ಸತ್ಪಾತ್ರ ದಾನ

ರೇ ಹೆಚ್ಚಾಗಿದ್ದುನಮ್ಮ ಸನಾತನ ಧರ್ಮದಲ್ಲಿ ನಾವು ಸಂಪಾದನೆ ಮಾಡಿದ ಹಣದಲ್ಲಿ ಸ್ವಲ್ಪ ಮಟ್ಟಿಗಾದರೂ ಅವಶ್ಯಕತೆ ಇರುವವರಿಗೆ ದಾನ ಮಾಡಬೇಕು ಎಂಬ ಪದ್ದತಿ ರೂಢಿಯಲ್ಲಿದೆ. ಹೀಗೆ  ಅವಶ್ಯಕತೆ ಇರುವವರು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಹೋಗುವ ಬದಲು ನಿಮ್ಮ ಹತ್ರಿರದಲ್ಲೇ  ಇರುವ ಪುಣ್ಯಕ್ಷೇತ್ರಗಳಿಗೆ ದಾನ, ಧರ್ಮ ಮಾಡಿದರೆ,  ನಾವು ನೀಡಿದ ಹಣದ ಮತ್ತು ವಸ್ತುಗಳನ್ನು  ಅನ್ಯೋನ್ಯ ಸಹಾಯಾರ್ಥವಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಮಾಡುವ ಹೋಮ ಹವನಾದಿಗಳು, ಧಾರ್ಮಿಕ ಕಾರ್ಯಕ್ರಮಗಳು, ಗುರುಕುಲ ಇಲ್ಲವೇ ಸಂಗೀತ, ನೃತ್ಯ, ವೇದಾಭ್ಯಾಸ ಅದೂ ಇಲ್ಲದೇ ಹೋದಲ್ಲಿ ದಿನ ನಿತ್ಯವೂ ನಡೆಸುವ ದಾಸೋಹಕ್ಕೆ ಬಳಸಿಕೊಂಡು ಹಸಿದು ಬಂದ ಭಕ್ತಾದಿಗಳ ಹೊಟ್ಟೆ ತುಂಬಿಸುವುದಕ್ಕೆ  ಬಳಕೆಯಾದಾಗ,  ಅದರ ಕಿಂಚಿತ್ ಪುಣ್ಯಫಲಗಳು ದಾನ ಮಾಡಿದವರಿಗೆ ಲಭ್ಯವಾಗುತ್ತದೆ ಎನ್ನುವುದೇ ಸಕಲ ಆಸ್ತಿಕರ ನಂಬಿಕೆಯಾಗಿದೆ. ಇತ್ತೀಚೆಗಂತೂ ಇದೇ ಸತ್ ಸಂಪ್ರದಾಯವನ್ನು  ದುರ್ಬಳಕೆ ಮಾಡಿ ಕೊಳ್ಳುವವರೇ ಹೆಚ್ಚಾಗಿ ಇದ್ದು  ಅಂತಹ ಕೆಲವೊಂದು ಪ್ರಗರಣಗಳು ಇದೋ  ನಿಮಗಾಗಿ

ಇತ್ತೀಚೆಗೆ ಅನೇಕರು ಮನೆ ಮನೆಗಳಿಗೆ ಬಂದು  ಅನಾಥಾಶ್ರಮದಿಂದ ಬರುತ್ತಿದ್ದೇವೆ. ನಿಮ್ಮ ಕೈಯ್ಯಲ್ಲಾದ ಮಟ್ಟಿಗೆ ಸಹಾಯ ಮಾಡಿ ಅಂತ ಕೇಳಿಕೊಳ್ಳುತ್ತಾರೆ. ಅಕಸ್ಮಾತ್ ನಾವು ಹಣ ಕೊಡಲು ಒಪ್ಪದೇ ಇದ್ದಲ್ಲಿ, ನಿಮ್ಮಲ್ಲಿ ಹಣ ಇಲ್ಲದಿದ್ದರೂ ಪರವಾಗಿಲ್ಲ. ನಿಮ್ಮ ಮನೆಯಲ್ಲಿರುವ ಹಳೇ ಬಟ್ಟೆಗಳನ್ನು ಕೊಟ್ಟರೂ ನಾವು ತೆಗೆದುಕೊಂಡು ಹೋಗುತ್ತೇವೆ ಎಂದಾಗ ಕರುಳು ಚುರುಕ್ ಎಂದು, ಖಂಡಿತವಾಗಿಯೂ ಇಲ್ಲಾ ಎಂದು ಹೇಳಲಾಗದೇ ಒಂದು ನಿಮಿಷ ಇರೀ ಎಂದು ಹೇಳಿ ಮನೆಯೊಳಗಿಂದ ಮನೆಯವರ, ಮಕ್ಕಳ ಹಳೇ ಬಟ್ಟೆಗಳನ್ನು ಅವರಿಗೆ ಕೊಟ್ಟು, ಅಬ್ಬಾ ನಮ್ಮ ಹಳೇ ಬಟ್ಟೆಯೂ ಸದ್ವಿನಿಯೋಗವಾಯಿತಲ್ಲಾ! ಎಂಬ ಒಂದು ರೀತಿಯ ಧನ್ಯತಾಭಾವ ಹಲವರಲ್ಲಿ ಮೂಡುತ್ತದೆ.

ನಿಜ ಹೇಳಬೇಕೆಂದರೆ ಆ ರೀತಿಯಾಗಿ ನಾವು ಕೊಟ್ಟ ಬಟ್ಟೆಗಳು ಅನೇಕ ಬಾರಿ ಯಾವುದೇ ಅನಾಥಾಶ್ರಮಕ್ಕೂ ಹೋಗದೇ ಸೀದಾ ಅವುಗಳು ನಮ್ಮ ನಿಮ್ಮ ಮನೆಗಳ ಹತ್ತಿರದಲ್ಲಿ ಪ್ರತೀ ವಾರವೂ ನಡೆಯುವ ಸಂತೆಯ ಒಂದು ಮೂಲೆಯಲ್ಲಿ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಮಾರುವವರ ಬಳಿಯೋ ಇಲ್ಲವೇ, ದೊಡ್ಡ ದೊಡ್ಡ  ಅಪಾರ್ಟ್ಮೆಂಟ್ ಕಟ್ಟುವವರ ಮುಂದೆ ಕೂಲಿ ಕೆಲಸವರಿಗೆ ಮಾರಲು ಸಿದ್ದವಾಗಿರುತ್ತದೆ. ನಮ್ಮ ಬಳಿಯಿಂದ ತೆಗೆದುಕೊಂಡು ಹೋದ ಬಟ್ಟೆಗಳನ್ನು ಒಗೆದು ನೀಟಾಗಿ  ಇಸ್ತ್ರಿ ಮಾಡಿಸಿ 100-200 ರೂಪಾಯಿಗಳ ಚೌಕಾಸಿಗೆ ಬಡವರು ಮತ್ತು ಕೂಲಿ ಕೆಲಸದವರಿಗೆ ಮಾರಾಟ ಮಾಡುವ ದೊಡ್ಡ ದಂಧೆಯೇ ಇರುತ್ತದೆ.

ಕೆಲ ವರ್ಷಗಳ ಹಿಂದೆ ಬಹಳ ಇಷ್ಟ ಪಟ್ಟು ತೆಗೆದುಕೊಂಡಿದ್ದ ತಿಳಿ ಬಣ್ಣದ ಶರ್ಟನ್ನು, ಅಮ್ಮಾ ವಾಷಿಂಗ್ ಮೆಷಿನ್ ನಲ್ಲಿ ಒಗೆಯಲು ಹಾಕದಾಗ, ಮತ್ತೊಂದು ಬಣ್ಣ ಬಿಡುವ ಬಟ್ಟೆಯೊಂದಿಗೆ ಸೇರಿಕೊಂಡು ಹಾಳಾಗಿ ಹೋಗಿತ್ತು. ನನಗೆ ತುಂಬಾ ಇಷ್ಟವಾಗಿದ್ದ ಮತ್ತು ದುಬಾರಿ ಬೆಲೆಯ ಶರ್ಟ್ ಆಗಿದ್ದರಿಂದ ನಾನಾ ರೀತಿಯಲ್ಲಿ ಪ್ರಯತ್ನ ಪಟ್ಟರೂ  ಅದಕ್ಕೆ ಹತ್ತಿದ್ದ ಬಣ್ಣ ತೆಗೆಯಲು ಸಾಧ್ಯಾವಾಗದೇ ಇದ್ದ ಕಾರಣ ಆ ಶರ್ಟನ್ನು ಧರಿಸುತ್ತಿರಲಿಲ್ಲ. ಹೀಗೆ ಯಾರೋ ಅನಾಥಾಶ್ರಮದ ಹೆಸರಿನಲ್ಲಿ ಹಳೇ ಬಟ್ಟೆಗಳನ್ನು ಕೇಳಿಕೊಂಡು ಬಂದಿದ್ದಾಗ   ಅದೇ ಶರ್ಟನ್ನು ಅಮ್ಮಾ ಅವರಿಗೆ ಕೊಟ್ಟಿದ್ದರು. ಹಾಗೆ ಅಮ್ಮಾ ಕೊಟ್ಟ  ಅದೇ ಶರ್ಟನ್ನು ಯಶವಂತಪುರದಲ್ಲಿ ತರಕಾರಿ ಖರೀದಿಗೆಂದು  ಹೋಗಿದ್ದಾಗ ನೋಡಿದಾಗಲೇ ನನಗೂ ಈ ವಿಷಯ ಗೊತ್ತಾಗಿದ್ದು.

ಆದೇ ರೀತಿ ನಾವು ಚಿಕ್ಕವರಿದ್ದಾಗ ನೆಲಮಂಗಲದಲ್ಲಿದ್ದು, ಅದೊಂದು ಭಾನುವಾರ ಬೆಳಿಗ್ಗೆ ಅದ್ಯಾರೋ ಒಬ್ಬ ತರುಣ, ಹರಕಲು ಬಟ್ಟೆಯನ್ನು ಹಾಕಿಕೊಂಡು ಅಮ್ಮಾ ತಾಯೀ ಮೂರು ದಿನಗಳಿಂದ ಊಟ ಮಾಡಿಲ್ಲಾ! ಏನಾದರೂ ಕೊಡಿ ಎಂದು ದೈನೇಸಿಯಿಂದ ಬೇಡಿಕೊಂಡದನ್ನು ಕಂಡು ಬೇಸರ ಮಾಡಿಕೊಂಡ ನಮ್ಮ ತಂದೆಯವರು, ಆತನನ್ನು ಕರೆದು ನಮ್ಮ ಮನೆಯ ಹಿತ್ತಲಿಲಿನಲ್ಲಿಯೇ ಸ್ನಾನ ಮಾಡಿಸಿಕೊಂಡು ನಮ್ಮ ತಂದೆಯವರದ್ದೇ ಪ್ಯಾಂಟು ಶರ್ಟನ್ನು ಕೊಟ್ಟು, ಹೊಟ್ಟೆಯ ತುಂಬಾ ಬಿಸಿ ಬಿಸಿ ತಿಂಡಿ ಮತ್ತು ಕಾಫಿಯನ್ನು ಕೊಟ್ಟಿದ್ದಲ್ಲದೇ, ಕೈಗೊಂದಿಷ್ಟು ಕಾಸನ್ನೂ ಕೊಟ್ಟು ಕಳುಹಿಸಿಕೊಟ್ಟಾಗ,  ನಮ್ಮ ತಂದೆಯವರ ಮುಖದಲ್ಲಿ ಅದೇನೋ ಸಾಧಿಸಿದಂತಹ ಖುಷಿ ಇದ್ದದ್ದು ಕಣ್ಣಿಗೆ ಕಟ್ಟಿದಂತಿದೆ. ಅದೇ ದಿನ ಸಂಜೆ ನೆಲಮಂಗಲದ ಶಾಂತಲಾ ಥಿಯೇಟರಿನಲ್ಲಿ ಬಿಡುಗಡೆಯಾಗಿದ್ದ ರಾಜ್ ಕುಮಾರ್  ತ್ರಿಪಾತ್ರದಲ್ಲಿ ಅಭಿನಯಿಸಿದ್ದ ಶಂಕರ್ ಗುರು ಸಿನಿಮಾ ನೋಡಲು ಕುಟುಂಬದೊಡನೆ ಹೋದಾಗ, ವಿಪರೀತ ಜನಸಂದಣಿಯಿಂದ ಇದ್ದ ಕಾರಣ ಟಿಕೆಟ್ ಎಲ್ಲವೂ ಖಾಲಿ ಯಾಗಿ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದವರ ಸುತ್ತಲು ಜನ ತುಂಬಿಕೊಂಡಿದ್ದನ್ನು ನೋಡಿ ಅವರನ್ನು ಚದುರಿಸಲು ಪೋಲಿಸರು ಮುಂದಾದಾಗ, ಕಂಡ ದೃಶ್ಯ ನಿಜಕ್ಕೂ ಗಾಬರಿ ಹುಟ್ಟಿಸುವಂತಿತ್ತು. ಅವತ್ತು ಬೆಳಗ್ಗೇ ತಾನೇ, ಮೂರು ದಿನಗಳಿಂದಲೂ ಊಟ ಮಾಡಿಲ್ಲಾ ಎಂದು ಹರುಕಲು ಬಟ್ಟೆ ಹಾಕಿಕೊಂಡು ಬಂದು, ನಮ್ಮ ತಂದೆಯವರ ಶರ್ಟು ಪ್ಯಾಂಟ್ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯೇ ನಮ್ಮಪ್ಪ ಕೊಟ್ಟಿದ್ದ ಪ್ಯಾಂಟ್ ಶರ್ಟ್ ಧರಿಸಿ ಕೊಂಡೇ   ಅಲ್ಲಿ ಬ್ಲಾಕ್ ಟಿಕೆಟ್ ಮಾರುತ್ತಿದ್ದ.

ಇವರೆಲ್ಲರೂ ಹೊರಗಿನವರಾದರೆ, ಇನ್ನು ನಮ್ಮಗಳ ಮನೆಯಲ್ಲಿ ಕೆಲಸ ಮಾಡುವವರದ್ದು ಮತ್ತೊಂದು ತರಹದ ಬೇಡಿಕೆ. ವರ್ಷಾನುಗಟ್ಟಲೆ ಮನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ  ಅವರ ಮೇಲೆ ನಮಗೆ ನಂಬಿಕೆ ಬಂದಿರುತ್ತದೆ. ಅದೇ ರೀತಿ ಅವರಿಗೂ ನಮ್ಮ ಮನೆಯಲ್ಲಿ ಎಲ್ಲೆಲ್ಲಿ ಏನೇನು ಇರುತ್ತದೆ  ಎಂಬುದರ ಪರಿಚಯ ಚೆನ್ನಾಗಿಯೇ ಇರುತ್ತದೆ. ಆಗಾಗ್ಗೇ ಮನೆಯವರು ಹಣೆಗೆ ಇಟ್ಟುಕೊಳ್ಳುವ ಬಿಂದಿ ಪ್ಯಾಕೇಟ್, ಮಗಳ  ಅಲಂಕಾರಿಕ ವಸ್ತುಗಳು ಇದ್ದಕ್ಕಿಂದಂತೆಯೇ ಮಾಯಾವಾಗಿ ಎಲ್ಲಾ ಕಡೆಯಲ್ಲೂ ಹುಡುಕಿ ಸಿಗದೇ ಸ್ವಲ್ಪ ದಿನಗಳಾದಾಗ ಅದನ್ನೇ ನಮ್ಮ ಮನೆಯ ಕೆಲಸದವಳ ಅಮ್ಮಾ ಇಲ್ಲವೇ ಅಕ್ಕ ತಂಗಿಯರು ಬಳಸುತ್ತಿರುವುದನ್ನು ನೋಡಿದಾಗ ತಕ್ಷಣ ಕೋಪ ಬಂದರೂ  ನೋಡಿದರೂ ನೋಡದಂತೆ ಸುಮ್ಮನಾಗಬೇಕಾಗುತ್ತದೆ.

ಮನೆಯಲ್ಲಿ ಹೊಸಾ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷೀನ್, ಸೈಕಲ್ ಬಿಡಿ ಹೊಸಾ ಚಪ್ಪಲಿ ಕೊಂಡು ಕೊಂಡರೂ ಸಾಕು, ಅಕ್ಕಾ ಹಳೇಯದ್ದೇನು ಮಾಡ್ತ್ರೀರೀ? ಎಂದು  ಕೇಳಿದ ಹಾಗೆ ಕೇಳುತ್ತಲೇ, ಯಾವುದೇ ಮುಲಾಜಿಲ್ಲದೇ ನಮ್ಮನೆಗೆ ತೆಗೆದುಕೊಂಡು ಹೋಗ್ತೀನಿ ಎಂದು  ಹೇಳಿ, ನಮ್ಮಾಕೆ ಒಪ್ಪಿಗೆ ನೀಡುವ ಮುನ್ನವೇ, ಅವರ  ಅಪ್ಪಾ, ಇಲ್ಲವೇ  ಅಣ್ಣ ತಮ್ಮಂದಿರನ್ನು ಕರೆಸಿಕೊಂಡು ತೆಗೆದುಕೊಂಡು ಹೋಗಿಯೇ ಬಿಡುತ್ತಾರೆ. ಹಾಗೆ ತೆಗೆದುಕೊಂಡು ಹೋದ ವಸ್ತುವನ್ನು ಉಪಯೋಗಿಸಿಕೊಂಡರೆ ನಮಗೇನೂ ಬೇಸರವಿಲ್ಲಾ. ಅದರೆ  ಒಂದೆರದು ವಾರಗಳಲ್ಲಿ ಅದನ್ನು ಮತ್ತೊಬ್ಬರಿ ಅಗ್ಗದ ಬೆಲೆಯಲ್ಲಿ ಮಾರಿಕೊಂಡ ವಿಷಯ ನಮಗೆ ತಿಳಿದಾಗ, ಛೇ! ಅಪಾತ್ರದಾನವಾಯಿತಲ್ಲಾ ಎಂದೆನಿಸುತ್ತದೆ.

dana1ಹಿಂದೆಲ್ಲಾ, ಅಮ್ಮಾ ತಾಯಿ, ಕವಳ ಇದ್ರೇ ಕೊಡ್ರಮ್ಮಾ! ಎಂದು ಹಿಂದಿನ ದಿನದ ತಂಗಳು ಪಂಗಳನ್ನು ಒಂದೇ ಪಾತ್ರೆಯಲ್ಲಿ ಹಾಕಿಸಿಕೊಂಡು ಮನೆಯ ಮಂದಿಯೆಲ್ಲಾ ಕುಳಿತುಕೊಂಡು ತಿನ್ನುತ್ತಿದ್ದರು. ಇಂದು ರಾತ್ರಿ  ಉಳಿದದ್ದನ್ನು ಮಾರನೇ ದಿನ ಬಿಸಿ ಮಾಡಿಕೊಂಡು ತಿನ್ನಲೆಂದೇ, ತಂಗಳು ಪಟ್ಟಿಗೆ (ಫ್ರಿಡ್ಜ್) ಎಲ್ಲರ ಮನೆಯಲ್ಲಿ ಬಂದ ನಂತರ ಮಾಡಿದ ಅಡುಗೆಯನ್ನು ಚೆಲ್ಲುವುದೋ ಇಲ್ಲವೇ ಮತ್ತೊಬ್ಬರಿಗೆ ಕೊಡುವ ಪದ್ದತಿಯೇ ನಿಂತು ಹೋದ ನಂತರ, ಇಂದಿನ ಕಾಲದ ಭಿಕ್ಷುಕರೆಲ್ಲಾ  ಹಣದ ರೂಪದಲ್ಲೇ ಕೇಳುತ್ತಾರೆ.  ಚಿಲ್ಲರೆ ಕಾಸನ್ನೇನಾದರೂ ಕೊಟ್ಟರೇ ಕೆಕ್ಕರಿಸಿ ತಿಂದು ಬಿಡುವವರಂತೆ ನೋಡುವವರಿಗೆ ಏನಿದ್ದರೂ 10,20, 50ರ ನೋಟೇ ಬೇಕು. ಇತ್ತೀಚೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿಲ್ಲರೆ ಇಲ್ಲಾ ಅಂದ್ರೇ ಫೋನ್ ಪೇ, ಗೂಗಲ್ ಪೇ ಮಾಡಿ ಎಂದು ನಾಚಿಕೆ ಬಿಟ್ಟು ಕೇಳುವ ಹೈಟೆಕ್ ಭಿಕ್ಷಕರೂ ಇದ್ದಾರೆ. ಹಾಗೆ ಕೊಟ್ಟ ಹಣವನ್ನು ಬಹುತೇಕರು ಸಂಜೆ ಹೊತ್ತಿಗೆ ಬಾರ್ ನಲ್ಲಿ ಪೋಲು ಮಾಡಿ ಕುಡಿದು ರಸ್ತೆಯಲೆಲ್ಲಾ ತೂರಾಡುತ್ತಾ, ಚರಂಡಿಯಲ್ಲಿ ಒದ್ದಾಡಿದರೆ, ಇನ್ನೂ ಕೆಲವರು ಕುಡಿದ ಮತ್ತಿನಲ್ಲಿ ಮನೆಯವರೊಂದಿಗೆ ಜಗಳ ಮಾಡಿ, ಸಿಕ್ಕಾ ಪಟ್ಟೆ ಹೊಡೆಯುವುದನ್ನೂ ಕೇಳಿದ್ದೇವೆ.

ನಮ್ಮ ಹಳೆಯ ಮನೆಯಲ್ಲಿ ಬೋರ್ವೆಲ್ ಅಪರೂಪಕ್ಕೆ ಕೆಟ್ಟು ಹೋದಾಗ, ಅದರನ್ನು ರೀಪೇರಿ ಮಾಡಲು ಹತ್ತಿರದ ಕಾರ್ಖಾನೆಯಲ್ಲಿ ಸಾಂದರ್ಭಿಕ ಕೆಲಸಗಾರರಾಗಿದ್ದ (causal worker) Plumbersಗಳನ್ನೇ ಕರೆಸುತ್ತಿದ್ದೆವು. ಸಣ್ಣ ಪುಟ್ಟ ರಿಪೇರಿಗಳನ್ನು ಕ್ಷಣ ಮಾತ್ರದಲ್ಲಿ ಮಾಡಿಕೊಟ್ಟು ಕೊಟ್ಟಷ್ಟನ್ನೇ  ತೆಗೆದುಕೊಂಡು ಹೋಗುತ್ತಿದ್ದರು. ಅಪರೂಪಕ್ಕೊಮ್ಮೆ ಮೋಟರ್ ಹೊರಗೆ ತೆಗೆದು ರಿಪೇರಿ ಮಾಡಬೇಕಾದಂತಹ ಸಂಧರ್ಭ ಬಂದಾಗ ತಡ ರಾತ್ರಿಯ ಸಮಯದವರೆಗೂ ಕೆಲಸ ಮಾಡಲೇ ಬೇಕಾದಂತಹಾ  ಅನಿವಾರ್ಯ ಸಂಧರ್ಭ ಬಂದಾಗ,  ನಮ್ಮ ತಾಯಿಯವರೇ ವರಿಗೆ ಬಿಸಿ ಬಿಸಿ ಕಾಫೀ/ಟೀ ಇನ್ನೂ  ಹೊತ್ತಾದರೆ ಬಿಸಿ ಬಿಸಿ ಆಡುಗೆ ಮಾಡಿ ಬಡಿಸುತ್ತಿದ್ದರು.  ನಮ್ಮ ತಾಯಿಯವರು ಅಷ್ಟೆಲ್ಲಾ ಕಷ್ಟ ಪಟ್ಟು ಅವರಿಗೆ ಆತಿಥ್ಯ ಮಾಡಿದರೂ, ಅವರ ಶ್ರಮಕ್ಕೆ ಬೆಲೆ ಕೊಡದೇ, ಏ ಕಾಫೀ/ಟೀ, ಊಟ ಎಲ್ಲಾ 50ಪೈ/2/- ರೂಪಾಯಿ ಅಷ್ಟೇ ಎಂದು ಅಮ್ಮಾ ಅಕ್ಕರೆಯಿಂದ ಶ್ರಮವಹಿಸಿ ಶುಚಿ ರುಚಿಯಾಗಿ ಮಾಡಿ ಹಾಕುತ್ತಿದ್ದ ಅಡುಗೆಯನ್ನು ಕಾರ್ಖಾನೆಯಲ್ಲಿ ಸಿಗುತ್ತಿದ್ದ (subsidised rate food) ಊಟ ತಿಂಡಿಗೆ  ಹೋಲಿಕೆ ಮಾಡುತ್ತಿದ್ದದ್ದನ್ನು ಕಂಡು ನನಗೆ ಅನೇಕ ಬಾರಿ ಕೋಪ ಬಂದು ಛೇ! ಅಪಾತ್ರರಿಗೆ ಊಟ ಹಾಕಿದೆವಾ! ಎನಿಸಿ  ನಂತರದ ದಿನಗಳಲ್ಲಿ ಕಾಫೀ/ಟೀ ಊಟದ ಬದಲಿಗೆ ಸ್ವಲ್ಪ ಹೆಚ್ಚಿಗೆ ಹಣವನ್ನೇ ಕೊಟ್ಟು ಕಳುಹಿಸುತ್ತಿದ್ದ ಉದಾಹರಣೆಯೂ ಇದೆ.

ಇವೆಲ್ಲವನ್ನೂ ಗಮನಿಸಿಯೇ ನಮ್ಮ ತಂದೆಯವರು ಬಹಳ ವರ್ಷದ ಹಿಂದೇಯೇ ಭಿಕ್ಷುಕರಿಗೆ ಭಿಕ್ಷೇ  ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದರು.  ಅಮ್ಮ ತಾಯಿ ಎರಡು ದಿನದಿಂದ ಏನೂ ತಿಂದಿಲ್ಲಾ! ಎಂದರೆ ಮನೆಯಲ್ಲಿ ಮಾಡಿದ ಬಿಸಿ ಬಿಸಿ ಊಟವನ್ನೇ ಅದೆಷ್ಟೋ ಬಾರಿ ಬಡಿಸಿದ್ದೂ ಇದೆ. ಇನ್ನೂ ಹೊಟೆಲ್ಲಿನ ಮುಂದೆ ಬೇಡುವ ಭಿಕ್ಷುಕರಿಗೆ ಅದೇ ಹೋಟೆಲ್ಲಿನಿಂದ ಅವರು ಕೇಳಿದ್ದನ್ನು ಕೊಡಿಸಿದ್ದೂ ಇದೆ.     ಇನ್ನು ನಾವು ಉಪಯೋಗಿಸದ ಒಳ್ಳೆಯ ಬಟ್ಟೆಗಳನ್ನು ಚೆಂದಗೆ ಒಗೆದು ಇಸ್ತ್ರೀ ಮಾಡಿ ವರ್ಷಕ್ಕೊಮ್ಮೆ ಊರಿಗೆ ಜಾತ್ರೆಗೆಂದು ಹೋದಾಗ ತೆಗೆದುಕೊಂಡು ಹೋಗಿ ಎಲ್ಲರಿಗೂ ಬಟ್ಟೆ ಮತ್ತು ಜಾತ್ರೆಯ ಖರ್ಚಿಗೆಂದು ಸ್ವಲ್ಪ ಹಣವನ್ನು ಕೊಡುವ ಸತ್ ಸಂಪ್ರದಾಯವನ್ನು ರೂಡಿಯಲ್ಲಿಟ್ಟುಕೊಂಡಿದ್ದರು. ನಾವು ಕೊಟ್ಟ ಬಟ್ಟೆಗಳನ್ನು ಬಹಳ ಸಂತೋಷದಿಂದ ಜಾತ್ರೆಯಂದು ಹೊಸ ಬಟ್ಟೆಯಂತೆ ತೊಟ್ಟು ಸಂಭ್ರಮಿಸುವುದನ್ನು ನಾವೇ ಎಷ್ಟೋ ಬಾರಿ ಕಂಡು ಖುಷಿ ಪಟ್ಟಿದ್ದೇವೆ.

dana3ಇನ್ನು ನಮ್ಮ ಅಮ್ಮನೂ ಸಹಾ, ಯುಗಾದಿ, ದಸರ ಮತ್ತು ದೀಪಾವಳಿಗೆಂದು ನಮ್ಮೆಲ್ಲರಿಗೂ ಬಟ್ಟೆ ತರುವಾಗಲೇ ನಮ್ಮ ಕೆಲಸದವರಿಗೂ ಬಟ್ಟೆ  ತಂದು ಹಬ್ಬಕ್ಕೆ ಮುತ್ತೈದೆಯರಿಗೆ ಕೊಡುವ ಬಾಗಿಣದಂತೇ ನಮ್ಮ ಕೆಲಸದವರಿಗೆ ಕೊಡುತ್ತಿದ್ದದ್ದಲ್ಲದೆಯೇ, ಅವರ ಮಗ ಇಲ್ಲವೇ ತಮ್ಮನ ಶಾಲೆಗೆ ನೇರವಾಗಿ ಫೀಸ್ ಕಟ್ಟುವುದೋ ಇಲ್ಲವೇ  ಅಗತ್ಯವಿದ್ದ ಪುಸ್ತಕಗಳನ್ನು ಖರೀಧಿಸಿ ಕೊಡುವ ಮೂಲಕ ನೇರವಾಗಿ ಹಣವನ್ನು ನೀಡಿ  ಅದರ ದುರ್ಬಳಕೆಯನ್ನು  ತಪ್ಪಿಸುತ್ತಿದ್ದರು.

ದಾನೆ ದಾನೇ ಪರ್ ಲಿಖಾ ಹೋತಾ ಹೈ ಖಾನೇವಾಲೋಂಕಾ ನಾಮ್ ಎನ್ನುವ ತುಳಸೀ ದಾಸರ ಮಾತಿನಂತೆ ನಾವು ಮಾಡುವ ದಾನ ಧರ್ಮಗಳು ನಾವು ಮಾಡುತ್ತಿದ್ದೇವೆ ಎನ್ನುವುದಕ್ಕಿಂತಲೂ ಭಗವಂತನೇ ನಮ್ಮಿಂದ ಮಾಡಿಸುತ್ತಿದ್ದಾನೆ ಎನ್ನುವುದೇ ಸೂಕ್ತ  ಎನ್ನುವುದು ಹೌದಾದರೂ, ಹಾಗೆ ಮಾಡುವ ದಾನ  ಅಪಾತ್ರವಾಗುವ ಬದಲು ಅವರ ಜೀವನಾವಶ್ಯಕತೆ ಅಗತ್ಯವಾಗುವಂತಹ  ಸತ್ಪಾತ್ರವಾದಾಗ ಸಿಗುವ ಆನಂದ ಮುಂದೇ ಬೇರೊಂದಿಲ್ಲಾ! ಹಾಗೆಂದ ಮಾತ್ರಕ್ಕೆ ಹಣವನ್ನು ಕೊಡುವುದೂ ಸಹಾ ತಪ್ಪೆಂಬುಂದು ನನ್ನ ವಾದವಲ್ಲ. ನಾವು ಕಷ್ಟ ಪಟ್ಟು ಸಂಪಾದಿಸಿದ ಹಣ ಅಥವಾ ವಸ್ತು ಮತ್ತೊಬ್ಬರ ಪಾಲಿಗೆ ಸದ್ಬಳಕೆ ಆಗಬೇಕೇ ಹೊರತು ದುರ್ಬಳಕೆ ಆಗಬಾರದು ಎನ್ನುವುದಷ್ಟೇ ನನ್ನ ಅಭಿಪ್ರಾಯ. ಇದ್ದಕ್ಕೆ ನಿಮ್ಮದೂ ಸಹಮತ ಇದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment