ಯಗವ ಕೋಟೆ ಶ್ರೀ ವೀರನಾರಾಯಣ ಸ್ವಾಮಿ

ನಮ್ಮ ಕರ್ನಾಟಕದಲ್ಲಿ ಹತ್ತಾರು ವೀರನಾರಯಣ ಸ್ವಾಮಿಯ ದೇವಾಲಯಗಳು ಇದ್ದರೂ, ಶ್ರೀ ವೀರನಾರಾಯಣ ಎಂಬ ಹೆಸರನ್ನು ಕೇಳಿದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ಥಟ್ ಅಂತ ಮೂಡುವುದೇ ಕನ್ನಡದಲ್ಲಿ ಮಹಾಭಾರತವನ್ನು ಬರೆದ ಕುಮಾರ ವ್ಯಾಸನ ಆರಾಧ್ಯ ದೈವ ಗದುಗಿನ ವೀರ ನಾರಾಯಣ ಸ್ವಾಮಿ. ನಾವಿಂದು ಗದುಗಿನ ವೀರನಾರಾಯಣ ಸ್ವಾಮಿಯಷ್ಟೇ ಮುದ್ದಾಗಿರುವ ಆದರೆ ಅದಕ್ಕಿಂತಲೂ ವಿಭಿನ್ನವಾಗಿರುವ ಮತ್ತು ಅತ್ಯಂತ ಪುರಾತನವಾದ ದೇವಾಲಯವು ರಾಜಧಾನಿ ಬೆಂಗಳೂರಿನಿಂದ ಕೇವಲ 95 ಕಿಮೀ ದೂರದಲ್ಲಿರುವ ಯಗವಕೋಟೆಯಲ್ಲಿದ್ದು ಆಲ್ಲಿನ ಸ್ಥಳ ಪುರಾಣದ ಜೊತೆಗೆ ಶ್ರೀ ವೀರನಾರಾಯಣ ಸ್ವಾಮಿಯ ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ಯಗವಕೋಟೆ ಗ್ರಾಮವು ಈ ಹಿಂದೆ ಅವಿಭಜಿತ ಕೋಲಾರದ ಭಾಗವಾಗಿದ್ದು, ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿದೆ. ಬೆಂಗಳೂರಿನಿಂದ 95 ಕಿ.ಮೀ ಮತ್ತು ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಿಂದ ಪೂರ್ವಕ್ಕೆ 43 ಕಿಮೀ ದೂರದಲ್ಲಿದ್ದು, ಶ್ರೀಮಂತ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಪ್ರದೇಶವಾಗಿದೆ. ಈ ಊರಿನ ಮೂಲ ಹೆಸರು ಯಗವ ಮುಕ್ಕಂಟ್ಲ ಪಳ್ಳಿ ಪಟ್ನಂ ಎಂಬುದಾಗಿದ್ದು ನಂತರ ಜನರ ಆಡು ಭಾಷೆಯಲ್ಲಿ ಅದು ಹ್ರಸ್ವವಾಗಿ ಇಂದಿಗೆ ಅದು ಕೇವಲ ಯಗವಕೋಟೆಯಾಗಿ ಉಳಿದಿದೆ. ಯಗವ ಕೋಟೆ ಎಂದರೆ ಮುಂಭಾಗ, ಕೋಟೆ ಎಂಬರ್ಥವಾಗಿದ್ದು, ಒಂದು ಕಾಲದಲ್ಲಿ ಉತ್ತರ ಪಿನಾಕಿನಿಯು ಈ ಪ್ರದೇಶದಲ್ಲಿ ಹರಿಯುತ್ತಿದ್ದ ಕಾರಣ ಅತ್ಯಂತ ಶ್ರೀಮಂತವಾದ ಕೋಟೆಯನ್ನು ಹೊಂದಿದ್ದು ಪಾಳೆಯಗಾರದ ಆಳ್ವಿಕೆಯಲ್ಲಿತ್ತು ಎನ್ನಲಾಗಿದ್ದು, ಕರ್ನಾಟಕ ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವ ಕರ್ನಾಟಕ ಪರಂಪರೆ ಗ್ರಂಥದಲ್ಲಿ 13ನೇ ಶತಮಾನದಲ್ಲಿ ನಮ್ಮ ನಾಡನ್ನಾಳಿದ ನಾಯಕರ ಚರಿತ್ರೆಯಲ್ಲಿ ಯಗವಕೋಟೆಯ ಹೆಸರು ಸಹಾ ಇರುವುದು ಗಮನಾರ್ಹವಾದ ಅಂಶವಾಗಿದೆ.

ಅಂದಿನ ಕಾಲದ ಅಲ್ಲಿನ ಕೋಟೆ ಮತ್ತು ಅದರ ಬಾಗಿಲು ಎಷ್ಟು ದೊಡ್ಡದ್ದಾಗಿತ್ತೆಂದರೆ, ಈ ಪ್ರದೇಶದ ಹೆಣ್ಣು ಮಗಳನ್ನು ಆಂಧ್ರ ಪ್ರದೇಶದ ಕದ್ರಿ (ಕದ್ರಿ ನರಸಿಂಹ ಸ್ವಾಮಿ ದೇವಾಲಯ) ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು, ಪ್ರತೀ ದಿನ ಇಲ್ಲಿನ ಕೋಟೆಯ ಬಾಗಿಲು ಹಾಕಿದ್ದ ಸದ್ದು ಕದ್ರಿಯಲ್ಲಿದ್ದ ಹೆಣ್ಣುಮಗಳಿಗೆ ಕೇಳಿಸುವಂತಿತ್ತು ಎನ್ನಲಾಗಿದೆ. ಹಾಗೆ ಕೋಟೆಯ ಬಾಗಿಲು ಹಾಕಿದ ಸದ್ದನ್ನು ಕೇಳಿದ ಆಕೆ ಅಬ್ಬಾ! ತನ್ನ ತವರು ಮನೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ ಹಾಗಾಗಿ ನಾನು ಸಂತೋಷದಿಂದ ಊಟ ಮಾಡಬಹುದು ಎಂದು ಊಟಕ್ಕೆ ಕೂರುತ್ತಿದ್ದಳಂತೆ. ಪ್ರಸ್ತುತ ಅಂತಹ ಕೋಟೆಗಳ ಯಾವ ಲಕ್ಷಣಗಳು ಅಲ್ಲಿ ಕಾಣಸಿಗದೇ ಹೋದರೂ, ಮೂರ್ನಾಲ್ಕು ಭವ್ಯವಾದ ಕೆರೆಗಳಿಂದ ಸುತ್ತುವರೆದಿದ್ದು, ಕೃಷಿಯಾಧಾರಿತ ಗ್ರಾಮವಾಗಿದೆ.

ಈ ಊರಿನ ಅನೇಕರು ಹಳ್ಳಿಯಿಂದ ಹತ್ತಿರದ ನಗರ ಪ್ರದೇಶಗಳಿಗೆ ಬಂದು ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ, ಶ್ರೀ ವೀರನಾರಾಯಣ ಸ್ವಾಮಿಯ ಕೃಪೆಯಿಂದ ಡಾಕ್ಟರುಗಳು,, ಇಂಜೀನಿಯರುಗಳು, ವಕೀಲರು, ಪ್ರಾಧ್ಯಾಪಕರು, ಅಕೌಂಟೆಂಟ್ಗಳಾಗಿ ಇಂದು ಪ್ರಪಂಚಾದ್ಯಂತ ವಿವಿದೆಡೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದರೂ, ಇಂದಿಗೂ ತಮ್ಮ ಊರಿನ ಮೂಲ ಬೇರನ್ನು ಮರೆಯದೇ, ಕನಿಷ್ಠ ಪಕ್ಷ ವರ್ಷ ಇಲ್ಲವೇ ಎರಡು ವರ್ಷಕ್ಕೊಮ್ಮೆ ಅದರಲ್ಲೂ ಅತ್ಯಂತ ವಿಜೃಂಭಣೆಯಿಂದ ನಡೆಯುವ ಯಗವಕೋಟೆಯ ಶ್ರೀ ವೀರನಾರಾಯಣ ಸ್ಚಾಮಿಯ ಜಾತ್ರೆಯ ಸಮಯಕ್ಕೆ ಬಂದು ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿ ಸ್ವಾಮಿಯ ಕೃತಾರ್ಥರಾಗುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

oplus_2

ಯಗವ ಕೋಟೆಯಲ್ಲಿ ಶ್ರೀವೀರನಾರಾಯಣ ಸ್ವಾಮಿಯ ದೇವಾಲಯ ಸ್ಥಾಪನೆಯ ಹಿಂದೆ ದೇವಾನು ದೇವತೆಗಳ ರಾಜನಾದ ದೇವೇಂದ್ರನ ಹಿನ್ನಲೆಯಿದೆ. ಈ ಹಿಂದೆ ವೃತ್ತಾಸುರ ಎಂಬ ರಾಕ್ಷಸನು ಅತ್ಯಂತ ಕ್ರೂರಿಯಾಗಿದ್ದು ಪ್ರಜಾಪೀಡಕನಾಗಿದ್ದಂತಹ ಸಂಧರ್ಭದಲ್ಲಿ ಅವನನ್ನು ಸಂಹರಿಸುವಂತೆ ದೇವಾನು ದೇವಾನುದೇತೆಗಳು ಇಂದ್ರನನ್ನು ಕೇಳಿಕೊಂಡಾಗ, ಆತನು ದಧೀಚಿ ಮುನಿಗಳ ಬೆನ್ನ ಮೂಳೆಯಿಂದ ತಯಾರಿಸಲ್ಪಟ್ಟ ತನ್ನ ವಜ್ರಾಯುಧದ ಸಹಾಯದಿಂದ ವೃತ್ತಾಸುರರನ್ನು ಸಂಹರಿಸಿ ಬ್ರಹ್ಮ ಹತ್ಯಾ ದೋಷಕ್ಕೆ ಒಳಗಾದಾಗ, ಅದರಿಂದ ಪರಿಹಾರ ಹೇಗೆ ಪಡೆಯುವುದು ಎಂದು ಸೃಷ್ಟಿಕರ್ತ ಬ್ರಹ್ಮನ ಬಳಿ ವಿಚಾರಿಸಿದಾಗ, ಆತನು ಭೂಲೋಕದಲ್ಲಿ ಏಕಕಾಲದಲ್ಲಿ, ಏಕ ಲಗ್ನದಲ್ಲಿ ಐದು ನಾರಾಯಣನ ದೇವಾಲಯಗಳನ್ನು ಪ್ರತಿಷ್ಠಾಪನೆ ಮಾಡುವಂತೆ ಸೂಚಿಸುತ್ತಾನೆ, ಹೀಗೆ ಸಾಕ್ಷಾತ್ ಬ್ರಹ್ಮನ ಆದೇಶದಂತೆ, ಬಾಗೇಪಲ್ಲಿ ಬಳಿಯ ಏಲ್ಲೋಡಿನಲ್ಲಿ ಶ್ರೀ ಆದಿನಾರಾಯಣ, ಇಲ್ಲಿನ ಯಗವಕೋಟೆಯಲ್ಲಿ ಶ್ರೀ ವೀರನಾರಾಯಣ, ಕೈವಾರದಲ್ಲಿ ಶ್ರೀ ಅಮರನಾರಾಯಣ, ಹೊಸಕೋಟೆ ಬಳಿಯ ನಂದಗುಡಿಯ ಕೆ.ಸತ್ಯವಾರದಲ್ಲಿ ಶ್ರೀ ಲಕ್ಷ್ಮೀನಾರಾಯಣ ಮತ್ತು ದೇವನಳ್ಳಿ ಬಳಿಯ ಬೂದಿಗೆರೆಯಲ್ಲಿ ಶ್ರೀ ದೇಶನಾರಾಯಣ ಸ್ವಾಮಿಯ ದೇವಾಲಯಗಳನ್ನು ಕಟ್ಟಿಸಿ ಅಲ್ಲಿ ಪಂಚ ನಾರಾಯಣರನ್ನು ಪ್ರತಿಷ್ಠಾಪನೆ ಮಾಡಿದನು ಎನ್ನಲಾಗುತ್ತದೆ. ಈ ಎಲ್ಲಾ ಪ್ರತಿಮೆಗಳನ್ನೂ ವಿಶ್ವಕರ್ಮನು ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಿದನೆಂದೂ ಸಹಾ ಪ್ರತೀತಿ ಇದೆ.

oplus_50ಸಾಮಾನ್ಯವಾಗಿ ವಿಷ್ಣುವಿನ ಎಲ್ಲಾ ದೇವಾಲಯಗಳಲ್ಲಿಯೂ ದ್ವಾರಪಾಲಕರಾಗಿ ಜಯ ವಿಜಯರು ಇರುವುದು ಸಾಮಾನ್ಯವಾದರೆ ಈ ಪಂಚ ನಾರಾಯಣ ಸ್ವಾಮಿಯ ದೇವಾಲಯದಲ್ಲಿ ಜಯ ವಿಜಯರು ಇಲ್ಲದೇ ಇರುವುದು ವಿಶೇಷವಾಗಿದೆ. ಗದುಗಿನ ವೀರನಾರಾಯಣನಿಗೆ ಗಧೆ ಇದ್ದರೆ, ಇಲ್ಲಿನ ಸ್ವಾಮಿಯು ಯಾವುದೇ ಆಯುಧವಿಲ್ಲದೇ, ಅತ್ಯಂತ ಶಾಂತಮೂರ್ತಿಯಾಗಿದ್ದು ಅಭಿಷೇಕದ ಸಮಯದಲ್ಲಿ ಒಂದೇ ವಿಗ್ರಹದಲ್ಲಿ ಶ್ರೀ ಕೃಷ್ಣ, ನರಸಿಂಹ, ವಾಮನ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಕಾಣಬಹುದಾಗಿದೆ. ಶ್ರೀ ಕೃಷ್ಣ ಪರಮಾತ್ಮನಿಗೆ ಅಷ್ಟಮಹಿಯರು ಇದ್ದಂತೆ ಇಲ್ಲಿನ ವೀರನಾರಾಯಣ ಸ್ವಾಮಿಯ ಜೊತೆಗೆ ಆಷ್ಟ ಲಕ್ಷ್ಮಿಯರು ಇರುವುದು ಬಹಳ ವಿಶೇಷವಾಗಿದೆ. ಸ್ವಾಮಿಯ ಕಿರೀಟದ ಮುಂಭಾಗದಲ್ಲಿ ಸಂತಾನ ಲಕ್ಷ್ಮಿ ಇದ್ದರೆ, ಹಿಂಭಾಗದಲ್ಲಿ ಧಾನ್ಯಲಕ್ಷ್ಮಿ ಇದ್ದರೆ, ಕಿರೀಟದ ಎರಡೂ ಬದಿಯಲ್ಲಿ ಧೈರ್ಯ ಲಕ್ಷ್ಮಿ ಮತ್ತು ಜಯಲಕ್ಶ್ಮಿಯರು ಇದ್ದರೆ, ಕಟಿ ಹಸ್ತದಲ್ಲಿ ರಾಜ್ಯ ಲಕ್ಶ್ಮಿಯನ್ನು ಕಾಣಬಹುದಾಗಿದ್ದು, ಇನ್ನು ವಕ್ಷಸ್ಥಳದಲ್ಲಿ ಮಹಾಲಕ್ಷ್ಮಿ ಇದ್ದು, ಇನ್ನು ಶ್ರೀದೇವಿ ಮತ್ತು ಭೂದೇವಿಯರು ಸ್ವಾಮಿಯ ಅಕ್ಕ ಪಕ್ಕದಲ್ಲಿರುವುದು ಇಲ್ಲಿನ ಪ್ರತಿಮೆಯ ಮತ್ತೊಂದು ವಿಶೇಷವಾಗಿದೆ.

oplus_18ನರಸಿಂಹಾವತಾರದಲ್ಲಿ ಹಿರಣ್ಯಕಷಿಪುವಿನನ್ನು ತನ್ನ ಉಗುರಿನಿಂದಲೇ ಬಗೆದ ಪ್ರತೀಕವಾಗಿ ಇಲ್ಲಿಯೂ ಸಹಾ ಸ್ವಾಮಿಯ ಕೈಗಳಲ್ಲಿ ಅತ್ಯಂತ ಉದ್ದನೆಯ ಮತ್ತು ಅಷ್ಟೇ ಹರಿತವಾದ ಉಗುರುಗಳನ್ನೂ ಸಹಾ ಕಾಣಬಹುದಾಗಿರುವುದು ಅತ್ಯಂತ ವಿಶೇಷವಾಗಿದ್ದು, ಸ್ವಾಮಿಯ ಉತ್ಸವ ಮೂರ್ತಿಯ ಬೆರಳುಗಳಲ್ಲಿ ಈ ರೀತಿಯ ಹರಿತವಾದ ಉಗುರುಗಳು ಇನ್ನೂ ಸ್ಪಷ್ಟವಾಗಿ ಕಾಣಬಹುದಾಗಿದೆ. ಎಲ್ಲಾ ದೇವಾಲಯಗಳಂತೆ ಇಲ್ಲಿಯೂ ಸಹಾ ಗರ್ಭಗೃಹ, ಶುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳನ್ನು ಹೊಂದಿದೆ. ನವರಂಗದಲ್ಲಿ ಚೌಕಾಕೃತಿಯಸ್ತಂಭಗಳನ್ನು ಕಾಣಬಹುದಾಗಿದೆ.

ಈ ದೇವಾಲಯವು ಈ ಹಿಂದೆ ಕುಂಬಾರ ಪೇಟೆಯಲ್ಲಿ ಕಟ್ಟಲಾಗಿದ್ದು ಎಂಬ ಕುರುಹಾಗಿ ಇಂದಿಗೂ ಸಹಾ ದೇವಾಲಯ ಅಕ್ಕ ಪಕ್ಕದಲ್ಲಿ ಉತ್ಕತನ ನಡೆಸಿದಲ್ಲಿ ಮಡಿಕೆ ಕುಡಿಕೆ ಮತ್ತು ಹೆಂಚುಗಳ ಚೂರುಗಳನ್ನು ಕಾಣಬಹುದಾಗಿರುವುದು ಅತ್ಯಂತ ವಿಶೇಷವಾಗಿದ್ದು ಇತ್ತೀಚಿನ ದಿನಗಳಲ್ಲಿ ಇಡೀ ದೇವಾಲಯವನ್ನುಆದೇ ಗ್ರಾಮಸ್ಥರ ಸಹಕಾರದಿಂದ ನೂತನವಾಗಿ ನವೀಕರಿಸಲಾಗಿದೆ.

ಹಿಂದಿನ ಕಾಲದಲ್ಲಿ ಊರ ಹೊರಗೆ ಕೆರೆಯ ಸಮೀಪ ಹನುಮಂತನ ಗುಡಿಯಿದ್ದು ಅದರ ಪಕ್ಕದಲ್ಲೇ ಗರಡಿ ಮನೆ ಇದ್ದಲ್ಲಿ, ಆ ಊರಿಗೆ ಯಾವ ಕಳ್ಳಕಾಕರ ಭಯ ಇರುತ್ತಿರಲಿಲ್ಲ ಎಂಬ ನಂಬಿಕೆ ಇತ್ತು. ಊರ ದೇವಾಲಯವನ್ನು ಹನುಮಂತ ಕಾಪಾಡಿದರೆ, ಊರ ಜನರ ಮಾನ ಸನ್ಮಾನವನ್ನು ಅಲ್ಲಿನ ಗರಡಿ ಮನೆಯಲ್ಲಿ ಸಾಮು ಮಾಡಿದ ಪೈಲ್ವಾನರು ರಕ್ಷಿಸುತ್ತಿದ್ದರು ಎಂಬ ಪ್ರತೀತಿಗೆ ಅನುಗುಣವಂತೆ, ಈ ದೇವಾಲಯದ ನಾಲ್ಕು ದಿಕ್ಕುಗಳಲ್ಲಿ ವೀರಾಂಜನೇಯರ ಗುಡಿಗಳಿದ್ದು ಹೀಗೆ ಸ್ವತಃ ಆಂಜನೇಯನೇ ಈ ದೇವಾಲಯವನ್ನು ರಕ್ಷಿಸುತ್ತಾನೆ ಎನ್ನುವುದು ಇಲ್ಲಿನವರ ಆಭಿಪ್ರಾಯವಾಗಿದ್ದು ದೇವಾಲಯದ ಪಕ್ಕದಲ್ಲಿ ಈ ಹಿಂದೆ ಇದ್ದ ಗರಡಿ ಮನೆಯನ್ನು ಈಗ ನವೀಕರಿಸಲಾಗಿದೆ.

ದೇವಾಲಯದ ಮುಂದಿರುವ ಬೆಟ್ಟದ ತಪ್ಪಲ್ಲಿನಲ್ಲಿಯೇ ಮುತ್ತಿನ ಕೊಳವೊಂದಿದ್ದು ಅದು ಮೇಲಿನಿಂದ ನೋಡಿದಲ್ಲಿ ಬಲಗಾಲಿನ ರೂಪದಲ್ಲಿ ಇರುವುದು ಅತ್ಯಂತ ವಿಶೇಷವಾಗಿದೆ. ಇದೇ ಕೊಳದ ಮುಂದೆ ನೂರಾರು ವರ್ಷಗಳಷ್ಟು ಹಳೆಯದಾದ ಬದರಿಕಾವೃಕ್ಷ (ಯಲಚೀ ಹಣ್ಣಿನ ಮರ) ಇರುವುದೂ ಸಹಾ ಬಹಳ ಅದೃಷ್ಟದಾಯಕ ಎನ್ನುವುದು ಸ್ಥಳೀಯರ ಪ್ರತೀತಿಯಾಗಿದೆ.

oplus_2ಪ್ರಸ್ತುತ ದೇವಾಲಯ ದಕ್ಷಿಣ ಭಾಗದಲ್ಲಿ ಕೂಗಳತೆ ದೂರದಲ್ಲಿ ರಾವಣನ ಮಗ ಅಕ್ಷಯನನ್ನು ಸಂಹರಿಸಿದ ಭಂಗಿಯಲ್ಲೇ ಇರುವ ವೀರಾಂಜನೇಯ ಸ್ವಾಮಿ ಇದ್ದು, ಆತ ಭಕ್ತರ ಭವರೋಗಗಳನ್ನು ಕಳೆಯುವವನು ಎಂದು ನಂಬಲಾಗಿದ್ದು ಪ್ರಸ್ತುತ ಆ ಗುಡಿಯು ಶಿಥಿಲಾವಸ್ಥೆಯನ್ನು ತಲುಪಿದ್ದ ಕಾರಣ, ಊರ ಜನರ ಸಹಕಾರದಿಂದ ಅಷ್ಟಭುಜಾಕೃತಿಯ ರೂಪದಲ್ಲಿ ಭವ್ಯವಾದ ದೇವಾಲಯದ ನಿರ್ಮಾಣ ಜಾರಿಯಲ್ಲಿದೆ.

ಆ ಬೆಟ್ಟದ ಮೇಲೆ ಪಾಳೆಯಗಾರರ ಕಾಲದಲ್ಲಿ ಕಟ್ಟಿಸಿದ್ದ ಶ್ರೀ ಲಕ್ಶ್ಮೀನರಸಿಂಹ ಸ್ವಾಮಿಯ ದೇವಾಲಯವಿತ್ತು ಎಂಬುದರ ಕುರುಹಾಗಿ ಪಾಣಿಪೀಠವಿದ್ದದ್ದನ್ನು ಗಮನಿಸಿದ ಗ್ರಾಮಸ್ಥರು ಕೆಲವು ವರ್ಷಗಳ ಹಿಂದೆ ಎಲ್ಲರ ಸಹಕಾರದಿಂದ ಆ ಜಾಗದಲ್ಲಿ ಶ್ರೀ ಲಕ್ಶ್ಮೀನರಸಿಂಹ ಸ್ವಾಮಿಯ ದೇವಾಲಯವನ್ನು ಕಟ್ಟಿಸಿದ್ದಾರೆ. ಅದೇ ಬೆಟ್ಟದಲ್ಲಿ ವಿಷ್ಣುಪಾದವೂ ಸಹಾ ಇದ್ದು ಅಲ್ಲಿ ಪಿತೃಕಾರ್ಯಗಳನ್ನು ನಡೆಸಿದಲ್ಲಿ ಗಯಾದಲ್ಲಿ ನಡೆಸುವಷ್ಟೇ ಪುಣ್ಯಗಳು ಲಭಿಸುತ್ತವೆ ಎಂಬ ನಂಬಿಕೆ ಇರುವ ಕಾರಣ, ಇಂದಿಗೂ ಸಹಾ ಸಹಸ್ರಾರು ಭಕ್ತಾದಿಗಳು ಈ ಬೆಟ್ಟದಲ್ಲಿರುವ ವಿಷ್ಣುಪಾದದ ಬಳಿ ತಮ್ಮ ಪಿತೃಕಾರ್ಯಗಳನ್ನು ನಡೆಸಿ, ಅಲ್ಲಿರುವ ಮಂಟಪದಲ್ಲಿ ಕೆಲಕಾಲ ಕುಳಿತು ಧ್ಯಾನ ಮಾಡುವ ಮೂಲಕ ಗುರು ಹಿರಿಯರ ಆಶೀರ್ವಾದಕ್ಕೆ ಪಾತ್ರರಾಗಿ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ಪಡೆದು ಕೊಂಡು ಹೋಗುವುದು ವಿಶೇಷವಾಗಿದೆ.

ಇನ್ನು ಈ ಶ್ರೀ ಕ್ಷೇತ್ರಕ್ಕೂ ರಾಮಾಯಣಕ್ಕೂ ಅವಿನಾಭಾವ ಸಂಬಂಧವಿದ್ದು, ಸೀತಾಮಾತೆಯನ್ನು ಅರಸಿ ಬರುತ್ತಿದ್ದ ರಾಮ ಲಕ್ಷ್ಮಣರಿಗೆ ಈ ಬೆಟ್ಟದ ಬಳಿ ಬಂದಾಗ ನೀರಡಿಯಾದಾಗ, ಶ್ರೀ ರಾಮನು ತನ್ನ ತಮ್ಮ ಲಕ್ಷ್ಮಣನಿಗೆ ನೀರಿನ ವ್ಯವಸ್ಥೆ ಮಾಡಲು ಕೇಳಿದ ಕೂಡಲೇ, ಲಕ್ಷ್ಮಣನು ತನ್ನ ತೀಕ್ಷ್ಣವಾದ ಬಾಣವನ್ನು ಪ್ರಯೋಗಿಸಿ, ಆ ಬೆಟ್ಟದ ಮೇಲೆ ನೀರಿನ ಚಿಲುಮೆ ಉಕ್ಕಿವಂತೆ ಮಾಡಿ ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಾರೆ. ಇದಕ್ಕೆ ಪುರಾವೆ ಎನ್ನುವಂತೆ, ಇಂದಿಗೂ ಸಹಾ ಈ ಬೆಟ್ಟದ ಆರಂಭದಲ್ಲಿ ಈ ಚಿಲುಮೆಯನ್ನು ಕಾಣಬಹುದಾಗಿರುವುದು ವಿಶೇಷವಾಗಿದೆ.

ವರ್ಷದ 365 ದಿನಗಳೂ ಶ್ರೀ ವೀರನಾರಾಯಣ ಸ್ವಾಮಿಗೆ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಶೋಡಶೋಪಚಾರಗಳ ಸೇವೆಯ ಪೂಜೆ ಪುನಸ್ಕಾರಗಳು ನಡೆಯುತ್ತಲಿದ್ದು, ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಸಕಲ ಭಕ್ತಾದಿಗಳಿಗೂ ದೇವರ ದರ್ಶನಕ್ಕೆ ಮುಕ್ತ ಅವಕಾಶವಿದೆ. ಪ್ರತೀ ತಿಂಗಳ ಹುಣ್ಣಿಮೆ, ಶ್ರಾವಣ ಮಾಸದ ಶನಿವಾರಗಳಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ ಮತ್ತು ಪ್ರಸಾದ ವಿತರಣೆ ನಡೆದರೆ, ದೇವಾಲಯದ ಪ್ರಾಂಗಣದಲ್ಲಿ ಬಹಳ ವರ್ಷಗಳ ಹಿಂದೆ ರಾಮ ಕೋಟಿ ತಾರಕ ಯಜ್ಞವನ್ನು ಮಾಡಿ ಯಗವಕೋಟೆ ಸುತ್ತಮುತ್ತಲಿನ ಗ್ರಾಮಸ್ಥರು ಬರೆದ ರಾಮ ನಾಮ ಜಪದ ಪುಸ್ತಕಗಳನ್ನು ಭೂಮಿಯಲ್ಲಿ ಇರಿಸಿ ಅದರ ಮೇಲೆ ಕಟ್ಟಿರುವ ಬೃಂದಾವನದ ಮುಂದೆ, ಕಾರ್ತೀಕ ಮಾಸದಲ್ಲಿ ಧಾತ್ರಿ ಹೋಮ ಹವನಾದಿಗಳಂತಹ ವಿಶೇಷ ಪೂಜೆಯ ನಡೆಯುತ್ತದಲ್ಲದೇ, ಮಾಘ ಮಾಸದ ಭರತ ಹುಣ್ಣಿಮೆಯ ಒಂದು ವಾರಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಶ್ರೀ ವೀರನಾರಾಯಣ ಸ್ವಾಮಿಯ ಉತ್ಸವ ಮೂರ್ತಿಗೆ ಬ್ರಹ್ಮ ರಥೋತ್ಸವನ್ನು ನಡೆಸಲಾಗುತ್ತದೆ. ಈ ಹಿಂದೆ ತಿಳಿಸಿದಂತೆ ಈ ಉತ್ಸವಕ್ಕೆ ಕೇವಲ ಯಗವಕೋಟೆಯ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತಾದಿಗಳಲ್ಲದೇ, ದೇಶ ವಿದೇಶಗಳಲ್ಲಿ ನೆಲೆಸಿರುವ ಸ್ವಾಮಿಯ ಒಕ್ಕಲಿನವರು ಮತ್ತು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅತ್ಯಂತ ವೈಭವವಾಗಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ವಿಶೇಷವಾಗಿದೆ.

ಬ್ರಹ್ಮ ರಥೋತ್ಸವದ ದಿನ ಸುಮಾರು 20-30 ಅಡಿಗಳಷ್ಟು ಎತ್ತರವಿರುವ ಮರದ ರಥಕ್ಕೆ ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಿ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕಿಯ ಮೂಲಕ ತಂದು ರಥದ ಮೇಲಿಟ್ಟು ನೆರೆದಿದ್ದ ಭಕ್ತಾದಿಗಳ ಒಕ್ಕೊರಲಿನ ಉಘೇು ಉಘೇ.. ಗೋವಿಂದ! ಗೋವಿಂದಾ!! ಎಂಬ ನಾಮ ಸಂಕೀರ್ತನದ ಮೂಲಕ ದೇವಾಲಯದ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ. ಎಲ್ಲಾ ಜಾತ್ರೆಗಳಂತೆಯೇ ಇಲ್ಲಿಯೂ ಸಹಾ ರಥಕ್ಕೆ ಬಾಳೆ ಹಣ್ಣು, ದವನ ಮತ್ತು ಮರುಗವನ್ನು ಎಸೆಯುವ ಪದ್ದತಿಯು ರೂಡಿಯಲ್ಲಿದ್ದು ಬಾಳೆ ಹಣ್ಣುಗಳನ್ನು ಎಸೆಯುವ ಆರೋಗ್ಯಕರ ಪೈಪೋಟಿಯನ್ನು ನೋಡುವುದಕ್ಕೆ ನಯನ ಮನೋಹರವಾಗಿರುತ್ತದೆ. ರಥದ ಮುಂದೆ ನಾದಸ್ವರ, ದೊಳ್ಳು ಮತ್ತು ತಮಟೆಗಳ ನಾದ ಮನಸ್ಸಿಗೆ ಮುದ ನೀಡುತ್ತದೆ. ಇತ್ತೀಚಿನ ದಿನಕ್ಕೆ ತಕ್ಕಂತೆ ರಥೋತ್ಸವದಲ್ಲಿ ಕೀಲು ಕುದುರೆ, ಎತ್ತರೆತ್ತರದ ಬೆದರು ಬೊಂಬೆಗಳ ಕುಣಿತವು ಸಹಾ ನೆರೆದಿದ್ದ ಭಕ್ತಾದಿಗಳ ಮನಸ್ಸೂರೆಗೊಳ್ಳುತ್ತದೆ.

ಬ್ರಹ್ಮ ರಥೋತ್ಸದ ಹಿಂದಿನ ದಿನ, ಬ್ರಹ್ಮರಥೋತ್ಸವದ ದಿನ ಮತ್ತು ರಥೋತ್ಸವ ಮಾರನೇಯ ದಿನ ಹೀಗೆ ಮೂರು ದಿನಗಳ ಕಾಲ ಜೀರ್ಣೋದ್ಧಾರವಾಗುತ್ತಿರುವ ವೀರಾಂಜನೇಯ ಸ್ವಾಮಿಯ ಎದುರಿಗಿರುವ ರಾಮ ಮಂದಿರದಲ್ಲಿ, ಚಿಕ್ಕವರು, ದೊಡ್ಡವರು, ಹೆಂಗಸರು ಗಂಡಸರು ಎನ್ನುವ ಬೇಧವಿಲ್ಲದೇ, ಅ ಬಾಲವೃದ್ಧರಾದಿಯಾಗಿ ಅಖಂಡ ಮೂರು ದಿನಗಳ ಕಾಲ ಕಳೆದ 40-50 ವರ್ಷಗಳಿಂದಲೂ ಇಲ್ಲಿನ ಗ್ರಾಮಸ್ಥರು ರಾಮ ಭಜನೆಯನ್ನು ನಡೆಸಿಕೊಂಡು ಬರುತ್ತಿರುವುದು ಸಹಾ ವಿಶೇಷವಾಗಿದೆ.

ರಥೋತ್ಸವದ ವಾರ ಪೂರ್ತಿಯೂ ಬಂದ ಭಕ್ತಾದಿಗಳಿಗೆ ದೇವಾಲಯದ ಟ್ರಸ್ಟಿನ ವತಿಯಿಂದ ಅತ್ಯಂತ ಶುಚಿ ಮತ್ತು ರುಚಿಯಾದ ದಾಸೋಹವನ್ನು ಏರ್ಪಡಿಸುವುದು ಸಹಾ ಮೆಚ್ಚುಗೆಯ ಅಂಶವಾಗಿದೆ. ಎಲ್ಲಾ ಜಾತ್ರೆಗಳಂತೆಯೇ ಇಲ್ಲಿಯೂ ಸಹಾ ಮಕ್ಕಳಿಗೆ ವಿವಿಧ ಆಟಿಕೆಗಳು, ಕಡಲೇಪುರಿ, ಬೆಂಡು ಬತ್ತಾಸು ಕಲ್ಯಾಣ ಸೇವೆ,ಕಾರಾಸೇವೆಯಲ್ಲದೇ, ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತವಾಗಿರುವ ಬೊಂಬಾಯಿ ಮಿಠಾಯಿ, ಗೋಬಿ ಮಂಚೂರಿಗಳಲ್ಲದೇ, ಬಗೆ ಬಗೆಯ ಗಿರಿಗೀಟ್ಲೆ, ವಿವಿಧ ರೀತಿಯ ಜಾರು ಬಂಡೆಗಳೂ ಸಹಾ ಜಾತ್ರೆಗೆ ಬಂದ ಭಕ್ತಾದಿಗಳಿಗೆ ವಿಶೇಷ ಆಕರ್ಷಣೆಯಾಗಿದೆ.

ಇಷ್ಟೆಲ್ಲಾ ಮಾಹಿತಿಯನ್ನು ತಿಳಿದ ನಂತರ ಇನ್ನೇಕೆ ತಡಾ ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಯಗವಕೋಟೆಗೆ ಕುಟುಂಬ ಸಮೇತ ಭೇಟಿ ನೀಡಿ ಶ್ರೀ ವೀರನಾರಾಯಣ ಸ್ವಾಮಿಯ  ದರ್ಶನ ಪಡೆದು ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment