ಕಳೆದ ಎರಡು ದಶಕಗಳಿಂದಲೂ ಭಾರತೀಯ ದೃಶ್ಯಮಾಧ್ಯಮಗಳಲ್ಲಿ ಬಿಗ್ಬಾಸ್ ಎನ್ನುವ ರಿಯಾಲಿಟಿ ಶೋ ಬಹಳ ಪ್ರಖ್ಯಾತಿಯನ್ನು ಪಡೆದಿದ್ದು ಇದು ಮೂಲತಃ ನೆದರ್ಲ್ಯಾಂಡ್ಸ್ನಲ್ಲಿ ಜಾನ್ ಡಿ ಮೋಲ್ ಜೂನಿಯರ್ ಅವರಿಂದ ರಚಿಸಲ್ಪಟ್ಟ ಡಚ್ ರಿಯಾಲಿಟಿ ಶೋ ಬಿಗ್ ಬ್ರದರ್ ಆಧಾರಿತವಾದ ಕಾರ್ಯಕ್ರಮವಾಗಿದೆ. ಇದನ್ನು ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ನೆಟ್‌ವರ್ಕ್‌ಗಳ ಮೂಲಕ ಎಂಡೆಮೊಲ್ ಶೈನ್ ಇಂಡಿಯಾ (ಈಗ ಬನಿಜಯ್) ಕಂಪನಿ ನಡೆಸುವ ಕಾರ್ಯಕ್ರಮವಾಗಿದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು 2006 ರಲ್ಲಿ ಸೋನಿ ಟಿವಿ ಮೂಲಕ ಹಿಂದಿ ಭಾಷೆಯಲ್ಲಿ ಪ್ರಾರಂಭವಾಗಿ ನಂತರ 2013 ರಲ್ಲಿ, ಕಲರ್ಸ್ ಕನ್ನಡದ ಮೂಲಕ ಕನ್ನಡದ ಆನಂತರ ಬಂಗಾಳಿ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ಒಟ್ಟು ಏಳು ಭಾರತೀಯ ಭಾಷೆಗಳಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ .
ಹೌಸ್‌ಮೇಟ್‌ಗಳು ಎಂದು ಕರೆಯಲ್ಪಡುವ ಸ್ಪರ್ಧಿಗಳು ಹೊರಗಿನ ಪ್ರಪಂಚದಿಂದ ಸ್ವಲ್ಪವೂ ಸಂಪರ್ಕವೇ ಇರದಂತಹ ಟಿವಿ, ಮೊಬೈಲ್, ಗಡಿಯಾರ ಯಾವುದೂ ಇಲ್ಲದಂತಹ ವಿಶೇಷವಾಗಿ ನಿರ್ಮಿಸಲಾದ ಮನೆಯಲ್ಲಿ 15-18 ವಿವಿಧ ಮನಸ್ಥಿತಿಯ, ವಿವಿಧ ವ್ಯಕ್ತಿತ್ವದ ಮತ್ತು ಬೇರೆ ಬೇರೆ ಕ್ಷೇತ್ರದಿಂದ ಬಂದಂತಹ ಸ್ಪರ್ಧಿಗಳು 90-100 ದಿನಗಳ ಕಾಲ ಒಟ್ಟಿಗೆ ವಾಸಿಸುತ್ತಾರೆ. ಪ್ರತೀ ದಿನವೂ ಒಂದಲ್ಲಾ ಒಂದು ಟಾಸ್ಕ್ ಗಳನ್ನು ಕೊಡುತ್ತಾ, ಪ್ರತೀವಾರವೂ ಒಬ್ಬೊಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಹಾಕುತ್ತಾ, ಅಂತಿಮವಾಗಿ ಉಳಿಯುವ ಒಬ್ಬ ವ್ಯಕ್ತಿಯನ್ನು ವಿಜೇತ ಎಂದು ಘೋಷಿಸಿ ಅವರಿಗೆ ನಿರ್ಧಿಷ್ಟ ಮೊತ್ತದ ನಗದು ಬಹುಮಾನವನ್ನು ಕೊಡಲಾಗುತ್ತದೆ. ಈ ರೀತಿಯಲ್ಲಿ ಮನೆಯಲ್ಲಿ ವಾಸಿರುವ ಸ್ಪರ್ಧಿಗಳ ಪ್ರತೀ ಹೆಜ್ಜೆಯನ್ನೂ ಅವರ ಕಣ್ಣಿಗೆ ಕಾಣಿಸದಂತಹ 70ಕ್ಕೂ ಹೆಚ್ಚಿನ ಕ್ಯಾಮೆರಾಗಳು ಸೆರೆ ಹಿಡಿಯುತ್ತದೆಯಲ್ಲದೇ ಅವರು ಮಾತನಾಡುವ ಪ್ರತಿಯೊಂದು ಶಬ್ಧವನ್ನೂ ಮೈಕ್ರೊಫೋನ್‌ಗಳ ಮೂಲಕ ರೆಕಾರ್ಡ್ ಮಾಡುತ್ತಾ ಸಂಕಲಿಸಿ ಪ್ರತೀ ದಿನವೂ ಒಂದು ಗಂಟೆಗಳ ಕಾಲ ಪ್ರಸಾರ ಮಾಡಲಾಗುತ್ತದೆ,
ಕಲರ್ಸ್ ಕನ್ನಡದಲ್ಲಿ 10 (2ನೇ ಸರಣಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿತ್ತು) ಸರಣಿಗಳು ಸುದೀಪ್ ಅವರ ಸಾರಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಮುಗಿಸಿ ಕಳೆದ ಮೂರು ವಾರಗಳ ಹಿಂದೆ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮ ಆರಂಭವಾಗಿತ್ತು. ಈ ಬಾರಿ ಆಯ್ಕೆಯಾಗಿದ್ದ 18 ಸ್ಪರ್ಧಿಗಳಲ್ಲಿ ಹೆಚ್ಚಿನವರು ಧಾರಾವಾಹಿ ಮತ್ತು ಸಿನಿಮಾ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತರವರಾಗಿದ್ದವರಾಗಿದ್ದರೆ, ತನ್ನ ಹರುಕು ಬಾಯಿ ಮತ್ತು ಪ್ರಚಾರ ಪ್ರಿಯತೆಯಿಂದಾಗಿ ಈಗಾಗಲೇ ರಾಜ್ಯಾದ್ಯಂತ ಕುಖ್ಯಾತಿಯನ್ನು ಪಡೆದಿರುರುವ ಲಾಯರ್ ಜಗದೀಶ್ ಅವರನ್ನೂ ಸಹಾ ಆಯ್ಕೆ ಮಾಡುವ ಮೂಲಕ ಹಲವರನ್ನು ಅಚ್ಚರಿಯನ್ನು ತರಿಸಿತ್ತು.
ಇದೇ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಜಗದೀಶ್ ಅವರ ಆಯ್ಕೆ ಎಷ್ಟು ಸಮಂಜಸ? ಎಂದು ಯಾರೋ ಒಬ್ಬರು ಕೇಳಿದ್ದ ಪ್ರಶ್ನೆಗೆ, ಜಗದೀಶ್ ಒಬ್ಬ ಪ್ರಚಾರ ಪ್ರಿಯ. ಕರೀ ಕೋಟ್ ಹಾಕಿಕೊಂಡು ಕೋರ್ಟಿನಲ್ಲಿ ವಾದ ಮಾಡಿ ಯಾವುದೇ ಕೇಸುಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗದೇ ಇದ್ದರೂ, ಎಲ್ಲದ್ದರಲ್ಲಿಯೂ ಪ್ರಚಾರವನ್ನು ಪಡೆಯುವ ಪ್ರಚಾರ ಪ್ರಿಯ. ಹಾಗಾಗಿ ಆತನ ಪ್ರಚಾರದ ತೆವಲಿಗೆ ಇದು ಸರಿಯಾದ ಶೋ. ಆದರೆ ವಯಕ್ತಿಯವಾಗಿ ಪರಿಚಯವಿರದೇ ಇದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಆತ ಹಾಕುತ್ತಿದ್ದ ವಿಡಿಯೋಗಳನ್ನು ಗಮನಿಸಿದ್ದರಿಂದ, ಕುರಿ ಹೆಚ್ಚಿದಷ್ಟೂ ಕುರಬನಿಗೇ ಲಾಭ ಎನ್ನುವಂತೆ, ತನ್ನ ಪ್ರಚಾರ ಪ್ರಿಯತೆಯ ಹಪಾಹಪಿಯಲ್ಲಿ ಆತ ಹುಚ್ಚು ಹುಚ್ಚಾಗಿ ಮಾತನಾಡಿ ಇಲ್ಲವೇ ಹಾರಾಡಿ ಚೀರಾಡಿ ಕಡೆಗೆ ಎಲ್ಲರ ಮುಂದೆ ಅತನ ನಿಜವಾದ ವ್ಯಕ್ತಿತ್ವವೆಲ್ಲಾ ಬೆತ್ತಲಾಗುತ್ತಾ ಹೋಗಿ ಎಲ್ಲರಿಂದಲೂ ಥೂ! ಛೀ! ಎಂದು ಉಗಿಸಿಕೊಳ್ಳುತ್ತಾನೆ ಎಂದು ಬರೆದಿದ್ದೆ. ಆದರೆ ನನ್ನ ಊಹೆ ಇಷ್ಟು ಬೇಗ ಆಗುತ್ತದೆ ಎಂದು ಖಂಡಿತವಾಗಿಯೂ ನಾನು ಎಣಿಸಿರಲಿಲ್ಲ.
ನಿಜ ಹೇಳ ಬೇಕೆಂದರೆ ಜಗದೀಶ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿ. ಬಿಗ್ ಬಾಸ್ ನಲ್ಲಿ ಎಲ್ಲರನ್ನೂ ಪ್ರಚೋದಿಸುವ, ಕೆರಳಿಸುವಂತಹ, ಪದೇ ಪದೇ ಜಗಳವಾಡುವಂತಹ ವ್ಯಕ್ತಿಯೇ ಹೆಚ್ಚಿನ ಖ್ಯಾತಿ ಪಡೆಯುತ್ತಾನೆ ಎಂಬುದನ್ನು ಈಗಾಗಲೇ, ಅಕುಲ್ ಬಾಲಾಜಿ, ರೋಹಿತ್ ಪಟೇಲ್, ಗುರುಪ್ರಸಾದ್, ಹುಚ್ಚಾ ವೆಂಕಟ್ ಪ್ರಥಮ್, ಕಿರಿಕ್ ಕೀರ್ತಿ, ನಿರಂಜನ್ ದೇಶಪಾಂಡೆ, ದಿವಾಕರ್, ಆಂಡ್ರ್ಯೂ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರ್ಗಿ, ಭುವನ್ ಪೊನ್ನಣ್ಣ, ರೂಪೇಶ್ ರಾಜಣ್ಣ, ಮಂಜು ಪಾವಗಡ, ವಿನಯ್ ಗೌಡ, ರಕ್ಷಕ್, ಆರ್ಯವರ್ಧನ್ ನಂತಹವರಿಂದ ನೋಡಿದ್ದೇವೆ. ಇವರೆಲ್ಲರನ್ನೂ ತಕ್ಕಡಿಯ ಒಂದು ಭಾಗದಲ್ಲಿ ಕೂರಿಸಿ ತಕ್ಕಡಿಯ ಮತ್ತೊಂದು ಭಾಗದಲ್ಲಿ ಜಗದೀಶ್ ಅವರನ್ನು ಕೂರಿಸಿದರೆ ಕುಕೃತ್ಯದಲ್ಲಿ ನಿಸ್ಸಂದೇಹವಾಗಿ ಜಗದೀಶ್ ಹೆಚ್ಚಾಗಿ ತೂರುತ್ತಾರೆ ಎಂದರೂ ತಪ್ಪಾಗದು.
ಹುಚ್ಚಾ ವೆಂಕಟ್ ಹೊರತು ಪಡಿಸಿ ಉಳಿದವರೆಲ್ಲರೂ ಆಟದ ವಿಷಯದಲ್ಲಿ ಬಹಳ ಆಕ್ರಮಣಕಾರಿಯಾಗಿ ಆಡುತ್ತಾ, ಪರಸ್ಪರ ಹೊಡೆದಾಟ ನಡೆಸಿದ್ದನ್ನು ನೋಡಿದ್ದೆವಾದರೂ ಅವರ್ಯಾರೂ ಸಹಾ ಬಿಗ್ ಬಾಸ್ ವಿರುದ್ಧವೇ ಅವಾಚ್ಯ ಪದಗಳನ್ನು ಎಂದೂ ಬಳಸಿರಲಿಲ್ಲ. ಬಿಗ್ ಬಾಸ್ ಗೆ ಬರುವ ಮುನ್ನವೇ ಆ ಕಾರ್ಯಕ್ರಮದ ಎಲ್ಲಾ ನಿಯಮಾವಳಿಗಳನ್ನೂ ಸ್ಪರ್ಧಿಗಳಿಗೆ ತಿಳಿಸಿ ಅವರು ಒಪ್ಪಿ ಸಹಿ ಹಾಕಿದ ನಂತರವೇ ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳಲಾಗಿರುತ್ತದೆ. ಕಾರ್ಯಕ್ರಮದಲ್ಲಿ ಇರುವಾಗ ಮತ್ತು ಕಾರ್ಯಕ್ರಮದಿಂದ ಹೊರಬಂದ ನಂತರವೂ ಬಿಗ್ ಬಾಸ್ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ಮಾತುಗಳನ್ನು ಆಡಬಾರದು ಎಂಬ ನಿಯಮವಿದ್ದು, ಅಲ್ಲಿ ಇಲ್ಲಿ ರಕ್ಷಕ್ ಮತ್ತು ಆರ್ಯವರ್ಧನ್ ರಂತಹ ಹರುಕುಬಾಯಿಯವರು ಒಂದೆರಡು ಮಾತುಗಳನ್ನು ಆಡಿದ್ದರ ಹೊರತಾಗಿ ಉಳಿದವರೆಲ್ಲರೂ ಬಿಗ್ ಬಾಸ್ ನಿಯಮಾವಳಿಗೆ ಬದ್ಧರಾಗಿರುವುದು ಗಮನಾರ್ಹವಾಗಿದೆ.
ಏಳು ಕೋಟಿ ಕನ್ನಡಿಗರಲ್ಲಿ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಪ್ರತೀ ವರ್ಷ 18-222 ಜನಕ್ಕೆ ಮಾತ್ರವೇ ಅವಕಾಶ ಸಿಗುವ ಕಾರಣದಿಂದ ಅಲ್ಲಿ ಕೇವಲ ಒಂದು ವಾರಗಳ ಕಾಲ ಭಾಗವಹಿಸಿದ್ದರೂ ವರ್ಷಾನು ವರ್ಷಗಳ ಕಾಲ ಜನರು ಅವರನ್ನು ಬಿಗ್ ಬಾಸ್ ಸ್ಪರ್ಧಿ ಎಂದೇ ಗುರುತಿಸುತ್ತಾರೆ ಎನ್ನುವ ಕಾರಣದಿಂದ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲು ನಾ ಮುಂದು, ತಾ ಮುಂದು ಎಂದು ಸ್ಪರ್ಧಿಗಳು ಹಾತೊರೆಯುವಾಗ, ತನಗೆ ಸಿಕ್ಕ ಅವಕಾಶವನ್ನು ಜಗದೀಶ್ ತನ್ನ ಕೆಟ್ಟ ಮನಸ್ಥಿತಿ, ಹರುಕು ಬಾಯಿ ಮತ್ತು ಅಗ್ಗದ ಪ್ರಚಾರ ಪ್ರಿಯತೆಯಿಂದಾಗಿ ಕಳೆದು ಕೊಂಡಿರುವುದು ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ ಎಂದರೂ ತಪ್ಪಾಗದು.
ಬಿಗ್ ಬಾಸ್ ಗೆ ಬರುವ ಸ್ಪರ್ಧಿಗಳ ಪೂರ್ವಾಪರಗಳು ಏನೇ ಇದ್ದರೂ, ಒಮ್ಮೆ ಬಿಗ್ ಬಾಸ್ ಮನೆಗೆ ಹೋದ ನಂತರ ಅವರೆಲ್ಲರೂ ಸಮಾನ ಸ್ಪರ್ಧಿಗಳು. ಹಾಗಾಗಿ ಅಲ್ಲಿ ನಡೆಯುವ ಹಾರಾಟ, ಹೋರಾಟಗಳೆಲ್ಲವೂ ಅಲ್ಲಿನ ವಿಷಯಗಳಿಗಷ್ಟೇ ಸೀಮಿತವಾಗಿರಬೇಕೇ ಹೊರತು ಅವರ ಹೊರ ಜಗತ್ತಿನ ವ್ಯಕ್ತಿತ್ವಕ್ಕೆ ಸಂಬಂಧಿಸಬಾರದು. ದುರಾದೃಷ್ಟವಷಾತ್ ಜಗದೀಶ್ ಆವರು ಇದನ್ನು ಅರ್ಥ ಮಾಡಿಕೊಳ್ಳದೇ, ಮೊದಲನೇ ದಿನದಿಂದಲೇ ನರಕವಾಸಿಗಳಿಗೆ ಬಿಸಿ ನೀರು ಕೊಡುತ್ತಾ, ಅವರಿಗೆ ಕದ್ದು ಮುಚ್ಚಿ ಸೇಬನ್ನು ತಂದು ಕೊಡುತ್ತಾ ಬಿಗ್ ಬಾಸ್ ನಿಯಮವನ್ನು ಮುರಿಯುತ್ತಲೇ ತಮ್ಮ ಅಟವನ್ನು ಆರಂಭಿಸಿದ ಜಗದೀಶ್ ನಂತರ ತಾನು ಲಾಯರ್ ನನ್ನ ವಿರುದ್ಧ ಯಾರಾದರೂ ಮಾತನಾಡಿದರೆ ಹೊರ ಬಂದ ಮೇಲೆ ಕೇಸ್ ಹಾಕುತ್ತೇನೆ ಎಂದು ಭಯ ಮೂಡಿಸುವ ಮೂಲಕ ಆಟವನ್ನು ಮುಂದುವರೆಸಿ, ತನ್ನ ಬಳಿ ಅಷ್ಟೊಂದು ದುಡ್ಡಿದೆ, ನಾನು ಬಿಗ್ ಬಾಸ್ ಷೋವನನ್ನೇ ಕೊಂಡು ಕೊಳ್ಳುತ್ತೇನೆ. ಈ ಕಾರ್ಯಕ್ರಮ ಒಂದು ಬೋಗಸ್, ಇದನ್ನು ಎಕ್ಸ್ ಪೋಸ್ ಮಾಡುತ್ತೇನೆ. ಈ ಕಾರ್ಯಕ್ರಮವನ್ನೇ ನಿಲ್ಲಿಸಿ ಬಿಡುತ್ತೇನೆ. ಎಂದು ಹಾರಾಡಿ ಮೊದಲ ವಾರಾಂತ್ಯದ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರ ಕೈಯಲ್ಲಿ ತಪರಾಕಿ ಹಾಕಿಸಿಕೊಂಡಿದ್ದನ್ನು ಎಲ್ಲರೂ ನೋಡಿದ್ದೇವೆ.
ಎರಡನೇ ವಾರದ ಮೊದಲೆರಡು ದಿನ ಸುಮ್ಮನಿದ್ದ ಜಗದೀಶ್ ನಂತರ ನಾಯಿ ಬಾಲಕ್ಕೆ ಎಷ್ಟೇ ದಬ್ಬೇ ಕಟ್ಟಿದರೂ ಅದು ಡೊಂಕೇ ಎನ್ನುವಂತೆ ತನ್ನ ಹಿಂದಿನ ಹರುಕುಬಾಯಿ ಚಾಳಿಯನ್ನೇ ಮುಂದುವರಿಸಿದ ಜಗದೀಶ್ ಪದೇ ಪದೇ ಎಲ್ಲರೊಡನೇ ಮಾತಿನ ಚಕಮಕಿ ನಡೆಯುತ್ತಲೇ ಮನೆಯ ಎಲ್ಲಾ ಸ್ಪರ್ಧಿಗಳ ನಡುವೆಯೂ ವೈಮನಸ್ಯತೆಯನ್ನು ಬೆಳೆಸಿಕೊಂಡಿದ್ದಲ್ಲದೇ, ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಎಂಬುದನ್ನೂ ಮರೆತು ಹೆಣ್ಣು ಮಕ್ಕಳ ಒಳ ಉಡುಪುಗಳ ಬಗ್ಗೆಯೂ ಮಾತನಾಡುವ ಮೂಲಕ ಎಲ್ಲಾ ಹೆಣ್ಣು ಮಕ್ಕಳಿಗೆ ಮುಜುಗೊರವನ್ನುಂಟು ಮಾಡಿದ್ದಂತೂ ಅಕ್ಷಮ್ಯ ಅಪರಾಧವೇ ಸರಿ.
ಹೀಗೆ ಹಂಗಸರು ಮತ್ತು ಗಂಡಸರು ಎಂಬುದನ್ನೂ ನೋಡದೇ ಎಲ್ಲರನ್ನೂ ಏಕ ವಚನದಲ್ಲಿ ಬೈದಾಡುತ್ತಾ, ಅನಾವಶ್ಯಕವಾಗಿ ಅವರ ಮೇಲೆ ಏರಿ ಹೋಗುತ್ತಾ ಮನೆಯವರ ಎಲ್ಲರ ಕೋಪಕ್ಕೆ ಗುರಿಯಾಗಿದ್ದರಿಂದಲೇ ಸಹಜವಾಗಿ ಜಗದೀಶ್ ಅವರ ವಿರುದ್ಧ ಎಲ್ಲಾ ಸ್ಪರ್ಧಿಗಳೂ ತಿರುಗಿ ಬಿದ್ದಿದ್ದ ಕಾರಣ ಜಗದೀಶ್ ಏಕಾಂಗಿಯಾಗಿ ಬಿಟ್ಟಿದ್ದರು. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲಾ ಎನ್ನುವಂತೆ ಗುಂಪಾಗಿ ಬರುವುದು ಹಂದಿಗಳಾದರೇ, ಒಂಟಿಯಾಗಿ ಬರುವುದು ಸಿಂಹ ಎನ್ನುವ ರಜನೀಕಾಂತ್ ಅವರ ಸಿನಿಮಾ ಡೈಲಾಗ್ ಹೊಡೆಯುತ್ತಾ, ಆತ್ಮರತಿಯಂತೆ ತನ್ನನ್ನೇ ತಾನೂ ಹೊಗಳಿಕೊಳ್ಳುತ್ತಿದ್ದದ್ದೂ ಹಾಸ್ಯಾಸ್ಪದವಾಗಿತ್ತು.
ಒಂಟಿಯಾಗಿದ್ದ ಜಗದೀಶ್ ಮಾಡಿದ್ದೆಲ್ಲವೂ ತಪ್ಪು ಎಂದು ಹೇಳಲಾಗದು. ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಮನೆಯಲ್ಲಿದ್ದ ಸ್ಪರ್ಧಿಗಳೆಲ್ಲರೂ ಅವರ ವಿರುದ್ಧ ತಿರುಗಿ ಬಿದ್ದಾಗ, ತಮ್ಮ ವಯಸ್ಸು, ಅನುಭವ ಎಲ್ಲವನ್ನೂ ಬಳಸಿಕೊಂಡು ತಾಳ್ಮೆ ವಹಿಸಿದ್ದಲ್ಲಿ ಎಲ್ಲವೂ ಚೆನ್ನಾಗಿರುತ್ತಿತ್ತು. ಆದರೆ ಎರಡನೇ ವಾರದಲ್ಲಿ ಸುದೀಪ್ ಜಗದೀಶ್ ಅವರೇ ನೀವು ಕರ್ನಾಟಕದ ಕ್ರಶ್ ಆಗಿದ್ದೀರಿ ಎಂದು ಹೇಳಿದ್ದನ್ನೇ ತಲೆಗೆ ಹಾಕಿಕೊಂಡು ತನ್ನ ಕೋಳಿ ಕೂಗಿದರೆ ಮಾತ್ರವೇ ಬೆಳಗಾಗೋದು ಎಂಬಂತೆ ತನ್ನಿಂದಲೇ ಈ ಶೋ ನಡೆಯುತ್ತಿರುವುದು. ತಾನೇ ಕಂಟೆಂಟ್ ಕೊಡುತ್ತಿರುವುದು. ಹಾಗಾಗಿ ಆನೆ ನಡೆದದ್ದೇ ಹಾದಿ ಎನ್ನುವಂತೆ ತಾನು ಏನು ಮಾಡಿದರೂ ಎಲ್ಲವನ್ನೂ ಹೊರಗಿನ ಜನರ ಮತ್ತು ಬಿಗ್ ಬಾಸ್ ಸಹಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇ ಜಗದೀಶ್ ಅವರಿಗೆ ಮುಳುವಾಯಿತು.
ಮಾನಸಾ ಮತ್ತು ಚೈತ್ರಾ ಅವರಲ್ಲದೇ ಬಹಳಷ್ಟು ಹೆಣ್ಣು ಮಕ್ಕಳೊಂದಿಗೆ ಶರಂಪರ ಕಿತ್ತಾಟ ಮಾಡಿಕೊಂಡಿದ್ದಲ್ಲದೇ, ಹಂಸಾರ ವಿರುದ್ಧ ಅವಾಚ್ಯಪದ ಬಳಸಿದ ಕುರಿತಾಗಿ ಗೊಲ್ಡ್ ಸುರೇಶ್ ಅವರೊಂದಿಗೆ ಆರಂಭವಾದ ಜಗಳ ನಂತರ ಉಗ್ರಂ ಮಂಜು ನೊಂದಿಗೆ ಮುಂದುವರೆದು ಅಂತಿಮವಾಗಿ ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ತಳ್ಳಾಟ ನಡೆದು ಬಿಗ್ ಬಾಸ್ ನಿಯಮಾವಳಿಯನ್ನು ಮುರಿದ ಕಾರಣ, ಜಗದೀಶ್ ಮತ್ತು ರಂಜಿತ್ ಅವರನ್ನು ಬಿಗ್ ಬಾಸ್ 11 ಕಾರ್ಯಕ್ರಮದಿಂದ ಶಿಸ್ತಿನ ರೂಪದಲ್ಲಿ ಹೊರಹಾಕಲಾಗಿದೆ.
ಎಂದಿನಂತೆ ಬೆಳಗೊಂದು ರೀತಿ ರಾತ್ರಿಯೊಂದು ರೀತಿಯಾಗಿ ವರ್ತಿಸುವ ಜಗದೀಶ್ ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಬಿಗ್ ಬಾಸ್ ಒಂದು ವ್ಯಕ್ತಿಯ ಜೀವನವನ್ನು ತೋರಿಸುವಂತ ಕನ್ನಡಿ. ನಾನು ಸಹ ಅಲ್ಲಿ ಸ್ಪರ್ಧಿಸಿದಾಗ ನನ್ನ ನಿಜವಾದ ಮುಖ ನೋಡಿದಾಗಲೂ ನನಗೆ ಆಶ್ಚರ್ಯ ಆಯ್ತು. ನನ್ನಲ್ಲಿ ಅಡಗಿದ ಕೋಪ, ಪ್ರತಿಭೆ ಆಗಿರಬೋದು ಎಲ್ಲವೂ ಅರ್ಥವಾಗಿದೆ. ನಿಜವಾಗಲೂ ನಾವು ಅದೃಷ್ಟವಂತರು. ಎಷ್ಟೋ ಕೋಟಿ ಜನಗಳ ಮಧ್ಯೆ ಬಿಗ್ ಬಾಸ್‌ಗೆ ಭಾಗಿಯಾಗುವ ಅವಕಾಶ ನಮ್ಮ ಅದೃಷ್ಟ. ಅದನ್ನು ವಿಭಿನ್ನವಾಗಿ ತೋರಿಸುವ ಮೀಡಿಯಾ, ಎಂಜಾಯ್ ಮಾಡಿದಂತೆ ವೀಕ್ಷಕರು. ನನ್ನ ಫ್ಯಾನ್ಸ್‌ಗೂ ವಂದನೆಗಳು. ನಾನು ಬಿಗ್ ಬಾಸ್ ಮಿಸ್ ಮಾಡಿಕೊಳ್ತೇನೆ ಎಂದಿದ್ದಾರೆ. ಹಾಗೇ ಮಾತನ್ನು ಮುಂದುವರೆಸಿ, ಸುದೀಪ್ ನನ್ನ ಹೀರೋ ಹಾಗಾಗಿ ದಯವಿಟ್ಟು ನನ್ನ ಕ್ಷಮೆಯನ್ನು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಉಳಿದೆಲ್ಲಾ ಸ್ಪರ್ಧಿಗಳು ನನ್ನನ್ನು ಕ್ಷಮಿಸಿ. ನೀವೆಲ್ಲ ತುಂಬಾ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರು. ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ. ಈ ನಿಟ್ಟಿನಲ್ಲಿ ನನ್ನಿಂದ ಕೆಲವು ತಪ್ಪುಗಳು ಆಗಿವೆ. ಅದು ನಟನೆ ಅಥವಾ ಮನರಂಜನೆಯ ಒಂದು ಭಾಗ ಅಷ್ಟೇ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ ಎಂದು ಹೇಳಿದ್ದಾರೆ.
ಮಾತಿಗೆ ಮುಂಚೆ ನಾನು ಸಿ.ಎಂ ಕ್ಯಾಂಡಿಡೇಟ್. ಮುಂದೊಮ್ಮೆ ನಾನು ಈ ರಾಜ್ಯದ ಮುಖ್ಯಮಂತ್ರಿ ಮತ್ತು ಈ ದೇಶದ ಪ್ರಧಾನ ಮಂತ್ರಿ ಆಗುವಂತಹವನು ಎಂದು ಕೊಚ್ಚಿಕೊಳ್ಳುವ ಜಂಬ ಕೊಚ್ಚುವ ಉತ್ತರ ಕುಮಾರ ಜಗದೀಶ್ ಆಡಬಾರದ್ದೆಲ್ಲವನ್ನೂ ಆಡಿ, ಈಗ ಕ್ಷಮೆ ಕೇಳಿದರೆ ಕ್ಷಮಿಸುವ ವ್ಯವಧಾನ ಯಾರಿಗೂ ಇಲ್ಲ ಎನ್ನುವುದೇ ಪರಮ ಸತ್ಯ ಅಲ್ವೇ? ಒಟ್ಟಿನಲ್ಲಿ ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನಾ ಎನ್ನುವಂತೆ ಪ್ರಚಾರ ಪ್ರಿಯ ಜಗದೀಶ್ ಬಿಗ್ ಬಾಸ್ ನಿಂದ ಹೊರಹಾಕಲ್ಪಟ್ಟರೂ ಅವರ ಕುಚೇಷ್ಟೆಗಳನ್ನು ಇಷ್ಟ ಪಡುವ ಜನರ ನಡುವೆ ಅಲ್ಪ ಪ್ರಖ್ಯಾತಿಯನ್ನು ಪಡೆದಿದ್ದರೂ, ತಮ್ಮ ಸ್ವಯಂಕೃತಾಪರಾಧದಿಂದ ಹೆಚ್ಚಿನ ಕುಖ್ಯಾತಿಯನ್ನೇ ಪಡೆದಿದ್ದಾರೆ ಎನ್ನುವುದೇ ನಿಜವಾದ ಸತ್ಯ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ