1974ರಲ್ಲಿ ತೆರೆಕಂಡ ಭೂತಯ್ಯನ ಮಗ ಅಯ್ಯು ಕನ್ನಡ ಚಲನಚಿತ್ರದಲ್ಲಿ ಆರ್.ಎನ್.ಜಯಗೋಪಾಲ್ ಸಾಹಿತ್ಯ, ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿಯವರ ಕಂಠ ಮಾಧುರ್ಯದಲ್ಲಿ ಮೂಡಿ ಬಂದ ಹಾಡೊಂದರಲ್ಲಿ ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ ಎಂದು ಗಂಡು ಹೆಣ್ಣನ್ನು ಹಾಡಿ ಹೊಗಳಿದರೆ, ಅದಕ್ಕುತ್ತರವಾಗಿ ಆ ಹೆಣ್ಣು ಸಹಾ, ಬಯಲು ಸೀಮೆಯ ಗಂಡು ಬಲುಗುಂಡು ಜಗಮೊಂಡು ದುಂಡು ಹೂ ಚೆಂಡು ನನ್ನ ಸರದಾಗೆ ರಸಗುಂಡು ಎಂದು ಹಾಡಿ ಹೊಗಳುತ್ತಾಳೆ. ಈ ಹಾಡಿನಲ್ಲಿ ನಟಿಸಿರುವ ನಾಯಕ ನಾಯಕಿಯರಿಬ್ಬರೂ ಸಹಾ ಕಟ್ಟು ಮಸ್ತಿನವರಾಗಿ ಆರೋಗ್ಯವಂತರಾಗಿ ಕಾಣುವುದನ್ನು ನೋಡಿದಾಗ, ಈ ಹಿಂದೆ ಸಧೃಢತೆ ಮತ್ತು ಆರೋಗ್ಯ ಎರಡಕ್ಕೂ ಅವಿನಾಭಾವ ಸಂಬಂಧವಿದ್ದು, ಪುರುಷ ಮತ್ತು ಮಹಿಳೆಯರು ಎಂಬ ಬೇಧ ಭಾವವಿಲ್ಲದೇ, ಎಲ್ಲರೂ ಸಹಾ ತಮ್ಮ ದೈನಂದಿನ ಚಟುವಟಿಕೆಗಳ ಮೂಲಕವೇ ಆರೋಗ್ಯವನ್ನು ಮತ್ತು ದೇಹದ ಸ್ವಾಸ್ಥ್ಯವನ್ನು ಕಾಪಾಡಿ ಕೊಂಡಿರುತ್ತಿದ್ದರು. 70ರ ದಶಕದಲ್ಲಿ ಯಾರಾದರೂ ದಪ್ಪಗೆ ಇದ್ದಾರೆ ಎಂದರೆ ಅವರ ಆರೋಗ್ಯ ಸರಿ ಇಲ್ಲ ಎನ್ನುತ್ತಿದ್ದದ್ದು, 90ರ ದಶಕದಲ್ಲಿ ಎಲ್ಲರೂ ಸಹಾ ಆಲಸಿಗಳಾದ ಪರಿಣಾಮ, ಬಹುತೇಕರು ಸ್ಥೂಲಕಾಯರಾಗಿದ್ದು, ಸಣ್ಣಗಿದ್ದರೇ ಅನಾರೋಗ್ಯ ಎಂಬು ಪರಿಭಾವಿಸುವಂತಾಗಿರುವುದು ವಿಪರ್ಯಾಸವೇ ಸರಿ.
ಹೇಳಿ ಕೇಳಿ ಭಾರತ ದೇಶವು ಹೆಚ್ಚಾದ ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು ಕೃಷಿಯಾಧಾರಿತ ದೇಶವಾಗಿದ್ದು, ಕೃಷಿ ಚಟುವಟಿಕೆಗಳಿಂದ ದಣಿವರಿದ ರೈರಾಪಿ ವರ್ಗದವರು ತಮ್ಮ ಮನೋರಂಜನೆಗಾಗಿ, ದೈಹಿಕ ಮತ್ತು ಬೌದ್ಧಿಕ ಸಧೃಢತೆಗಾಗಿ ಅನೇಕ ದೇಸೀ ಆಟಗಳನ್ನು ಆವಿಷ್ಕರಿಸಿ, ಸಮಯ ಸಿಕ್ಕಾಗಲೆಲ್ಲಾ ಆಬಾಲವೃದ್ದರಾದಿಯಾಗಿ ಆ ಆಟಗಳನ್ನು ಆಡುವ ಮೂಲಕ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಶ್ರೀಮಂತಗೊಳಿಸಿದ್ದಾರೆ ಎಂದರೂ ತಪ್ಪಾಗದು. ಚಿಕ್ಕಂದಿನಿಂದಲೂ ಎಲ್ಲರೂ ಒಗ್ಗೂಡಿ ಆಡುವ ಮರಕೋತಿ, ಬಿಲ್ಲುಗಾರಿಕೆ, ಕುಸ್ತಿ ಮುಂತಾದವುಗಳು ನಂತರ ದೊಡ್ಡವರಾದ ನಂತರ ಅದೇ ಆಟಗಳಿಂದ ಸಧೃಡರಾಗಿ ದೇಶ ರಕ್ಷಣೆಗಾಗಿ ಮರಕಲೆಗಳಾಗಿ ಮಾರ್ಪಾಡಾಗಿ ಹೋಗಿರುವ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ದುರಾದೃಷ್ಟವಷಾತ್ ಇಂದು ನಮ್ಮ ದೇಶದಲ್ಲಿ ಹಳೆಯ ದೇಸೀ ಆಟಗಳೆಲ್ಲವೂ ನೇಪತ್ಯಕ್ಕೆ ಸರಿದು, ಇಂದು ಆಟ ಎಂದರೆ ಕೇವಲ ಪಾಶ್ಚಾತ್ಯ ಆಟಗಳಾದ ಕ್ರಿಕೆಟ್, ಪುಟ್ ಬಾಲ್, ವಾಲಿಬಾಲ್, ಟೆನ್ನಿಸ್ ಗಳಿಗಷ್ಟೇ ಸೀಮಿತವಾಗಿ ನಮ್ಮ ಗ್ರಾಮೀಣ ಸೊಗಡಿನ ಆಟಗಳಾದ ಕಬ್ಬಡ್ಡಿ, ಖೋಖೋ, ಆಟ್ಯಾಪಾಟ್ಯಾ ಮರಕೋತಿ, ಬುಗರಿ, ಚಿನ್ನಿ ದಾಂಡು, ಗೋಲಿ ಮುಂತಾದ ಆಟಗಳು ನೇಪತ್ಯಕ್ಕೆ ಸರಿದು ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಆ ಬಹುತೇಕ ದೇಸಿ ಆಟಗಳು ಕೇವಲ ಹೊರಾಂಗಣಕ್ಕೆ ಮಾತ್ರವೇ ಸೀಮಿತವಾಗಿರದೇ, ಒಳಾಂಗಣದಲ್ಲೂ ಆಟಬಹುದಾಗಿದ್ದು, ಅವು ಕೇವಲ ಮನೋರಂಜನಾತ್ಮಕವಾಗಿದ್ದಲ್ಲದೇ, ತಮ್ಮೂಲಕ ಮಕ್ಕಳಲ್ಲಿ ಧೈರ್ಯ, ಸಾಹಸ, ಬುದ್ದಿಶಕ್ತಿ ಮತ್ತು ದೈಹಿಕ ಕ್ಷಮತೆಗಳನ್ನು ಹೆಚ್ಚಿಸುವುದರ ಜೊತೆಗೆ ಪರೋಕ್ಷವಾಗಿ ಬದುಕಿನ ಪಾಠಗಳನ್ನು ಕಲಿಸಿಕೊಡುತ್ತಿತ್ತು ಎಂದರೂ ತಪ್ಪಾಗದು. ಆದರೆ 80-90ರ ದಶಕಗಳಲ್ಲಿ ಟಿವಿ ಮತ್ತು ವಿಡೀಯೋ ಗೇಮ್ ನಮ್ಮ ದೇಶಕ್ಕೆ ಪರಿಚಯವಾದ ನಂತರ ನಮ್ಮ ದೇಶದ ಮಕ್ಕಳು ಅದರಲ್ಲೂ ವಿಶೇಷವಾಗಿ ನಗರ ಪ್ರದೇಶದ ಮಕ್ಕಳು ಹೊರಾಂಗಣ ಆಟವನ್ನು ಸಂಪೂರ್ಣವಾಗಿ ಮರೆತು ಹೋದ ಪರಿಣಾಮ ಅವರ ದೈಹಿಕ ಕ್ಷಮತೆಯ ಮೇಲಾದ ದುಪ್ಷರಿಣಾಮಗಳು ನಿಜಕ್ಕೂ ಆಘಾತಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಪೋನ್ ಮತ್ತು ಇಂಟರ್ನೆಟ್ ಸರ್ವೇ ಸಾಮಾನ್ಯವಾದ ಮೇಲಂತೂ ಮಕ್ಕಳ ದೈಹಿಕ ಕ್ಷಮತೆ ಮತ್ತಷ್ಟು ಬಿಗಡಾಯಿಸಿದೆ ಎಂದರೂ ತಪ್ಪಾಗದು. ಇದನ್ನೆಲ್ಲವನ್ನೂ ಗಮನಿಸಿದ ಭಾರತ ಸರ್ಕಾರ ದೈಹಿಕ ಕ್ಷಮತೆಯನ್ನು ದೈನಂದಿನ ಜೀವನದ ಭಾಗವಾಗಿಸಲು ಮತ್ತು ದೈಹಿಕವಾಗಿ ಸದಾಕಾಲವೂ ಸಕ್ರಿಯವಾಗಿಸುವ ಇಚ್ಛೆಯಿಂದ FIT ಇಂಡಿಯಾ ಎಂಬ ಅಭಿಯಾನವನ್ನು ಆರಂಭಿಸಿದ್ದಲ್ಲದೇ, ಖೇಲೋ ಇಂಡಿಯಾ ಎಂಬ ಮತ್ತೊಂದು ಅಭಿಯಾನದ ಮೂಲಕ, ನಮ್ಮ ಗ್ರಾಮೀಣ ಸೊಗಡಿನ ಸ್ಥಳೀಯ ಕ್ರೀಡೆಗಳನ್ನು ಮರಳಿ ಮುನ್ನಲೆಗ ತರುವ ಪ್ರಯತ್ನವನ್ನು ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕ್ರೀಡೆಯೂ ಸಹಾ ಅತ್ಯಂತ ಪ್ರಮುಖ ಅಂಶವಾಗಿದ್ದು, ಜಾಗತೀಕ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿಯೂ ಉತ್ತಮವಾದ ಮತ್ತು ಸ್ಥಿರವಾದ ಪ್ರದರ್ಶನಗಳನ್ನು ನೀಡುವ ದೇಶ ಪ್ರಗತಿಯನ್ನು ಸಾಧಿಸುವುದು ಅತ್ಯಗತ್ಯವಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಪ್ರೋತ್ಸಾಹದಿಂದಾಗಿ ಎಲ್ಲಾ ಕಡೆಗಳಲ್ಲಿಯೂ ಸ್ಥಳೀಯವಾಗಿ ಹಲವಾರು ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮವಾದ ಪೌಷ್ಟಿಕಾಂಶಭರಿತ ಆಹಾರಗಳನ್ನು ಒದಗಿಸುವುದರ ಜೊತೆಗೆ ಉನ್ನತ ದರ್ಜೆಯ ಮೂಲಸೌಕರ್ಯ ಮತ್ತು ಉನ್ನತ ಮಟ್ಟದ ತರಬೇತಿಯನ್ನು ನೀಡುವ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ತಮ್ಮ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟಿದೆ ಎಂದರೂ ತಪ್ಪಾಗದು.
ವಿದ್ಯೆ ಎಂದರೆ ಕೇವಲ ಡಾಕ್ಟರ್, ಇಂಜೀನಿಯರ್, ಲಾಯರ್, ಚಾರ್ಟಡ್ ಅಕೌಂಟೆಂಟ್ ಮಾತ್ರವಷ್ಟೇ ಅಲ್ಲದೇ, ಒಬ್ಬ ಉತ್ತಮ ಕ್ರೀಡಾಪಟುವಾಗುವುದು ಸಹಾ ಒಂದು ವೃತ್ತಿ ಎಂಬ ಮನೋಭಾವನೆಯನ್ನು ಭಾರತೀಯರು ಬೆಳೆಸಿಕೊಂಡಾಗ ಮಾತ್ರವೇ ಭಾರತ ಕ್ರೀಡಾ ಸೂಪರ್ ಪವರ್ ಆಗುವ ತನ್ನ ಕನಸನ್ನು ನನಸಾಗಿಸಬಹುದು. ನಮ್ಮ ದೇಶದಲ್ಲಿ ಆಡುವ ಎಲ್ಲಾ ಕ್ರೀಡೆಗಳಿಗೆ ಒಂದು ಬಲವಾದ ಚೌಕಟ್ಟನ್ನು ನಿರ್ಮಿಸುವ ಮೂಲಕ ಮತ್ತು ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವಾಗಿ ಸ್ಥಾಪಿಸುವ ಮೂಲಕ ತಳಮಟ್ಟದಲ್ಲಿ ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಖೇಲೋ ಇಂಡಿಯಾ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ
ಖೇಲೋ ಇಂಡಿಯಾಕ್ಕೆ ಪೂರಕವಾಗಿ ರೇವಾ ವಿಶ್ವವಿದ್ಯಾಲಯದಲ್ಲೂ ವಿದ್ಯೆಯ ಜೊತೆಗೆ ಕ್ರೀಡೆಗೂ ಸಹಾ ಉತ್ತಮವಾದ ಪ್ರೋತ್ಸಾಹವನ್ನು ನೀಡುತ್ತಿರುವ ಕಾರಣ, ರೇವಾ ವಿಶ್ವ ವಿದ್ಯಾಲಯದ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈಗಾಗಲೇ ಹತ್ತಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವಾದ ಪ್ರದರ್ಶನವನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿರುವುದು ಅಭಿನಂದನಾರ್ಹವಾಗಿದೆ. ನಮ್ಮ ಹಳೆಯ ಸಾಂಪ್ರದಾಯಕ ಆಟಗಳನ್ನು ಎಲ್ಲರಿಗೂ ಮರಳಿ ಪರಿಚಯಿಸುವುದರ ಮೂಲಕ ಆ ಆಟಗಳನ್ನು ಪುನರುಜ್ಜೀವನಗೊಳಿಸಿ ಆ ಆಟಗಳ ಬಗ್ಗೆ ಭವಿಷ್ಯದ ಪೀಳಿಗೆಗೆ ಕನಿಷ್ಠ ಅರಿವು ಮತ್ತು ಕುತೂಹಲವನ್ನು ಮೂಡಿಸುವ ಸಲುವಾಗಿ “ಖೇಲ್ ಖೋಜ್” (ಆಟಗಳಿಗಾಗಿ ಹುಡುಕಾಟ) ಎಂಬ ವಿನೂತನ ಅಭಿಯಾನವನ್ನು ಕಳೆದ ವರ್ಷದಿಂದ ಆರಂಭಿಸಿ ಅದರ ಮೂಲಕ ಭಾರತೀಯ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿಹಿಡಿಯುವ ಸಾವಿರಾರು ವರ್ಷಗಳ ಕೆಲವು ಪುರಾತನ ಆಟಗಳನ್ನು ಒಂದು ದಿನದ ಮಟ್ಟಿಗೆ ಆಡಿಸುವ ಸಂಕಲ್ಪವನ್ನು ಮಾಡಿಕೊಂಡಿರುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.
ಈ ಅಭಿಯಾನದ ಮುಂದುವರೆದ ಭಾಗವಾಗಿ ಇದೇ 2024ರ ಫೆಬ್ರವರಿ 10 ಶನಿವಾರ, ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಯಲಹಂಕದ ರೇವಾ ವಿಶ್ವ ವಿದ್ಯಾಲಯದ ಸೌಗಂಧಿಕಾ ಬಯಲು ರಂಗಮಂಟಪದಲ್ಲಿ ಸುಮಾರು 34ಕ್ಕೂ ಹೆಚ್ಚಿನ ದೇಸೀ ಕ್ರೀಡೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಇದು ಕೇವಲ ರೇವಾ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ 13 ರಿಂದ 16 ವರ್ಷದೊಳಗಿನ ಎಲ್ಲಾ ವಯೋಮಾನದವರು ಸಹಾ ಈ ದೇಸೀ ಆಟಗಳ ಉತ್ಸವದಲ್ಲಿ ಭಾಗಿಗಳಾಗುವಂತಹ ಸುವರ್ಣಾವಕಾಶವನ್ನು ಒದಗಿಸಿಕೊಡುವ ಮೂಲಕ ನಶಿಸಿ ಹೋಗುತ್ತಿರುವ ಈ ಕೆಳಕಂಡ ಆಟಗಳನ್ನು ಮತ್ತೊಮ್ಮೆ ಮುನ್ನಲೆಗೆ ತರುವಂತಹ ಪ್ರಯತ್ನದಲ್ಲಿರುವುದು ಶ್ಲಾಘನೀಯವಾಗಿದೆ.
ಅಂದಿನ ಇಡೀ ದಿನ ರೇವಾ ವಿಶ್ವವಿದ್ಯಾಲಯದಲ್ಲಿ ಹಳ್ಳಿಯ ಗ್ರಾಮೀಣ ಸೊಗಡಿನ ವಾತವರಣವಿದ್ದು ಕೇವಲ ರೂ.100/- ಪಾವತಿಸುವ ಮೂಲಕ ಚೌಕಾ ಭಾರ, ನೂರಾನ್ ಕುಚಿ, ನದಿ-ದಡ,ಕೌರಿ ಖೇಲ್,ಅಳುಗುಳಿ ಮನೆ,ಹೂಪ್ ಆಟವನ್ನು ಪಾಸ್ ಮಾಡಿ (ಟೈರ್ ಪಾಸ್), ಗಿಲ್ಲಿದಾಂಡು ,ಗೋಲಿ, ಟೆನ್ನಿಕಾಯ್ಟ್, ಮರಂಪಿಟ್ಟಿ (ಡಾಡ್ಜ್‌ಬಾಲ್), ಪಗಡೆ, ಮರಕೋತಿ, ಹರ ಹರ ಭಂ ಭಂ, ಬುಗುರಿ, ಸಾಲು ಮನೆ ಆಟ, ನಾಕು/ಐದು ಕಲ್ಲಿನ ಆಟ, ಹಸು ಮತ್ತು ಹುಲಿ ಆಟ, ಮಡಕೆ ಒಡೆಯುವುದು (ಗೋಕುಲಾಷ್ಠಮಿಯ ವಿಟ್ಲ ಪಿಂಡಿ), ಚಕ್ರವನ್ನು ಓಡಿಸುವುದು (ಟೈರ್ ಓಡಿಸುವುದು), ನಗರದಲ್ಲಿ ಬಾಂಬ್ (ಸ್ಥಳೀಯ ಹೆಸರು) ಕ್ಯಾಟರ್ಫಿಲ್ಲರ್ (ಗುರಿಯತ್ತ ಹೊಡೆಯುವುದು), ಲಗೋರಿ, ಕುಂಟೆ ಬಿಲ್ಲೆ, ಕೈ ಕುಸ್ತಿ, ಚದುರಂಗ (ಮೈಸೂರು ಶೈಲಿಯ ಚೆಸ್), ಟೋಪಿ ಆಟ, ಎಐಸ್ ಪೈಸ್, ರಾಜ, ಮಂತ್ರಿ,ಕಳ್ಳ ಮತ್ತು ಸೈನಿಕ, ಕಡ್ಡಿ ಎತ್ತುವ ಆಟ, ನಾಯಿ ಮತ್ತು ಮೂಳೆ, ಕುಂಟಾಟಾ, ಹಗ್ಗ ಜಗ್ಗಾಟ, ಬ್ರಹ್ಮ ಗೋಪುರ, ಇನ್ಸುಕ್ನಾವರ್ ಈ ಎಲ್ಲಾ ಆಟಗಳಲ್ಲಿಯೂ ಭಾಗವಹಿಸಬಹುದಾಗಿದ್ದು, ಆಟದ ಜೊತೆಗೆ ವಿವಿಧ ರೀತಿಯ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ಶುಚಿ ಮತ್ತು ರುಚಿಯಾದ ಬಾಯಲ್ಲಿ ನೂರೂರಿಸುವಂತಹ ನೂರಾರು ಭಕ್ಷ ಭೋಜನಗಳ ಮಳಿಗೆಗಳೂ ಸಹಾ ಇರಲಿದ್ದು, ದೈಹಿಕ, ಮಾನಸಿಕ ಮತ್ತು ನಾಲಿಗೆಯ ಬರವನ್ನು ನೀಗಿಸುವುದಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಕೇವಲ ನೀವೊಬ್ಬರೇ ಅಲ್ಲದೇ ನಿಮ್ಮ ಬಂಧು ಮಿತ್ರರೊಡಗೂಡಿ ಈ ವಿನೂತನವಾದ ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯ ದೇಸೀ ಆಟಗಳ ಸೊಗಡು ಮತ್ತು ಶ್ರೀಮಂತಿಕೆಯನ್ನು ಅರಿಯೋಣ ಅಲ್ವೇ?
ನಿಮ್ಮ ಆಗಮನಕ್ಕಾಗಿ ನಾವು ಕಾಯ್ತಾ ಇರ್ತೀವಿ. ನೀವು ತಪ್ಪದೇ ಬರ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ