ಕಾಲ ಕೆಟ್ಟು ಹೋಯ್ತೇ?

ಇಂದಿನ ಬಹುತೇಕ ಪಾಲಕರು ಅಯ್ಯೋ ಕಾಲ ಕೆಟ್ಟು ಹೋಯ್ತು ರೀ.. ಈಗಿನ ಮಕ್ಕಳು ನಮ್ಮ ರೀತಿ ಇಲ್ಲಾ! ಎಂಬ ಮಾತನ್ನು ಪದೇ ಪದೇ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಆದರೆ ಸೂಕ್ಷ್ಮವಾಗಿ ಯೋಚಿಸಿದಲ್ಲಿ ಇಲ್ಲಿ ಕಾಲವೂ ಕೆಟ್ಟಿಲ್ಲ ಮಕ್ಕಳದ್ದೂ ತಪ್ಪಿಲ್ಲ. ತಪ್ಪೆಲ್ಲವೂ ನಮ್ಮದೇ ಆಗಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಹೀಗಾಗಿ ತಂದೆ-ತಾಯಿಯರೇ ಮೊದಲ ಗುರು. ಸಣ್ಣ ಮಕ್ಕಳು ತಮ್ಮ ತಂದೆ ತಾಯಿಯರನ್ನೇ ನೋಡಿ ಅನುಸರಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಮನೆಯಲ್ಲಿ ಏನೇನು ಹೇಳಿಕೊಡಬೇಕು? ಯಾವ ರೀತಿಯ ಸಂಸ್ಕಾರ ನೀಡಬೇಕು? ಅವರನ್ನು ಹೇಗೆ ಬೆಳೆಸಬೇಕು? ಎಂಬುದನ್ನು ಮೊದಲು ಹೆತ್ತವರು ಯೋಚಿಸಿ, ಮಕ್ಕಳ ತಪ್ಪುಗಳನ್ನು ಸಣ್ಣ ವಯಸ್ಸಿನಲ್ಲೇ ಸೂಕ್ಷ್ಮವಾಗಿ ತಿದ್ದಿ ಉತ್ತಮ ನಡತೆ ಕಲಿಸಿಕೊಟ್ಟರೆ ಮುಂದೆ ಅವರು ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿದೆ. ನಮ್ಮ ಪೋಷಕರು ಆ ರೀತಿ ಕಲಿಸಿದ್ದರಿಂದಲೇ ಇಂದು ನಾವು ರೀತಿಯಾಗಿದ್ದೇವೆ. ಆದರೆ ನಾವು ನಮ್ಮ ಮಕ್ಕಳಿಗೆ ನಮ್ಮ ತಂದೆ ತಾಯಿಯರು ಕಲಿಸಿದ ಪಾಠಗಳನ್ನು ಕಲಿಸದ ಕಾರಣದಿಂದಲೇ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ ಆಚಾರ, ವಿಚಾರ, ಸಂಪ್ರದಾಯಗಳ ಪರಿಚಯವೇ ಇಲ್ಲವಾಗಿದೆ  ಎನ್ನುವುದೇ ಸತ್ಯವಾಗಿದ್ದು, ತಂದೆ ತಾಯಿಯರು ಮಕ್ಕಳಿಗೆ ಹೇಗೆ ಮಾದರಿಯಾಗಬೇಕು ಎಂಬುದರ ಕುರಿತಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಓದಿದ ಮತ್ತು ವಯಕ್ತಿಕವಾಗಿ ಅನುಭವಿಸಿದ ಕೆಲವು ಪ್ರಸಂಗಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಹೇಳಿ ಕೇಳಿ ಇದು ಸುಗ್ಗಿಯ ಸಂಭ್ರಮ. ದೇಶಾದ್ಯಂತವಿರುವ  ಬಹುತೇಕ ರೈತರುಗಳು ಬೆವರು ಸುರಿಸಿ, ಶ್ರಮವಹಿಸಿ ಬೆಳೆದ ತಮ್ಮ ಫಸಲಿನಲ್ಲಿ ಮನೆಗೆ ಅವಶ್ಯಕವಿದ್ದಷ್ಟನ್ನು ಕಣಜದಲ್ಲಿ ಇಟ್ಟುಕೊಂಡು  ಉಳಿದದ್ದನ್ನು ಮಾರಿ ಅದರಿಂದ ಬಂದ ಹಣದಿಂದ ತಮ್ಮ ಜೀವನವನ್ನು ನಡೆಸಲು ಯೋಚಿಸುತ್ತಿರುವ ಸಮಯವಾಗಿದೆ. ಆದರೆ ಈ ಹಿಂದೆ ದೀಪಾವಳಿ ಹಬ್ಬದ ಸಮಯ ಅರ್ಥಾತ್ ಆಕ್ಟೊಬರ್ ನವೆಂಬರ್ ತಿಂಗಳಗಳನ್ನು ರೈತಾಪಿ ಜನರು ಕೊನೆ ತಿಂಗಳು ಎಂದು ಕರೆಯುವುದೇ ವಾಡಿಕೆ. ಕಳೆದ ಸುಗ್ಗಿಯ ಕಾಲ ಅರ್ಥಾತ್ ಡಿಸೆಂಬರ್ – ಜನವರಿಯಲ್ಲಿ ಸಂಗ್ರಹಿಸಿದ್ದ ಭತ್ತವೆಲ್ಲಾ  ಖಾಲಿಯಾಗಿ ಇನ್ನೂ ಹೊಸ ಭತ್ತ ಬಡಿದಿರುವುದಿಲ್ಲವಾದ್ದರಿಂದ ದೀಪಾವಳಿ ಸಮಯವನ್ನು ಕೊನೆಯ ತಿಂಗಳು ಎಂದು ಕರೆಯಲಾಗುವುದು. ಹಾಗಾಗಿ ಜೀವನೋಪಾಯಕ್ಕಾಗಿ ಅಕ್ಕಪಕ್ಕದವರು ಗೇಣಿ ಮಾಡುವರು ಭೂಮಾಲೀಕರ ಬಳಿ ಹುಲಿಭತ್ತ ತಂದು ಒಕ್ಕಲಾಟ ಮುಗಿದ ಮೇಲೆ ಭತ್ತಕ್ಕೆ ಭತ್ತ ಚಕ್ರಬಡ್ಡಿ ರೀತಿಯಲ್ಲಿ ಕೊಡುವ ಪದ್ದತಿ ಇಂದಿಗೂ ರೂಢಿಯಲ್ಲಿದೆ

ಅದೇ ನಮ್ಮ ರೈತರ ಕೈಯಲ್ಲಿ  ಹಣವಿಲ್ಲದಿದ್ದರೂ ಮನೆಯಲ್ಲಿ ದವಸ ಧಾನ್ಯವಿಲ್ಲದೇ ಇದ್ದರೂ, ಹಬ್ಬ ಹರಿದಿನಗಳು, ದೇವರು ದಿಂಡರು, ಎಂದರೆ ಅಪಾರವಾದ ಭಕ್ತಿ ಮತ್ತು ಗೌರವ. ಮಲೆನಾಡಿನ ಬಹುತೇಕ ಭಾಗಗಳಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷವೂ ಅಲ್ಲಿನ ಸ್ಥಳೀಯ ದೇವಸ್ಥಾನಗಳ ಅಭಿವೃದ್ಧಿಗಾಗಿ ಸುಮಾರು ಐದು ದಿನಗಳ ಕಾಲ ಧಾರ್ಮಿಕ ಆಚರಣೆಯಾದ ಅಂಟಿಕೆ ಪಂಟಿಕೆ ಮೂಲಕ  ಆರ್ಥಿಕ ಸಹಾಯವನ್ನು ಕೇಳುವುದು ಸಂಪ್ರದಾಯ.  ಆ ದಿನಗಳಲ್ಲಿ ಇಂದಿನ ಹಾಗೆ ಕೈಯಲ್ಲಿ ಹಣ ಚಲಾವಣೆಯಾಗುತ್ತಿರಲಿಲ್ಲವಾದ್ದರಿಂದ ಬಹುತೇಕ ರೈತಾಪಿ ವರ್ಗದವರು ಅಂಟಿಕೆ ಪಿಂಟಿಕೆ ಹಿಡಿದುಕೊಂಡು ಹಾಡು ಹೇಳಿಕೊಂಡು ಬರುತ್ತಿದ್ದವರಿಗೆ  ತಮ್ಮ ಮನೆಯಲ್ಲಿರುತ್ತಿದ್ದ ಇಲ್ಲವೇ ಅಕ್ಕ ಪಕ್ಕದವರಿಂದ ಕೈಗಡವಾಗಿ ಪಡೆದುಕೊಂಡಾದರೂ  ಅಕ್ಕಿ ಮತ್ತು ಭತ್ತವನ್ನು ದಾನದ ರೂಪದಲ್ಲಿ ಕೊಡುತ್ತಿದ್ದರು. ಹಾಗೆ ಸಂಗ್ರಹವಾದ  ಅಕ್ಕಿ ಮತ್ತು ಭತ್ತವನ್ನು ಚಿಕ್ಕ ಮಕ್ಕಳು ಮೂಟೆಗಳಲ್ಲಿ ಸಂಗ್ರಹಿ ಅದನ್ನು ತಮ್ಮ ಮನೆಯಲ್ಲಿ ಜೋಪಾನವಾಗಿ ಇಟ್ಟು  ನಂತರ ಒಟ್ಟಿಗೆ ದೇವಾಲಯಗಳಿಗೆ ತಲುಪಿಸುವುದು ನಡೆದು ಬಂದ ರೂಡಿಯಾಗಿತ್ತು.

ಅದೊಂದು ಬೆಳಗಿನ ಜಾವ  ದೇವರಿಗಾಗಿ ಸಂಗ್ರಹಿಸಿ ತಂದಿಟ್ಟಿದ್ದ ಅಕ್ಕಿ ಮೂಟೆಯ ಬಾಯಿಯನ್ನು ಯಾರೋ ಬಿಚ್ಚುತ್ತಿರುವ ಸದ್ದನ್ನು ಕೇಳಿಸಿಕೊಂಡ ಮನೆಯ ಸಣ್ಣ ವಯಸ್ಸಿನ ಹುಡುಗ ಕಣ್ಣು ಬಿಟ್ಟು ನೋಡಿದರೆ,  ಹರಕು ಕಂಬಳಿ ಹೊದ್ದಿದ್ದ ತನ್ನ ಅಪ್ಪನೇ ಅಕ್ಕಿ ತೆಗೆದುಕೊಳ್ಳುತ್ತಿರುವುದನ್ನು ಕಂಡು ಅಂತಹ  ಚುಮು ಚುಮು ಚಳಿಯಲ್ಲೂ ಬೆವರು ಸುರಿದಿತ್ತು. ಅಯ್ಯೋ! ದೇವರ ಅಕ್ಕಿ ಅಪ್ಪ ತೆಗೆಯುವುದೇ? ಎಂದು ಯೋಚಿಸುತ್ತಿದ್ದಂತೆಯೇ, ಅಲ್ಲಿ ಅಮ್ಮನೂ ಸಹಾ ಇದ್ದದ್ದನ್ನು ನೋಡಿ ಸುಮ್ಮನಾದ. ಬೆಳಿಗ್ಗೆ ಶಾಲೆಗೆ ಹೋಗುವಾಗ  ಹೊಟ್ಟೆ ಹಸಿವಿದ್ದರೂ,  ಅದೇ ಅಕ್ಕಿಯಿಂದ ತಯಾರಿಸಿದ ಗಂಜಿಯನ್ನು ಕುಡಿಯುವಾಗ, ಮನಸ್ಸಿಗೆ ಅದೇನೋ ಕಳವಳ.

ನಾಲ್ಕೈದು ದಿನಗಳ ನಂತರ ಆ ಹುಡುಗ, ಶಾಲೆಯಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದ ಅವರ ಅಪ್ಪಾ, ತನ್ನ ಮಡದಿ ಮತ್ತು ಮಗನ ಸಮ್ಮುಖದಲ್ಲೇ,  ತಾವು  ಯಾವ ಮೂಟೆಯಿಂದ ಅಕ್ಕಿ ತೆಗೆದಿದ್ದರೋ ಅದೇ ಮೂಟೆಯ ಬಾಯಿಯನ್ನು ಮತ್ತೆ ತೆರೆ ಅಂದು ತೆಗೆದುಕೊಂಡಿದ್ದ  ಆರು ಸೇರು ಅಕ್ಕಿಗೆ ಮತ್ತೆ ಎರಡು ಸೇರು ಸೇರಿಸಿದಾಗ, ಮಡದಿ ಮತ್ತೆರಡು ಸೇರು ಸೇರಿಸಲು ಹೇಳಿದಾಗ, ಮರು ಮಾತನಾಡದ ಗಂಡ ಮತ್ತೆರಡು ಸೇರು ಸೇರಿಸಿ ಒಟ್ಟು 10 ಸೇರು ಹಾಕಿ ಮೂಟೆಯನ್ನು ಕಟ್ಟಿ ಅದನ್ನು ದೇವರ ಗುಡಿಗೆ ತೆಗೆದುಕೊಂಡು ಹೋಗಿ ಕೊಟ್ಟಾಗ, ಅಮ್ಮಾ ಮತ್ತು ಮಗನ ಮನಸ್ಸಿನಲ್ಲಿ  ಅದೇನೋ ನಿರಾಳ. ಅನಕ್ಷರಸ್ಥರಾದ ಗಂಡ ಮತ್ತು ಹೆಂಡತಿಯರಿಗೂ  ದೇವರು ದಿಂಡರು ಎಂಬ ಭಯವಿದ್ದ ಕಾರಣ, ಮೋಸ ಮತ್ತು ವಂಚನೆ ಮಾಡಲು ಮನಸ್ಸಾಗುತ್ತಿರಲಿಲ್ಲ. ಮಗನ ಕಣ್ಣ ಮುಂದೆಯೇ ತೆಗೆದುಕೊಂಡ ದೇವರ ಅಕ್ಕಿಗೆ ಅವನ ಮುಂದೆಯೇ ತಾವು ವಾಪಾಸು ತೆಗೆದುಕೊಂಡಿದ್ದಿಕ್ಕಿಂತ ಹೆಚ್ಚಿನ ಅಕ್ಕಿಯನ್ನು ಹಾಕಿ,  ಲೆಕ್ಕ ಚುಕ್ತ ಮಾಡುವ ಮೂಲಕ, ಮಗನಿಗೂ ಮೌನವಾಗಿ  ಒಳ್ಳೆಯ ಸಂಸ್ಕಾರವನ್ನು ಕಲಿಸಿದ್ದರು. ಮನೆಯ ಪರಿಸ್ಥಿತಿಯನ್ನು ಅರಿತಿದ್ದ ಮಡದಿಯೂ, ಗಂಡನನ್ನು ತಪ್ಪು ದಾರಿಗೆ ಎಳೆಯದೇ, ಭ್ರಷ್ಟಾಚಾರಕ್ಕೆ ನೂಕದೇ ಸಹಕಾರವನ್ನಿತ್ತಿದ್ದರು.  ಇದು ಇಂದಿನ ಅಕ್ಷರಸ್ಥ ನಾಗರಿಕತೆಗಿಂತಲೂ, ಆ ಅನಕ್ಷರಸ್ಥ ನಾಗರಿಕತೆಯಲ್ಲಿ ಮಾನವಿಯತೆ ಪ್ರಾಮಾಣಿಕತೆ ಹೆಚ್ಚಾಗಿದ್ದದ್ದನ್ನು ಎತ್ತಿ ಹಿಡಿದಿತ್ತು.

ಇನ್ನು ಎರಡನೆಯ ಪ್ರಸಂಗ.  ಅದೊಂದು ರಾತ್ರಿ ಸುಮಾರು 7:30-8:00  ಗಂಟೆಯ ಸಮಯದಲ್ಲಿ ನನ್ನ ಗೆಳೆಯರೊಬ್ಬರು ತನ್ನ ಮಡದಿಯೊಂದಿಗೆ ಹೋಗುತ್ತಿದ್ದಾಗ, ಅವರ  ದ್ವಿಚಕ್ರ ವಾಹನದ ಆಕ್ಸಿಲರೇಟರ್ ಕೇಬಲ್ ಕತ್ತರಿಸಿ ಹೋಗಿದ್ದರಿಂದ, ವಿಧಿ ಇಲ್ಲದೇ, ಸುಮಾರು ದೂರದಲ್ಲಿರುವ ತನ್ನ ಪರಿಚಯಸ್ಥರ  ಗ್ಯಾರೇಜ್‌ಗೆ ಗಂಡ ಮತ್ತು ಹೆಂಡತಿ ಇಬ್ಬರೂ ಸೇರಿಕೊಂಡು ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದದ್ದನ್ನು ಅವರ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸುಮಾರು 13-14 ವರ್ಷದ ಹುಡುಗನೊಬ್ಬನು ಗಮನಿಸಿ, ಕೂಡಲೇ ತನ್ನ ಗಾಡಿಯನ್ನು ನಿಲ್ಲಿಸಿ, ಅಂಕಲ್  ನಿಮ್ಮ ವಾಹನವನ್ನು ತಳ್ಳಲು ಸಹಾಯ ಮಾಡಲೇ? ಎಂದು ಕೇಳುತ್ತಾನೆ. ಅಷ್ಟು ಸಣ್ಣ ವಯಸ್ಸಿನ ಹುಡುಗನಲ್ಲಿದ್ದ  ಹೃದಯವೈಶಾಲ್ಯತೆಗೆ  ಧನ್ಯವಾದನ್ನು ತಿಳಿಸಿದ ನನ್ನ ಗೆಳೆಯ ಪರವಾಗಿಲ್ಲ ಬಿಡಪ್ಪಾ. ನಾವೇ ತಳ್ಳಿಕೊಂಡು ಹೋಗುತ್ತೇನೆ ಎಂದಾಗ. ಅಷ್ಟಕ್ಕೇ ಸುಮ್ಮನಾಗದ ಆ ಹುಡುಗ, ಹಾಗಾದ್ರೇ  ನಾನು ಆಂಟಿಯನ್ನು ಗ್ಯಾರೇಜಿಗೆ ಬಿಡುತ್ತೇನೆ ಎಂದು ಹೇಳುತ್ತಾ, ನನ್ನ ಗೆಳೆಯನ  ಒಪ್ಪಿಗೆಯೂ ಕಾಯದೇ ಅವರನ್ನು ಕೂರಿಸಿಕೊಂಡು ಹತ್ತಿರದ ಗ್ಯಾರೇಜಿಗೆ ಬಿಟ್ಟು, ಮತ್ತೆ ಹಿಂದಿರುಗಿ ಬಂದು, ಅಂಕಲ್ ನಾನು ಆಂಟಿಯನ್ನು ಗ್ಯಾರೇಜ್ ಬಳಿ ಡ್ರಾಪ್ ಮಾಡಿದ್ದೇನೆ. ಆದರೆ ಅಲ್ಲಿ ಬರೀ ಗಂಡಸರೇ ಹೆಚ್ಚಾಗಿರುವ ಕಾರಣ  ಆಂಟಿಗೆ ಸ್ವಲ್ಪ ಮುಜುಗೊರವಾಗುತ್ತಿದೆ. ನಾನು ನಿಮ್ಮ ದ್ವಿಚಕ್ರ ವಾಹನವನ್ನು ತಳ್ಳುಲು ಸಹಾಯ ಮಾಡುವುದರಿಂದ  ನೀವು ಬೇಗನೆ ಗ್ಯಾರೇಜ್ ತಲುಪಬಹುದು ಎಂದಾಗ,  ಪರವಾಗಿಲ್ಲಾ ಬಿಡಪ್ಪಾ, ಆ ಗ್ಯಾರೇಜ್ ಮಾಲಿಕ ನಮ್ಮೆಲ್ಲರಿಗೂ ಚಿರಪರಿಚಿತ. ಹಾಗಾಗಿ ಯಾವುದೇ ತೊಂದರೆ ಇಲ್ಲಾ ಎಂದು ಹೇಳುವಷ್ಟರಲ್ಲೇ ಗ್ಯಾರೇಜ್ ತಲುಪಿದಾಗ, ಪರಸ್ಪರ ಧನ್ಯವಾದಗಳನ್ನು ಅರ್ಪಿಸುತ್ತಿದ್ದಂತೆಯೇ ಭರ್.. ಎಂದು ತಾನ್ ಬಂದ ದಾರಿಯಲ್ಲಿ ಆ ಹುಡುಗ ಹೋಗಿಬಿಡುತ್ತಾನೆ.

ತಮಗೆ ಪರಿಚಯವೇ ಇಲ್ಲದವರ ಸಹಾಯಕ್ಕೆ ಬಂದ ಆ ಹುಡುಗನ ಔದಾರ್ಯತೆ ಮತ್ತು  ಅಪರಿಚಿತ ವ್ಯಕ್ತಿಯ ಸುರಕ್ಷತೆಯ ಬಗ್ಗೆ ಆತನಿಗಿದ್ದ ಕಾಳಜಿ ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವೇ ಸರಿ. ಎಲ್ಲದ್ದಕ್ಕಿಂತಲೂ ಮಿಗಿಲಾಗಿ ಅಷ್ಟು ಸಣ್ಣ ವಯಸ್ಸಿನ ಹುಡುಗನಿಗೆ ಅಂತಹ ಸಂಸ್ಕಾರವನ್ನು ಕಲಿಸಿದ ಅವರ ಪೋಷಕರಿಗೆ  ಸಾವಿರದ ಶರಣು  ಎಂದರೂ ತಪ್ಪಾಗದು.

ಮೊನ್ನೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿರುವಾಗ, ಮೆಟ್ರೋ ವಿಪರೀತ ಜನಸಂದಣಿಯಿಂದ ತುಂಬಿದ್ದು ಕೆಲವು ನಿಲ್ದಾಣಗಳ ನಂತರ   ಅಮ್ಮಾ, ಮಗಳು ಮತ್ತು ಮಗ ಕುಳಿತಿದ್ದ ಆಸನದ ಪಕ್ಕದಲ್ಲಿ ಜಾಗ ಸಿಕ್ಕು, ನಾನು ಕುಳಿತು ಕೊಂಡೆ. ಚಲಿಸುತ್ತಿರುವ ರೈಲಿನ ತುಳುಕಾಟಕ್ಕೆ ಆ ಸಣ್ಣ ವಯಸ್ಸಿನ ಹುಡುಗನ ಕಾಲು ನನ್ನ ಕಾಲಿಗೆ ತಾಕುತ್ತಿದ್ದದ್ದನ್ನು ಗಮನಿಸಿದ ಆ ಹುಡುಗನ ಅಕ್ಕಾ, ಕೂಡಲೇ ತನ್ನ ತಮ್ಮನ ಕಾಲುಗಳನ್ನು ಸರಿ ಮಾಡಿ, ನನಗೆ ಕಾಲುಗಳನ್ನು ತಾಕಿಸಿದಂತೆ ತಾಕೀತು ಮಾಡಿದ್ದನ್ನು ಗಮನಿಸಿ, ಅಷ್ಟು ಸಣ್ಣ ವಯಸ್ಸಿನ ಮಗುವಿನಲ್ಲಿ ಇಷ್ಟು ಒಳ್ಳೆಯ ಸಂಸ್ಕಾರ ಇರುವುದನ್ನು  ಕಂಡು ಮನಸಾರೆ ಮೆಚ್ಚಿಕೊಂಡು, ಆವರಿಬ್ಬರ ಹೆಸರನ್ನು ಕೇಳಿದಾಗ, ಜಾಹ್ನವಿ ಮತ್ತು ಚರಣ್ ಎಂದು ತಿಳಿಸಿದರು.

ನಿಮ್ಮಿಬ್ಬರ ಹೆಸರಿನ  ಅರ್ಥ ನಿಮಗೆ ತಿಳಿದಿದೆಯೇ? ಮತ್ತು ನನ್ನ ಕಾಲಿಗೆ ನಿನ್ನ ತಮ್ಮನ ಕಾಲು ತಾಕಿಸಿದಂತೆ ಹೇಳಿದ್ದಕ್ಕೆ ಕಾರಣವೇನು? ಎಂದು ಕೇಳಿದಾಗ, ಆ ಹುಡುಗಿ ಅಂಕಲ್ ನಮ್ಮ ಅಮ್ಮಾ ದೊಡ್ಡವರ ಕಾಲಿಗೆ ಸಣ್ಣವರು ಕಾಲನ್ನು ತಾಕಿಸಬಾರದು ಎಂದು ಹೇಳಿಕೊಟ್ಟಿದ್ದಾರೆ. ಆದರೆ  ಅದರ ಹಿಂದಿರುವ ಅರ್ಥ ತಿಳಿದಿಲ್ಲಾ ಎಂದು ಪ್ರಾಮಾಣಿಕವಾಗಿ ಹೇಳಿದಾಗ ಮತ್ತಷ್ಟೂ ಸಂತೋಷವಾಗಿ, ಅಹಂ ಬ್ರಹ್ಮಾಸಿ, ಅರ್ಥಾತ್ ಎಲ್ಲರಲ್ಲೂ ಭಗವಂತ ಇರುವ ವಿಷಯವನ್ನು ತಿಳಿಸಿ, ತಿಳಿದೋ ತಿಳಿಯದೋ ಮತ್ತೊಬ್ಬನಲ್ಲಿರುವ ಭಗವಂತನಿಗೆ ಕಾಲು ತಾಕಿಸಿದ್ದಕ್ಕಾಗಿ, ಕ್ಷಮಾರೂಪದಲ್ಲಿ ಅವರ ಕಾಲನ್ನು ಮುಟ್ಟಿಕೊಂಡು ಕಣ್ಣಿಗೆ ಒತ್ತಿಕೊಂಡಾಗ, ಅವರೂ ಸಹಾ ನಮ್ಮಲ್ಲ್ರಿವ ಭಗವಂತನಿಗೆ ಪ್ರತಿ ನಮಸ್ಕರಿಸುವ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಾರೆ ಎಂದು ಅಲ್ಲಿದ್ದ ಎಲ್ಲರಿಗೂ ಕೇಳಿಸುವಂತೆ ಸ್ವಲ್ಪ ಗಟ್ಟಿ ಧ್ವನಿಯಲ್ಲಿ  ಹೇಳುವಷ್ಟರಲ್ಲಿ, ಅವರು ಇಳಿಯುವ ಸ್ಥಳ ಬಂದು ರೈಲಿನಿಂದ ಹೊರಡುವ ಮುನ್ನಾ ಸುಂದರವಾದ ಧನ್ಯತಾ ನಗೆಯನ್ನು ಚೆಲ್ಲಿ ಹೋಗುವ ಮೂಲಕ ನನ್ನ ಮಾತುಗಳಿಗೆ ಕೃತಾರ್ಥವನ್ನು ಒದಗಿಸಿದ್ದರು.

ಇದಕ್ಕೂ ಮುನ್ನಾ ಅದೇ ಹುಡುಗಿ ತನ್ನ ಜಾಗವನ್ನು ಇಬ್ಬರು ವಯಸ್ಸಾದ ಕ್ರಿಶ್ಚಿಯನ್ ನನ್ ಅವರಿಗೆ ಬಿಟ್ಟು ಕೊಡುವ ಮೂಲಕ ತನಗೇ ಅರಿವಿಲ್ಲದಂತೆ ವಸುದೈವ ಕುಟುಂಬಕಂ ಎಂಬ ಮಾತಿಗೆ ಜ್ವಲಂತ ಉದಾರಣೆಯಾಗಿದ್ದಳು.  ಅವರು ಇಳಿದು ಹೋದ ನಂತರ ಎದುರಿಗೆ ಕುಳಿತಿದ್ದ ಸಹಪ್ರಯಾಣಿಕರು. ಹೌದು ಸರ್, ನಾವುಗಳು ನಮ್ಮ ಮಕ್ಕಳಿಗೆ ನಮ್ಮ ಆಚಾರ ವಿಚಾರಗಳ ವಿವರಗಳು ನಿಮ್ಮ ರೀತಿಯಲ್ಲಿ ಹೇಳಿಕೊಟ್ಟಾಗಲೇ ಅವರಿಗೆ ಮನವರಿಕೆಯಾಗುವುದು. ನೀವು ಹೇಳಿದ ವಿಷಯ ನನಗೂ ತಿಳಿದಿರಲಿಲ್ಲ ಎಂದು ಧನ್ಯವಾದಗಳನ್ನು ತಿಳಿಸಿದರು

ಹಿಂದೆ ಎಲ್ಲರ ಮನೆ ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದಾಗಿತ್ತು. ಹೆಚ್ಚಿನವರು ಅನಕ್ಷರಸ್ಥರಾಗಿದ್ದರೂ, ಹೃದಯ ವೈಶಾಲ್ಯವಿರುತ್ತಿತ್ತು. ಇಂದು ಎಲ್ಲರ ಮನೆಗಳೂ ದೊಡ್ಡದಾಗಿದ್ದರೂ, ಮನಸ್ಸು ಚಿಕ್ಕದಾಗಿ, ಸಂಕುಚಿತ ಭಾವನೆಯನ್ನು ರೂಡಿಸಿಕೊಂಡಿರುವ ಪರಿಣಾಮ ನಮ್ಮ ಹೆಮ್ಮೆಯ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು  ಮುಂದಿನ ಜನಾಂಗಕ್ಕೆ ಹೇಳಿಕೊಡುವುದರಲ್ಲಿ ನಾವುಗಳು ವಿಫಲರಾಗಿ ಕಾಲ ಕೆಟ್ಟು ಹೋಗಿದೆ ಎಂದು ಹೇಳುತ್ತಿದ್ದೇವೆ ಅಷ್ಟೇ.

ವಿದ್ಯಾ ದದಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ।

ಪಾತ್ರತ್ವಾದ್ಧನ ಮಾಪ್ನೋತಿ, ಧನಾದ್ಧರ್ಮಂ ತತಃ ಸುಖಂ।। ಎಂಬ ಶ್ಲೋಕವನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಾವು ಕಲಿಯುವ ವಿದ್ಯೆಯಿಂದ ನಮಗೆ ವಿನಯ ದೊರೆಯುತ್ತದೆ, ಆ ರೀತಿಯಾದ ವಿನಯದಿಂದ ಯೋಗ್ಯತೆ ದೊರೆತು, ಆ ಯೋಗ್ಯತೆಯಿಂದ ವೃತ್ತಿಪರನಾಗಿ ಹಣ ಸಂಪಾದನೆ ಮಾಡಿ, ಆ ರೀತಿ ಗಳಿಸಿದ ಹಣದಿಂದ ಧರ್ಮಕಾರ್ಯಗಳನ್ನು ಮಾಡುವುದೇ ನಿಜವಾದ ಸುಖ ಎಂಬುದಾಗಿದೆ. ನಿಜವಾದ ಸುಖಕ್ಕೆ ವಿದ್ಯೆಯೇ ಮೂಲ ಕಾರಣ ಎಂದು ಈ ಶ್ಲೋಕ ಹೇಳುತ್ತದಾದರೂ, ಪ್ರಸಕ್ತ ಸಂದರ್ಭದಲ್ಲಿ ವಿದ್ಯೆಗಿಂತಲೂ ವಿವೇಕವಿದ್ದಲ್ಲಿ ಎಲ್ಲವನ್ನೂ ಸಾಧ್ಯಗೊಳಿಸಬಹುದಾಗಿದೆ ಎನ್ನುವುದೇ ಅತ್ಯಂತ ಸೂಕ್ತವಾಗಿದೆ.

ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯೆಯನ್ನು ಬಲವಂತವಾಗಿ ಅವರ ಮೇಲೆ ಹೇರುವ ಬದಲು, ಶಾಲೆಯಲ್ಲಿ ವಿದ್ಯೆ ಕಲಿಸುವ ಜೊತೆ ಜೊತೆಯಲ್ಲೇ  ಮನೆಯಲ್ಲಿಯೂ ಮಕ್ಕಳಿಗೆ ನಮ್ಮ ಸನಾತನ ಧರ್ಮದ ಸಂಸ್ಕಾರ ಮತ್ತು ಸಂಪ್ರದಾಯಗಳು, ನಮ್ಮ ಅಚಾರ ವಿಚಾರಗಳು, ನಮ್ಮ ಪೌರಾಣಿಕ ಕಥೆಗಳು ಮತ್ತು ವೀರ ಪುರುಷರ ಯಶೋಗಾಥೆಯನ್ನು ಹೇಳುವ ಮೂಲಕ, ಕೇವಲ ದೇವಾಲಯಗಳಿಗಷ್ಟೇ ಅಲ್ಲದೇ ಬಂಧು ಮಿತ್ರರ ಮನೆಗಳಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಕರೆದುಕೊಂಡು ಹೋಗುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ, ಬಂಧು ಭಾವವನ್ನು ಪರಿಚಯಿಸುತ್ತಾ, ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವಂತೆ ವಿವೇಕವಂತರಾಗಿ ಮಾಡುವ ಮೂಲಕ ಮನೆಗೂ ಮತ್ತು ನಾಡಿಗೂ ಉತ್ತಮ ನಾಗರೀಕರನ್ನಾಗಿ ಮಾಡುವುದು ನಮ್ಮದೇ ಆದ್ಯ ಕರ್ತವ್ಯವಾಗಿದೆ ಅಲ್ವೇ? ಇಂದಿನ ಮಕ್ಕಳೇ, ದೇಶದ ನಾಳಿನ  ಪ್ರಭುದ್ಧ ಪ್ರಜೆಗಳು ಎನ್ನುವುದನ್ನೂ ಮರೆಯಬಾರದು ಅಲ್ವೇ?

ಏನಂತೀರೀ?
ನಿಮ್ಮವನೇ ಮಂಜುಶ್ರೀ

Leave a comment