ಮಹಾ ಕುಂಭ ಮೇಳ ಮತ್ತು ಆರ್ಥಿಕತೆ

2025ರ ಜನವರಿ 13ರಂದು ಆರಂಭವಾಗಿ ಫೆಬ್ರವರಿ 26ರ ಶಿವರಾತ್ರಿಯವರೆಗೆ ಸುಮಾರು 45 ದಿನಗಳ ಕಾಲ ಗಂಗಾ, ಯಮುನಾ ಮತ್ತು ಗುಪ್ತನದಿ ಸರಸ್ವತಿಯ ಸಂಗಮದಲ್ಲಿ ನಡೆಯುತ್ತಲಿರುವ, 144 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾಕುಂಭ ಇನ್ನೇನು ಮುಗಿಯುವ ಹಂತಕ್ಕೆ ಬರುತ್ತಿದೆ.  ಮೊನ್ನೆ ರಾಜ್ಯಸಭಾದ ವಿರೋಧ ಪಕ್ಷದ ನಾಯಕರು ತಮ್ಮ ಅಧಿನಾಯಕಿಯನ್ನು ಮೆಚ್ಚಿಸಲು ಮತ್ತು ಅಲ್ಪಸಂಖ್ಯಾತರನ್ನು ಓಲೈಸಲು  ತ್ರಿವೇಣಿ ಸಂಗಮದಲ್ಲಿ ಮಿಂದರೆ ಈ ದೇಶದ ಬಡತನ ನಿವಾರಣೆಯಾಗುತ್ತದೆಯೇ? ಎಂದು ಸಾರ್ವಜನಿಕವಾಗಿ ಕೇಳಿ ಅಪಹಾಸ್ಯಕ್ಕೀಡಾಗಿರುವುದು ಈಗ ಎಲ್ಲರಿಗೂ ತಿಳಿದಿದೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳವು ನಿರ್ವಿಘ್ನವಾಗಿ ನಡೆಸಲು ಉತ್ತರ ಪ್ರದೇಶದ ಸರ್ಕಾರವು ಸಾವಿರಾರು ಕೋಟಿ ರುಪಾಯಿ ಹಣವನ್ನು  ವಿನಿಯೋಗಿಸುವುದರ ಮೂಲಕ ಅಲ್ಲಿನ ಪ್ರಮುಖ ಮೂಲಸೌಕರ್ಯ ನವೀಕರಣಗಳ ಮೂಲಕ ಗಮನಾರ್ಹವಾಗಿ ಸುಧಾರಿಸಿದೆ. ಇವುಗಳಲ್ಲಿ ವಿಸ್ತರಿತ ಸ್ನಾನ ಘಾಟ್‌ಗಳು, ವರ್ಧಿತ ನೈರ್ಮಲ್ಯ ಸೌಲಭ್ಯಗಳು, ತೀರ್ಥಯಾತ್ರೆಗೆ ಬರಲು ಅನುಕೂಲವಾಗುವಂತೆ ರೈಲುಗಳು, ಬಸ್ಸುಗಳು ಮತ್ತು ಶಟಲ್ ಸೇವೆಗಳೊಂದಿಗೆ ಸುಧಾರಿತ ಸಾರಿಗೆ ಜಾಲಗಳು, AI ಕ್ಯಾಮೆರಾಗಳು ಮತ್ತು RFID ರಿಸ್ಟ್‌ಬ್ಯಾಂಡ್‌ಗಳಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಸುಧಾರಿತ ಗುಂಪಿನ ನಿರ್ವಹಣಾ ವ್ಯವಸ್ಥೆಗಳು ಮತ್ತು ಉತ್ತಮ ಅನುಭವವನ್ನು ಒದಗಿಸುವಲ್ಲಿ ಗಮನಹರಿಸುವ ಮೂಲಕ ಈ ಮಹಾ ಕುಂಭದಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಗೆ ಸುಗಮವಾದ ಸೌಲಭ್ಯಗಳನ್ನು ಕೊಡುವುದರಲ್ಲಿ ಸಹಕಾರಿಯಾಗಿದೆ.

ಈ ರೀತಿಯಾಗಿ ಮಹಾ ಕುಂಭಮೇಳದ ಮೂಲಸೌಕರ್ಯ ಮತ್ತು ನಿರ್ವಹಣೆಗಾಗಿ ಸುಮಾರು ₹6,382 ಕೋಟಿ ($800 ಮಿಲಿಯನ್) ಹಣವನ್ನು ಉತ್ತರ ಪ್ರದೇಶ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಹೂಡಿಕೆ ಮಾಡಲಾಗಿದ್ದು, ಇದುವರೆವಿಗೂ 45ಕೋಟಿಗೂ ಅಧಿಕ ಭಕ್ತಾದಿಗಳು ಈಗಾಗಲೇ ಕುಂಭಮೇಳಕ್ಕೆ ಬಂದು ತೀರ್ಥ ಸ್ನಾನಮಾಡಿದ್ದರೆ ಕುಂಭ ಮೇಳ ಮುಗಿಯುವ ಹೊತ್ತಿಗೆ ಸುಮಾರು 55 – 60 ಕೋಟಿಗೂ ಹೆಚ್ಚು ಭಕ್ತಾದಿಗಳು ದೇಶವಿದೇಶಗಳಿಂದ ಆಗಮಿಸುವ ನಿರೀಕ್ಷೆ ಇದ್ದು, ಮಳೆ ನಿಂತು ಹೋದ ಮೇಲೆ ಮರಗಳ ಎಲೆಗಳಿಂದ ಹನಿಗಳು ಉದುರುವಂತೆ ಕುಂಭಮೇಳ ಮುಗಿದ ಮೂರ್ನಾಲ್ಕು ತಿಂಗಳುಗಳಲ್ಲಿಯೂ ಕೋಟ್ಯಾಂತರ ಪ್ರವಾಸಿಗರು ಬರುವ ನಿರೀಕ್ಷೆ ಇದ್ದು, ಸುಮಾರು 2 ಲಕ್ಷ ಕೋಟಿಕೂ ಅಧಿಕ ಮಟ್ಟದಲ್ಲಿ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿರುವುದನ್ನು ದೇಶದ ಆರ್ಥಿಕ ತಜ್ಞರೂ ಸಹಾ ಅನುಮೋದಿಸುತ್ತಾರೆ.

ರಾಜ್ಯ ಮತ್ತು ಕೇಂದ್ರ  ಸರ್ಕಾರವು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ವಿಮಾನ, ರೈಲು ಮತ್ತು ಬಸ್ಸುಗಳ ಸೇವೆಗಳನ್ನು ಒದಗಿಸಿರುವುದಲ್ಲದೇ, ಅಲ್ಲಿ ತಾತ್ಕಾಲಿಕ ನಗರ, ಐಷಾರಾಮಿ ಟೆಂಟ್ಗಳು,  ಊಟೋಪಚಾರಕ್ಕಾಗಿ ಹೋಟೆಲ್ಲುಗಳಂತಹ ಉತ್ತಮ ಸೌಕರ್ಯಗಳನ್ನು  ಒದಗಿಸಿದ್ದರೂ ನಿರೀಕ್ಷೆಗೂ ಮೀರಿದ ಭಕ್ತಾದಿಗಳು ಆಗಮಿಸಿರುವ ಕಾರಣ ಸ್ಥಳೀಯರೂ ಸಹಾ ತಮ್ಮ ತಮ್ಮ ಮನೆಗಳನ್ನೇ  ತಾತ್ಕಾಲಿಕ ಹೋಮ್ ಸ್ಟೇಗಳಾಗಿ ಪರಿವರ್ತಿಸಿ ಎಲ್ಲರಿಗೂ ವಸತಿ ಮತ್ತು ಊಟೋಪಚಾರಗಳ ವ್ಯವಸ್ಥೆಯನ್ನು ಮಾಡುವ ಮೂಲಕ ಹೆಚ್ಚಿನ ಹಣವನ್ನು ಸಂಪಾದಿಸುತ್ತಿದ್ದಾರೆ. ಅದೇ ರೀತಿ  ಅಕ್ಕ ಪಕ್ಕದ ಊರಿನವರೂ ಸಹಾ ಭಕ್ತಾದಿಗಳ ಅನುಕೂಲಕ್ಕಾಗಿ ಕಾಫಿ, ಟೀ, ತಿಂಡಿ ತೀರ್ಥಗಳನ್ನು ಪ್ರಯಾಗರಾಜ್ ನ ಎಲ್ಲಾ ಕಡೆಗಳಲ್ಲೂ ಮಾರಾಟ ಮಾಡುವ ಮೂಲಕವೂ ಹಣ ಸಂಪಾದನೆ ಮಾಡುತ್ತಿದ್ದಾರೆ.  ಇನ್ನು ಅನೇಕ ಯುವಕರುಗಳು ತಮ್ಮ ಬೈಕ್ ಗಳ ಮೂಲಕ ಪ್ರತಿದಿನವೂ ನೂರಾರು ಭಕ್ತಾದಿಗಳನ್ನು ತ್ರಿವೇಣಿ ಸಂಗಮದವರೆಗೂ ಡ್ರಾಪ್ ಮಾಡುವ ಮೂಲಕವೂ ಕೇವಲ ಹಣ ಸಂಪಾದನೆ ಮಾಡುತ್ತಿರುವುದಲ್ಲದೇ, ಭಕ್ತಾದಿಗಳ ಆಶೀರ್ವಾದಕ್ಕೂ ಪಾತ್ರರಾಗುತ್ತಿದ್ದಾರೆ.

ಈ ಕುಂಭ ಮೇಳಕ್ಕೆ ಭಕ್ತಾದಿಗಳು ಶ್ರದ್ಧೆಯಿಂದ ಬಂದು ಭಕ್ತಿಯಿಂದ ತ್ರಿವೇಣಿ ಸಂಗಮದಲ್ಲಿ ಮಿಂದು ಭಕ್ತಿ ಪರವಶರಾಗಿ ಹೋಗುವುದಷ್ಟೇ ಅಲ್ಲದೇ, ದಂಪತಿಗಳ ಸಮೇತ ವೇಣಿದಾನ ಮತ್ತು ತಮ್ಮ ಪಿತೃಕಾರ್ಯಗಳನ್ನೂ ಮಾಡುವ ಮೂಲಕ ಅಲ್ಲಿನ ಧಾರ್ಮಿಕ ಆಚರಣೆಯನ್ನು ನಡೆಸಿಕೊಡುವ ಪೌರೋಹಿತರ (ಪಾಂಡಗಳು) ಕುಟುಂಬದ ಆರ್ಥಿಕತೆಯನ್ನೂ ಸುಧಾರಣೆ ಮಾಡಿವೆ. ಇವಿಷ್ಟೇ ಏಕೇ? ಪವಿತ್ರ ಸ್ನಾನದ ನಂತರ ಆ ಭಕ್ತಾದಿಗಳ ಹಣೆಗೆ ಗಂಧದ ತಿಲಕವನ್ನಿಡುವವರು, ಭಕ್ತಾದಿಗಳಿಗೆ ರುದ್ರಾಕ್ಷಿ ಹಾರವನ್ನು ಮಾರುವವರೂ (ಬೆಕ್ಕಿನ ಕಣ್ಣಿನ ಮೊನಾಲಿಸಾ ಲೇಖನ ಈಗಾಗಲೇ ಓದಿದ್ದೀರೀ), ನದಿಯ ತಟದಿಂದ ತ್ರಿವೇಣಿ ಸಂಗಮವರೆಗೂ ಭಕ್ತಾದಿಗಳನ್ನು ದೋಣಿಯಲ್ಲಿ ಕರೆದುಕೊಂಡು ಹೋಗುವ ಅಂಬಿಗರೂ ಸಹಾ ಸಹಾ ದಿನವೊಂದಿಗೆ ಹತ್ತಾರು ಸಾವಿರಗಳನ್ನು ದುಡಿಯುತ್ತಿದ್ದಾರೆ ಎನ್ನುವುದೂ ಸಹಾ ಸತ್ಯವಾಗಿದೆ.

ಇಂದು  ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೂ, ಕುಂಭ ಮೇಳಕ್ಕೆ ಹೊದವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವ ಪೋಟೋಗಳು, ಸ್ನಾನದ ನಂತರ ಅವರ ಹಣೆಗಳಲ್ಲಿ ತಿಲಕ ಧರಿಸಿದ ಪೋಟೋಗಳನ್ನು ನೋಡಿದಾಗ, ಭಕ್ತಾದಿಗಳ ಆಗಮನಕ್ಕಾಗಿ ಅಷ್ಟೆಲ್ಲಾ ವ್ಯವಸ್ಥೆಗಳನ್ನು ಸರ್ಕಾರ  ಮಾಡಿದ್ದರೂ ವಿವಿಧ ಕಾರಣಗಳಿಂದಾಗಿ ವಿಶ್ವದ ಅತೀ ದೊಡ್ಡ ಈ ಧಾರ್ಮಿಕ ಸಮ್ಮೇಳನವಾಗಿರುವ 144 ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕುಂಭಮೇಳದಲ್ಲಿ ಖುದ್ದಾಗಿ ಭಾಗವಹಿಸಿ ಅದರ ಆನಂದವನ್ನು  ಕಣ್ತುಂಬಿಕೊಳ್ಳಲು ಆಗದೇ ಇರುವವರ ಸಂಖ್ಯೆಯೂ ಕೋಟಿಗಳಲ್ಲೇ ಇದ್ದು, ಛೇ, ನಾವೂಗಳು  ಸಹಾ ಅಲ್ಲಿಗೆ ಹೋಗಿ ಅದೇ ರೀತಿ ಪೋಟೋಗಳನ್ನು ತೆಗಿಸಿಕೊಳ್ಳುವುದು ಕನಸಾಗಿಯೇ ಉಳಿಯಿತಲ್ಲಾ ಎಂದು ಎಂದು ಪರಿತಪಿಸುತ್ತಿದ್ದಾರೆ.

ಇಂತಹವರ ಅಸಹನೆಯನ್ನೇ ತಮ್ಮ ಲಾಭವಾಗಿ ಬಳಸಿಕೊಳ್ಳುವವರ ಸಂಖ್ಯೆಯೂ ಕಡಿಮೆ ಇಲ್ಲಾ ಎನ್ನುವುದಕ್ಕೆ  ಅದ್ಯಾವುದೋ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಈ ಜಾಹೀರಾತೇ ಸಾಕ್ಷಿಯಾಗಿದೆ. ಅವರ ಯೋಜನೆಯ ಪ್ರಕಾರ,  ತ್ರಿವೇಣಿ ಸಂಗಮನದಲ್ಲಿ ಸ್ನಾನ ಮಾಡಿ ಅದರ ಪುಣ್ಯ ಪಡೆಯಬೇಕು ಮತ್ತು ಫೋಟೋಗಳನ್ನು ತೆಗೆಸಿಕೊಳ್ಳಬೇಕು ಎಂದವರು 500 ರೂಪಾಯಿಗಳನ್ನು ಅವರಿಗೆ ಆನ್ ಲೈನ್ ಮೂಲಕ ಪಾವತಿ ಮಾಡಿ, ಅವರಿಗೆ ಸ್ಕೀನ್ ಶಾಟ್ ಕಳುಹಿಸಿ ತಮ್ಮ  ಪೋಟೋವನ್ನು ಅವರಿಗೆ ಕಳುಹಿಸಿಕೊಟ್ಟಲ್ಲಿ,  ತ್ರಿವೇಣಿ ಸಂಗಮದಲ್ಲಿ  ಸ್ನಾನ ಮಾಡಿರುವಂತಹ ಅವರ ಫೋಟೋ ವನ್ನು ಅವರ ಮನೆಗೆ ತಲುಪಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ, . ಈ ಮೂಲಕವೂ ನೀವು ಆತ್ಮ ಶುದ್ಧಿಯಿಂದ ಪುಣ್ಯ ಸಂಪಾದಿಸಬಹುದು ಎಂದು ಅವರ ಜಾಹೀರಾತಿನಲ್ಲಿ ಹಾಕುವ ಮೂಲಕ ಭಾವನಾತ್ಮಕವಾಗಿ ಜನರನ್ನು ಮರಳು ಮಾಡುವ ದುಸ್ಸಾಹಸಕ್ಕೆ ಕೈ ಹಾಕಿರುವುದು ವಿಪರ್ಯಾಸವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆದ  ಈ ಪೋಸ್ಟ್ ನೋಡಿದ  ಅನೇಕರು ಅಚ್ಚರಿಗೆ ಒಳಗಾಗಿರುವುದಲ್ಲದೇ, ವ್ಯಾಪಾರಂ ದ್ರೋಹ ಚಿಂತನಂ ಎನ್ನುವಂತೆ, ಜನ ಮರುಳೋ ಜಾತ್ರೆ ಮರಳೋ ಎನ್ನುವಂತೆ, ಹಿಂದೂಗಳ  ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಲುವಾಗಿ ಈ ರೀತಿಯ  ವ್ಯಾಪಾರಕ್ಕಿಳಿದು ಆಸ್ತಿಕರಿಗೆ  ಕುಳಿತಲ್ಲೇ ಪುಣ್ಯ ಸಂಪಾದಿಸುತ್ತಾರೋ ಇಲ್ಲವೋ, ಆದರೆ  ತ್ರಿವೇಣಿ ಸಂಗಮಕ್ಕೆ ಬಂದು ಸ್ನಾನ ಮಾಡಿ ಹೋಗುವುದಕ್ಕೆ ಸಾವಿರಾರು ರೂಪಾಯಿ ವೆಚ್ಚಮಾಡುವ ಬದಲು ಕೇವಲ 500 ರೂಪಾಯಿಗಳಲ್ಲಿ ಸುಲಭವಾಗಿ ಮನೆಯಲ್ಲೇ ಕುಳಿತು ಪುಣ್ಯ ಪಡೆಯಬಹುದು ಎಂಬ ಈ ಹೊಸಾ ದಂಧೆಯು  ಡಿಜಿಟಲ್ ಇಂಡಿಯಾಗೆ ಸಾಕ್ಷಿಯಾಗಿರುವುದಂತೂ ಸತ್ಯ.

ಈ ರೀತಿಯಾಗಿ ಒಂದು  ಕುಂಭ ಮೇಳದಿಂದ ಸಾಮಾನ್ಯ ಜನರ ಆರ್ಥಿಕ ಎಷ್ಟೊಂದು ರೀತಿಯಲ್ಲಿ ಬದಲಾವಣೆ ಆಗುತ್ತಿದೆ ಎಂಬುದು ಈಗ ಅಂಗೈಯಲ್ಲಿರುವ ಗೆರೆಗಳಷ್ಟೇ ಸ್ಪಷ್ಟವಾಗಿದ್ದು ಈಗ ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ, ಕುಂಭ ಮೇಳವನ್ನು ವಿರೋಧಿಸುತ್ತಿರುವವರು ತಮ್ಮ ನವರಂದ್ರಗಳನ್ನೂ  ಬಂದ್ ಮಾಡಿಕೊಂಡು ತಾವು ಆಡಿದ ಮಾತುಗಳನ್ನು ತಾವೇ ನುಂಗ ಬೇಕಾದ ಪರಿಸ್ಥಿತಿ  ಉಂಟಾಗಿರುವುದನ್ನು ನೋಡುವುದಕ್ಕೆ ಬಲು ಮೋಜಾಗಿದೆ.  ಈ ರೀತಿಯ ಆರ್ಥಿಕ ಬೆಳವಣಿಗಯಿಂದಾಗಿ ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಮಾತು ಎಷ್ಟು ಸತ್ಯ ಎಂದನಿಸುತ್ತಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಮಂಜುಶ್ರೀ

Leave a comment