ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ

ಚುನಾವಣೆಯ ಸಂಧರ್ಭದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವ ಮನಸ್ಥಿತಿಯ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಜನರನ್ನು ಒಲಿಸಿಕೊಳ್ಳಲು ಈ ಹಿಂದೆ ಹಣ ಹೆಂಡ ಕೊಡುತ್ತಿದ್ದದ್ದು ಈಗ ಹಳೆಯ ಪದ್ದತಿಯಾಗಿದ್ದು, ಹೀಗೆ ಹೆಂಡ ಹಣ ಮತ್ತು ಗಿಫ್ಟ್ ಕಾರ್ಡ್ ಗಳನ್ನು ಚುನಾವಣೆಯ ಹಿಂದಿನದಂದು ಹಂಚುವುದಷ್ಟೇ ಅಲ್ಲದೇ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ವಿವಿಧ ಗ್ಯಾರಂಟಿಗಳ ಮೂಲಕ ಪ್ರತೀ ತಿಂಗಳೂ ಸಹಾ ಖಟಾ ಖಟ್ ಖಟಾ ಖಟ್ ಎಂದು ದೇಶದ ಎಲ್ಲಾ ಮಹಿಳೆಯರಿಗೂ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಕೊಡುವ ಬಿಟ್ಟಿ ಭಾಗ್ಯಗಳ ಆಮಿಷಗಳನ್ನು ಕೊಡುವ ಮೂಲಕ ಜನರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಮುಂದಾಗಿರುವ ಕಾರಣ, ಬಿಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಬೆಂಗಳೂರಿನ ಪ್ರಧಾನ ಅಂಚೆ ಕಛೇರಿಯ ಸಿಬ್ಬಂಧಿಗಳನ್ನು ಹೈರಾಣು ಮಾಡಿಸಿರುವ ರೋಚಕ ಸಂಗತಿ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ವಿಧಾನಸೌಧ ರಸ್ತೆಯ ಅಂಚಿನಲ್ಲಿರುವ ಅಂಚೆ ಕಛೇರಿಗೆ ಪ್ರತಿದಿನ ಐಪಿಪಿಬಿ ಖಾತೆಯನ್ನು ತೆರೆಯುವ ಸಲುವಾಗಿ ಸುಮಾರು 50-60 ಜನರು ಆಗಮಿಸುತ್ತಿದ್ದರು. ಆದರೆ ಇತ್ತೀಚೆಗೆ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ, ಇದ್ದಕ್ಕಿದ್ದಂತೆಯೇ, ಏಕಾಏಕಿ ಪ್ರತಿದಿನವೂ ಸುಮಾರು 700-೮೦೦ ಜನರು ಅದರಲ್ಲೂ ವಿಶೇಷವಾಗಿ ಮುಸ್ಲಿಂ ಮಹಿಳೆಯರು ಐಪಿಪಿಬಿ ಖಾತೆಯನ್ನು ತೆರೆಯಲು ಏಕಾಏಕಿ ನುಗ್ಗುತ್ತಿದ್ದು, ಅವರನ್ನು ನಿಯಂತ್ರಣ ಮಾಡುವುದೇ ಅಲ್ಲಿನ ಸಿಬ್ಬಂದಿಗಳಿಗೆ ಸವಾಲಾಗಿದೆ. ಅರಂಭದಲ್ಲಿ ಸರದಿಯ ಸಾಲಿನಲ್ಲಿ ನಿಲ್ಲಲು ಹೇಳುತ್ತಿದ್ದ ಸಿಬ್ಬಂದ್ದಿಗಳು ಸರದಿಯ ಸಾಲು ಹನುಮಂತನ ಬಾಲದಂತೆ ಉದ್ದವಾಗಿ ಬೆಳೆಯುತ್ತಿದ್ದದ್ದಲ್ಲದೇ ವಿಪರೀತ ಗದ್ದಲಕ್ಕೆ ಆಸ್ಪದ ಕೊಡುತ್ತಿದ್ದದ್ದು ಮತ್ತು ಸರದಿಯಲ್ಲಿ ನುಸುಳುವಿಕೆಯನ್ನು ತಪ್ಪಿಸುವ ಸಲುವಾಗಿ ಟೋಕನ್ ವ್ಯವಸ್ಥೆ ಜಾರಿಗೊಳಿಸಿದರೆ, ಅದರಲ್ಲೂ ಕೆಲವು ಕಿಡಿಗಳು ಒಮ್ಮೆಲೆ ಮೂರ್ನಾಲ್ಕು ಟೋಕನ್ನುಗಳನ್ನು ಪಡೆದುಕೊಂಡು ಅದನ್ನು ಬ್ಲಾಕ್ ನಲ್ಲಿ ಮಾರಾಟ ಮಾಡಲು ಆರಂಭಿಸಿದ್ದನ್ನು ಗಮನಿಸಿದ ಆ ಸಿಬ್ಬಂಧಿಗಳು ಒಂದು ಆಧಾರ್ ಕಾರ್ಡಿಗೆ ಒಂದು ಟೋಕನ್ ಎಂಬ ವ್ಯವಸ್ಥೆಯನ್ನು ಮಾಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರ ಸಾಹಸ ಪಡುವಂತಾಗಿದೆ.

ಮಹಿಳೆಯರು ಐಪಿಪಿಬಿ ಖಾತೆಯನ್ನು ತೆರೆಯಲು ಬೆಂಗಳೂರಿನ ಪ್ರಧಾನ ಅಂಚೆ ಕಛೇರಿಗೆ ಆಗಮಿಸ ಬೇಕೆಂಬ ನಿಯಮವೇನೂ ಇರದೇ, ಅವರ ಮನೆಯ ಸಮೀಪದ ಅಂಚೆ ಕಚೇರಿಯಲ್ಲೇ ಹೊಸಾ ಖಾತೆಯನ್ನು ತೆರೆಯಬಹುದು ಎಂದು ಅಲ್ಲಿನ ಸಿಬ್ಬಂದಿಗಳು ತಿಳಿಸುತ್ತಿದ್ದರೂ, ನಮ್ಮ ಮನೆಯ ಸಮೀಪದ ಕೆಲ ನಾಯಕರುಗಳು ಪ್ರಧಾನ ಅಂಚೆ ಕಛೇರಿಯಲ್ಲೇ ಖಾತೆ ತೆರೆಯಲು ಹೇಳಿರುವ ಎಂದು ಹೇಳಿದ್ದಾರೆ. ಆದ್ದರಿಂದ ಆಗಮಿಸಿದ್ದೇವೆ. ಬೆಳಗ್ಗೆಯಿಂದ ನಿಂತಿದ್ದೇವೆ ಎಂದು ಸಾಲಿನಲ್ಲಿ ನಿಂತಿರುವ ಮಹಿಳೆಯರ ಅಂಬೋಣ. ಹೀಗೆ ಅಂಚೆ ಕಛೇರಿಯ ಹೊರಗೆ ಸಾಲುಗಟ್ಟಿ ನಿಂತ ಮಹಿಳೆಯರನ್ನು ನಿಯಂತ್ರಣ ಮಾಡಲು ಪೊಲೀಸರ ಸಹಾಯವನ್ನು ಸಹ ಪಡೆಯಲಾಗಿದ್ದು, ಈ ಪರಿಯಾಗಿ ದಿನದಿಂದ ದಿನಕ್ಕೆ ಐಪಿಪಿಬಿ ಖಾತೆಗಳನ್ನು ತೆರಯಲು ಮಹಿಳೆಯರು ಮುಂದಾಗುತ್ತಿರುವುದನ್ನು ಮನಗಂಡು ಬೆಂಗಳೂರಿನ ಪ್ರಧಾನ ಅಂಚೆ ಕಛೇರಿಯಲ್ಲಿ 7 ಜನ ಸಿಬ್ಬಂದಿಗಳನ್ನು ಇದಕ್ಕಾಗಿಯೇ ನಿಯೋಜನೆ ಮಾಡಲಾಗಿದ್ದರೂ, ಸರದಿಯಲ್ಲಿ ನಿಂತಿರುವ ಜನಸಾಗರವನ್ನು ಕಂಡು ಈ ಸಿಬ್ಬಂಧಿಗಳು ಕಛೇರಿ ಸಮಯ ಮುಗಿದ ನಂತವರೂ ಕೆಲಸ ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ದೇಶಾದ್ಯಂತ ಇರುವ ಯಾವುದೇ ಅಂಚೆ ಕಛೇರಿಯ್ಹಲ್ಲಾದರೂ ಐಪಿಪಿಬಿ ಖಾತೆಗಳನ್ನು ತೆರೆಯುವ ಸೌಲಭ್ಯವಿದ್ದರೂ ಈ ಪರಿಯಾಗಿ ಹೆಂಗಳೆಯರು ಮಳೆ ಬಿಸಿಲನ್ನು ಲೆಖ್ಖಿಸದೇ, ತಮ್ಮ ಪ್ರಧಾನ ಅಂಚೆ ಕಛೇರಿಗೆ ಆಗಮಿಸುತ್ತಿರುವ ಕಾರಣ, ಜನರ ಸೇವೆ ಮಾಡುವುದು ತಮ್ಮ ಆದ್ಯ ಕರ್ತವ್ಯವಾದ್ದರಿಂದ ಎಷ್ಟೇ ಕಷ್ಟವಾದರೂ ಅದನ್ನು ತೋರ್ಪದಿಸದೇ, ಖಾತೆಯನ್ನು ತೆರೆಯಲು ನಿರಾಕರಿಸದೇ ಸಹಕರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

ಒಂದು ಮಾಹಿತಿಯ ಪ್ರಕಾರ ಕಾಂಗ್ರೇಸ್ ಪಕ್ಷದ ಚುನಾವಣಾ ಭಾಷಣದ ಸಮಯದಲ್ಲಿ ಕ್ರಾಂಗ್ರೇಸ್ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ರಾಹುಲ್ ಗಾಂಧಿ, ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ಬಂದ ಮೊದಲ ತಿಂಗಳಿನಿಂದಲೇ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಗೃಹಲಕ್ಷಿ ಯೋಜನೆಯಂತೆಯೇ, ದೇಶದ ಎಲ್ಲಾ ಮಹಿಳೆಯರಿಗೂ ಪ್ರತೀ ತಿಂಗಳೂ 8ಸಾವಿರಗಳನ್ನು ಖಟಾ ಖಟ್ ಖಟಾ ಖಟ್ ಎಂದು ನೇರವಾಗಿ ಬ್ಯಾಂಕಿಗೆ ಹಾಕುವ ಮೂಲಕ ಚಿಟಿಕೆ ಹೊಡೆಯುವಷ್ಟರಲ್ಲಿ ಭಾರತದಿಂದ ಬಡತನವನ್ನು ನಿರ್ಮೂಲನ ಮಾಡುತ್ತೇವೆ ಎಂದು ಹೇಳಿರುವುದನ್ನು ನಂಬಿರುವ ಅನೇಕ ಈ ರೀತಿಯಾಗಿ ಅಂಚೆ ಕಛೇರಿಯಲ್ಲಿ ಅಕೌಂಟ್ ತೆರೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಕೆಲವರು ಹೇಳುವ ಪ್ರಕಾರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಐಪಿಪಿಬಿ ಖಾತೆಯನ್ನು ತೆರೆದರೆ, ಅದಕ್ಕೆ ಜೂನ್ ತಿಂಗಳಿನಿಂದ ಪ್ರತಿ ತಿಂಗಳು 2 ಸಾವಿರ ರೂ. ಹಣ ಖಾತೆಗೆ ಜಮಾ ಆಗುತ್ತದೆ ಎಂದು ಕೆಲವು ರಾಜಕೀಯ ಪಕ್ಷದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಹೇಳಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿರುವ ಕಾರಣ ಜನರು ಈ ಪರಿಯಾಗಿ ಪ್ರಧಾನ ಅಂಚೆ ಕಛೇರಿಯ ಮುಂದೆ ಖಾತೆಗಳನ್ನು ತೆರೆಯಲು ಮಹಿಳೆಯರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆ ಮಾಡಿಸುವ ಸಲುವಾಗಿ ಬೆಳಿಗ್ಗೆ 6 ಗಂಟೆಯಿಂದಲೇ ಅಂಚೆ ಕಚೇರಿ ಮುಂದೆ ಮುಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಬ್ಬರ ಹೇಳಿಕೆಯ ಪ್ರಕಾರ, ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್‌ಗಳಲ್ಲಿ ಖಾತೆ ಇಲ್ಲದೇ ನೇರ ಖಾತೆಗೆ ಜಮೆಯಾಗುವ ಸರಕಾರಿ ಯೋಜನೆಗಳ ಹಣ ಪಡೆಯಲು ಸಾಧ್ಯವಿಲ್ಲದ ಫಲಾನುಭವಿಗಳು ತಮ್ಮ ಸಮೀಪದ ಅಂಚೆ ಕಛೇರಿಗಳಲ್ಲಿ ಐಪಿಪಿಬಿ ಖಾತೆ ತೆರೆದಲ್ಲಿ ಸರ್ಕಾರಿ ಯೋಜನೆಯ ಹಣ ನೇರವಾಗಿ ಅವರ ಖಾತೆಗೆ ಬರಲು ಅನುಕೂಲವಾಗುತ್ತದೆ ಎಂದು ಹೇಳಿರುವುದಲ್ಲದೇ ಇದೇ ಮೇ 27-28ರಂದೇ ಖಾತೆ ತೆರೆಯಲು ಕೊನೆಯ ದಿನಾಂಕ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿರಿದ ಪರಿಣಾಮ ಪ್ರಧಾನ ಅಂಚೆ ಕಚೇರಿಯಲ್ಲಿ ಹೊಸದಾಗಿ ಐಪಿಪಿಬಿ ಖಾತೆ ತೆರೆಯಲು ಮುಂದಾಗುತ್ತಿರುವುದು ಇಷ್ಟೆಲ್ಲ ಗೊಂದಲ ಮತ್ತು ಗದ್ದಲಕ್ಕೆ ಕಾರಣವಾಗಿದೆ. ಕರ್ನಾಟಕ ಅಂಚೆ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ದಿವಾಕರ ಎನ್‌ ಆರ್ ಅವರು ನೀಡಿದ ಮಾಹಿತಿಯ ಪ್ರಕಾರ ಕಳೆದ ಒಂದು ವಾರದಲ್ಲಿಯೇ ಸುಮಾರು 3,000 ಹೊಸಾ ಖಾತೆಗಳನ್ನು ತೆರೆಯಲಾಗಿದೆಯಂತೆ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

CAA ಮತ್ತು NRC ಸಮಯದಲ್ಲಿ ನಾವು ಧಾಖಲೆ ಕೊಡುವುದಿಲ್ಲಾ ಎಂದು ದೇಶಾದ್ಯಂತ ಪ್ರತಿಭಟನೆ ಮಾಡಿದವರೆಲ್ಲಾ ಈಗ ಬಿಟ್ಟಿ ಭಾಗ್ಯದ ಫಲವಾಗಿ ತಿಂಗಳಿಗೆ 8500/- ಸಿಗುತ್ತದೆ ಎಂದು ಸರದಿಯ ಸಾಲಿನಲ್ಲಿ ನಿಂತಿರುವುದನ್ನು ನೋಡಿದಾಗ, ಕಷ್ಟ ಪಟ್ಟು ದುಡಿದ ಹಣದಲ್ಲಿ ಸರ್ಕಾರಕ್ಕೆ ತೆರಿಗೆ ಕಟ್ಟಿದ ಹಣ ಯಾರದ್ದೋ ರಾಜಕೀಯ ತೆವಲಿಗಾಗಿ ಮತ್ತಾರಿಗೋ ಹಂಚುವ ಮೂಲಕ ಮತ್ತೊಂದು ವೆನಿಜುವೆಲಾ ರೀತಿಯ ಸೋಮಾರಿಗಳ ದೇಶವನ್ನಾಗಿ ಮಾಡಲು ಹೊರಟಿರುವುದನ್ನು ಪ್ರತಿಯೊಬ್ಬ ನೈಜ ಭಾರತೀಯರ ಬಲವಾಗಿ ಖಂಡಿಸಲೇ ಬೇಕಾಗಿದೆ, ನನ್ನ ತೆರಿಗೆ ನನ್ನ ಹಕ್ಕು ಎಂದು ಕೂಗಾಡಿದ್ದ ಕಾಂಗ್ರೇಸ್ ಪಕ್ಷ ಈಗ ಮತ್ತೊಬ್ಬರು ಕಟ್ಟಿದ ತೆರಿಗೆ ಹಣವನ್ನು ತಾವು ಅಧಿಕಾರಕ್ಕೇರಲು ಈ ರೀತಿಯಾಗಿ ಬಿಟ್ಟಿ ಭಾಗ್ಯಗಳ ರೂಪದಲ್ಲಿ ಹಂಚಲು ಯಾವ ನೈತಿಕ ಹಕ್ಕಿದೆ ಎಂದು ಕೇಳಲೇ ಬೇಕಾದ ಸಮಯ ಬಂದಿದೆ ಅಲ್ವೇ?

Leave a comment