ಯಾವುದೇ ಒಂದು ಕಾರ್ಯವನ್ನು ಸಾಧಿಸುವುದಕ್ಕೆ ಹಿಂದೆ ಸಮರ್ಥ ಗುರು ಇರಬೇಕು ಮತ್ತು ಮುಂದೆ ದಿಟ್ಟ ಗುರಿ ಇರಬೇಕು ಎಂಬ ಮಾತಿದೆ. ಅದೇ ರೀತಿಯಲ್ಲಿ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣಾ ಮುಕುತಿ ಎಂದು ಪುರಂದರದಾಸರೂ ಸಹಾ ಗುರುವಿನ ಮಹತ್ವದ ಬಗ್ಗೆ ಹೇಳಿದ್ದಾರೆ. ಕೆಲವೊಮ್ಮೆ ಗುರುವು ಎಂತಹ ಪ್ರಖಾಂಡ ಪಂದಿತರೇ ಆಗಿದ್ದರೂ ಅವರ ಸಾಧನೆ ಕೀರ್ತಿ ಎಲ್ಲವೂ ಅವರನ್ನೂ ಮೀರಿಸಿದ ಶಿಷ್ಯರಿಂದ ಲಭ್ಯವಾಗಿರುತ್ತದೆ. ಅಂತಹ ಗುರುವನ್ನು ಮೀರಿಸಿದ ಶಿಷ್ಯ ಪಿಟೀಲು ಚೌಡಯ್ಯನವರಾಗಿದ್ದರೇ ಅಂತಹ ವಿಶ್ವವಿಖ್ಯಾತ ಶಿಷ್ಯನನ್ನು ಸಂಗೀತ ಲೋಕಕ್ಕೆ ಕೊಟ್ಟ ಕೀರ್ತಿ ಶ್ರೀ ಬಿಡಾರಂ ಕೃಷ್ಣಪ್ಪನವರಿಗೆ ಸಲ್ಲುತ್ತದೆ. ಕೃಷ್ಣಪ್ಪನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಉಡುಪಿಯ ಬಳಿಯ ನಂದಳಿಕೆಯ ಗೌಡಸಾರಸ್ವತ ಪಂಗಡಕ್ಕೆ ಸೇರಿದವರಾದ, ಕೊಂಕಣಿ ಮಾತೃಭಾಷೆಯ ವಿಶ್ವನಾಥಯ್ಯನವರು ಧರ್ಮಸ್ಥಳದ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಬಹಳ ಪ್ರಖ್ಯಾತರಾಗಿದ್ದರು. 1866ರ ಕೃಷ್ಣಜನ್ಮಾಷ್ಟಮಿಯಂದು ಅವರ ಶ್ರೀಮತಿಯವರಾದ ಸರಸ್ವತಿಬಾಯಿಯವರು ಗಂಡು ಮಗುವಿಗೆ ಜನ್ಮ ನೀಡಿದ್ದ ಕಾರಣ ಆ ಮಗುವಿಗೆ ಕೃಷ್ಣ ಎಂದು ನಾಮಕರಣ ಮಾಡಿದ್ದರು. ಎಲ್ಲರಿಗೂ ತಿಳಿದಿರುವಂತೆ ಮೈಸೂರಿನ ಅರಸರು ಅದರಲ್ಲೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಕಲೆಗೆ ಪ್ರೋತ್ಸಾಹ ನೀಡುವುದರಲ್ಲಿ ಎತ್ತಿದ ಕೈ. ಸ್ವತಃ ಸಂಗೀತ ವಿದ್ವಾಂಸರಾಗಿದ್ದ ಮುಮ್ಮಡಿಯವರು ದೇಶ ವಿದೇಶಗಳಿಂದ ಸಂಗೀತ ವಿದ್ವಾಂಸರನ್ನು ಮೈಸೂರಿಗೆ ಕರೆತಂದು ಮೈಸೂರನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿಸಿದ್ದರು, ಅದೊಮ್ಮೆ ಮಹಾರಾಜರು ವಿಶ್ವನಾಥಯ್ಯನವರ ನಟನೆ ಮತ್ತು ಗಾಯನವನ್ನು ಕೇಳೀ ಮನಸೋತು ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ನೀಡಲು ಆಹ್ವಾನಿಸಿದರು.
ಮಹಾರಾಜರ ಆಹ್ವಾನದ ಮೇರೆಗೆ ವಿಶ್ವನಾಥ ಮತ್ತ್ತು ಸರಸ್ವತಿ ಬಾಯಿಯವರು ತಮ್ಮ ಮಕ್ಕಳಾದ ಸುಬ್ಬರಾಯಪ್ಪ ಮತ್ತು ಕೃಷ್ಣಪ್ಪನವರೊಂದಿಗೆ ಬಂದು ಶಿವರಾಮ್ ಪೇಟೆಯ ಬಿಡಾರವೊಂದರಲ್ಲಿ ಉಳಿದುಕೊಂಡ ಕಾರಣ, ಎಲ್ಲರೂ, ಅವರನ್ನು ಬಿಡಾರದವರು ಎಂದೇ ಕರೆಯಲಾರಂಭಿಸಿದ ಕಾರಣ, ಕೃಷ್ಣಪ್ಪನವರ ಜೊತೆ ಬಿಡಾರಂ ಎಂಬ ಹೆಸರು ಶಾಶ್ವತವಾಗಿ ಸೇರಿಕೊಂಡು ಬಿಡಾರಂ ಕೃಷ್ಣಪ್ಪ ಎಂದೇ ಪ್ರಸಿದ್ದರಾದರು. ಜೀವನವೆಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದು ಭಾವಿಸುತ್ತಿರುವಾಗಲೇ, ತಾನೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ಕೃಷ್ಣಪ್ಪನವರ ತಂದೆ ಅಕಾಲಿಕವಾಗಿ ನಿಧನ ಹೊಂದಿದ ಕಾರಣ, ಅವರ ಕುಟುಂಬರು ಅಕ್ಷರಶಃ ಬೀದಿ ಪಾಲಾದರು, ಜೀವನೋಪಾಯಕ್ಕಾಗಿ ಉತ್ತಮ ಶರೀರ ಮತ್ತು ಶಾರೀರವನ್ನು ಹೊಂದಿದ್ದ ಕೃಷ್ಣಪ್ಪ ಮತ್ತು ಅವರ ಅಣ್ಣ ಲವಕುಶರಂತೆ ಮೈಸೂರಿನ ಬೀದಿಯಲ್ಲಿ ಹಾಡುಗಳನ್ನು ಹಾಡುತ್ತಾ ಭಿಕ್ಷಾಟನೆ ಮಾಡುವ ಮೂಲಕ ದೈನಂದಿನ ಜೀವನವನ್ನು ನಡೆಸುವಂತಾಗಿತ್ತು.
ಸ್ವಲ್ಪ ಸ್ವಾಭಿಮಾನಿಯಾಗಿದ್ದ ಬಾಲಕ ಕೃಷ್ಣಪ್ಪನವರು ಅಣ್ಣನೊಂದಿಗೆ ಬೀದಿ ಬೀದಿ ಸುತ್ತಲು ಇಷ್ಟ ಪಡದೇ, ಅರಮನೆಯ ಆವರಣದಲ್ಲಿರುವ ಆಂಜನೇಯ ದೇವಾಲಯದ ಮುಂದೆ ತಮ್ಮ ಹರಿದ ಕರವಸ್ತ್ರವನ್ನು ಹಾಸಿ ತಮಗೆ ಗೊತ್ತಿದ್ದ ದೇವರನಾಮಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ, ಅಲ್ಲಿಗೆ ಬಂದವರು ಹಾಕುತ್ತಿದ್ದ ನಾಲ್ಕಾರು ಕಾಸಿನಲ್ಲೇ ಅವರ ಜೀವನ ನಡೆಯುತ್ತಿತ್ತು. ಉತ್ತಮವಾಗಿ ಹಾಡುತ್ತಿದ್ದ ಕೃಷ್ಣಪ್ಪನವರಿಗೆ ಮೈಸೂರಿನ ಸುಪ್ರಸಿದ್ಧ ಗಾಯಕರಲ್ಲಿ ಒಬ್ಬರಾದ ಶ್ರೀ ಕರೂರು ರಾಮಸ್ವಾಮಿ ಅವರ ಬಳಿ ಸಂಗೀತಶಿಕ್ಷಣ ಕೊಡಿಸಬೇಕೆಂಬ ಆಸೆ ಅವರ ತಾಯಿಯವರಿಗೆ ಇತ್ತಾದರೂ, ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಬಾಲಕ ಕೃಷ್ಣಪ್ಪನವರ ಸಿರಿಕಂಠಕ್ಕೆ ಮಾರುಹೋದ ಸಾಹುಕಾರ ತಿಮ್ಮಯ್ಯ ಎಂಬುವರು ಆಸ್ಥೆ ವಹಿಸಿ ಅದೇ ವಿದ್ವಾಂಸರ ಬಳಿ ಸಂಗೀತಾಭ್ಯಾಸಕ್ಕೆ ಸೇರಿಸಿದ ನಂತರ ಕೃಷ್ಣಪ್ಪನವರು ಶಾಸ್ತ್ರೀಯವಾಗಿ ಸಂಗೀತವನ್ನು ಬಹಳ ಆಸ್ಥೆಯಿಂದ ಕಲಿಯುತ್ತಿದ್ದಂತಹ ಸಂಧರ್ಭದಲ್ಲಿಯೇ ಮತ್ತೆ ಸಾಹುಕಾರ ತಿಮ್ಮಯ್ಯ ನವರ ಪ್ರಯತ್ನದಿಂದ ಮೈಸೂರಿನ ಅರಮನೆಯಲ್ಲಿ ಸಂಗೀತ ವಿದ್ವಾಂಸರಾಗಿ ನೇಮಕಗೊಂಡ ನಂತರ ಅವರ ಅರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆಯಲ್ಲದೇ, ಅಲ್ಲಿ ಅವರಿಗೆ ವೀಣಾ ಶೇಷಣ್ಣನವರ ಪರಿಚಯವಾದ ನಂತರ ಅವರ ಸಂಗೀತ ಶಿಕ್ಷಣ ಮತ್ತಷ್ಟೂ ಪಕ್ವವಾಗುತ್ತದೆ.
ಬಿಡಾರಂ ಕೃಷ್ಣಪ್ಪನವರಿಗೆ ದಾಸ ಶ್ರೇಷ್ಠರು ಮತ್ತು ಕರ್ನಾಟಕ ಸಂಗೀತ ಪಿತಾಮಹರಾದ ಶ್ರೀ ಪುರುಂದರ ದಾಸರು ಮತ್ತು ಕನಕದಾಸರ ಪದಗಳು, ವ್ಯಾಸತೀರ್ಥರ, ವಾದಿರಾಜರಿಂದ ವಿರಚಿತವಾದ ಅನುಪಮ ಕನ್ನಡ ಕೃತಿಗಳಷ್ಟೇ ಅಲ್ಲದೇ, ಶ್ರೀ ತ್ಯಾಗರಾಜರು, ಶ್ಯಾಮಾಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಬಗ್ಗೆಯೂ ಗೌರವವಿತ್ತಾದರೂ ಹೆಚ್ಚಿನ ಒಲವು ಮತ್ತು ಪ್ರಾಶಸ್ತ್ಯ ಸಜಹವಾಗಿ ಕನ್ನಡಕ್ಕೇ ಇತ್ತು. ಈಗಾಗಲೇ ತಿಳಿಸಿದಂತೆ ಮಹಾರಾಜರು ಉತ್ತರಭಾರತದಿಂದ ಅನೇಕ ವಿದ್ವಾಂಸರನ್ನು ಮೈಸೂರಿಗೆ ಆಹ್ವಾನಿಸಿ ಅವರ ಸಂಗೀತವನ್ನು ತಮ್ಮ ಅಸ್ಥಾನದ ವಿದ್ವಾಂಸರು ಮತ್ತು ಸಂಗೀತಾಸಕ್ತರು ಕೇಳಿ ಆನಂದಿಸುವುದಲ್ಲದೇ ಅದರಿಂದ ಜ್ಞಾನಾರ್ಜನೆ ಮಾಡಿಕೊಳ್ಳಲು ಸದವಕಾಶ ಕಲ್ಪಿಸುತ್ತಿದ್ದರ ಸಂಪೂರ್ಣ ಲಾಭವನ್ನು ಬಿಡಾರಂ ಕೃಷ್ಣಪ್ಪನವರು ಪಡೆದುಕೊಂಡರು. ಅಬ್ದುಲ್ ಕರೀಂಖಾನ್ ಎಂಬ ಪ್ರಖ್ಯಾತ ಹಿಂದೂಸ್ಥಾನಿ ಸಂಗೀತಗಾರರಿಂದ ಪ್ರಭಾವಿತರಾಗಿ ಅವರ ಸಂಗೀತದ ಮರ್ಮಗಳನ್ನು ಅರಿತು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡು ಕೆಲವೊಮ್ಮೆ ತಮ್ಮ ಕಛೇರಿಯಲ್ಲಿ ಹರಿದಾಸ ಪದಗಳ ಜೊತೆ ಹಿಂದಿ ಭಜನ್‌ಗಳನ್ನು ಸಹಾ ಹಾಡುತ್ತಿದ್ದದ್ದಲ್ಲದೇ, ಸೊಗಸಾಗಿ ಪಿಟೀಲು ನುಡಿಸುವುದರಲ್ಲೂ ಸಿದ್ಧಹಸ್ತರಾಗಿದ್ದರು.
ಹೀಗೆ ಕರ್ನಾಟಕ ಸಂಗೀತದ ಜೊತೆ ಕನ್ನಡದ ದೇವರನಾಮಗಳಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶೈಲಿಯನ್ನು ಅಳವಡಿಸಿ ಹಾಡುತ್ತಿದ್ದ ಅವರ ಗಾಯನ ಪ್ರತಿಭೆ ದೇಶದಲ್ಲೆಲ್ಲ ಹರಡಿದ ಪರಿಣಾಮವಾಗಿ ತಂಜಾವೂರು, ಮಧುರೈ, ದೇವಕೋಟೆ, ಮುಂಬಯಿ, ಗದ್ವಾಲ್ ಮುಂತಾದ ಸ್ಥಳಗಳಲ್ಲಿ ಹಲವಾರು ಬಾರಿ ಆಹ್ವಾನಿತರಾಗಿ ಜನಮನ್ನಣೆಗಳಿಸಿ ಕನ್ನಡ ದೇವರನಾಮ ಗಾಯನವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಲ್ಲದೇ, ಮೈಸೂರಿಗೆ ಕೀರ್ತಿ ತಂದುಕೊಟ್ಟರು. ಸಂಗೀತದಲ್ಲಿ ಅವರ ಪಾಂಡಿತ್ಯಕ್ಕಾಗಿ, ಅವರಿಗೆ ಶುದ್ದ ಸ್ವರಾಚಾರ್ಯ, ಪಲ್ಲವಿ ಕೃಷ್ಣಪ್ಪ ಮತ್ತು ಗಾನ ವಿಶಾರದ ಎಂಬ ಬಿರುದುಗಳು ಕೃಷ್ಣಪ್ಪನವರ ಪಾಲಾಗಿದ್ದಲ್ಲದೇ, ನಂತರ ದಿನಗಳಲ್ಲಿ ಸ್ವತಃ ಕೃಷ್ಣಪ್ಪನವರೇ ದೇವರನಾಮ ಮತ್ತು ಕೀರ್ತನೆಗಳನ್ನು ಬರೆಯಲು ಆರಂಭಿಸಿ ವಾಗ್ಗೇಯಕಾರರಾಗಿ ತಮ್ಮ ಕೃತಿಗಳಿಗೆ ಚಂದನೆಯ ರಾಗ ಸಂಯೋಜಿಸಿ ಪ್ರಖ್ಯಾತರಾದರು.
ಹೀಗೆ ಸುಪ್ರಸಿದ್ಧ ಸಂಗೀತಗಾರರಾದ ನಂತರ ಸಹಜವಾಗಿಯೇ ತಾವು ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಯವರಿಗೆ ಕಲಿಸುವ ಸಲುವಾಗಿ ಗುರುಕುಲ ಪದ್ದತಿಯಲ್ಲಿ ಸಂಗೀತವನ್ನು ಹೇಳಿಕೊಡಲು ಆರಂಭಿಸಿದ ಸಂಧರ್ಭದಲ್ಲಿಯೇ ಟಿ.ಚೌಡಯ್ಯ ಬಿ.ದೇವೇಂದ್ರಪ್ಪ, ಟಿ.ಎಸ್. ತಾತಾಚಾರ್, ಎ.ವಿ. ಕೃಷ್ಣಮಾಚಾರ್, ರಾಳ್ಳಪಲ್ಲಿ ಅನಂತಕೃಷ್ಣಶರ್ಮ ಮುಂತಾದವರು ಅವರ ಬಳಿ ಶಿಷ್ಯ ವೃತ್ತಿಯನ್ನು ಆರಂಭಿಸಿ ಮುಂದೆ ದೇಶ ವಿದೇಶದಲ್ಲಿ ಪ್ರಖ್ಯಾತ ವಿದ್ವಾಂಸರಾಗಿ ಸ್ವತಃ ಕೀರ್ತಿವಂತರಾಗಿದ್ದಲ್ಲದೇ, ಗುರುಗಳಾದ ಬಿಡಾರಂ ಕೃಷ್ಣಪ್ಪನವರಿಗೂ ಹೆಸರನ್ನು ತಂದು ಕೊಟ್ಟರು.
ಸುಮಾರು ಆರು ಅಡಿ ಎತ್ತರದ ಕೆಂಪನೆ ಬಣ್ಣದ ಅಜಾನುಬಾಹು ಕೃಷ್ಣಪ್ಪನವರು ತಮ್ಮ ಶರೀರಕ್ಕೆ ತಕ್ಕಂತೆ ದೊಡ್ಡದಾದ ಗಿರಿಜಾ ಮೀಸೆಯನ್ನು ಬಿಟ್ಟಿರುತ್ತಿದ್ದದ್ದಲ್ಲದೇ, ತಲೆಯ ಮೇಲಿನ ಮೈಸೂರಿನ ಪೇಟದಿಂದ ಸದಾಕಾಲವೂ ಆಕರ್ಷಿತವಾಗಿರುತ್ತಿದ್ದ ಕಾರಣ ಅವರನ್ನು ನೋಡಿದವರೆಲ್ಲ ಸಹಜವಾಗಿ ಅವರಿಗೆ ಗೌರವಿಸುವಂತೆ ಮಾಡುತ್ತಿತ್ತು. ಕೃಷ್ಣಪ್ಪನವರು ಸಹಾ ಅಷ್ಟೇ ಸಂಭಾವಿತರಾಗಿ ಎಲ್ಲರನ್ನೂ ಗೌರವಿಸುತ್ತಿದ್ದದ್ದಲ್ಲದೇ, ತಮ್ಮೊಂದಿಗೆ ಕಛೇರಿಯನ್ನು ನೀಡುವ ಪಕ್ಕವಾದ್ಯಗಾರರನ್ನೂ ಸಹಾ ಅತ್ಯಂತ ಗೌರವದಿಂದ ಆದರಿಸುತ್ತಿದ್ದ ಪರಿಯೂ ಬಹಳ ಶ್ಲಾಘನೀಯವಾಗಿತ್ತು. ಸಾಮಾನ್ಯವಾಗಿ ಕೃಷ್ಣಪ್ಪನವರ ಕಛೇರಿಗಳು ಸಂಜೆ 4ಕ್ಕೆ ಆರಂಭವಾಗಿ ರಾತ್ರಿ 10ರವರೆಗೆ ನಡೆಯುತ್ತಿದ್ದು, ಪಕ್ಕವಾದ್ಯಗಳು ಸಮಯಕ್ಕೆ ಸರಿಯಾಗಿ ಬಾರದಿದ್ದರೂ ತಮ್ಮ ಪಾಡಿಗೆ ತಾವು ಸಂಗೀತ ಕಛೇರಿಯನ್ನು ಆರಂಭಿಸುವ ಮೂಲಕ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದರು. ತಮ್ಮ ಶಿಷ್ಯರಿಗೆ ಯಾರನ್ನೂ ಸಹಾ ಅನುಕರಿಸದೇ, ಅವರವರ ಸಾಮರ್ಥ್ಯವನ್ನು ಅರಿತುಕೊಂಡು ಅವರು ಗಳಿಸಿದ ಸಂಗೀತಜ್ಞಾನಕ್ಕೆ ಅನುಗುಣವಾಗಿ ತಮ್ಮದೇ ಶೈಲಿ ಅಳವಡಿಸಿಕೊಂಡು ತಮ್ಮ ಛಾಪನ್ನು ಮೂಡಿಸಿಕೊಂಡು ಪ್ರಖ್ಯಾತರಾಗುವಂತೆ ಸಲಹೆ ನೀಡುತ್ತಿದ್ದರು. ತಮ್ಮ ಶಿಷ್ಯಂದಿರ ಕಛೇರಿಯನ್ನು ಮುಕ್ತ ಮನಸ್ಸಿನಿಂದ ಕೇಳಿ, ಟಿಪ್ಪಣಿ ಮಾಡಿಕೊಂಡು ಅವರ ಕಛೇರಿ ಮುಗಿದ ನಂತರ ಅವರು ಮಾಡಿದ ತಪ್ಪುಗಳನ್ನು ತಿಳಿಸಿ ಹೇಗೆ ಹಾಡಬೇಕು, ಹೇಗೆ ಹಾಡಬಾರದೆಂಬುದನ್ನು ಸವಿರವಾಗಿ ತಿಳಿ ಹೇಳುತ್ತಿದ್ದರು.
ಭಾರತಾದ್ಯಂತ ವಿವಿಧ ನಗರಗಳಲ್ಲಿ ತಮ್ಮ ಅಮೋಘವಾದ ಸಂಗೀತ ಕಛೇರಿಗಳ ಮೂಲಕ ಎಲ್ಲರ ಹೃದಯವನ್ನು ಗೆದ್ದು ಅನೇಕ ಅಮೂಲ್ಯ ಬಹುಮಾನಗಳನ್ನು ಗಳಿಸಿದ್ದ ಕೃಷ್ಣಪ್ಪನವರ ಗಾಯನವನ್ನು ಆಲಿಸಿದ ಪಂಡಾರ ಸನ್ನಿಧಿಯ ಸ್ವಾಮಿಗಳು ಗಾಯಕ ಶಿಖಾಮಣಿ ಎಂಬ ಬಿರುದಿನ ಜೊತೆಗೆ ಚಿನ್ನದ ತೋಡಾವನ್ನಿತ್ತು ಸಮ್ಮಾನಿಸಿದ್ದಲ್ಲದೇ, ಮಹಾವೈದ್ಯನಾಥ ಅಯ್ಯರ್ ನಂತರ ಕೃಷ್ಣಪ್ಪನವರ ದೇವಗಾನ ಕೇಳುತ್ತಿದ್ದೇನೆ ಎಂದು ಪ್ರಶಂಸಿಸಿದ್ದರು. ಶಿವಗಂಗೆಯ ಮಠದ ಸ್ವಾಮಿಗಳೂ ಸಹಾ ಕೃಷ್ಣಪ್ಪನವರನ್ನು ಸಮ್ಮಾನಿಸಿದ್ದರೆ, ಮಂತ್ರಾಲಯದ ಮಠದಿಂದ ಆಗಿನ ಕಾಲದಲ್ಲೇ ರೂ. 25 ವಾರ್ಷಿಕ ಸಂಭಾವನೆ ನೀಡಿ ಆಸ್ಥಾನ ವಿದ್ವಾಂಸ ಪಟ್ಟವನ್ನು ನೀಡಿತ್ತು.
ಹೀಗೆ ತಾವು ದೇಶಾದ್ಯಂತ ಗಳಿಸಿದ ಹಣವನ್ನು ವೃಥಾ ಪೋಲು ಮಾಡದೇ, ಚಿಕ್ಕಂದಿನಲ್ಲಿ ತನ್ನ ಜೀವನದ ದಿಕ್ಕನ್ನೇ ಬದಲಿಸಿದ ಶ್ರೀರಾಮನಿಗಾಗಿ ಒಂದು ಮಂದಿರ ಕಟ್ಟಬೇಕೆಂಬ ಸಂಕಲ್ಪವನ್ನು ಮಾಡಿಕೊಂಡು ಅದರ ನಿರ್ಮಾಣದ ಹಣ ಸಂಗ್ರಹಕ್ಕಾಗಿ ತಮ್ಮ ಅನಾರೋಗ್ಯವನ್ನೂ ಲೆಖ್ಖಿಸದೇ, ಕಚೇರಿಗಳನ್ನು ಮಾಡಿ, ಅದರಿಂದ ಗಳಿಸಿದ ದುಡ್ಡನ್ನು ರಾಮಮಂದಿರಕ್ಕಾಗಿ ಮೀಸಲಿಟ್ಟಿದ್ದಲ್ಲದೇ, ತಮಗೆ ಬಹುಮಾನವಾಗಿ ದೊರತಿದ್ದ ಚಿನ್ನ, ಬೆಳ್ಳಿ, ಅಮೂಲ್ಯವಾದ ಬಹುಮಾನಗಳೆಲ್ಲವನ್ನು ಮಾರಿಯೂ ಹಣ ಸಾಲದೇ ಹೋದಾಗ, ತಮ್ಮ ಧರ್ಮಪತ್ನಿಯ ಚಿನ್ನದ ಮಾಂಗಲ್ಯವನ್ನೂ ಮಾರಿ ಬಂದ ಹಣವನ್ನೆಲ್ಲ ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ರಾಮನಿಗೆ ಅರ್ಪಿಸಿದ್ದರು
ಹಿಂದೊಮ್ಮೆ ಮದ್ರಾಸಿನ ಅವರ ಅಭಿಮಾನಿ ಆಳ್ವಾರ್ ಚೆಟ್ಟಿಯಾರ್ ಅವರು ತಮ್ಮ ಸರ್ವಸ್ವವನ್ನು ಕಳೆದುಕೊಂಡಾಗ, ಅವರಿಗಾಗಿ ಕಛೇರಿಗಳನ್ನು ಮಾಡಿ ಹಣ ಸಂಗ್ರಹಿಸಿ ಕೊಟ್ಟು ಅವರು ಆರ್ಥಿಕವಾಗಿ ಮತ್ತೆ ಸದೃಢರನ್ನಾಗಿ ಮಾಡಿದ್ದರ ಕೃತಾರ್ಥವಾಗಿ ಅದೇ ಚೆಟ್ಟಿಯಾರ್ ಅವರು ರಾಮಮಂದಿರಕ್ಕಾಗಿ ಕಬ್ಬಿಣದ ತೊಲೆಗಳನ್ನು ಕಳುಹಿಸಿಕೊಟ್ಟರಂತೆ. ಹೀಗೆ ಎಲ್ಲರ ಸಹಾಯದೊಂದಿಗೆ ಮೈಸೂರಿನ ನಾರಾಯಣಶಾಸ್ತ್ರಿ ಬೀದಿಯಲ್ಲಿ ಬಿಡಾರಂ ಕೃಷ್ಣಪ್ಪನವರ ಕನಸಿನ ಕೂಸಾದ ಸನ್ನ ಸೀತಾರಾಮ ಮಂದಿರ ನಿರ್ಮಾಣಗೊಂಡಿತು.
ಸುಮಾರು 40X80 ಅಡಿಗಳ ಹಜಾರಹೊಂದಿರುವ ಮದ್ರಾಸ್ ಟೆರೇಸ್‌ನಿಂದ ಕೂಡಿದ್ದ ಈ ಮಂದಿರ ತಂಜಾವೂರಿನ ಸಂಗೀತ ಮಹಲ್‌ನಂತೆ, ಹಂಪಿಯ ಪದ್ಮಸದನವನ್ನು ಹೋಲುತ್ತದೆ. ಇಡೀ ಹಜಾದ ಸುತ್ತಲೂ ದಶಾವತಾರದ ಮತ್ತು ಇತರ ದೇವತೆಗಳಿರುವ ತೈಲವರ್ಣದಿಂದ ಚಿತ್ರಗಳಿಂದ ಕಂಗೊಳಿಸುತ್ತಿರುವ ಈ ಭವನದ ಪ್ರಮುಖ ಆಕರ್ಷಣೆಯೇ ಶ್ರೀರಾಮನು ಸೀತಾಮಾತೆಯೊಡನೆ ಕುಳಿತಿರುವ ಮತ್ತು ಆವರ ಸುತ್ತಲೂ ಭರತ, ಲಕ್ಷ್ಮಣ, ಶತ್ರುಘ್ನ ನಿಂತಿದ್ದರೆ, ಶ್ರೀರಾಮನ ಪಾದವನ್ನು ತನ್ನ ಅಂಗೈಯಲ್ಲಿಟ್ಟುಕೊಂಡಿರುವ ಹನುಮಂತನೊಡನೆ ಇರುವ ಭವ್ಯ ಚಿತ್ರವಾಗಿದೆ. ಅಂತಹ ಭವ್ಯ ಚಿತ್ರವನ್ನು ವರ್ಣಿಸುವುದಕ್ಕಿಂತಲೂ ಪ್ರತ್ಯಕ್ಷವಾಗಿ ನೋಡಿದಲ್ಲಿ ಮಾತ್ರವೇ ಅದರ ಆನಂದದ ಅರಿವಾಗುತ್ತದೆ.
ಎಂತಹ ದೊಡ್ಡ ವ್ಯಕ್ತಿಯಾಗಿದ್ದರೂ ಅವರಲ್ಲಿ ಒಂದಲ್ಲಾ ಒಂದು ಚಟ ಇದ್ದೇ ಇರುತ್ತದೆ ಎನ್ನುವುದಕ್ಕೆ ಹೊರತಾಗಿರದಿದ್ದ ಕೃಷ್ಣಪ್ಪನವರಿಗೂ ಸಹಾ ನಶ್ಯ ಹಾಕುವುದರ ಹೊತೆಗೆ ಆಗ್ಗಾಗ್ಗೆ ಇಸ್ಪೀಟು ಆಡುವ ಚಟವಿತ್ತು. ಅದಲ್ಲದೇ ಜ್ಯೋತಿಷ್ಯದಲ್ಲೂ ಅಪಾರವಾದ ನಂಬಿಕೆಯನ್ನು ಹೊಂದಿದ್ದ ಕೃಷ್ಣಪ್ಪನವರಿಗೆ ಹೊರದೇಶಕ್ಕೆ ಹೋಗಿ ತಮ್ಮ ಸಂಗೀತದ ಪಾಂಡಿತ್ಯವನ್ನು ತೋರಿಸುವ ಹಂಬಲವಿತ್ತು. ಆಗಾಗಿ ತಮಗೆ ಸಿಕ್ಕ ಎಲ್ಲಾ ಎಲ್ಲ ಜ್ಯೋತಿಷ್ಯಗಳಲ್ಲಿಯೂ ತಮ್ಮ ಜಾತಕದಲ್ಲಿ ವಿದೇಶಿ ಪ್ರವಾಸದ ಅವಕಾಶವಿದೆಯೇ ಎಂದು ಕೇಳುತ್ತಿದ್ದರು. ಇಂದೊಂದು ಆಸೆ ಮಾತ್ರ ಕನಸಾಗಿಯೇ ಉಳಿದು, 1931ರ ಜುಲೈ 29ರಂದು ವಯೋಸಹಜವಾಗಿ ತಮ್ಮ 65ನೇ ವಯಸ್ಸಿನಲ್ಲಿಯೇ ಅಸುನೀಗಿದರು.
ಬೀದಿಯಲ್ಲಿ ಹಾಡಿಕೊಂಡು ಬಿಕ್ಷಾವೃತ್ತಿಯನ್ನು ಮಾಡುತ್ತಿದ್ದಂಥ ವ್ಯಕ್ತಿ ಪ್ರಖ್ಯಾತ ಸಂಗೀತಗಾರನಾದ ಪರಿಯನ್ನು ಶ್ಲಾಘಿಸಿ ಮ್ಯೂಸಿಕ್ ಅಕಾಡೆಮಿಯ ಜರ್ನಲ್‌ನವರು ಅತ್ಯುತ್ತಮ ಗಾಯಕ, ಎತ್ತರದ ಆಕರ್ಷಕ ವ್ಯಕ್ತಿತ್ವ, ಲಕ್ಷ್ಯ-ಲಕ್ಷಣಗಳಲ್ಲಿ ಸಮನಾದ ಪಾಂಡಿತ್ಯದಿಂದ, ಸ್ಫುಟವಾದ ಉಚ್ಚಾರಣೆಯಿಂದ ಅರ್ಥವನ್ನರಿತು ಹಾಡುವ ಕಾಳಜಿ ಹೊಂದಿದ್ದು, ಅಕಾಡೆಮಿಯ ದೀರ್ಘ ಸಂಪರ್ಕ ಹೊಂದಿದ್ದ ಇವರ ಅಗಲಿಕೆಯಿಂದ ಸಂಗೀತಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಬರೆಯುವ ಮೂಲಕ ಅವರಿಗೆ ನುಡಿನಮನ್ಗಗಳನ್ನು ಸಲ್ಲಿಸುತ್ತಾರೆ ಎಂದರೆ ಅವರು ನಿಜಕ್ಕೂ ಕನ್ನಡದ ಕಲಿಗಲೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ