ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿರುವ ಸಪ್ತಗಿರಿವಾಸ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿ ಸಕಲ ಆಸ್ತಿಕರ ಶ್ರಧ್ಧಾ ಕೇಂದ್ರವಾಗಿದ್ದು ಪ್ರತಿ ದಿನವೂ ಲಕ್ಷಾಂತರ ಜನರು ದೇಶವಿದೇಶಗಳಿಂದ ತಿರುಪತಿಗೆ ಆಗಮಿಸಿ ಭಕ್ತಿಯಿಂದ ಸರದಿಯ ಸಾಲಿನಲ್ಲಿ ನಿಂತು ಕ್ಷಣಕಾಲ ಮಾತ್ರವೇ ಸ್ವಾಮಿಯ ದರ್ಶನ ಪಡೆಯುವುದೂ ಸಹಾ ಪೂರ್ವ ಜನ್ಮದ ಸುಕೃತ ಎಂದೇ ಭಾವಿಸಿ ಸ್ವಾಮಿಯ ದರ್ಶನ ಪಡೆದು ದೇವಾಲಯದ ಆವರಣದಿಂದ ಹೊರಬಂದು ಮತ್ತೊಮ್ಮೆ ಆಂಜನೇಯನ ಬಾಲದಂತಿರುವ ಸರದಿಯ ಸಾಲಿನಲ್ಲಿ ತಿರುಪತಿ ಪ್ರಸಾದವಾದ ಲಡ್ಡು ಮತ್ತು ವಡೆಯನ್ನು ಸ್ವೀಕರಿಸಿ ಅದನ್ನು ಜೋಪಾನವಾಗಿ ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮತ್ತೊಮ್ಮೆ ಪೂಜೆ ಮಾಡಿ ನಂತರ ಬಂಧು ಮಿತ್ರರಿಗೆ ವಿತರಿಸಿ ಸ್ವೀಕರಿಸುವುದು ರೂಢಿಯಲ್ಲಿ ಬಂದಿರುವ ಪದ್ದತಿಯಾಗಿದೆ.
ಅದೆಷ್ಟೇ ಶುದ್ಧವಾದ ತುಪ್ಪ, ಕಡಲೇ ಹಿಟ್ಟು, ಸಕ್ಕರೆಯ ಜೊತೆಯಲ್ಲಿ ಹಿತ ಮಿತ ಮತ್ತು ದ್ರಾಕ್ಷಿ, ಗೊಡಂಬಿ, ಬಾದಾಮಿಗಳನ್ನು ಹಾಕಿ ಲಡ್ಡು ಮಾಡಿದರೂ ಅದು ತಿರುಪತಿಯ ಪ್ರಸಾದ ಲಡ್ಡುವಿನಂತಾಗುವುದಿಲ್ಲ ಎನ್ನುವ ಹೆಗ್ಗಳಿಕೆಯ ನಡುವೆಯೂ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿ ಮತ್ತು ದನದ ಕೊಬ್ಬು) ಮಿಶ್ರಣವಾಗಿದೆ ಎಂಬ ವರದಿ ಬಂಡಿರುವುದು ಸಮಸ್ತ ಆಸ್ತಿಕ ಬಂಧುಗಳ ನಂಬಿಕೆ, ದೇವಾಲಯಗಳ ಅಪವಿತ್ರತೆ ಮತ್ತು ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತಂದಿರುವುದು ನಿಜಕ್ಕೂ ವಿಷಾಧನೀಯವಾಗಿದೆ.
ತಿರುಪತಿಯ ಹಿಂದಿನ ಇತಿಹಾಸವನ್ನು ಗಮನಿಸಿದಲ್ಲಿ, ತಿರುಪತಿ ತಿಮ್ಮಪ್ಪನ ಪ್ರಸಾದವು ಈ ಹಿಂದೆ ತುಪ್ಪಾನ್ನ, ಪುಳಿಯೋಗರೆ ಮತ್ತು ಅಕ್ಕಿ, ಬೇಳೆ, ತರಕಾರಿಗಳು ತುಪ್ಪದೊಂದಿಗೆ ತಯಾರಿಸಿದ ಮೇಲೋಗರ ಇಲ್ಲವೇ, ಸಿಹಿ ಮತ್ತು ಖಾರದ ಹುಗ್ಗಿಯನ್ನು (ಪೊಂಗಲ್) ತಯಾರಿಸಿ ಅದನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಅದನ್ನು ಉಚಿತವಾಗಿ ತಿರುಪತಿಗೆ ಬರುವ ಭಕ್ತಾದಿಗಳಿಗೆ ಹಂಚುವಂತಹ ಪದ್ದತಿ ರೂಡಿಯಲ್ಲಿದ್ದು ನಂತರ ದಿನಗಳಲ್ಲಿ ಅದು ದೊಡ್ಡ ಗಾತ್ರದ ಲಾಡು ಇಲ್ಲವೇ ಲಡ್ಡುವಾಗಿ ರೂಪಾಂತರಗೊಂಡಿರುವ ಹಿಂದಿನ ಕಥೆ ನಿಜಕ್ಕೂ ರೋಚಕವಾಗಿದೆ.
ಸಾವಿರಾರು ವರ್ಷಗಳ ಹಿಂದಿನಿಂದಲೂ ತಿರುಪತಿಯ ಮೇಲಿನ ಹಕ್ಕಿಗಾಗಿ ತಮಿಳು ನಾಡು ಮತ್ತು ಆಂಧ್ರ ಪ್ರದೇಶದ ನಡುವೆ ಜಟಾಪಟಿ ನಡೆಯುತ್ತಲೇ ಬಂದಿದೆ. ಭೌಗೋಳಿಕವಾಗಿ ತಿರುಪತಿ ಆಂಧ್ರ ಪ್ರದೇಶಕ್ಕೆ ಸೇರಿದ್ದರೂ, ಧಾರ್ಮಿಕ ಅಚರಣೆ ಮತ್ತು ಆಳ್ವಿಕೆಯು ತಮಿಳುನಾಡಿನ ಮೂಲದವರಾದ ಶ್ರೀ ರಾಮಾನುಜಾಚಾರ್ಯರ ಅನುಯಾಯಿಗಳಾದ ಶ್ರೀ ವೈಷ್ಣವ ಪಂಥದ ಬ್ರಾಹ್ಮಣದ್ದೇ ಆಗಿದ್ದು ಅಂದಿನಿಂದಲೂ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ.
11 ನೇ ಶತಮಾನದಲ್ಲಿ, ದಕ್ಷಿಣ ಭಾರತದಾದ್ಯಂತ ಚೋಳರು ದಿಗ್ವಿಜಯವನ್ನು ಸಾಧಿಸಿದ ನಂತರ ಅಲ್ಲೆಲ್ಲಾ ದೊಡ್ಡ ದೊಡ್ಡ ದೇವಾಲಯಗಳನ್ನು ಕಟ್ಟಿಸಿ ಅಲ್ಲಿನ ಅದ್ದೂರಿಯಾಗಿ ತಮಿಳು ಶೈಲಿಯ ಪೂಜಾ ಕೈಂಕರ್ಯಗಳನ್ನು ಅರಂಭಿಸಿ, ನೂರಾರು ಉತ್ಸವಗಳು ಮತ್ತು ಮೆರವಣಿಗೆಯನ್ನು ಆರಂಭಿಸಿದ ರೀತಿಯಲ್ಲೇ ತಿರುಮಲದಲ್ಲೂ ಅದಾಗಲೇ ಇದ್ದ ಶ್ರೀ ವೆಂಕಟರಮಣನ ದೇವಾಲಯದಲ್ಲಿ ವಿವಿಧ ದೇವರುಗಳ ಕಂಚಿನ ಪುತ್ಥಳಿಯನ್ನು ಸ್ಥಾಪಿಸಿ ವರ್ಷವಿಡೀ ಒಂದಲ್ಲಾ ಒಂದು ಉತ್ಸವಗಳನ್ನು ಮಾಡುವ ಮೂಲಕ ಆ ಶ್ರೀಕ್ಷೇತ್ರವನ್ನು ದೇಶದ ಅತ್ಯಂತ ದೊಡ್ಡ ಶ್ರೀಕ್ಷೇತ್ರವನ್ನಾಗಿಸಿದ ಪರಿಣಾಮ ಲಕ್ಷಾಂತರ ಭಕ್ತಾದಿಗಳು ತಂಡೋಪ ತಂಡದಲ್ಲಿ ಬಂದು ಯಥಾ ಶಕ್ತಿ ತನು ಮನ ಧನ ಸಹಾಯ ಮಾಡಿರುವ ಪರಿಣಾಮ, ತಿರುಪತಿ ಇಂದು ಪ್ರಪಂಚದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ.
12 ನೇ ಶತಮಾನದಲ್ಲಿ ಚೋಳರ ಪ್ರಾಭಲ್ಯ ಕುಂಠಿತವಾದಾಗ, ದಕ್ಷಿಣ ಭಾರತದ ಬಹುತೇಕ ದೇವಾಲಯಗಳ ಜೀರ್ಣೋದ್ಧಾರದ ಹೊಣೆಯನ್ನು 13 ನೇ ಶತಮಾನದ ವೇಳೆಗೆ ಪ್ರಾಭಲ್ಯಕ್ಕೆ ಬಂದ ವಿಜಯನಗರ ಸಾಮ್ರಾಜ್ಯ ಹೊತ್ತುಕೊಂಡಿದ್ದಲ್ಲದೇ, ಬಹುತೇಕ ಎಲ್ಲಾ ದೇವಾಲಯಗಳಿಗೂ ಯಥೇಚ್ಚವಾಗಿ ವಜ್ರ ವೈಡೂರ್ಯಗಳ ಆಭರಣಗಳ ಜೊತೆ ನೂರಾರು ಎಕರೆ ಜಮೀನನ್ನು ಉಂಬಳಿಯನ್ನಾಗಿ ಕೊಡುವ 1400 ರಿಂದ 1600 ರ ದಶಕದ ಆರಂಭದವರೆಗೆ, ವೆಂಕಟೇಶ್ವರನ ದೇವಾಲಯವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಶ್ರೀಮಂತ ದೇವಾಲಯವಾಯಿತು. ವಿಜಯನಗರ ಚಕ್ರವರ್ತಿಗಳ ಯುದ್ಧದ ಸಮಯದಲ್ಲಿ ಶತ್ರುಗಳನ್ನು ನಿಗ್ರಹಿಸಲು ಇದೇ ವೆಂಕಟರಮಣಸ್ವಾಮಿಯ ಅಭಯಹಸ್ತವೇ ಕಾರಣ ಎಂದು ನಂಬಿದ್ದರು. ಇದ್ದಕ್ಕೆ ಪುರಾವೆ ಎನ್ನುವಂತೆ ವಿಜಯನಗರದ ಶ್ರೀ ಕೃಷ್ಣದೇವರಾಯನು ಒರಿಸ್ಸಾದ ಹಿಂದೂ ರಾಜ ಪ್ರತಾಪ ರುದ್ರನ ಪ್ರದೇಶವನ್ನು ಧ್ವಂಸಗೊಳಿಸಿದ ನಂತರ ನೇರವಾಗಿ ಇದೇ ದೇವಾಲಯಕ್ಕೆ ಭೇಟಿ ನೀಡಿದನು. ಹಾಗಾಗಿಯೇ 1510 ರಿಂದ 1570 ರವರೆಗೆ, ವಿಜಯನಗರದ ರಾಜಮನೆತನದವರು ಮತ್ತು ಆಸ್ಥಾನಿಕರು ದೇವರಿಗೆ 8,05,653 ಚಿನ್ನದ ನಾಣ್ಯಗಳೊಂದಿಗೆ ವಿಶಾಲವಾದ ಭೂಮಿ ಮತ್ತು ನೂರಾರು ಹಸುಗಳು ಮತ್ತು ಗೂಳಿಗಳೊಂದಿಗೆ ಅದ್ದೂರಿ ಕೊಡುಗೆಗಳನ್ನು ನೀಡಿದ ಕಾರಣಕ್ಕಾಗಿಯೇ ಇಂದಿಗೂ ತಿರುಪತಿ ದೇವಾಲಯದಲ್ಲಿ ಶ್ರೀಕೃಶ್ಣದೇವರಾಯ ಮತ್ತು ಅತನ ಧರ್ಮಪತ್ನಿಯರು ಇರುವ ಪುತ್ಥಳಿಯನ್ನು ಕಾಣಬಹುದಾಗಿದೆ.
ಹೀಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಬರುತ್ತಿದ್ದ ಹೇರಳವಾದ ಆದಾಯದಿಂದ ಬರುವ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಿದ್ದಲ್ಲದೇ, ಪ್ರಸಾದ ರೂಪವಾಗಿ ಆರೋಗ್ಯಕರ ಆಹಾರವಾದ ಶ್ರೀ ವೈಷ್ಣವ ಬ್ರಾಹ್ಮಣರ ಪಾಕಪದ್ಧತಿಯನ್ನು ಆಧರಿಸಿದ ಐಷಾರಾಮಿ ಪಂಚಾನ್ನ (ಅಕ್ಕಿ, ಹೆಸರುಬೇಳೆ, ಜೀರಿಗೆ, ಮೆಣಸು ಮತ್ತು ಕೊಬ್ಬರಿ) ಅರ್ಥಾತ್ ಹುಗ್ಗಿಯನ್ನು (ಪೊಂಗಲ್) ಸಿಹಿ ಮತ್ತು ಖಾರದ ರೂಪದಲ್ಲಿ ಅದಕ್ಕೆ ಯಥೇಚ್ಚವಾಗಿ ಗೊಡಂಬಿ ದ್ರಾಕ್ಷಿಗಳನ್ನು ಹಾಕಿ ಅದನ್ನು ಭಗವಂತನಿಗೆ ನೈವೇದ್ಯ ಮಾಡಿ ಅದನ್ನೇ ಬಂದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಕೊಡಲು ಆರಂಭಿಸಿದರು. ತಿರುಪತಿ ದೇವಾಲಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಧಾರ್ಮಿಕ ಸೇವೆಗಳು ನಡೆಯತೊಡಗಿದಂತೆ ದೇವಾಲಯಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿ ಅವರ ಅನುಕೂಲಕ್ಕಾಗಿ ಹೊಸ ಹೊಸ ಛತ್ರಗಳು, ಕಲ್ಯಾಣಿಗಳು, ಭೋಜನ ಶಾಲೆಗಳು ಕಟ್ಟಲಾಗಿ ತಿರುಪತಿ ದೇವಾಸ್ಥಾನ ಉಚ್ಛ್ರಾಯ ಸ್ಥಿತಿಗೆ ತಲುಪಿದಾಗ ದಾಸೋಹದ ಪದ್ದತಿಯೂ ರೂಢಿಗೆ ಬಂದು ದರ್ಶನಕ್ಕೆ ಬರುವ ಭಕ್ತರಿಗೆ ಊಟೋಪಚಾರದ ವ್ಯವಸ್ಥೆಯೂ ಸಣ್ಣ ಪ್ರಮಾಣದಲ್ಲಿ ಬಂದಿತು. ದೇವಾಲಯಕ್ಕೆ ಪ್ರಧಾನ ಪೋಷಕರಾಗಿ ವಿಜಯನಗರ ಸಾಮ್ರಾಜ್ಯವಲ್ಲದೇ ಅನೇಕ ಬ್ರಾಹ್ಮಣರು ತಮ್ಮ ಅವಸಾನದ ಸಮಯದಲ್ಲಿ ತಮ್ಮ ಭೂಮಿ ಮತ್ತು ಚಿನ್ನ ಎರಡನ್ನೂ ದೇವಾಲಯಗಳಿಗೆ ಉಡುಗೊರೆಯಾಗಿ ನೀಡಿದ ನಂತರ ದೇವಾಲಯ ಮತ್ತಷ್ಟೂ ಸಂಪದ್ಭರಿತವಾಯಿತು.
ಹೀಗೆ ದಿನೇ ದಿನೇ ತಿರುಪತಿಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದಲ್ಲದೇ, ಅನೇಕ ಭಕ್ತಾದಿಗಳು ತಮ್ಮ ಮಕ್ಕಳ ನಾಮಕರಣ, ಕೂದಲು ಕೊಡುವುದು, ಮುಂಜಿ, ಮದುವೆ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ತಿರುಪತಿಯ ತಿಮ್ಮಪ್ಪನ ಸನ್ನಿಧಾನದಲ್ಲೇ ಮಾಡಲು ಆರಂಭಿಸಿದಾಗ, ಅಲ್ಲಿದ್ದ ಅನೇಕ ಅರ್ಚಕರು ಮತ್ತು ಬ್ರಾಹ್ಮಣರು ತಮ್ಮ ದೊಡ್ಡ ದೊಡ್ಡ ಮನೆಗಳಲ್ಲೇ ಈ ರೀತಿಯ ಎಲ್ಲಾ ಶುಭ ಕಾರ್ಯಗಳನ್ನೂ ಮಾಡಿಸುವುದಲ್ಲದೇ ಅವರಿಗೆ ಶುಚಿ ಮತ್ತು ರುಚಿಯಾದ ಉಟೋಪಚಾರಗಳನ್ನೂ ಕೈಗೆಟುಕುವ ಬೆಲೆಯಲ್ಲಿ ವ್ಯವಸ್ಥೆ ಮಾಡುವ ಅನುಮತಿಯನ್ನು ದೇವಾಲಯದ ಆಡಳಿತ ಮಂಡಳಿಯರಿಂದ ಪಡೆಯುದರ ಮೂಲಕ ಮೂಲಕ ಮೊತ್ತ ಮೊದಲಬಾರಿಗೆ ತಿರುಪತಿಯಲ್ಲಿ ಉಚಿತ ಸೇವೆಗಳ ಬದಲಾಗಿ ಕೊಟ್ಟ ಹಣಕ್ಕೆ ತಕ್ಕಂತೆ ಮೌಲ್ಯಾಧಾರಿತ ಸೇವೆಗಳು ಆರಂಭವಾಯಿತು. ಬಹುಶಃ ಇಲ್ಲಿಂದಲೇ ತಿರುಮಲದ ಯಾತ್ರಿಕರ ಪ್ರಸಾದ ಸಂಪ್ರದಾಯದ ಆರಂಭವಾಗಿಯಿತು ಎಂದರೂ ತಪ್ಪಾಗದು.
17 ನೇ ಶತಮಾನದಲ್ಲಿ ವಿಜಯನಗರದ ಅಧಿಕಾರದ ಅಂತ್ಯದೊಂದಿಗೆ, ತಿರುಪತಿಯಲ್ಲಿ ಅನೇಕ ಸೇವೆಗಳನ್ನು ಮಾಡಲು ಕಷ್ಟವಾದಾಗ, ಇಷ್ಟು ವರ್ಷಗಳ ಕಾಲ ಅನೂಚಾನವಾಗಿ ನಡೆಸಿಕೊಂಡು ಬಂದಿರುವ ಸೇವೆಗಳನ್ನು ನಿಲ್ಲಿಸಬಾರದೆಂದು ಒಂದೊಂದು ಸೇವೆಗೆ ಇಷ್ಟಿಷ್ಟು ಹಣ ಎಂಬ ಪದ್ದತಿಯನ್ನು ಜಾರಿಗೆ ತಂದರು. ಆದಾಗಲೇ ತಿಮ್ಮಪ್ಪನಿಗೆ ತಮ್ಮ ಒಕ್ಕಲಿನ ಕೊಟ್ಯಾಂತರ ಭಕ್ತಾದಿಗಳು ಇದ್ದ ಕಾರಣ ಅವರೆಲ್ಲರೂ ಈ ಸೇವೆಗಳಿಗೆ ಮನಸೋಇಚ್ಚೆ ತನು ಮನ ಧನ ಸಹಾಯ ಮಾಡುವ ಮೂಲಕ ಸೇವೆಯನ್ನು ಮುಂದುವರೆಸಿಕೊಂಡು ಹೋಗತೊಡಗಿದರು.
ಇನ್ನು ಬ್ರಿಟೀಷರ ಆಡಳಿತದ ಸಮಯದಲ್ಲಿ ಬೆಂಗಳೂರಿನಿಂದ ತಮ್ಮ ಕೇಂದ್ರ ಸ್ಥಾನ ಮದ್ರಾಸಿಗೆ ಹೋಗುವ ಸಲುವಾಗಿ ರಸ್ತೆ ಮತ್ತು ರೈಲು ಮಾರ್ಗಗಳನ್ನು ಮಾಡಿಸಿದ ನಂತರ ಅದುವರಿಗೆ ಬಹುತೇಕ ಕೇವಲ ದಕ್ಷಿಣ ಭಾರತೀಯರು ಮಾತ್ರಾ ತಿರುಪತಿಗೆ ಬರುತ್ತಿದ್ದು ನಂತರ ರಸ್ತೆ ಮತ್ತು ವಾಹನಗಳ ಸೌಲಭ್ಯಗಳು ದೊರೆಯತೊಡಗಿದಂತೆ ಉತ್ತರ ಭಾರತದ ಯಾತ್ರಿಗಳೂ ಸಹಾ ತಿರುಪತಿಗೆ ಬಂದು ತಿಮ್ಮಪ್ಪನ ದರ್ಶನ ಪಡೆದು ಸಂತೃಷ್ಟರಾಗತೊಡಗಿದರು. ಅದೇ ರೀತಿ ಶ್ರೀ ವೆಂಕಟೇಶ್ವರ, ವೆಂಕಟರಮಣಸ್ವಾಮಿ, ತಿಮ್ಮಪ್ಪ ಇವೆಲ್ಲವನ್ನು ಅವರಿಗೆ ಸ್ಪಷ್ಟವಾಗಿ ಉಚ್ಚರಿಸಲು ತುಸು ತ್ರಾಸವಾಗುತ್ತಿದ್ದ ಕಾರಣ, ಹಿಂದಿಯಲ್ಲಿ, ‘ಬಾಲ್’ ಅಥವಾ ‘ಬಾಲಕ್’ ಎಂಬ ಪದವು ಚಿಕ್ಕ ಹುಡುಗ ಎಂದರ್ಥ ಬರುತ್ತದೆ, ಆ ಚಿಕ್ಕ ಹುಡುಗ ಬೇರಾರೂ ಅಲ್ಲದೇ ಸಾಕ್ಷಾತ್ ಸ್ವಾಮಿ ವೆಂಕಟೇಶ್ವರನೇ ಆಗಿರುವುದರಿಂದ ಆತನಿಗೆ ಬಾಲಾ ಎಂಬ ಬಿರುದನ್ನು ನೀಡಿ ಉತ್ತರ ಭಾರತದಲ್ಲಿ ಎಲ್ಲರ ಹೆಸರಿನೊಂದಿಗೆ ‘ಜಿ’ ಸೇರಿಸಿ ಗೌರವ ಸೂಚಿಸುವ ಪದ್ದತಿಯನ್ನೇ ಇಲ್ಲೂ ಅಳವಡಿಸಿಕೊಂಡು ಬಾಲಾಜಿ ಎಂದು ಕರೆದರು.
ಹೀಗೆ ಆವರುಗಳು ತಮ್ಮ ಊರಿನಿಂದ ತಿರುಪತಿಗೆ ಬಂದು ದೇವರ ದರ್ಶನ ಪಡೆದು ಮರಳಿ ಅಲ್ಲಿಗೆ ಹೋಗುವಷ್ಟರಲ್ಲಿ ಒಂದೆರಡು ವಾರಗಳು ಕಳೆದು ಹೋಗುತ್ತಿದ್ದರಿಂದ ಇಲ್ಲಿನ ಪ್ರಸಾದವನ್ನು ಅಲ್ಲಿಗೆ ತೆಗೆದುಕೊಂಡು ಹೋಗಲು ಆಗದೇ ಇದ್ದದ್ದನ್ನು ಮನಗಂಡು ಉತ್ತರ ಭಾರತದಂತೆಯೇ ಸಿಹಿತಿಂಡಿಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿ ಅವುಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗುವ ಪದ್ದತಿಯನ್ನು ರೂಢಿ ಮಾಡಿಕೊಂಡರು. ಇಲ್ಲಿನವರಿಗೆ ಉತ್ತರ ಭಾರತದ ಸಿಹಿ ತಿಂಡಿಗಳನ್ನು ಮಾಡಲು ಬಾರದೇ ಇದ್ದದ್ದರಿಂದ ದಕ್ಷಿಣ ಭಾರತದ ಸಿಹಿ ತಿಂಡಿಯಾದ ಲಾಡುವನ್ನು ತಯಾರಿಸಿ ಅದನ್ನೇ ದೇವರಿಗೆ ನೈವೇದ್ಯವನ್ನಾಗಿಸಿ ಅದನ್ನು ಭಕ್ತರಿಗೆ ಕೊಡುವ ಸಂಪ್ರದಾಯ ಅಧಿಕೃತವಾಗಿ 1940ರ ದಶಕದಲ್ಲಿ ಆರಂಭವಾಯಿತು. ಕ್ರಮೇಣ ಉತ್ತಮ ಗುಣಮಟ್ಟದ ಕಡಲೇ ಹಿಟ್ಟು, ಶುದ್ಧ ದೇಸೀ ತುಪ್ಪ ಮತ್ತು ದ್ರಾಕ್ಷಿ, ಗೋಡಂಬಿ ಏಲಕ್ಕಿ, ಲವಂಗ ಹಾಕಿ ತಯಾರಿಸಿದ ಲಾಡುಗಳು ಉತ್ತರ ಭಾರತೀಯರ ಬಾಯಿಯಲ್ಲಿ ಲಡ್ಡುಗಳೆಂದು ಪ್ರಸಿದ್ಧಿ ಪಡೆದು ಹೆಚ್ಚು ದಿನಗಳ ಕಾಲ ಕೆಡದೇ ಇಡಬಹುದಾಗಿದ್ದ ಕಾರಣ ದೊಡ್ಡ ದೊಡ್ಡ ಕಾಳುಗಳ ದೊಡ್ಡ ಗಾತ್ರದ ಲಾಡು, ವಡೆಗಳನ್ನೇ ತಿರುಪತಿ ಅಧಿಕೃತ ಪ್ರಸಾದವನ್ನಾಗಿಸಿ ಅವುಗಳನ್ನು ದೇವರ ನೈವೇದ್ಯ ಮಾಡಿ ಭಕ್ತರಿಗೆ ಹಣದ ರೂಪದಲ್ಲಿ ಮಾರಾಟ ಮಾಡುವ ಪದ್ದತಿ ರೂಡಿಗೆ ಬಂದಿತು,
ನಂತರ ದಿನಗಳಲ್ಲಿ ಭಕ್ತಾದಿಗಳು ಬರುವ ಅಂದಾಜಿನ ಮೇಲೆ ಲಾಡುಗಳನ್ನು ತಯಾರಿಸುವ ಪದ್ದತಿ ಆರಂಭವಾಗಿ ಇಂದು ಪ್ರತಿದಿನ 3-5 ಲಕ್ಷಕ್ಕೂ ಅಧಿಕ ಲಡ್ಡುಗಳನ್ನು ತಯಾರಿಸಲಾಗುತ್ತಿದ್ದು, ಹಬ್ಬ ಹರಿದಿನಗಳು, ಶ್ರಾವಣ ಮಾಸ, ವೈಕುಂಠ ಏಕದಾಶಿ ಮತ್ತು ಸಾಲು ಸಾಲು ಸಾರ್ವತ್ರಿಕ ರಜಾದಿನಗಳಂದು ಇನ್ನೂ ಹೆಚ್ಚಿನ ಲಾಡುಗಳನ್ನು ತಯಾರಿಸುವ ಸಲುವಾಗಿಯೇ ಪ್ರತೀ ದಿನ ಉತ್ತಮ ಗುಣ ಮಟ್ಟದ ಬೇಳೆಕಾಳುಗಳು, ಸಕ್ಕರೆ, ಗೋಡಂಬಿ, ದ್ರಾಕ್ಷಿ, ಬಾದಾಮಿ ಸೇರಿದಂತೆ 15,000-20000 ಕೆಜಿ ಹಸುವಿನ ತುಪ್ಪವನ್ನು ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿನ ರಾಜಕಾರಣಿಗಳಿಗೂ ಮತ್ತು ಸರ್ಕಾರಕ್ಕೂ ತಿರುಪತಿ ತಿಮ್ಮಪ್ಪನ ಮೇಲಿನ ಶ್ರದ್ಧೆ ಮತ್ತು ನಂಬಿಕೆಗಳಿಗಿಂತಲೂ ಅಲ್ಲಿನ ಆದಾಯದ ಮೇಲೆ ಕಣ್ಣು ಬಿದ್ದ ಕಾರಣ, ಅದೊಂದು ಹಿಂದೂಗಳ ಶ್ರದ್ಧಾ ಕೇಂದ್ರ ಎಂಬುದನ್ನು ಮರೆತು ತಮ್ಮ ಸೈದ್ಧಾಂತಿಕ ನಿಲುವುಗಳ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಅನ್ಯ ಮತೀಯರನ್ನೂ ತಿರುಪತಿ ಅಡಳಿತ ಮಂಡಳಿಯಲ್ಲಿ ಸೇರಿಸಿಕೊಂಡಿದ್ದಲ್ಲದೇ, ಕರ್ನಾಟಕದ ಹೆಮ್ಮೆಯ ಶುದ್ಧ ನಂದಿನಿ ತುಪ್ಪದ ಬದಲಾಗಿ ಕಮಿಷನ್ ಆಸೆಗಾಗಿ ಹೊರಗಿನಿಂದ ಕಡಿಮೆ ಬೆಲೆಯಲ್ಲಿ ತುಪ್ಪವನ್ನು ಖರೀಧಿಸಿದ ಫಲವಾಗಿ ಇಂದು ತಿಮ್ಮಪ್ಪನ ನೈವೇದ್ಯ ಲಡ್ಡುವಿನಲ್ಲಿಯೂ ಶುದ್ಧ ತುಪ್ಪದ ಬದಲಾಗಿ ವಿವಿಧ ಪ್ರಾಣಿಗಳ ಅಗ್ಗದ ಬೆಲೆಯ ಕೊಬ್ಬು ಇರುವುದು ಪತ್ತೆಯಾಗಿರುವುದು ನಿಜಕ್ಕೂ ಬೇಸರ ಮತ್ತು ದುಃಖದ ಸಂಗತಿಯಾಗಿದ್ದು ಇದು ಅಕ್ಷಮ್ಯ ಅಪರಾಧವೂ ಆಗಿದೆ ಎಂದರೂ ಅತಿಶಯವಾಗದು.
ಈ ಆಘಾತಕಾರಿ ಸಂಗತಿಯಿಂದ ನಮ್ಮ ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗಿದೆ ಎಂಬುದನ್ನೂ ಲೆಖ್ಖಿಸದೇ, ಜಾತ್ಯಾತೀತತೆಯ ಹೆಸರಿನಲ್ಲಿ ಅಲ್ಲಿನ ಎಲ್ಲಾ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿರುವ ರಾಜಕಾರಣಿಗಳು, ಚಿತ್ರನಟ/ನಟಿಯರು ಮತ್ತು ಸ್ವಘೋಷಿತ ಬುದ್ಧಿ ಜೀವಿಗಳಿಗೆ ತಮ್ಮ ತಪ್ಪನ್ನು ಅರಿತುಕೊಂಡು ಎಲ್ಲಾ ಧರ್ಮಗಳನ್ನೂ ಪ್ರೀತಿಸುವ ಮತ್ತು ಗೌರವಿಸುವ ಭಾವನೆಯನ್ನು ಆ ತಿರುಪತಿ ತಿಮ್ಮಪ್ಪನೇ ನೀಡಲಿ ಎಂದು ಪ್ರಾರ್ಥಿಸೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಉತ್ತಮ ಲೇಖನ
LikeLiked by 1 person
ಧನ್ಯೋಸ್ಮಿ
LikeLike