80ರ ದಶಕದಲ್ಲಿ ಶಂಕರ್ ನಾಗ್ ನಿರ್ದೇಶಿಸಿದ/ನಟಿಸಿದ ಬಹುತೇಕ ಸಿನಿಮಾಗಳಲ್ಲಿ ರಮೇಶ್ ಭಟ್, ಅರುಂಧತಿ ನಾಗ್, ಅನಂತ್ ನಾಗ್ ಜಗದೀಶ್ ಮಲ್ನಾಡ್ ಮತ್ತು ಅಂಕಲ್ ಲೋಕನಾಥ್ ಅವರುಗಳು ಒಂದಲ್ಲಾ ಒಂದು ರೀತಿಯಲ್ಲಿ ತೊಡಗಿಕೊಂಡಿದ್ದರೆ ಅವರೆಲ್ಲರ ಜೊತೆ ಒಬ್ಬ ಪುಟ್ಟ ಮಗು ಸಹಾ ಇದ್ದೇ ಇರುತ್ತಿತ್ತು. ಬಹುತೇಕರು ಆ ಮಗು ಶಂಕರ್ ನಾಗ್ ಅವರ ಮಗನೇ ಎಂದು ಭಾವಿಸಿದ್ದಂತೂ ಸುಳ್ಳಲ್ಲ. ಮುಂದೆ ಶಂಕರ್ ನಾಗ್, ರವಿಚಂದ್ರನ್ ಅಷ್ಟೇ ಅಲ್ಲದೇ ಬಹುತೇಕ ನಿರ್ದೇಶಕರ ಜೊತೆ ಕೆಲ ಮಾಡಿ ಕನ್ನಡವಲ್ಲದೇ ಇತರೇ ಭಾಷೆಗಳಲ್ಲಿಯೂ ನಟಿಸಿ ತನ್ನ ಅಭಿನಯಕ್ಕಾಗಿ ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದ ಮಂಜುನಾಥ್ ನಾಯ್ಕರ್ ಅರ್ಥತ್ ಎಲ್ಲರ ಪ್ರೀತಿಯ ಮಾಸ್ಟರ್ ಮಂಜುನಾಥ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಉತ್ತರ ಕನ್ನಡ ಮೂಲದ ಯಶವಂತಪುರದ ಬಿಎಚ್‌ಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀ ನಾಗರಾಜ್ ಮತ್ತು ಶ್ರೀಮತಿ ರಾಣಿ ದಂಪತಿಗಳಿಗೆ 23 ಡಿಸೆಂಬರ್ 1976 ರಂದು ಬೆಂಗಳೂರಿನಲ್ಲಿ ಜನಿಸಿದ ಮಗುವಿಗೆ ತಮ್ಮ ಆರಾಧ್ಯ ದೈವ ಮಂಜುನಾಥನ ಹೆಸನ್ನಿಟ್ಟರು. ತಾವು ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಯಶವಂತಪುರದ ಹತ್ತಿರದಲ್ಲೇ ಬಡ ಮಧ್ಯಮ ವರ್ಗದವರೇ ಹೆಚ್ಚಾಗಿರುವ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿದ್ದ ಶೀಟ್ ಮನೆಯೊಂದರಲ್ಲಿ ವಾಸವಾಗಿದ್ದರು. ಅದು ಹೇಗೋ ತಮ್ಮ 3ನೇ ವಯಸ್ಸಿನಲ್ಲೇ ಬಾಲ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಹೀಗೆ 6 ಸಿನಿಮಾದಲ್ಲಿ ಅಭಿನಯಿಸಿ ಅವರ 7ನೇ ಸಿನಿಮಾವಾದ ಹೊಸತೀರ್ಪು ಸಿನಿಮಾದಲ್ಲಿನ ಅಭಿನಯವನ್ನು ನೋಡಿ ಮೆಚ್ಚಿದ ಶಂಕರ್ ನಾಗ್, ಯಾವಾಗ ಮಂಜುನನ್ನು ತಮ್ಮ ತೆಕ್ಕೆಗೆ ತೆಗೆದು ಕೊಂಡರೋ, ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಅಲ್ಲಿಂದ ಮಂಜು, ಶಂಕರ್ ನಾಗ್ ಅವರ ಮನೆಯ ಸದಸ್ಯನೋ ಎನ್ನಿಸುವಂತಾಗಿತ್ತು ಎಂದರೂ ತಪ್ಪಾಗದು. ಸಿನಿಮಾ ಚಿತ್ರೀಕರಣ ಇದ್ದಾಗ ನೇರವಾಗಿ ಮಂಜು ಅವರ ಮನೆಗೇ ಬಂದು ಕರೆದುಕೊಂಡು ಹೋಗುತ್ತಿದ್ದ ಶಂಕರ್ ನಾಗ್ ಅದೆಷ್ಟೋ ಬಾರಿ ಚಿತ್ರೀಕರಣ ತಡವಾದಾಗ ತಮ್ಮ ಮನೆಯಲ್ಲೇ ಮಂಜು ಅವರನ್ನು ಉಳಿಸಿಕೊಳ್ಳುತ್ತಿದ್ದರೂ ಶಂಕರ್ ಅವರ ಜೊತೆ ತಮ್ಮ ಮಗ ಇರುವಾಗ ಅವನ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲಾ ಎಂದೇ ಮಂಜು ಅವರ ಪೋಷಕರು ಭಾವಿಸಿದ್ದದ್ದು ಮಾಸ್ಟರ್ ಮಂಜುನಾಥ್ ಮತ್ತು ಶಂಕರ್ ನಾಗ್ ಅವರ ನಡುವೆ ಇದ್ದ ಅವಿನಾಭಾವ ಸಂಬಂಧದ ದ್ಯೋತಕವಾಗಿತ್ತು.
ಹೀಗೆ ಶಂಕರ್ ನಾಗ್, ನಾಗಾಭರಣ, ಕಾಶೀನಾಥ್ ರವಿಚಂದ್ರನ್ ಮುಂತಾದ ದಿಗ್ಗಜರಂತಹ ನಿರ್ದೇಶಕರ ಗರುಡಿಯಲ್ಲಿ ಪಳಗಿದ ಮಾಸ್ಟರ್ ಮಂಜುನಾಥ್ ಬಾಲನಟನಾಗಿಯೇ, ನೋಡ ನೋಡುತ್ತಲೇ ಕನ್ನಡ, ತೆಲುಗು ಮತ್ತು ಹಿಂದಿ ಹೀಗೆ ಸುಮಾರು 68 ಚಲನಚಿತ್ರಗಳಲ್ಲಿ ಅಂದಿನ ದಕ್ಷಿಣ ಭಾರತದ ಬಹುತೇಕ ನಟ ನಟಿಯರೊಡನೆ ನಟಿಸುವ ಆವಕಾಶವನ್ನು ಪಡೆದುಕೊಂಡರು. ಅದರಲ್ಲಿ ಪ್ರಮುಖವಾದವುಗಳೆಂದರೆ, ನೋಡಿ ಸ್ವಾಮಿ ನಾವಿರೋದು ಹೀಗೆ, ಸಾಂಗ್ಲಿಯಾನ, ರಣಧೀರ, ಯುದ್ಧಕಾಂಡ, ಲವ್ ಮಾಡಿ ನೋಡು, ಕಿಂದರ ಜೋಗಿ, ರಾಮಾಚಾರಿ ತೆಲುಗಿನಲ್ಲಿ ಸ್ವಾತಿ ಕಿರಣಂ ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅವರೊಡನೆ ಅಗ್ನಿಪಥ್ ನಂತಹ ಜನಪ್ರಿಯ ಚಲನಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು.
ರಣಧೀರ ಸಿನಿಮಾದಲ್ಲಿ ಉಮಾಶ್ರೀ ಅವರ ಮಗನಾಗಿ ಅಭಿನಯಿಸಿದ್ದ ಮಂಜು, ಹಂಸಲೇಖ ಅವರ ಕಣ್ಣಿಗೆ ಬಿದ್ದೊಡನೇ, ಏನು ಹುಡ್ಗೀರೋ ಯಾಕಿಂಗ್ ಹಾಡ್ತ್ರೀರೋ? ಲವ್ವು ಲವ್ವು ಎಂದು ಕಣ್ಣೀರಿಡ್ತೀರೋ ಎಂಬ ಹಾಡನ್ನೂ ಹಾಡಿಸಿ ಅದು ಇಂದಿಗೂ ಅತ್ಯಂತ ಜನಪ್ರಿಯವಾಗಿದ್ದು, ಆನಂತರ ಒಂದೆರಡು ಭಕ್ತಿಗೀತೆಗಳ ಧ್ವನಿಸುರಳಿಯನ್ನೂ ಸಹಾ ಹಾಡಿಸಿರುವ ನೆನಪಿದೆ. ಇನ್ನು ರವಿಚಂದ್ರನ್ ಅವರ ಅನೇಕ ಸಿನಿಮಾಗಳಲ್ಲಿ ಅವರ ಸಂಭಾಷಣೆಗಳನ್ನು ಕೇಳಿದ ಕೆಲವರು ಏನಪ್ಪಾ ವಯಸ್ಸಿಗೆ ಮೀರಿ ಮಾತುಗಳನ್ನು ಆಡೋದು ಒಳ್ಳೆದಲ್ಲಾ ಎಂದು ಹೇಳಿದ್ದನ್ನು ಈಗ ನೆನೆಸಿ ಕೊಂಡು ಅನೇಕ ಬಾರಿ ನಕ್ಕಿದ್ದೂ ಉಂಟಂತೆ.
1985ರಲ್ಲಿ ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಇಂಗ್ಲೀಷ್ ಭಾಷೆಯ ಸಣ್ಣ ಸಣ್ಣ ಕಥೆಗಳನ್ನು ಟಿ ಎಸ್ ನರಸಿಂಹನ್ ಅವರು ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ನಿರ್ಮಾಣ ಮಾಡಲು ಮುಂದಾಗಿ ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಮಾಲ್ಗುಡಿ ಎಂಬ ಹಳ್ಳಿಯ ಸೆಟ್ ಹಾಕಿ ಚಿತ್ರೀಕರಣ ಆರಂಭಿಸಿದಾಗ, ಸಹಜವಾಗಿಯೇ ಮಾಸ್ಟರ್ ಮಂಜುನಾಥ್ ಅವರ ಮೊದಲ ಆಯ್ಕೆಯಾದರು. ಅದರ ಮುಂದಿನ ಭಾಗವಾಗಿ ಸಿನಿಮಾ ಎಂದೇ ಚಿತ್ರೀಕರಿಸಿದ ಸ್ವಾಮಿ ಅಂಡ್ ಫ್ರೆಂಡ್ಸ್ ನಲ್ಲಿ ಮಾಸ್ಟರ್ ಮಂಜುನಾಧ್ ಅವರೇ ಆ ಕಥೆಯ ಸ್ವಾಮಿ ಎಂಬ ಮುಖ್ಯ ಭೂಮಿಕೆಯಲ್ಲಿ ಹತ್ತಾರು ಚಿಕ್ಕ ಮಕ್ಕಳೊಂದಿಗೆ ಏಕ ಕಾಲದಲ್ಲಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ನಟಿಸಿದ್ದು ಅವರ ಸಿನಿಮಾ ಜೀವನದ ಉಚ್ಛ್ರಾಯ ಸ್ಥಿತಿಗೆ ತೆಗೆದುಕೊಂಡು ಹೋಯಿತು.
ಮಾಲ್ಗುಡಿ ಡೇಸ್ ಧಾರಾವಾಹಿಯ ಸ್ವಾಮಿ ಪಾತ್ರದ ಬಗ್ಗೆ ಮಾಸ್ಟರ್ ಮಂಜುನಾಥ್ ಅವರೇ ಹೇಳಿರುವಂತೆ, ಆವರಿಗೆ ಸ್ವಾಮಿ ಆಗ ಬೇಕೆಂದು ಕಲ್ಪಿಸಿಕೊಂಡಯೇ ಇರಲಿಲ್ಲವಂತೆ. ಅವರು ಮೈಸೂರು ವಿಶ್ವವಿದ್ಯಾಯದಲ್ಲಿ ಸಾಹಿತ್ಯದಲ್ಲಿ ಅಧ್ಯಯನವನ್ನು ಮಾಡುವವರೆಗೂ ಮಾಲ್ಗುಡಿ ಡೇಸ್ ಎಷ್ಟು ಮೌಲ್ಯಯುತವಾಗಿದೆ ಎಂದೇ ಅವರಿಗೆ ಅರಿವಿರಲಿಲ್ಲ. ನಾಯಕ ಸ್ವಾಮಿಯ ಪಾತ್ರಕ್ಕೂ ಅವರ ನಿಜ ಜೀವನಕ್ಕೂ ಸಂಪೂರ್ಣವಾಗಿ ತದ್ವಿರುದ್ಧವಾಗಿತ್ತು. ಹೆದರಿಕೆ, ಹಿಂಜರಿಕೆ, ನಿರುತ್ಸಾಹ, ಚಿಂತೆ, ತಪ್ಪಿತಸ್ಥ, ಇತ್ಯಾದಿ ವ್ಯಕ್ತಿಗಳೇ ಹೆಚ್ಚಾಗಿದ್ದ ಸ್ವಾಮಿ ಪಾತ್ರವಾದರೇ, ನಿಜ ಜೀವನದಲ್ಲಿ ಅವರು ಬಹಳ ವಿಭಿನ್ನವಾಗಿ ಆಕ್ರಮಣಕಾರಿ, ಆತ್ಮವಿಶ್ವಾಸ ಹೊಂದಿದ ವ್ಯಕ್ತಿಯವರಾಗಿದ್ದರು. ಆರಂಭದಲ್ಲಿ ನಾನೇಕೆ ಹಾಗೆ ವರ್ತಿಸಬೇಕು? ಎಂದು ಅವರನ್ನೇ ಪ್ರಶ್ನಿಸಿಕೊಳ್ಳುತ್ತಿದ್ದರಂತೆ. ಆರಂಭದಲ್ಲಿ ಆ ಪಾತ್ರದಲ್ಲಿ ಅವರಿಗೆ ಭಯವಾದರೆ ನಂತರ ಆ ಪಾತ್ರಕ್ಕಾಗಿ ಅವರು ಪ್ರಜ್ಞಾಪೂರ್ವಕವಾಗಿ ಬದಲಾಯಿಸಿಕೊಂಡರಂತೆ.
ಆ ಸಮಯದಲ್ಲಿ ಇನ್ನೂ 10-11 ವರ್ಷದವರಾಗಿದ್ದ ಕಾರಣ, ಶೂಟಿಂಗ್‌ಗೆ ಮೊದಲು ಆ ಕಾದಂಬರಿಯನ್ನು ಓದಿರಲಿಲ್ಲ ಮತ್ತು ಶ್ರೇಷ್ಠ ನಟ-ನಿರ್ದೇಶಕ ಶಂಕರ್ ನಾಗ್ ಅವರು ಆ ಧಾರಾವಾಹಿಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾಡಲಾಗುತ್ತಿದೆ ಎಂದು ಅವರಿಗೆ ತಿಳಿದಾಗ, ಅಯ್ಯೋ ನನಗೆ ಹಿಂದಿ ಮತ್ತು ಸರಿಯಾಗಿ ಇಂಗ್ಲೀಷ್ ಬರುವುದಿಲ್ಲಾ. ಹಾಗಾಗಿ ನಾನು ಆ ಪಾತ್ರದಲ್ಲಿ ನಟಿಸಲಾರೇ ಎಂದು ಹೇಳಿದಾಗ, ಅರೇ, ಈ ಪಾತ್ರ ನಿನಗೆ ಬಹಳ ಸೂಕ್ತವಾಗಿದೆ ಮತ್ತು ನೀನು ಆ ಎರಡೂ ಭಾಷೆಗಳನ್ನು ನಿರ್ವಹಿಸಬಲ್ಲೆ ಎಂದು ಧೈರ್ಯ ತುಂಬಿದ್ದರಂತೆ. ಆರಂಭದ ಒಂದೆರಡು ವಾರಗಳು ಆವರಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿ ಕೊಳ್ಳುವುದು ಸವಾಲಾಗಿತ್ತು ನಂತರ ದಿನಗಳಲ್ಲಿ ಸರಾಗವಾಗಿ ಅರ್ಥಮಾಡಿಕೊಂಡು ಅತ್ಯಂತ ಸಹಜವಾಗಿ ನಟಿಸಿದ್ದರಂತೆ.
ಆರಂಭದಲ್ಲಿ ಸಿನಿಮಾ ಆಗಿ ಚಿತ್ರೀಕರಣವಾಗಿದ್ದ ಸ್ವಾಮಿ ಅಂಡ್ ಫ್ರೆಂಡ್ಸ್ ನಂತರದ ದಿನಗಳಲ್ಲಿ ವಿವಿಧ ಕಾರಣಕ್ಕಾಗಿ ದೂರದರ್ಶನ ರಾಷ್ಟ್ರೀಯ ವಾಹಿನಿಯಲ್ಲಿ ಸರಣಿಯಾಗಿ ಬಿಡುಗಡೆಯಾದ ನಂತರ ಆ ಸ್ವಾಮೀ ಪಾತ್ರವು ವಿಶ್ವಾದ್ಯಂತ ವ್ಯಾಪಕವಾದ ಮನ್ನಣೆಯನ್ನು ಗಳಿಸಿದ್ದಲ್ಲದೇ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಲ್ಲದೇ, ಪ್ರಶಸ್ತಿಯನ್ನು ಸ್ವೀಕರಿಸಲು ಶಂಕರ್ ನಾಗ್ ಆವರ ಜೊತೆ ದೇಶ ವಿದೇಶಗಳನ್ನು ಸುತ್ತುವ ಅವಕಾಶ ಸಿಕ್ಕಿದ್ದನ್ನು ಅವರು ಇಂದಿಗೂ ಸ್ಮರಣೆ ಮಾಡಿಕೊಳ್ಳುತ್ತಾರೆ.
ಮಾಲ್ಗುಡಿ ಡೇಸ್ ಮುಗಿದ ನಂತರ ಮಾರಿಷಿಯಸ್ ನಲ್ಲಿ ನಾಗಾಭರಣ ಅವರ ಸ್ಟೋನ್ ಬಾಯ್ ಚಿತ್ರೀಕರಣದಲ್ಲಿದ್ದ ಸಮಯದಲ್ಲಿ ತಂದೆಯಂತೆಯೇ ಇದ್ದ ಶಂಕರ್ ಅಕಾಲಿಕ ಮರಣದ ಸುದ್ದಿಯನ್ನು ಕೇಳಿ ಇಡೀ ಚಿತ್ರತಂಡವೇ ಆಘಾತಕ್ಕೆ ಒಳಗಾಯಿತಂತೆ. ಅಂದೆಲ್ಲಾ ವಾರಕ್ಕೊಂದಂತೆ ವಿಮಾನಗಳು ಇದ್ದ ಕಾರಣ ಶಂಕರ್ ನಾಗ್ ಅವರ ಅಂತಿಮ ದರ್ಶನವನ್ನು ಪಡೆಯಲು ಆಗದೇ ಹೋದದ್ದಕ್ಕೆ ದುಃಖ ಪಡುವ ಮಂಜುನಾಥ್ ಮತ್ತೊಂದೆಡೆ, ಅಪಘಾತವಾಗಿ ನಜ್ಜಾಗಿದ್ದ ಅವರ ಮುಖವನ್ನು ನೋಡಿ ಅದನ್ನೇ ಶಾಶ್ವತವಾಗಿ ತಮ್ಮ ಮನದಲ್ಲಿ ಮೂಡಿಸಿಕೊಳ್ಳುವ ಬದಲು ಚೆನ್ನಾಗಿದ್ದ ಶಂಕರ್ ನಾಗ್ ಅವರ ಚಹರೆಯೇ ನನ್ನ ಮನದಲ್ಲಿದೆ ಎನ್ನುತ್ತಾರೆ. ಹೀಗೆ 1990ರಲ್ಲಿ ಶಂಕರ್ ಅವರನ್ನು ಕಳೆದುಕೊಂಡರೆ 1992ರಲ್ಲಿ ಅವರಲ್ಲಿ ಅವರ ತಂದೆಯವರೂ ಹೃದಯಾಘಾತದಿಂದ ನಿಧನರಾದಾಗ, ಒಂದು ರೀತಿಯ ದಿಗ್ಭ್ರಾಂತಕ್ಕೆ ಒಳಗಾಗುತ್ತಾರೆ. ಬಹಳ ದಿನಗಳವರೆಗೆ ಆ ಆಘಾತದಿಂದ ಹೊರ ಬರಲು ತಡಬಡಾಯಿಸುತ್ತಿದ್ದ ಸಂಧರ್ಭದಲ್ಲಿ ತಾಯಿಯವರ ಸಲಹೆಯಂತೆ ಆ ದುಃಖದಿಂದ ಹೊರಬರಲು ಭರತನಾಟ್ಯವನ್ನು ಕಲಿಯಲು ಸೇರಿಕೊಳ್ಳುವ ಮೂಲಕ ಕಳೆದುಕೊಂಡಿದ್ದ ತಮ್ಮ ಅತ್ಮಸ್ಥೈರ್ಯವನ್ನು ಕಂಡುಕೊಂಡರಂತೆ. ಮುಂದೆ ಅವರ ಸಂಪೂರ್ಣ ಜವಾಬ್ಧಾರಿಯು ಅವರ ತಾಯಿಯ ಮೇಲೆ ಬಿದ್ದು, ಅದೇ ಸಮಯದಲ್ಲಿ ಅವರು 10ನೇ ತರಗತಿಯಲ್ಲಿದ್ದ ಬಂದ ಕಾರಣ, ಓದುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಲೂ ತಾಯಿ ಸೂಚಿಸಿದ್ದನ್ನು ಶಿರಸಾವಹಿಸಿದ ಮಂಜುನಾಥ್ಸಂಪೂರ್ಣವಾಗಿ ಚಲನ ಚಿತ್ರರಂಗದಿಂದ ದೂರವಿರಲು ನಿರ್ಧರಿಸಿದರು.
ಆಮ್ಮನ ಆರೈಕೆ ಮತ್ತು ಪ್ರೋತ್ಸಾಹದಿಂದ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡುವ ಮೂಲಕ ಮಂಜು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿಯ ಜೊತೆಗೆ ಸಿಎ ಫೌಂಡೇಶನ್ ಕೋರ್ಸ್ ಅನ್ನು ಸಹ ಮಾಡಿದ್ದಾರೆ. ಇವೆಲ್ಲದರ ಜೊತೆಯಲ್ಲೇ ಸಿನಿಮಾಟೋಗ್ರಫಿಯಲ್ಲಿ ಡಿಪ್ಲೊಮಾ ಪದವಿ ಪಡೆದದ್ದಲ್ಲದೇ, ಚಿಕ್ಕವಯಸ್ಸಿನಿಂದಲೂ ಸುಮಾರು 10-15 ವರ್ಷಗಳ ಕಾಲ ಶಂಕರ್ ನಾಗ್ ಜೊತೆಯಲ್ಲಿ ಸಿನಿಮಾದ ಎಲ್ಲಾ ವಿಭಾಗಗಳನ್ನೂ ನೋಡಿದ್ದರಿಂದ ಬೆಂಗಳೂರು ಚಂದನ ವಾಹಿನಿಗೆ 1999 ರಲ್ಲಿ ದ್ರೋಹ ಮತ್ತು ಅಮಾಸೆ ಎಂಬ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದರಾದರೂ, ಅದೇ ಸಮಯದಲ್ಲಿ ಭಾರತಾದ್ಯಂತ ಐಟಿ ಉದ್ಯಮ ಪ್ರವರ್ಧಮಾನಕ್ಕೆ ಬಂದು ಅವರ ಸ್ನೇಹಿತರೆಲ್ಲರೂ software ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಮಂಜು ಸಹಾ content writer ಆಗಿ ಕೆಲ ಕಾಲ software ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.
ಅದೇ ಸಮಯದಲ್ಲಿಯೇ Dot com companies burst ಆಗಿ recession ಮೂಲಕ ತಮ್ಮ ಕೆಲಸಕ್ಕೇ ಕುತ್ತಾದಾಗ, ತಮ್ಮ ಪ್ರಭಾವವನ್ನು ಬಳಸಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಡಿಪ್ಲೊಮಾ ಫಲಿತಾಂಶಗಳನ್ನು ಇಡೀ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ತಮ್ಮ ಕಂಪನಿಯ ಮೂಲಕ Online ನಲ್ಲಿ ಪ್ರಕಟಿಸಿ ಬಹಳ ಮೆಚ್ಚುಗೆ ಪಾತ್ರರಾಗುತ್ತಾರೆ, ಅದೇ ಸಮಯದಲ್ಲಿ ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು ಮಾಹಿತಿ ತಂತ್ರಜ್ಞಾನಕ್ಕೆ ಅವರು ಅಪಾರವಾಗಿ ಪ್ರೋತ್ಸಾಹ ನೀಡುತ್ತಿದ್ದ ಕಾರಣ, BBMMP ಆಸ್ತಿಯ ತೆರಿಗೆ ಕಟ್ಟುವ ವೆಬ್ ಸೈಟ್ ಮತ್ತು ಭೂಮಿ ಎಂಬ ತಂತ್ರಾಶದ ಮೂಲಕ ಇಡಿ ರಾಜ್ಯದಲ್ಲಿರ ಎಲ್ಲಾ ಆಸ್ತಿಗಳನ್ನೂ ಡಿಜಿಟೈಸೇಶನ್ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಂತರ ಸುಮಾರು 16 ವರ್ಷಗಳ ಕಾಲ ಆಶೋಕ್ ಖೇಣಿಯವರ NICE ರಸ್ತೆಯ ಕಂಪನಿಯಲ್ಲಿ PRO ಆಗಿ ಕೆಲಸ ಮಾಡಿ ಅಲ್ಲಿ ಗಳಿಸಿದ ಅನುಭವದ ಮೇಲೆ ಈಗ ತಮ್ಮದೇ ಆದ ವೇದಾಂತ್ info consultency ಎಂಬ ಕಂಪನಿಯ ಮೂಲಕ ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ.
ವೈಯಕ್ತಿಕ ಜೀವನದಲ್ಲಿ 2019 ಕೋವಿಡ್ ಮುನ್ನಾ ಅವರ ತಾಯಿಯವರನ್ನು ಕಳೆದುಕೊಂಡ ಮಂಜುನಾಥ್ ರಾಷ್ಟ್ರಮಟ್ಟದ ಓಟಗಾರ್ತಿ ಮತ್ತು ಲಾಂಗ್ ಜಂಪರ್ ಆಗಿರುವ ಅಥ್ಲೀಟ್ ಸ್ವರ್ಣರೇಖಾ ಅವರನ್ನು ವಿವಾಹವಾಗಿ ಅವರಿಗೆ 12 ವರ್ಷದ ವೇದಾಂತ್ ಎಂಬ ಪುತ್ರನೊಡನೆ ನೆಮ್ಮದಿಯ ಜೀವನನ್ನು ನಡೆಸುತ್ತಿದ್ದಾರೆ. ಸಿನಿಮಾದಿಂದ ದೂರಾಗಿ ಸುಮಾರು 30ಕ್ಕೂ ಹೆಚ್ಚಿನ ವರ್ಷಗಳಾದರೂ ಇಂದಿಗೂ ಕನ್ನಡಿಗರು ಅಷ್ಟೇ ಪ್ರೀತಿಯಿಂದ ಮಾಸ್ಟರ್ ಮಂಜುನಾಥ್ ನೀವೇಕೆ ಹೀರೋ ಆಗಿ ಸಿನಿಮಾ ಮಾಡಲಿಲ್ಲಾ? ಎಂದು ಕೇಳುವ ಪ್ರಶ್ನೆಗೆ, ಖಂಡಿತವಾಗಿಯೂ ಮತ್ತೆ ನಿರ್ದೇಶಕನಾಗಿ ಕನ್ನಡ ಸಿನಿಮಾಗೆ ಬಂದೇ ಬರುತ್ತೇನೆ ಎಂದು ಹೇಳುತ್ತಾರೆ.
ಬಾಲನಟನಾಗಿ ಸುಮಾರು 68 ಚಿತ್ರಗಳಲ್ಲಿ ನಟಿಸಿರುವ ಮಂಜುನಾಥ್, 26 ಕಿರುತೆರೆಯ ಧಾರಾವಾಹಿಯ ಜೊತೆಗೆ 3 ಕಿರುತೆರೆ ಧಾರಾವಾಹಿ ಮತ್ತು 5 ಟೆಲಿ ಫಿಲ್ಮ್ಸ ಗಳನ್ನು ನಿರ್ದೇಶಿಸಿದ್ದಾರೆ. ಸ್ವಾಮಿ ಇಂಗ್ಲೀಷ್ ಚಲನಚಿತ್ರಕ್ಕೆ 6 ಅಂತರಾಷ್ಟ್ರೀಯ ಮತ್ತು ಒಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಕರ್ನಾಟಕದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಅಂದಿನ ಮಾಸ್ಟರ್ ಮಂಜುನಾಥ್ ಮತ್ತು ಇಂದಿನ ಮಿಸ್ಟರ್ ಮಂಜುನಾಥ್ ಖಂಡಿತವಾಗಿಯೂ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ