ಕನ್ನಡದಲ್ಲೊಂದು ಮಾತಿದೆ. ಅಧಿಕಾರವನ್ನು ಗಳಿಸುವುದು ಸುಲಭ ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಬಹಳ ಕಷ್ಟ. ಬಹುಶಃ ಈ ಮಾತು ಪ್ರಸ್ತುತ ದೆಹಲಿ ಮೂಲದ ಆಮ್ ಆದ್ಮಿ ಪಕ್ಷದ ನಾಯಕರಿಗೆ ಅನ್ವಯಿಸುತ್ತದೆ ಎಂದರೂ ತಪ್ಪಾಗದು. 2011ರ ಏಪ್ರಿಲ್ 5 ರಿಂದ ಏಪ್ರಿಲ್ 9ರ ವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಭ್ರಷ್ಟಾಚಾರವನ್ನು ನಿಭಾಯಿಸುವ ಅಧಿಕಾರ ಹೊಂದಿರುವ ಓಂಬುಡ್ಸ್‌ಮನ್ ಸ್ಥಾಪನೆಗಾಗಿ ಜನ ಲೋಕಪಾಲ್ ಮಸೂದೆಯಲ್ಲಿ ಕಲ್ಪಿಸಲಾಗಿರುವ ಕಠಿಣ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೆ ತರಲು ಅಂದಿನ ಕಾಂಗ್ರೇಸ್ ಸರ್ಕಾರದ ಮೇಲೆ ಒತ್ತಡ ಹೇರಲು ಭಾರತದ ಪರ ಮೂರು ಯುದ್ಧಗಳಲ್ಲಿ ಭಾಗಿಗಳಾಗಿದ್ದ ಅದಾಗಲೇ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ವಿಜೇತರಾಗಿದ್ದ ಮಾಜೀ ಸೈನಿಕರಾದ ಶ್ರೀ ಅಣ್ಣಾ ಹಜಾರೆಯವರು ಗಾಂಧಿಗಿರಿ ಮಾದರಿಯಲ್ಲಿ ದೆಹಲಿಯಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹದ ಕಿಡಿ ನೋಡ ನೋಡುತ್ತಿದ್ದಂತೆಯೇ ಕಾಳ್ಗಿಚ್ಚಿನಂತೆ ರಾಷ್ಟ್ರವ್ಯಾಪಿ ಹರಡಿ, ಎಲ್ಲಾ ಕಡೆಗಳಲ್ಲೂ ಪ್ರತಿಭಟನೆಗಳಿಗೆ ಕಾರಣವಾಗಿ, ಅಂತಿಮವಾಗಿ ಸರ್ಕಾರ ಹಜಾರೆಯವರ ಬೇಡಿಕೆಗಳನ್ನು ಜಾರಿಗೆ ತರಲು ಒಪ್ಪಿಕೊಂಡಾಗ ಉಪವಾಸ ಅಂತ್ಯಗೊಂಡಿತ್ತು.
ಮಹಾತ್ಮಾಗಾಂಧಿಯವರ ಉಪವಾಸ ಸತ್ಯಾಗ್ರಹವನ್ನು ನೋಡಿರದೇ, ಕೇವಲ ಕೇಳಿದ್ದಂತಹ ಜನರಿಗೆ ಅಣ್ಣಾ ಹಜಾರೆಯವರ ಈ ಗಾಂಧಿಗಿರಿ ನಿಜಕ್ಕೂ ಇಷ್ಟವಾಗಿ ಅದು ಕೇವಲ ದೆಹಲಿಗಷ್ಟೇ ಸೀಮಿತವಾಗದೇ, ಇಡೀ ದೇಶಾದ್ಯಂತ ಚಳುವಳಿಯ ರೂಪದಲ್ಲಿ ಹರಡಿ, ಬೆಂಗಳೂರಿನ ಹಳೆಯ ಸೆಂಟ್ರಲ್ ಜೈಲ್ ಆವರಣದಲ್ಲೂ ನಡೆದ ಹೋರಾಟಕ್ಕೆ ಕೆಟ್ಟ ರಾಜಕೀಯದಿಂದ ಬೇಸರಿಸಿಕೊಂಡಿದ್ದ ಬಡವರು ಮತ್ತು ಸಿರಿವಂತರು ಎಂಬ ಬೇಧವಿಲ್ಲದೇ ಹೋರಾಟಕ್ಕೆ ಧುಮುಕಿದ್ದು ನಿಜಕ್ಕೂ ಅದ್ಭುತ ಮತ್ತು ಅಚ್ಚರಿಯ ವಿಷಯವಾಗಿತ್ತು. ಇಷ್ಟೆಲ್ಲಾ ಹೋರಾಟಗಳು ನಡೆದಾಗಲೂ ಇದು ಯಾವುದೇ ರಾಜಕೀಯ ಪಕ್ಷದ ಸೋಂಕಿಲ್ಲದ ಕೇವಲ ಜನ ಪರ ಆಂದೋಲನವಾಗಿತ್ತು. ಜನರಿಂದ ಈ ಪರಿಯ ಬೆಂಬಲ ಸಿಕ್ಕಿದ್ದನ್ನು ಅಣ್ಣಾ ಹಜಾರೆಯವರ ಆಶಯದ ವಿರುದ್ಧವಾಗಿ ರಾಜಕೀಯವಾಗಿ ಬಳಸಿಕೊಳ್ಳಲು ಹರ್ಯಾಣ ಮೂಲದ IIT ವಿದ್ಯಾರ್ಥಿಯಾಗಿದ್ದು ನಂತರ IRS ಮೂಲಕ ಕೇಂದ್ರದಲ್ಲಿ ಹಿರಿಯ ಅಧಿಕಾರಿಯಾಗಿದ್ದ ಅರವಿಂದ ಕೇಜ್ರೀವಾಲ್ ಮುಂದಾಗಿ, ಆಮ್ ಆದ್ಮೀ ಪಕ್ಷ ಎಂಬ ಹೆಸರಿನಲ್ಲಿ ಪಕ್ಷವನ್ನು ಕಟ್ಟಿ ಅದಕ್ಕೆ ಪೊರಕೆ ಚಿಹ್ನೆಯನ್ನು ಇಟ್ಟುಕೊಂಡು ದೇಶದಲ್ಲಿ ಭ್ರಷ್ಟಾಚಾರವನ್ನು ಗುಡಿಸಿ ಹಾಕುತ್ತೇವೆ ಎಂದು ಹೇಳಿದ್ದಲ್ಲದೇ, ಸರ್ಕಾರದ ಮತ್ತು ಮಧ್ಯವರ್ತಿಗಳ ನಡುವೆ ನಡೆಯುತ್ತಿರುವ ಕಮೀಷನ್ ವ್ಯವಹಾರಗಳನ್ನು ನಿರ್ಭಂಧಿಸಿ ಅದನ್ನು ಜನರಿಗೇ ನೀರು, ವಿದ್ಯುತ್ ಗಳನ್ನು ನೇರವಾಗಿ ಹಂಚುತ್ತೇವೆ ಎಂದು ವಿವಿಧ ಉಚಿತಗಳನ್ನು ನೀಡುವ ಮೂಲಕ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಅವರ ಕಾಂಗ್ರೇಸ್ಸನ್ನು ೦ ಗೆ ಇಳಿಸಿ, ಬಿಜೆಪಿಯನ್ನು ೩ಕ್ಕೆ ಸೀಮಿತಗೊಳಿಸಿ ಬರೊಬ್ಬರಿ ೬೭ ಸ್ಥಾನಗಳನ್ನು ಪಡೆಯುವ ಮೂಲಕ ಅಭೂತಪೂರ್ವವಾಗಿ ದೆಹಲಿಯ ಗದ್ದುಗೆಯ ಮೇಲೇರಿ ಇಡೀ ರಾಷ್ಟ್ರದ ಜನರ ಹುಬ್ಬೇರಿಸುವಂತೆ ಮಾಡಿದ್ದರು.
ಆಮ್ ಆದ್ಮೀ ಪಕ್ಷದ ಈ ಅಚ್ಚರಿಯ ಬೆಳವಣಿಗೆ, 80ರ ದಶಕದಲ್ಲಿ ಬಾಂಗ್ಲಾದೇಶದಿಂದ ಅಸ್ಸಾಂ ರಾಜ್ಯಕ್ಕೆ ಅಕ್ರಮವಾಗಿ ನುಸುಳುಕೋರರ ವಿರುದ್ಧ ಆರಂಭವಾದ ವಿದ್ಯಾರ್ಥಿಸಂಘಟನೆಗಳ ಹೋರಾಟ ನಂತರ ರಾಜಕೀಯ ಪಕ್ಷವಾಗಿ ಮಾರ್ಪಟ್ಟು ಅಸ್ಸಾಂ ಗಣಪರಿಷತ್ ಹೆಸರಿನಲ್ಲಿ ದೇಶದ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾದ ಪ್ರಫುಲ್ಲ ಕುಮಾರ್ ಮಹಂತಾ ಅವರನ್ನು ನೆನಪಿಸುತ್ತದೆ. ಅಸ್ಸಾಂನಲ್ಲಿಯೂ ಸತತವಾಗಿ 1985 & 1990ರಲ್ಲಿ ಅಧಿಕಾರಕ್ಕೆ ಬಂದ ನಂತರ ಆಡಳಿತ ವಿರೋಧಿ ಮತ್ತು ಆಂತರಿಕ ಕಚ್ಚಾಟಗಳಿಂದ ಹೇಳ ಹೆಸರಿಲ್ಲದಂತೆ ಕಾಣೆಯಾಗಿ ಈಗ ಮತ್ತೆ NDA ಅಂಗಪಕ್ಷವಾಗಿ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿರುವುದನ್ನು ನೆನಪಿಸುತ್ತದೆ.
ಅದೇ ರೀತಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಹಪಾಠಿಯಾಗಿ ಸಚಿನ್ ಜೊತೆಯೇ ಅಂತರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿ ಪಟ ಪಟನೇ ಶತಕ, ದ್ವಿಶತಕಗಳನ್ನು ಗಳಿಸಿ ಸಚಿನ್ ಗಿಂತಲೂ ಒಂದು ಕೈ ಮುಂದೇ ಎಂಬ ಭರವಸೆಯನ್ನು ಮೂಡಿಸಿದ್ದ ವಿನೋದ್ ಕಾಂಬ್ಳಿ ನಂತರದ ದಿನಗಳಲ್ಲಿ ತನ್ನದೇ ಆದಾ ನಡುವಳಿಕೆ ಮತ್ತು ವಿವಿಧ ಚಟಗಳಿಗೆ ಬಿದ್ದು ಕ್ರಿಕೆಟ್ಟಿನಲ್ಲಿ ಹೇಳ ಹೆಸರಿಲ್ಲದಂತೆ ಮಾಯವಾಗಿದ್ದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಆತನ ಮಾನಸಿಕ ಮತ್ತು ದೈಹಿಕ ಸ್ಥಿತಿಗಳ ವೀಡೀಯೋ ನೋಡಲು ಬೇಸರವೆನಿಸುತ್ತದೆ.
ಮೇಲೆ ತಿಳಿಸಿದ ಎರಡೂ ಉದಾಹರಣೆಗಳಿಗೂ ಮತ್ತು ಕೇಜ್ರಿವಾಲ್ ರ ಆಮ್ ಆದ್ಮಿ ಪಕ್ಷಕ್ಕೂ ಹೆಚ್ಚಿನ ವೆತ್ಯಸವಿಲ್ಲವಾಗಿದ್ದು. ಆರಂಭದಲ್ಲಿ ಸಾಧಾರಣ ಬಟ್ಟೆ ಧರಿಸುತ್ತಾ, ವ್ಯಾಗನಾರ್ ಕಾರ್ ನಲ್ಲಿ ಓಡಾಡುತ್ತಾ, ಐಶಾರಾಮ್ಯದ ಬಂಗಲೆಗಳಿಂದ ದೂರವಿದ್ದು, ತಾನೊಬ್ಬ ವಿಭಿನ್ನವಾಗಿ ನುಡಿದಂತೆಯೇ ನಡೆಯುವ ಸರಳ ಸಜ್ಜನ ವ್ಯಕ್ತಿ ಎಂದು ತೋರಿಸಿಕೊಂಡಿದ್ದಲ್ಲದೇ, ಕೆಲವು ಸರ್ಕಾರೀ ಶಾಲೆಗಳನ್ನು ಆಧುನೀಕರಣ ಗೊಳಿಸಿದ್ದಲ್ಲದೇ ಮೊಹಲ್ಲಾ ಕ್ಲೀನಿಕ್ ಗಳ ಮೂಲಕ ದೆಹಲಿ ಜನರ ಆರೋಗ್ಯದ ಕಡೆ ವಿಶೇಷ ಗಮನ ಹರಿಸಿದ್ದು ಅವರ ಖ್ಯಾತಿಯನ್ನು ಹೆಚ್ಚಿಸುತ್ತಿದ್ದಂತೆಯೇ, ಕೇಜ್ರೀವಾಲ್ ಮತ್ತವರ ತಂಡದ ತಲೆ ಹೆಗಲು ಮೇಲೆ ನಿಲ್ಲಂದಂತಾಯಿತು. ತಾನು ಆಡಿದ್ದೇ, ಮಾಡಿದ್ದೇ ಸರಿ. ತಾವು ಮಾತ್ರಾ ಸತ್ಯಹರಿಶ್ಚಂದ್ರರು ಉಳಿದವರೆಲ್ಲರೂ ಮೋಸಗಾರರು ಎಂಬುದನ್ನು ಹೇಳಲು ಆರಂಭಿಸಿದ್ದಲ್ಲದೇ, ತನ್ನನ್ನು ದೇಶದ ಭಾವೀ ಪ್ರಧಾನಿ ಎಂದೇ ಬಿಂಬಿಸಿಕೊಂಡು, ವಾರಣಸಿಯ ಗಂಗೆಯಲ್ಲಿ ಮಿಂದು ಗಂಗೆಯನ್ನು ಈಗ ಶುದ್ದೀಕರಿಸಿದಂತೆ, ದೇಶವನ್ನೂ ಶುಧ್ಧೀಕರಿಸುತ್ತೇನೆ ಎಂಬ ಭ್ರಮೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ಶ್ರೀ ನರೇಂದ್ರ ಮೋದಿಯವರ ವಿರುದ್ಧ ಲೋಕಸಭಾ ಚುನಾವಣೆಯನ್ನು ಎದುರಿಸಿ ಸೋತು ಸುಣ್ಣವಾಗಿದ್ದು ಈಗ ಇತಿಹಾಸ.
ಇವೆಲ್ಲದರ ಮಧ್ಯೆ, ಗೋವಾ, ಗುಜರಾತ್, ಹರ್ಯಾಣಾ ಮತ್ತು ಪಂಜಾಬ್ ರಾಜ್ಯಗಳಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸಿ, ಹೇಳ ಹೆಸರಿಲ್ಲದಂತೆ ಸೋತು ಸುಣ್ಣವಾದರೂ, ಪಂಜಾಬಿನಲ್ಲಿ ದೇಶವನ್ನು ವಿಭಜಿಸಲು ಹವಣಿಸುತ್ತಿರುವ ದೇಶ ವಿರೋಧಿ ಸಂಘಟನೆಯಾದ ಖಲಿಸ್ಥಾನಿಗಳು ಮತ್ತು ಕೆನಡ ಸಿಖ್ಖರ ಆರ್ಥಿಕ ಬೆಂಬಲದಿಂದಾಗಿ ಪಂಜಾಬ್ ನಲ್ಲಿ ಅಧಿಕಾರಗಳಿಸಿದ ನಂತರವಂತೂ ಅವರ ಅಟ್ಟಹಾಸ ಎಲ್ಲೆ ಮೀರಿತು. ಭ್ರಷ್ಟಾಚಾರ ವಿರೋಧಿ ಮತ್ತು ಸರಳತೆಯ ಪ್ರತೀಕ ಎಂದೇ ಬಿಂಬಿಸಿಕೊಂಡಿದ್ದ ಕೇಜ್ರೀವಾಲ್ ನಂತರ ದಿನಗಳಲ್ಲಿ ಅವೆಲ್ಲವೂ ಜನರನ್ನು ಮರಳು ಮಾಡುವ ನಾಟಕ ಎಂಬುದು ಆತ ಮತ್ತು ಆತನ ಸಹಚರರು ಒಂದೊಂದೇ ಪ್ರಕರಣದಲ್ಲಿ ಜೈಲು ಸೇರುವ ಮೂಲಕ ಜಗ್ಗಜ್ಜಾಹೀರಾಯಿತು. ಒಂದು ಹಂತದಲ್ಲಂತೂ ಕೇಜ್ರೀವಾಲ್ ರ ಅರ್ಧ ಸಚಿವ ಸಂಪುಟ ಜೈಲಿನಲ್ಲಿ ರೊಟ್ಟಿ ಮುರಿಯುತ್ತಿದ್ದರು ಎಂದರೆ ಭ್ರಷ್ಟಾಚಾರ ಯಾವ ಪರಿಣಾಮವಾಗಿತ್ತು ಎಂಬುದರ ಅರಿವಾಗುತ್ತದೆ.
ಈ ಎಲ್ಲಾ ಭಷ್ಟಾಚಾರಗಳು ಒಂದಾದರೇ, ದೆಹಲಿ ಮುಖ್ಯಮಂತ್ರಿ ಕೇಜ್ರೀವಾಲ್ ಮತ್ತು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ತೆಲಂಗಾಣದ ಮಾಜೀ ಮುಖ್ಯಮಂತ್ರಿ ಕೆ.ಸಿ.ಆರ್ ಅವರ ಮಗಳು ಕಲ್ವಕುಂಟ್ಲ ಕವಿತಾ ಮತ್ತು ಇತರೇ ಉದ್ಯಮಿಗಳ ಅನುಕೂಲಕ್ಕಾಗಿ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ 2021 ರಿಂದ 2022ರಲ್ಲಿ ದೆಹಲಿಯಲ್ಲಿ ಜಾರಿಗೆ ತಂದ ಅಬಕಾರಿ ನೀತಿಯೇ ಆಮ್ ಅದ್ಮೀ ಪಕ್ಷದ ಶವ ಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಿತು. ಈ ಅಬಕಾರಿ ನೀತಿಯಿಂದಾಗಿ ಸರ್ಕಾರ ಆದಾಯದಲ್ಲಿ ಕೋಟ್ಯಾಂತರ ರೂಪಾಯಿಗಳ ನಷ್ಟವಾಗಿ ಅವೆಲ್ಲವೂ ಭ್ರಷ್ಟರಪಾಲಾಗಿದ್ದು ಸಿಎಜಿ ವರದಿಯಲ್ಲಿ ಜಗಜ್ಜಾಹೀರಾತಾಗಿ ಮನೀಷ್ ಮೊದಲು ಸರೆಮನೆಗೆ ಸೇರಿದರೆ ನಂತರ ಸ್ವಯಂಘೋಷಿತ ಸತ್ಯಹರಿಶ್ಚಂದ್ರ ಕೇಜ್ರೀವಾಲರ ಕೊರಳಿಗೂ ಸುತ್ತಿಕೊಂಡು ಆತನೂ ಸೆರೆಮನೆಗೆ ಹೋಗಬೇಕಾಯಿತು.
ಭ್ರಷ್ಟಾಚಾರದ ಆರೋಪದ ಮೇಲೆ ಸೆರೆಮನೆ ಸೇರಿದರೂ, ರಾಜೀನಾಮೇ ಕೊಡದೇ, ಅಧಿಕಾರಕ್ಕೇ ಅಂಟಿಕೊಂಡ ಕೇಜ್ರೀ, ಸೆರೆಮನೆಯಿಂದಲೇ ಅಧಿಕಾರವನ್ನು ನಡೆಸಿದ ದೇಶದ ಮೊಟ್ಟ ಮೊದಲ ಮುಖ್ಯಮಂತ್ರಿ ಎಂಬ ಕುಖ್ಯಾತಿಯೂ ಕೇಜ್ರೀಯ ಪಾಲಾಗಿದ್ದು ವಿಷಾಧನೀಯ. ನಂತರ ಅತ್ತೂ ಕರೆದು ಔತಣ ಮಾಡಿಸಿಕೊಂಡಂತೆ, ಚುನಾವಣೆ, ಆನಾರೋಗ್ಯ, ಕುಟುಂಬದ ನೆಪವೊಡ್ಡಿ ಬೇಲ್ ಮೇಲೇ ಹೊರಬಂದರೂ ತಾನು ಆರೋಪವಾದನೆಂದೇ ಬಿಂಬಿಸಿಕೊಂಡಿದ್ದು ಜನರಿಗೆ ಅಸಹ್ಯ ತರಿಸಿತ್ತು.
ರೋಮ್ ಹೊತ್ತಿ ಉರಿಯುತ್ತಿದ್ದರೆ ಮತ್ತು ಟೈಟಾನಿಕ್ ಹಡುಗು ಮುಳುಗುತ್ತಿದ್ದರೆ, ರೋಮ್ ಚಕ್ರವರ್ತಿ ಮತ್ತು ಟೈಟಾನಿಕ್ ಹಡಗಿನ ಸಂಗೀತಗಾರರು ಪಿಟೀಲು ನುಡಿಸುತ್ತಿದ್ದಂತೆ 2021ರಲ್ಲಿ ಇಡೀ ವಿಶ್ವವೇ ಕರೋನದಿಂದ ತತ್ತರಿಸಲ್ಪಟ್ಟಿದ್ದರೆ, ಈ ಕೇಜ್ರೀವಾಲ್ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜಕುಝಿ, ಸ್ವಿಮ್ಮಿಂಗ್ ಪೂಲ್ ಮತ್ತು ಚಿನ್ನದ ಲೇಪಿತ ಶೌಚಾಲಯಗಳನ್ನು ಹೊಂದಿರುವಂಹ ಐಷಾರಾಮಿಯಾಗಿ ತನ್ನ ಸರ್ಕಾರಿ ಬಂಗಲಿಯನ್ನು ನವೀಕರಣ ಮಾಡಿಸಿ ಕೊಂಡಿದ್ದೂ ಸಹಾ ಜನರಿಗೆ ಕೇಜ್ರೀವಾಲ್ ಬಗ್ಗೆ ಬೇಸರ ಮೂಡಿಸುವಂತೆ ಮಾಡಿತ್ತು.
ಇವೆಲ್ಲದ್ದಕ್ಕಿಂತಲೂ ಹೆಚ್ಚಾಗಿ ಕೊಟ್ಟ ಕುದುರೆಯನ್ನು ಏರಲಾರದವರು ವೀರನೂ ಅಲ್ಲಾ ಶೂರನೂ ಅಲ್ಲಾ ಎನ್ನುವಂತೆ, ದೆಹಲಿಯ ಜನರು ಎರಡು ಬಾರಿ ಒಪ್ಪಿ/ಅಪ್ಪಿಕೊಂಡು ಅಧಿಕಾರವನ್ನು ಕೊಟ್ಟದ್ದನ್ನು ನಿಭಾಯಿಸಿಕೊಂಡು ಹೋಗದೇ ದಿನ ಬೆಳಗಾದರೆ, ಪ್ರಧಾನಿ ಮೋದಿಯವರನ್ನು ಬೈಯ್ದಾಡುತ್ತಾ, ಕೇಂದ್ರ ಸರ್ಕಾರವನ್ನು ಹಳಿಯುತ್ತಾ ದೆಹಲಿಯ ಗೌವರ್ನರ್ ಜೊತೆ ಬೀದಿ ಜಗಳಕ್ಕಿಳಿಯುತ್ತಾ, ಆಡಳಿತ ನಡೆಸುವುದಕ್ಕಿಂತಲೂ ಕೋರ್ಟು ಕಛೇರಿಗಳನ್ನು ಅಲೆಯುವುದರಲ್ಲೇ ಸಮಯ ಕಳೆದದ್ದು, ಯಮುನಾ ನದಿಯನ್ನು ಶುಧ್ದೀಕರಿಸುತ್ತೇವೆ ಎಂದು ಹೇಳುತ್ತಲೇ, ಏನನ್ನೂ ಮಾಡದೇ, ಚುನಾವಣಾ ಸಮಯದಲ್ಲಿ ಯಮುನಾ ಕಲುಷಿತ ನೀರಿಗೆ ಹರ್ಯಾರ್ಣದ ಜನರು ಕಾರಣ ಎಂದು ಹೇಳಿದ ವಿಚಾರವೂ ಈ ಚುನಾವಣೆಯಲ್ಲಿ ಪ್ರಭಾವ ಬೀರಿದ್ದೂ ಸಹಾ ಕೇಜ್ರೀವಾಲ್ ಅವನತಿಗೆ ಕಾರಣವಾಯಿತು.
ಭ್ರಷ್ಟಾಚಾರಿಗಳ ವಿರುದ್ಧ ತನ್ನ ಹೋರಾಟ ಎನ್ನುತ್ತಿದ್ದ ಇದೇ ಕೇಜ್ರಿವಾಲ್ ತನ್ನ ಅಧಿಕಾರದ ಆಸೆ ಮತ್ತು ಬಿಜೆಪಿಯ ವಿರುದ್ಧ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ, ಸಾವಿರ ಕೋಟಿಯ ಮೇವು ಹಗರಣ ಅಪರಾಧಿ ಲಾಲೂ ಯಾದವ್, ಸಾವಿರಾರು ಕೋಟಿ ನ್ಯಾಷಿನಲ್ ಹೆರಾಲ್ಡ್ ಕೇಸಿನಲ್ಲಿ ಆರೋಪಿಯಾಗಿ ಬೇಲ್ ಮೇಲಿರುವ ಸೋನಿಯಾ ಮತ್ತು ರಾಹುಲ್ ಎಂಬ ನಕಲಿ ಗಾಂಧಿಯವರೊಂದಿಗೆ ಇಂಡಿ ಒಕ್ಕೂಟದಲ್ಲಿ ಸೇರಿಕೊಂಡಾದ ಮೇಲಂತೂ ಜನರಿಗೆ ಕೇಜ್ರೀವಾಲ್ ಸಹಾ ಪರಮ ಭ್ರಷ್ಟಾಚಾರಿ, ಮೋಸಗಾರ ಮತ್ತು ಸುಳ್ಳುಗಾರ ಎಂಬುದು ಮನವರಿಕೆಯಾಯಿತು.
2024ರಲ್ಲಿ ಇಂಡಿ ಒಕ್ಕೂಟದ ಭಾಗವಾಗಿ ಕಾಂಗ್ರೇಸ್ ಮತ್ತು ಆಪ್ ಒಗ್ಗಟ್ಟಾಗಿ ದೆಹಲಿಯಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಿದರೂ, ನಕಲೀ ಗಾಂಧಿಗಳ ನಿಯತ್ತನ್ನು ಮತ್ತು ಕೇಜ್ರೀವಾಲನ ಅಸಲೀಯತ್ತನ್ನು ಅರಿತಿದ್ದ ಜನರು ದೆಹಲಿಯ ಏಳೂ ಸ್ಥಾನಗಳಲ್ಲಿ ಮೂರನೇ ಬಾರಿಗೆ ಬಿಜೆಪಿಯನ್ನು ಆಯ್ಕೆ ಮಾಡಿದ್ದಾಗಲೇ ಕೇಜ್ರೀವಾಲನಿಗೆ ಮುಂಬರುವ ತನ್ನ ಸೋಲಿನ ಅರಿವಾಗಬೇಕಿತ್ತು.
ತನ್ನ ಹುಟ್ಟೂರಾದ ಹರ್ಯಾಣದಲ್ಲೂ ಮಕಾಡೆ ಮಲಗಿದಾಗಲೂ ಎಚ್ಚೆತ್ತು ಕೊಳ್ಳದ ಕೇಜ್ರೀ ಮತ್ತೆ ಎಂದಿನಂತೆ ಇವಿಎಂ, ಇಡಿ, ಐಟಿ ಗಳ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಾರೆ ಎಂಬ ಹಸೀ ಸುಳ್ಳನ್ನೇ ಹೇಳುತ್ತಾ, 2025 ರಲ್ಲಿ ಅಲ್ಲಾ 2050ರಲ್ಲೂ ಬಿಜೆಪಿಯವರು ತನ್ನನ್ನು ದೆಹಲಿಯಲ್ಲಿ ಸೋಲಿಸಲಾಗದು ಎಂದು ಆಡಿದ ದುರಹಂಕಾರದ ಮಾತುಗಳು, ಬಾಲಾಕೋಟ್ ನಲ್ಲಿ ನಮ್ಮ ಸೈನಿಕರು ನಡೆಸಿದ ಏರ್ ಸ್ಟ್ರೈಕ್ ಮತ್ತು ಪಾಕೀಸ್ಥಾನ ನೆಲಕ್ಕೆ ನುಗ್ಗಿ ಭಯೋತ್ಪಾದಕರನ್ನು ಬಡಿದಿದ್ದ ನಮ್ಮ ಸೈನಿಕರ ಅವಹೇಳನ ಮಾಡುತ್ತಾ ಅದಕ್ಕೆ ಸಾಕ್ಷಿಕೊಡಿ ಎಂದು ಕೇಳಿದ್ದೂ ಸಹಾ ದೆಹಲಿಯ ಜನರನ್ನು ರೊಚ್ಚಿಗೆಬ್ಬಿಸಿತ್ತು.
ಈ ಎಲ್ಲಾಕಾರಣಗಳಿಂದಾಗಿ 2025ರ ಫೆಬ್ರವರಿ 5ರಂದು ನಡೆದ ದೆಹಲಿಯ ವಿಧಾನ ಸಭಾಚುನಾವಣೆಯಲ್ಲಿ ಆಪ್ ಪಕ್ಷವನ್ನು 62ರಿಂದ 22ಕ್ಕೆ ಇಳಿಸಿದ್ದರೆ, 27 ವರ್ಷಗಳ ವನವಾಸದ ನಂತರ ಬಿಜೆಪಿಯನ್ನು 8 ರಿಂದ 48ಕ್ಕೆ ಏರಿಸುವ ಮೂಲಕ ಭರ್ಜರಿಯಾದ ಜಯವನ್ನು ಕೊಟ್ಟು, ಸದಾಕಾಲವೂ ಸಂವಿಧಾನ ಪುಸಕ್ತವನ್ನು ಕೈಯಲ್ಲಿ ಹಿಡಿದು ಸುಳ್ಳನ್ನೇ ಹೇಳುತ್ತಾ ಹೋದರೆ ಸಾಲದು. ಸಂವಿಧಾನದ ಪುಸ್ತವನ್ನು ಓದಿ ಅರ್ಥ ಮಾಡಿಕೊಳ್ಳಲು ಅನುವಾಗುವಂತೆ ಕಾಂಗ್ರೇಸ್ ಪಕ್ಷವನ್ನು ಸತವಾಗಿ ಡಬಲ್ ಹ್ಯಾಟ್ರಿಕ್ ಸೊನ್ನೆ (ಮೂರು ಲೋಕಸಭೆ/ವಿಧಾನ ಸಭೆ) ಸುತ್ತಿಕಳುಹಿದ್ದಾರೆ.
ದೆಹಲಿಯಲ್ಲಿ ಬಿಜೆಪಿಯ ಗೆಲುವಿಗೆ ಬಿಜೆಪಿಯನ್ನು ದ್ವೇಷಿಸುವ ಮುಸ್ಲಿಮ್ಮರೂ ಕಾರಣರು ಎಂದರೆ ಆಶ್ಚರ್ಯವಾಗ ಬಹುದು. ಕರ್ನಾಟಕದಲ್ಲಿ ಮುಸ್ಲಿಮರು ಒಗ್ಗಾಟ್ಟಾಗಿ ಜೆಡಿಎಸ್ ಬದಲು ಕಾಂಗ್ರೆಸ್ ಪರ ಸಾರಾಸಗಟಾಗಿ ಮತ ಚಲಾಯಿಸಿದ್ದರಿಂದಲೇ ಹೇಗೆ ಕಾಂಗ್ರೇಸ್ ಪಕ್ಷವು ಅಪರಿ ಬಹುಮತ ಗಳಿಸಿತೋ ಹಾಗೆಯೇ, ದೆಹಲಿಯಲ್ಲಿಯೂ ಅಹಾ ಮುಸ್ಲಿಮ್ಮರು ಸಾರಾಸಗಟಾಗಿ ಆಮ್ ಆದ್ಮಿ ಬದಲು ಕಾಂಗ್ರೇಸ್ ಪಕ್ಷಕ್ಕೆ ಮತ ಚಲಾಯಿಸಿರುವ ಕಾರಣ ಕಳೆದ ಬಾರಿಗಿಂತಲೂ 2% ಅಧಿಕ ಮತ (4% ರಿಂದ 6%)ಗಳಿಸಿದ್ದು ಆ 2% ಹೆಚ್ಚುವರಿ ಮತಗಳೇ ಆಪ್ ಮತ್ತು ಬಿಜೆಪಿ ಮತಗಳ ನಡುವಿನ ಅಂತರ ಎಂಬುದು ಗಮನಾರ್ಹವಾಗಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದಾಗಿ ಕೈಸುಟ್ಟುಕೊಂಡಿದ್ದ ಬಿಜೆಪಿ ಸಂಘ ಪರಿವಾರದೊಂದಿಗೆ ತನೆಲ್ಲಾ ವೈಮನಸ್ಯಗಳನ್ನು ಸರಿ ಮಾಡಿಕೊಂಡು ಮೋದಿ ವ್ಯಕ್ತಿ ಕೇಂದ್ರೀಕೃತವಾಗದೇ, ಹಿಂದೂ ಮತಗಳ ಕ್ರೂಢೀಕರಣ ಮಾಡಲು ಪ್ರಯತ್ನಿಸಿರುವುದೂ ಸಹಾ ಆಪ್ ಸೋಲಿಗೆ ಶರ ಬರೆದಿದೆ.
ದೆಹಲಿಯ ಜನರಿಗೆ ಆಪ್ ಪಕ್ಷದ ಮೇಲೆ ಯಾವ ಪರಿಯಾದ ಆಕ್ರೋಶವಿದೆ ಎಂದರೆ, ಅರವಿಂದ ಕೇಜ್ರಿವಾಲ್, ಎಎಪಿಯ ನಂ.2 ನಾಯಕ ಮನೀಶ ಸಿಸೋಡಿಯಾ,ಆರೋಗ್ಯ ಸಚಿವ ಸೌರಭ ಭಾರದ್ವಾಜ್, ಸತ್ಯೇಂದ್ರ ಜೈನ್ ರಂತಹ ಘಟಾನುಘಟಿಗಳನ್ನು ಸೋಲಿಸಿ ಮನೆಗೆ ಕಳುಹಿದ್ದರೆ, ಕೇಜ್ರಿವಾಲ್ ಅವರ ಪ್ರಾಕ್ಸಿ ಮುಖ್ಯಮಂತ್ರಿಯಾಗಿದ್ದ ಅತಿಶಿ, ಕಲ್ಕಾಜಿಯಲ್ಲಿ ಬಿಜೆಪಿಯ ರಮೇಶ ಬಿಧುರಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಎಎಪಿಯ ಮುಖವನ್ನು ಸ್ವಲ್ಪಮಟ್ಟಿಗೆ ಉಳಿಸಿದ್ದಾರೆ.
62 ರಿಂದ ಕೇವಲ 22 ಸ್ಥಾನಗಳನ್ನು ಗಳಿಸಿರುವ ಆಮ್ ಆದ್ಮೀ ಪಕ್ಷವನ್ನು ದೆಹಲಿಯ ಜನತೆ ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ ಎಂದರೂ ಸಹಾ ತಪ್ಪಾಗುತ್ತದೆ ಎಂದರೆ ಬಹುತೇಕರಿಗೆ ಅಚ್ಚರಿಯಾಗಬಹುದು. 2020 ರಲ್ಲಿ 53.57% ಮತಗಳನ್ನು ಗಳಿಸಿದ್ದ ಆಪ್ ಈ ಬಾರಿಯ 2025ರ ಚುನಾವಣೆಯಲಿ 43.55% ಮತಗಳನ್ನು ಗಳಿಸುವ ಮೂಲಕ ಸುಮಾರು 10% ಕಡಿಮೆ ಮತಗಳನ್ನು ಗಳ ಮೂಲಕ ೨೨ ಸ್ಥಾನಗಳಿಗಷ್ಟೇ ಸೀಮಿತಗೊಂಡಿದೆ. ಅದೇ 2020ರಲ್ಲಿ 38.51% ಮತಗಳೊಂದಿಗೆ 8 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ 2025ರಲ್ಲಿ ಶೇಕಡಾ 45.76% ಮತಗಳೊಂದಿಗೆ 7.3 ರಷ್ಟು ಏರಿಕೆ ಕಂಡಿದೆಯಾದರೂ ಸ್ಥಾನಗಳಿಗೆಯಲ್ಲಿ 40 ಹೆಚ್ಚುವರಿ ಸ್ಥಾನಗಳನ್ನು ಗಳಿಸಿದೆ. ಈ ಬಾರಿ ಬಿಜೆಪಿ ಮತ್ತು ಆಪ್ ನಡುವಿನ ಮತಗಳ ಅಂತರ ಕೇವಲ 2% ಇರುವ ಕಾರಣ, ದೆಹಲಿಯ ಜನರು ಇನ್ನೂ ಸಹಾ ಆಪ್ ಪಕ್ಷದ ಮೇಲೆ ಭರವಸೆಯನ್ನು ಹೊಂದಿದ್ದಾರೆ ಎಂಬ ಅರ್ಥವೇ ಬರುವ ಕಾರಣ ತಮ್ಮ ಹಳೆಯ ಚಾಳಿಗಳನ್ನೆಲ್ಲಾ ಮರೆತು ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡಿದಲ್ಲಿ 2030ರ ಚುನಾವಣೆಯಲ್ಲಿ ಮತ್ತೆ ಚಿಗುರಿಕೊಳ್ಳುವ ಎಲ್ಲಾ ಲಕ್ಷಣಗಳಿವೆ.
ಆದರೆ ಬಹುಕೋಟಿ ಅಬಕಾರಿ ಹಗರಣದಲ್ಲಿ ಕೇಜ್ರೀವಾಲ್ ಮತ್ತು ತಂಡದವರು ಮಾಡಿರುವ ಅಪರಾಧ ಗುರುತರವಾಗಿದ್ದು ಸರಿಯಾದ ತನಿಖೆ ನಡೆದರೆ ಕನಿಷ್ಟ ಪಕ್ಷ ಕೆಲವು ದಶಕಗಳ ಕಾಲ ಖಾಯಂ ಆಗಿ ಕೃಷ್ಣನ ಜನ್ಮ ಸ್ಥಾನದಲ್ಲೇ ಕಾಲ ಕಳೆಯ ಬೇಕಾದ ಪರಿಸ್ಥಿತಿ ಬರಬೇಕಾಗಿರುವುದರಿಂದ ಮತ್ತು ಆಪ್ ಪಕ್ಷ ಕಾಂಗ್ರೇಸ್ ಪಕ್ಷದಂತೆಯೇ ವ್ಯಕ್ತಿಗತ ಕೇಂದ್ರೀಕೃತ ಪಕ್ಷವಾಗಿದ್ದು ತಮ್ಮ ಅಹಂನಿಂದಾಗಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂದುವರೆಯುವ ಮನಸ್ಸನ್ನು ಹೊಂದಿಲ್ಲದಿರುವ ಕಾರಣ, ನಮ್ಮ ದೇಶದ ರಾಜ್ಯಕಾರಣದಲ್ಲಿ ಆಪ್ ಮತ್ತು ಕಾಂಗ್ರೇಸ್ ಮತ್ತೊಮ್ಮೆ ಅಧಿಕಾರಕ್ಕೇರುವುದು ಮರೀಚಿಕೆಯೇ ಆಗಬಹುದು ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ