ಅತ್ಯಂತ ಸುದೀರ್ಘ ಮ್ಯಾರಥಾನ್ ದಾಖಲೆ

ಪ್ರಸ್ತುತವಾಗಿ  ಪ್ರಪಂಚಾದ್ಯಂತ ಒಲಂಪಿಕ್ಸ್ ಬಗ್ಗೆಯೇ ಚರ್ಚೆ ನಡೆದಿದೆ. ಅದರಲ್ಲೂ ನಮ್ಮ ಮಹಿಳಾ ಕುಸ್ತಿಪಟು ಕೇವಲ 100 ಗ್ರಾಂ ಹೆಚ್ಚಿನ ತೂಕ ಇದ್ದ ಕಾರಣ, ಖಚಿತವಾದ ಪದಕದಿಂದ ಅನರ್ಹಗೊಂಡ ಕಾರಣ, ದೇಶಾದ್ಯಂತ  ಅದರ ಕುರಿತಾಗ ಪರ ಮತ್ತು ವಿರೋಧದ ಚರ್ಚೆಗಳು ನೆನ್ನೆಯಿಂದಲೂ ನಡೆಯುತ್ತಿದ್ದು. ಮಳೆ ನಿಂತು ಹೋದ ನಂತರವೂ ಮರಗಳ ಎಲೆಗಳಿಂದ ಹನಿಗಳು ಉದುರುವಂತೆ ಇನ್ನೂ ಕೆಲವು ವಾರಗಳ ಕಾಲ ಅದರ ಕುರಿತಾಗಿಯೇ ನಮ್ಮ ಮಾಧ್ಯಮಗಳಲ್ಲಿ ಭಯಂಕರವಾದ ಚರ್ಚೆ ನಡೆಯುತ್ತಲೇ, ವಿತಂಡವಾದಕ್ಕೆ ತಿರುಗಿ, ಮತ್ತೊಂದು ದೊಡ್ಡ ಪ್ರಕರಣ ನಡೆಯುವವರೆಗೂ ತಾರ್ಕಿಕ ಅಂತ್ಯ ಕಾಣದೇ ಕೊನೆಗೊಳ್ಳುತ್ತದೆ. ಆದರೆ 1912ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರಪ್ರಥಮ ಬಾರಿಗೆ ಅರ್ಹತೆಯನ್ನು ಪಡೆದಿದ್ದ ಜಪಾನಿನ ಮ್ಯಾರಥಾನ್ ಪಿತಾಮಹಾ ಎಂದೇ ಪ್ರಖ್ಯಾತವಾಗಿದ್ದ  ಶಿಜೋ ಕಣಕುರಿ ತಮ್ಮ 25 ಮೈಲಿ ದೂರವನ್ನು ಕ್ರಮಿಸಲು ಬರೋಬ್ಬರಿ 54 ವರ್ಷಗಳಷ್ಟರ ಸಮಯವನ್ನು ತೆಗೆದುಕೊಂಡು ಯಾರೂ ಅಳಿಸಲಾಗದಂತಹ ಒಂದು ವಿನೂತನ ದಾಖಲೆಯನ್ನು ಮಾಡಿರುವ ರೋಚಕತೆಯನ್ನು ತಿಳಿಯೋಣ ಬನ್ನಿ.

shinjo3ಕಣಕುರಿ ಅವರು ಕ್ಯುಶು ದ್ವೀಪದ ನಾಗೋಮಿ ಎಂಬ ಗ್ರಾಮೀಣ ಪಟ್ಟಣದಲ್ಲಿ ಸಾಧಾರಣ ವ್ಯಾಪಾರಸ್ಥರ ಕುಟುಂಬದಲ್ಲಿ ಜನಿಸಿದರು. ತಮ್ಮ ಊರಿನಿಂದ ಶಾಲೆಯು ಬಹಳ ದೂರವಿದ್ದ ಕಾರಣ, ಪ್ರತಿನವೂ ಅವರು ಶಾಲೆಗೆ ಸುಮಾರು ನಾಲ್ಕು ಮೈಲುಗಳಷ್ಟು ಓಡುತ್ತಿದ್ದರಿಂದ ಅವರಿಗೆ ದೂರ ದೂರದ ಓಟದ ಅಭ್ಯಾಸ ಬಾಲ್ಯದಿಂದಲೇ ಆಗಿತ್ತು. ನವೆಂಬರ್ 1911 ರಲ್ಲಿ, ತಮ್ಮ 20 ನೇ ವಯಸ್ಸಿನಲ್ಲಿ, 1912 ರ ಸ್ಟಾಕ್‌ಹೋಮ್ ಒಲಿಂಪಿಕ್ಸ್‌ಗಾಗಿ ದೇಶೀಯ ಟ್ರಯಲ್ಸ್‌ನಲ್ಲಿ ಭಾಗವಹಿಸಿ 40 ಕಿಮೀ (25 ಮೈಲಿ) ದೂರವನ್ನು 2 ಗಂಟೆ, 30 ನಿಮಿಷ 33 ಸೆಕೆಂಡುಗಳಲ್ಲಿ ಮ್ಯಾರಥಾನ್ ಓಡುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಿದ ಕಾರಣ, ಸಹಜವಾಗಿ 1912 ಮತ್ತು ಸ್ಟಾಕ್‌ಹೋಮ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಜಪಾನಿನ ಮೊದಲ ಅಥ್ಲೀಟ್ ಎಂಬ ಖ್ಯಾತಿಗೆ ಭಾಜನರಾದರೂ. ಸ್ಟಾಕ್ ಹೋಮ್ ಒಲಂಪಿಕ್ಸಿಗೆ ಆಯ್ಕೆಯಾದ ಇಬ್ಬರು ಜಪಾನಿನ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರೂ ಅವರಿಬ್ಬರೂ ಪ್ರಯಾಣದ ವೆಚ್ಚವಾದ 1,800 ಯೆನ್‌ಗಳನ್ನು ಸ್ವಂತವಾಗಿ ಹೊಂದಿಸಿಕೊಳ್ಳಬೇಕಿತ್ತು. ಅವರ ಬಳಿ ಅಷ್ಟೊಂದು ಹಣವಿಲ್ಲದ್ದ ಕಾರಣ, ಕಣಕುರಿಯವರ ಸಹಪಾಠಿಗಳು ರಾಷ್ಟ್ರವ್ಯಾಪಿ ನಿಧಿ ಸಂಗ್ರಹಣೆಯನ್ನು ನಡೆಸಿ ಸುಮಾರು 1,500 ಯೆನ್‌ಗಳನ್ನು ಸಂಗ್ರಹಿಸಿದರೆ, ಶಿಜೋ ಅವರ ಹಿರಿಯ ಸಹೋದರ, ಸಾನೆತ್ಸುಗು ಕಣಕುರಿ ಅವರು ಸುಮಾರು 300 ಯೆನ್ ಸಂಗ್ರಹಿಸುವ ಮೂಲಕ ಪ್ರಯಾಣದ ವೆಚ್ಚವನ್ನು ಸರಿಹೊಂದಿಸಿ  ಜೂಡೋದ ಸಂಸ್ಥಾಪಕ ಕ್ಯಾನೊ ಜಿಗೊರೊ ಅವರಲ್ಲಿ  ತರಬೇತಿಯನ್ನು  ಪಡೆದರು.

ಈಗಿನಂತೆ ವಿಮಾನಗಳ ಸಂಚಾರ ಅಷ್ಟಾಗಿ ಇರದ ಕಾರಣ, ಶಿಜೊ ಆವರು ಆರಂಭದಲ್ಲಿ ಕೆಲ ದಿನಗಳ ಕಾಲ ಹಡಗಿನ ಮೂಲಕ ಮತ್ತು ನಂತರ ಟ್ರಾನ್ಸ್-ಸೈಬೀರಿಯನ್ ರೈಲ್ವೇ ಮೂಲಕ ಅತ್ಯಂತ ಶ್ರಮದಾಯಕ ಪ್ರಯಾಣವನ್ನು ಮುಗಿಸಿ ಅಂತಿಮವಾಗಿ ಜಪಾನ್‌ನಿಂದ ಸ್ಟಾಕ್‌ಹೋಮ್‌ಗೆ ಸುಮಾರು 18 ದಿನಗಳಲ್ಲಿ ತಲುಪಿದರು. ಈ ಸುದೀರ್ಘ ಪ್ರಯಾಣವೇ ಅವರ ದೇಹದ ಕಸುವನ್ನೆಲ್ಲಾ ತೆಗೆದು ಹಾಕಿದ್ದಲ್ಲದೇ, ಅದೇ ವರ್ಷ ಸ್ಟಾಕ್‌ಹೋಮ್‌ನಲ್ಲಿ  ದಾಖಲೆ ಪ್ರಮಾಣದ ಬಿಸಿಲಿನಿಂದಾಗಿ ಕೆಲಕಾಲ ಮಲಗಲು ಸಹಾ ಆಗದೇ ಪ್ರಯಾಸಪಟ್ಟರು. ಬರಗಾಲದಲ್ಲಿ ಅಧಿಕಮಾಸ ಎನ್ನುವಂತೆ ಆ ಪ್ರದೇಶದಲ್ಲಿ ಸೂರ್ಯಾಸ್ಥಮಾನವೇ ಆದ ಕಾರಣ ಹಗಲು ರಾತ್ರಿಯ ವೆತ್ಯಾಸವರೆಯದ ಅವರ ದೇಹವೂ ಸಹಾ ವಿಪರೀತವಾಗಿ ದಣಿಯಿತು. ಇಷ್ಟೇ ಅಲ್ಲದೇ, ಸ್ಥಳೀಯ ಆಹಾರವೂ ಸಹಾ ಅವರ ದೇಹಕ್ಕೆ ಒಗ್ಗದೇ ಹೋದ ಕಾರಣ ದಿನೇ ದಿನೇ ದೈಹಿಕವಾಗಿ ಕ್ಷೀಣಿಸ ತೊಡಗಿದರು.

shijo4ಇಷ್ಟೆಲ್ಲದರ ನಡುವೆ ಗಾಯದ ಮೇಲೆ ಬರೆ ಎನ್ನುವಂತೆ ಅವರ ತರಬೇತುದಾರರಾಗಿದ್ದ ಹ್ಯೊಜೊ ಒಮೊರಿ ಅವರು ಕ್ಷಯರೋಗಕ್ಕೆ ತುತ್ತಾದ ಕಾರಣ ಮ್ಯಾರಥಾನ್ ಓಟದ ಪೂರ್ವ  ತರಬೇತಿಯನ್ನೂ ನೀಡಲು ಸಾಧ್ಯವಾಗಲಿಲ್ಲ. ಅಲ್ಲಿನ ಬಿಸಿಲಿನ ಧಗೆ ಯಾವ ಪ್ರಮಾಣದಲ್ಲಿ ಇತ್ತು ಎಂದರೆ, ಸ್ಟಾಕ್‌ಹೋಮ್ ನ ಆ ವರ್ಷದ ಶಾಖದ ಅಲೆಯಿಂದಾಗಿ, ಆ ಒಲಂಪಿಕ್ಸ್‌ನ ಸ್ಪ್ರಿಂಟರ್ ಒಬ್ಬರು ಟ್ರ್ಯಾಕ್‌ನಲ್ಲಿ ಕುಸಿದು ಬಿದ್ದು ತಮ್ಮ ಪ್ರಾಣತ್ಯಾಗ ಮಾಡಿದ ಕುಖ್ಯಾತಿಗೂ ಒಳಗಾಗಿತ್ತು. ಹಾಗಾಗಿಯೇ ಆ ಒಲಿಂಪಿಕ್ ಪಂದ್ಯಾವಳಿಯ ಚಿನ್ನದ ಪದಕ ವಿಜೇತ ಜಾನಿ ಹೇಯ್ಸ್ ಈ ಘಟನೆಯನ್ನು ನಾಗರಿಕತೆಗೆ ಅವಮಾನ ಎಂದು ಕರೆದಿದ್ದರು.

WhatsApp Image 2024-08-08 at 15.04.20ಇಷ್ಟೆಲ್ಲಾ ತೊಂದರೆಗಳ ನಡುವೆಯೂ ಸಹಾ ಕಣಕುರಿ ಮ್ಯಾರಥಾನ್ ಓಡಲು ನಿರ್ಧರಿಸಿ, ಎಲ್ಲರಂತೆ ಓಟದಲ್ಲಿ ಪಾಲ್ಗೊಂಡು ಸುಮಾರು 16 ಮೈಲಿ ದೂರ ಕ್ರಮಿಸಿದ  ನಂತರ ವಿಪರೀತ ದಣಿವಿನಿಂದ ದೇಹವನ್ನು ದುರ್ಬಲಗೊಳಿಸುವ ಹೈಪರ್ಥರ್ಮಿಯಕ್ಕೆ ಒಳಗಾದ ಕಾರಣ ತಮ್ಮ ಓಟವನ್ನು ಮುಂದುವರೆಲಾಗದೇ 16 ಮೈಲುಗಳಷ್ಟು ಓಡಿದ ನಂತರ ಮಾರ್ಗದ ಮಧ್ಯೆಯೇ ಕುಸಿದು ಬಿದ್ದರು. ಸ್ವಲ್ಪ ಸಮಯದ ನಂತರ  ರಸ್ತೆಯ ಬದಿಯಲ್ಲೇ ಇದ್ದ  ಕಿತ್ತಳೆ ತೋಟದ ಕುಟುಂಬವೊಂದು ಅವರನ್ನು ಗಮನಿಸಿ ಅವರನ್ನು ಕರೆದೊಯ್ದು ತಮ್ಮದೇ ತೋಟದ ಕಿತ್ತಳೆ ರಸವನ್ನು ನೀಡುವ ಮೂಲಕ ಅವರಿಗೆ ಅಗತ್ಯವಿದ್ದ ಸೂಕ್ತವಾದ ವಿಶ್ರಾಂತಿಯನ್ನು ನೀಡಿದರು. ಕಿತ್ತಳೆ ರಸವನ್ನು ಕುಡಿದು ಸುಮಾರು ಒಂದು ಗಂಟೆಗಳ ಕಾಲ ಅದೇ ಮನೆಯಲ್ಲೇ ದಣಿವಾರಿಸಿಕೊಂಡ ನಂತರ ತಮ್ಮ ಓಟವನ್ನು ಪೂರ್ಣಗೊಳಿಸಲು ವಿಫಲವಾದ ಕಾರಣ ಅವರು ತುಂಬಾ ಮುಜುಗರಕ್ಕೊಳಕ್ಕಾಗಿ ಓಟವನ್ನು ಮುಂದುವರೆಸದೇ, ಯಾರಿಗೂ ತಿಳಿಸದೆ ಮೌನವಾಗಿ ತಮ್ಮ ಸ್ವದೇಶವಾದ ಜಪಾನ್‌ಗೆ ಮರಳಿದರು. ಈ ರೀತಿ ಒಲಂಪಿಕ್ಸ್ ನಲ್ಲಿ ಓಟವನ್ನು ಪೂರ್ಣಗೊಳಿಸದೇ ಮತ್ತು ಆಯೋಜಕರು ಮತ್ತು ಯಾರಿಗೂ ತಿಳಿಸದೇ ರಹಸ್ಯವಾಗಿ ಜಪಾನ್‌ಗೆ ಹಿಂದಿರುಗಿದ್ದರಿಂದ, ಓಟದ ಅಧಿಕಾರಿಗಳು ಸಮಾಧಾನಕರ ಬಹುಮಾನವಾಗಿ ದೊಡ್ಡ ಮರದ ಚಮಚವನ್ನು ರಷ್ಯನ್ನರಿಗೆ ನೀಡಿದ್ದಲ್ಲದೇ ಕಾಣಕುರಿಯ ಕಣ್ಮರೆಯಾಗಿದ್ದರ ಕುರಿತಾಗಿ ಅನೇಕ ಹಾಸ್ಯಮಯ ಕಥೆಗಳನ್ನು ಹುಟ್ಟಿಕೊಂಡವು. ಸ್ವೀಡನ್ ತನ್ನ ಕಾಣೆಯಾದ ವ್ಯಕ್ತಿಗಳ ಪಟ್ಟಿಗೆ ಶಿಜೋ ಕಣಕುರಿಯನ್ನು ಸೇರಿಸಿ ಸುಮ್ಮನಾದರು.

WhatsApp Image 2024-08-08 at 15.04.32ಇದಾದ ನಂತರ ಕಣಕುರಿಯವರು 1916ರ ಬೇಸಿಗೆ ಒಲಿಂಪಿಕ್ಸ್‌ಗೆ ಆಯ್ಕೆಯಾದರೂ ಮೊದಲ ವಿಶ್ವ ಸಮರದ ಕಾರಣದಿಂದ ಅದು ರದ್ದಾಯಿತು. ಆಂಟ್ವರ್ಪ್‌ನಲ್ಲಿ ನಡೆದ 1920 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕಣಕುರಿ ಸ್ಪರ್ಧಿಸಿದರಾದರೂ ಅಲ್ಲಿ  2 ಗಂಟೆ 48 ನಿಮಿಷ 45.4 ಸೆಕೆಂಡುಗಳ ಸಮಯದೊಂದಿಗೆ 16 ನೇ ಸ್ಥಾನ ಪಡೆದರು. ಮರಳಿ ಯತ್ನವ ಮಾಡು ಎನ್ನುವಂತೆ  ಕಣಕುರಿ 1924ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದರಾದರೂ ಮತ್ತೆ ಅಲ್ಲಿ ಅವರು ಓಟವನ್ನು ಪೂರ್ಣಗೊಳಿಸಲು ವಿಫಲರಾದರು.

Shiso_Kanaguri_1924ಸುಮಾರು 54 ವರ್ಷಗಳ ನಂತರ ಹರಸಾಹಸ ಪಟ್ಟು ಸ್ವೀಡಿಷ್ ತನಿಖಾ ಪತ್ರಕರ್ತರು  ಶಿಂಜೋ ಕಣಕುರಿ ಜಪಾನ್‌ನಿನ  ಶಾಲೆಯಯೊಂದರಲ್ಲಿ ಭೂಗೋಳಶಾಸ್ತ್ರವನ್ನು ಕಲಿಸುತ್ತಿದ್ದಾರೆಂದು  ವಿಷಯವನ್ನು ತಿಳಿದು ಅವರ ಒಲಿಂಪಿಕ್ಸ್ ಅನುಭವದ ಬಗ್ಗೆ ಕಥೆಯೊಂದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ಲೇಖನವನ್ನು ಓದಿದ ಸ್ವೀಡಿಶ್ ಟೆಲಿವಿಷನ್ ಅವರು ಕಣಕುರಿಯವರನ್ನು ಸಂಪರ್ಕಿಸಿ, 1912 ಸ್ಟಾಕ್‌ಹೋಮ್‌ನ ಒಲಿಂಪಿಕ್ಸಿನ ಮ್ಯಾರಥಾನಿನ ಅಂತಿಮ ಗೆರೆಯನ್ನು ಇನ್ನೂ ತಲುಪಿಲ್ಲವಾದ್ದರಿಂದ ಅವರ ಗಡಿಯಾರ ಇನ್ನೂ ಚಾಲನೆಯಲ್ಲಿದ್ದು ಅರು ಪೂರ್ಣಗೊಳಿಸಲು  ಇಚ್ಚಿಸಿದಲ್ಲಿ ಅದಕ್ಕೆ ಅವಕಾಶವನ್ನು ಕಲ್ಪಿಸಿಕೊಡುವುದಾಗಿ ತಿಳಿಸಿತು. 54 ವರ್ಷಗಳಿಂದಲೂ ಸ್ಲರ್ಧೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಲದೇ ತಪ್ಪಿತಸ್ಥ ಭಾವನೆಯಲ್ಲೇ ಜೀವನ ಸಾಗಿಸುತ್ತಿದ್ದ ಕಣಕುರಿ ಈ ಸುವರ್ಣಾವಕಾಶವನ್ನು ಸಂತೋಷದಿಂದ ಸದುಪಯೋಗ ಪಡಿಸಿಕೊಳ್ಳಲು ಇಚ್ಚಿಸಿದರು.

shizo-kanakuri3ಇದರ ಮುಂದುವರೆದ ಭಾಗವಾಗಿ ಸ್ವೀಡನ್‌ಗೆ ವಿಮಾನದ ಮೂಲಕ ಹಾರಿಬಂದು ಟಾರ್ಮ್ಯಾಕ್ ಸುತ್ತಲೂ ಜಾಗಿಂಗ್ ಮಾಡಿ ತಮ್ಮ ಓಡಲು ತಮ್ಮ ಕಾಲುಗಳನ್ನು ಅನುವು ಮಾಡಿಕೊಂಡು  ಮಾರ್ಚ್ 20, 1967 ರಂದು, 75 ವರ್ಷದ ಶಿಜೋ ಕಣಕೂರಿ ಅವರು 54 ವರ್ಷಗಳ ಹಿಂದೆ ಮ್ಯಾರಥಾನ್ ನಲ್ಲಿ ದಣಿವಿನಿಂದ ಕುಸಿದು ಬಿದ್ದ ಸ್ಥಳದಿಂದಲೇ ಆರಂಭಿಸಿ ತಮ್ಮ ಮ್ಯಾರಥಾನ್ ಅನ್ನು ಸಂಪೂರ್ಣಗೊಳಿಸಿದ್ದಲ್ಲದೇ, ಮ್ಯಾರಥಾನ್ ಮುಗಿಸಿದ ನಂತರ 54 ವರ್ಷಗಳ ಹಿಂದೆ ತಮ್ಮ ಜೀವವನ್ನು ಉಳಿಸಿದ್ದ ಅದೇ ಕುಟುಂಬವನ್ನು ಭೇಟಿ ಮಾಡಿದರು. ದುರಾದೃಷ್ಟವಷಾತ್ ಅಂದು ಅವರನ್ನು ಸಲಹಿದ್ದ ಮೂಲ ಆತಿಥೇಯರು ಇಲ್ಲದೇ ಹೋದರು ಅವರ  ಮಗ ಬೆಂಗ್ಟ್ ಪೆಟ್ರೆ ಅವರನ್ನು ಬಹಳ ಸಂತೋಷದಿಂದ ಸ್ವಾಗತಿಸಿ ಮತ್ತೇ ಅವರಿಗೆ ತಮ್ಮದೇ ತೋಟದ ಕಿತ್ತಳೆ ರಸವನ್ನು ನೀಡುವುದರ ಮೂಲಕ ಹಳೆಯದ್ದನ್ನೆಲ್ಲವನ್ನೂ ನೆನಪಿಸಿದ್ದು ತಮ್ಮ ಜೀವನದ ಅಮೂಲ್ಯ ಕ್ಷಣ ಎಂದು ಕನಕೂರಿಯವರು ಸಂಭ್ರಮಿಸಿದರು. ಹೀಗೆ ಅವರ ಮ್ಯಾರಥಾನ್ ಓಟದ ಸಮಯವು 54 ವರ್ಷಗಳು, 8 ತಿಂಗಳುಗಳು, 6 ದಿನಗಳು, 5 ಗಂಟೆಗಳು, 32 ನಿಮಿಷಗಳು ಮತ್ತು 20.3 ಸೆಕೆಂಡುಗಳಿಗೆ ಅಧಿಕೃತವಾಗಿ ಅಂತಿಮಗೊಂಡು ಪ್ರಪಂಚದ ಅತ್ಯಂತ ಸುದೀರ್ಘವಾದ ಮ್ಯಾರಥಾನ್  ದಾಖಲೆಗೆ ಪಾತ್ರವಾಯಿತು.

WhatsApp Image 2024-08-08 at 15.04.01ಈ ರೀತಿಯ ಅಪರೂಪದ ದಾಖಲೆಯನ್ನು ಪೂರ್ಣಗೊಳಿಸಿದ ನಂತರ,  ನಾನು 1912ರಲ್ಲಿ ಓಟವನ್ನು ಪ್ರಾರಂಭಿಸಿದಾಗ ಬ್ರಹ್ಮಚಾರಿಯಾಗಿದ್ದೆ. ನಾನು ಅಂತಿಮವಾಗಿ ನನ್ನ ಓಟದ ಗೆರೆಯನ್ನು ತಲುಪುವ ಹೊತ್ತಿಗೆ, ಮದುವೆಯಾಗಿ ಆರು ಮಕ್ಕಳ ತಂದೆ ಮತ್ತು 10 ಮೊಮ್ಮಕ್ಕಳ ಸಮ್ಮುಖದಲ್ಲಿ ಬಹಳ ದೀರ್ಘವಾದ ಮ್ಯಾರಥಾನ್ ಮುಗಿಸಿದ ಕೀರ್ತಿ ನನ್ನದಾಗಿರುವುದು ಅಂತ್ಯಂತ ಸಂತೋಷವನ್ನು ನೀಡುತ್ತಿದೆ  ಎಂದು ಸಂಭ್ರಮಿಸಿದ್ದರು. 1920 ರಲ್ಲಿ ಹಾಕೋನ್ ಎಕಿಡೆನ್ ರಿಲೇ ಮ್ಯಾರಥಾನ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರನ್ನು ಜಪಾನಿನ ಮ್ಯಾರಥಾನ್ ಪಿತಾಮಹಾ ಎಂದೇ ಕರೆದದ್ದಲ್ಲೇ, ಅಲ್ಲಿನ ಸರ್ಕಾರ 2004 ರಿಂದ ಜಪಾನಿನ ಮ್ಯಾರಥಾನ್ ಓಟವೊಂದರ  ಉನ್ನತ ಬಹುಮಾನವನ್ನು ಅವರ ಹೆಸರಿನಲ್ಲೇ ಆರಂಭಿಸಿ  ಶಿಜೋ ಕಣಕುರಿಯವರನ್ನು  ಗೌರವಿಸಲಾಗಿದೆ

ಇಷ್ಟೆಲ್ಲಾ ಸಾಹಸಮಯ ಪ್ರವೃತ್ತಿಯವಗಾರಿದ್ದ ಕಣಕುರಿಯವರು  ತಮ್ಮ 92 ನೇ ವಯಸ್ಸಿನಲ್ಲಿ 13 ನವೆಂಬರ್ 1983 ರಂದು ಜಪಾನ್‌ನ ಕುಮಾಮೊಟೊ ಪ್ರಿಫೆಕ್ಚರ್‌ನಲ್ಲಿರುವ ತಮ್ಮ ತಮಾನಾದಲ್ಲಿ ನಿಧನರಾಗುವ ಮೂಲಕ ದೂರ ಓಡದ ದಂತಕಥೆಯೊಬ್ಬರ ಅವಸಾನವಾಯಿತು. ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎನ್ನುವ ಮಾತಿದ್ದರೂ. ಬಹುಶಃ  ಶಿಜೋ ಕಣಕುರಿ ಅವರ ಈ ಅತ್ಯಂತ  ರೋಚಕವಾದ ಮತ್ತು ಅಷ್ಟೇ ಸುದೀರ್ಘ ಮ್ಯಾರಥಾನ್ ಮುರಿಯುವ ಸಾಧ್ಯತೆ ಬಹಳ ಕಡಿಮೆ ಇದ್ದು ಅದು ಆಚಂದ್ರಾರ್ಕವಾಗಿ ಅಜರಾಮರವಾಗಿ ಇರುತ್ತದೆ ಎಂದೆನಿಸುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment