ನುಡಿದಂತೆ ನಡೆಯುವವರು

ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತೀ ನವೆಂಬರ್ ತಿಂಗಳಿನಲ್ಲಿ ನನ್ನ ಏನಂತೀರೀ ಬ್ಲಾಗ್ ನಲ್ಲಿ ಕನ್ನಡದ ಕಲಿಗಳು ಎಂಬ ಮಾಲಿಕೆಯಲ್ಲಿ ಇಡೀ 30 ದಿನಗಳ ಕಾಲ ಅವಿಖ್ಯಾತ ಕನ್ನಡ ಕಲಿಗಳ ಬಗ್ಗೆ ಲೇಖನಗಳನ್ನು ಬರೆದು ಪ್ರಕಟಿಸುವ ವಿಷಯ ಎಲ್ಲರಿಗೂ ತಿಳಿದಿದೆಯಷ್ಟೇ.  ಇದುವರೆವಿಗೂ ಸುಮಾರು 120ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ ಆಯ್ದ 25 ಲೇಖನಗಳನ್ನು ನಾಡಿನ ಪ್ರಖ್ಯಾತ ಅಯೋಧ್ಯೆ ಪ್ರಕಾಶನ ಸಂಸ್ಥೆ ಕನ್ನಡದ ಕಲಿಗಳು ಎಂಬ ಹೆಸರಿನಲ್ಲೇ ಪುಸ್ತಕದ ರೂಪದಲ್ಲಿ ಹೊರತಂದಿದೆ.  ವಾಸ್ತವಾಗಿ ಈ ಪುಸ್ತಕ ಏಳೆಂಟು ತಿಂಗಳುಗಳ ಹಿಂದೆಯೇ ಪ್ರಕಟಿಸಲು ಸಿದ್ಧವಾಗಿದ್ದು ವಿವಿಧ ತಾಂತ್ರಿಕ ಕಾರಣಗಳಿಂದ ಮುಂದೂಡುತ್ತಲೇ ಹೋಗಿ, ಅಂತಿಮವಾಗಿ ಗಜ ಪ್ರಸವದಂತೆ ಕಳೆದ ತಿಂಗಳು ನನ್ನ ಕೈಸೇರಿತು.

ಚಿಕ್ಕ ವಯಸ್ಸಿನಲ್ಲಿ ಪ್ರಜಾವಾಣಿ, ಸುಧಾ, ತರಂಗ, ಮಯೂರ, ಮಂಗಳ, ಬಾಲಮಂಗಳ ಹೀಗೇ ಯಾವುದೇ ಪತ್ರಿಕೆ ಮತ್ತು ಪುಸ್ತಕಗಳನ್ನು ಓದಲು ತೆಗೆದುಕೊಂಡರೂ ಅಲ್ಲಿ ದೇವರ ಮೇಲೆ ಹೂವು ತಪ್ಪಬಹುದು ಆದರೆ ಆ ಎಲ್ಲಾ ಪತ್ರಿಕೆ/ವಾರ ಪತ್ರಿಕೆಗಳಲ್ಲಿಯೂ ಶ್ರೀ ಸಂಪಟೂರು ವಿಶ್ವನಾಥರ ಲೇಖನಗಳು ತಪ್ಪುತ್ತಿರಲಿಲ್ಲ. ಅವರನ್ನು ಒಮ್ಮೆಯೂ ಭೇಟಿಯಾಗದಿದ್ದರೂ ಗಾಂಧೀನಗರ ಶಾಲೆಯಲ್ಲಿ ಓದುತ್ತಿದ್ದ ಗೆಳೆಯರು ಮತ್ತು ಅವರ ಲೇಖನಗಳಿಂದ ಅವರ ವಿಷಯದ ಬಗ್ಗೆ ಬಹಳವಾಗಿ ತಿಳಿದುಕೊಂಡು ಒಂದು ರೀತಿಯಲ್ಲಿ ದ್ರೋಣಾ‍ಚಾರ್ಯರು ಏಕಲವ್ಯನಿಗೆ ಮಾನಸ ಗುರುಗಳಾದಂತೆ, ನನಗೂ ಸಹಾ ಪ್ರೀತಿಯ SV ರವರು ನನ್ನ ಮಾನಸಿಕ ಗುರುಗಳಾಗಿದ್ದರು. ಇಂಟರ್ನೆಟ್ ಇಲ್ಲದೇ ಇದ್ದ 30-40 ವರ್ಷಗಳ ಹಿಂದೆಯೇ ಪ್ರಪಂಚದ ಮೂಲೆ ಮೂಲೆಗಳಲ್ಲಿ ನಡೆಯುವ ಸಣ್ಣ ಸಣ್ಣ ಕೌತಕ ವಿಚಾರಗಳನ್ನು ಥಟ್ ಎಂದು ಬರೆದು ಪ್ರಕಟಿಸುತ್ತಿದ್ದರು. ಯಾವುದೇ ವಿಚಾರನ್ನಾಗಲೀ  ಅತ್ಯಂತ ವೇಗವಾಗಿ ಮತ್ತು ಅಷ್ಟೇ ಸಮರ್ಥವಾಗಿ ಮಂಡಿಸಬಲ್ಲಂತಹ ಶಕ್ತಿ ಅವರಿಗಿತ್ತು ಎಂಬುದನ್ನು ಅನೇಕರಿಂದ ಕೇಳಿ ತಿಳಿದಿದ್ದೆ.  ಒಂದೆರಡು ವರ್ಷಗಳ ಹಿಂದೇ ಗುರುಗಳ ಬಗ್ಗೆಯೇ ಲೇಖನ ಬರೆದು, ನನ್ನ ಮತ್ತೊಬ್ಬ ಗುರುಗಳಿಂದ ಅವರ ನಂಬರ್ ಪಡೆದುಕೊಂಡು ಅವರ ಲೇಖನ ಅವರಿಗೆ ಕಳುಹಿಸಿ ಕೊಟ್ಟ ಕೂಡಲೇ ಅದನ್ನು ಓದಿ ಅಚ್ಚರಿ ಪಟ್ಟು ಕೂಡಲೇ ಕರೆ ಮಾಡಿ ಸಂತೋಷ ವ್ಯಕ್ತಪಡಿಸಿದ್ದಲ್ಲದೇ ಅವರ ಮನೆಗೂ ಆಹ್ವಾನಿಸಿದರು.

ರೋಗಿ ಬಯಸಿದ್ದೂ ಹಾಲು ಅನ್ನ. ವೈದ್ಯರು ಹೇಳಿದ್ದೂ ಹಾಲು ಅನ್ನ ಎನ್ನುವಂತೆ ಎನ್ನುವಂತೆ ಪತ್ನಿಯ ಸಮೇತ ಅವರ ಮನೆಗೆ ಹೋಗಿ ಅವರ ಇಡೀ ಕುಟುಂಬವನ್ನು ಪರಿಚಯ ಮಾಡಿಕೊಂಡು ಅವರ ಆಶೀರ್ವಾದ ಪಡೆದದ್ದಲ್ಲದೇ  ಮಲ್ಲೇಶ್ವರಕ್ಕೆ ಹೋದಾಗ ಅಗ್ಗಾಗ್ಗೆ ಅವರ ಮನೆಗೆ ಸುಲಭವಾಗಿ ಹೋಗಿ  ಅವರನ್ನು ಮಾತನಾಡಿಸಿಕೊಂಡು ಬರುವಷ್ಟರ ಮಟ್ಟಿಗಿನ ಆತ್ಮೀಯತೆ ಬೆಳೆದಿದೆ. ಇದೇ ಆತ್ಮೀಯತೆಯಿಂದಲೇ, ನನ್ನ ಈ ಪುಸ್ತಕಕ್ಕೆ ಮುನ್ನಡಿ ಬರೆದು ಕೊಡಲು ಕೋರಿದ ತಕ್ಷಣವೇ ಒಪ್ಪಿಕೊಂಡ ಗುರುಗಳು ನುಡಿನಂತೆ ನಡೆಯುವವರು ಎನ್ನುವುದಕ್ಕೆ ಜ್ವಲಂತ ಉದಾಹಣೆ ಎನ್ನುವಂತೆ ಒಂದೇ ರಾತ್ರಿಯಲ್ಲಿ ಇಡೀ ಪುಸ್ತಕವನ್ನು ಓದಿ ತಮ್ಮ ಮುದ್ದಾದ ಬರವಣೆಗೆಯಲ್ಲಿ ಎರಡೇ ದಿನಗಳಲ್ಲಿ ಮುನ್ನುಡಿ ಬರೆದು, ನನೆಗೆ ಕರೆ ಮಾಡಿ ತೆಗೆದುಕೊಂಡು ಹೋಗಲು ಹೇಳಿದ್ದರು. ಹೀಗೆ ನಡೆದಾಡುವ ಗೂಗಲ್ ಆದ ಸಂಪಟೂರು ವಿಶ್ವನಾಥರ ಮುನ್ನುಡಿ ಮತ್ತು ಬೆನ್ನುಡಿ ಕನ್ನಡ ಕಲಿಗಳು ಪುಸ್ತಕಕ್ಕೆ ಇರುವುದು ವಿಶೇಷವಾಗಿದೆ.

ರೋಹಿತ್ ಚಕ್ರತೀರ್ಥರವರ ಸಾರಥ್ಯದ ಅಯೋಧ್ಯ ಪ್ರಕಾಶನದ, ಚಂದ್ರಶೇಖರ ಗಂಧನ ಹಳ್ಳಿಯವರು ವಿನ್ಯಾಸ ಗೊಳಿಸಿದ ಮುಖಪುಟ ಮತ್ತು ಉಮಾ ದೇವಿ ಎಸ್. ಎಲ್ ಅವರು ಸಿದ್ದ ಪಡಿಸಿರುವ ಒಳ ಪುಟದ ವಿನ್ಯಾಸದ 136 ಪುಟಗಳ ಈ ಪುಸ್ತಕದ ಬೆಲೆ ಕೇವಲ 170/- ರೂಪಾಯಿಯಷ್ಟೇ ಇದ್ದು (ಒಂದು ಒಳ್ಳೆಯ ಬೆಳಗಿನ ಉಪಹಾರದಷ್ಟೇ ಬೆಲೆ) ಪ್ರತಿಯೊಬ್ಬ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಸಂಗ್ರಹ ಯೋಗ್ಯ ಪುಸ್ತಕವಾಗಿದೆ  ಎಂದರೂ ತಪ್ಪಾಗದು.

IMG20240915120952-removebg-previewಇಂತಹ ಪುಸ್ತಕಕ್ಕೆ ಮುನ್ನಡಿ ಬರೆದುಕೊಟ್ಟ ಗುರುಗಳಾದ SV ಅವರಿಗೇ  ಮೊದಲು ಕೊಟ್ಟು ಅವರ ಆಶೀರ್ವಾದ ಪಡೆದು ಉಳಿದವರಿಗೆ ತಿಳಿಸಬೇಕೆಂದು ನಿರ್ಧರಿಸಿದೆನಾದರೂ, ಕಳೆದ 2-3 ತಿಂಗಳಿಂದಲೂ ಬೆನ್ನುಹುರಿಯ ಸಮಸ್ಯೆಯಿಂದಾಗಿ ಎಲ್ಲಿಗೂ ಹೋಗಲಾರದೇ ಇದ್ದ ನನಗೆ, ಮಲ್ಲೇಶ್ವರದಲ್ಲೇ (ಗುರುಗಳ ಮನೆಯ ಕೂಗಳತೇ ದೂರದಲ್ಲೇ) ಚಿಕಿತ್ಸೆ ಪಡೆಯ ಬೇಕಾದಂತಹ ಅವಕಾಶ ಸಿಕ್ಕಿದಾಗ, ಅವರಿಗೆ ಕೊಡಲು ಒಂದು ಪುಸ್ತಕ ತೆಗೆದುಕೊಂಡನಾದರೂ ಹೇಗೂ ಇರಲೀ ಎಂದು ಹೂವು ಹಣ್ಣಗಳ ಜೊತೆ ಮತ್ತೊಂದು ಪುಸ್ತಕವನ್ನು ತೆಗೆದುಕೊಂಡು ಮೊದಲು ಚಿಕಿತ್ಸೆ ಮುಗಿಸಿಕೊಂಡು ಮನೆಯೊಡತಿಯೊಡನೆ ಗುರುಗಳ ಮನೆಗೆ ಹೋಗಿ ಪುಸ್ತಕವನ್ನು ಕೈಗಿತ್ತು ಧನ್ಯತಾಭಾವದಿಂದ ಅವರ ಪಕ್ಕದಲ್ಲಿ ಕುಳಿತೆ. ಪುಸ್ತಕದ ಹೊರಗೂ ಒಳಗೂ ಕಣ್ಣಾಡಿಸಿದ ಗುರುಗಳು 136 ಪುಟಗಳು ಸರಿಯಾಗಿದೆ. ಮುದ್ರಣದ ಅಕ್ಷರವೂ ಕಣ್ಣಿಗೆ ತ್ರಾಸಗದಂತೆ ಓದುವಂತಿದೆಯಲ್ಲದೇ, ಉತ್ತಮವಾದ ಕಾಗದವನ್ನು ಬಳಸಿದ್ದಾರೆ ಎಂದು ಹೊಗಳಿ ಆಶೀರ್ವದಿಸಿದರು.

ಇಷ್ಟೇಲ್ಲಾ ಆಗುವಷ್ಟರಲ್ಲಿ ಮಟ ಮಟ ಮಧ್ಯಾಹ್ನವಾಗಿದ್ದರಿಂದ ಸುಮಾರು 30 ವರ್ಷಗಳಿಂದ ಗೆಳೆಯರ ಜೊತೆ ಮತ್ತು ಮದುವೆ ಆದ ಮೇಲೆ ಮಡದಿ ಮತ್ತು ಮಕ್ಕಳ ಜೊತೆ ಮಲ್ಲೇಶ್ವರದ 8ನೇ ಅಡ್ಡ ರಸ್ತೆಯಲ್ಲಿರುವ  ಸಾಯಿ ಶಕ್ತಿ ಉಪಹಾರ ಗೃಹಕ್ಕೆ ಹೋಗಿ ಊಟ ಮಾಡುತ್ತಿರುವಾಗ ಪಕ್ಕದಲ್ಲೇ ಹಸಿರು ಬಣ್ಣ ತೊಟ್ಟಿದ್ದ ವ್ಯಕ್ತಿಯೊಬ್ಬರು ಊಟ ಮಾಡುತ್ತಿದ್ದನ್ನು ನೋಡಿ ಅರೇ ಇವರು ಆರ್ಥಿಕ ತಜ್ಞರಾದ ಶ್ರೀ ವಿಶ್ವನಾಥ್ ಭಟ್ ಅಲ್ವೇ? ಎಂದು ಹೊಳೆಯಿತಾದರೂ, ಮಡದಿಯೊಂದಿಗೆ ಊಟ ಮಾಡುವಾಗ ಭಂಗವಾಗದಿರಲೀ ಹೇಗೂ ಊಟವಾದ ನಂತರ ಮಾತನಾಡಿಸೋಣ ಎಂದು ಸುಮ್ಮನಾದರೂ, ನನ್ನ ಗಮನವೆಲ್ಲವೂ ಊಟಕ್ಕಿಂತಲೂ ಅವರ ಮೇಲೆಯೇ ಇತ್ತು ಎನ್ನುವುದಂತೂ ಸುಳ್ಳಲ್ಲ. ಸುಗ್ರಾಸ ಭೋಜನದ ನಂತರ ಎಂದಿನಂತೆ ರೋಸ್ ಮಿಲ್ಕ್ ಮತ್ತು ಲಸ್ಸೀ ಕುಡಿಯುವಷ್ಟರಲ್ಲಿ ವಿಶ್ವನಾಥರು ತಮ್ಮ ಊಟ ಮುಗಿಸಿ ಹೊರಟಾಗ, ಅರೇ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲಾ ಎಂಬತಾಯಿತಾದರೂ, ಅವರನ್ನು ಭೇಟಿ ಮಾಡಸಲೇ ಬೇಕೆಂದು ಆ ಭಗವಂತ ನಿರ್ಧರಿಸಿದ ಕಾರಣ ವಿಶ್ವನಾಥರು ತಮ್ಮ ಊಟ ಮುಗಿಸಿ ಅಲ್ಲೇ ಒಂದೆರಡು ನಿಮಿಷ ಕುಳಿತುಕೊಂಡಿದ್ದನ್ನು ನೋಡಿ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಲಗುಬಗೆನೆ ಕೈತೊಳೆದು ಅವರ ಬಳಿ ಹೋಗಿ ಧೈರ್ಯದಿಂದ,

ನಮಸ್ಕಾರ ಸರ್, ತಾವು ಆರ್ಥಿಕ ತಜ್ಞರಾದ ಶ್ರೀ ವಿಶ್ವನಾಥ್ ಭಟ್ ಅಲ್ವೇ? ಎಂದು ವಿಚಾರಿಸಿಯೇ ಬಿಟ್ಟೆ. ವಿವಿಧ ವಾಹಿನಿಗಳ ಚರ್ಚೆಯಲ್ಲಿ ಬಹಳ ಗಂಭೀರವಾಗಿ ಮಾತನಾಡುವ ಶ್ರೀಯುತರು ಮುಖಾ ಮುಖಿಯಲ್ಲಿ ಮಾತನಾಡುವಾಗ ಬಹಳ ಸೌಮ್ಯದವರು ಎಂದನಿಸಿತು. ಆದರೂ ನನ್ನ ಪರಿಚಯವನ್ನು ಮಾಡಿಕೊಂಡು ಅವರಿಗೆ ನನ್ನ ಮಡದಿಯನ್ನೂ ಪರಿಚಯಿಸಿ ಹಾಗೇ ಮಾತಿಗೆ  ಎಳದೇ ಬಿಟ್ಟೆ.

ಅಚಾನಕ್ಕಾಗಿ ಪರಿಚಯವಾಗಿ ನಿಧಾನವಾಗಿ ಆರಂಭವಾದ ಮಾತು ಕತೆ ನಮ್ಮಿಬ್ಬರಲ್ಲೂ ರಾಷ್ಟ್ರೀಯ ಚಿಂತನೆಯ ಜೊತೆಗೆ ಮನಸ್ಥಿತಿಯಲ್ಲೂ ಬಹಳಷ್ಟು ಸಾಮ್ಯತೆ ಇದ್ದ ಕಾರಣ  ಕೆಲವೇ ಕೆಲವು ನಿಮಿಷಗಳಲ್ಲಿ ಬಹಳ ಪರಿಚಯದ ಆತ್ಮೀಯರೇನೋ ಎನಿಸುವಷ್ಟರ ಮಟ್ಟಿಗೆ ಸಂಭಾಷಣೆ ನಡೆದು ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಮನೆಗಳಿಗೂ ಆಹ್ವಾನ ಮಾಡಿಕೊಂಡು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, ಅವರಿಗೆ ನನ್ನ ಪುಸ್ತಕವನ್ನು ಕೊಡಬೇಕು ಎಂದೆನಿಸಿ, ಸರ್!  ಒಂದ್ನಿಮಿಷಾ ಎಂದು ಹೇಳುತ್ತಾ, ಅಲ್ಲೇ ಪಕ್ಕದಲ್ಲಿದ್ದ ಕಾರಿನಿಂದ ಕನ್ನಡದ ಕಲಿಗಳು ಪುಸ್ತಕ ತೆಗೆದು ಆತ್ಮೀಯರಿಗೆ ಸ್ನೇಹಪೂರ್ವಕವಾಗಿ ಎಂದು ನನ್ನ ಸಹಿ ಮತ್ತು ದಿನಾಂಕ ಹಾಕಿ ಕೊಡಬೇಕು ಎಂದು ಲೇಖನಿ ಹುಡುಕುತ್ತಿದ್ದಂತಹ ಸಮಯದಲ್ಲೇ ಬೇಡಾ ಬೇಡಾ ಅದೆಲ್ಲಾ ಬೇಡ ಎಂದು ಪುಸ್ತಕವನ್ನು ಪಡೆದುಕೊಂಡು ಅದರ ಹಿಂದೇ ಮುಂದೇ ನೋಡಿ ಒಳಗೆ ತಡಕಾಡುತ್ತಿದ್ದನ್ನು ಗಮನಿಸಿ ಏನು ನೋಡ್ತಾ ಇದ್ದೀರಿ? ಅಂತ ಕೇಳಿದ್ದಕ್ಕೇ, ಪುಸ್ತಕದ ಬೆಲೆನೇ ಕಾಣ್ತಾ ಇಲ್ವೇ? ಎಂದಾಗ, ಸರ್ ! ಇದು ಸ್ನೇಹಪೂರ್ವಕವಾಗಿ ಕೊಡ್ತಾ ಇರೋದು ಅಂದಾಗ

WhatsApp Image 2024-09-18 at 12.30.45ನೋಡೀ, ಈ ಪುಸ್ತಕ ಬರೆಯುವುದಕ್ಕೆ ನೀವು ಪಟ್ಟ ಶ್ರಮ ಮತ್ತು ಇದನ್ನು ಪ್ರಕಟಿಸಲು ಪ್ರಕಾಶಕರು ಹಾಕಿದ ಶ್ರಮಕ್ಕೆ ಈ ಬೆಲೆ ಏನೇನೂ ಅಲ್ಲಾ. ಅದಕ್ಕಿಂತಲೂ ಹೆಚ್ಚಾಗಿ ಈ ಪುಸ್ತಕದಲ್ಲಿರುವ ಮಹಾನುಭಾವರುಗಳ ಮುಂದೆ ನಮ್ಮ ಸಾಧನೆಗಳೇನೂ ಇಲ್ಲಾ ಎಂದು ಹೇಳುತ್ತಾ ಬಲವಂತವಾಗಿ ನೂರರ ಎರಡು ನೋಟುಗಳನ್ನು ಕೈಗೆ ಕೊಟ್ಟೇಬಿಟ್ಟರು. ಸರ್ ನನ್ನ ಬಳಿ ನಿಮಗೆ ಹಿಂದಿರುಗಿಸಲು 30 ರೂಪಾಯಿ ಚಿಲ್ಲರೆ ಹಣ ಇಲ್ಲಾ ಎಂದಾಗ,  ಛೇ! ಛೇ!  ಅದು ನಿಮಗೆ ನನ್ನ ಪರವಾಗಿ ಆಶೀರ್ವಾದಪೂರ್ವಕವಾಗಿರಲಿ ಎಂದಾಗ ಅಷ್ಟು ದೊಡ್ಡವರ ಮುಂದೆ ಸಣ್ಣವನಾಗಲು ಬಯಸದೇ ಸುಮ್ಮನಾಗಿದ್ದೆ. ಈ ಹಿಂದೆ ಖಾಸಗೀ ವಾಹಿನಿಯೊಂದರ ಚರ್ಚೆಯೊಂದರಲ್ಲಿ ಬಿಟ್ಟಿ ಭಾಗ್ಯಗಳ ಕುರಿತಾಗಿ ಇದೇ ವಿಶ್ವನಾಥರು, ಈ ಲೋಕದಲ್ಲಿ ಯಾವುದೂ ಉಚಿತವಾಗಿ ಬರುವುದಿಲ್ಲಾ. ಎಲ್ಲದ್ದಕ್ಕೂ ಹಣ ಕೊಡಲೇ ಬೇಕು. ಈ ಬಿಟ್ಟಿ ಭಾಗ್ಯಗಳ ಹಿಂದೆ ಪ್ರಜೆಗಳ ಪರೋಕ್ಷ ಕಾಣಿಕೆ ಇದ್ದೇ ಇರುತ್ತದೆ ಎಂದು ಹೇಳಿದ್ದರು. ಅವರು ಹೇಳಿದಂತೆಯೇ ನನ್ನ ಪುಸ್ತಕವನ್ನು ಸ್ನೇಹಪೂರ್ವಕ ಕಾಣಿಕೆಯ ರೂಪದಲ್ಲಿ ಪಡೆಯದೇ, ಅದಕ್ಕೆ ಸಂಪೂರ್ಣ ಹಣದ ಜೊತೆ ಕೊಸರಿನಂತೆ ಹೆಚ್ಚಿನ ಹಣವನ್ನು ನೀಡಿ ನುಡಿದಂತೆ ನಡೆದದ್ದನ್ನು ಕಂಡು ಗಂಟಲೆಲ್ಲಾ ಗದ್ಗದಿತವಾಗಿ ನನಗೇ ಅರಿವಿಲ್ಲದಂತೆ ಭಾವುಕನಾಗಿ ಕಣ್ಣಂಚಿನಲ್ಲಿ ನೀರೂರಿತು.

Kannada_kaligaluಕಾಕತಾಳೀಯವೋ ಎನ್ನುವಂತೆ ಒಂದೇ ದಿನ ಇಬ್ಬರು ವಿಶ್ವನಾಥರಿಗೆ ನನ್ನ ಪುಸ್ತಕವನ್ನು ಕೊಟ್ಟು ಅವರ ಹೃದಯಪೂರ್ವಕ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ ದೊರೆತಾಗ, ಇತ್ತೀಚೆಗೆ ಸಮಾಜಿಕ ಜಾಲತಾಣದಲ್ಲಿ  ನುಡಿದಂತೆ ನಡೆದ  ಪಂಡಿತರೊಬ್ಬರ ಪ್ರಸಂಗ ನೆನಪಾಗಿ ಅದನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.

ಅದೊಂದು ಊರಿನಲ್ಲಿ ಪ್ರಖಾಂಡ ವಿದ್ವಾಂಸರಿದ್ದು, ಅವರು ತಮ್ಮ ಲೇಖನಗಳಿಗಿಂತಲೂ ತಮ್ಮ ಪ್ರಖಾಂಡ ಪ್ರವಚನಕ್ಕೆ ಬಹಳ ಪ್ರಖ್ಯಾತರಾಗಿದ್ದರು. ಅವರ ಒಳ್ಳೆ ವಾಗ್ಪಟುತ್ವದ ಪ್ರವಚನಗಳನ್ನು  ಕೇಳಲು ದೂರ ದೂರದ ಊರಿನಿಂದಲೂ ಬರುತ್ತಿದ್ದರು. ಅದೊಮ್ಮೆ  ಅಂತಹದ್ದೇ ಪ್ರವಚನದ ಸಲುವಾಗಿ ಬೇರೊಂದು ಊರಿಗೆ ಹೋಗಬೇಕಾದ ಸಂಧರ್ಭ ಒದಗಿಬಂದಾಗ, ಬಸ್ಸಿನಲ್ಲಿ ಹತ್ತಿ, ನಿರ್ವಾಹಕರ ಕೈಗೆ 100 ರೂಗಳನ್ನಿತ್ತು ತಾವು ಹೋಗಬೇಕಾದ ಊರಿನ ಹೆಸರನ್ನು ಹೇಳಿದರು. ಕೂಡಲೇ ಆ ನಿರ್ವಾಹಕರು 90 ರೂಪಾಯಿಗಳ ಟಿಕೆಟ್ ಕೊಟ್ಟು 10 ರೂಪಾಯಿ ಚಿಲ್ಲರೇ ಹಿಂದಿರಿಗಿಸುವ ಬದಲು 20 ರೂಪಾಯಿಗಳನ್ನು ಕೊಟ್ಟು ವಿಪರೀತ ಜನಸಂದಣಿ ಇದ್ದ ಬಸ್ಸಿನಲ್ಲಿ ಇತರರಿಗೆ ಟಿಕೆಟ್ ಕೊಡಲು ಹೋಗಿಯೇ ಬಿಟ್ಟರು.

ಹೀಗೆ ನಿರ್ವಾಹಕರು  10 ರೂಪಾಯಿ ಹೆಚ್ಚಾಗಿ ಕೊಟ್ಟದ್ದನ್ನು ಗಮನಿಸಿದ ವಿದ್ವಾಂಸ ಕೂಡಲೇ ಅದನ್ನು ಹಿಂದಿರುಗಿಸಲು ಪ್ರಯತ್ನಿಸಿದರಾದರೂ, ವಿಪರೀತ ಜನಸಂದಣಿ ಇದ್ದ ಕಾರಣ ಕೊಡಲಾಗದೇ ಹೋದಾಗ, ಹೇಗೂ ಇಳಿಯುವಾಗ ಕೊಟ್ಟರಾಯಿತು ಎಂದು ಸುಮ್ಮನಾದರು. ಮನಷ್ಯನ ಮನಸ್ಸು ಮರ್ಕಟದಂತೆ ಎನ್ನುವೆ ಹಾಗೆ ಅರೇ,  ನಿರ್ವಾಹಕರು ತಾನೇ ಹೆಚ್ಚಿಗೆ ಕೊಟ್ಟಿರುವುದು ಹಾಗಾಗಿ ನಾನು  ಅದನ್ನು ಹಿಂದಿರುಗಿಸದೇ ಇಟ್ಟುಕೊಂಡರೂ  ನನ್ನದೇನೂ ತಪ್ಪಾಗುವುದಿಲ್ಲ. ಅದೆಷ್ಟು ಜನರಿಗೆ ಈ ರೀತಿಯಾಗಿ ಮೋಸ ಮಾಡಿರುವುದಿಲ್ಲಾ. ಅಂತಹದ್ದರಲ್ಲಿ ನನ್ನ ಈ 10 ರೂಪಾಯಿಯಿಂದ ಆವನೇಗೇನೂ ನಷ್ಟವಾಗುವುದಿಲ್ಲಾ.  ಅದೇ ದುಡ್ಡನ್ನು ಯಾವುದಾದರೂ ದೇವರ ಕೆಲಸಕ್ಕೆ ಬಳಿಸಿದರೆ ನನಗೂ ಮತ್ತು ನಿರ್ವಾಹಕರಿಬ್ಬರಿಗೂ ಪುಣ್ಯ ಬರುತ್ತದೆ ಎಂದು ಯೋಚಿಸುವಷ್ಟರಲ್ಲೇ  ಅವರು ಇಳಿಯುವ ಸ್ಥಳ ಬಂದಾಗ, ಅವರು ಇನ್ನೇನೂ ಇಳಿಯಬೇಕು ಎನ್ನುವಷ್ಟರಲ್ಲಿ ನಿರ್ವಾಕರು ಅವರಿಗೆ ಎದುರಾದಾಗ ಅವರ ಒಳ ಮನಸ್ಸು ತಡೆಯಲಾಗದೇ, ನೀವು ಚಿಲ್ಲರೆ ಕೊಡುವಾಗ 10 ರೂಪಾಯಿ ಕೊಡುವ ಬದಲು 20 ರೂಪಾಯಿ ಕೊಟ್ಟಿದ್ದೀರೀ ಎಂದು ತಮ್ಮ ಕಿಸೆಯಿಂದ 10 ರೂಪಾಯಿಗಳನ್ನು ಅವರ ಕೈಗಿತ್ತು, ಎಷ್ಟೇ ಜನ ಸಂದಣಿ ಇದ್ದರೂ, ಯಾರಿಗಾದರೂ ಚಿಲ್ಲರೆ ಕೊಡುವ ಮೊದಲು ಸ್ವಲ್ಪ ತಾಳ್ಮೆಯಿಂದ ಒಮ್ಮೆ ಲೆಖ್ಖ ಹಾಕಿ ಕೊಡಿ. ಇಲ್ಲದೇ ಹೋದಲ್ಲಿ ನಿಮ್ಮ ಹಣ ವ್ಯರ್ಥವಾಗುತ್ತದೆ  ಎಂದು ಹೇಳಿ ಮನಸ್ಸಿನಲ್ಲಿ ನಿರಾಳವಾಗಿ ಒಂದೆರಡು ಹೆಜ್ಜೆ ಮುಂದೆ ಹೋಗುತ್ತಿದ್ದಂತೆಯೇ,  ಪಂಡಿತರೇ, ನಾನು ತಪ್ಪಾಗಿ ಹೆಚ್ಚಿನ ಹಣ ಕೊಡಲಿಲ್ಲಾ! ಎಂದಾಗ ಥಟ್ ಎಂದು ನಿಂತು ಹಿಂದಿರುಗಿ ನಿರ್ವಾಹಕರತ್ತ ನೋಡಿದರು.

ಸ್ವಾಮೀ, ನಾನು ನಿಮ್ಮ ಅನೇಕ ಪ್ರವಚನಗಳನ್ನು ಹಲವಾರು ಬಾರಿ ಕೇಳಿದ್ದೇನೆ. ನಿಮ್ಮ ಪ್ರವಚನಗಳಲ್ಲಿ ಸದಾ ಕಾಲವೂ ಸತ್ಯ ಮಾರ್ಗದಲ್ಲೇ ನಡೆಯಬೇಕು. ಇನ್ನೊಬ್ಬರಿಗೆ ತಿಳಿದೋ/ತಿಳಿಯದಾಗಿಯೋ ಮೋಸ ಮಾಡಬಾರದು ಎಂದು  ಹೇಳುತ್ತಿರುತ್ತೀರಿ. ಹಾಗಾಗಿ ನೀವು ನುಡಿದಂತೆಯೇ ನಡೆಯುತ್ತೀರೋ ಇಲ್ಲವೇ ಎಂದು ಪರೀಕ್ಷಿಸಲು ಈ ರೀತಿಯ ಸಣ್ಣ ಪರೀಕ್ಷೇ ಮಾಡಿದೆ ದಯವಿಟ್ಟು ಕ್ಷಮಿಸಿ ಎಂದಿದ್ದಲ್ಲದೇ, ನಿಮ್ಮ ಮೇಲಿದ್ದ ಭಕ್ತಿ ಮತ್ತು ಗೌರವಗಳು ಇನ್ನೂ ಹೆಚ್ಚಾಯಿತಲ್ಲದೇ, ನನ್ನ ಎಲ್ಲಾ ಬಂಧು ಮಿತ್ರರಿಗೂ ನಿಮ್ಮ ಬಗ್ಗೆ ತಿಳಿಸಿ ಅವರೂ ನಿಮ್ಮಿಂದ ಸನ್ಮಾರ್ಗವನ್ನು ಪಡೆಯುವಂತಾಗುವಂತೆ ಮಾಡುತ್ತೇನೆ ಎಂದರು.

ನಿರ್ವಾಹಕರ  ಆ ಮಾತುಗಳನ್ನು ಕೇಳುತ್ತಲೇ, ಆ ಪಂಡಿತರ ದೇಹ ಸಣ್ಣದಾಗಿ ಕಂಪಿಸಿದ್ದಲ್ಲದೇ, ಅವರಿಗೇ ಅರಿವಿಲ್ಲದಂತೆ ಹಣೆಯ ಮೇಲೆ ಸಣ್ಣದಾಗಿ ಬೆವರು ಹನಿಗಳು ಮೂಡಿತು. ಛೇ!! ನನ್ನ ಮೌಲ್ಯಗಳ ವಿರುದ್ಧವಾಗಿ ಕೇವಲ 10 ರೂಪಾಯಿಯ ಆಸೆಗೆ ಬಿದ್ದು,  ನಾನು ಇಷ್ಟು ದಿನ ಸಂಪಾದಿಸಿದ್ದ ಗೌರವವನ್ನು ಕಳೆದುಕೊಂಡು ಬಿಡುತ್ತಿದ್ದನಲ್ಲಾ! ಎಂದು ಮನಸ್ಸಿನಲ್ಲೇ ಹೇಳಿಕೊಂಡು ಅದನ್ನು ತೋರಿಸಿಕೊಳ್ಳದೇ, ತುಂಬಾ ಸಂತೋಷವಪ್ಪಾ! ದೇವರು ನಿಮ್ಮೆಲ್ಲರನ್ನೂ ಕಾಪಾಡಲಿ ಎಂದು ಹೇಳುತ್ತಾ ತಮ್ಮ ಹಾದಿಯನ್ನು ಹಿಡಿದರು.

ಹೇಳಿ ಕೇಳಿ ಕನ್ನಡಿಗರು ಸ್ವಾಭಿಮಾನಿಗಳು, ಕಲಾಭಿಮಾನಿಗಳು, ಸಾಹಿತ್ಯಾಸಕ್ತರು ಮೇಲಾಗಿ ನುಡಿದಂತೆ ನಡೆಯುವವರು. ನಿಮ್ಮಂತಹ ಕನ್ನಡಿಗರು ಖಂಡಿತವಾಗಿಯೂ ಈ ನನ್ನ ಕನ್ನಡದ ಕಲಿಗಳು ಪುಸ್ತಕವನ್ನು ಕೊಂಡು ಓದುವ ಮೂಲಕ ನನ್ನ ಸಾಹಿತ್ಯ ಕೃಷಿಯನ್ನು ಮತ್ತಷ್ಟು ಪೋಷಿಸುತ್ತೀರೆಂಬ ಆಶಾ ಭಾವನೆ ನನ್ನದು.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

3 thoughts on “ನುಡಿದಂತೆ ನಡೆಯುವವರು

  1. ತಮ್ಮ ಬರಹಗಳನ್ನು ಓದುವಾಗ, ಓದುವುದನ್ನು ನಿಲ್ಲಿಸಲು ನನಗೆ ಅಸಾಧ್ಯ.
    ಈ ಪುಸ್ತಕದ ಪ್ರತಿ ನನಗೆ ಖಂಡಿತ ಬೇಕು. ಪಡೆಯುವ ಮಾರ್ಗ ತಿಳಿಸಿ.
    ತಮ್ಮ ಆರೋಗ್ಯ ಉತ್ತಮವಾಗಿರಲು ದೇವರಲ್ಲಿ ಪ್ರಾರ್ಥನೆ ‌ ಹಾಗೂ ಇನ್ನೂ ಹೆಚ್ಚು ಬರಹಗಳು ನಿಮ್ಮಿಂದ ಬರಲಿ ಎಂದು ಬಯಕೆ‌

    Liked by 1 person

Leave a comment