ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ಕುಸ್ತಿ ಪಂದ್ಯಾವಳಿಗಳು

bheema_jarasandaನಮ್ಮ ಸಂಸ್ಕೃತಿಯಲ್ಲಿ 64 ವಿದ್ಯೆಗಳಲ್ಲಿದ್ದು ಅದರಲ್ಲಿ ಮಲ್ಲ ಯುದ್ಧ ಅರ್ಥಾತ್ ಕುಸ್ತಿಯೂ ಸಹಾ ಒಂದಾಗಿದೆ. ಯಾವುದೇ ಆಯುಧಗಳನ್ನು ಬಳಸದೇ ಕೇವಲ  ಶಕ್ತಿ ಹಾಗೂ ಯುಕ್ತಿಗಳನ್ನು ಬಳಸಿಕೊಂಡು ಎದುರಾಳಿಗಳ ವಿರುದ್ಧ ಸೆಣಸಿ ಗೆಲ್ಲುವ ಒಂದು ಪ್ರಾಚಿನ ಕಲೆಯಾಗಿದ್ದು. ಈ ರೀತಿಯ ಮಲ್ಲ ಯುದ್ಧದ  ಪ್ರಸಂಗಗಳನ್ನು ನಮ್ಮ ಅನೇಕ ಪುರಾಣ ಕಥೆಗಳಲ್ಲಿ ಅದರಲ್ಲೂ ವಿಶೇಷವಾಗಿ ರಾಮಾಯಣದಲ್ಲಿ ಹನುಮಂತ, ವಾಲಿ, ಸುಗ್ರೀವ ಅತ್ಯುತ್ತಮ ಕುಸ್ತಿಪಟುಗಳಾಗಿದ್ದರೆ, ಅದೇ ರೀತಿ ಮಹಾಭಾರತದಲ್ಲಿ ಭೀಮ ದುರ್ಯೋಧನ , ಜರಾಸಂಧರು ಕೀಚಕರಂತಹ ಮಹಾನ್ ಕುಸ್ತಿಪಟುಗಳಾಗಿದ್ದರು ಎಂದು ಹೇಳುತ್ತವೆ. ಭೀಮ ಮತ್ತು ಜರಾಸಂಧ, ಭೀಮ ಮತ್ತು ಧುರ್ಯೋಧನರ ಅಂತಿಮವಾದ ಕುಸ್ತಿ ಪಂದ್ಯ  ಇಂದಿಗೂ ರೋಚಕ ಎನಿಸಿಕೊಳ್ಳುತ್ತದೆ. ದೇಶದ ಎಲ್ಲಾ ಕುಸ್ತಿಪಟುಗಳಿಗೂ ವಾಯುಪುತ್ರ ಆಂಜನೇಯ ಆರಾಧ್ಯ ದೈವವಾಗಿದ್ದು ಜೈ ಭಜರಂಗ ಬಲಿ ಎನ್ನುವುದು ಅವರ ಘೋಷವಾಕ್ಯವಾಗಿದೆ.

garadi_maneಹಾಗಾಗಿಯೇ ಸುಮಾರು ಎರಡು ಮೂರು ದಶಕಗಳ ಹಿಂದೆ ನಮ್ಮ ದೇಶದ ಬಹುತೇಕ ಹಳ್ಳಿಗಳ ಪುರ ಪ್ರವೇಶ ದ್ವಾರಗಳ ಅಕ್ಕ ಪಕ್ಕದಲ್ಲೇ   ಕೇಸರಿ ಬಾವುಟ ಹಾರುತ್ತಿದ್ದಂತಹ ಗರಡಿ ಮನೆ ಮತ್ತು ಅದರ ಪಕ್ಕದಲ್ಲೊಂದು ಹನುಮಂತನ ಗುಡಿಯನ್ನು ಕಾಣ ಬಹುದಾಗಿತ್ತು. ಯಾವ ಊರಿನಲ್ಲಿ ಈ ರೀತಿಯ ಗರಡಿ ಮನೆ ಮತ್ತು ಹನುಮಂತನ ಗುಡಿ  ಇರುತ್ತದೆಯೋ ಅಂತಹ ಊರಿನಲ್ಲಿ ಯಾವುದೇ ಕಳ್ಳಕಾಕರ ಭಯವಿರುತ್ತಿರಲಿಲ್ಲ ಮತ್ತು  ಆ ಊರಿನ ಹೆಣ್ಣುಮಕ್ಕಳು ನಿರ್ಭಿಡೆಯಾಗಿ ಯಾವ ಹೊತ್ತಿನಲ್ಲಾದರೂ ಓಡಾಡಬಹುದಾಗಿತ್ತು.  ಅಲ್ಲಿನ ಯುವಕರುಗಳು ಗರಡಿ ಮನೆಯಲ್ಲಿ ಕಸರತ್ತು ಮಾಡಿ  ಸಧೃಢರಾಗಿರುತ್ತಿದ್ದರಿಂದ  ಅಲ್ಲಿ ಯಾವುದೇ ಪುಂಡ ಪೋಕರಿಗಳ ಕಾಟವಿರುವುದಿಲ್ಲ ಎಂಬ ಭರವಸೆಯನ್ನು ಮೂಡಿಸುತ್ತಿದ್ದವು.

ಅಂತಹ ಗರಡಿ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಅಲ್ಲೊಂದು ಆಂಜನೇಯನ ದೊಡ್ಡದಾದ ವಿಗ್ರಹ ಇಲ್ಲವೇ ಬಜರಂಗಬಲಿಯ ಆಳೆತ್ತರದ ಭಾವ ಚಿತ್ರ, ಅದರ ಮುಂದೆ ಸದಾಕಾಲವೂ ಉರಿಯುವ  ನಂದಾದೀಪದ ಜೊತೆ ಧೂಪದ ಆಹ್ಲಾದಕರ ಸುವಾಸನೆ ಮತ್ತು ಅಲ್ಲಿರುವ ಅಖಾಡದ ಮರಳು ಮಿಶ್ರಿತ ಕೆಂಪು ಮಣ್ಣಿನ ವಾಸನೆಯು ಮನಸ್ಸಿಗೆ ಹಿತಕರವಾಗಿ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಅಲ್ಲಿ ಹತ್ತಾರು ಕಟ್ಟು ಮಸ್ತಿನ ಯುವಕರುಗಳು ಹನುಮಾನ್ ಚೆಡ್ಡಿ ಅರ್ಥಾತ್ ಲಂಗೋಟಿಗಳನ್ನು ಧರಿಸಿ, ದೇಹಕ್ಕೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಮಿರಮಿರನೆ ಮಿಂಚುತ್ತಾ, ಕೈಯಲ್ಲಿ ಕಲ್ಲುಗುಂಡು, ಬಳೆ, ಮರದ ಗದೆ, ಕೊಂತ ಮುಂತಾದ ಪರಿಕರಗಳನ್ನು ಬಳಸಿಕೊಂಡು ಕಸರತ್ತು ಮಾಡುತ್ತಿದ್ದರೆ, ಮತ್ತೊಂದು ಕಡೆ ಗುರುಗಳ ಸಮ್ಮುಖದಲ್ಲಿ ದಂಡ, ಬಸ್ಕಿಹೊಡೆಯುತ್ತಿರುವುದನ್ನು ಕಾಣ ಬಹುದಾಗಿತ್ತು.

ಅವರೆಲ್ಲರಿಗೂ ಅದು ಕೇವಲ ಗರಡಿ ಮನೆಯಾಗಿರದೇ, ಅದೊಂದು ಶಕ್ತಿ ಕೇಂದ್ತ ಮತ್ತು ಅವರಿಗೆ ದೇವಾಲಯವಿದ್ದಂತೆ. ಅಲ್ಲಿನ ಪವನಸುತ ಹನುಮಾನ ವಿಗ್ರಹ, ಕರೇಲಾ, ಮಲ್ಲಕಂಬಗಳು ಆ ದೇವರನ್ನು ಪೂಜಿಸಲು ಬಳಸುವ ಪರಿಕರಗಳಿದ್ದಂತೆ. ಇನ್ನು ಘಮ್ ಎಂದು ಸುವಾಸನೆ ಬೀರುವ ಕೆಮ್ಮಣ್ಣು ಅವರ ಪಾಲಿಗೆ ಗರ್ಭಗುಡಿ. ಅರಿಶಿನ. ಕುಂಕುಮ, ತುಪ್ಪ ಮಿಶ್ರಿತವಾಗಿರುವ ಈ ಮಣ್ಣಿನಲ್ಲಿ ಸಾಕಷ್ಟು ಔಷಧೀಯ ಸತ್ವವಿದ್ದು ಈ ಮಣ್ಣಿನಲ್ಲಿ ಮಿಂದೇಳುವುದರಿಂದ ಮೈ ಹಗುರಾಗುವುದಲ್ಲದೆ ಚರ್ಮವ್ಯಾಧಿಯೂ ದೂರವಾಗುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರತೀ ದಿನವೂ ಭಕ್ತಿಯಿಂದ ಆ ಮಣ್ಣಿಗೆ ನಮಸ್ಕರಿಸಿ, ಅದನ್ನೇ ತಿಲಕವಾಗಿ ಹಣೆಗೆ ಧರಿಸಿ, ಈ ಮಣ್ಣನ್ನು ಸನಿಕೆಯಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಹಾಕಬೇಕೆಂಬ ಅಲಿಖಿತ ನಿಯಮವಿರುತ್ತದೆ. ಇದರಿಂದ ಸ್ನಾಯುಗಳ ಧೃಢತೆ ಹೆಚ್ಚುವುದಲ್ಲದೆ ದೇಹದ ನಾನಾ ಅಂಗಗಳ ಸದೃಢತೆಗೆ ನೆರವಾಗುತ್ತದೆ. ಈ ಮಣ್ಣಿನಲ್ಲಿ ಹೆಚ್ಚಿನ ಕಬ್ಬಿಣದ ಅಂಶವಿದ್ದು ಅದು, ಮರಳು ಸ್ನಾನದ ಚಿಕಿತ್ಸೆಯಂತೆ, ದೇಹವನ್ನು ತಣ್ಣಗಾಗಿಸಿ, ದೇಹಕ್ಕೆ ವಿಶ್ರಾಂತಿಕೊಡುತ್ತದೆ. ಈ ಕೆಮ್ಮಣ್ಣಿನ ರಾಶಿಯೇ ಕುಸ್ತಿಪಟುಗಳ ವಜ್ರಕಾಯಕ್ಕೆ ಭದ್ರ ನೆಲೆಯಾಗಿರುತ್ತದೆ. ಗರಡಿದಲ್ಲಿ ಕಸರತ್ತು ಮಾಡಿ ಬಹುವಾಗಿ ದಣಿದು ಇಲ್ಲವೇ ಒತ್ತಡಕ್ಕೆ ಸಿಲುಕಿದ ಸಂದರ್ಭದಲ್ಲಿ ಈ ಮಣ್ಣನ್ನು ಹೊದ್ದು ಮಲಗಿದರೆ ನೋವು ಕೂಡಲೇ ನಿವಾರಣೆಯಾಗುತ್ತದೆ. ಮತ್ತು ಕುಸ್ತಿಯ ಅಭ್ಯಾಸದ ವೇಳೆ ಬೆನ್ನು, ಕೈ ಕಾಲುಗಳೇನಾದರೂ ಉಳುಕಿದರೆ ಈ ಮಣ್ಣಿನಲ್ಲಿ ಮಸಾಜ್ ಮಾಡಿಸಿಕೊಂಡಲ್ಲಿ  ನೋವು ಉಪಶಮನವಾಗುತ್ತದೆ ಎಂಬ ನಂಬಿಕೆ ಇದೆ.

WhatsApp Image 2025-01-11 at 14.41.56ಈ ದೇಶಕ್ಕೆ ಮೊಘಲರ ಆಕ್ರಮಣವಾದ ನಂತರ ಗರಡಿ ಮನೆಗಳಲ್ಲಿಯೂ ಅವರ ಛಾಯೆ ಆವರಿಸಿಕೊಂಡು ಇಂತಹ ಗರಡಿ ಮನೆಯಲ್ಲಿನ ಗುರುಗಳನ್ನು ಉಸ್ತಾದ್ ಎಂದೇ ಸಂಬೋಧಿಸುವುದು ವಾಡಿಕೆ ಅವರ ಸಾರರ್ಥ್ಯದಲ್ಲಿ ಪ್ರತೀ ದಿನವೂ ಮುಂಜಾನೆಯೇ ಗರಡಿ ಮನೆಯತ್ತ ಬರುವ ಪೈಲ್ವಾನರುಗಳು ಅಖಾಡದಲ್ಲಿ ಕುಸ್ತಿಗೆ ಇಳಿಯುವ ಮೊದಲು ಅದಕ್ಕೆ ಪೂರಕವಾದ ತಾಲೀಮುಗಳಾದ ಕಲ್ಲಿನ ಸಣ್ಣ ಚಕ್ರಗಳಿಗೆ ಅಡ್ಡ ಕೋಲಿದ್ದು, ಅದನ್ನು ಒಂದು ಕೈಯಲ್ಲಿ ಎತ್ತಿ ಕಸರತ್ತು ಮಾಡುತ್ತಾ, ದೊಡ್ಡ ದೊಡ್ಡ ಗಾತ್ರದ ಚಕ್ರಗಳನ್ನು ಕುತ್ತಿಗೆ ಅಥವಾ ಭುಜದ ಮೇಲೆ ಕೂರುವಂತೆ ಹಾಕಿಕೊಂಡು ಬಸ್ಕಿ ಹೊಡೆಯುತ್ತಾ, ದೇಹದ ಪ್ರತಿಯೊಂದು ಅಂಗಕ್ಕೂ ಸದೃಢತೆಯನ್ನು ವೃದ್ಧಿಸುವ ವಿವಿಧ ಕಸರತ್ತುಗಳನ್ನು ಮಾಡಿ ತಮ್ಮ ಮೈಗಳನ್ನು ಹುರಿಗೊಳಿಸಿ ಹುಲಿಹೆಜ್ಜೆ, ಹನುಮಾನ್ ದಂಡೆ, ಕಟಾಪ್, ಚಪ್ಪಡಿದಂಡೆ, ಸುತ್ತಂಡೆ, ನಿಕಾಲ್, ಉಕಾಡ್, ಜರಾಸಂಧಿ, ಭೀಮಸೇನಿ ಪಟ್ಟು ಮುಂತಾದ ನಾನಾ ವಿಧದ ತಾಲೀಮುಗಳ ಮುಖಾಂತರ ಪರಸ್ಪರ ಕಾದಾಡುತ್ತಾ ತಮ್ಮ ಅಭ್ಯಾಸವನ್ನು ನಡೆಸುತ್ತಾರೆ. ಉಸ್ತಾದ್ ಗಳು ನಾನಾ ರೀತಿಯ ಪಟ್ಟುಗಳ ಮುಖಾಂತರ ಎದುರಾಳಿಯನ್ನು ಹೇಗೆ ಚಿತ್ ಮಾಡಿ, ಅವರನ್ನು ಮಣ್ಣು ಮುಕ್ಕಿಸು ಬೇಕು, ಅವರನ್ನು ಹೇಗೆ ನೆಲಕ್ಕೆ ಮಕಾಡೆ ಮಲಗಿಸ ಬೇಕು ಎಂಬುದನ್ನು ಖಲೀಫರು ಅರ್ಥಾತ್ ಉಸ್ತಾದರೂ ಸಾಕಷ್ಟು ಆಸ್ಥೆ ವಹಿಸಿ ಕಲಿಸಿಕೊಡುತ್ತಿದ್ದರು.

WhatsApp Image 2025-01-11 at 14.43.39ಇನ್ನು ಈ ರೀತಿಯಾದ ಕಟ್ಟು ಮಸ್ತಾದ ಪೈಲ್ವಾನರುಗಳನ್ನು ತಮ್ಮ ರಾಜ್ಯದಲ್ಲಿ ಇರಿಸಿಕೊಳ್ಳುವುದೇ ರಾಜ್ಯದ ಹೆಮ್ಮೆಯ ಸಂಕೇತವಾಗಿರುತ್ತಿದ್ದ ಕಾರಣ, ಪೈಲ್ವಾನರಿಗೆ ರಾಜಾಶ್ರಯ ಸಿಗುತ್ತಿತ್ತು. ಕಾಲ ಕಾಲಕ್ಕೆ ಕುಸ್ತೀ ಪಂದ್ಯಾವಳಿಗಳು ನಡೆದು ಅದು ಪ್ರಜೆಗಳಿಗೆ ಒಂದು ರೀತಿಯ ಮನೋರಂಜನೆಯಾದರೆ, ಪೈಲ್ವಾನರಿಗೆ ಬಿರುದು ಬಾವಲಿಗಳ ಜೊತೆ, ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಮತ್ತು ನಗದು, ಉಂಬಳಿಗಳು ಸಿಗುತ್ತಿದ್ದಲ್ಲದೇ, ಮುಂದೇ ಅಂತಹ ಪೈಲ್ವಾನರುಗಳೇ  ಮಹಾರಾಜರ ಅಂಗರಕ್ಷಕರಾಗಿಯೋ ಇಲ್ಲವೇ ಅವರ ಸೈನ್ಯದಲ್ಲಿ ಕೆಲಸ ಸಿಗುತ್ತಿದ್ದ ಕಾರಣ ಬಹುತೇಕ ಎಲ್ಲಾ ಊರುಗಳಲ್ಲಿಯೂ ಗರಡಿ ಮನೆಗಳು ಹೆಚ್ಚಾಗಿಯೇ ಇರುತ್ತಿದ್ದವು.

ಇನ್ನು ಮಲ್ಲ ಯುದ್ಧಕ್ಕೂ ಮತ್ತು ನಮ್ಮ ಮೈಸೂರು ಸಂಸ್ಥಾನಕ್ಕೂ ಒಂದು ರೀತಿಯ ಅವಿನಾವಭಾವ ಸಂಬಧ. 1638–1659ರ ವರೆಗೆ ಶ್ರೀ ನರಸ ರಾಜ ಒಡೆಯರ್  ಎಲ್ಲರ ಪ್ರೀತಿಯ  ರಣಧೀರ ಕಂಠೀರವರು ಮೈಸೂರಿನ ಮಹಾರಾಜರಾಗಿದ್ದವರು. ಸ್ವತಃ ಅಜಾನುಬಾಹು, ಧೈರ್ಯ, ಶೌರ್ಯವಂತರಾಗಿದ್ದಲ್ಲದೇ ಅತ್ಯುತ್ತಮ ಕುಸ್ತಿ ಪಟುವಾಗಿದ್ದರು. ಅದೊಮ್ಮೆ ತಮಿಳುನಾಡಿನ ತಿರುಚನಾಪಳ್ಳಿಯ ಜಟ್ಟಿಯೊಬ್ಬರು ಸುತ್ತಮುತ್ತಲಿನ ಎಲ್ಲಾ ಜೆಟ್ಟಿಗಳನ್ನೂ ಮೆಟ್ಟಿ ಜಗಜ್ಜಟ್ಟಿ ಎಂದು ವಿಖ್ಯಾತವಾಗಿ ಆ ಊರಿನ ಹೆಬ್ಬಾಗಿಲಿನಲ್ಲಿ ಅವರ ಚೆಲ್ಲವನ್ನು ಕಟ್ಟಿ ಪ್ರತಿಯೊಬ್ಬರೂ ಅದರ ಕೆಳಗೇ ಓಡಾಡುವಂತೆ ದರ್ಪದಿಂದ ಮೆರೆಯುತ್ತಿದ್ದರು. ಅಕಸ್ಮಾತ್ ಯಾರಾದರೂ ಅದರ ಅಡಿಯಲ್ಲಿ ಹೋಗಲು ಬಯಸದಿದ್ದರೆ, ಅವರು ಆ ಜೆಟ್ಟಿಯ ವಿರುದ್ಧ ಹೋರಾಟ ಮಾಡಬೇಕಿತ್ತು. ಈ ವಿಷಯವನ್ನು ತಿಳಿದ  ನಮ್ಮ ರಣಧೀರ ಕಂಠೀರವರು  ಮಾರುವೇಷದಲ್ಲಿ ಅಲ್ಲಿಗೆ ಹೋಗಿ, ಅಲ್ಲಿ ಕಟ್ಟಿದ್ದ ಚೆಲ್ಲವನ್ನು ಕಿತ್ತೊಗೆದು ಆ ಜೆಟ್ಟಿಯೊಂದಿಗೆ ಸೆಣಸಾಡಿ, ಅವನನ್ನು ಅನಾಯಾಸವಾಗಿ ಸೋಲಿಸಿ ಬಂದಿದ್ದರು. ತನ್ನನ್ನು ಈ ಪರಿಯಾಗಿ ಸೋಲಿಸಿದ ವ್ಯಕ್ತಿ ಯಾರು? ಎಂದು ತಿಳಿಯಲು ರಹಸ್ಯವಾಗಿ ತನ್ನ ಗೂಢಾಚಾರರನ್ನು ಕಳುಹಿಸಿ, ತನ್ನನ್ನು ಸೋಲಿಸಿದವರು ಸಾಧಾರಣ ವ್ಯಕ್ತಿಯಾಗಿರದೇ, ಮೈಸೂರಿನ ಒಡೆಯರು ಎಂದು ತಿಳಿದು ಅವರನ್ನು ಮೋಸದಿಂದ ಕೊಲ್ಲುವ ಸಲುವಾಗಿ ಅಂದಿನ ಕಾಲಕ್ಕೇ ದೊಡ್ಡಮ್ಮಣ್ಣಿ ಎಂಬ ಹೆಣ್ಣು ಮಗಳನ್ನು ಮುಂದಿಟ್ಟುಕೊಂಡು (honey trap) ಬಂದಿದ್ದ ಸುಮಾರು 26ಕ್ಕೂ ಅಧಿಕ ಜಟ್ಟಿಗಳನ್ನು ತಮ್ಮ ವಿಜಯನಾರಸಿಂಹ ಎಂಬ ಬಾಕುವಿನಿಂದ ಇರಿದು ಕೊಂದು ಆ ದೊಡ್ಡಮ್ಮಣ್ಣಿಯವರನ್ನು ವಿದ್ಯುಕ್ತವಾಗಿ ಮದುವೆಯಾದದ್ದು ಇತಿಹಾಸ. ಅಂದಿನಿಂದ  ಮೈಸೂರಿನಲ್ಲಿಯೂ ಸಹಾ ಕುಸ್ತಿ ಪಂದ್ಯಾವಳಿಗಳು ಅವ್ಯಾಹತವಾಗಿ ನಡೆಯಲಾರಂಭಿಸಿ ಇಂದಿಗೂ ಸಹಾ ದಸರಾ ಸಂಧರ್ಭದಲ್ಲಿ ಮೈಸೂರು ಅರಸರ ಖಾಸಗೀ ದರ್ಬಾರಿನಲ್ಲಿ ಸಾಂಕೇತಿಕವಾಗಿ ಕುಸ್ತಿಪಂದ್ಯಾವಳಿಗಳು ನಡೆದರೆ ನಂತರ ಹೊರಗಡೆ ಅಖಾಡದಲ್ಲಿ ದಸರಾಶ್ರೀ  ಕುಸ್ತಿ ಪಂದ್ಯಾವಳಿಗಳು ನಡೆಸುವ ಮೂಲಕ ಗತ ವೈಭವವನ್ನು ಮೆಲುಕು ಹಾಕುವಂತೆ ಮಾಡಲಾಗುತ್ತಿದೆ.

WhatsApp Image 2025-01-11 at 14.45.15ಇನ್ನು ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದು ಸಿಲಿಕಾನ್‌ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರು ಸಹಾ ಒಂದು ಕಾಲದಲ್ಲಿ ಕುಸ್ತಿ ಪಂದ್ಯಾವಳಿಗೆ ಪ್ರಸಿದ್ದಿಯನ್ನು ಪಡೆದಿತ್ತು.  ಮೂಲ ಬೆಂಗಳೂರಿನ ಬಳೆಪೇಟೆ, ಚಿಕ್ಕಪೇಟೆ, ತಿಂಗಳರ ಪೇಟೆ, ನಗರ್ತ ಪೇಟೆ, ಕಬ್ಬನ್‌ ಪೇಟೆ, ರಾಣಾಸಿಂಗ್‌ ಪೇಟೆ, ಪೋಲಿಸ್‌ ರಸ್ತೆ, ಶೇಷಾದ್ರಿಪುರ, ಚಿಕ್ಕಪೇಟೆ, ಶಿವಾಜಿ ನಗರದ ಆಸುಪಾಸಿನಲ್ಲಿ ಗಲ್ಲಿಗೊಂದರಂತೆ ಗರಡಿ ಮನೆಗಳಿದ್ದು ಸಾವಿರಾರು ಘಟಾನುಘಟಿ ಪೈಲ್ವಾನರನ್ನು ತಯಾರು ಮಾಡುವ ಕೇಂದ್ರಗಳಾಗಿದ್ದು ಅಲ್ಲಿ  ಸುಪ್ರಸಿದ್ದ ಪೈಲ್ವಾನರುಗಳು ಇದ್ದರು. ಇಲ್ಲಿನ ಜಟ್ಟಿಗಳು ಬೆಳ್ಳಂಬೆಳಿಗ್ಗೆ ಹಾಗೂ ಸಂಜೆ ತಂಪಾದ ನಂತರ ತೊಡೆ ತಟ್ಟುವ ಸದ್ದು ತಂತಾನೇ ಕಿವಿಮೇಲೆ ಬೀಳುತ್ತಿತ್ತು. ನೂರಾರು ಯುವಕರು ಗರಡಿ ಮನೆಗೆ ಬಂದು ಬೆವರು ಇಳಿಸುತ್ತಿದ್ದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಗರಡಿ ಮನೆಗಳು ಯುವಕರಿಗೆ ದೇಹವನ್ನು ಹುರಿಗಟ್ಟಿಸಲು ಪ್ರೇರೇಪಿಸುತ್ತಿದ್ದವು. ಆದರೆ ಇಂದು ರಾಜಾಶ್ರಯ, ಸರ್ಕಾರ ಅಥವಾ ಯಾರದ್ದೇ ಆರ್ಥಿಕ ಸಹಾಯವಿಲ್ಲದೇ ಬಹುತೇಕ ಗರಡಿ ಮನೆಗಳು ದುಃಸ್ಥಿತಿಗೆ ತಲುಪಿದ್ದು ಅಲ್ಲೊಂದು ಇಲ್ಲೊಂದು ಪಳಿಯುಳಿಕೆಗಳಾಗಿ ಕಾಣಸಿಗುತ್ತದೆ. ಇಂದು ಈ ಗರಡಿ ಮನೆಗಳ ಜಾಗವನ್ನು ಮಲ್ಟಿಜಿಮ್‌ಗಳು ಆಕ್ರಮಿಸಿಕೊಂಡಿರುವ ಕಾರಣ, ನಿಧಾನವಾಗಿ ಗರಡಿ ಮನೆ ಸಂಸ್ಕೃತಿ ಮಾಯವಾಗುತ್ತಿರುವುದು ವಿಷಾಧನೀಯವಾಗಿದೆ.

WhatsApp Image 2025-01-11 at 07.38.21ಇದೆಲ್ಲವನ್ನೂ ಮನಗಂಡು ಹಿಂದಿನ ಕಾಲದಲ್ಲಿ ರಾಜ ಮಹಾರಾಜರುಗಳು ನಡೆಸುತ್ತಿದ್ದಂತಹ ಕುಸ್ತಿ ಪಂದ್ಯಾವಳಿಗಳನ್ನು ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರರಿ ದೇವಸ್ಥಾನದ ಪ್ರಧಾನ ಆರ್ಚಕರಾದ ಶ್ರೀ ವಸಂತ ಕುಮಾರ್ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಮಲ್ಲಯುದ್ದ ಕಲೆಯನ್ನು ಬೆಂಗಳೂರು ನಗರದ ಮಟ್ಟದಲ್ಲಿ ಮುನ್ನಲೆಗೆ ತರಬೇಕು ಎನ್ನುವ ಆಶಯದಿಂದ ಇದೇ  ಮೊದಲ ಬಾರಿಗೆ ಭಾನುವಾರ, ಜನವರಿ 12, 2025ರಂದು ವಿದ್ಯಾರಣ್ಯಪುರದ ಸುವರ್ಣಮಹೋತ್ಸವ ಕ್ರೀಡಾಂಗಣದಲ್ಲಿ(ಎನ್.ಟಿ.ಐ. ಮೈದಾನ)  ರಾಜ್ಯಮಟ್ಟದ  ಪುರುಷರು ಹಾಗು ಮಹಿಳೆಯರ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿರುವುದು ನಿಜಕ್ಕೂ ಆಭಿನಂದನಾರ್ಹವಾಗಿದೆ.

ಭಾನುವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನದ ವರೆಗೂ ನಡೆಯುವ ಪಂದ್ಯಾವಳಿಯಲ್ಲಿ  ಭಾಗವಹಿಸಲು ರಾಜ್ಯದ ವಿವಿಧ ಭಾಗಗಳಿಂದ ಸುಮಾರು  30 ಕ್ಕೂ ಹೆಚ್ಚಿನ ಕುಸ್ತಿ ಪಟುಗಳು ಮತ್ತು ಅವರ ಉಸ್ತಾದ್ ಗಳು ಆಗಮಿಸುತ್ತಿದ್ದಾರೆ.  ಈ ಹಿಂದೆ ದಾರಾಸಿಂಗ್ ಮತ್ತು ಕಿಂಗ್ ಕಾಂಗ್ ಗಳ ನಡುವೆ ಮತ್ತು ಇತ್ತೀಚಿನ ದಿನಗಳಲ್ಲಿ ಟಿವಿಗಳಲ್ಲಿ WWF ನಂತಹ ಪೂರ್ವ ನಿರ್ಧಾರಿತ ಕೃತಕ ಪಂದ್ಯವಳಿಗಳನ್ನೇ ರೋಚಕತೆ ಎನ್ನುವವರಿಗೆ, ನಾಳಿನ ಪಂದ್ಯಾವಳಿಗಳು ಕುಸ್ತಿಯ ಅಸಲಿ ಮಜವನ್ನು ತೋರಿಸುತ್ತದೆ ಎಂದರೂ ತಪ್ಪಾಗದು. ಹಾಗಾಗಿ ಆ ಮದಗಜಗಳ ಕಾಳಗವನ್ನು ನೇರವಾಗಿ ನೋಡಿ ಕಣ್ತುಂಬಿಸಿಕೊಳ್ಳಲು ಮತ್ತು ಅವರುಗಳಿಗೆ ಪ್ರೋತ್ಸಾಹ ನೀಡಲು ನಾಳೆ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ನಿಮಗಾಗಿ ಕಾಯ್ತಾ ಇರ್ತೀವಿ. ನೀವೆಲ್ಲರೂ ಬರ್ತೀರೀ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ ಉಮಾಸುತ

Leave a comment