್ಥಾಪಿಸಲು ಪ್ರಸ್ತಾಪಿಸಿದಾಗ, ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರವಾಸಿ ಕೇಂದ್ರ ನಿರ್ಮಿಸುವುದು ಕಾನೂನು ಬಾಹಿರ ಎಂಬ ಕಾರಣದಿಂದ ಅದು ನೆನೆಗುದಿಗೆ ಬಿದ್ದಿದೆಯಾದರೂ, ಇಂದಿಗೂ ಶೋಲೆ ಚಿತ್ರದ ಗಬ್ಬರ್ ಸಿಂಗ್‌ನ ಕೊಟ್ಟಿಗೆ, ಠಾಕೂರ್ ಬಲದೇವ್ ಸಿಂಗ್‌ನ ಮನೆ ಮತ್ತು ಗಬ್ಬರ್ ಠಾಕೂರ್‌ನ ಕೈಗಳನ್ನು ಕತ್ತರಿಸಿದ ಸನ್ನಿವೇಶದ ಶೋಲೆ ಚಿತ್ರೀಕರಣವಾದ ಪ್ರದೇಶವನ್ನು ನೋಡಲೆಂದೇ ಜನರು ಬರುವುದು ಆ ಚಿತ್ರ ಮತ್ತು ಪ್ರದೇಶದ ಹಿರಿಮೆ ಮತ್ತು ಗರಿಮೆಯಾಗಿದೆ ಎಂದರೂ ತಪ್ಪಾಗದು.
ವಾಹನದ ನಿಲುಗಡೆಯ ಅಕ್ಕ ಪಕ್ಕದಲ್ಲಿಯೇ ಮಾಹಿತಿ ಕೇಂದ್ರ ಮತ್ತು ಶೌಚಾಲಯಗಳ ವ್ಯವಸ್ಥೆಯಿದ್ದು ಅದರ ಬಳಕೆ ಮಾಡಿಕೊಂಡು ಸುಮಾರು 400 ಮೆಟ್ಟಲುಗಳುಳ್ಳ ಆ ರಮಣೀಯವಾದ ಬೆಟ್ಟವನ್ನು ಏರಲು ಆರಂಭಿಸುತ್ತಿದ್ದಂತೆಯೇ ಎಲ್ಲಾ ಕಾರ್ಯಗಳೂ ನಿರ್ವಿಘ್ನವಾಗಿ ಸಾಗುವಂತಾಗಲೂ ಪ್ರಥಮ ಪೂಜೆಯನ್ನು ಗಣೇಶನಿಗೆ ಸಲ್ಲಿಸುವಂತೆ ಇಲ್ಲಿಯೂ ಸಹಾ ಮೆಟ್ಟಿಲುಗಳ ಆರಂಭದಲ್ಲಿಯೇ ಸಣ್ಣದಾದ ಗಣೇಶ ಮೂರ್ತಿ ಇದ್ದು ಅಲ್ಲಿ ಗಣೇಶನನ್ನು ಪ್ರಾರ್ಥಿಸಿ ಕೆಲ ಹೆಜ್ಜೆಗಳನ್ನು ದಾಟುತ್ತಿದ್ದಂತೆಯೇ ಬಲಭಾಗದಲ್ಲಿ ಕಲ್ಲಿನ ಮೇಲೆ ಮೂಡಿರುವ ಆಂಜನೇಯಸ್ವಾಮಿಯನ್ನು ಕಾಣಬಹುದಾಗಿದ್ದು ಮೆಟ್ಟಿಲುಗಳು ಇಲ್ಲದಿದ್ದ ಕಾಲದಲ್ಲಿ ಭಕ್ತಾದಿಗಳು ಬಳಸುತಿದ್ದ ದಾರಿಯನ್ನೂ ಸಹಾ ಕಾಣಬಹುದಾಗಿದೆ.
ಮೆಟ್ಟಿಲುಗಳನ್ನು ಏರುವ ಸಮಯದಲ್ಲಿ ಆಯಾಸವಾಗದಿರಲೆಂದು ಅಲ್ಲಲ್ಲಿ ಮೇಲ್ಚಾವಣಿಯ ವ್ಯವಸ್ಥೆ ಇರುವುದಲ್ಲದೇ ಮಾರ್ಗದ ಮಧ್ಯದಲ್ಲಿ ಆಯಾಸವನ್ನು ಪರಿಹರಿಸಿಕೊಳ್ಳುವ ಸಲುವಾಗಿ ಅಲ್ಲಲ್ಲಿ ಕಲ್ಲುಗಳ ಆಸನಗಳನ್ನು ಹಾಕಿಸಿದ್ದರೂ ಪ್ರವಾಸಿಗರಿಗೆ ವಿಶಾಲವಾದ ಕಲ್ಲುಗಳ ಮೇಲೆ ಕುಳಿತುಕೊಂಡು ಬೆಟ್ಟದ ಸುತ್ತಮುತ್ತಲಿನ ರುದ್ರರಮಣೀಯವಾದ ನೋಟದ ಜೊತೆಗೆ ತಾಜಾ ಮತ್ತು ಹಗುರವಾಗಿ ಬೀಸುವ ಗಾಳಿಯು ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ ಎಂದರೂ ತಪ್ಪಾಗದು.
ಸುಮಾರು 100 ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಎಡಭಾಗದಲ್ಲಿ 24.03.1985ರ ಸಂಧರ್ಭದಲ್ಲಿ ಅಂದಿನ ಆದಿ ಚುಂಚನಗಿರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಗಳ ಅಮೃತ ಹಸ್ತದಿಂದ 101ನೇ ಮೆಟ್ಟಿಲಿನ ಶಂಕುಸ್ಥಾಪನೆಯ ಫಲಕವನ್ನು ಕಾಣಬಹುದಾಗಿದೆ. ಹೀಗೆ ಸುಮಾರು ಅರ್ಧದಾರಿಯನ್ನು ಕ್ರಮಿಸುತ್ತಿದ್ದಂತೆಯೇ ಬಲ ಭಾಗದಲ್ಲಿ ಕಲ್ಲಿನಲ್ಲೇ ಉದ್ಭವವಾದ ಅಭಯಾಂಜನೇಯ ಸ್ವಾಮಿಯ ದರ್ಶನವನ್ನು ಮಾಡಬಹುದಾಗಿದೆ.
ಅಲ್ಲಿಂದ ಮುಂದೆೆ ಮೆಟ್ಟಿಲುಗಳನ್ನು ದಾಟಿ ಸಾಗಿ ಬೆಟ್ಟದ ತುದಿಯನ್ನು ತಲುಪುತ್ತಿದ್ದಂತೆಯೇ ಅಲ್ಲಿ ಎರಡು ದೇವಾಲಯಗಳು, ಊಟದ ಮನೆ ಮತ್ತು ಎರಡು ಬಂಡೆಗಳ ನಡುವಿನಲ್ಲಿರುವ ನೈಸರ್ಗಿಕವಾದ ಕೊಳವೊಂದನ್ನು ಕಾಣಬಹುದಾಗಿದ್ದು ಈ ಕೊಳ ಮತ್ತು ಈ ಎರಡೂ ದೇವಾಲಯಗಳ ಹಿಂದೆ ತ್ರೇತಾಯುಗದ ಪ್ರಭು ಶ್ರೀರಾಮನ ವನವಾಸ ಕಾಲದ ಕಥೆ ಇದೆ.
ವನವಾಸದ ಸಮಯದಲ್ಲಿ ಉತ್ತರದಿಂದ ದಕ್ಷಿಣದ ಕಡೆ ಶ್ರೀ ರಾಮ ಸೀತಾ ಮತ್ತು ಲಕ್ಷ್ಮಣರು ಬರುತ್ತಿದ್ದ ಸಂಧರ್ಭದಲ್ಲಿ ಈ ಪ್ರದೇಶಕ್ಕೆ ಬಂದಾಗ, ಅಲ್ಲಿ ಅವರಿಗೆ ನೀರಿನ ಅವಶ್ಯಕತೆಯಾದಾಗ ಶ್ರೀರಾಮಚಂದ್ರನು ಅಲ್ಲಿನ ಬಂಡೆಗೆ ಬಾಣ ಬಿಟ್ಟು ಆ ಬಂಡೆ ಸೀಳಿ ಅಲ್ಲೊಂದು ನೈಸರ್ಗಿಕವಾದ ಕೊಳವೊಂದು ಸೃಷ್ಟಿಯಾಯಿತು ಎಂಬುವ ವೃತ್ತಾಂತವಿದೆ. ಶ್ರೀರಾಮಚಂದ್ರನ ಕೃಪೆಯಿಂದ ನೀರು ಚಿಮ್ಮಿದ ಕಾರಣ ಇದನ್ನು ರಾಮತೀರ್ಥ ಇಲ್ಲವೇ ಧನುಷ್ಕೋಟಿ ತೀರ್ಥ ಎಂದೂ ಸಹಾ ಕರೆಯಲಾಗುತ್ತದೆ. ಇಷ್ಟು ಎತ್ತರದ ಬೆಟ್ಟದ ಮೇಲಿರುವ ಕೊಳದಲ್ಲಿ ವರ್ಷದ 365 ಕಾಲದಲ್ಲಿಯೂ ನೀರಿದ್ದು ಎಂತಹ ಬರಗಾಲದಲ್ಲಿಯೂ ಬತ್ತದೇ ಇರುವುದು ಇಲ್ಲಿನ ವಿಶೇಷವಾಗಿದೆ.
ಈ ಅತ್ಯಂತ ಮನೋಹರ ಪರಿಸರದಲ್ಲಿರುವ ಆ ಕೊಳದಲ್ಲಿ ಅದೊಮ್ಮೆ ಸೀತಾ ಮಾತೆಯು ಜಲಕ್ರೀಡೆ ಆಡುತ್ತಿರುವುದನ್ನು ನೋಡಿ ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದ ಸಪ್ತಋಷಿಗಳು ನೋಡಿ ನಕ್ಕರಂತೆ. ಅದರಿಂದ ಕೋಪಗೊಂಡ ಶ್ರೀರಾಮಚಂದ್ರನು ಅದೇ ಜಲವನ್ನು ಅಭಿಮಂತ್ರಿಸಿ ಆ ಸಪ್ತಋಷಿಗಳ ಮೇಲೆ ಪ್ರೋಕ್ಷಣೆ ಮಾಡಿದ ಕಾರಣ ಆ ಸಪ್ತಋಷಿಗಳು ಈ ಪ್ರದೇಶದಲ್ಲಿ ಕಲ್ಲಾದರು ಎಂಬ ಪ್ರತೀತಿ ಇದ್ದು ಅದಕ್ಕೆ ಪುರಾವೆ ಎನ್ನುವಂತೆ, ಈ ಬೆಟ್ಟದಲ್ಲಿ ಬೃಹತ್ತಾದ 8 ಉದ್ದನೆಯ ಬಂಡೆಗಳಿದ್ದು ಎಂಟನೆಯ ಬಂಡೆಯು ಮಾರ್ಕಾಂಡೇಯ ಮಹಾಮುನಿಗಳದ್ದೆಂಬ ಪ್ರತೀತಿ ಇದೆ.
ಇನ್ನು ಅದೇ ಸಮಯದಲ್ಲಿ ಕಾಕಾಸುರ ಎಂಬ ರಾಕ್ಷಸನು ಸೀತಾಮಾತೆಯನ್ನು ಕೆಣಕಿದ ಕಾರಣ, ಶ್ರೀರಾಮನು ಕಾಕಾಸುರನ ಒಂದು ಕಣ್ಣಿಗೆ ಬಾಣ ಬಿಟ್ಟು, ಕಣ್ಣು ಕಿತ್ತು ಹಾಕಿದ್ದ ಎಂಬ ಪ್ರತೀತಿ ಇರುವ ಕಾರಣ, ಇಲ್ಲಿನ ಪಟ್ಟಾಭಿರಾಮನ ದೇವಸ್ಥಾನದ ಎದುರಿಗೆ ಇಂದಿಗೂ ಸಹಾ ಕಾಕಾಸುರನ ವಿಗ್ರಹವನ್ನು ಕಾಣಬಹುದಾಗಿದೆ. ಹೀಗೆ ಕಾಕಾಸುರನ ಸಂಹಾರ ಆದ ನಂತರ ಅಂದಿನಿಂದ ಇಂದಿಗೂ ಈ ರಾಮದೇವರ ಬೆಟ್ಟದ ಸುತ್ತಲೂ ಕಾಗೆಗಳ ಹಾರಾಟ ಇಲ್ಲದಿರುವುದು ವಿಶೇಷವಾಗಿದೆ.
ಆ ಕೊಳದ ಪಕ್ಕದಲ್ಲೇ ಇರುವ ಶ್ರೀ ರಾಮೇಶ್ವರನ ದೇವಾಯಕ್ಕೂ ಎರಡು ಪೌರಾಣಿಕ ಹಿನ್ನಲೆ ಇದ್ದು, ಒಂದರ ಪ್ರಕಾರ, ಶ್ರೀ ರಾಮ ಸೀತಾ ಮತ್ತು ಲಕ್ಷ್ಮಣರು ವನವಾಸದಲ್ಲಿ ಈ ಪ್ರದೇಶದಲ್ಲಿ ತಂಗಿದ್ದ ಸಂಧರ್ಭದಲ್ಲಿ ಪೂಜಿಸಲು ಶಿವನ ಲಿಂಗವನ್ನು ಸ್ಥಾಪಿಸಿದರು ಎನ್ನಲಾದರೇ, ಇಲ್ಲಿನ ಅರ್ಚಕರು ಹೇಳುವ ಪ್ರಕಾರ, ರಾಮಾಯಣದ ಮಾಯಾಜಿಂಕೆಯ ಪ್ರಹಸನವಾದ ನಂತರ ಸೀತಾಪಹಣವಾಗಿ ರಾಮ ಲಕ್ಷ್ಮಣರು ವೈದೇಹಿ ಏನಾದಳು ಎಂದು ಹುಡುಕುತ್ತಿದ್ದ ಸಂಧರ್ಭದಲ್ಲಿ ಮತ್ತೊಮ್ಮೆ ಈ ಪ್ರದೇಶಕ್ಕೆ ಬಂದಾಗ, ನಾರದ ಮುನಿಗಳ ಸಲಹೆಯಂತೆ ಇಲ್ಲೊಂದು ಈಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಿ 48 ದಿನಗಳ ಕಾಲ ಮಂಡಲ ಪೂಜೆ ಸಲ್ಲಿಸುವಷ್ಟರಲ್ಲಿಯೇ ಸೀತಾದೇವಿಯನ್ನು ರಾವಣನು ಅಪಹರಿಸಿದ ವಿಷಯ ತಿಳಿದು ಬಂದ ಕಾರಣ ಈ ಲಿಂಗವನ್ನು ರಾಮೇಶ್ವರ ಎಂದು ಕರೆಯಲಾಗುತ್ತದೆ ಎಂದು ಅಲ್ಲಿನ ಅರ್ಚಕರು ವಿವರಿಸಿದರು.
ನಂತರದ ದಿನಗಳಲ್ಲಿ ಈ ಬೆಟ್ಟದ ಮೇಲಿರುವ ರಾಮೇಶ್ವರ ಮತ್ತು ಪಟ್ಟಾಭಿರಾಮನ ದೇವಾಲಯಗಳನ್ನು ಮತ್ತು ದೇವಾಲಯದ ರಂಗ ಮಂಟಪವನ್ನು ಪಾಳೆಯಗಾರ ಕೆಂಪೇಗೌಡರು ಕಟ್ಟಿಸಿದ್ದೆಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಟ್ರಸ್ಟಿನ ವತಿಯಿಂದ ಭಕ್ತಾದಿಗಳು ಮತ್ತು ಪ್ರವಾಸಿಗರು ಈ ದೇವಾಲಯಕ್ಕೆ ಸುಲಭವಾಗಿ ತಲುಪಲು ಸಹಾಯವಾಗುವಂತೆ ಮೆಟ್ಟಿಲುಗಳು ಗಳನ್ನು ಪುನರ್ ನಿರ್ಮಾಣ ಮಾಡಲಾಗಿದ್ದು, ಪಟ್ಟಾಭಿರಾಮನ ದೇವಾಲಯಕ್ಕೆ ಭವ್ಯ ಗೋಪುರವೊಂದನ್ನು ನಿರ್ಮಿಸಲಾಗಿದ್ದು ಅದರ ಮೇಲಿನ ಶಂಖ, ಚಕ್ರ ಹಾಗೂ ತ್ರಿಪುಂಡರವೂ ಹೆಚ್ಚಿನ ಕಳೆ ನೀಡಿದೆ.
ಇನ್ನು ರಾಮೇಶ್ವರ ದೇವಾಲಯದ ಎದುರಿಗಿರುವ ಸಣ್ಣದಾದ ಗುಡ್ಡದ ಮೇಲೆ 1994ರಲ್ಲಿ ಕಟ್ಟಿಸಲಾಗಿರುವ ಶ್ರೀ ಹನುಮಾನ್ ಗಂಟೆ ಮಂಟಪದಲ್ಲಿ ಕೊಂಚ ಕಾಲಾ ಕುಳಿತರೆ ಸಾಕು, ಅಲ್ಲಿ ಬೀಸುವ ತಣ್ಣನೆಯ ಆಹ್ಲಾದಕರ ಗಾಳಿಯಿಂದಾಗಿ ಏದುಸಿರು ಬಿಟ್ಟು, ಕಷ್ಟ ಪಟ್ಟು ನಾಲ್ಕು ನೂರು ಮೆಟ್ಟಿಲುಗಳನ್ನು ಹತ್ತಿದ ಆಯಾಸ ಕ್ಷಣ ಮಾತ್ರದಲ್ಲಿ ಮಾಯವಾಗುತ್ತದೆ ಎಂದರೂ ಅತಿಶಯವಲ್ಲ. ಆ ಹನುಮಾನ್ ಗಂಟೆ ಮಂಟಪದಿಂದ ಸ್ವಲ್ಪ ಮುಂದಕ್ಕೆ ಹೋದರೆ ಶ್ರೀ ರಾಮಗಿರಿ ಪುಣ್ಯಕ್ಷೇತ್ರದ ಸುತ್ತಮುತ್ತಲಿನ ವಿಹಂಗಮ ನೋಟನಯನ ಮನೋಹರವಾಗಿದೆ.
ಇನ್ನು ಈ ರಾಮದೇವರ ಬೆಟ್ಟದ ಪ್ರಮುಖ ಆಕರ್ಷಣೆಯಾದ. ಶ್ರೀ ಪಟ್ಟಾಭಿರಾಮನ ದೇವಾಲಯದ ಹಿಂದೆಯೂ ಸುಗ್ರೀವನ ಕುರಿತಾದ ಪೌರಾಣಿಕ ಕಥೆ ಇದೆ. ಸಾಮಾನ್ಯವಾಗಿ ಎಲ್ಲೆಡೆಯಲ್ಲಿಯೂ ಶ್ರೀ ರಾಮಾ ಸೀತಾ ಲಕ್ಷ್ಮಣರು ನಿಂತಿದ್ದರೆ, ರಾಮನ ಪದತಲದಲ್ಲಿ ಆಂಜನೇಯರು ವೀರಾಸನದಲ್ಲಿ ಭಕ್ತಿಯಿಂದ ನಮಿಸುತ್ತಿರುವ ಪ್ರತಿಮೆಯನ್ನು ಕಾಣಬಹುದಾದರೆ, ಇಲ್ಲಿನ ಗರ್ಭಗುಡಿಯಲ್ಲಿ, ಶ್ರೀರಾಮದೇವರು ಕುಳಿತಿರುವ ಭಂಗಿಯಲ್ಲಿದ್ದರೆ, ಆತನ ತೊಡೆಯ ಮೇಲೆ ಸೀತಾ ಮಾತೆ ವಿರಾಜಮಾನಳಾಗಿದ್ದಾಳೆ. ಅವರ ಪಕ್ಕದಲ್ಲಿ ವಿನೀತನಾಗಿ ಲಕ್ಷ್ಮಣ ನಿಂತಿದ್ದರೆ ಯಥಾ ಪ್ರಕಾರ ಶ್ರೀರಾಮನ ಪದತಲದಲ್ಲಿ ರಾಮನ ಪರಮ ಭಕ್ತ ಆಂಜನೇಯ ಕೈ ಮುಗಿದು ಕುಳಿತಿರುವ ಏಕಶಿಲೆಯ ವಿಗ್ರಹ ಅತ್ಯಂತ ಮನೋಹರವಾಗಿದೆ. ನಿಜ ಹೇಳಬೇಕೆಂದರೆ ಇದು ರಾವಣನ ಸಂಹರಿಸಿದ ನಂತರ ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರ ಪಟ್ಟಾಭಿಷೇಕದ ಭಂಗಿಯಾಗಿದ್ದು ಅದರ ನೆನಪಿನಾರ್ಥವಾಗಿ ಸುಗ್ರೀವನು ಅದೇ ರೀತಿಯ ಭಂಗಿಯಲ್ಲಿರುವ ವಿಗ್ರಹವನ್ನು ಅಲ್ಲಿಯೇ ನಿರ್ಮಿಸಿಕೊಂಡು ಅದನ್ನು ತನ್ನ ಕಿಷ್ಕಿಂದೆಯಲ್ಲಿ ಪ್ರತಿಷ್ಟಾಪನೆ ಮಾಡುವ ಸಲುವಾಗಿ ತೆಗೆದುಕೊಂಡು ಆಕಾಶ ಮಾರ್ಗವಾಗಿ ಬರುತ್ತಿದ್ದಾಗ ಈ ಸುಂದರ ರಮಣೀಯ ಪ್ರದೇಶ ಮತ್ತು ಅಲ್ಲಿನ ಕೊಳ ನೋಡಿ ಆಕರ್ಷಿತನಾಗಿ ಅಲ್ಲಿ ಮೀಯುವ ಸಲುವಾಗಿ ಕೊಳದ ಎದುರಿನ ಎತ್ತರ ಪ್ರದೇಶದಲ್ಲಿ ತಾನು ತಂದಿದ್ದ ಹನುಮದ್ ಸಮೇತ, ಸೀತಾ, ರಾಮ, ಲಕ್ಷ್ಮಣರ ಮೂರ್ತಿಯನ್ನಿಟ್ಟು ಕೊಳದತ್ತ ಸಾಗುತ್ತಾನೆ.
ಅದೇ ಸಂಧರ್ಭದಲ್ಲಿಯೇ ಆ ಪ್ರದೇಶದಲ್ಲಿದ್ದ ಸೂಕಾಸುರ ಎಂಬ ರಾಕ್ಷಸ ಸುಗ್ರೀವನ ಮೇಲೆ ದಾಳಿ ಮಾಡುತ್ತಾನೆ. ಸುಗ್ರೀವ ಮತ್ತು ಸೂಕಾಸುರ ನಡುಬೆ ಕಾಳಗ ನಡೆದು ಸುಗ್ರೀವನು ಆ ರಾಕ್ಷಸನನ್ನು ಸಂಹಾರಿಸಿ ಮನಸೋ ಇಚ್ಛೆ ಆ ಕೊಳದಲ್ಲಿ ಈಜಾಡಿ ನಂತರ ತನ್ನ ಕಿಷ್ಕಿಂದೆಯತ್ತ ಪ್ರಯಾಣ ಬೆಳೆಸುವ ಸಲುವಾಗಿ ಅಲ್ಲಿನ ಕಲ್ಲಿನ ಮೇಲಿಟ್ಟಿದ್ದ ಅಯೋಧ್ಯೆಯಿಂದ ತಾನು ತಂದಿದ್ದ ಮೂರ್ತಿಯನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದನಾದರೂ, ಆ ಮೂರ್ತಿಯನ್ನು ಎತ್ತುವುದು ಬಿಡಿ ಕೊಂಚವೂ ಅಲುಗಾಡಿಸಲೂ ಸಾಧ್ಯವಾಗದೇ ಹೋದದ್ದನ್ನು ಗಮನಿಸಿ ವಿಚಲಿತನಾದಾಗ, ಅಶರೀರವಾಣಿಯೊಂದು ವನವಾಸದ ಸಮಯದಲ್ಲಿ ಶ್ರೀರಾಮ ಸೀತಾದೇವಿ ಮತ್ತು ಲಕ್ಷ್ಮಣರು ಈ ಪ್ರದೇಶದಲ್ಲಿ ಕೆಲ ಕಾಲ ನೆಲೆಸಿದ್ದ ಕಾರಣ, ಇದು ಪವಿತ್ರ ಕ್ಷೇತ್ರವಾಗಿದ್ದು, ಈ ಕೊಳವೂ ಸಹಾ ಶ್ರೀರಾಮರಿಂದಲೇ ನಿರ್ಮಿಸಲ್ಪಟ್ಟಿದೆ. ಈ ಪ್ರದೇಶದಲ್ಲಿ ನೀನು ತಂದ ಮೂರ್ತಿಯನ್ನು ಇಟ್ಟ ಕಾರಣ ಅದು ಇಲ್ಲಿಯೇ ಶಾಶ್ವತವಾಗಿ ಪ್ರತಿಷ್ಠಾಪನೆ ಆಗಿದೆ. ಹಾಗಾಗಿ ಅದನ್ನು ಶಾಸ್ತ್ರೋಕ್ತವಾಗಿ ಪೂಜಿಸು ಎಂದು ಹೇಳಿದ ಕಾರಣ ಶ್ರೀರಾಮರ ಪಟ್ಟಾಭಿಷೇಕದಲ್ಲಿ ತಾನು ನೋಡಿದ ರೂಪದಲ್ಲೇ ಇದ್ದಂತಹ ವಿಗ್ರಹವನ್ನು ವಿಧಿ ಇಲ್ಲದೇ ಅಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಿದ ಕಾರಣ ಈ ದೇವಾಲಯ ಶ್ರೀ ಪಟ್ಟಾಭಿರಾಮ ದೇವಾಲಯ ಎಂದೇ ಪ್ರಖ್ಯಾತವಾಗಿದೆ. ವರ್ಷದ 365 ದಿನಗಳೂ ಪ್ರತಿ ದಿನ ಬೆಳಿಗ್ಗೆ ಯಿಂದ ಮಧ್ಯಾಹ್ನದ ವರೆಗೂ ಇಲ್ಲಿ ಶಾಸ್ಗ್ರೋಕ್ತವಾಗಿ ಶೋಡಶೋಪಚಾರ ಪೂಜೆಗಳು ನಡೆದರೆ, ಶನಿವಾರ ಮತ್ತು ಭಾನುವಾರ ಮತ್ತು ವಿಶೇಷ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ನಡೆದು ಸಂಜೆ 4 ಗಂಟೆಯವರೆಗೂ ದೇವಸ್ಥಾನ ಭಕ್ತಾದಿಗಳಿಗೆ ತೆರೆದಿರುತ್ತದೆ. ಪ್ರತಿವರ್ಷದ ಶ್ರಾವಣ ಮಾಸದಲ್ಲಿ ಇಲ್ಲಿ ಅದ್ದೂರಿಯ ಜಾತ್ರೆ ನಡೆಯುತ್ತಲಿದ್ದು ದೇಶ ವಿದೇಶಗಳಿಂದ ಸಹಸ್ರಾರು ಭಕ್ತಾದಿಗಳು ಇಲ್ಲಿಗೆ ಬಂದು ಶ್ರೀ ರಾಮೇಶ್ವರ ಮತ್ತು ಪಟ್ಟಾಭಿರಾಮನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸಮಯಕ್ಕೆ ಮಹಾಮಂಗಳಾರತಿ ಆದ ನಂತರ ಇಲ್ಲಿ ಭಕ್ತಾದಿಗಳಿಗೆ ದಾಸೋಹವಿದ್ದು ಕಳೆದ ಸುಮಾರು ವರ್ಷಗಳಿಂದಲೂ ಶುಚಿ ರುಚಿಯಾದ ಪ್ರಸಾದವನ್ನು ಟ್ರಸ್ಟಿನ ವತಿಯಿಂದ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಈ ರಾಮದೇವರ ಬೆಟ್ಟ ಸಂರಕ್ಶಿತ ಅರಣ್ಯ ಪ್ರದೇಶವಾಗಿದ್ದು ಬೆಟ್ಟಗುಡ್ಡ ಮತ್ತು ಕಾಡುಗಳಿಂದ ಆವೃತವಾಗಿರುವ ಕಾರಣ, ಈ ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಮತ್ತು ಚಾರಣಿಗರು ಹಗಲು ಹೊತ್ತಿನಲ್ಲಿಯೇ ಬರುವುದು ಉತ್ತಮವಾಗಿದೆ. ವಾರಾಂತ್ಯದ ಹೊರತಾಗಿ ಊಟದ ವ್ಯವಸ್ಥೆ ಇಲ್ಲದಿರುವ ಕಾರಣ ಬರುವಾಗ ತಮಗೆ ಅಗತ್ಯವಿರುವ ಊಟ, ತಿಂಡಿ ಮತ್ತು ಕುಡಿಯುವ ನೀರನ್ನು ತೆಗೆದುಕೊಂಡು ಬರುವುದು ಸೂಕ್ತ ಎನಿಸುತ್ತದೆ. ಇನ್ನು ಹಾಗೆ ತಂದ ತಿಂಡಿ ತೀರ್ಥಗಳ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಈ ಪ್ರದೇಶವನ್ನು ಸ್ವಚ್ಚವಾಗಿಡುವ ಜವಾಬ್ಧಾರಿಯೂ ನಮ್ಮದಾಗಿದೆ.
ಇನ್ನು ಈ ಪ್ರದೇಶಕ್ಕೆ ಬರುವ ಹದಿ ಹರೆಯದ ಯುವಕ ಯುವತಿಯರು ಈ ಪ್ರದೇಶಕ್ಕೆ ಧಾರ್ಮಿಕ ಹಿನ್ನಲೆ ಇದೆ ಎನ್ನುವುದನ್ನು ಅರಿತು, ಮೋಜು ಮಸ್ತಿ ಅಥವಾ ಅನೈತಿಕ ಚಟುವಟಿಕೆಗಳಿಗೆ ಮುಂದಾಗದೇ ಈ ಪ್ರದೇಶದ ಪಾವಿತ್ರತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದೆ.
ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಕುಟುಂಬ ಸಮೇತರಾಗಿ ರಾಮನಗರದ ಶ್ರೀ ರಾಮರ ಬೆಟ್ಟಕ್ಕೆ ಭೇಟಿ ನೀಡಿ ಗಣೇಶ, ಅಭಯಾಂಜನೇಯ, ಶ್ರೀ ರಾಮೇಶ್ವರ ಮತ್ತು ಪಟಾಭಿರಾಮರ ಅನುಗ್ರಕ್ಕೆ ಪಾತ್ರರಾಗಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ