2021 ಕೊರೊನಾ, 2025 ಜಲಗಂಡಾಂತರ?

rangastalaಮಕರ ಸಂಕ್ರಾಂತಿಯಂದು ಬೆಂಗಳೂರು ಮತ್ತು ಅಸುಪಾಸಿನ ಎರಡು ದೇವಾಲಯಗಳಲ್ಲಿ ಸೂರ್ಯನ ರಶ್ಮಿಯು ದೇವರ ಮೇಲೆ ಬೀಳುವುದನ್ನು ಕಾಣಬಹುದಾಗಿದೆ.  ಮಕರ ಸಂಕ್ರಾಂತಿಯ ಮುಂಜಾನೆ ಸೂರ್ಯೋದಯದ ಸಮಯದಲ್ಲಿ, ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಕಡೆಗೆ ಹೋಗುವ ರಸ್ತೆಯಲ್ಲಿ 6 ಕಿಲೋಮೀಟರ್ ದೂರದ ತಿಪ್ಪನಹಳ್ಳಿಯಿಂದ ಬಲಕ್ಕೆ ತಿರುಗಿ ಸುಮಾರು ಅರ್ಧ ಕಿ.ಮೀ. ದೂರದ ರಂಗಸ್ಥಳದಲ್ಲಿರುವ ಶೇಷಶಯನ ಶ್ರೀ ಮೋಕ್ಷರಂಗನಾಥನ ಮೇಲೆ   ಸೂರ್ಯನ ಕಿರಣಗಳು ದೇವಾಲಯದ ಕಿಟಕಿಯ ಮೂಲಕ ಭಗವಂತನ ಪಾದಕಮಲಗಳ ಮೇಲೆ ಕೆಲ ಕ್ಷಣಗಳ ಕಾಲ ಬೀಳುತ್ತದೆ. ಈ ಸುಂದರವಾದ ಸಮಯದಲ್ಲಿ ಭಗವಂತನ ಪಾದಕಮಲಗಳ ದರ್ಶನವನ್ನು  ಪಡೆದವರ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನುವ ನಂಬಿಕೆ ಇರುವ ಕಾರಣ,  ಈ ಅವಿಸ್ಮರಣೀಯ ಘಟನೆಯನ್ನು ವೀಕ್ಷಿಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಅಂದು ದೇವಾಲಯಕ್ಕೆ  ಸಾವಿರಾರು ಭಕ್ತರು ಬರುತ್ತಾರೆ.

Gavi_Gangadahreshwaಅದೇ ರೀತಿಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಬಸವನಗುಡಿಯ ಪಕ್ಕದ ಕೆಂಪೇಗೌಡನಗರ ಅರ್ಥಾಥ್ ಗವಿಪುರಂ ಗುಟ್ಟಹಳ್ಳಿಯಲ್ಲಿರುವ, ಸಪ್ತ ಋಷಿಗಳಲ್ಲಿ ಒಬ್ಬರಾದ ಗೌತಮ ಮಹರ್ಷಿಗಳು ಈ ಗುಹಾಂತರ ದೇವಾಲಯದಲ್ಲಿ ತಪಸ್ಸು ಮಾಡುತ್ತಾ ಇಲ್ಲಿನ ಶಿವಲಿಂಗಕ್ಕೆ ತ್ರಿಕಾಲ ಪೂಜೆ ಸಲ್ಲಿಸುತ್ತಿದ್ದರೆಂಬ ಕಾರಣದಿಂದಾಗಿ ಗೌತಮ ಕ್ಷೇತ್ರ ಎಂದೂ ಪ್ರಸಿದ್ಧವಾಗಿರುವ  ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ  ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರನಿಗೆ ಸೂರ್ಯನ ಅಭಿಷೇಕವಾಗುವ ಕಾರಣದಿಂದಾಗಿ ಈ ದೇವಸ್ಥಾನ ಬಹಳ ವೈಶಿಷ್ಟ್ಯವಾಗಿದೆ. ಪ್ರತೀ ವರ್ಷ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಮಕರ ಸಂಕ್ರಾತಿಯ ದಿನದಂದು ಸೂರ್ಯ ತನ್ನ ಪಥವನ್ನು ಬದಲಿಸುವ ಸಮಯದಲ್ಲಿ ಸೂರ್ಯಾಸ್ತಮಾನದ ಸಮಯದಲ್ಲಿ ಸೂರ್ಯನ ಕಿರಣಗಳು ದೇವಾಲಯದ ಪಶ್ಚಿಮ ಭಾಗದ ಒಂದು ಕಮಾನಿನ ಮೂಲಕ ಒಳ ಬಂದು ಲಿಂಗದ ಮುಂದಿರುವ ನಂದಿಯ ಕೊಂಬುಗಳ ಮಧ್ಯ ಭಾಗದಿಂದ ನುಸುಳಿ, ಶಿವಲಿಂಗದ ಮೇಲೆ ಕೆಲವು ಕಾಲ ಬೀಳುವ ಮೂಲಕ ಶಿವನಿಗೆ ನೈಸರ್ಗಿಕವಾಗಿ ಸೂರ್ಯಾಭಿಷೇಕವನ್ನು ಮಾಡುವ ಈ ಅಧ್ಭುತ ರಸಕ್ಷಣಗಳನ್ನು ವರ್ಣಿಸುವುದಕ್ಕಿಂತ ಪ್ರತ್ಯಕ್ಷ ನೋಡಿಯೇ ತೀರಬೇಕು.

WhatsApp Image 2025-01-15 at 13.49.18 ಅಧ್ಭುತ ಪ್ರಕ್ರಿಯೆಯು ಹವಾಮಾನ ವೈಪರೀತ್ಯದ ಅನುಗುಣವಾಗಿದ್ದು ಕೆಲವು ಸಮಯ ಹಲವು ನಿಮಿಷಗಳ ಕಾಲವಿದ್ದರೆ, ಇನ್ನೂ ಕೆಲ ಸಮಯ ಕೆಲವೇ ಕೆಲವು ಸೆಕೆಂಡುಗಳ ಕಾಲ ಶಿವಲಿಂಗವನ್ನು ಸ್ಪರ್ಷಿಸಿ ಹಾದು ಹೋಗುತ್ತದೆ. ಸೂರ್ಯನ ಕಿರಣಗಳು ಶಿವ ಲಿಂಗದ ಮೇಲೆ ಬಿದ್ದಾಗ, ನುಣುಪಾದ ಶಿವಲಿಂಗ ಮೇಲಿನ ಪ್ರತಿಫಲನದ ಮೂಲಕ ಅದ್ಭುತವಾಗಿ ಪ್ರಕಾಶಿಸುವ ಕ್ರಿಯೆ ನಿಜಕ್ಕೂ ವಣಿಸಲದಳ. ಇಂತಹ ರೋಚಕ ಕ್ಷಣಗಳನ್ನು ನೋಡಿದಾಗ ನಮ್ಮ ಪ್ರಾಚೀನ ಶಿಲ್ಪಿಗಳ ಕಲಾತ್ಮಕ ರಚನೆ, ಅವರಿಗಿದ್ದ ಖಗೋಳ ಹಾಗು ವಿಜ್ಞಾನ ಕ್ಷೇತ್ರದಲ್ಲಿನ ಉನ್ನತ ಜ್ಞಾನಕ್ಕೆ ತೋರಿದ ಕೈಗನ್ನಡಿಯಾಗಿದ್ದು, ಈ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಸಾವಿರಾರು ಭಕ್ತಾದಿಗಳು ಮಧ್ಯಾಹ್ನದಿಂದಲೇ ದೇವಸ್ಥಾನದಲ್ಲಿ ಸರದಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪರಮ ಪಾವನರಾಗುವುದು ಇಲ್ಲಿ ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಈ ಗುಹಾಂತರ ದೇವಾಲಯದಲ್ಲಿ ನೆರೆದಿರುವ ಎಲ್ಲಾ ಭಕ್ತಾದಿಗಳು ಸೂರ್ಯರಶ್ಮಿ‌ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಹೋಗುತ್ತಿದ್ದದ್ದನ್ನು ಗಮನಿಸಿ ಅಲ್ಲಿನ ಆಡಳಿತ ಮಂಡಳಿ  ಭಕ್ತರಿಗಾಗಿ ದೊಡ್ಡ ದೊಡ್ಡ LED ಪರದೆಗಳ ಮೇಲೆ ನೇರ ಪ್ರಸಾರದ ವ್ಯವಸ್ಥೆಯನ್ನೂ ಸಹಾ ಮಾಡಲಾಗುತ್ತದೆ.

ಆದರೆ  2025ರ ಜನವರಿ 14, ಮಂಗಳವಾರ, ಸೂರ್ಯ ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಟವಾಡುತ್ತಾ ಬಂದು ಹೋಗುತ್ತಿದ್ದರೂ, ದಿನವಿಡೀ ಮೋಡ ಕವಿದ ವಾತಾವರಣ ಇದ್ದ ಕಾರಣ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ  ಬೆಂಗಳೂರಿನ ಈ ಶ್ರೀ ಗವಿಗಂಗಾಧರೇಶ್ವರನ ಮೇಲೆ ಎಂದಿನಂತೆ  ಸೂರ್ಯನ ಕಿರಣ ಸ್ಪರ್ಶಿಸದೇ ಇರುವುದೇ  ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಪ್ರತೀ ವರ್ಷ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಾವಣೆ ಸಂದರ್ಭದಲ್ಲಿ ಸಾಕ್ಷಾತ್​ ಸೂರ್ಯದೇವನೇ ಇಲ್ಲಿನ ಶಿವನ ಪಾದಕ್ಕೆ ಎರಗಿ ಆಶೀರ್ವಾದ ಮತ್ತು ಅನುಮತಿ ಕೋರಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಾಗುತ್ತಾನೆ  ಎನ್ನುವುದೇ ಎಲ್ಲರ ನಂಬಿಕೆಯಾಗಿದ್ದು ಅದೇ ರೀತಿ ಈ ವರ್ಷವೂ  ಸಂಜೆ 5 ಗಂಟೆ 14 ನಿಮಿಷದಿಂದ 5 ಗಂಟೆ 19 ನಿಮಿಷದ ಮಧ್ಯೆ ಸೂರ್ಯ ದೇವ ಕಾಣಿಸಿಕೊಳ್ಳುತ್ತಾನೆ 3-4 ನಿಮಿಷಗಳ ಕಾಲದ ಶುಭ ಮುಹೂರ್ತದ ವೇಳೆ ಸೂರ್ಯನ ರಶ್ಮಿ ಭಗವಂತನ ಮೇಲೆ ಕಾಣಿಸಿಕೊಳ್ಳುತ್ತದೆ ಎಂದೇ ನಿಶ್ಚಯವಾಗಿ, ಈ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಎಂದಿನಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳ ದಂಡೂ ಅಲ್ಲಿ ನರೆದಿದ್ದರೂ,  ಹವಾಮಾನದ ವೈಪರೀತ್ಯಗಳ ಕಾರಣದಿಂದಾಗಿ ಈ ದಿನ ದಿನಕರ ದೇವಾಲಯದಲ್ಲಿ ಕಾಣಿಸಿಕೊಳ್ಳಲೇ ಇಲ್ಲಾ.

WhatsApp Image 2025-01-15 at 13.50.07ಸಾಮಾನ್ಯವಾಗಿ ಮಕರ ಸಂಕ್ರಮಣದಂದು ಸ್ವಾಮಿಯ ಮೇಲೆ ಸೂರ್ಯ ರಶ್ಮಿಯು ಕಾಣಿಸಿಕೊಳ್ಳುವ ಸಮಯವನ್ನು ಆಧಾರವಾಗಿ ಪರಿಗಣಿಸಿ ದೇವಾಲಯದ ಪ್ರಧಾನ ಅರ್ಚಕರಾದ ಡಾ. ಸೋಮಸುಂದರ ದೀಕ್ಷಿತರು ಆ ವರ್ಷದ ಶುಭ ಅಶುಭಗಳು ಅರ್ಥಾತ್  ಒಳಿತು ಕೆಡಕುಗಳ ಸುಳಿವು ನೀಡುವ ಪದ್ದತಿ ರೂಢಿಯಲ್ಲಿದೆ. ಸೋಮಸುಂದರ ದೀಕ್ಷಿತರು ತಮ್ಮ ಸುದೀರ್ಘ 70 ವರ್ಷಗಳ ಅನುಭವದಲ್ಲಿ ಈ ರೀತಿಯಾಗಿ ಸೂರ್ಯನ ಕಿರಣಗಳು ದೇವರ ಮೇಲೆ ಬೀಳದೇ ಇರುವುದು  3ನೇ ಬಾರಿಯಂತೆ. 2021ರಲ್ಲೂ ಹೀಗೆಯೇ ಸೂರ್ಯನ ರಶ್ಮಿ ದೇವರ ಮೇಲೆ ಬೀಳದೇ ಹೋದದ್ದನ್ನು ಗಮನಿಸಿದ ಅರ್ಚಕರು ಈ ಬಾರಿ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು ಎಲ್ಲರೂ ಎಚ್ಚರದಿಂದಿರ ಬೇಕು ಎಂಭ ಭವಿಷ್ಯ ನುಡಿದಿದ್ದು, ಅದರಂತೆಯೇ ಜಗತ್ತಿನಾದ್ಯಂತ  ಕೊರೊನಾ ಕಾಣಿಸಿಕೊಂಡು ಲಕ್ಷಾಂತರ ಅಮಾಯಕರರು ಸಾವು ನೋವನ್ನು ಅನುಭವಿಸಿದ್ದರು.

ಈ ಬಾರಿಯೂ ಅದೇ ಪುನರಾವರ್ತನೆ ಆಗಿದ್ದನ್ನು ಗಮನಿಸಿದ ಪ್ರಧಾನ ಅರ್ಚಕರು, ಪ್ರತಿ ನಿತ್ಯವೂ ದೇವರಿಗೆ ಅಭಿಷೇಕವನ್ನು  ಮಾಡುವ ಅವರಿಗೆ ಅಲ್ಲಿ ಆಗುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರವಾಗುತ್ತದೆಯಂತೆ, ತೇನ ವಿನಾ ತೃಣಮಪಿ ನ ಚಲತಿ ಅರ್ಥಾತ್, ಭಗವಂತನ ಅನುಗ್ರಹವಿಲ್ಲದೇ, ಒಂದು ಹುಲ್ಲು ಕಡ್ಡಿಯೂ ಅಲುಗುವುದಿಲ್ಲ ಎನ್ನುವಂತೆ, ಈ ಬಾರಿ ಭಗವಂತನ ಅನುಗ್ರಹವಿಲ್ಲದ ಕಾರಣ ,  ಸೂರ್ಯನ ಕಿರಣಗಳು ಅಗೋಚರವಾಗಿದ್ದು,  ಈ ಬಾರಿ ಜಗತ್ತಿನಲ್ಲಿ ಜಲಕಂಟಕಗಳಂತಹ(ಜಲ ಗಂಡಾಂತರ) ಪ್ರಕೃತಿ ವಿಕೋಪಗಳು ನಡೆಯುವ ಸಾಧ್ಯತೆ ಇರುವ ಕಾರಣ ಎಲ್ಲರೂ ಎಚ್ಚರದಿಂದಿರಬೇಕು ಎಂದು ಹೇಳಿರುವುದು, ಈ ಹಿಂದೆ ಇದೇ ರೀತಿ ಆದ ಸಂಧರ್ಭದಲ್ಲಿ ಅವರು ಹೇಳಿದ್ದ ಭವಿಷ್ಯವಾಣಿ ಸತ್ಯವಾಗಿದ್ದ ಕಾರಣ, ಸಕಲ ಆಸ್ತಿಕ ಬಂಧುಗಳಲ್ಲಿ ಆತಂಕವನ್ನು ಉಂಟು ಮಾಡಿದೆ.

ಜಾತಸ್ಯ ಮರಣಂ ಧೃವಂ ಅರ್ಥಾತ್ ಹುಟ್ಟಿದವರು ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎನ್ನುವುದು ಈ ಜಗದ ನಿಯಮವಾಗಿದ್ದು, ಆ ರೀತಿ ಸಾಯುವುದು ಸಹಾ ಪೂರ್ವ ನಿಧಾರವಾಗಿರುತ್ತದೆ. ಅದೇ ರೀತಿಯಾಗಿ ಸಾಯುವ ವಿಧಾನಗಳೂ ಸಹಾ ವಿವಿಧ ರೀತಿಯಲ್ಲಿರುತ್ತದೆ.  ಹಾಗಾಗಿಯೇ ಬಹುತೇಕರು ಪ್ರತಿ ನಿತ್ಯವೂ ತಮ್ಮ ಪ್ರಾರ್ಥನೆಯಲ್ಲಿ  ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾಂ  ಎಂದು ಭಗವಂತನಲ್ಲಿ ಕೇಳಿಕೊಳ್ಳುವುದೂ ಸಹಾ ರೂಢಿಯಲ್ಲಿದೆ.  ಅಯ್ಯಾ ಭಗವಂತ,  ಬದುಕಿರುವಾಗ, ಜೀವನವನ್ನು ಸಾಗಿಸುವ ಸಲುವಾಗಿ ಯಾರ ಬಳಿಯೂ ಬೇಡದೇ, ಸ್ವಾವಲಂಬಿ ಆಗಿರುವಂತೆಯೂ ಮತ್ತು ಅಂತ್ಯ ಕಾಲ ಅರ್ಥಾತ್ ಮರಣಕಾಲದಲ್ಲಿ ಹೆಚ್ಚು ಶ್ರಮಪಡದೆ, ಬೇರೆಯವರಿಗೆ ಭಾರವಾಗದೆ, ಆಸ್ಪತೆಯ ಖರ್ಚು ಮತ್ತು ನೋವು ಸಂಕಟಗಳಿಲ್ಲದೇ ಕಷ್ಟವಿಲ್ಲದಂತಹ ಸಾವು ಅರ್ಥಾತ್ ಮುಕ್ತಿಯನ್ನು ನೀಡು ಎನ್ನುವುದಾಗಿದೆ.

ಹಾಗಾಗಿ ಪುರಂದರ ದಾಸರೇ ಹೇಳಿರುವಂತೆ

ಬಂದದ್ದೆಲ್ಲ ಬರಲಿ ಗೋವಿಂದನ ದಯ ಒಂದಿರಲಿ||ಪ||

ಇಂದಿರೆ ರಮಣನ ಧ್ಯಾನವ ಮಾಡಲು
ಬಂದ ದುರಿತ ಬಯಲಾದುದಿಲ್ಲವೆ||ಅ.ಪ||

ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ ಘೋರ ದುರಿತ ಬಯಲಾದುದಿಲ್ಲವೆ?||1||

ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ
ಶ್ರೀರಮಣನ ಸಿರಿ ಚರಣ ಶರಣರಿಗೆ ಕ್ರೂರ ಯಮನು ಶರಣಾಗತನಲ್ಲವೆ?||2||

ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ
ಮಂಗಳ ಮಹಿಮ ಪುರಂದರವಿಠಲ ಶುಭಾಂಗನ ದಯವೊಂದಿದ್ದರೆ ಸಾಲದೆ||3||

ಬಂದದ್ದೆಲ್ಲ ಬರಲಿ ಗೋವಿಂದನ ದಯ ಒಂದಿರಲಿ||ಪ||

ಎಲ್ಲರಿಗೂ ಆಗುವ ಕಷ್ಣ ನಷ್ಟಗಳು ನಮಗೂ ಸಹಾ ಆಗುತ್ತದೆ ಎನ್ನುವುದನ್ನು ಮನದಲ್ಲಿ ಇಟ್ಟುಕೊಂಡು ಭಗವಂತನಲ್ಲಿ ಭಕ್ತಿಯಿಂದ  ಯಾರಿಗೂ ಕಷ್ಟವಾಗದಂತಹ ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವುದಷ್ಟೇ ನಮಗೂ ನಿಮಗೂ ಉಳಿದಿದೆ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ ಉಮಾಸುತ

Leave a comment