ಜೀವನ ಎನ್ನುವುದು ಒಂದು ರೈಲು ಪಯಾಣವಿದ್ದಂತೆ. ರೈಲು ಯಾವುದೇ ಧರ್ಮ, ಜಾತಿ, ಭಾಷೆ ವರ್ಣ ಎಂಬ ಬೇಧವಿಲ್ಲದೇ, ಎಲ್ಲ ರೀತಿಯ ಪ್ರಯಾಣಿಕರನ್ನು ಹೊತ್ತು ಕೊಂಡು ನಿಗಧಿತ ಸ್ಥಳದಿಂದ ಸಮಯಕ್ಕೆ ಸರಿಯಾಗಿ ಹೊರಟು ಒಂದೊಂದೇ ನಿಲ್ದಾಣವನ್ನು ತಲುಪಿ ಅಲ್ಲಲ್ಲಿ ಪ್ರಯಾಣಿಕರನ್ನು ಇಳಿಸುತ್ತಾ, ಮತ್ತೆ ಹತ್ತಿಸಿಕೊಳ್ಳುತ್ತಾ, ತನ್ನ ಪೂರ್ವನಿರ್ಧಾರಿತ ಗಮ್ಯಸ್ಥಾನವನ್ನು ತಲುಪುವಷ್ಟರಲ್ಲಿ ಅದೆಷ್ಟೋ ಮಂದಿ ಅದರ ಭಾಗವಾಗಿ ಹೋಗಿರುತ್ತಾರೆ. ಹಾಗೆ ಪ್ರಯಾಣಿಸುವ ಎಲ್ಲರ ಪರಿಚಯವು ರೈಲಿಗೆ ಇಲ್ಲದೇ ಹೋದರೂ, ಖಂಡಿತವಾಗಿಯೂ ಕೆಲವರಂತೂ ಅದರ ನೆನಪಿನ ಭಾಗವಾಗಿರುತ್ತಾರೆ. ಅದೇ ರೀತಿ ನನ್ನ ಜೀವನದಲ್ಲಿ ಕೆಲ ವರ್ಷಗಳ ಹಿಂದೆ ಸಂಘದ (RSS) ಮೂಲಕ ಪರಿಚಯವಾದ ಗೆಳೆಯ ಸರಳ ಸಜ್ಜನ ಮತ್ತು ಮಿತಭಾಷಿಯಾಗಿದ್ದಂತಹ ಶ್ರೀ ಮೋಹನ್ ದಾಸ್ ಪ್ರತೀ ದಿನವೋ ಇಲ್ಲವೇ ಪ್ರತೀ ವಾರವೂ ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸದೇ ಹೋದರೂ, ಒಂದೇ ವಯಸ್ಸಿನ, ಒಂದೇ ಮನಸ್ಥಿತಿಯ, ಒಂದೇ ರೀತಿಯ ತತ್ವಸಿದ್ಧಾಂತ ಮತ್ತು ವಿಚಾರಧಾರೆಯನ್ನು ಹೊಂದಿದ್ದ ಕಾರಣ ವಿಷಯಾಧಾರಿತವಾಗಿ ಪರಸ್ಪರ ಅಭಿಪ್ರಾಯಗಳನ್ನು ಆಗ್ಗಾಗ್ಗೆ ಹಂಚಿಕೊಳ್ಳುತ್ತಿದ್ದದ್ದಲ್ಲದೇ, ನಮ್ಮ ಮನೆಯ ಅಕ್ಕ ಪಕ್ಕ ಬಂದಾಗಲೇಲ್ಲಾ, ಮನೆಗೆ ಬಂದು ಹೋಗುತ್ತಿದ್ದಂತಹ ಗೆಳೆಯ. ಕೇವಲ ಎರಡು ವಾರಗಳ ಹಿಂದೆ ಒಟ್ಟಿಗೆ ಕುಳಿತು ಊಟ ಮಾಡಿದ್ದಂತಹ ಗೆಳೆಯ ಇದ್ದಕ್ಕಿದ್ದಂತೆಯೇ ಅಕಾಲಿಕವಾಗಿ ಸಣ್ಣ ವಯಸ್ಸಿನಲ್ಲೇ ಅಗಲಿರುವುದು ನಿಜಕ್ಕೂ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ.
ಅದು 2010-12ರ ಸಮಯ ಇರಬಹುದು ನಮ್ಮ ಯಲಹಂಕ ಭಾಗದ ಸಂಘದ ಕಾರ್ಯಕ್ರಮವೊಂದರಲ್ಲಿ ನನಗೆ ಮೊದಲ ಬಾರಿಗೆ ಮೋಹನ್ ದಾಸ್ ಅವರ ಪರಿಚಯವಾಯಿತು. ನದಿ ಮೂಲ, ಋಷಿಮೂಲ, ಗಂಡಿನ ಸಂಬಳ ಹೆಣ್ಣಿನ ವಯಸ್ಸು ಕೇಳಬಾರದು ಎನ್ನುತ್ತಾರೆ ಹಿರಿಯರು. ಆದರೆ ಸಂಘದಲ್ಲಿ ಅದಕ್ಕೆ ತದ್ವಿರುದ್ದವಾಗಿ ಭೇಟಿಯಾದ ಮೊದಲ ಕ್ಷಣದಲ್ಲೇ ಅವರ ಹೆಸರು, ಊರು, ಉದ್ಯೋಗ, ಸಂಘದ ಜವಾಬ್ಧಾರಿ ಅವರ ಹವ್ಯಾಸ ಮುಂತಾದವುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಅಲಿಖಿತ ರೂಢಿಗಿದ್ದು, ಮೊದಲಿಗೆ ನನ್ನ ವಿಚಾರಗಳನ್ನೆಲ್ಲಾ ಅವರಿಗೆ ತಿಳಿಸಿ ನಂತರ ಮೋಹನ್ ದಾಸ್ ಮೂಲತಃ ಮಂಗಳೂರು (ಅವಿಭಜಿತ ದಕ್ಷಿಣ ಕನ್ನಡದ) ಸಂಪ್ರದಾಯಸ್ಥ ಕುಟುಂಬದ ಹಿನ್ನಲೆಯವರಾಗಿದ್ದು, ಬಾಲ್ಯದಿಂದಲೂ ಸಂಘದ ಸ್ವಯಂಸೇವಕರಾಗಿದ್ದು, ತಮ್ಮ ಡಿಪ್ಲೊಮ ಮುಗಿಸಿದ ನಂತರ ಕೆಲಸವನ್ನರಸಿಕೊಂಡು ಬೆಂಗಳೂರಿಗೆ ಬಂದು ವಿಜಯನಗರ/ಗೋವಿಂದರಾಜ ನಗರದ ಬಳಿ ತಮ್ಮ ಗೆಳೆಯರೊಂದಿಗೆ ವಾಸ ಮಾಡುತ್ತಾ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಲೇ, ಪ್ರತಿ ನಿತ್ಯವೂ ತಪ್ಪದೇ ಸಂಘದ ಶಾಖೆಗೆ ಹೋಗುತ್ತಿದ್ದದ್ದಲ್ಲದೇ, ಸಂಘದ ಜವಾಬ್ಧಾರಿಯನ್ನೂ ಸಹಾ ಹೊಂದಿರುತ್ತಾರೆ.
ನಂತರ ಎಸ್ಕಾರ್ಟ್ ನಲ್ಲಿ ಕೆಲಸ ಸಿಕ್ಕ ನಂತರ ತಮ್ಮ ನಿವಾಸವನ್ನು ಜಕ್ಕೂರು/ಬ್ಯಾಟರಾಯನ ಪುರಕ್ಕೆ ಬದಲಿಸಿ, ಆರಂಭದಲ್ಲಿ ಹೆಬ್ಬಾಳ ಭಾಗ ನಂತರ ಯಲಹಂಕ ಭಾಗದ ಸಂಘದ ವಿವಿಧ ಜವಾಬ್ಧಾರಿಗಳನ್ನು ನಿಭಾಯಿಸಿ ನನಗೆ ಪರಿಚಯವಾದಾಗ ಭಾಗ ಬೌದ್ಧಿಕ ಪ್ರಮುಖ್ ನಂತಹ ಗುರುತರವಾದ ಜವಾಬ್ಧಾರಿಯನ್ನು ಹೊಂದಿದ್ದರು. ಈ ಮಧ್ಯೆ ವಿವಾಹವಾಗಿ ಮುದ್ದಾದ ಎರಡು ಹೆಣ್ಣು ಮಕ್ಕಳ ತಂದೆಯೂ ಸಹಾ ಆಗಿದ್ದು, ಕಾಂಗರೂ ತನ್ನ ಮಗುವನ್ನು ಎದೆಗೆ ಅಪ್ಪಿಕೊಳ್ಳುವಂತೆ ಹೋದ ಬಂದ ಕಡೆಯಲೆಲ್ಲಾ ತಮ್ಮ ಕಿರಿಯ ಮಗಳನ್ನು ಕರೆದುಕೊಂಡು ಹೋಗುವುದನ್ನು (ನಮ್ಮ ಮನೆಗೆ ಬಂದಾಗಲೆಲ್ಲಾ ಅಪ್ಪಾ ಮಗಳು ಕೂಡಿಯೇ ಬರುತ್ತಿದ್ದರು) ರೂಡಿಯಲ್ಲಿಟ್ಟಿಕೊಂಡಿದ್ದರು.
ಆನಂತರ ಹಲವಾರು ಭಾಗದ ಕಾರ್ಯಕ್ರಮಗಳು ಮತ್ತು ಬೌದ್ಧಿಕ್/ಬೈಠಕ್ಕಿನಲ್ಲಿ ಭೇಟಿಯಾದರೂ, ನನಗೆ ಬಹಳ ಆತ್ಮೀಯರಾಗಿದ್ದು ಮತ್ತು ಅವರ ಜ್ಞಾನದ ಅರಿವಾಗಿದ್ದು ಬಹುಶಃ 2014-15ರಲ್ಲಿ ನಮ್ಮ ವಿದ್ಯಾರಣ್ಯಪುರದಲ್ಲೇ ನಡೆದ ಘೋಷ್ ವರ್ಗದಲ್ಲಿ. ಆ ಸಮಯದಲ್ಲಿ ನಾನು ಜಾಲಹಳ್ಳಿ ನಗರದ ಸಹ ವ್ಯವಸ್ಥಾ ಪ್ರಮುಖ್ ಆಗಿದ್ದರಿಂದ ಸಹಜವಾಗಿ ಆ ಘೋಷ್ ವರ್ಗದ ಬಹುತೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಿತ್ತು. ಶುಕ್ರವಾರ ಸಂಜೆ ಯಿಂದ ಭಾನುವಾರದ ಸಂಜೆಯವರೆಗೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಸ್ವಯಂಸೇವಕರ ಅನುಕೂಲಕ್ಕಾಗಿ ನೀರಿನ ಟ್ಯಾಂಕಿನಿಂದ ಡ್ರಮ್ ಗಳಿಗೆ ನೀರನ್ನು ತುಂಬಿಸಲು ಪರದಾಡುತ್ತಿದ್ದ ನನ್ನನ್ನು ನೋಡಿದ ಮೋಹನ್ ದಾಸ್ ನಿಮ್ಮ ಬಳಿಯ ಪೈಪ್ ಇದೆಯೇ ಎಂದು ಕೇಳಿದರು. ಕೂಡಲೇ ಹತ್ತಿರದಲ್ಲೇ ಇದ್ದ ನಮ್ಮ ಮನೆಯಿಂದ ಎರಡು ದೊಡ್ಡ ದೊಡ್ಡ ಪೈಪ್ ಗಳನ್ನು ತಂದು ಕೊಡುತ್ತಿದ್ದಂತೆಯೇ, ಸಣ್ಣಗಿದ್ದ ಪ್ರಬಂಧಕ್ ಒಬ್ಬನನ್ನು ಟ್ಯಾಂಕ್ ಮೇಲೆ ಹತ್ತಿಸಿ ಎರಡೂ ಪೈಪ್ ಗಳನ್ನು ಆ ಟ್ಯಾಂಕಿನೊಳಗೆ ಹಾಕಿ ನೀರು ಪೈಪ್ ನೊಳಗೆ ಸಂಪೂರ್ಣ ತುಂಬಿದ ನಂತರ ಒಂದು ತುದಿಯನ್ನು ಟ್ಯಾಂಕ್ ನಿಂದ ಕೆಳಗೆ ಹಾಕಿ ಸ್ವಲ್ಪ ಜಗ್ಗುತ್ತಿದ್ದಂತೆಯೇ ಸೈಫನ್ ಸಿದ್ಧಾಂತದ ಆಧಾರದ ಮೇರೆಗೆ ನೀರು ಸರಾಗವಾಗಿ ಹರಿಯುತ್ತಿದ್ದಂತೆಯೇ, ಅರೇ ಇಷ್ಟು ಸಣ್ಣ ವಿಷಯ ನಮ್ಮ ತಲೆಗೆ ಹೊಳೆಯಲೇ ಇಲ್ಲವಲ್ಲಾ ಎಂದು ಪೇಚಾಡಿಕೊಳ್ಳುವಷ್ಟರಲ್ಲೇ ಎಲ್ಲಾ ಡ್ರಮ್ಮುಗಳನ್ನು ತುಂಬಾಗಿತ್ತು. ಆಗಲೇ ತಿಳಿದಿದ್ದು ಅವರು ಪೀಣ್ಯಾದ waters companyಯಲ್ಲಿ maintenance department head ಆಗಿ ಇದೇ ರೀತಿಯ ಕೆಲಸವನ್ನು ಹತ್ತು ಹಲವಾರು ಬಾರಿ ಮಾಡಿ ಅನುಭವಸ್ಥರಾಗಿದ್ದರು.
ಈ ಪ್ರಕರಣದ ನಂತರ ನನ್ನ ಮತ್ತು ಅವರ ನಡುವಿನ ಬಾಂಧವ್ಯ ಮತ್ತಷ್ಟೂ ಗಟ್ಟಿಯಾಗಿದ್ದಲ್ಲದೇ, ನಂತರದ ದಿನಗಳಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತಾಗಿ ಬಹಳಷ್ಟು ಚರ್ಚೆಗಳನ್ನು ಮಾಡುತ್ತಲೇ ಹೋದೆವು. ನೋಡಲು ಬಹಳ ಸೌಮ್ಯ ಮತ್ತು ಮಿತಭಾಷಿಯಾದರೂ ಒಮ್ಮೆ ವಿಷಯಾಧಾರಿತ ಚರ್ಚೆಗೆ ಇಳಿಯುತ್ತಿದ್ದಂತೆಯೇ ಬಹಳ ಕಠಿಣ ಮನುಷ್ಯ ಎಂದೆನಿಸಿಕೊಳ್ಳುತ್ತಿದ್ದರು. ತಮಗೆ ಸರಿ ಎನಿಸಿದ್ದನ್ನು ನೇರ, ದಿಟ್ಟ, ನಿರಂತರ ಎನ್ನುವಂತೆ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಿದ್ದ ಕಾರಣ, ಕೆಲವೊಮ್ಮೆ ಮುಜುಗರಕ್ಕೂ ಒಳಗಾಗುತ್ತಿದ್ದದ್ದುಂಟು.
ನಾವಿಬ್ಬರೂ ಭಾಗವಾಗಿದ್ದ ಸಮಾನ ಮನಸ್ಕರ ವಾಟ್ಸಾಪ್ ಗುಂಪಿನಲ್ಲಿ ನಾನು ಪ್ರಕಟಿಸುತ್ತಿದ್ದ ಲೇಖನಗಳ ಬಗ್ಗೆ ಅನೇಕ ಬಾರಿ ವಾದ ವಿವಾದಗಳು ಶುರುವಾಗಿ ಅದು ವಿತಂಡ ವಾದಕ್ಕೆ ತಿರುಗಿದಾಗ ಅನೇಕ ಬಾರಿ ನನ್ನ ಪರವಾಗಿ ವಹಿಸಿಕೊಂಡು ವಾದಿಸುತ್ತಿದ್ದದ್ದು ಇದೇ ಮೋಹನ್ ದಾಸ್. ಕಳೆದ ಪಶ್ಚಿಮ ಬಂಗಳಾದ ವಿಧಾನ ಸಭಾ ಚುನಾವಣೆಯಲ್ಲಿ ಟಿ.ಎಂ.ಸಿಯನ್ನು ಸೋಲಿಸಿ ಇನ್ನೇನು ಬಿಜೆಪಿ ಅಧಿಕಾರಕ್ಕೇ ಬಂದೇ ಬಿಡುತ್ತದೆ ಎಂದೇ ಭಾವಿಸಿದ್ದವರಿಗೆ ಪಶ್ಚಿಮ ಬಂಗಳಾದ ಚುನಾವಣೆಯಲ್ಲಿ ನಡೆದ ಅಕ್ರಮ ಮತ್ತು ಹಿಂಸಾಚಾರಗಳಿಂದ ಮತ್ತೆ ಟಿ.ಎಂಸಿಯೇ ಅಧಿಕಾರಕ್ಕೆ ಬಂದಾಗ ಬಿಜೆಪಿಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಯಾದ ಶ್ರೀ ಬಿ.ಎಲ್. ಸಂತೋಷ್ ರವರು ಕ್ಲಬ್ ಹೌಸ್ ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಮತಾ ದೀದಿ ಮತ್ತವರ ಕಾರ್ಯಕರ್ತರ ಅಕ್ರಮ, ಫಲಿತಾಂಶ ಘೋಷಣೆಯಾದ ನಂತರ ಬಿಜೆಪಿ ಪಕ್ಷದ ಸಮರ್ಥಕರ ಮೇಲಿನ ದಾಳಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ಹೇಳಿದರೂ ಕ್ಲಬ್ ಹೌಸ್ ನಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿಗೆ ಸಮಾಧಾನ ಆಗದೇ ಇದ್ದವರಲ್ಲಿ ನಾನೂ ಒಬ್ಬ. ಕೂಡಲೇ ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲಾ ಶೂರನೂ ಅಲ್ಲಾ ಎಂದು ಸುಧೀರ್ಘವಾದ ಲೇಖನವನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದಂತೆಯೇ, ಬಿಜೆಪಿಯ ಮತ್ತು ಸಂಘದ ಕೆಲ ಹಿರಿಯರು ವೈಯಕ್ತಿಕವಾಗಿ ಕರೆ ಮಾಡಿ ನಮ್ಮವರೇ ಹೀಗೆ ಟೀಕಿಸುವುದು ಸರಿಯಲ್ಲಾ. ಮೊದಲು ಆ ಲೇಖನವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕು ಎಂದು ಆಗ್ರಹಿಸಿದಾಗ ನನ್ನ ಪರ ನಿಂತವರು ಇದೇ ಮೋಹನ್ ದಾಸ್
ಸಾಮಾನ್ಯವಾಗಿ ಸಂಘದ ಘೋಷ್ ಸಂಘದ ವಿಶೇಷ ಕಾರ್ಯಕ್ರಮಗಳು ಮತ್ತು ಪಥ ಸಂಚಲನ, ಶಿವರಾತ್ರಿಯ ನಗರ ಸಂಕೀರ್ತನೆಯ ಹೊರತಾಗಿ ಬೇರೆಲ್ಲೂ ನುಡಿಸುವ ಪದ್ದತಿ ಇರಲಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಅಖಿಲ ಭಾರತೀಯ ಮಟ್ಟದ ಹಿರಿಯ ಅಧಿಕಾರಿಗಳು ಚರ್ಚಿಸಿ, ರಾಷ್ಟ್ರದ ಹಿರಿಯ ನಾಯಕರುಗಳ ಜನ್ಮದಿನಗಳಂದು ಆವರ ನೆನೆಪಿನಾರ್ಥ ಘೋಷ್ ನುಡಿಸುವ ಮೂಲಕ ಎಲ್ಲರನ್ನು ಸಂಘದ ಮುಖ್ಯವಾಹಿನಿಗೆ ಮತ್ತು ಸಂಘದ ಸಂಪರ್ಕಕ್ಕೆ ಕರೆ ತರಬಹುದು ಎಂದು ಹೇಳಿದಾಗ, ಪಣವ ನುಡಿಸುತ್ತಿದ್ದ ನಾನು ಈ ಬಗ್ಗೆ ಆಕ್ಷೇಪಣೆ ಎತ್ತಿದಾಗ, ಸಂಘದ ನಿರ್ಧಾರಗಳನ್ನು ಪ್ರಶ್ನಿಸ ಕೂಡದು, ಅದನ್ನು ಪಾಲಿಸಲೇ ಬೇಕು ಎಂದು ಕೆಲವರು ಒತ್ತಾಯಿಸಿದಾಗಲೂ ಇದೇ ಮೋಹನ್ ದಾಸ್, ಶ್ರೀಕಂಠ ಅವರ ಅಭಿಪ್ರಾಯಕ್ಕೆ ತನ್ನ ಸಮರ್ಥನೆ ಇದೆ. ಇಂದು ಅಂಬೇಡ್ಕರ್ ಜನ್ಮದಿನಂದು ಅವರ ಪ್ರತಿಮೆಯ ಮುಂದೆ ನುಡಿಸಿದಲ್ಲಿ, ಮುಂದೊಂದು ದಿನ ಜೀವಮಾನವಿಡೀ ಸಂಘವನ್ನು ವಿರೋಧಿಸುತ್ತಲೇ ಇದ್ದ ಅನೇಕ ರಾಷ್ಟ್ರನಾಯಕರ ಜನ್ಮ ದಿನಗಳಂದು ಘೋಷ್ ನುಡಿಸಲೇ ಬೇಕಾದ ಅನಿವಾರ್ಯ ಸಂಧರ್ಭ ಬಂದಲ್ಲಿ ಅದು ನಿಜಕ್ಕೂ ಅಕ್ಷಮ್ಯ ಅಪರಾಧವಾಗುತ್ತದೆ ಅದು ನಮ್ಮ ಮನಸಾಕ್ಷಿಗೆ ವಿರೋಧಾಭಾಸವನ್ನುಂಟು ಮಾಡುತ್ತದೆ ಎಂದು ನನ್ನೊಂದಿಗೆ ಗಟ್ಟಿಯಾಗಿ ನಿಂತವರೂ ಇದೇ ಮೋಹನ್ ದಾಸ್
ಹೀಗೆ ಕಾಲಕಾಲಕ್ಕೆ ತಕ್ಕಂತೆ ಪ್ರಸಕ್ತ ವಿದ್ಯಾಮಾನಗಳ ಕುರಿತಾಗಿ ಆರೋಗ್ಯಕರ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ ಮೋಹನ್ ದಾಸ್ ಕೆಲ ವರ್ಷಗಳ ಹಿಂದೆ ಯಲಹಂಕ ಭಾಗದಿಂದ ದಾಸರಹಳ್ಳಿ ಭಾಗಕ್ಕೆ ಹೋದ ನಂತರ ನಗರ/ಭಾಗಶಃ ನಡೆಯುವ ಕಾರ್ಯಕ್ರಮಗಳಲ್ಲಿ ಸಿಗದೇ ಹೋದರೂ ವಾಟ್ಸಾಪ್ ಮೂಲಕವೋ ಇಲ್ಲವೇ ದೂರವಾಣಿಯ ಮೂಲಕ ಸಂಪರ್ಕದಲ್ಲಿದ್ದೆವು. ಸುಮಾರು ಮೂವ್ವತ್ತು ವರ್ಷಗಳ ಹಿಂದೆ ಬರಿಗೈಯ್ಯಲ್ಲಿ ಬೆಂಗಳೂರಿಗೆ ಬಂದಿದ್ದ ಮೋಹನ್ ದಾಸ್ ಅವರಿಗೆ ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಸೂರೊಂದನ್ನು ಕಟ್ಟಿಕೊಳ್ಳಬೇಕೆಂಬ ಮಹದಾಸೆ ಇದ್ದು ಅನೇಕ ಬಾರಿ ಅದನ್ನು ಎಲ್ಲರೊಂದಿಗೆ ಹೇಳುತ್ತಲೇ ಇದ್ದರು. ಕಳೆದ 3 ವರ್ಷಗಳ ಹಿಂದೆ ಹೆಸರಘಟ್ಟ ಬಳಿಯ ಬಾಣಾವಾರದಲ್ಲಿ ನಿವೇಶನ ಖರೀದಿಸಿ, ಒಂದು ವರ್ಷದ ಹಿಂದೆ ತಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಂಡದ್ದನ್ನು ಕೇಳಿ ಸಂತೋಷ ಪಟ್ಟ ಅನೇಕರಲ್ಲಿ ನಾನೂ ಸಹಾ ಒಬ್ಬ.
ನೋಡ ನೋಡುತ್ತಿದ್ದಂತೆಯೇ ತಂದೆ ತಾಯಿರ ಎತ್ತರಕ್ಕೆ ಬೆಳೆದ ಮಕ್ಕಳು, ದೊಡ್ಡವಳು ಸಪ್ತಗಿರಿ ಕಾಲೇಜಿನಲ್ಲಿ ಇಂಜೀನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ ಚಿಕ್ಕವಳು ಹೈಸ್ಕೂಲಿನಲ್ಲಿ ಓದುತ್ತಾ, ನಾವಿಬ್ಬರು ನಮಗಿಬ್ಬರು ಸುಂದರ ಸುಖೀ ಸಂಸಾರದಂತಿದ್ದ ಮೋಹನ್ ಅವರ ಕುಟುಂಬದಲ್ಲಿ ಜನವರಿ 11 ಸಂಜೆ ಬರಸಿಡಿಲು ಬಡಿದಂತಾಗಿತ್ತು. ದಿನ ನಿತ್ಯದ ಶಾಖೆಯಲ್ಲಿ ವ್ಯಾಯಾಮ ಮಾಡುತ್ತಾ ಆರೋಗ್ಯಕರವಾಗಿ ಸಧೃಢರಾಗಿದ್ದರೂ, ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಡುವ ಅಭ್ಯಾಸವನ್ನಿಟ್ಟುಕೊಂಡಿದ್ದ ಮೋಹನ್ ಅವರು ಶನಿವಾರ ಸಂಜೆ ಗೆಳೆಯರೊಡನೆ ಆಟವಾಡುವ ಸಮಯದಲ್ಲಿ ಇದ್ದಕ್ಕಿದ್ದಂತೆಯೇ ಎದೆ ನೋವು ಕಾಣಿಸಿಕೊಂಡಾಗ, ಅದು ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿರ ಬಹುದು ಎಂದು ನಿರ್ಲಕ್ಷ ಮಾಡಿದ್ದೇ ಮುಳುವಾಯಿತೇನೋ.
ರಾತ್ರಿಯ ಹೊತ್ತಿಗೆ ಅವರ ನೊವು ಎಲ್ಲವೂ ಕಡಿಮೆಯಂತಾದಾಗ, ಮನೆಯಲ್ಲಿ ಊಟ ಮಾಡಿ ಮಲಗಿದ ಸ್ವಲ್ಪ ಸಮಯದಲ್ಲೇ ಮತ್ತೆ ವಿಪರೀತವಾದ ಎದೆ ನೋವು ಕಾಣಿಸಿಕೊಂಡಾಗ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ದೇಹದ ಆರೋಗ್ಯ ಹದಗೆಟ್ಟಿತ್ತು. ವಿಷಯ ತಿಳಿದ ಸಂಘದ ಅನೇಕ ಹಿರಿಯರು ಕೂಡಲೇ ಆಸ್ಪತ್ರೆಗೆ ಧಾವಿಸಿ ಹೃದಯರೋಗ ತಜ್ಞರೂ ಮತ್ತು ಸಾಂಸದರೂ ಆದ ಮಂಜುನಾಥ್ ಅವರ ಸಲಹೆಯನ್ನು ಪಡೆದು ಚಿಕಿತ್ಸೆಯನ್ನು ಮುಂದು ವರೆಸಿದರಾದರೂ ಚಿಕಿತ್ಸೆಗೆ ಅವರ ದೇಹ ಸೂಕ್ತರೀತಿಯಲ್ಲಿ ಸ್ಪಂದಿಸದೇ, ಜನವರಿ 14 2025 ಮಂಗಳವಾರ ಸಂಕ್ರಾಂತಿ ಹಬ್ಬದಂದು ಒಂದೊಂದೇ ಅಂಗಗಳು ವೈಫಲ್ಯವಾಗಿ ತೀವ್ರತರದ ಹೃದಯಾಘಾತಕ್ಕೆ ಒಳಗಾಗಿ ನಮ್ಮೆಲ್ಲರನ್ನು ಅಕಾಲಿಕವಾಗಿ ಅಗಲಿ ಹೋದದ್ದು ನಿಜಕ್ಕೂ ಮರೆಯಲಾಗದ ದುಃಖದ ಸಂಗತಿಯಾಗಿದೆ.
ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ವ್ಯಕ್ತಿತ್ವವನ್ನು ಹೊಂದಿದ್ದಂತಹ, ಯಾವುದೇ ವಿಷಯವನ್ನು ಬಹಳ ಆಳವಾಗಿ ಅಧ್ಯಯನ ಮಾಡಿ ವಿಮರ್ಶೆ ಮಾಡುತ್ತಿದ್ದಂತಹ, ಸಮಾಜದ ಪರಿವರ್ತನೆಗಾಗಿ ತನ ಮನ ಧನವನ್ನು ಅರ್ಪಿಸುತ್ತಿದ್ದಂತಹ, ಜೀವನದ ಒಂದು ಹಂತ ಪೂರೈಸಿ, ಸುಖಿ ಜೀವನದ ಹಾದಿಯಲ್ಲಿ ಸಾಗುತ್ತಿದ್ದಂತಹ ಗೆಳೆಯ ಮೋಹನ್ ದಾಸ್ ಇಷ್ಟು ಚಿಕ್ಕ ವಯಸ್ಸಿಗೆ ಇಹಲೋಕದ ಋಣ ಮುಗಿಸಿ ಕೈಲಾಸದಡೆಗೆ ಪ್ರಯಾಣಿಸಿದ್ದು ಅತ್ಯಂತ ದುಃಖದ ಸಂಗತಿಯಾಗಿದ್ದು ಆ ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಈ ದುಃಖ ಭರಿಸುವ ಶಕ್ತಿ ಕೊಡಲೆಂದು ನಾವೂ ನೀವು ಪ್ರಾರ್ಥಿಸೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ