ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲಾ!

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಅನಿಷ್ಠಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ ದೇಶದಲ್ಲಿ ಆಗಿರುವ, ಆಗುತ್ತಿರುವ ಮತ್ತು ಆಗಬಹುದಾದ ಅಪಸವ್ಯಗಳೆಲ್ಲದ್ದಕ್ಕೂ ದೇಶದಲ್ಲಿ ಕೇವಲ 2-3% ಇರುವ ಬ್ರಾಹ್ಮಣರನ್ನು ದೂಷಿಸುವುದು ಒಂದು ರೀತಿಯ ಪ್ರವೃತ್ತಿ ಆಗಿಬಿಟ್ಟಿದೆ. ಕುಣಿಯಲಾರದವಳು ನೆಲ ಡೊಂಕು ಎಂದಳಂತೆ ಎನ್ನುವ ಗಾದೆ ಮಾತಿನಂತೆ, ಯಾರಿಗೆ ಕಡಿಮೆ/ಜಾಸ್ತೀ ಅಂಕ ಬರಲಿ, ಯಾರಿಗೆ ಕೆಲಸ ಸಿಕ್ಕಿ/ಸಿಗದೇ ಹೋಗಲೀ, ಯಾರಿಗೆ ಭಡ್ತಿ ಬರಲಿ/ಬಾರದೇ ಹೋಗಲಿ, ಅದೆಲ್ಲಾ ಬಿಡಿ ಯಾರ ಮನೆಯಲ್ಲಿ ಗೃಹಪ್ರವೇಶ, ಮದುವೆ, ಪ್ರಸ್ಥ, ನಾಮಕರಣ ಇಷ್ಟೇ ಏಕೆ ಮನಸ್ಸಿನ ನೆಮ್ಮದಿಗಾಗಿ ಜೋಗುವ ದೇವಾಲಯದಲ್ಲಿ, ದೇವರ ಪೂಜೆ ಮಾಡುವ, ಆ ದೇವಾಲಯಗಳಲ್ಲಿ ಪ್ರಸಾದ ರೂಪದಲ್ಲಿ ಉಣಬಡಿಸುವ ದಾಸೋಹದಲ್ಲಿಯೂ ಸಹಾ ಬ್ರಾಹ್ಮಣರನ್ನು ದೂಷಿಸದೇ ಹೋದಲ್ಲಿ ಕೆಲವರಿಗೆ ತಿಂದ ಅನ್ನ ಕರಗದೇ ಹೋಗದಿರುವುದು ಅತ್ಯಂತ ವಿಪರ್ಯಾಸ ಮತ್ತು ವಿಷಾಧನೀಯವಾಗಿದೆ.

ನಿಜ ಹೇಳಬೇಕೆಂದರೆ, ಸನಾತನದ ಧರ್ಮದಲ್ಲಿ ಎಂದಿಗೂ ಜಾತಿ ಪದ್ದತಿಗೆ ಆಸ್ಪದವೇ ಇರಲಿಲ್ಲ. ಅವರವರ ವೃತಿಗೆ ಅನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶ್ರೂದ್ರ ಎಂಬ ವರ್ಣಾಶ್ರಮಗಳು ರೂಡಿಯಲ್ಲಿದ್ದು ಕ್ರಮೇಣ ಅದೇ ವರ್ಣಾಶ್ರಮಗಳು ಜಾತಿಗಳಾಗಿ ಪರಿರ್ವರ್ತನೆಗೊಂಡಿದ್ದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಪ್ರಸ್ತುತ ನಮ್ಮ ಭಾರತ ದೇಶದಲ್ಲಿ ಸರಿ ಸುಮಾರು 3,000 ಜಾತಿಗಳು ಮತ್ತು 25,000ಕ್ಕೂ ಹೆಚ್ಚಿನ ಉಪ-ಜಾತಿಗಳಿದ್ದು ಬಹಳ ಸೂಕ್ಷ್ಮವಾಗಿ ಅವುಗಳನ್ನು ಗಮನಿಸಿದಲ್ಲಿ, ಹೆಚ್ಚಿನ ಜಾತಿ ಮತ್ತು ಉಪಜಾತಿಗಳು ಇಂದಿಗೂ ಸಹಾ ಆಯಾಯಾ ಪಂಗಡಗಳು ತಮ್ಮ ಜೀವನೋಪಾಯಕ್ಕಾಗಿ ಮಾಡುತ್ತಿರುವ/ಮಾಡುತ್ತಿದ್ದ ನಿರ್ದಿಷ್ಟ ಉದ್ಯೋಗ ಅರ್ಥಾತ್ ಅವರು ತಲೆ ತಲಾಂತರದಿಂದಲೂ ಮಾಡಿಕೊಂಡು ಬರುತ್ತಿದ್ದ ಕೆಲಸದ ಆಧಾರಿತವಾಗಿದೆ ಎಂಬುದೇ ಗಮನಾರ್ಹವಾಗಿದೆ.

ಇಂತಹ ಸಾವಿರಾರು ಜಾತಿಗಳಲ್ಲಿ ಕೇವಲ 2-3% ಇರುವ ಜನ್ಮತಃ ಬ್ರಾಹ್ಮಣರು ದೇಶವನ್ನು ಹಾಳು ಮಾಡಿದರು ಎಂದು ಹೇಳುವುದು ಬ್ರಿಟೀಷರು ಭಾರತೀಯರನ್ನು ಜಾತಿಯ ಆಧಾರಿತವಾಗಿ ಒಡೆಯಲು ರೂಪಿಸಿದ ಕಾಗಕ್ಕಾ ಗುಬ್ಬಕ್ಕಾ ಕಥೆಯ ರೂಪವಾಗಿದೆ. ನಿಜ ಹೇಳಬೇಕೆಂದರೆ ಇಂದು ನಮ್ಮ ದೇಶದಲ್ಲಿರುವ ಆ 2-3% ಇರುವ ಜನ್ಮತಃ ಬ್ರಾಹ್ಮಣರಲ್ಲಿ ನಿಜವಾಗಿಯೂ ಬ್ರಹ್ಮತ್ವದ ಆಚಾರ ವಿಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವವರನ್ನು ಎಣಿಕೆ ಹಾಕಿದಲ್ಲಿ ಕೆಲವೇ ಸಾವಿರ/ಲಕ್ಷ ಮಂದಿ ಬ್ರಾಹ್ಮಣರು ಮಾತ್ರವೇ ಕಾಣಬಹುದಾಗಿದೆ ಎಂಬುದು ಅಚ್ಚರಿ ಎನಿಸಿದರೂ ಅದೇ ಸತ್ಯವಾಗಿದೆ. ಎಲ್ಲರೂ ತಿಳಿದಿರುವಂತೆ ಎಲ್ಲಾ ಬ್ರಾಹ್ಮಣರೂ ಬುದ್ದಿವಂತರು ಮತ್ತು ಸಿರಿವಂತರಲ್ಲಾ. ಬ್ರಾಹ್ಮಣರಲ್ಲಿಯೂ ಅತ್ಯಂತ ದಡ್ಡರು ಮತ್ತು ಕಡು ಬಡವರು ಇದ್ದಾರೆ. ಇಂದಿಗೂ ಸಹಾ ದೆಹಲಿಯ ಕೆಲವು ಸುಲಭ್ ಶೌಚಾಲಯದ ನಿರ್ವಹಣೆಯನ್ನು ಬ್ರಾಹ್ಮಣರೇ ಮಾಡುತ್ತಿರುವ ಸುದ್ದಿ ರಾಷ್ಟೀಯ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಕಳೆದ 300-400 ವರ್ಷಗಳಲ್ಲಿ ಪ್ರಪಂಚಾದ್ಯಂತ ಬ್ರಾಹ್ಮಣರಿಂದ ಯಾವುದೇ ದಬ್ಬಾಳಿಕೆಯಾಗಲೀ ಭಯೋತ್ಪಾದನೆಯಾಗಲೀ ನಡೆದಿಲ್ಲದಿರುವಾಗ ವಿನಾಕಾರಣ ಬ್ರಾಹ್ಮಣರ ವಿರುದ್ಧ ಈ ಪರಿಯಾಗಿ ಹರಿಹಾಯುವುದು ಎಷ್ಟು ಸರಿ? ಎಂದು ನಮ್ಮನ್ನೇ ನಾವು ಒಮ್ಮೆ ಆತ್ಮಾವಲೋಕನ ಮಾಡಿ ಕೊಳ್ಳಬೇಕಿದೆ.

ವಿದ್ಯೆ, ಬುದ್ಧಿ, ಅಧಿಕಾರ ಯಾವುದೇ ಧರ್ಮ ಅಥವಾ ಜಾತಿಯ ಸ್ವತ್ತಲ್ಲ. ಸತತ ಸಾಧನೆ ಮತ್ತು ಕಠಿಣ ಪರಿಶ್ರಮದಿಂದ ಯಾರು ಬೇಕಾದರೂ ಏನನ್ನಾದರೂ ಸಾಧಿಸಬಹುದಾಗಿದೆ. ಜನ್ಮತಃ ಕ್ಷತ್ರೀಯನಾಗಿದ್ದ ವಿಶ್ವಮಿತ್ರ ತನ್ನ ಸಾಧನೆಯಿಂದ ಬ್ರಾಹ್ಮಣನಾಗಿ ಸಪ್ತ ಋಷಿಗಳಲ್ಲಿ ಒಬ್ಬನಾಗಿರುವುದು ನಮಗೆಲ್ಲರಿಗೂ ತಿಳಿದೇ ಇದೆ. ಇನ್ನೂ ಇತ್ತೀಚಿನ ಉದಾರಣೆ ತೆಗೆದುಕೊಂಡರೆ ಸಂತ ಶಿಶುನಾಳ ಷರೀಫ್, ಲಾಲ್ ಬಹದ್ದೂರ್ ಶಾಸ್ತ್ರೀ, ಫುಲೆ, ನಾರಾಯಣ ಗುರುಗಳು, ರೆವರೆಂಡ್ ಕಿಟ್ಟಲ್, ಅಂಬೇಡ್ಕರ್, ಅಬ್ದುಲ್ ಕಲಾಂ ಅಂತಹವರೆಲ್ಲರೂ ಹುಟ್ಟಿನಿಂದ ವಿವಿಧ ಧರ್ಮ ಮತ್ತು ಜಾತಿಗಳಲ್ಲಿ ಜನಿಸಿದರೂ ಅವರು ತಮ್ಮ ಕಠಿಣ ಛಲ ಮತ್ತು ಪರಿಶ್ರಮದಿಂದ ಬ್ರಹ್ಮತ್ವದ ಜ್ಞಾನವನ್ನು ಪಡೆದು ನಮಗೆ ಮಾರ್ಗದರ್ಶಕರಾದ ಕಾರಣ ಆ ಮಹನೀಯರನ್ನೆಲ್ಲಾ ನಾವು ಪ್ರಾತಃಸ್ಮರಣೀಯರೆಂದೇ ಆದರಿಸುತ್ತೇವೆ. ಶೃಂಗೇರಿ ಜಗದ್ಗುರುಗಳು ಮತ್ತು ಉಡುಪಿಯ ಪೇಜಾವರ ಶ್ರೀಗಳನ್ನು ಅದರಿಸುವಷ್ಟೇ ಗುರುಭಕ್ತಿಯಿಂದ ಸಿದ್ದಗಂಗಾ ಶ್ರೀಗಳು ಮತ್ತು ಬಾಲಗಂಗಾಧರನಾಥ ಸ್ವಾಮೀಗಳನ್ನು ಪೂಜಿಸುವಾಗ ವಿನಾಕಾರಣ ಜಾತಿ ಜಾತಿಗಳ ಮಧ್ಯೆ ತಾರತಮ್ಯವೇಕೆ?

ಸ್ಕಾಂದ ಪುರಾಣದಲ್ಲೇ ಹೇಳಿರುವಂತೆ ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ ಎಂಬ ಮಾತಿದೆ. ಪ್ರತಿಯೊಬ್ಬರೂ ಹುಟ್ಟುವಾಗ ಶೂದ್ರರಾಗಿಯೇ ಜನಿಸುತ್ತಾರೆ. ನಂತರ ಆತನಿಗೆ ಬ್ರಹ್ಮೋಪದೇಶದ ಸಮಯದಲ್ಲಿ ದೊರೆತ ಸಂಸ್ಕಾರಗಳ ಮೂಲಕ ಬ್ರಾಹ್ಮಣ ಎನಿಸಿಕೊಳ್ಳುತ್ತಾನೆೆ ಎಂಬುದು ಇದರ ಅರ್ಥವಾಗಿದೆ. ಹಾಗಾಗಿ ಬ್ರಾಹ್ಮಣರನ್ನು ದ್ವಿಜ ಎಂದು ಏಕೆ ಕರೆಯುತ್ತಾರೆ? ಎಂಬ ಸಂಗತಿ ಬಹುತೇಕರಿಗೆ ತಿಳಿಯದೇ ಇರುವುದೇ ಇಷ್ಟೆಲ್ಲಾ ಅಪಸವ್ಯಗಳಿಗೆ ಕಾರಣವಾಗಿದೆ ಎಂದರೂ ತಪ್ಪಾಗದು. ದ್ವಿಜ ಎಂದರೆ ಪುನರ್ಜನ್ಮ ಪಡೆದವರು ಎಂಬರ್ಥ. ಕೇವಲ ಬ್ರಾಹ್ಮಣ ತಂದೆ ತಾಯಿಯರಿಗೆ ಜನಿಸಿದ ಕೂಡಲೇ ಯಾರೂ ಸಹಾ ಬ್ರಾಹ್ಮಣರಾಗುವುದಿಲ್ಲ. ಬಾಲ್ಯಾವಸ್ಥೆಯಲ್ಲಿ ತಂದೆ ತಾಯಿಯರು ತಮ್ಮ ಮಗನಿಗೆ ಸೂಕ್ತ ಸಂಸ್ಕಾರಗಳನ್ನು ಕಲಿಸಿದ ನಂತರ ಆ ಬಾಲಕನು ಎಂಟನೇ ವಯಸ್ಸಿಗೆ ಬಂದಾಗ, ವಟು, ವಟುವಿನ ತಂದೆ ಮತ್ತು ಬ್ರಹ್ಮೋಪದೇಶವನ್ನು ಮಾಡುವ ಗುರುಗಳು (ಇತ್ತೀಚೆಗೆ ಈ ಸಂಪ್ರದಾಯ ಗೌಣವಾಗಿದೆ) ಹೀಗೆ ಮೂವರಿಗೂ ಸಹಾ ಸೂಕ್ತವಾದ ಗುರು ಬಲವಿದ್ದಾಗ ಮಾತ್ರವೇ, ಒಳ್ಳೆಯ ಮಹೂರ್ತದಲ್ಲಿ ಆ ವಟುವಿಗೆ ಮೌಂಜಿ (ಮುಂಜಿ) ಅರ್ಥಾತ್ ಬ್ರಹ್ಮೋಪದೇಶದ ಸಂಧರ್ಭದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಆತನ ತಂದೆಯು ಗೌಪ್ಯವಾಗಿ ಗಾಯತ್ರಿಮಂತ್ರವನ್ನು ಉಪದೇಶಿದ ನಂತರವಷ್ಟೇ ಆತ ದ್ವಿಜ ಎನಿಸಿಕೊಳ್ಳುತ್ತಾನೆ. ಹೀಗೆ ಶಾಸ್ತ್ರೋಕ್ತವಾಗಿ ಬ್ರಹ್ಮೋಪದೇಶವನ್ನು ಪಡೆದ ಮುಂದಿನ 12 ವರ್ಷಗಳ ಕಾಲ ಆತ ಕಟ್ಟು ನಿಟ್ಟಿನ ಬ್ರಹ್ಮಚರ್ಯವನ್ನು ಪಾಲಿಸುತ್ತಾ, ಗುರುಗಳ ಆಶ್ರಯದಲ್ಲಿ ವಿದ್ಯಾ ಬುದ್ದಿಯನ್ನು ಕಲಿತ ನಂತರ ತಾನು ಕಲಿತ ವಿದ್ಯೆಯನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಸಮಾಜಕ್ಕೆ ಸೀಮಿತಗೊಳಿಸಿದಾಗ ಮಾತ್ರವೇ ಆತ ನಿಜವಾದ ಬ್ರಾಹ್ಮಣ ಎನಿಸಿಕೊಳ್ಳುತ್ತಾನೆ. ಇಷ್ಟೆಲ್ಲಾ ತಿಳಿದ ನಂತರ ಈಗ ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಇಂತಹ ನಿಜವಾದ ಎಷ್ಟು ಬ್ರಾಹ್ಮಣರು ನಮಗೆ ಕಾಣಸಿಗುತ್ತಾರೆ ಎಂಬುದನ್ನು ಒಮ್ಮೆ ಗಮನಿಸಬೇಕಾಗುತ್ತದೆ.

ಹಾಗಾದರೇ ಇಂದಿಗೂ ಸಹಾ ಇತರೇ ಜಾತಿಯಲ್ಲಿ ಜನಿಸಿ ಬ್ರಾಹ್ಮಣರಾಗ ಬಹುದೇ? ಹಾಗೆ ಯಾರಾದರೂ ಬ್ರಾಹ್ಮಣರಾಗಿದ್ದಾರೆಯೇ? ಎಂದು ಕೇಳಿದರೆ, ಅದಕ್ಕೆ ಸಾವಿರಾರು ಉದಾಹಣೆಗಳನ್ನು ದೇಶಾದ್ಯಂತ ಇರುವ ಸಾವಿರಾರು ಮಠಗಳಲ್ಲಿ ಕಾಣಬಹುದಾಗಿದ್ದು ಅವುಗಳಲ್ಲಿ ಕೆಲವು ಉದಾಹಣೆಗಳನ್ನು ನಾವಿಂದು ನೋಡೋಣ ಬನ್ನಿ.

ಈ ‍ಚಿತ್ರದಲ್ಲಿ ಇಬ್ಬರು ವಯೋವೃದ್ಧ ಬ್ರಾಹ್ಮಣ ಪಂಡಿತರು ಏನೋ ಗಹನವಾದ ವಿಷಯವನ್ನು ಚರ್ಚಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಅರಿಯಬಹುದಾಗಿದ್ದು ಈ ಚಿತ್ರದಲ್ಲಿ ಎಡಭಾಗದಲ್ಲಿರುವ ಜನುವಾರಧಾರಿಯ ಹೆಸರು ಡಾ.ಸಿ.ಪಿ.ಮ್ಯಾಥ್ಯೂ ಎಂಬುದಾಗಿದ್ದು ಅವರು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾಗಿ ಬಹ್ಳ ಕಾಲ ಸೇವೆ ಸಲ್ಲಿಸಿದ ನಂತರ ಅಲ್ಲೇ ಪ್ರಾಂಶುಪಾಲರಾಗಿ ನಿವೃತ್ತಿಯಾಗಿ ಭಾರತದ ಆಂಕೊಲಾಜಿ ಪಿತಾಮಹ ಎಂದೇ ಪ್ರಖ್ಯಾತರಾಗಿದ್ದವರು. ಅವರ ಬಲಭಾಗದಲ್ಲಿರುವವರು ಅವರು ಗುರುಗಳಾದ ಬ್ರಹ್ಮಶ್ರೀ ಸೂರ್ಯ ಸುಬ್ರಮಣಿಯನ್ ಭಟ್ಟತಿರಿ.

ದೇವರನಾಡು ಎಂದೇ ಪ್ರಖ್ಯಾತವಾಗಿರುವ ಕೇರಳದ ಮೂಲದ ಡಾ ಮ್ಯಾಥ್ಯು ಅವರು ಜನ್ಮತಃ ಕ್ರಿಶ್ಚಿಯನ್ನರಾಗಿದ್ದು ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ಆಂಕೊಲಾಜಿ ಪ್ರಾಧ್ಯಾಪಕರಾಗಿ ನಂತರ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾಗಿ ಅಂತಿಮವಾಗಿ ಪ್ರಾಂಶುಪಾಲರಾಗಿದ್ದರು. ನಂತರ ಅವರು ನಿವೃತ್ತರಾಗುವ ವೇಳೆಗೆ ಅವರು ಪ್ರಪಂಚಾದ್ಯಂತ ವಿವಿಧ ಕಡೆಗಳಿಗೆ ಭೇಟಿ ನೀಡುವ ವೈದ್ಯರಾಗಿದ್ದಲ್ಲದೇ ಸುಮಾರು 50 ಕ್ಕೂ ಹೆಚ್ಚು ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅಲೋಪತಿ ಕ್ಯಾನ್ಸರ್ ಚಿಕಿತ್ಸೆಯ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

60 ನೇ ವಯಸ್ಸಿನಲ್ಲಿ ಅವರು ನಿವೃತ್ತರಾದಾಗ, ಅವರಿಗೆ ಇದ್ದಕ್ಕಿದ್ದಂತೆಯೇ ಭಾರತದ ಸನಾತನ ಧರ್ಮ ಮತ್ತು ಸನಾತನ ವೈದ್ಯಕೀಯ ಪದ್ದತಿಗಳ ಬಗ್ಗೆ ವಿಶೇಷವಾದ ಅರಿವು ಮೂಡಿ ಅದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಯೋಚಿಸುತ್ತಿರುವಾಗಲೇ, ಅದೊಮ್ಮೆ ಅವರ ಮನೆಯ ಹತ್ತಿರದ ಬೀದಿಯಲ್ಲಿ ನಾಟಿ ವೈದ್ಯರೊಬ್ಬರನ್ನು (ಸಾಂಪ್ರದಾಯಿಕ ಬುಡಕಟ್ಟು ವೈದ್ಯಕೀಯ ಪದ್ಧತಿಯ ವೈದ್ಯ) ಭೇಟಿಯಾದ ನಂತರ ಅವರಿಗೆ ಆ ವ್ಯಕ್ತಿಯಲ್ಲಿದ್ದ ಅಪಾರವಾದ ಜ್ಞಾನದ ಅರಿವಾಗಿ ಆತನನ್ನೇ ತಮ್ಮ ಗುರುವಾಗಿ ಸ್ವೀಕರಿಸಿ, ಅವರಿಂದ ಸಾಂಪ್ರದಾಯಕ ಸಿದ್ಧ ಔಷಧ ಪದ್ದತಿಯನ್ನು ಕಲಿತುಕೊಂಡು ಅದರ ಮೂಲಕ ಸರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಕ್ಯಾನ್ಸರ್ ರೋಗಿಗಳನ್ನು ಸಾವಿನಿಂದ ರಕ್ಷಿಸಿದರು, ಹೀಗೆ ಅವರು ಉಳಿಸಿದ ರೋಗಿಗಳಲ್ಲಿ ಅಮೆರಿಕಾರ ವೈದ್ಯರುಗಳು ಕೈಚೆಲ್ಲಿದ್ದ ನೂರಾರು ರೋಗಿಗಳೂ ಸೇರಿದ್ದರು ಎನ್ನುವುದು ಗಮನಾರ್ಹವಾಗಿದೆ.

ಇದರ ಜೊತೆ ಜೊತೆಯಲ್ಲಿಯೇ ಅವರಿಗೆ ವೇದಗಳು ಮತ್ತು ಉಪನಿಷತ್ತುಗಳು ಸೇರಿದಂತೆ ಭಾರತೀಯ ಸಾಂಸ್ಕೃತಿಕ ಸಂಸ್ಕಾರಗಳ ಬಗ್ಗೆ ಆಳವಾದ ಅಧ್ಯಯನ ಮಾಡಲು ಇಚ್ಚಿಸಿ ತಾಂತ್ರಿಕ ಆಚರಣೆಗಳಿಗೆ ಪ್ರಸಿದ್ಧವಾದ ಸೂರ್ಯಕಾಲಾದಿ ಮನದಿಂದ ಬ್ರಹ್ಮೋಪದೇಶವನ್ನು ಪಡೆದು ಸಕಲ ವೇದ ಪಾರಂಗತರಾಗಿ ತಮ್ಮ ಮುಂದಿನ ಜೀವಿತಾವಧಿಯನ್ನು ಸನಾತನ ಧರ್ಮದ ಆಚಾರ್ಯರಾಗಿ ಕಳೆದ ಹೆಗ್ಗಳಿಕೆ ಅವರದ್ದಾಗಿದೆ.

ಅಕ್ಟೋಬರ್ 20, 2021ರಲ್ಲಿ ವಯೋಸಹಜವಾಗಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾಗುವವರೆಗೂ ತ್ರಿಕಾಲ ಸಂಧ್ಯಾವಂದನೆ ಮಾಡುವ ಕರ್ಮಠ ಬ್ರಾಹ್ಮಣರಾಗಿದ್ದಲ್ಲದೇ ವೇದ ಮಂತ್ರಗಳನ್ನು ಅರ್ಥ ಸಹಿತ ವಿವರಿಸಬಲ್ಲಂತಹವರಾಗಿ ಯಾವುದೇ ಬ್ರಾಹ್ಮಣರಿಗೂ ಕಡಿಮೆ ಇಲ್ಲದವರಾಗಿದ್ದಂತಹ ಡಾ ಮ್ಯಾಥ್ಯು ಅವರ ಕುರಿತಾಗಿ ಯಾವುದೇ ಮಾಧ್ಯಮಗಳು ಹೆಚ್ಚಿನ ಪ್ರಾಮುಖ್ಯತೆ ಕೊಡದೇ ಹೋದದ್ದು ಮತ್ತು ಸ್ವತಃ ಮ್ಯಾಥ್ಯು ಅವರಿಗೂ ಸಹಾ ವಯಕ್ತಿಕವಾಗಿ ಪ್ರಚಾರವನ್ನು ಬಯಸದೇ ಇದ್ದ ಕಾರಣ ಅವರ ಕುರಿತಾಗಿ ಇಂದಿಗೂ ಬಹುತೇಕರಿಗೆ ತಿಳಿಯದೇ ಹೋಗಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ.

ಅದೇ ರೀತಿ 50-60ರ ದಶಕದಲ್ಲಿ ಕಲ್ಕತ್ತಾದಿಂದ ಅಮೇರಿಕಾಕ್ಕೆ ಹೋಗಿ ಅಲ್ಲಿನ ಹಿಪ್ಪಿಗಳಿಗೆ ಭಕ್ತಿಪಂಥದ ರಸಾನುಭವವದ ಹುಚ್ಚನ್ನು ಹಿಡಿಸಿ ಹರೇ ರಾಮ ಹರೇ ಕೃಷ್ಣ ಮಂತ್ರವನ್ನು ಜಗದ್ವಿಖ್ಯಾತ ಗೊಳಿಸಿದ ಇಸ್ಕಾನ್ ಸಂಸ್ಥೆಯ ಮೂಲಕ ಪ್ರಪಂಚಾದ್ಯಂತ ಇಂದಿಗೂ ಲಕ್ಷಾಂತರ ಜನರು ಬ್ರಹ್ಮ ಜ್ಞಾನವನ್ನು ಪಡೆಯುವ ಮೂಲಕ ಸನಾತನ ಧರ್ಮದ ಕೀರ್ತಿಯನ್ನು ಹೆಚ್ಚಿಸುವಂತೆ ಮಾಡುತ್ತಿರುವ ಉದಾಹರಣೆ ನಮ್ಮ ಕಣ್ಣ ಮುಂದೇಯೇ ಇರುವಾಗ, ಭಾರತದಲ್ಲಿರುವ ಕೆಲವರು ಮೈಬಗ್ಗಿಸಿ ಓದು ಬರೆಯಲಾಗದೇ, ತಮ್ಮ ವಯಕ್ತಿಕ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಎಲ್ಲವನ್ನೂ ಉಚಿತವಾಗಿ ಬಯಸುವ ಕೆಲ ಪಟ್ಟಭಧ್ರ ಹಿತಾಸಕ್ತಿಯ ಜನರಿಗೆ ಈ ಲೇಖನವನ್ನು ತಪ್ಪದೇ ಓದಿಸಿ ಈ ಮೂಲಕ ಬ್ರಾಹ್ಮಣ ಎನ್ನುವುದು ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿರದೇ ಶ್ರದ್ಧಾ ಭಕ್ತಿಗಳಿಂದ ಆಸಕ್ತಿ ವಹಿಸಿ ಬ್ರಹ್ಮತ್ವವನ್ನು ಗಳಿಸಿ ಆವರುಗಳೂ ಜ್ಞಾನಿಗಳಾಗಿ ಬ್ರಾಹ್ಮಣರಾದಾಗಲೇ, ಬ್ರಾಹ್ಮಣ ನಿಂದನೆ ಸ್ವಲ್ಪ ಮಟ್ಟಿಗೆ ತಪ್ಪಬಹುದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment