ಸಾಮಾನ್ಯವಾಗಿ ಬಹುತೇಕ ಹಿರಿಯರನ್ನು ಸುಮ್ಮನೇ ಮಾತಿಗೆ ಎಳೆದರೆ, ಅವರು ಹೇಳುವ ಮಾತೆಂದರೆ, ಛೇ! ಕಾಲ ಕೆಟ್ಟೋಯ್ತು. ಈ ಲೋಕದಲ್ಲಿ ಬರೀ ಪಾಪಿಗಳೇ ತುಂಬಿ ಹೋಗಿರುವುದರಿಂದ ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆ ಆಗ್ತಾ ಇಲ್ಲಾ ನೋಡಿ. ಎಲ್ಲಾ ಕಡೇನೂ ಬರಗಾಲ. ತಿನ್ನೋದಿಕ್ಕೆ ಅನ್ನಾ ಬಿಡೀ, ಕುಡಿಯೋದಿಕ್ಕೂ ಒಂದು ತೊಟ್ಟು ನೀರೂ ಸಹಾ ಉಚಿತವಾಗಿ ಸಿಗ್ತಾ ಇಲ್ಲಾ. ನೀರನ್ನೂ ಸಹಾ ಕೊಂಡು ಕುಡಿಯುವ ಕಲಿಗಾಲ ಬಂತು ನೋಡಿ. ನಮ್ಮ ಕಾಲದಲ್ಲಂತೂ ಹೀಗೆ ಇರಲಿಲ್ಲಾ ನೋಡಿ.. ಎಂದು ರಾಗಾ ಎಳೆಯುತ್ತಾರೆ. ಆದರೆ ನಿಜ ಹೇಳಬೇಕು ಅಂದ್ರೇ, ಕಾಲ ಅಷ್ಟೇನೂ ಬದಲಾಗಿ ಇಲ್ಲಾ!. ಬದಲಾಗಿರುವುದು ನಮ್ಮ ಮಾನಸಿಕ ಸ್ಥಿತಿ ಎಂಬುದು ನಿಜವಾದರೂ ಅದನ್ನು ಒಪ್ಪಿಕೊಳ್ಳಲು ಸಿದ್ಧ ಇಲ್ಲದಿರೋದೇ ನಿಜವಾದ ಕಾರಣ. ಹಾಗಾಗಿ ಕಾಲ ಇನ್ನೂ ಚೆನ್ನಾಗಿಯೇ ಇದೆ ಎಂಬುದಕ್ಕೆ ನಿದರ್ಶನ ಎನ್ನುವ ಹಾಗೆ ಕಳೆದ ನಾಲ್ಕೈದು ದಶಕಗಳಲ್ಲಿ ನಡೆದ ಈ ಪ್ರಸಂಗಗಳೇ ಸಾಕ್ಷಿ.
ನನಗಿನ್ನೂ ಸರಿಯಾಗಿ ನೆನಪಿರುವ ಹಾಗೆ ಅದು ಡಿಸೆಂಬರ್ 20, 1978, ನಾವಿನ್ನೂ ನೆಲಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ಕಾಲ. ಎಲ್ಲಾ ಮಧ್ಯಮ ವರ್ಗದವರು ಆಸೆ ಪಡುವಂತೆ ನಮ್ಮ ಅಮ್ಮಾ ಅಪ್ಪನಿಗೂ ನಮ್ಮದೇ ಆದ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆ ಇತ್ತು. ಅಪ್ಪಾ ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಬರುತ್ತಿದ್ದ ಸಂಬಳದಲ್ಲೇ ಬಹಳ ಕಷ್ಟ ಪಟ್ಟು ಪೈಸೆ ಪೈಸೇ ಉಳಿಸಿ ಅಲ್ಪ ಸ್ವಲ್ಪ ಸಾಲಾ ಕೂಡಾ ಮಾಡಿ ಬೆಂಗಳೂರಿನ ಮತ್ತೀಕೆರೆಯ 1B ಕ್ರಾಸಿನಲ್ಲಿ 30×40 ನಿವೇಶನವನ್ನು ಕೊಳ್ಳಲು ನಿರ್ಧರಿಸಲಾಗಿದ್ದ ನಿವೇಶನದ ರಿಜಿಸ್ಟ್ರೇಷನ್ ದಿನ. ಹೇಗೂ ನಮಗೆಲ್ಲಾ ಕ್ರಿಸ್ಮಸ್ ರಜೆ ಇದ್ದ ಕಾರಣ, ಒಂದು ದಿನ ಮುಂಚೆಯೇ ನಾವೆಲ್ಲರೂ ಬೆಂಗಳೂರಿನ ಕೋದಂಡರಾಮಪುರದಲ್ಲಿದ್ದ ನಮ್ಮ ಚಿಕ್ಕಪ್ಪನ ಮನೆಗೆ ಬಂದು ನಮ್ಮನ್ನೆಲ್ಲಾ ಅಲ್ಲೇ ಬಿಟ್ಟು ನಮ್ಮ ತಂದೆ, ತಾಯಿ ಮತ್ತು ನಮ್ಮ ತಂದೆಯ ಸಹೋದ್ಯೋಗಿಗಳು ಮತ್ತು ಆತ್ಮೀಯರಾಗಿದ್ದ ಬಿ.ಎಸ್. ಕೃಷ್ಣನ್ ಅವರೊಂದಿಗೆ ಸೈಟ್ ರಿಜಿಸ್ಟ್ರೇಷನ್ ಮಾಡಿಸಲು ರಾಜಾಜಿನಗರದ ರಿಜಿಸ್ಟರ್ ಕಛೇರಿಗೆ ಹೋಗಿದ್ದಾರೆ.
ಆಗೆಲ್ಲಾ ಈಗಿನ ರೀತಿಯಲ್ಲಿ ಅತ್ಯಂತ ಸುಲಭವಾಗಿ ಒಬ್ಬರನ್ನೊಬ್ಬರು ಸಂಪರ್ಕಿಸುವ ಸಾಧನಗಳು ಇಲ್ಲದಿದ್ದ ಕಾರಣ, ಸೈಟ್ ಮಾರುವವರು ಬರುವವರೆಗೂ ಕಾಯ್ದು ನಂತರ ಛಾಪಾ ಕಾಗದ ತೆಗೆದುಕೊಂಡು ಅದನ್ನು ಟೈಪ್ ಮಾಡಿಸಿ, ಅಂದು ಕೊಂಡಿದ್ದಕ್ಕಿಂತಲೂ ಸ್ವಲ್ಪ ತಡವಾದರೂ, ಇನ್ನೇನು ಎಲ್ಲವೂ ಸುಸೂತ್ರವಾಗಿ ನೆಡೆಯುತ್ತಿದೆ ಎಂದು ಕೊಳ್ಳುವ ಸಮಯಕ್ಕೆ ಸರಿಯಾಗಿ, ಬರ ಸಿಡಿಲು ಬಡಿದಂತೆ, ಅಂದಿನ ಜನತಾಪಕ್ಷದ ಶ್ರೀ ಮೊರಾರ್ಜಿ ದೇಸಾಯಿ ಅವರ ಸರ್ಕಾರ ಕಾಂಗ್ರೇಸ್ ಪಕ್ಷದ ಅಧಿನಾಯಕಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಬಂಧನ ಮಾಡಿದ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲಾ ಕಡೆಯಲ್ಲೂ ಹಬ್ಬುತ್ತಿದ್ದಂತೆಯೇ, ಇದ್ದಕ್ಕಿದ್ದಂತೆಯೇ ದೊಂಬಿ ಎದ್ದು, ಅಘೋಷಿತ ಬಂದ್ ಹೇರಲ್ಪಟ್ಟು ಕೆಲವರು ಬಲವಂತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರೆ, ಇನ್ನೂ ಕೆಲವರು ಮುಂಜಾಗ್ರತಾ ಕ್ರಮವಾಗಿ ತಾವೇ ತಮ್ಮ ಅಂಗಡಿ ಮುಗ್ಗಟ್ಟುಗಳ ಬಾಗಿಲು ಕಾಕಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇಷ್ಟೆಲ್ಲಾ ರಂಪ ರಾಮಾಯಣಗಳ ನಡುವೆಯೇ ನಮ್ಮ ಮತ್ತು ಕೃಷ್ಣನ್ ಮಾವಾ ಅವರ ಸೈಟ್ ರಿಜಿಸ್ಟ್ರೇಷನ್ ಆಗುವಷ್ಟರಲ್ಲಿ ಅವರೆಲ್ಲರ ಹೊಟ್ಟೆ ಕವಾ ಕವಾ ಎನ್ನುತ್ತಿತ್ತು.
ಹೊರಗೆ ಒಂದು ಹೋಟೇಲ್ ಸಹಾ ಬಾಗಿಲು ತೆರೆದಿಲ್ಲಾ. ಓಡಾಡಲು ಬಸ್ ಸಹಾ ಇಲ್ಲಾ. ಹಾಗೂ ಹೀಗೂ ಸೈಟ್ ಮಾರಿದ ಶಾಮಣ್ಣನವರು, ಕೃಷ್ಣನ್ ಮಾವಾ, ನಮ್ಮ ಅಪ್ಪಾ ಮತ್ತು ಅಮ್ಮಾ ನಡೆದುಕೊಂಡೇ, ಮಿಲ್ಕ್ ಕಾಲೋನಿಯ ಬಳಿ ಇದ್ದ ನಮ್ಮ ತಾಯಿಯವರ ಸೋದರಮಾವನ ಮನೆಗೆ ಬಂದು ಆಗ ಬಿಸಿ ಬಿಸಿ ಅಡುಗೆ ಮಾಡಿಸಿಕೊಂಡು ಊಟ ಮಾಡಿ ಶಾಮಣ್ಣನವರನ್ನು ಬೀಳ್ಕೊಟ್ಟು ಮತ್ತೆ ಅಲ್ಲಿಂದ ಕಾಲ್ನಡಿಗೆಯಲ್ಲೇ ನಮ್ಮ ಚಿಕ್ಕಪ್ಪನ ಮನೆಗೆ ಬರುವಷ್ಟರಲ್ಲಿ ಸಂಜೆಯಾಗಿತ್ತು. ಅದೇ ಸಂಜೆ ನಮ್ಮ ಚಿಕ್ಕಮ್ಮನ ಮದುವೆಯ ಸಂಬಂಧದ ಮಾತುಕತೆಗೆ ಎನ್. ಆರ್. ಕಾಲೋನಿಗೆ ಹೋಗುವ ಕಾರ್ಯಕ್ರಮ ಪೂರ್ವ ನಿರ್ಧಾರಿತವಾಗಿದ್ದರಿಂದ ನಮ್ಮನ್ನು ಚಿಕ್ಕಪ್ಪನ ಮನೆಯಲ್ಲೇ ಬಿಟ್ಟು ನಮ್ಮ ಅಪ್ಪಾ ಅಮ್ಮಾ ಮತ್ತೆ ನಡೆದುಕೊಂಡು ಹೋಗಲು ನಿರ್ಧರಿಸಿದರಾದರೂ, ಅದೇನೋ ಕಾರಣದಿಂದ ಕಡೆಯ ಗಳಿಗೆಯಲ್ಲಿ ನಮ್ಮನ್ನೂ ಕರೆದುಕೊಂಡು ಹೋಗಲು ನಿರ್ಧರಿಸಿದರು.
ನನಗೆ ಆಗ 8 ವರ್ಷ. ಜ್ವರದಿಂದ ನರಳುತ್ತಿದ್ದ ನನ್ನ ದೊಡ್ಡ ತಂಗಿಗೆ 7 ಮತ್ತು ನನ್ನ ಎರಡನೇ ತಂಗಿಗೆ 5 ವರ್ಷ. ಜ್ವರದಿಂದ ನರಳುತ್ತಿದ್ದ ತಂಗಿಯನ್ನು ಹೆಗಲ ಮೇಲೆ ಹಾಕಿಕೊಂಡ ಅಪ್ಪಾ ಉಮಾ, ನಡೀ ಹೋಗೋಣ ಎಂದಿದ್ದಷ್ಟೇ ನೆನಪು. ಅಲ್ಲಿಂದ ಸೀದ ಲಾಲ್ ಬಾಗ್ ವರೆಗೂ ಅಪ್ಪಾ ಅಪ್ಪಾ ಮತ್ತು ಕೃಷ್ಣಾ ಮಾವ ನನ್ನ ತಂಗಿಯನ್ನು ಹೆಗಲ ಮೇಲೆ ಹೊತ್ತಿಕೊಂಡೇ ನಡೆದರೆ, ನಾನು ಮತ್ತು ನನ್ನ ಚಿಕ್ಕ ತಂಗಿ ದಾರಿಯಲ್ಲಿ ಅದೂ ಇದೋ ನೋಡಿಕೊಂಡು ಅಪ್ಪಾ ಅಮ್ಮನ ಕೈ ಹಿಡಿದುಕೊಂಡು ಅವರನ್ನು ಹಿಂಬಾಲಿಸಿದೆವು. ಲಾಲ್ ಬಾಗ್ ಹತ್ತಿರ ಬಂದಾಗ, ಅಮ್ಮಾ ಅಪ್ಪಾ ವಿಲ್ಸನ್ ಗಾರ್ಡನ್ ನಲ್ಲಿದ್ದ ಚಿಕ್ಕಮ್ಮನನ್ನು ಎನ್. ಆರ್. ಕಾಲೋನಿಗೆ ಕರೆದುಕೊಂಡು ಹೋಗಲು ಆ ಕಡೆ ಹೋದರೆ, ಜ್ವರದಿಂದ ನರಳುತ್ತಿದ್ದ ನನ್ನ ತಂಗಿ ಕೃಷ್ಣಾ ಮಾವನ ಹೆಗಲೇರಿ, ಯಥಾ ಪ್ರಕಾರ ನಾನು ನನ್ನ ಪುಟ್ಟ ತಂಗಿ ಮಾವನನ್ನು ಹಿಂಬಾಲಿಸುತ್ತಾ, ಟಾಟಾ ಸಿಲ್ಕ್ ಫಾರಂ ಕಡೆಗೆ ಹೊರೆಟವು. ನಾವೂ ಸಹಾ ಸಣ್ಣವರು ಮತ್ತು ಮೇಲಾಗಿ ಸುದೀರ್ಘವಾಗಿ ನಡೆದಿದ್ದ ಕಾರಣ ಕಾಲ್ಗಳೆಲೆಲ್ಲವೂ ನೋಯುತ್ತಿದ್ದದ್ದಲಲ್ದೇ,ಣ ಹೊಟ್ಟೆ ಕೂಡಾ ಹಸಿಯುತ್ತಿದ್ದಾದರೂ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅದನ್ನು ತೋರಿಸಿಕೊಳ್ಳದೇ ಸುಮ್ಮನೇ ನಾಲ್ವರೂ ಸಹಾ ಹೋಗುತ್ತಿದ್ದೆವು.
ಆಗ ಇದ್ದಕ್ಕಿದ್ದಂತೆಯೇ, ಅದ್ಯಾರೋ ವಯಸ್ಸಾದ ಪುಣ್ಯಾತ್ಮರು ನಮ್ಮನ್ನು ನೋಡಿ, ಅರೇ! ಇದೇನಿದು ಇಷ್ಟು ತಡರಾತ್ರಿಯಲ್ಲಿ ಇಷ್ಟು ಪುಟ್ಟ ಪುಟ್ಟ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗುತ್ತಿದ್ದೀರೀ? ಎಂದು ಕೇಳಿದಾಗ, ವಿಧಿ ಇಲ್ಲದೇ ಆ ಅಪರಿಚಿತರಿಗೆ ಕೃಷ್ಣಾ ಮಾವ ಎಲ್ಲವನ್ನೂ ವಿವರಿಸಿದಾಗ, ಅವರು ಛೇ! ಮಕ್ಕಳು ಅಷ್ಟು ದೂರ ನಡೆದಿರುವ ಕಾರಣ ಬಹಳ ದಣಿದಿರುವುದಲ್ಲದೇ, ಹಸಿವೂ ಸಹಾ ಆಗಿರಬೇಕು ಎಂದು ಹೇಳುತ್ತಾ, ಇಲ್ಲೇ ಹತ್ತಿರದಲ್ಲೇ ನಮ್ಮ ಮನೆ ಇದೆ. ಅಲ್ಲಿಗೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಹೋಗಿ ಎಂದು ಹೇಳಿ, ಎಷ್ಟು ಬೇಡಾ ಬೇಡವೆಂದರೂ ಅವರೇ ನಮ್ಮ ತಂಗಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅವರ ಮನೆಗೆ ಕರೆದುಕೊಂಡು ಹೋಗಿ ನಮ್ಮೆಲ್ಲರಿಗೂ ಹಾಲು ಹಣ್ಣು ಕೊಟ್ಟು ಕೆಲಕಾಲ ಅವರ ಮನೆಯಲ್ಲಿ ವಿಶ್ರಾಂತಿ ಪಡೆದು ಕೊಂಡ ಸಂಧರ್ಭ ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ಹಾಗೆ ಹಾಲು ಹಣ್ಣು ತಿಂದು ಚೇತರಿಸಿಕೊಂಡ ನಂತರ ಆ ರಾತ್ರಿಯಲ್ಲೂ ಕೃಷ್ಣಾ ಮಾವನ ಮನೆಗೆ ಹೋಗಿ ಮತ್ತೆ ಅಲ್ಲಿ ಅವರ ಮಡದಿ ಗಾಯತ್ರಿ ಅತ್ತೇ ಮಾಡಿದ ಅಡುಗೆ ತಿಂದು ಮಲಗಿದ ನಮಗೆ ಬೆಳಿಗ್ಗೆ ಎಚ್ಚರವಾದಾಗ, ಅಪ್ಪಾ ಅಮ್ಮಾ ಚಿಕ್ಕಮ್ಮನೂ ಸಹಾ ಕೃಷ್ಣಾ ಅವರ ಮನೆಗೆ ತಡರಾತ್ರಿಯ ಸಮಯದಲ್ಲಿ ಬಂದು, ಹೋದ ಕೆಲಸವೆಲ್ಲಾ ಸುಸೂತ್ರವಾಗಿ ನಡೆದ ವಿಚಾರ ತಿಳಿಸಿದ್ದನ್ನು ಈಗ ನೆನಪಿಸಿಕೊಂಡರೆ, ಖಂಡಿತವಾಗಿಯೂ ನಮ್ಮ ಅಮ್ಮನ ಸೋದರ ಮಾವನ ಮಡದಿ, ಕೃಷ್ಣಾ ಮಾವ ಮತ್ತು ಆ ಅಪರಿಚಿತ ವೃದ್ಧರು ಆಪದ್ಭಾಂದವರಾಗಿಯೇ ಕಾಣುತ್ತಾರೆ.
ಇನ್ನು 2005-2006ರ ಸಮಯ. ಚಂದ್ರಶೇಖರ್ ಆಜಾದ್ ಅವರ ಜಯಂತಿಯ ಅಂಗವಾಗಿ ಜಾಲಹಳ್ಳಿಯ ಶ್ರೀ ವಿನಾಯಕ ಮಂಡಳಿಯವರು ಪ್ರತೀ ವರ್ಷವೂ ನಡೆಸುವ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಲು ಸಿದ್ಧವಾಗುತ್ತಿದ್ದಂತೆಯೇ, ಎಷ್ಟೋ ದಿನಗಳ ನಂತರ ನಮ್ಮ ಹಳೆಯ ಮನೆಯಲ್ಲಿದ್ದ ತೆಂಗಿನಮರದಿಂದ ಕಾಯಿಯನ್ನು ಕೀಳಲು ರವಿ ನಮ್ಮ ಮನೆಗೆ ಬಂದು ಸರ್, ಇವತ್ತು ಸ್ವಲ್ಪ ಫ್ರೀ ಇದ್ದೀನಿ, ಬನ್ನಿ ಕಾಯಿ ಕಿತ್ತು ಕೊಂಡು ಬರೋಣ ಎಂದಾಗ, ನಮ್ಮ ತಂದೆಯವರು ಮಗೂ, ಹಾಗೇ ನಮ್ಮನ್ನು ಮನೆಯ ಹತ್ತಿರ ಬಿಟ್ಟು ರಕ್ತ ದಾನ ಮಾಡಿ ಬರುವಾಗ ನಮ್ಮನ್ನು ಕರೆದುಕೊಂಡು ಬಂದು ಬಿಡು ಎಂದಾಗ ಸರಿ ಎಂದು ಅಪ್ಪಾ ಮತ್ತು ರವಿಯನ್ನು ಹಳೆಯ ಮನೆಯ ಹತ್ತಿರ ಬಿಟ್ಟು ನಾನು ಜಾಲಹಳ್ಳಿಗೆ ಹೋಗಿ ರಕ್ತದಾನ ಮಾಡಿ ಕೆಲ ಹೊತ್ತು ಅಲ್ಲಿಯೇ ವಿಶ್ರಾಂತಿ ಪಡೆದು ಅಲ್ಲಿಗೆ ಬಂದಿದ್ದ ಗೆಳೆಯರನ್ನೆಲ್ಲಾ ಮಾತನಾಡಿಸಿ ನಮ್ಮ ಹಳೆಯ ಮನೆಗೆ ಬರುವಷ್ಟರಲ್ಲಿ ಐದೂ ಮರಗಳಿಂದ ಕಾಯಿಗಳನ್ನು ಕೀಳಿಸಿ ಎಳನೀರು, ಎಳೆಯ ಮತ್ತು ಬಲಿತ ಕಾಯಿಗಳಾಗಿ ವಿಂಗಡಿಸಲಾಗುತ್ತಿತ್ತು. ನನ್ನನ್ನು ಕಂಡ ಕೂಡಲೇ ಮಗೂ ಅದು ಮಾಡು ಇದು ಮಾಡು ಎಂದು ಒಂದೇ ಸಮನೇ ಮೇಲಿಂದ ಅಪ್ಪಾ ಹೇಳಿದ ಕೆಲಸವನ್ನೂ ಮಾಡಿ ಕಾಯಿಗಳನ್ನೂ ಚೀಲದಲ್ಲಿ ತುಂಬಿ ಕಾರಿನಲ್ಲಿ ರವಿಯ ಜೊತೆ ಇರಿಸುತ್ತಿದ್ದಂತೆಯೇ ಅದೇನೋ ಕಾಣೇ, ಕಣ್ಗಳೆಲ್ಲಾ ಕತ್ತಲೆ ಅಗುತ್ತಿದೆ. ಕೈ ಕಾಲುಗಳು ಸೋಲುತ್ತಿವೆ. ಮಾತನಾಡಲು ಪದಗಳೇ ಬರುತ್ತಿಲ್ಲಾ, ತಲೇ ಸಹಾ ಗಿರ್! ಎಂದು ತಿರುಗಿದ ಅನುಭವವಾಗಿ ಅಲ್ಲೇ ಇದ್ದ ಜಗುಲಿಯ ಮೇಲೆ ಹಾಗೇ ಮಲಗಿ ಬಿಟ್ಟೆ.
ಅದುವರೆವಿಗೂ ಚನ್ನಾಗಿ ಇದ್ದ ನಾನು, ಇದ್ದಕ್ಕಿದ್ದಂತೆಯೇ ಹೀಗೆ ಬಿದ್ದದ್ದನ್ನು ನೋಡಿ ಗಾಭರಿ ಕೊಂಡ ನಮ್ಮ ಅಪ್ಪಾ ಮತ್ತು ರವಿ ಅಲ್ಲೇ ಇದ್ದ ತೊಟ್ತಿಯಿಂದ ನೀರನ್ನು ತಂದು ನನ್ನ ತಲೆಗೆ ತಟ್ಟೀ ಮಗೂ ಮಗೂ ಎನಾಗ್ತಾ ಇದೇ! ಎಂದು ಕೇಳುತ್ತಿರುವುದು ನನಗೆ ಕೇಳಿಸುತ್ತಿದೆಯಾದರೂ, ಹೇಳಿಕೊಳ್ಳಲು ಆಗದ ನಿತ್ರಾಣ ಸ್ಥಿತಿ ನನ್ನದು. ಇದನ್ನೆಲ್ಲಾ ನೋಡಿದ ನಮ್ಮ ಬಾಡಿಗೆ ಮನೆಯಾಕೆ, ಕೂಡಲೇ ಮನೆಯೊಳಗೆ ಓಡಿ ಹೋಗಿ ಒಂದು ಲೋಟಾ ನಿಂಬೇಹಣ್ಣಿನ ಪಾನಕ ಮಾಡಿ, ಅದಕ್ಕೊಂದು ಚಿಟಿಕೆ ಉಪ್ಪನ್ನೂ ಸೇರಿಸಿ ತಂದು ಸ್ವತಃ ತಮ್ಮ ಮಗನಂತೆ ನನ್ನನ್ನು ಅವರ ತೋಳುಗಳ ಮೇಲೆ ಹಾಕಿಕೊಂಡು ಪಾನಕವನ್ನು ಕುಡಿಸಿ, ಸ್ವಲ್ಪ ಹೊತ್ತು ಹಾಗೇ ಮಲಗಿಕೊಳ್ಳೀ ಸ್ವಾಮ್ಯಾರೇ! ಎಂದು ಹೇಳಿದ್ದಷ್ಟೇ ನನಗೆ ನೆನಪು.
ಮತ್ತೇ ನನಗೆ ಎಚ್ಚರವಾದಾಗ ಸುಮಾರು ಅರ್ಧ ಮುಕ್ಕಾಲು ಗಂಟೆಯಾಗಿದ್ದು, ನಾನು ಏಳುವವರೆಗೂ ಅಪ್ಪಾ ಮತ್ತು ರವಿ ಚಡಪಡಿಸುತ್ತಿದ್ದರೆಂದು ಬಾಡಿಗೆ ಮನೆಯವರಿಂದ ಕೇಳಿದೆ. ನಂತರ ಆಕೆಯೇ, ಅಲ್ಲಾ ಸ್ವಾಮೀ ಈಗ ತಾನೇ ರಕ್ತದಾನ ಮಾಡಿ ಬಂದು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳದೇ ಹೀಗೆ ಭಾರವಾದ ಕೆಲವನ್ನು ಮಾಡಿದ್ರೇ, ದೇಹ ತಡೆದುಕೊಳ್ತದಾ! ಮೊದ್ಲೇ ನೀವು ಅಯ್ನೋರು!! ನಮ್ಮ ತರಹಾ! ಮಾಂಸಾ ಮಡ್ಡಿ ತಿಂದು ದೇಹ ಗಟ್ಟಿಗೆ ಇರ್ತದಾ!! ನಿಮ್ಮದೇನಿದ್ರೂ ನೀರು ಮೈ ಎಂದು ಹಾಸ್ಯ ಮಾಡಿದಾಗ ಗೊಳ್ !ಎಂದು ಎಲ್ಲರೂ ನಗುವಾಗ ನನಗೆ ಆಕೆ ನಮ್ಮ ಬಾಡಿಗೆದಾರಳಾಗಿ ಕಾಣದೇ, ಸ್ವತಃ ನನ್ನಮ್ಮನೇ ಆಕೆಯ ರೂಪದಲ್ಲಿ ಆಪದ್ಭಾವಳಂತೆ ಬಂದಿದ್ದಾರೋ ಎಂದಿನಿಸಿದ್ದಂತೂ ಸುಳ್ಳಲ್ಲಾ.
ಮೊನ್ನೆ 2024, ಏಪ್ರಿಲ್ 27ರಂದು ನಡೆದ ನಮ್ಮೂರು ಬಾಳಗಂಚಿಯ ಚೋಮನ ಹಬ್ಬಕ್ಕೆ ಸಾಧಾರಣವಾಗಿ ನನ್ನ ಮಗ, ಸೋದರಳಿಯ, ಅಣ್ಣಾ ತಮ್ಮಂದಿರು ಮತ್ತು ಗೆಳೆಯರನ್ನು ಕರೆದುಕೊಂಡು ಹೋಗುವುದು ವಾಡಿಕೆ. ಆದರೆ ಈ ಬಾರಿ ನನ್ನ ಜೊತೆ ಬರ್ತೀನಿ ಎಂದು ಹೇಳಿದವರೆಲ್ಲರೂ ಕಡೇ ಗಳಿಗೆಯಲ್ಲಿ ಕೈ ಕೊಟ್ಟ ಕಾರಣ, ನಾನೊಬ್ಬನೇ ಕಾರಿನಲ್ಲಿ ಹೋಗುವುದು National Waste ಎಂದು ಭಾವಿಸಿ, ಬಸ್ಸಿನಲ್ಲೇ ಹೋಗುವುದಾಗಿ ನಿರ್ಧರಿಸಿ ಮನೆ ಬಿಟ್ಟು ಜಾಲಹಳ್ಳಿ ಕ್ರಾಸ್ ತಲುಪಿದಾಗ ಸಂಜೆ 7 ಆಗಿತ್ತು. ದೇವರ ದಯೆಯಿಂದ ಬಸ್ ಸಿಕ್ಕಿದ್ದಲ್ಲದೇ ಸೀಟ್ ಸಹಾ ಸಿಕ್ಕ ಪರಿಣಾಮ ಆರಾಮಾಗಿ ಕಿರೀಸಾವೇ ಟೋಲ್ ತಲುಪಿದಾಗ ಗಂಟೆ 9:30 ಆಗಿತ್ತು. ಟೋಲ್ ನಲ್ಲಿ ಇಳಿದು ಮೈಸೂರು ಕಡೆಯಿಂದ ಊರಿಗೆ ಬರುತ್ತಿದ್ದ ತಮ್ಮನಿಗೆ ಕರೆ ಮಾಡಿದಾಗ ಆತ ಬರುವುದು ಇನ್ನೂ ಅರ್ಧ ಮುಕ್ಕಲು ಗಂಟೆ ಆಗುತ್ತದೆ ಎಂದಾಗ, ಸುಮ್ಮನೇ ಅಲ್ಲಿ ಕಾಯುವ ಬದಲು ಹಾಗೇ ಕತ್ತಲಲ್ಲೇ ನಡೆದುಕೊಂಡು ಹೋಗೋಣ. ಹೇಗೂ ದಾರಿಯ ಮಧ್ಯೆ ಹಬ್ಬಕ್ಕೆ ಬರುವವರು ಯಾರೋ ಸಿಕ್ತಾರೆ, ಇಲ್ವೇ ಆಟೋ ಸಿಕ್ಕರೆ ಹತ್ತಿಕೊಂಡು ಹೋಗೋಣ ಎಂದು ಕೊಂಡು, ಬೆನ್ನಿಗೆ ಚಾಕ್ಲೆಟ್ ತುಂಬಿದ್ದ ಬ್ಯಾಗ್ ನೇತು ಹಾಕಿಕೊಂಡು, ನಾನು ಎಲ್ಲಿ ಬಸ್ಸಿನಲ್ಲಿ ನಿದ್ದೇ ಮಾಡಿ ಬಿಡ್ತೀನೋ ಎಂದು ಅರ್ಧ ಅರ್ಧ ಗಂಟೆಗೊಮ್ಮೆ ಕರೆ ಮಾಡಿ ಎಚ್ಚರಿಸುತ್ತಿದ್ದ ನನ್ನ ಮಡದಿಗೆ ಕರೆ ಮಾಡಿ ಅವಳೊಂದಿಗೆ ಹಾಗೇ ಲೋಕಾಭಿರಾಮವಾಗಿ ಹರಟುತ್ತಾ ಹಾಗೇ ಕತ್ತಲಿನಲ್ಲಿ ಸುಮಾರು ಒಂದು ಕಿ.ಮೀ ದಾಟಿ ಹೋಗುತ್ತಿದ್ದಂತೆಯೇ ಹಿಂದೆ ಬೈಕ್ ಶಬ್ಧ ಕೇಳಿ, ಹಾಗೇ ಡ್ರಾಪ್ ಎಂದು ಕೈ ತೋರಿಸುತ್ತಿದ್ದಂತೆಯೇ ಅಷ್ಟು ಕತ್ತಲಿನಲ್ಲಿ ಆ ಅಪರಿಚಿತ ಬೈಕ್ ಸವಾರರು ಗಾಡಿ ನಿಲ್ಲಿಸಿ ಎಲ್ಲಿಗೆ ಸ್ವಾಮೀ? ಎಂದು ಕೇಳೋದೇ!
ಸರಿ ಮಮತಾ! ಇಲ್ಯಾರೋ ಪುಣ್ಯಾತ್ಮರು ಡ್ರಾಪ್ ಕೊಡ್ತಾ ಇದ್ದಾರೆ. ನಾನು ಊರಿಗೆ ಹೋದ ಮೇಲೆ ಕರೆ ಮಾಡ್ತೀನಿ ಎಂದು ಹೇಳಿ ಬೈಕ್ ಹತ್ತಿ ನಾನು ಬಾಳಗಂಚಿಗೆ ಹೋಗಬೇಕು. ಇವತ್ತು ರಾತ್ರಿ ಚೋಮನ ಹಬ್ಬ ಅಲ್ವಾ ಎಂದೇ. ಅವರು ಸ್ವಾಮೀ ನಾನು ಮೇಟಿಗೆರೆಯವನು. ತಿಮ್ಮಲಾಪುರದಲ್ಲಿರುವ ನಮ್ಮ ಅಕ್ಕನ ಮನೆಗೆ ಹೋಗ್ತಾ ಇದ್ದೀನಿ. ಅಲ್ಲಿಯವರೆಗೆ ಬಿಡ್ತೀನಿ ಎಂದಾಗ, ಸರಿ, ಹಾಗೇ ಮಾಡಿ. ಅಲ್ಲಿಂದ ನಾನು ನಡೆದುಕೊಂಡು ಹೋಗುವಷ್ಟರಲ್ಲಿ ನಮ್ಮ ತಮ್ಮಾ ಸಹಾ ಬರಬಹುದು ಎಂದು ಹೇಳಿ ಹಾಗೇ! ನೀವು ಯಾರ ಮನೆಯವರು, ಎಂದು ವಿಚಾರಿಸಿ, ನಾನು ಸಹಾ ನಮ್ಮ ಮನೆಯವರ ವಿಚಾರ ಹೇಳುವಷ್ಟರಲ್ಲಿ ಅವರ ಅಕ್ಕನ ಮನೆಯ ಬಳಿ ಬಂದಾಗಿತ್ತು. ಆ ಅಪರಿಚಿತರಿಗೆ ಅದೇನು ಅನ್ನಿಸ್ತೋ ಏನೋ?, ಸರಿ ಬಿಡಿ, ಇಷ್ಟು ಕತ್ತಲಿನಲ್ಲಿ ನಿಮ್ಮನ್ನು ಒಬ್ಬರೇ ಕಳುಹಿಸಲು ನನಗೆ ಮನಸ್ಸು ಬರ್ತಾ ಇಲ್ಲಾ! ನಿಮ್ಮನ್ನು ಊರಿಗೆ ಬಿಟ್ಟು ಬಿಡ್ತೀನಿ ಎಂದು ಹೇಳುವುದೇ!! ಛೇ! ಛೇ!! ನಿಮಗೇಕೆ ಸುಮ್ಮನೇ ತೊಂದರೇ! ಇಲ್ಲೇ ಬಿಟ್ಬಿಡೀ. ನಾನು ನಡೆದುಕೊಂಡು ಹೋಗ್ತೀನಿ ಎಂದು ಪರಿ ಪರಿಯಾಗಿ ಹೇಳಿದರೂ ಅವರು ಗಾಡಿಯನ್ನು ನಿಲ್ಲಿಸದೇ ಸೀದಾ ನಮ್ಮ ಊರಿನ ಹೆಬ್ಬಾಗಿಲಿನ ಬಳಿ ನಿಲ್ಲಿಸಿದಾಗ ಅವರಿಗೆ ಯಾವ ರೀತಿಯಲ್ಲಿ ಕೃತಜ್ಞತೆಯನ್ನು ಹೇಳುವುದು ಎಂದೇ ತಿಳಿಯದೇ, ತುಂಬಾ ಉಪಕಾರವಾಯ್ತು ನಿಮ್ಮಿಂದ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರ್ಲೀ ಎಂದು ಹೇಳುತ್ತಿದ್ದಂತೆಯೇ, ಅವರು ಸಹಾ ಮನಸ್ಸು ಪೂರ್ತಿಯಾಗಿ ನಿಮಗೂ ಸಹಾ ದೇವರು ಒಳ್ಳೇದು ಮಾಡ್ಲೀ, ಇನ್ಮುಂದೆ ಇಷ್ಟು ತಡರಾತ್ರಿಯಲ್ಲಿ ಒಬ್ಬೊಬ್ಬರೇ ಬರ್ಬೇಡಿ ಎಂದು ಹೇಳುತ್ತಾ! ಜರ್! ಎಂದು ತಮ್ಮ ಗಾಡಿ ತಿರುಗಿಸಿಕೊಂಡು ಹೋದಾಗ, ಎಲ್ಲಿಯ ಮೇಟಿಕೆರೆ, ಎಲ್ಲಿಯ ತಿಮ್ಮಲಾಪುರ, ಎಲ್ಲಿಯ ಬೆಂಗಳೂರು, ಎಲ್ಲಿಯ ಬಾಳಗಂಚಿ, ಪರಸ್ಪರ ಪರಿಚಯವೇ ಇಲ್ಲದೇ ಹೋದರೂ, ಮಾನವೀಯತೆಯ ದೃಷ್ಟಿ ಮತ್ತು ಕಾಳಜಿಯಿಂದ ಅಷ್ಟು ಹೊತ್ತಿನಲ್ಲೂ ಸಹಾ ಸಹಾಯ ಮಾಡುವವರು ಇಂದಿಗೂ ಇದ್ದಾರಲ್ಲಾ! ಇಂತಹವರೇ ನಿಜವಾದ ಅಪದ್ಭಾಂದವರು ಎನಿಸಿತು.
ಬೆಳ್ಳಂಬೆಳಿಗ್ಗೆ ಎದ್ದು ಈ ಲೇಖನ ಬರೆದು ಮುಗಿಸುವಷ್ಟರಲ್ಲಿ ಚನ್ನರಾಯಪಟ್ಟಣದ ಅತ್ಮೀಯ ಗೆಳೆಯರಾದ ಹಳ್ಳಿಮೈಸೂರು ಶ್ರೀಕಂಠ (ಇಬ್ಬರ ಹೆಸರು, ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸಾಮ್ಯತೆ ಇರುವುದು ಸಹಾ ಕಾಕತಾಳೀಯ) ಅವರು ಬಯಸದೇ ಬಂದ ಭಾಗ್ಯದಂತೆ ಕಳುಹಿಸಿದ ಈ ಚೌಪದಿಯೂ ಸಹಾ ಇಂದಿನ ಲೇಖನಕ್ಕೆ ಪ್ರಸ್ತುತವಾಗುವುದು ವಿಪರ್ಯಸವೇ ಸರಿ.
ಬಯಸದಿರು ಯಾರಿಂದ ಏನೊಂದ ನೀ ಎಂದು
ಸುಖಿ ಆಗ ಬಾನಲ್ಲಿ ವಿಹಗ ನಲಿವಂತೆ.
ಮನದಿ ಸಾವಿರ ನೋವ ತುಂಬುವುದು ಆಕಾಂಕ್ಷೆ
ಬಿಟ್ಟುಬಿಡಪೇಕ್ಷೆಯನು – ಮುದ್ದುರಾಮ
ನಾಲ್ಕು ದಶಕಗಳ ನಡುವೆ ನಡೆದಿರುವ ಈ ಎಲ್ಲಾ ಪ್ರಸಂಗಗಳಲ್ಲಿಯೂ ಮಾನವೀಯತೆ, ಸಾಮಾಜಿಕ ಬದ್ಧತೆ ಮತ್ತು ಕಳಕಳಿ ಎದ್ದು ಕಾಣುತ್ತಿರುವಾಗ ಕಾಲ ಕೆಟ್ಟು ಹೋಗಿದೆ ಎಂದು ಹೇಗೆ ತಾನೇ ಹೇಳುಲು ಸಾಧ್ಯ? ಬದಲಾಗಿರೋದು ಕಾಲ ಅಲ್ಲಾ. ನಮ್ಮ ಮನಸ್ಥಿತಿ. ಹಾಗಾಗಿ ಬದಲಾವಣೆ ಆಗ ಬೇಕಿರುವುದು ನಮ್ಮಲ್ಲೇ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಈ ಲೇಖನದ ಕುರಿತಾಗಿ ಕೃಷ್ಣಾ ಮಾವಾ ಅವರ ಅನಿಸಿಕೆ ಮತ್ತು ಅಭಿಪ್ರಾಯಗಳು ನಿಜಕ್ಕೂ ಮುದ ನೀಡಿದೆ
