ಬಿ.ವಿ.ಕೆ. ಐಯ್ಯಂಗಾರ್

ಊರಿಗೆ ಬಂದವಳು ನೀರಿಗೆ ಬರೋದಿಲ್ವೇ? ಎನ್ನುವ ಗಾದೆಯಂತೆ, ಬೆಂಗಳೂರಿನಲ್ಲಿರುವವರು ಸುಪ್ರಸಿದ್ದ ವಾಣಿಜ್ಯ ಪ್ರದೇಶದ ಬಿ.ವಿ.ಕೆ.ಐಯ್ಯಂಗಾರ್ ರಸ್ತೆಗೆ ಬಾರದೇ ಇರ್ತಾರೆಯೇ ಎನ್ನುವ ಮಾತನ್ನೂ ಹೇಳಬಹುದು. ಹಾಗಾದರೆ ಬಿ.ವಿ.ಕೆ. ಐಯ್ಯಂಗಾರ್  ಎಂದರೆ ಯಾರು? ಬೆಂಗಳೂರಿಗೆ ಮತ್ತು ದೇಶಕ್ಕೆ  ಅವರ ಮತ್ತು ಅವರ ಕುಟುಂಬದ ಕೊಡುಗೆ ಏನು? ಎಂಬೆಲ್ಲದರ ಸಂಪೂರ್ಣ ಮಾಹಿತಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

bvkಬಿ.ವಿ.ಕೆ. ಐಯ್ಯಂಗಾರ್ ಅವರ ಪೂರ್ವಜರು ಮಂಡ್ಯ ಜಿಲ್ಲೆ ನಾಗಮಂಗಲದ ಬಳಿ ಇರುವ ಬಿಂಡಿಗನವಿಲೆ ಎಂಬ ಗ್ರಾಮದ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದವರಾಗಿದ್ದು ಅ ಕಾಲದಲ್ಲೇ ಅತ್ಯಂತ ಹೆಚ್ಚಿನ ಮಟ್ಟಿಗೆ ಓದಿದ್ದ ಅವರ ತಾತನವರಾಗಿದ್ದ ಶ್ರೀ ಬಿಂಡಿಗನವಿಲೆ ಕೃಷ್ಣಾಯ್ಯಂಗಾರ್ ಅವರು ಕೆಲಸವನ್ನು ಅರಸಿ ಬಿಂಡಗನವಿಲೆಯಿಂದ ಬೆಂಗಳೂರಿಗೆ ಬಂದು, ಅಂದಿನ ಕಾಲದ ಬ್ರಿಟೀಷ್ ಕಮಿಷನರ್ ಗಳ ಆಡಳಿತದಲ್ಲಿ ಪೇ ಮಾಸ್ಟರ್ ನಂತರ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದು ತಮ್ಮ ಬುದ್ದಿ ಶಕ್ತಿ, ಜಾಣ್ಮೆ ಮತ್ತು ನಡುವಳಿಯಿಂದ ಬೆಂಗಳೂರಿನ ಕಮಿಷಿನರ್ ಆಗಿದ್ದಂತಹ ಸರ್ ಮಾರ್ಕ್ ಕಬ್ಬನ್ ಮತ್ತು ಬೌರಿಂಗ್ ಅವರ ಆಡಳಿತದಲ್ಲಿ ಉತ್ತಮ ಅಧಿಕಾರಿ ಎನಿಸಿಕೊಂಡಿದ್ದರು

Screenbshot 2024-11-07 at 8.46.02 AMಅಂತಹವರ ಮೊಮ್ಮಗನಾದ ಬಿ ವಿ ಕೃಷ್ಣ ಐಯ್ಯಂಗಾರ್ (ಅಂದಿನ ಕಾಲದಲ್ಲಿ ತಾತನ ಹೆಸರನ್ನೇ ಮೊಮ್ಮಕ್ಕಳಿಗೆ ಇರುವ ಸಂಪ್ರದಾಯ ರೂಢಿಯಲ್ಲಿತ್ತು) ಅವರು 1824 ರಲ್ಲಿ ಜನಿಸಿದರು. ಬೆಂಗಳೂರಿನಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ  ಬ್ರಿಟಿಷ್ ಆಡಳಿತದ ನ್ಯಾಯಾಂಗ ಇಲಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡು, ತಮ್ಮ ಪ್ರಾಮಾಣಿಕತೆ, ಜಾಣ್ಮೆ ಯಿಂದ ಜುಡಿಷಿಯಲ್ ಶಿರಸ್ತೇದಾರ್ ಆಗಿ ಬಡ್ತಿ ಪಡೆದವರು. 1858ರಲ್ಲಿ ಪ್ರಿನ್ಸಿಪಲ್ ಸದರ್ ಮ್ಯಾಜಿಸ್ಟ್ರೇಟ್ ಬಡ್ತಿ ಪಡೆದುಕೊಂಡು  ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಈಗಿನಂತೆ ವರ್ಷಾನುಗಟ್ಟಲೆ ವಿಚಾರಣೆ ನಡೆಸದೆ ಕೆಲವೇ ಕೆಲವು ದಿನಗಳ ಕಾಲ ವಿಚಾರಣೆ ನಡೆಸಿ, ಎರಡೇ ಪುಟಗಳ ನಿಖರವಾದ  ಸರಳ ಕನ್ನಡದಲ್ಲಿಯೇ ತಮ್ಮ ತೀರ್ಪುಗಳನ್ನು  ನೀಡುತ್ತಿದ್ದ ಕಾರಣ  ಬಹು ಜನಪ್ರಿಯರಾಗಿದ್ದರು.  ಕೃಷ್ಣ ಐಯ್ಯಂಗಾರ್  ಅವರ ಈ ಮಟ್ಟದ ಜನಪ್ರಿಯತೆ, ಸತ್ಯ, ನಿಷ್ಠೆ ಮತ್ತು ನ್ಯಾಯ ಪರತೆಯ ಜೊತೆ ಪ್ರಾಮಾಣಿಕತೆಯಿಂದ ತಮ್ಮ ಕೆಲಸ ಮಾಡುತ್ತಿದ್ದರಿಂದ ಸಹಜವಾಗಿಯೂ ಬ್ರಿಟೀಷರ ವರಿಷ್ಠರ ಗಮನ ಸೆಳೆದಿತ್ತು.

ಈ ರೀತಿಯಾಗಿ ತಮ್ಮ ಉತ್ತಮ ಕಾರ್ಯತತ್ಪರತೆಯಿಂದಾಗಿ ತಮ್ಮ ಕೆಲಸದಲ್ಲಿ ಭಡ್ತಿ ಪಡೆದು ಕೋಲಾರ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಆಗಿ ಅವರು ನೇಮಕವಾದ ದಕ್ಷಿಣ ಭಾರತದ ಮೊದಲ ಬ್ರಿಟಿಷ್ ಅಲ್ಲದ  ಭಾರತೀಯ ಡೆಪ್ಯೂಟಿ ಕಮಿಷನರ್  ಎಂಬ ಹೆಗ್ಗಳಿಕೆ ಅವರದ್ದಾಗಿತ್ತು. ಇದೇ ಕೃಷ್ಣ ಅಯ್ಯಂಗಾರ್ ಅವರ ಕಾಲದಲ್ಲೇ ಕೋಲಾರದ ಗೆಝೆಟ್ ಬಿಡುಗಡೆಯಾಗಿ ಅವರು ಗಝೆಟಿಯರ್ ಎನಿಸಿಕೊಂಡರು ಅಲ್ಲಿಯೂ ತಮ್ಮ ಸನ್ನಡತೆ ಮತ್ತು ದಕ್ಷತೆಯಿಂದ  ಅತ್ಯುತ್ತಮ ಅಧಿಕಾರಿ ಎಂಬ  ಹೆಸರು ಪಡೆದ ಕಾರಣ ಸಹಜವಾಗಿ ಅಂದಿನ ಕಮಿಷನರ್  ಅವರ ಮೆಚ್ಚುಗೆಗೆ ಪಾತ್ರರಾರಾಗಿದ್ದಲ್ಲದೇ  ಅವರ ಬಳಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವಷ್ಟರ ಮಟ್ಟಿಗಿನ ಸಲುಗೆ ಪಡೆದುಕೊಂಡರು.

ಮೈಸೂರು ರಾಜ್ಯವನ್ನು ಹೇಗಾದರೂ ಮಾಡಿ ತಮ್ಮ ವಶಕ್ಕೆ ತೆಗೆದುಕೊಳ್ಳದೇ ಬೇಕೆಂದು ಹವಣಿಸುತ್ತಿದ್ದ ಬ್ರಿಟೀಷರು 1824ರಲ್ಲಿ ಅದ್ದೂರಿಯಿಂದ ದಸರಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿ ಇಲ್ಲದಿರುವಾಗಿ ಈ ರೀತಿಯಾಗಿ. ಅನಾವಶ್ಯಕವಾಗಿ ಖರ್ಚುಗಳನ್ನು ಮಾಡುತ್ತಿದ್ದಾರೆ ಮತ್ತು ಆಡಳಿತ ಅರಾಜಕತೆಯಿಂದ ಕೂಡಿದೆ ಎಂಬ ಕುಂಟು ನೆಪವೊಡ್ಡಿ ಮೈಸೂರು ಸಂಸ್ಥಾನವನ್ನು ತಮ್ಮ ಸುಪರ್ಧಿಗೆ ವಶಪಡಿಸಿಕೊಂಡಿದ್ದರ ವಿರುದ್ಧ ಅತ್ಯಂತ ತಾಳ್ಮೆವಂತರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನಿರಂತವಾಗಿ ಸುಮಾರು ಸುಮಾರು 50 ವರ್ಷಗಳ ಕಾಲ ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಲೇ ತಮ್ಮ ರಾಜ್ಯವನ್ನು ಹಿಂಪಡೆಯಲು ಪ್ರಯತ್ನ ಪಡುತ್ತಿರುವುದನ್ನು ಗಮನಿಸಿದ  ಕೃಷ್ಣ ಐಯ್ಯಂಗಾರ್ ಅವರು 1864ರಲ್ಲಿ  ಲಂಡನ್ ನ ಅಧಿಕಾರಿ ಗಳೊಂದಿಗೆ ಇದ್ದ ತಮ್ಮ ಸ್ನೇಹವನ್ನು ಬಳಸಿಕೊಂಡು ಈ ಕುರಿತಾಗಿ ಸುದೀರ್ಘವಾದ ಪತ್ರ ವ್ಯವಹಾರ ನಡೆಸಿ  ವಿಕ್ಟೋರಿಯಾರಾಣಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಾಗ, ಕಮಿಷನರ್ , ಪ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಮತ್ತು ಅವರ ಸಹಾಯಕರಾಗಿದ್ದ ಮಾರ್ಕ್ ಕಬ್ಬನ್ ಅವರ ಮೂಲಕವೂ  ಪತ್ರಗಳನ್ನು ಬರೆಸಿ  565 ಸಂಸ್ಥಾನಗಳ ಪೈಕಿ ಮೈಸೂರಿನ ರಾಜರಿಗೆ ಮಾತ್ರವೇ ಆಡಳಿತವನ್ನು ಮರಳಿ ಹಸ್ತಾಂತರ ಮಾಡಿಸುವಲ್ಲಿ ಕೃಷ್ಣ ಅಯ್ಯಂಗಾರ್ ಅವರ ಸೇವೆಯೂ ಅತ್ಯಮೂಲ್ಯವಾಗತ್ತು

ವಿಕ್ಟೋರಿಯಾ ಮಹಾರಾಣಿಯವರ ಆಡಳಿತದ 40ನೇ ವರ್ಷದ ಮಹೋತ್ಸವದ ಅಂಗವಾಗಿ  1877ರಲ್ಲಿ ದೆಹಲಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದ ಸಮಾರಂಭದಲ್ಲಿ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ  ಈ ನಾಡಿಗೆ ಅನುಪಮ ಸೇವೆ ಸಲ್ಲಿಸಿದ ಹಾಗೂ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಗೊಳಿಸಲು ಕಾರಣರಾದ ಕೆಲವು ಪ್ರಮುಖ ವ್ಯಕ್ತಿಗಳಿಗೆ ಸಿ.ಎಸ್.ಐ (Companion, Order of the Star of India) ಎಂಬ ಅತ್ಯಂತ ಪ್ರತಿಷ್ಠಿತ ಬಿರುದನ್ನಿತ್ತು ಸತ್ಕರಿಸಲು ಮುಂದಾದಾಗ, ಅಂತಹ ಪ್ರತಿಷ್ಠಿತ ಬಿರುದು ಪಡೆದವರಲ್ಲಿ  ನಮ್ಮ ಕೃಷ್ಣಯ್ಯಂಗಾರ ತಾತನವರೂ ಒಬ್ಬರಾಗಿದ್ದರು.  ಆ ಬಿರುದನ್ನು  ಪಡೆದ ಪ್ರಪ್ರಥಮ ಮೈಸೂರಿನವರಾಗಿದ್ದರು. ಈ  ಪ್ರಶಸ್ತಿಯಿಂದಾಗಿ ಅವರ ಕೀರ್ತಿ ಕೇವಲ ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ಭಾರತಾದ್ಯಂತ ಹಬ್ಬಿತ್ತು.

ಇಂತಹ ಕೃಷ್ಣ ಐಯ್ಯಂಗಾರ್ ಅವರ ತಾತಾ ಕೆಂಪುಬಣ್ಣದ ವಿಶಾಲವಾಗಿದ್ದ  ಸುಂದರ ಬಂಗಲೆಯನ್ನು ಇಂದಿನ ಕೆಂಪೇಗೌಡ ಚಿತ್ರ ಮಂದಿರವಿದ್ದ ಸ್ಥಳದಲ್ಲಿ ನಿರ್ಮಿಸಿದ್ದು ಅ ಬಂಗಲೆಯನ್ನು ಮನೋರಮ ಬಂಗಲೆ ಎಂಬ ಹೆಸರಿತ್ತು. ಅಲ್ಲಿ ಮನೋರಮ ಬಂಗಲೆ ಇದ್ದ ಕಾರಣ ಆ ರಸ್ತೆಯನ್ನು ಮನೋರಮಾ ಲೇನ್ ಎಂದು ಕರೆಯಲಾಗುತ್ತಿತ್ತು.  ಮಾರ್ಚ್ 1935 ರಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಚಿಕ್ಕಪೇಟೆಗೆ ಅಧಿಕೃತ ಭೇಟಿಗೆ ಆಗಮಿಸಿದಾಗ ಅದೇ  ಕಿರಿದಾದ ರಸ್ತೆಯಲ್ಲೇ ಬಂದು ಅಲ್ಲಿದ್ದ ವ್ಯಾಪಾರಿಗಳು ಮತ್ತು ಸ್ಥಳೀಯರೊಂದಿಗೆ ಮಾತುಕಥೆ ನಡೆಸಿದಾಗ, ಅಲ್ಲಿನ ಬಹುತೇಕರು ಆ ಕಿರಿದಾದ ಮನೋರಮಾ ಲೇನ್ ಬಗ್ಗೆ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಮಹಾರಾಜರು, ಅದಕ್ಕೆ ಪರಿಹಾರವನ್ನು ಕಂಡು ಹಿಡಿಯಲು ಅಧಿಕಾರಿಗಳಿಗೆ ಸೂಚಿಸಿದಾಗ, ಅಂದಿನ ಬೆಂಗಳೂರು ಪೌರಕಾರ್ಮಿಕ ಸಂಸ್ಥೆಯು ಆ ಚಿಕ್ಕದಾದ ರಸ್ತೆಯನ್ನು 160 ಅಡಿ ರಸ್ತೆಯಾಗಿ 40 ಅಡಿ ಅಗಲದ ಫುಟ್‌ಪಾತ್‌ಗಳಾಗಿ ಪರಿವರ್ತಿಸಲು ನಿರ್ಧರಿಸಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರಿಗೆ ತಿಳಿಸಿದಾಗ ಆ ಕೆಲಸಕ್ಕೆ ಮಿರ್ಜಾ ಇಸ್ಮಾಯಿಲ್ ನಗರಪಾಲಿಕೆ ಅಧಿಕಾರಿ ಅರಕಲಗೂಡು ನರಸಿಂಗರಾವ್  (ಖ್ಯಾತ ಬರಹಗಾರರಾಗಿದ್ದ ಆ ನಾ ಕೃಷ್ಣರಾವ್ ಅವರ ತಂದೆ) ಅವರನ್ನು ಉಸ್ತುವಾರಿಯನ್ನಾಗಿ ಮಾಡಲಾಯಿತು.

bvk2ಹೀಗೆ ರಸ್ತೆಯ ಅಗಲೀಕರಣದ ಮೊದಲ ಹೆಜ್ಜೆಯಾಗಿ ನರಸಿಂಗರಾವ್  ಅವರು ಅ ರಸ್ತೆಯಲ್ಲಿದ್ದ ಮೊದಲ ಮನೆಯಾದ  ಬಿವಿಕೆ ಅಯ್ಯಂಗಾರ್ ಅವರನ್ನೇ ಭೇಟಿಯಾಗಿ ವಿಷಯವನ್ನು ತಿಳಿಸಿದಾಗ, ಒಂದು ಚೂರೂ ವಿರೋಧವನ್ನು ವ್ಯಕ್ತಪಡಿಸದೇ, ತಮ್ಮ ಮನೆಯನ್ನು ಉಚಿತವಾಗಿ ಬಿಡಲು ಸಂತೋಷದಿಂದ ಒಪ್ಪಿಕೊಂಡರಾದರೂ, ರಸ್ತೆಯ ಅಗಲೀಕರಣಕ್ಕಾಗಿ ತಮ್ಮ ಭೂಮಿಯನ್ನು ಕೊಡಲು  ಆ ರಸ್ತೆಯ ಉಳಿದ ನಿವಾಸಿಗಳು ಒಪ್ಪಿಕೊಳ್ಳದ ಕಾರಣ, 1935ರಲ್ಲಿ ನ್ಯಾಯಾಲಯದ ಮೊರೆ ಹೋಗಿ ರಸ್ತೆಯ ಅಗಲೀಕರಣಕ್ಕೆ ತಾತ್ಕಾಲಿಕ ತಡೆಯನ್ನು ತಂದು  ಇದು ಸುಮಾರು 20 ವರ್ಷಗಳ ಕಾಲ ಮುಂದುವರೆಯಿತು.

bvk_road1955ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಂತಹ ಸಂಧರ್ಭದಲ್ಲಿ ಬೆಂಗಳೂರಿನ ಮಾಜಿ ಮೇಯರ್ ಮತ್ತು ಅಂದಿನ ನಗರಾಭಿವೃದ್ಧಿ ಸಚಿವರು ಮತ್ತು ಸ್ಥಳೀಯ ಚಿಕ್ಕಪೇಟೆಯ ಶಾಸಕರಾಗಿದ್ದ  ವೈ ರಾಮಚಂದ್ರ ಅವರು ಅಲ್ಲಿನ ನಿವಾಸಿಗಳು ಮತ್ತು ವ್ಯಾಪಾರಸ್ಥರ ನಡುವೆ  ಮಧ್ಯಸ್ಥಿಕೆಯನ್ನು ವಹಿಸಿ ಯೋಜಿತ 160 ಅಡಿಗಳ ರಸ್ತೆಯ ಬದಲಾಗಿ 80 ಅಡಿಗಳಿಗೆ ಇಳಿಸಿ 60 ಅಡಿ ರಸ್ತೆ ಮತ್ತು ಎರಡೂ ಬದಿಯಲ್ಲಿ 10 ಅಡಿ ಕಾಲುದಾರಿಯನ್ನು ನಿರ್ಮಿಸುವ ಭರವಸೆಯನ್ನು ನೀಡಿದ್ದಲ್ಲದೇ, ಭೂಮಿಯನ್ನು ಕಳೆದುಕೊಂಡವರಿಗೆ ಬೆಂಗಳೂರು ಟ್ರಸ್ಟ್ ಬೋರ್ಡ್ ವತಿಯಿಂದ ನಿವೇಶನ ಮತ್ತು ಮನೆಗಳನ್ನು ನೀಡುವ ಭರವಸೆ ನೀಡಿದ್ದರಿಂದ ರಸ್ತೆಯ ನಿರ್ಮಾಣಕ್ಕೆ ನ್ಯಾಯಾಲಯದಲ್ಲಿ ಹೂಡಿದ್ದ ತಡೆಯಾಜ್ಞೆಯನ್ನು ಹಿಂಪಡೆದ ಕಾರಣ, ರಸ್ತೆಯ ಅಗಲೀಕರಣವು 1956ರಲ್ಲಿ ಆರಂಭವಾಗಿ 1960ರಲ್ಲಿ ಪೂರ್ಣಗೊಂಡಿತು. ರಸ್ತೆಯ ಆಗಲೀಕರಣಕ್ಕಾಗಿ ಮನೋರಮಾ ಬಂಗಲೆಯ ಮುಕ್ಕಾಲು ಭಾಗ ಹೋಗಿ ಕಾಲು ಭಾಗ ಉಳಿದುಕೊಂಡಾಗ, ಕೃಷ್ಣ ಅಯ್ಯಂಗಾರ್ ಆದನ್ನು ಅಂದಿನ ಕಾಲದ ಮತ್ತೊಬ್ಬ ಸಾಹುಕಾರರಾಗಿದ್ದ ಎಸ್. ವೆಂಕಟ್ಟಪ್ಪನವರಿಗೆ ಮಾರಿದಾಗ, ಅವರು ಆ ಜಾಗದಲ್ಲಿ ಕೆಂಪೇಗೌಡ ಚಿತ್ರಮಂದಿರವನ್ನು ಕಟ್ಟಿಸುತ್ತಾರೆ.  ಹೀಗೆ ಈ ರಸ್ತೆಗಾಗಿ ತಮ್ಮ ಭೂಮಿಯನ್ನು ಸ್ವಇಚ್ಛೆಯಿಂದ ದಾನ ಮಾಡಿದ್ದ ಬಿ.ಬಿ.ಕೃಷ್ಣ ಅಯ್ಯಂಗಾರ್ ಅವರ ಹೆಸರನ್ನೇ ಅದಕ್ಕೆ ಇಡಲು ನಿರ್ಧರಿಸಿ ಅಂದಿನಿಂದ ಆ ರಸ್ತೆ BVK ಅಯ್ಯಂಗಾರ್ ರಸ್ತೆ ಎಂದೇ ಪ್ರಖ್ಯಾತವಾಯಿತು. ನಂತರ ನೋಡ ನೋಡುತ್ತಿದ್ದಂತೆಯೇ ವಿವಿಧ ವ್ಯಾಪಾರಿಗಳು ಅದರಲ್ಲೂ ವಿದ್ಯುತ್ ಉಪಕರಣಗಳು ಮತ್ತು ಬಗೆ ಬಗೆಯ ಬಣ್ಣ ಬಣ್ಣದ ವಿದ್ಯುತ್ ದೀಪಗಳ  ಅಂಗಡಿಗಳ ಸಾಲುಗಳಿಗೆ ಹೆಸರುವಾಸಿಯಾಗಿದೆ.

ಹೀಗೆ ಸಾರ್ವಜನಿಕ ಸೇವೆಗಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಬಿ.ವಿ. ಕೃಷ್ಣಯ್ಯಂಗಾರರ ಮಗ ಅಕಾಲಿಕ ನಿಧನರಾದ ನಂತರ ಪುತ್ರ ಶೋಕಂ ನಿರಂತರಂ ಎನ್ನುವಂತೆ ತಮ್ಮ ಮಗನ ಸಾವಿನ  ನೋವಿನಿಂದ ಚೇತರಿಸಿಕೊಳ್ಳಲಾಗದೆ ಕೇವಲ 56ನೇ ವಯಸ್ಸಿನಲ್ಲೇ 1883ರ ಮಾರ್ಚ್ 27ರಂದು ನಿಧನರಾದರು.

raja_ramannaಮುಂದೆ ಆಧುನಿಕ ಭಾರತದ ಅಪ್ರತಿಮ ವಿಜ್ಞಾನಿ ಮತ್ತು ಭಾರತದ ಮೊದಲನೆಯ ಪೋಖ್ರಾನ್‍ ಪರಮಾಣು ಪರೀಕ್ಷೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ ರಾಜಾ ರಾಮಣ್ಣನವರು ಇದೇ ಬಿವಿಕೆ ಅಯ್ಯಂಗಾರ್ ಅವರ ಮಗಳ ಮಗ ಅರ್ಥಾತ್  ಮೊಮ್ಮಗ ಎನ್ನುವುದು. ಸಹಾ ವಿಶೇಷವಾಗಿದೆ.  ಹೋಮಿ ಜಹಂಗೀರ್ ಬಾಬಾರವರ ಆಪ್ತ ಶಿಷ್ಯರಾಗಿದ್ದ ರಾಜಾ ರಾಮಣ್ಣನವರು  ಶ್ರೇಷ್ಠ ಪರಮಾಣು ವಿಜ್ಞಾನಿಯಲ್ಲದೆ, ತಮ್ಮ ತಾತನಂತೆಯೇ ದಕ್ಷ ಆಡಳಿತಗಾರ, ಸಮರ್ಥ ಸಂಘಟಕ, ನುರಿತ ಪಿಯಾನೋ ಹಾಗು ವಯೋಲಿನ್ ವಾದಕರಾಗಿದ್ದಷ್ಟೇ ಅಲ್ಲದೇ, ವೇದೊಪನಿಷದ್ ಪಾರಂಗತ, ಉಪಾಧ್ಯಾಯ, ದಾರ್ಶನಿಕ, ರಾಜ್ಯಸಭೆ ಸದಸ್ಯರಾಗಿದ ಕಡೆಗೆ ದೇಶದ ರಕ್ಷಣಾ ರಾಜ್ಯ ಮಂತ್ರಿ ಸಹ ಆಗಿದ್ದರು.

ಬಿಂಡಗನವಿಲೆಯಿಂದ ಬೆಂಗಳೂರಿಗೆ ವಲಸೆ ಬಂದ ಕೃಷ್ಣ ಅಯ್ಯಂಗಾರ್ ಅವರು ಮೊಮ್ಮಗ ಬಿ ವಿ ಕೆ ಐಯ್ಯಂಗಾರ್  ಮತ್ತು ಅವರ ಮೊಮ್ಮಗ ರಾಜಾ ರಾಮಣ್ಣನವರು ಹೀಗೆ  ಇಡೀ ಕುಟುಂಬವೇ ದೇಶದ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಕಾರಣ, ಅವರು ನಿಸ್ಸಂದೇಹವಾಗಿ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment