ಬೆಂಗಳೂರಿನಲ್ಲೊಂದು ಅಪಘಾತ/ಟ್ರಾಫಿಕ್ ಗಣೇಶ

ಹೇಳಿ ಕೇಳಿ ಭಾರತವು ಹಿಂದೂ ರಾಷ್ಟ್ರ. ಇಲ್ಲಿ 33 ಕೋಟಿ ದೇವಾನು ದೇವತೆಗಳು ನೆಲೆಸಿದ್ದಾರೆ ಎನ್ನುವುದೇ ಸಕಲ ಆಸ್ತಿಕರ ನಂಬಿಕೆಯಾಗಿದ್ದು, ಇಲ್ಲಿ ಕೇವಲ ದೇವರುಗಳಲ್ಲದೇ, ಪ್ರಾಣಿ, ಪಶು, ಪಕ್ಷಿ, ನದಿಗಳನ್ನೂ ದೇವರ ರೂಪದಲ್ಲಿ ಪೂಜಿಸುವುದನ್ನು ನೋಡಿದ್ದೇವೆ. ಇತ್ತೀಚಿಗಂತೂ ಅನೇಕ ಕಡೆ ದಾರ್ಶನಿಕರು, ಸಂತರು, ಗುರುಗಳಲ್ಲದೇ, ತಮ್ಮ ನೆಚ್ಚಿನ ಸಿನಿಮಾ ನಟ ನಟಿಯರ, ಕ್ರಿಕೆಟ್ ಆಟಗಾರರ ಅಷ್ಟೇ ಏಕೆ ಅನೇಕ ಕಡೆ ರಾಜಕಾರಣಿಗಳ ದೇವಾಲಯವು ಸಹಾ ಇದ್ದು, ಅದೇ ರೀತಿ ಬೆಂಗಳೂರಿನ ಕಸ್ತೂರಿಬಾಯಿ ರಸ್ತೆಯ ಮೂಲೆಯಲ್ಲೊಂದು ಅಪಘಾತ/ಟ್ರಾಫಿಕ್/ವಾಹನ ಗಣೇಶನ ದೇವಾಲಯವಿದ್ದು ಆ ದೇವಾಲಯದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ನಮಗೆಲ್ಲರಿಗೂ ತಿಳಿದಿರುವಂತೆ ಶ್ರೀಮತಿ ಕಸ್ತೂರಿ ಬಾಯಿ, ಮಹಾತ್ಮಾ ಗಾಂಧಿಯವರ ಧರ್ಮ ಪತ್ನಿಯಾಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ವೃತ್ತದಿಂದ ಎಡ ಭಾಗದ ಪ್ರತಿಷ್ಠಿತ ರಸ್ತೆಗೆ ಮಹಾತ್ಮಾಗಾಂಧಿ ರಸ್ತೆ ಎಂದೂ, ಬಲ ಭಾಗದ ರಸ್ತೆಗೆ ಅವರ ಧರ್ಮ ಪತ್ನಿ ಕಸ್ತೂರಿ ಬಾಯಿ ಅವರ ಹೆಸರನ್ನು ಇಡಲಾಗಿದೆ. ಈಗಾಗಲೇ ತಿಳಿಸಿದಂತೆ ಕಸ್ತೂರಿ ಬಾಯಿ ರಸ್ತೆಯ ಉತ್ತರ ಭಾಗಗಕ್ಕೆ M G ರಸ್ತೆ ಇದ್ದರೆ ದಕ್ಷಿಣ ಭಾಗದಲ್ಲಿ J.C. ರಸ್ತೆಯ ಸಂಪರ್ಕ ಹೊಂದಿದ್ದು, ಕಸ್ತೂರಬಾ ರಸ್ತೆಯಲ್ಲಿ ಶ್ರೀ ಕಂಠೀರವ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ, ಕಬ್ಬನ್ ಪಾರ್ಕ್, ಸರ್ಕಾರಿ ವಸ್ತುಸಂಗ್ರಹಾಲಯ, ವೆಂಕಟಪ್ಪ ಆರ್ಟ್ ಗ್ಯಾಲರಿ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಒಂದು ಬದಿಯಲ್ಲಾದಾರೆ ಮತ್ತೊಂದು ಬದಿಯಲ್ಲಿ ಯುಬಿ ಸಿಟಿ. ಹೆಚ್, ಡಿ. ಎಫ್. ಸಿ ಬ್ಯಾಂಕ್, ಟಿವಿ ಸುಂದರಂ, ನಿಸ್ಸಾನ್ ಮತ್ತು ಬೆಂಜ್ ಕಾರುಗಳ ಶೋ ರೂಮ್ ಇದ್ದರೆ, ಇವೆಲ್ಲರದ ಮಧ್ಯೆಯಲ್ಲೇ ಹೊರಗೆ ಅತ್ಯಂತ ಸಣ್ಣದಾಗಿ ಕಾಣುವ ಸುಮಾರು 600 ವರ್ಷಗಳಷ್ಟು ಹಳೆಯದಾದ ಗಣೇಶನ ದೇವಾಲಯವಿದ್ದು,‌ಮಂಗಳವಾರ, ಶುಕ್ರವಾರ, ಹಬ್ಬ ಹರಿದಿನಗಳು ಅದರಲ್ಲೂ ವಿಶೇಷವಾಗಿ ಆಯುಧ ಪೂಜೆಯಂದು ಸಾಲು ಸಾಲಾಗಿ ಸಾವಿರಾರು ವಾಹನಗಳು ಈ ದೇವಾಲಯದ ಮುಂದೆ ಪೂಜೆಗಾಗಿ ಸರದಿಯ ಸಾಲಿನಲ್ಲಿ ನಿಲ್ಲುವುದನ್ನು ಕಾಣ ಬಹುದಾಗಿದೆ.

ಸಂಪಂಗಿರಾಮ ನಗರದ ಕೆರೆಯ ದಂಡೆಯ ಈ ಪ್ರದೇಶವನ್ನು ಈ ಹಿಂದೆ ಕಲಾಯನನಗರಿ ಎಂದು ಕರೆಯಲಾಗುತ್ತಿದ್ದು ಈಗಿನ ಕಸ್ತೂರಿ ಬಾಯಿ ರಸ್ತೆಯನ್ನು ಈ ಮೊದಲು ಸಿಡ್ನಿ ರಸ್ತೆ ಎಂದು ಕರೆಯಲಾಗುತ್ತಿತ್ತು. ಸುಮಾರು 600 ವರ್ಷಗಳಷ್ಟು ಹಳೆಯದು ಎಂದು ನಂಬಲಾದ ಗಣೇಶನ ಈ ದೇವಾಲಯದ ದೇವರನ್ನು ಉಧ್ಭವ ಗಣಪತಿ ಎನ್ನಲಾಗುತ್ತದೆ. ಕಲ್ಲಿನ ಮೇಲೆ ಸ್ಪಷ್ಟವಾಗಿ ಗಣೇಶನ ರಚನೆಯನ್ನು ಕಾಣಬಹುದಾಗಿದ್ದು, ಪ್ರತಿ ದಿನವೂ ಪೂಜೆಯ ಸಮಯದಲ್ಲಿ ದೇವರ ಮೇಲೆ ಕವಚದಿಂದ ಅಲಂಕಾರ ಮಾಡಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 7 ಗಂಟೆಗೆ ಪೂಜೆ ಪ್ರಾರಂಭಿಸುವ ಮೊದಲು ಅಥವಾ ರಾತ್ರಿ 8.30ಕ್ಕೆ ಪೂಜೆ ಮುಗಿದ ನಂತರ ಇಲ್ಲಿಗೆ ಬಂದಲ್ಲಿ, ದೇವರ ಮೇಲಿನ ಕವಚವನ್ನು ತೆಗೆದ ನಂತರ ಕಲ್ಲು ಬಂಡೆಯ ಮೇಲಿನ ದೇವರ ರಚನೆಯನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ರಸ್ತೆಯ ಮಟ್ಟಕ್ಕಿಂತ ಬಹಳ ತಗ್ಗಿನಲ್ಲಿ ಈ ದೇವಾಲಯದ ಗರ್ಭಗುಡಿ ಇರುವುದರಿಂದ ಈ ದೇವರನ್ನು ಪಾತಾಳ ಗಣೇಶ ಎಂದೂ ಸಹಾ ಕರೆಯಲಾಗುತ್ತದೆ. ಇಲ್ಲಿನ ದೇವಾಲಯದ ಅರ್ಚಕರು ಹೇಳುವ ಪ್ರಕಾರ, ಬೆಂಗಳೂರಿನ ನಿರ್ಮಾತರಾದ ಶ್ರೀ ಕೆಂಪೇಗೌಡರು ಬೇಟೆಯಾಡಲು ಕಾಡಿಗೆ ಹೋಗುವ ಮೊದಲು ಇಲ್ಲಿಗೆ ಬಂದು ಆಶೀರ್ವಾದವನ್ನು ಪಡೆಯತ್ತಿದ್ದರಂತೆ. ಆದಾದ ನಂತರ ಆ ಪ್ರದೇಶದ ಸುತ್ತಮುತ್ತಲಿನ ಪ್ರದೇಶದ ಜನರು ತಮ್ಮ ಜಾನುವಾರುಗಳು ಯಾವುದೇ ರೀತಿಯ ರೋಗ ರುಜಿನಗಳಿಗೆ ತುತ್ತಾಗದಿರಲಿ ಎಂದು ಈ ದೇವಾಲಯಕ್ಕೆ ಕರೆತಂದು ಪೂಜೆ ಮಾಡಿಸಿಕೊಂಡು ದೇವರ ತೀರ್ಥವನ್ನು ಆ ಜಾನುವಾರುಗಳಿಗೆ ಪ್ರೋಕ್ಷಣೆ ಮಾಡಿಸುತ್ತಿದ್ದದ್ದನ್ನು ಗಮನಿಸಿದ ನಗರಕ್ಕೆ ಬರುತ್ತಿದ್ದ ಸರ್ಕಸ್ ಕಂಪನಿಯವರೂ ಸಹಾ ತಮ್ಮ ಸರ್ಕಸ್ ಕಂಪನಿಯ ಪ್ರಾಣಿಗಳನ್ನು ಇಲ್ಲಿಗೆ ಕರೆ ತಂದು ಈ ದೇವರ ಆಶೀರ್ವಾದ ಪಡೆಯುತ್ತಿದ್ದರಂತೆ.

ಈ ರೀತಿಯಾಗಿ ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಿದ್ದ ಗಣೇಶನಿಗೆ ಟ್ರಾಫಿಕ್ ಗಣೇಶ ಎಂಬ ಹೆಸರು ಬರಲು ಮೈಸೂರು ಮಹಾರಾಜರ ಕಥೆಯೊಂದು ತಳುಕು ಹಾಕಿಕೊಂಡಿರುವುದು ವಿಶೇಷವಾಗಿದೆ. 40-50ರ ದಶಕದಲ್ಲಿ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಅವರು ಮೈಸೂರಿನಿಂದ ಬೆಂಗಳೂರಿನ ಅರಮನೆಗೆ ಇದೇ ರಸ್ತೆಯಲ್ಲಿ ಅವರ ರೋಲ್ಸ್ ರಾಯ್ಸ್ ಕಾರು ಕೆಟ್ಟುಹೋಗಿ, ಕಾರಿನ ಚಾಲಕ ಕಾರನ್ನು ರಿಪೇರಿ ಮಾಡಿಸುತ್ತಿದ್ದಂತಹ ಸಂಧರ್ಭದಲ್ಲಿಯೇ ಅಲ್ಲೇ ಪಕ್ಕದಲ್ಲಿದ್ದ ಈ ದೇವಾಲಯಕ್ಕೆ ಭೇಟಿ ನೀಡಿ, ಭಕ್ತಿಯಿಂದ ಪೂಜಿಸಿ ತಮ್ಮ ಕಾರಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಬೇಡಿಕೊಂಡ ಕೆಲವೇ ಕೆಲವು ಕ್ಷಣಗಳಲ್ಲಿ ಕೆಟ್ಟು ಹೋಗಿದ್ದ ಕಾರು ಇದ್ದಕ್ಕಿದ್ದಂತೆಯೇ ಶುರುವಾದಾಗ, ಮಹಾರಾಜರೇ ಒಂದು ಕ್ಷಣ ತಬ್ಬಿಬ್ಬಾದರಂತೆ. ಇದೇ ರೀತಿ ಅನುಭವ ಮತ್ತೊಮ್ಮೆಯೂ ಆದ ನಂತರ, ಮಹಾರಾಜರು ಆ ರಸ್ತೆಯಲ್ಲಿ ಹಾದು ಹೋಗುವಾಗಲೆಲ್ಲಾ ಈ ದೇವಾಲಯಕ್ಕೆ ಭೇಟಿ ನೀಡುವುದನ್ನು ರೂಢಿ ಮಾಡಿಕೊಂಡಿದ್ದಲ್ಲದೇ, ಅರಮನೆಗೆ ಹೊಸದಾಗಿ ಖರೀದಿಸುತ್ತಿದ್ದ ಎಲ್ಲಾ ವಾಹನಗಳನ್ನೂ ಖಡ್ಡಾಯವಾಗಿ ಈ ದೇವಾಲಯದಲ್ಲಿ ಪೂಜೆ ಮಾಡಿಸುವ ಸಂಪ್ರದಾಯವನ್ನು ಜಾರಿಗೆ ತಂದರಂತೆ, ಹೊಸಾ ಗಾಡಿಯನ್ನು ಇಲ್ಲಿ ಪೂಜೆ ಮಾಡಿಸಿದರೆ, ಆ ವಾಹನಗಳು ಎಲ್ಲಿಯೂ ಅಪಘಾತಕ್ಕೆ ಈಡಾಗುವುದಿಲ್ಲ ಮತ್ತು ದಾರಿಯಲ್ಲಿ ಕೆಟ್ಟು ನಿಲ್ಲುವುದಿಲ್ಲ ಎನ್ನುವುದು ಮಹಾರಾಜರ ನಂಬಿಕೆಯಾಗಿತ್ತಂತೆ.

ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ, ಕಾಲ ಕ್ರಮೇಣ ಮಹಾರಾಜರ ಈ ನಂಬಿಕೆಗಳನ್ನೇ ಅವರ ಪ್ರಜೆಗಳೂ ಸಹಾ ಅನುಸರಿಸಲು ಮುಂದಾಗಿದ್ದಲ್ಲದೇ, ತಮ್ಮ ಹೊಸಾ ಸೈಕಲ್, ದ್ವಿಚಕ್ರವಾಹನ, ಕಾರು ಬಸ್ಸುಗಳಂತಹ ದೊಡ್ಡ ದೊಡ್ಡ ಮೋಟಾರು ವಾಹನಗಳನ್ನು ಇಲ್ಲಿಯೇ ಪೂಜೆ ಮಾಡಿಸಲು ಮುಂದಾಗಿದ್ದಲ್ಲದೇ, ವರ್ಷಕ್ಕೊಮ್ಮೆ ದಸರಾದಲ್ಲಿ ಬರುವ ಆಯುಧ ಪೂಜೆಯಂದು ತಮ್ಮ ವಾಹನಗಳ ಪೂಜೆಯನ್ನು ಇಲ್ಲಿಯೇ ಮಾಡಿಸಲು ಮುಂದಾದ ನಂತರ ಈ ಪಾತಾಳ ಗಣೇಶನ ಹೆಸರು, ಟ್ರಾಫಿಕ್ ಗಣೇಶ, ಅಕ್ಸಿಡೆಂಟ್ ಗಣೇಶ, ವಾಹನ ಗಣೇಶ ಎಂಬ ಹತ್ತಾರು ಹೆಸರಿನಿಂದ ಕರೆಯಲಾರಂಭಿಸಿದರು. ಮೈಸೂರಿನ ದಿವಾನರಾಗಿದ್ದ ಶ್ರೀ ಟಿ ಆನಂದ ರಾವ್ (ಆನಂದ್ ರಾವ್ ಸರ್ಕಲ್ ಖ್ಯಾತಿ) ಅವರೂ ಸಹಾ ಆಗಾಗ್ಗೆ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರೆ, ನಂತರ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸ್ ಅವರೂ ಸಹಾ ಬಹಳ ಶ್ರದ್ಧಾ ಭಕ್ತಿಯಿಂದ ಈ ದೇವರಿಗೆ ನಡೆದುಕೊಳ್ಳುತ್ತಿದ್ದರಂತೆ.

ಮೈಸೂರು ಅರಸರ ಈ ಅನುಭವ ನಡೆದ ಕೆಲ ಸಮಯದ ನಂತರ ಅದೇ ರಸ್ತೆಯಲ್ಲಿಯೇ ಟಿ.ವಿ ಸುಂದರಂ ಕಂಪನಿ (ಟಿವಿಎಸ್ ಸಂಸ್ಥೆ) ಆರಂಭವಾಗಿ ಅಲ್ಲಿನ ಶೋ ರೂಮಿನಲ್ಲಿ ಗ್ರಾಹಕರು ಖರೀಧಿಸಿದ ಹೊಸಾ ವಾಹನಗಳ ಪೂಜೆಯನ್ನು ಇದೇ ದೇವಾಲಯದಲ್ಲಿ ಪೂಜೆ ಮಾಡಿಸಿ ಗ್ರಾಹಕರಿಗೆ ಕೊಡುವ ಸತ್ ಸಂಪ್ರದಾಯವನ್ನು ಆರಂಭಿಸಿದ ನಂತರ ಅದರ ಪಕ್ಕದಲ್ಲೇ ಆರಂಭವಾದ ನಿಸ್ಸಾನ್ ಮತ್ತು ಬೆಂಜ್ ಶೋ ರೂಮಿನವರೂ ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋದದ್ದನ್ನು ಕಂಡ ಅನೇಕರು ತಮ್ಮ ಜಾತಿ, ಮತ, ಧರ್ಮವನ್ನು ಲೆಕ್ಕಿಸದೆ ಬೇರೆಡೆಯಲ್ಲೂ ಖರೀಧಿಸಿದ ತಮ್ಮ ವಾಹನಗಳು ಆಪಘಾತವಾಗದಿರಲಿ ಮತ್ತು ನಡು ರಸ್ತೆಯ ಮಧ್ಯೆ ಕೆಟ್ಟು ನಿಲ್ಲದಿರಲಿ ಎಂದು ಈ ಗಣೇಶನ ದೇವಾಲಯಕ್ಕೆ ತಂದು ಪೂಜೆ ಮಾಡಿಸಿ ಕೊಂಡು ಹೋಗುವುದನ್ನು ಇಂದಿಗೂ ಕಾಣಬಹುದಾಗಿದೆ.

ಜೀವನದಲ್ಲಿ ನಂಬಿಕೆ ಎನ್ನುವುದು ಬಹಳಷ್ಟು ಮುಖ್ಯವಾಗಿದ್ದು, ಅನೇಕ ಬಾರಿ ಧೃಢ ನಂಬಿಕೆಗಳಿಂದಲೇ ಎಂತಹ ಕಠಿಣ ಕೆಲಸಗಳೂ ಸುಲಭವಾಗಿ ಆಗುತ್ತದೆ ಎನ್ನುವುದು ಎಲ್ಲರ ಆಭಿಪ್ರಾಯವಾಗಿದೆ. ಅಕಸ್ಮಾತ್ ತಮ್ಮ ವಾಹನಗಳಿಗೆ ಅಪಘಾತವಾದಾಗ, ಅದನ್ನು ಸರಿಪಡಿಸಲು ಅಗತ್ಯವಿರುವ ಹಣಕ್ಕಾಗಿ ವಾಹನ ವಿಮೆಯನ್ನು ಹೇಗೆ ಮಾಡಿಸುತ್ತಾರೆಯೋ ಹಾಗೆಯೇ, ಅವರವರ ಪಾಲಿಗೆ ಆವರವರ ಭಕುತಿ ಎನ್ನುವಂತೆ ತಮ್ಮ ವಾಹನಗಳು ಅಪಘಾತವಾಗದಿರಲೆಂದು ಮುನ್ನೆಚ್ಚರಿಕಾ ಕ್ರಮವಾಗಿ ಈ ರೀತಿಯಾಗಿ ದೈವಿಕ ರಕ್ಷಣೆಯನ್ನು ಪಡೆಯುವುದನ್ನೂ ಸಹಾ ಗೌರವಿಸುವುದು ಉತ್ತಮವಾಗಿದೆ.

ಈ ದೇವಾಲಯವು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಸಂಜೆ 6 ರಿಂದ 8 ರವರೆಗೆ ಭಕ್ತಾದಿಗಳಿಗೆ ತೆರೆದಿದ್ದರೆ, ಹಬ್ಬ ಹರಿದಿನಗಳು, ಮಂಗಳವಾರ/ಶುಕ್ರವಾರ ಮತ್ತು ವಿಶೇಷ ದಿನಗಳಲ್ಲಿ ಹೆಚ್ಚಿನ ಅವಧಿಯವರೆಗೂ ದೇವಾಲಯ ತೆರೆದಿರುತ್ತದೆ. ಈ ದೇವಾಲಯದ ಕುರಿತಾಗಿ ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ನಂತರ, ಇನ್ನೇಕೆ ತಡಾ, ಈ ಮಂಗಳವಾರ ಇಲ್ಲವೇ ಶುಕ್ರವಾರ ಅಥವಾ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಪಾತಾಳ ಗಣೇಶ ಅರ್ಥಾತ್ ಅಪಘಾತ/ಟ್ರಾಫಿಕ್/ವಾಹನ ಗಣೇಶನ ದರ್ಶನ ಮಾಡಿಕೊಂಡು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment