ಪಾಪಮೋಚನಿ ಏಕಾದಶಿ

ನಮ್ಮ ಹಿಂದೂ ಪಂಚಾಂಗದಲ್ಲಿ ಪ್ರತಿ ತಿಂಗಳನ್ನು ಎರಡು ಪಕ್ಷಗಳಾಗಿ ವಿಂಗಡಿಸಲಾಗಿದ್ದು, ಅಮಾವಾಸ್ಯೆಯಿಂದ ಹುಣ್ಣಿಯ ನಡುವಿನ 15 ದಿನಗಳನ್ನು ಶುಕ್ಲ ಪಕ್ಷ ಅರ್ಥಾತ್ ಬಹುಳ ಎಂದೂ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೂ ನಡುವಿನ 15 ದಿನಗಳನ್ನು ಕೃಷ್ಣ ಪಕ್ಷ ಅಥವಾ ಬಹುಳ ಎಂದೂ ಕರೆಯಲಾಗುತ್ತಿದ್ದು ಹೀಗೆ ಒಂದು ಪಕ್ಷದ ಹನ್ನೊಂದನೆಯ ದಿನಕ್ಕೆ ಏಕಾದಶಿ ಬರುತ್ತದೆ. ಈ ದಿನದಂದು ಬಹುತೇಕ ಆಸ್ತಿಕರು ನಿರಾಹಾರಿಗಳಾಗಿ ಅತ್ಯಂತ ಕಟ್ಟು ನಿಟ್ಟು ಉಪವಾಸವನ್ನು ಮಾಡುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಹೀಗೆ ಚೈತ್ರ ಮಾಸದ ಆರಂಭದ ಕಾಮದಾ ಏಕಾದಶಿ, ಆಷಾಢ ಮಾಸದ ಏಕಾದಶಿ, ಕಾರ್ತೀಕ ಮಾಸದ ಪ್ರಬೋಧಿನಿ ಏಕಾದಶಿ, ಪುಷ್ಯ ಮಾಸದ ವೈಕುಂಠ ಏಕಾದಶಿ ಯಿಂದ ಹಿಡಿದು ಫಾಲ್ಗುಣದ ಮಾಸದ ಕಡೆಯ ಏಕಾದಶಿ ಪಾಪ ವಿಮೋಚನೀ ಏಕಾದಶಿಯವರೆಗೂ ಹೀಗೆ ವರ್ಷವಿಡೀ ಬರುವ 24 ಏಕಾದಶಿಗಳಿಗೆ ಅದರದ್ದೇ ಆದ ಮಹತ್ವವಿದೆ.

ಇನ್ನು ಏಕಾದಶಿಯಂದು ಆಸ್ತಿಕ ಬಂಧುಗಳು ಮಾಡುವ ಉಪವಾಸವೂ ಅತ್ಯಂತ ಮಹತ್ವದ್ದಾಗಿದ್ದು ಅದು ಆರೋಗ್ಕಕ್ಕೂ ಉತ್ತಮ ಎಂದು ವೈಜ್ಞಾನಿಕವಾಗಿಯೂ ಧೃಢೀಕರಿಸಲ್ಬಟ್ಟಿದೆ. ಲಂಘನಂ ಪರಮೌಷಧಂ ಎಂದರೆ ಉಪವಾಸ ಮಾಡುವುದೂ ಒಂದು ರೀತಿಯ ಔಷಧ ಎಂದೇ ಆಯುರ್ವೇದದಲ್ಲಿ ತಿಳಿಸಲಾಗಿರುವ ಕಾರಣ ಏಕಾದಶಿಯಂದು ಉಪವಾಸ ಮಾಡುವುದೂ ಧಾರ್ಮಿಕವಾಗಿ ಅತ್ಯಂತ ಮಹತ್ವವಾಗಿದೆ. ಉಪವಾಸದ ಮುಖಾಂತರ ನಮ್ಮ ದೇಹದ ಪಚನ ಕ್ರಿಯೆ ಶುದ್ಧಿಗೊಂಡಲ್ಲಿ, ಇಡೀ ದಿನ ದೇವರ ಧ್ಯಾನದಲ್ಲಿ ಆಸಕ್ತರಾಗಿರುವ ಕಾರಣ, ಅದು ಆತ್ಮವನ್ನು ಶುದ್ಧೀಕರಿಸಿಮೋಕ್ಷವನ್ನು ಸಾಧಿಸಲು ಸಹಾಯಕವಾಗುತ್ತದೆ. ಇಡೀ ದಿನ ನಿಟ್ಟುಪವಾಸ ಮಾಡಲು ಆಶಕ್ತರಾದವರು ಮತ್ತು ವಯೋವೃದ್ಧರು, ಸಾತ್ವಿಕವಾದ ಲಘು ಫಲಹಾರವಾದ ವಿವಿಧ ಬಗೆಯ ಹಣ್ಣುಗಳು, ಹಾಲು ಮತ್ತು ಮುಸುರೆಯಲ್ಲದ ಪದಾರ್ಥಗಳನ್ನು ಸ್ವೀಕರಿಸುವ ಪದ್ದತಿಯೂ ರೂಢಿಯಲ್ಲಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳನ್ನೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಿದ್ದು ಅಂದು ಉಪವಾಸದಿಂದಿದ್ದು, ಮಾನಸಿಕವಾಗಿ ದೃಢಚಿತ್ತದಿಂದ ಹರಿ ನಾಮ ಜಪ ಮಾಡಿದಲ್ಲಿ ಪುಣ್ಯ ಲಭಿಸುತ್ತದೆ ಎಂದೇ ಬಹುತೇಕ ಆಸ್ತಿಕರ ನಂಬಿಕೆಯಾಗಿದೆ. ಹೀಗೆ ನಿರಾಹಾರಿಗಳಾಗಿ ಭಗವಂತನ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ.

ಏಕಾದಶಿ ವ್ರತದ ಅಂಗವಾಗಿ, ಏಕಾದಶಿಯ ಹಿಂದಿನ ದಿನ ದಶಮಿಯಂದು ಕೇವಲ ಮಧ್ಯಾಹ್ನ ಒಂದು ಹೊತ್ತು ಮಾತ್ರವೇ ಊಟ ಮಾಡಿ, ಸಕಲ ಭೋಗಗಳನ್ನು ತ್ಯಜಿಸಿ, ಏಕಾದಶಿಯಂದು ಇಡೀ ದಿನ ಉಪವಾಸವಿದ್ದು, ಮಾರನೆಯ ದಿನ ದ್ವಾದಶಿಯಂದು ನಿತ್ಯಕರ್ಮ ಮುಗಿಸಿ ಭೋಜನ ಮಾಡುವುದು ರೂಢಿಯಲ್ಲಿದೆ. ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ ಭಗವಂತನ ಸಮೀಪದಲ್ಲಿರುವುದು ಎಂಬ ಅರ್ಥ ಬರುತ್ತದೆ. ಹೀಗೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆ ಮಾಡುತ್ತಿರುವುದು ಎಂದರ್ಥವಾಗಿದೆ. ಹೀಗೆ ಮಾಡುವುದರಿಂದ ಏಕ ಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ.

papaಉಳಿದೆಲ್ಲಾ ಏಕಾದಶಿಗಿಂತಲೂ ಪಾಲ್ಗುಣ ಮಾಸದ ಕೃಷ್ಣ ಪಕ್ಷದಂದು ಬರುವ ಪಾಪವಿಮೋಚನಿ ಏಕಾದಶಿಯು ಅತ್ಯಂತ ವಿಶೇಷವಾಗಿದೆ. ಪಾಪಮೋಚನಿ ಎಂಬ ಪದವು ಪಾಪ ಮತ್ತು ಮೋಚನಿ ಎಂಬ ಎರಡು ಪದಗಳ ಜೋಡಣೆಯಿಂದಾಗಿದ್ದು, ಹೆಸರಿಗೆ ಅನ್ವರ್ಥದಂತೆಯೇ, ಈ ಏಕಾದಶಿಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಿದಲ್ಲಿ ಅದುವರೆವಿಗೂ ತಿಳಿದೋ ಇಲ್ಲವೇ ತಿಳಿಯದೆಯೋ ಮಾಡಿರಬಹುದಾದ ಯಾವುದೇ ರೀತಿಯ ಪಾಪ ಅಥವಾ ಕೆಟ್ಟ ಕೆಲಸಗಳನ್ನು ಭಗವಾನ್ ಭಗವಾನ್ ವಿಷ್ಣುವು ಕ್ಷಮಿಸುತ್ತಾನೆ ಎಂದೇ ಸಕಲ ಆಸ್ತಿಕರ ನಂಬಿಕೆಯಾಗಿದೆ.

geeta_upanyasaಉಳಿದ ಎಲ್ಲಾ ಏಕಾದಶಿಯಂತೆಯೇ ಪಾಪಮೋಚನಿ ಏಕಾದಶಿಯಂದೂ ಸಹಾ ಉಪವಾಸವೇ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುವುದರೊಂದಿಗೆ ಈ ದಿನ ಮನೆಯಲ್ಲಿ ಕುಳಿತೋ ಇಲ್ಲವೇ ದೇವಾಲಯಗಳು ಇಲ್ಲವೇ ಸತ್ಸಂಗಗಳಲ್ಲಿ ವಿಷ್ಣು ಸಹಸ್ರ ನಾಮ ಪಠಣ ಮತ್ತು ಭಗವದ್ಗೀತೆಗಳ ಪಠಣ ಇಲ್ಲವೇ ಭಗವದ್ಗೀತೆಯ ಕುರಿತಾದ ಉಪನ್ಯಾಸಗಳು ನಡೆದು ಮಾರನೇಯ ದಿನ ದ್ವಾದಶಿ ಪಪಾರಣದ ಮೂಲಕ ಅಂತ್ಯವಾಗುತ್ತದೆ.

tapasಪಾಪಮೋಚನಿ ಏಕಾದಶಿ ವ್ರತದ ವೃತ್ತಾಂತ ಈ ರೀತಿಯಾಗಿದೆ. ಈ ಹಿಂದೆ ಮೇಧಾವಿ ಎಂಬ ಪರಶಿವನ ಪರಮ ಭಕ್ತ ಋಷಿಯು ಚೈತ್ರರಥ ಎಂಬ ಅತ್ಯಂತ ಸುಂದರವಾದ ಮತ್ತು ಪರಿಮಳಯುಕ್ತ ಹೂವುಗಳಿಂದ ತುಂಬಿದ್ದ ಕಾಡಿನಲ್ಲಿ ಸುದೀರ್ಘವಾದ ತಪಸ್ಸನ್ನು ಮಾಡುತ್ತಿದ್ದರು. ಬಹಳ ಆಕರ್ಷಣೀಯವಾಗಿ ಈ ಕಾಡಿಗೆ ದೇವತೆಗಳ ರಾಜ ದೇವೇಂದ್ರನು ಆಗ್ಗಾಗ್ಗೆ ತನ್ನ ಅಪ್ಸರೆಯರೂ ಆಗಾಗ ಭೇಟಿ ನೀಡುತ್ತಿದ್ದರು. ಹಾಗೆ ಅಲ್ಲಿಗೆ ಭೇಟಿ ನೀಡುತ್ತಿದ್ದ ಅನೇಕ ಸುಂದರ ಅಪ್ಸರೆಯರು ಬಹಳ ಕ್ಷಾತ್ರತೇಜ ಮತ್ತು ಆಕರ್ಷಣೀಯವಾಗಿದ್ದ ಆ ಯುವ ಮೇಧಾವಿಯನ್ನು ತಮ್ಮ ಮೋಹ ಪಾಶದಲ್ಲಿ ಬೀಳಿಸಿಕೊಳ್ಳಲು ಪ್ರಯತ್ನಿಸಿದರಾದರೂ, ಯಾರು ಸಹ ಅದರಲ್ಲಿ ಸಫಲರಾಗಿರಲಿಲ್ಲ. ಈ ರೀತಿಯಾದ ಭಗ್ನ ಪ್ರೇಮಿ ಅಪ್ಸರೆಯರಲ್ಲಿ ಮಂಜುಘೋಷ ಎಂಬಾಕೆಯೂ ಇದ್ದೂ ಅವಳೂ ಕೂಡ ಈ ಋಷಿಯನ್ನು ಮೋಹಿಸಲು ಅನೇಕ ವರ್ಷಗಳ ಕಾಲ ಹಲವಾರು ಮಾರ್ಗಗಳಿಂದ ಪ್ರಯತ್ನಿಸಿದಳಾದರೂ, ಋಷಿಯ ಏಕಾಗ್ರತೆ ಮತ್ತು ಅಗರ ಸಮಚಿತ್ತತೆಯಿಂದ ವಿಚಲಿತಗೊಳಿಸಲು ಸಾಧ್ಯವಾಗಿರಲಿಲ್ಲ.

apsere2ಈ ರೀತಿಯ ಪ್ರಯತ್ನಗಳ ಮುಂದುವರೆದ ಭಾಗವಾಗಿ ಮಂಜುಘೋಷಳು ಮೇಧಾವಿ ಋಷಿಯು ತಪಸ್ಸು ಮಾಡುತ್ತಿದ್ದ ಪ್ರದೇಶದ ಸಮೀಪವೇ ಒಂದು ಗುಡಿಸಲನ್ನು ಕಟ್ಟಿಕೊಂಡು ಅಲ್ಲಿಯೇ ವಾಸಿಸುತ್ತಾ, ತನ್ನ ಸುಶ್ರಾವ್ಯ ಕಂಠದಿಂದ ಹಾಡುಗಳನ್ನು ಹಾಡುತ್ತಾ ಮೇಧಾವಿಯ ತಪಸ್ಸನ್ನು ಭಂಗಪಡಿಸಲು ಮುಂದಾದಳು. ಆಕೆ ಎಷ್ಟು ಸುಂದರವಾಗಿ ಹಾಡುತ್ತಿದ್ದಳೆಂದರೆ, ಕಾಮದೇವನಾದ ಮನ್ಮಥನೂ ಕೂಡಾ ಆಕೆಯ ಹಾಡುಗಳಿಂದ ಪ್ರಭಾವಿತನಾಗಿ ಆತನೂ ಸಹಾ ಮೇಧಾವಿಯ ತಪಸ್ಸನ್ನು ಭಂಗಪಡಿಸುವ ಮಂಜುಘೋಷಳ ದುಷ್ಕೃತ್ಯಕ್ಕೆ ಸಹಾಯ ಮಾಡಲು ಮುಂದಾದನು. ಆ ಪ್ರತೀಕವಾಗಿ ಮಂಜುಘೋಷಳು ಮತ್ತಷ್ಟು ಮೋಹಕವಾಗಿ ಹಾಡಲು ಪ್ರಾರಂಭಿಸಿದರೆ, ಕಾಮದೇವನು ತನ್ನ ಶಕ್ತಿಯುತ ಬಾಣದಿಂದ ಬಿಲ್ಲನ್ನು ಮೇಧಾವಿಯ ಕಡೆ ಹೊಡೆಯುವ ಮೂಲಕ ಅವನ ತಪಸ್ಸನ್ನು ಭಂಗ ಮಾಡಿ ಆತನ ಗಮನವನ್ನು ಮಂಜುಘೋಷಳೆಡೆಗೆ ಹರಿಸಲು ಸಫಲನಾದನು.

apsare2ಮಂಜುಘೋಷಳ ಮಾದಕ ಮೈಮಾಟ ಮತ್ತು ಮೋಹಕ ನೃತ್ಯ ಮತ್ತು ಹಾಡಿನ ಮೋಡಿಗೆ ಸಿಲುಕಿದ ಮೇಧಾವಿ ತನ್ನ ತಪಸ್ಸನ್ನು ನಿಲ್ಲಿಸಿ ಆಕೆಯ ಮೋಹ ಪಾಶದಲ್ಲಿ ಸಿಲುಕಿ, ರಾತ್ರಿ ಮತ್ತು ಹಗಲಿನ ವ್ಯತ್ಯಾಸವನ್ನು ಸಹಾ ಅರಿಯದೇ ಪ್ರೇಮಪಾಶದಲ್ಲಿ ಬಿದ್ದು ಸುಮಾರು 57 ವರ್ಷಗಳ ಕಾಲ ವೈವಾಹಿಕ ಜೀವನವನ್ನು ನಡೆಸಿದ ನಂತರ, ಮಂಜುಘೋಷಳು ಮೇಧಾವಿಯಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಂಡು ಆಕೆಯು ಅವನನ್ನು ತ್ಯಜಿಸಲು ನಿರ್ಧರಿಸಿ,

apsere3ತನಗೆ ಮತ್ತೆ ದೇವಲೋಕಕ್ಕೆ ಹೊರಡಲು ಅನುಮತಿ ಕೊಡು ಎಂದು ಮೇಧಾವಿಯನ್ನು ಕೇಳಿಕೊಂಡಾಗಲೇ, ಛೇ, ಅಪ್ಸರೆಯ ಕಾಮಕ್ಕಾಗಿ ತನ್ನ ಕರ್ತವ್ಯದಿಂದ ವಿಹಿತನಾದದ್ದು ಅರಿವಾಗಿ ಮತ್ತೆ ತಾನು ಕಳೆದುಕೊಂಡಿದ್ದ ಇಂದ್ರಿಯಗಳನ್ನು ಮರಳಿ ಪಡೆದು ತನ್ನ ತಪಸ್ಸನ್ನು ಭಂಗಮಾಡಿದ ಮಂಜುಘೋಷಳಿಗೆ ಕೊಳಕು ಮಾಟಗಾತಿಯಾಗುವಂತೆ ಶಪಿಸಿದ್ದಲ್ಲದೇ, ಬಹಳ ದುಃಖಿತನಾಗಿ ತನ್ನ ತಂದೆಯಾದ ಚ್ಯವನ ಋಷಿಯ ಆಶ್ರಮಕ್ಕೆ ಬಂದು ನಡೆದ ವೃತ್ತಾಂತವನ್ನೆಲ್ಲಾ ಸಂಪೂರ್ಣವಾಗಿ ಹೇಳಿ ತಾನು ಮಾಡಿದ ಈ ಪಾಪಕೃತ್ಯಗಳಿಂದ ಪಾರಾಗುವ ಪರಿಯನ್ನು ತಿಳಿಸಿ ಎಂದು ತಂದೆಯವರಲ್ಲಿ ಕೇಳಿಕೊಂಡನು.

ಮಗನಿಂದ ಆತನಿಗೇ ಅರಿವಿಲ್ಲದಂತೆ ಆದ ಈ ಕೃತ್ಯಕ್ಕೆ ಪಾಪಮೋಚನಿ ಏಕಾದಶಿಯಂದು ಮಾಡುವ ಉಪವಾಸ ವ್ರತವೇ ಪರಿಹಾರ ಎಂದು ತಿಳಿಸಿದ್ದಲ್ಲದೇ, ಅದೇ ರೀತಿಯಾಗಿ ತನ್ನ ಮಗನಿಗೆ ಮೋಸ ಮಾಡಿದ್ದನ್ನೂ ಸಹಾ ಲೆಖ್ಖಿಸದೇ, ಮಂಜುಘೋಷಳಿಗೂ ಸಹಾ ಅದೇ ಉಪವಾಸ ವ್ರತವನ್ನು ಮಾಡಲು ಸೂಜಿಸಿದನು. ಆಗ ಮೇಧಾವಿ ಮತ್ತು ಮಂಜುಘೋಷಳು ಬೇರೆ ಬೇರೆಯಾಗಿ ಬಹಳ ಶ್ರದ್ಧಾ ಭಕ್ತಿಯಿಂದ ಏಕಾದಶಿ ಉಪವಾಸವ್ರತವನ್ನು ಮಾಡಿ ಭಕ್ತಿಯಿಂದ ಭಗವಾನ್ ವಿಷ್ಣುವಿನ ಧ್ಯಾನವನ್ನು ಮಾಡಿದ ಪರಿಣಾಮ ಸಂತೃಪ್ತನಾದ ವಿಷ್ಣುವ ಆವರಿಬ್ಬರ ತಪ್ಪುಗಳನ್ನು ಮನ್ನಿಸಿ ಅವರಿಬ್ಬರಿಗೂ ಮುಕ್ತಿಯನ್ನು ಕೊಟ್ಟನು.

geeta2ಅಂದಿನಿಂದ ಭೂಲೋಕದಲ್ಲಿ ಆಸ್ತಿಕ ಬಂಧುಗಳು ತಮ್ಮಿಂದ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ಆಗಿರ ಬಹುದಾದಂತಹ ಪಾಪಗಳಿಂದ ವಿಮುಕ್ತರಾಗಲು ಪಾವಮೋಚನಿ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಸಂಪ್ರದಾಯವನ್ನು ರೂಢಿಗೆ ತಂದರು. ಒಟ್ಟಿನಲ್ಲಿ ದೇವನೊಬ್ಬ ನಾಮ ಹಲವು ಎನ್ನುವಂತೆ ನಮ್ಮ ಪೂರ್ವಜರು ಈ ರೀತಿಯಾಗಿ ನೂರಾರು ಹಬ್ಬ ಹರಿದಿನಗಳ ಆಚರಣೆಗಳ ಮೂಲಕ ಭಗವಂತನ ಧಾನ್ಯ ಮಾಡಿ ಮುಕ್ತಿಯನ್ನು ಪಡೆಯುವುದಕ್ಕಾಗಿ ಮಾಡಿರುವುದನ್ನು ಸರಿಯಾಗಿ ಅರ್ಥೈಸಿಕೊಂಡು ಅವುಗಳನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿವ ಮೂಲಕ ಅಂತಿಮವಾಗಿ ಮುಕ್ತಿಯನ್ನು ಪಡೆಯೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment