ಝಾನ್ಸಿರಾಣಿ ಲಕ್ಷ್ಮೀಬಾಯಿಯವರು 19 ನವೆಂಬರ್ 1829ರಲ್ಲಿ ಹಿಂದೂಗಳ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಉತ್ತರ ಪ್ರದೇಶದ ವಾರಣಾಸಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಹುಟ್ಟಿದಾಗ ಆಕೆಗೆ ಇಟ್ಟ ಹೆಸರು ಮಣಿಕರ್ಣಿಕ ಎಂಬುದಾಗಿದ್ದು, ಬಹಳ ಮುದ್ದು ಮುದ್ದಾಗಿದ್ದ ಆಕೆಯನ್ನು ಎಲ್ಲರೂ ಮನು ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. ಆಕೆಗೆ 4 ವರ್ಷ ಇರುವಾಗಲೇ ತಾಯಿಯ ಮರಣಹೊಂದಿದರೂ, ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಆಕೆಯ ತಂದೆ ಮೊರೋಪಂತ್ ತಂಬೆಯವರೇ ಶಿಕ್ಷಣವನ್ನು ಕಲಿಸಿಕೊಡ ತೊಡಗಿದರು. ಆವರು ನಾನಾ ರಾವ್ ಪೇಶ್ವೆಯವರ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದು ನಂತರ ಅವರು ಝಾನ್ಸಿಯ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರ ಆಸ್ಥಾನದಲ್ಲಿ ಕೆಲಸಕ್ಕೆ ಸೇರಿದರು.
ಮಣಿಕರ್ಣಿಕಳಿಗೆ 14 ವರ್ಷವಾದಾಗ ಆಕೆಯನ್ನು ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರೊಂದಿಗೆ ವಿವಾಹ ಮಾಡಿಕೊಡುವ ಸಂಧರ್ಭದಲ್ಲಿ ಆಕೆಯ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಾಯಿಸಲಾಯಿತು. ಬಾಲ್ಯದಲ್ಲೇ ಲಕ್ಷ್ಮೀಬಾಯಿ ಕುದುರೆ ಸವಾರಿ, ಕತ್ತಿವರಸೆ, ಬಿಲ್ವಿದ್ಯೆಯನ್ನು ಸ್ವಸಾಮರ್ಥ್ಯದಿಂದಲೇ ಕಲಿತಿದ್ದರಿಂದ ಆಸ್ಥಾನದ ಮಹಾರಾಣಿಯಾದ ನಂತರ ಅಂತಃಪುರದ ತನ್ನ ಸಖೀಯರನ್ನೇ ಸೇರಿಸಿಕೊಂಡು ಒಂದು ಚಿಕ್ಕ ಹೆಣ್ಣುಮಕ್ಕಳ ಸೈನ್ಯವನ್ನು ಕಟ್ಟಿದ್ದರು.
ರಾಜಾ ಬಾಲಗಂಗಾಧರ ರಾವ್ ಮತ್ತು ಲಕ್ಷ್ಮೀ ಬಾಯಿಯವರ ಅನ್ಯೋನ್ಯ ದಾಂಪತ್ಯದ ಕುರುಹಾಗಿ ದಂಪತಿಗಳಿಗೆ 1851ರಲ್ಲಿ ಗಂಡು ಮಗುವಿನ ಜನನವಾಗಿ, ಅದು 4 ತಿಂಗಳಿರುವಾಗಲೇ ಮೃತಪಟ್ಟಾಗ, ಅವರು ದಾಮೋದರ ರಾವ್ ಎಂಬ ಸಣ್ಣ ವಯಸ್ಸಿನ ಮಗುವನ್ನು ದತ್ತು ಪಡೆದುಕೊಂಡರಾದರೂ, ಪುತ್ರ ಶೋಕ ನಿರಂತರಂ ಎನ್ನುವಂತೆ ತಮ್ಮ ಮಗನ ಸಾವಿನ ದುಖಃದಿಂದ ಹೊರಬರಲಾರದ ಮಹಾರಾಜರು 21, ನವೆಂಬರ್ 1853 ರಲ್ಲಿ ಹೃದಯಾಘಾತದಿಂದ ಅಕಾಲಿಕವಾಗಿ ಮೃತದಾದರು, ಅವರು ದತ್ತು ತೆಗೆದುಕೊಂಡ ದಾಮೋದರ ರಾವ್ ರಾಜವಂಶದ ರಕ್ತಸಂಬಂಧಿ ಆಗಿಲ್ಲದಿದ್ದ ಕಾರಣ, ದತ್ತು ಪುತ್ರರಿಗೆ ಅಧಿಕಾರ ಇಲ್ಲಾ ಎಂದು ಬ್ರಿಟಿಫ್ ಅಧಿಕಾರಿ ಲಾರ್ಡ್ ಡಾಲ್ ಹೌಸಿಯು ದಾಮೋದರ ರಾವ್ ಅವರಿಗೆ ರಾಜಾಭಿಶೇಕ ಮಾಡಲು ಬಿಡದೇ, ಝಾನ್ಸಿಯ ಜವಾಬ್ಧಾರಿ ಬ್ರಿಟಿಷರ ಪಾಲಾಗುತ್ತದೆ ಎಂದು ತಿಳಿಸಿ ರಾಣಿ ಲಕ್ಷ್ಮೀಬಾಯಿಯವರಿಗೆ 60,000 ರುಪಾಯಿ ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೊಟೆಯನ್ನು ಬಿಟ್ಟು ಹೊಗಲು ಆಜ್ಞೆ ಮಾಡಿದನು.
ಆದರೆ ಇದಕ್ಕೆ ಒಪ್ಪದ ಝಾನ್ಸಿರಾಣಿ ಲಕ್ಷ್ಮೀಬಾಯಿ ಬ್ರಿಟೀಷರ ವಿರುದ್ಧ ಹೋರಾಡಲು ತನ್ನ ಸೈನ್ಯಕ್ಕೆ ಕರೆ ಇತ್ತಳು. ರಾಣಿಯಾಜ್ಞೆಯಂತೆ ಜೂನ್ 17 ರಂದು ಗ್ವಾಲಿಯರ್‌ನ ಫೂಲ್ ಬಾಗ್ ಬಳಿಯ ಕೋಟಾ-ಕಿ-ಸೆರೈನಲ್ಲಿ, ಕ್ಯಾಪ್ಟನ್ ಹೆನೇಜ್ ನೇತೃತ್ವದ 8 ನೇ (ಕಿಂಗ್ಸ್ ರಾಯಲ್ ಐರಿಶ್) ಸೈನ್ಯದ ವಿರುದ್ಧ ತೀವ್ರವಾದ ಹೋರಾಟ ನಡೆಸಿತು. ಸ್ವತಃ ರಾಣಿ ಲಕ್ಷ್ಮಿ ಬಾಯಿ ತನ್ನ 8ವರ್ಷದ ಮಗನನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಕೈಯಲ್ಲಿ ಖಡ್ಗವನ್ನು ಹಿಡಿರು ಕುದುರೆಯನ್ನೇರಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿದಳು. ಅಂದಿನ ಕಾಲಕ್ಕೇ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬ್ರಿಟೀಷರ ಸೈನ್ಯದ ಎದುರು 5,000 ಭಾರತೀಯ ಸೈನಿಕರಿದ್ದರೂ ಬ್ರಿಟೀಷರನ್ನು ಮಣಿಸಲಾಗಲಿಲ್ಲ. ಸ್ವತಃ ಲಕ್ಷ್ಮೀಬಾಯಿಯೇ ತೀವ್ರವಾಗಿ ಗಾಯಗೊಂಡು ನಿತ್ರಾಣ ಸ್ಥಿತಿಹೊಂದುವಂತಾದಾಗ, ಬ್ರಿಟಿಷರು ತನ್ನ ದೇಹವನ್ನು ವಶಪಡಿಸಿಕೊಳ್ಳ ಬಾರದು ಎಂದು ನಿರ್ಧರಿಸಿದ್ದ ಆಕೆ ಅಲ್ಲಿಯೇ ಇದ್ದ ಒಬ್ಬ ಸನ್ಯಾಸಿಗೆ ತನ್ನ ಅಂತ್ಯ ಸಂಸ್ಕಾರವನ್ನು ಮಾಡಲು ಕೋರಿಕೊಂಡು ಅಸುನೀಗಿದಳು. ಆಕೆಯ ಇಚ್ಛೆಯಂತೆಯೇ ಆ ಸನ್ಯಾಸಿಯು ಸ್ಥಳೀಯರ ಸಹಾಯದಿಂದ ಆಕೆಯ ಅಂತ್ಯ ಸಂಸ್ಕಾರವನ್ನು ನೆರೆವೇರಿಸಿದರು.
ಈ ಯುದ್ಧವಾದ ಮೂರು ದಿನಗಳ ನಂತರ ಬ್ರಿಟಿಷರು ಗ್ವಾಲಿಯರ್ ನಗರವನ್ನು ವಶಪಡಿಸಿಕೊಂಡರು. ಆ ಯುದ್ಧದ ವರದಿಯಲ್ಲಿ, ರಾಣಿ ಲಕ್ಷ್ಮೀಬಾಯಿ ಅತ್ಯಂತ ಬುದ್ಧಿವಂತೆ ಮತ್ತು ಸುಂದರಿ ಯಾಗಿದ್ದಲ್ಲದೇ, ಆಕೆ ಉಳಿದ ಭಾರತೀಯ ನಾಯಕರಿಗಿಂಗಲೂ ಅತ್ಯಂತ ಅಪಾಯಕಾರಿ ಎಂದು ಬ್ರಿಟೀಷ್ ಅಧಿಕಾರಿ ಹ್ಯೂ ರೋಸ್ ಬರೆದಿದ್ದಾರೆ. ಇಂದಿಗೂ ಆಕೆಯ ಸಮಾಧಿಯನ್ನು ಗ್ವಾಲಿಯರ್‌ನ ಫೂಲ್ ಬಾಗ್ ಪ್ರದೇಶದಲ್ಲಿ ಕಾಣಬಹುದಾಗಿದೆ.
ಆಕೆಯ ಮರಣದ ಇಪ್ಪತ್ತು ವರ್ಷಗಳ ನಂತರ ಕರ್ನಲ್ ಮಲ್ಲೆಸನ್ ಭಾರತೀಯ ದಂಗೆಯ ಇತಿಹಾಸದಲ್ಲಿ ಹೀಗೆ ಬರೆದಿದ್ದಾರೆ, ಬ್ರಿಟಿಷರ ದೃಷ್ಟಿಯಲ್ಲಿ ಆಕೆಯ ತಪ್ಪುಗಳು ಏನೇ ಆಗಿರಬಹುದು, ಆಕೆಯ ದೇಶವಾಸಿಗಳು ಆಕೆಯನ್ನು ದಂಗೆಗೆ ದೂಡಿದರಾದರೂ ಅವಳು ತನ್ನ ದೇಶಕ್ಕಾಗಿ ಬದುಕಿದಳು ಮತ್ತು ತನ್ನ ದೇಶಕ್ಕಾಗಿ ಸತ್ತಳು ಎಂದಿರುವುದಲ್ಲದೇ, ಭಾರತೀಯರು ಆಕೆಯ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹೀಗೆ ಝಾನ್ಸಿರಾಣಿ ಲಕ್ಷ್ಮೀ ಬಾಯಿಯು ಹುತಾತ್ಮರಾದ ನಂತರ ಅಪ್ರಾಪ್ತ ರಾಜಕುಮಾರ ದಾಮೋದರ್ ರಾವ್ ಮತ್ತು ಅವರ ಮುಂದಿನ 5 ತಲೆಮಾರುಗಳು ಇಂದೋರ್‌ನಲ್ಲಿ ಅನಾಮಧೇಯ ಜೀವನವನ್ನು ನಡೆಸುತ್ತಿದ್ದದ್ದು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ತಿಳಿದಿತ್ತು, ಯಾವುದೇ ಸಾರ್ವಜನಿಕರ ಸಹಾಯವಿಲ್ಲದೆ, ಸರ್ಕಾರದ ಅಲ್ಪ ಸ್ವಲ್ಪ ಸಹಾಯದೊಂದಿಗೆ ರಾಣಿಯ ವಂಶಸ್ಥರ ಮೊದಲ ಎರಡು ತಲೆಮಾರುಗಳು ಕಡು ಬಡತನದಲ್ಲಿ ಬಾಡಿಗೆ ಮನೆಯಲ್ಲಿಯೇ ತಮ್ಮ ಜೀವನವನ್ನು ನಡೆಸುವಂತಾಗಿದ್ದು ನಿಜಕ್ಕೂ ವಿಷಾಧನೀಯವಾಗಿದೆ.
1858 ರಲ್ಲಿ ಬ್ರಿಟಿಷ್ ಪಡೆಗಳ ವಿರುದ್ಧದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷ್ಮೀಬಾಯಿಯ ಮರಣದ ಅವರ ದತ್ತುಪುತ್ರ ಮರಣಹೊಂದಿದ್ದಾನೆ ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಆಕೆಯ ನಿಧನ 2 ವರ್ಷಗಳ ನಂತರ ದಾಮೋದರ್ ರಾವ್ ಬ್ರಿಟೀಷರಿಗೆ ಶರಣಾದ ನಂತರ, ದಾಮೋದರ್ ರಾವ್ ಅವರಿಗೆ ಬ್ರಿಟಿಷ್ ಅಧಿಕಾರಿಗಳು ಝಾನ್ಸಿ ರಾಜ್ಯದ ರಾಜಪ್ರಭುತ್ವದ ಹಕ್ಕುಗಳನ್ನು ನೀಡುವುದರ ಬದಲಾಗಿ, ಅವರನ್ನು ದೇಶಭ್ರಷ್ಟರನ್ನಾಗಿಸಿದ ಕಾರಣ ದಾಮೋದರ್ ಅವರ ಕುಟುಂಬ ಅಂತಿಮವಾಗಿ ಗ್ವಾಲಿಯರ್‌ನಲ್ಲಿ ನೆಲೆಸಿದ ನಂತರ ಬ್ರಿಟೀಷರು ಅವರಿಗೆ ಬ್ರಿಟಿಷರು ತಿಂಗಳಿಗೆ 200 ರೂಪಾಯಿ ಪಿಂಚಣಿಯನ್ನು ಕೊಡಲು ಆರಂಭಿಸಿದರೂ ದಾಮೋದರ್ ಅವರು ಸತತವಾಗಿ ತಮ್ಮ ಣ್ ಸಿಂಹಾಸನಕ್ಕೆ ನ್ಯಾಯಸಮ್ಮತವಾದ ಹಕ್ಕನ್ನು ಮರುಸ್ಥಾಪಿಸುವ ಹೋರಾಟವನ್ನು ಮುಂದುವರೆಸಿದರಾದರೂ, ಅವರ ಪ್ರಯತ್ನಗಳು ವಿಫಲವಾಗಿ ದಾಮೋದರ್ ರಾವ್ 1906ರ ಮೇ 20 ರಂದು ತಮ್ಮ 57 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಾಗ ಅವರ ಮಗನಾದ ಲಕ್ಷ್ಮಣ್ ರಾವ್ ಝಾನ್ಸಿವಾಲೆ ಅವರಿಗೆ ಬ್ರಿಟಿಷರು ಮೊದಲು ನೀಡುತ್ತಿದ್ದ ಅರ್ಧದಷ್ಟು ಅರ್ಥಾತ್ ತಿಂಗಳಿಗೆ 100 ರೂಪಾಯಿ ಪಿಂಚಣಿಯನ್ನು ಕೊಡಲು ಆರಂಭಿಸಿದರು. ಆಗಸ್ಟ್ 15, 1947 ರಂದು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ರೆಸಿಡೆನ್ಸಿ ಪ್ರದೇಶದಲ್ಲಿನ ಮನೆಯನ್ನು ಖಾಲಿ ಮಾಡುವಂತೆ ಅಂದಿನ ಸರ್ಕಾರ ಲಕ್ಷ್ಮಣ್ ರಾವ್ ಅವರಿಗೆ ತಿಳಿಸಿದಾಗ ರಾಣಿ ಲಕ್ಷ್ಮೀಬಾಯಿಯವರ ವಂಶಸ್ಥರು ಇಂದೋರ್‌ನ ರಾಜ್‌ವಾಡದ ಪೀರ್ಗಾಲಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸ ತೊಡಗಿದರು.
ಝಾನ್ಸಿ ರಾಜವಂಶದ ಮೊಮ್ಮಗಳು ರಾಣಿ ಅಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಫ್ರೀಲಾನ್ಸ್ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಹೆಚ್ಚಿನ ಆದಾಯ ಇರದಿದ್ದ ಕಾರಣ ಕೆಲವೊಮ್ಮೆ ಅವರ ಕುಟುಂಬವು ಆಗಾಗ್ಗೆ ಖಾಲಿ ಹೊಟ್ಟೆಯಲ್ಲಿ ಮಲಗುವಂತಹ ಪರಿಸ್ಥಿತಿ ಬಂದಿತ್ತು. ಅಂತಿಮವಾಗಿ ರಾಣಿ ಅವರು 1959 ರಲ್ಲಿ ತೀವ್ರ ಬಡತನದಲ್ಲಿ ಇಹಲೋಕ ತ್ಯಜಿಸಿದರು, ಅವರಿಗೆ ಕೃಷ್ಣರಾವ್ ಝಾನ್ಸಿವಾಲೆ ಎಂಬ ಮಗ ಮತ್ತು ಚಂದ್ರಕಾಂತ ಬಾಯಿ ಎಂಬ ಮಗಳಿದ್ದಳು. ಕೃಷ್ಣರಾವ್ ಇಂದೋರ್‌ನ ಹುಕುಮ್‌ಚಂದ್ ಮಿಲ್‌ನಲ್ಲಿ ಸ್ಟೆನೋ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಸಂಧರ್ಭದಲ್ಲಿ ಕೇಂದ್ರ ಮತ್ತು ಯುಪಿ ಸರ್ಕಾರದಿಂದ ತಿಂಗಳಿಗೆ 100 ರೂಪಾಯಿ ಪಿಂಚಣಿ ಪಡೆಯುತ್ತಿದ್ದರಾದರೂ, ತಮ್ಮ ಜೀವಮಾನದಲ್ಲಿ ಸ್ವಂತ ಮನೆಯೊಂದನ್ನು ಹೊಂದಲಾಗದೇ, ಅದೇ ಬಾಡಿಗೆ ಮನೆಯಲ್ಲಿಯೇ1967 ರಲ್ಲಿ ನಿಧನರಾದರು. ಅವರ ನಿಧನದ ನಂತರ, ಕೇಂದ್ರ ಮತ್ತು ಯುಪಿ ಸರ್ಕಾರವು ರಾಣಿಯ ವಂಶಸ್ಥರ ಪಿಂಚಣಿಯನ್ನು ಸ್ಥಗಿತಗೊಳಿಸಿತು.
ಕೃಷ್ಣರಾವ್ ಅವರ ಮಗ ಅರುಣ್ ರಾವ್ ಝಾನ್ಸಿವಾಲೆ ಇಂಜಿನಿಯರ್ ಪದವಿಯನ್ನು ಪಡೆದು ಮಧ್ಯಪ್ರದೇಶದ ಎಲೆಕ್ಟ್ರಿಸಿಟಿ ಬೋರ್ಡ್‌ನಲ್ಲಿ (ಎಂಪಿಇಬಿ) ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ ನಂತರ 1994 ರಲ್ಲಿ ಇಂದೋರ್‌ನ ಧನ್ವಂತರಿ ನಗರದಲ್ಲಿ ಸ್ವಂತ ಮನೆಯೊಂದನ್ನು ಖರೀದಿಸಿದರು. ವಾಸ್ತವವಾಗಿ, ಝಾನ್ಸಿ ರಾಣಿಯ ಮಗ ದಾಮೋದರ್ ರಾವ್ ನಂತರದ ಕುಟುಂಬವು ಸ್ವಂತ ಮನೆಗಾಗಿ ಐದು ತಲೆಮಾರುಗಳವರೆಗೆ ಕಾಯಬೇಕಾಯಿತು.
ಝಾನ್ಸಿ ರಾಣಿಯ ವಂಶಸ್ಥರು 2021 ರವರೆಗೂ ಅಹಲ್ಯಾ ನಗರಿ ಎಂದೇ ಕರೆಯಲ್ಪಡುವ ಇಂದೋರಿನಲ್ಲೇ ಇದ್ದರು. ಅವರ ಆರನೇ ತಲೆಮಾರಿನ ವಂಶಸ್ಥನಿಗೆ ನಾಗಪುರದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಸಿಕ್ಕ ನಂತರ ಇಡೀ ಕುಟುಂಬ ನಾಗಪುರಕ್ಕೆ ವಲಸೆ ಬಂದಿದ್ದು, ಅವರೆಲ್ಲರೂ ಅನಾಮಧೇಯ ಜೀವನವನ್ನು ನಡೆಸಲು ಬಯಸುತ್ತಾರಾದರೂ, ತಮ್ಮ ಹೆಸರಿನೊಂದಿಗೆ ಝಾನ್ಸಿವಾಲೇ ಎಂಬ ಹೆಸರನ್ನಿಟ್ಟುಕೊಳ್ಳುವ ಮೂಲಕ ಝಾನ್ಸಿಯೊಂದಿಗೆ ತಮ್ಮ ಒಡನಾಟವನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿದ್ದಾರೆ.
44 ವರ್ಷ ವಯಸ್ಸಿನ ಸಾಫ್ಟ್‌ವೇರ್ ಎಂಜಿನಿಯರ್ ಆದ ಯೋಗೇಶ್ ಅರುಣ್ ರಾವ್ ಝಾನ್ಸಿವಾಲೆ (ಕೆಂಪು ಕುರ್ತಾ) ಅವರು ರಾಣಿ ಲಕ್ಷ್ಮೀಬಾಯಿ ಕುಟುಂಬದ ಆರನೇ ತಲೆಮಾರಿನ ಸದಸ್ಯರಾಗಿದ್ದು ಅವರ ಪತ್ನಿ ಪ್ರೀತ್ ಮತ್ತು ಇಬ್ಬರು ಮಕ್ಕಳಾದ ಪ್ರೀಯೇಶ್ ಮತ್ತು ಧನಿಕಾ ಮತ್ತು ಅವರ ತಂದೆ ಅರುಣ್ ರಾವ್ ಝಾನ್ಸಿವಾಲೆ (ನೀಲಿ ಕುರ್ತಾ) ಅವರೊಂದಿಗೆ ನಾಗ್ಪುರದಲ್ಲಿ ಯಾವುದೇ ರಾಜಕೀಯ ಪ್ರಭಾವ ಅಥವಾ ಹಿಂದಿನ ರಾಜವಂಶದ ಝಾನ್ಸಿ ರಾಜ್ಯಕ್ಕೆ ಸಂಬಂಧಿಸಿದ ಬಿರುದುಗಳನ್ನು ಹೊಂದದೇ ಸ್ವತಂತ್ರರಾಗಿ ವಾಸಿಸುತ್ತಿದ್ದಾರೆ.
ಇಂದಿನ ಯುಗದಲ್ಲಿ ಕೇವಲ ಒಂದು ಬಾರಿಗೆ ಗ್ರಾಮ/ಜಿಲ್ಲಾ ಪಂಚಾಯಿತಿ ಸದಸ್ಯ ಇಲ್ಲವೇ ನಗರ ಪಾಲಿಕೆ ಸದ್ಯರೋ, ಇಲ್ಲವೇ ಶಾಸಕ/ಸಂಸದರಾಗಿ ಆಯ್ಕೆಯಾದರೆ, ತಮ್ಮ ಮುಂದಿನ ಆರು ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಪಾಸ್ತಿ ಸಂಪಾದಿಸುವಂತಹ ಕಾಲದಲ್ಲಿ ದೇಶದ ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿದ ಝಾನ್ಸಿ ರಾಣೀ ಲಕ್ಷ್ಕೀಬಾಯಿ ಅವರ ಕುಟುಂಬ ಸರ್ಕಾರದಿಂದಾಗಲೀ ಅಥವಾ ಸಾರ್ವಜನಿಕರಿಂದಾಗಲೀ ಯಾವುದೇ ರೀತಿಯ ಸಹಾಯವನ್ನು ಯಾಚಿಸದೇ ತಮ್ಮ ಸ್ವಂತ ದುಡಿಮೆಯಲ್ಲಿ ಎಲೆಮರೆಯಾಯಿಯಂತೆ ಜೀವಿಸುತ್ತಿರುವುದು ನಮ್ಮ ಇಂದಿನ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮೇಲ್ಪಂಕ್ತಿಯಾಗುತ್ತಾರೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ