ನಾಡಿನಾದ್ಯಂತ ಬಹಳ ಸಡಗರ ಮತ್ತು ಸಂಭ್ರಮಗಳಿಂದ ಐದು ದಿನಗಳ ಕಾಲ ಆಚರಿಸುವ ದೀಪಾವಳಿ ಹಬ್ಬ ಆರಂಭವಾಗುವುದೇ ಆಶ್ವಯುಜದ ಮಾಸದ ಕಡೇ ಮೂರು ದಿನಗಳು ಮತ್ತು ಕಾರ್ತೀಕ ಮಾಸದ ಆರಂಭದ ಎರಡು ದಿನಗಳು. ಆಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು. ನಮ್ಮ ಹಳೇ ಮೈಸೂರು ಭಾಗದಲ್ಲಿ ಇದನ್ನು ನೀರು ತುಂಬವ ಹಬ್ಬ ಎಂದು ಆಚರಿಸಿದರೆ, ಉತ್ತರದ ಭಾರತಾಧ್ಯಂತ ಈ ದಿನವನ್ನು ಧನ್ವಂತರಿ ತ್ರಯೋದಶಿ ಅಥವಾ ಧನ್ ತೆರಸ್ ಎಂದು ಆಚರಿಸಲಾಗುತ್ತದೆ. ಈ ದಿನ ಗುರು ಧನ್ವಂತರಿಯವರ ಹುಟ್ಟಿದ ದಿನವಾಗಿರುವುದರಿಂದ ವಿಶೇಷವಾಗಿ ಸಮೃದ್ಧಿ ಮತ್ತು ಬುದ್ಧಿಯ ಪ್ರತೀಕವಾದ ಲಕ್ಷ್ಮೀ ಮತ್ತು ಗಣೇಶನ ಜೊತೆಗೆ ಸಂಪತ್ತಿನ ದೇವರು ಕುಬೇರ ಮತ್ತು ಆರೋಗ್ಯದ ದೇವರಾದ ಧನ್ವಂತರಿಯನ್ನು ಪೂಜಿಸಿ ಹೊಸ ಬಟ್ಟೆ, ಪಾತ್ರೆ, ಬಂಗಾರ, ಬೆಳ್ಳಿಯನ್ನು ಖರೀದಿಸಿದರೆ, ಜೀವನ ಸುಖಃಮಯವಾಗಿರುತ್ತದೆ ಎಂಬ ನಂಬಿಕೆಯಿದೆ.ಇನ್ನು ಆಯುರ್ವೇದದ ದೃಷ್ಟಿಯಿಂದ ಆಯುರ್ವೇದದ ದೇವರಾಗಿರುವ ಧನ್ವಂತರಿಯನ್ನು ಉತ್ತಮ ಆರೋಗ್ಯ ಹಾಗೂ ರೋಗಗಳಿಂದ ಪರಿಹಾರವನ್ನು ನೀಡಲು ಪೂಜಿಸಲಾಗುತ್ತದೆ.
ಧನ್ವಂತರಿಯನ್ನು ಹಿಂದೂ ಸಂಪ್ರದಾಯದಲ್ಲಿ ವಿಷ್ಣುವಿನ ಅವತಾರ ಎಂದೇ ಪರಿಗಣಿಸಲಾಗಿದ್ದು, ವೇದ ಹಾಗೂ ಪುರಾಣಗಳಲ್ಲಿ ಧನ್ವಂತರಿಯನ್ನು ದೇವಾನು ದೇವತೆಗಳ ವೈದ್ಯನೆಂದೇ ಉಲ್ಲೇಖಿಸಲಾಗಿದೆ. ಧನ್ವಂತರಿರ್ದಿವೋದಾಸಃ ಕಾಶೀರಾ ಜೋ ಶ್ವಿನೀ ಸುತೌ| ನಕುಲಃ ಸಹದೇ ವೋ ರ್ಕಿಃ ಚ್ಯವನೋಜನಕೋ ಬುಧಃ| ಜಾಬಾಲೋ ಜಾಜಲಿಃ ಪೈಲಃ ಕರಥಃ ಅಗಸ್ತ್ಯ ಏವ ಚ| ಏತೇ ವೇದಾಂಗ ವೇದಜ್ಞಃ ಷೋಡಶ ವ್ಯಾಧಿನಾಶಕಾಃ|| ನಮ್ಮ ಆರೋಗ್ಯವು ಉತ್ತಮವಾಗಿರಲು ಮತ್ತು ಸರ್ವ ರೋಗ ನಿವಾರನೆಯಾಗಲು ಪ್ರತೀ ದಿನವೂ ಸ್ಮರಿಸಲೇ ಬೇಕಾದ 16 ಜನರ ಹೆಸರಿರುವ ಈ ಶ್ಲೋಕದಲ್ಲಿ ಧನ್ವಂತರಿಯವರ ಹೆಸರೇ ಮೊದಲು ಇರುವುದು ಗಮನಾರ್ಹವಾಗಿದೆ.
ಈ ಧನ್ವಂತರಿ ಜಯಂತಿ ಅಥವಾ ಧನತೇರಸ್ ಹಬ್ಬವನ್ನು ಆಚರಿಸುವುದರ ಹಿಂದೆ ಪೌರಾಣಿಕ ಹಿನ್ನಲೆಯಿದ್ದು, ದೇವಾನಾ ದೇವತೆಗಳ ರಾಜನಾದ ದೇವೇಂದ್ರನ ಅಸಭ್ಯ ವರ್ತನೆಯಿಂದಾಗಿ ಬೇಸತ ಮಹಾ ಕೋಪಿಷ್ಠರಾದ ಮಹರ್ಷಿ ದುರ್ವಾಸರು ದೇವತೆಗಳ ಶಕ್ತಿ ಕ್ಷೀಣಿಸುವಂತೆ ಶಾಪ ನೀಡಿದ ಕಾರಣದಿಂದಾಗಿ ಅಷ್ಟಲಕ್ಷ್ಮಿಯು ಭೂಮಿಯಿಂದ ದೂರ ಹೋಗುತ್ತಾಳೆ. ಇದರಿಂದ ಗಾಬರಿಗೊಂಡ ದೇವತೆಗಳು ತಮ್ಮ ಶಕ್ತಿಯನ್ನು ಪುನರ್ಸ್ಥಾಪಿಸುವ ಸಲುವಾಗಿ ತ್ರಿಮೂರ್ತಿಗಳ ಬಳಿಗೆ ಹೋಗಿ ತಮ್ಮ ಸಮಸ್ಯೆಯನ್ನು ಪರಿಹರಿಸಲು ಕೋರಿಕೊಳ್ಳುತ್ತಾರೆ. ಆಗ ಪರಶಿವನು ಅವರಿಗೆ ಸಮುದ್ರ ಮಂಥನವನ್ನು ಮಾಡಿ ಅದರಿಂದ ಹೊರಬರುವ ಅಮೃತವನ್ನು ಕುಡಿದವರು ಶಕ್ತಿವಂತರೂ ಮತ್ತು ಅರಮರಾಗುತ್ತಾರೆ ಎಂದು ಸೂಚಿಸುತ್ತಾನೆ. ಈ ಕಠಿಣ ಕಾರ್ಯಕ್ರಮ ಕೇವಲ ದೇವತೆಗಳಿಂದ ಮಾತ್ರವೇ ಆಗದು ಎಂಬುದನ್ನು ಅರಿತ ದೇವೇಂದ್ರ ಮತ್ತವರ ತಂಡ ಸಮುದ್ರ ಮಂಥನದ ನಂತರ ಬರುವ ಅಮೃತವನ್ನು ಇಬ್ಬರೂ ಹಂಚಿಕೊಳ್ಳುವ ಆಸೆಯನ್ನು ಒಡ್ಡಿ ರಾಕ್ಷಸರ ಸಹಾಯವನ್ನು ಕೋರುತ್ತಾರೆ.
ಅಮರರಾಗುವ ಅಸೆಯಿಂದ ರಾಕ್ಷಸರು ಈ ಮಹಾನ್ ಕಾರ್ಯದಲ್ಲಿ ಭಾಗಿಗಳಾಗಲು ಒಪ್ಪಿ ಮಂದಾರ ಪರ್ವರ್ತವನ್ನು ಕಡಗೋಲನ್ನಾಗಿಸಿ, ವಿಷ್ಣುವಿನ ಅಸನ ಆದಿಶೇಷನನ್ನು ಹಗ್ಗದಂತೆ ಆ ಮಂದಾರ ಪರ್ವತಕ್ಕೆ ಸುತ್ತಿ ಎರಡೂ ಕಡೆಯಿಂದ ಸಮುದ್ರ ಮಂಥನವನ್ನು ಆರಂಭಿಸುತ್ತಾರೆ. ಅದೇ ಸಮಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ದೇವತೆಗಳಿಗೆ ಕಳೆದು ಹೋದ ಶಕ್ತಿಯು ಹಿಂದಿರುಗಿ ಬರಲಿ ಎಂದು ಭೂಲೋಕದಲ್ಲಿದ್ದ ಋಷಿ ಮುನಿಗಳು ಇಡೀ ದಿನ ಉಪವಾಸವಿದ್ದು ಶ್ರೀ ಸೂಕ್ತ, ಪುರುಷಸೂಕ್ತವನ್ನು ಪಠಿಸುತ್ತಾ ಯಜ್ಞಯಾಗಾದಿಗಳನ್ನು ಮಾಡಿ ದೇವತೆಗಳಿಗೆ ಹವಿಸ್ಸನ್ನು ಕೊಟ್ಟು, ಭಗವಂತನನ್ನು ಸ್ಮರಣೆ ಮಾಡುತ್ತಾರೆ.
ಈ ಸಾಗರವನ್ನು ಮಂಥನ ಮಾಡುವ ಸಮಯದಲ್ಲಿ ಸರ್ಪರಾಜನಾದ ವಾಸುಕಿಯ ಮುಖದ ಭಾಗವನ್ನು ರಾಕ್ಷಸರಿಗೆ ನೀಡಿ, ದೇವತೆಗಳು ಬಾಲವನ್ನು ಹಿಡಿದು ಮಥಿಸಲು ಪ್ರಾರಂಭಿಸಿದರು. ಸಾಗರದ ಮಂಥನದಿಂದ ಹದಿನಾಲ್ಕು ಪ್ರಮುಖ ರತ್ನಗಳು ಉತ್ಪತ್ತಿಯಾಗಿ, ಅವುಗಳಲ್ಲಿ ಹದಿನಾಲ್ಕನೆಯ ರತ್ನದ ರೂಪದಲ್ಲಿ ಕೈಯಲ್ಲಿ ಅಮೃತದ ಮಡಕೆಯನ್ನು ಹಿಡಿದಿದ್ದ ಧನ್ವಂತರಿಯು ಪ್ರತ್ಯಕ್ಷವಾಗುತ್ತಾನೆ. ಭಗವಾನ್ ವಿಷ್ಣುವು ಅವನ ಕೈಯ್ಯಲ್ಲಿದ್ದ ಅಮೃತವನ್ನು ಪಡೆದುಕೊಂಡು ಧನ್ವಂತರಿಯನ್ನು ದೇವತೆಗಳ ವೈದ್ಯನನ್ನಾಗಿ ನೇಮಿಸಿದ್ದಲ್ಲದೇ, ಸಸ್ಯಗಳು ಮತ್ತು ಔಷಧಿಗಳ ಅಧಿಪತಿಯಾಗಿಸುತ್ತಾನೆ. ಇದೇ ಕಾರಣದಿಂದಾಗಿ ಇಂದಿಗೂ ಸಹಾ ಭೂಲೋಕದಲ್ಲಿರುವ ನೂರಾರು ಗಿಡ ಮರಗಳಿಗೆ ಔಷಧೀಯ ಗುಣಗಳು ದೊರಕಿತು ಎನ್ನುವ ನಂಬಿಕೆ ಇದೆ. ಹೀಗೆ ಧನ್ವಂತರಿ ಪ್ರತ್ಯಕ್ಷವಾದ ದಿನವು ಆಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿ ಇದ್ದ ಕಾರಣ ಆ ದಿನವನ್ನು ಧನ್ವಂತರಿ ಜಯಂತಿಯ ರೂಪದಲ್ಲಿ ಆಚರಣೆಗೆ ಬಂದಿದೆ.
ಇದೇ ಕಾರಣಕ್ಕಾಗಿಯೇ ಆಯುರ್ವೇದದಲ್ಲಿ ಧನ್ವಂತರಿಯನ್ನು ಬಹಳ ಪೂಜ್ಯಭಾವನೆಯಿಂದ ನೋಡಲಾಗುತ್ತದೆ. ಇನ್ನು ಆಯುರ್ವೇದದ ಪ್ರಖಾಂಡ ಪಂಡಿತರು ಎಂದೇ ಪ್ರಖ್ಯಾತರಾಗಿರುವ ಸುಶ್ರುತ, ಚರಕ, ಪರಾಶರ, ಔಪಧೇನವ, ಕ್ಷಾರಪಾಣಿ ಮೊದಲಾದ ಆಯುರ್ವೇದಾಚಾರ್ಯರೆಲ್ಲರೂ ಧನ್ವಂತರಿಯನ್ನು ತಮ್ಮ ಗುರುಗಳು ಎಂದೇ ಪರಿಗಣಿಸಿದ್ದಾರೆ. ಅದರಲ್ಲೂ ಸುಶ್ರುತರು ಧನ್ವಂತರಿಯ ಉಪದೇಶವನ್ನು ತಮ್ಮ ಗ್ರಂಥದಲ್ಲಿ ದಾಖಲಿಸಿ ಆಯುರ್ವೇದ ಶಾಸ್ತ್ರಾಧ್ಯಯನ ಮಾಡುವವರಿಗೆ ಭದ್ರ ಬುನಾದಿ ಒದಗಿಸಿರುವುದು ಇಲ್ಲಿ ಪ್ರಮುಖವಾಗಿದೆ. ಇದೇ ಕಾರಣಕ್ಕಾಗಿ ಇತ್ತೀಚೆಗೆ ಕೇಂದ್ರ ಸರ್ಕಾರವೂ ಸಹಾ ಧನ್ವಂತರಿ ಜಯಂತಿಯನ್ನು ರಾಷ್ಟ್ರೀಯ ಆಯುರ್ವೇದ ದಿನ ಎಂದು ಘೋಷಿಸಿದೆ.
ಸಹಜವಾಗಿಯೇ ಧನ್ವಂತರಿ ಜಯಂತಿಯಂದು ಬೆಳಿಗ್ಗೆ ಎದ್ದು ಎಲ್ಲರೂ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಶುಚಿರ್ಭೂತರಾಗಿ ದೇವರ ಮನೆಯಲ್ಲಿ ಅಮೃತ ಕಳಸವನ್ನು ಹಿಡಿದಿರುವ ಧನ್ವಂತರಿ ಪಟಕ್ಕೆ ಅರಿಶಿನ ಕುಂಕುಮ ಮತ್ತು ಹೂವುಗಳಿಂದ ಪೂಜಿಸಿ ಭಕ್ತಿಯಿಂದ ತಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ನೀಡಬೇಕೆಂದು ಕೋರಿಕೊಳ್ಳುತ್ತಾ ಮನೆಯ ಮುಖ್ಯ ಬಾಗಿಲಲ್ಲಿ ಯಮದೇವನನ್ನು ಸ್ಮರಿಸುವ ಸಂಪ್ರದಾಯವಿದೆ. ಇನ್ನು ದೇವರ ನೈವೇದ್ಯಕ್ಕೆ ಸಿಹಿ ತಿಂಡಿಗಳನ್ನು ತಯಾರಿಸಿ, ಫಲತಾಂಬೂಲಗಳ ಜೊತೆ ಅದನ್ನು ದಕ್ಷಿಣಾಭಿಮುಖವಾಗಿ ಇರಿಸಿ ಅದರ ಮೇಲೆ ದೀಪವನ್ನು ಇಟ್ಟು ಪೂಜೆ ಮಾಡುವ ಸಂಪ್ರದಾಯವಿದೆ. ಹೀಗೆ ದೇವರಿಗೆ ಭಕ್ತಿಯಿಂದ ಸಮರ್ಪಿಸಿದ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಎಲ್ಲರ ಆರೋಗ್ಯವನ್ನು ನೀಡಲಿ ಎಂದು ಕೇಳಿಕೊಂಡು ಸೇವಿಸುವುದು ರೂಢಿಯಲ್ಲಿದೆ.
ಇನ್ನು ಗರುಡ ಪುರಾಣದಲ್ಲಿರುವ ಧನ್ವಂತರಿ ವ್ರತಕಥೆಯಲ್ಲಿ ಧನ್ವಂತರಿ ಹೇಗೆ ಜನಿಸಿದ? ಧನ್ವಂತರಿ ಜಯಂತಿಯನ್ನು ಹೇಗೆ ಆಚರಿಸಬೇಕು? ಆ ಆಚರಣೆಯ ಮಹತ್ವವೇನು? ಮತ್ತು ಅಂದು ಪ್ರಸಾದವನ್ನು ನೈವೇದ್ಯಕ್ಕಿಡಬೇಕು ಎಂಬೆಲ್ಲದರ ಕುರಿತಾಗಿ ಸವಿರವಾಗಿತಿಳಿಸಲಾಗಿದೆ.
ಪ್ರಸಾದಕ್ಕಾಗಿ ಒಂದು ಪಾಲು ಗೋಧಿ ಹಿಟ್ಟು, ಎರಡು ಪಾಲು ಹಾಲು, ನಾಲ್ಕು ಪಾಲು ತುಪ್ಪ, ಆರು ಪಾಲು ಸಕ್ಕರೆಯೊಂದಿಗೆ ಕುಂಕುಮಕೇಸರಿ, ಏಲಕ್ಕಿ, ಲವಂಗ, ದ್ರಾಕ್ಷಿ, ಬಾದಾಮಿ ಇತ್ಯಾದಿಗಳನ್ನು ಹಾಕಿ ಪಾಕ ಮಾಡಿ ಧನ್ವಂತರಿಗೆ ನಿವೇದಿಸಬೇಕೆಂಬ ಉಲ್ಲೇಖವಿದೆ.
ಇನ್ನು ಭಾಗವತ, ಹರಿವಂಶದಲ್ಲಿಯೂ ಸಹಾ ಧನ್ವಂತರಿ ಅವತಾರದ ಕುರಿತಾದ ಉಲ್ಲೇಖವಿದದ್ದು, ಪ್ರಾಚೀನ ಆಯುರ್ವೇದಾಚಾರ್ಯರು ಶಲ್ಯತಂತ್ರ(ಸರ್ಜರಿ)ವನ್ನು ಕಾಶೀರಾಜ ಧನ್ವಂತರಿ ಉಪದೇಶದಿಂದ ವಿವರಿಸಿದ್ದಾರೆ. ಅವರ ಪ್ರಕಾರ ಧನ್ವಂತರಿ ಎಂಬ ಶಬ್ದಾರ್ಥವು ಧನು+ತರಿ ಎಂಬ ಎರಡು ಶಬ್ಧಗಳ ಸಮಾಗಮವಾಗಿದ್ದು, ಧನು ಎಂದರೆ ಶಸ್ತ್ರ ಮತ್ತು ತರಿ ಎಂದರೆ ಚಿಕಿತ್ಸಕ. ಹೀಗೆ ಯಾರು ಉತ್ತಮ ಶಸ್ತ್ರಚಿಕಿತ್ಸರು ಅಥಾತ್ ಸರ್ಜನ್ಸ್ ಆಗಿರುತ್ತಾರೋ ಅವರು ಅವರು ಧನ್ವಂತರಿ ಎಂದೆನಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯವನ್ನು ಮಂಡಿಸಲಾಗಿದೆ.
ಇನ್ನು ಅಮೃತವನ್ನು ತಂದ ಅನಂತರ ಬೇರೆ ಔಷಧಗಳ ಅಗತ್ಯವೇನಿದೆ ಎಂಬ ಜಿಜ್ಞಾಸೆಗೆ ಔಷಧ ಲತೆಗಳ ಬಳಕೆ ಕುರಿತು ವೇದದಲ್ಲಿಯೂದ್ದೂ ಅಮೃತತ್ವವು ಕೇವಲ ದೇವತೆಗಳಿಗಷ್ಟೇ ಸೀಮಿತವಾಗಿರದೇ, ಜನಸಾಮಾನ್ಯರಿಗೂ ತಲುಪಬೇಕೆಂಬ ಇಚ್ಚೆಯಿಂದ ಗಿಡ ಮರ ಬಳ್ಳಿಗೂ ಔಷಧೀಯ ಗುಣಗಳನ್ನಿಟ್ಟು ಧನ್ವಂತ್ರಿಯ ಮೂಲಕ ಆಯುರ್ವೇದದ ರೂಪದಲ್ಲಿ ತಲುಪಿಸಿರ ಬಹುದಲ್ಲವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ