ಕೊಟ್ಟ ಹೆಣ್ಣು ಕುಲಕ್ಕೆ ಹೊರಗಿನವಳೇ?

ಅದು ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 2. ಅಲ್ಲಿಗೆ ವೇಗವಾಗಿ ಕಾರೊಂದು ಒಂದು ನಿಂತಿತು.  ಕಾರಿನಿಂದ ಇಳಿದ ಸಹಾಯಕನೊಬ್ಬ ಡಿಕ್ಕಿಯಿಂದ ಲಗುಬಗನೆ  ವೀಲ್‌ಚೇರ್ ತೆಗೆದು  ಅದನ್ನು ಸರಿಪಡಿಸಿ  ನಿವೃತ್ತ ವಿಂಗ್ ಕಮಾಂಡರ್ ಶ್ರೀ ಅಶೋಕ್ ಕೇತ್ಕರ್ ಅವರನ್ನು ಬಹಳ ಎಚ್ಚರಿಕೆಯಿಂದ ವೀಲ್‌ಚೇರ್‌ ಮೇಲೆ ಕುರಿಸುತ್ತಿದ್ದಂತೆಯೇ,  ವಿಮಾನಯಾನದ ಸಿಬ್ಬಂದಿಯೊಬ್ಬರು ಅವರನ್ನು ನಿರ್ಗಮನ ದ್ವಾರದ ಕಡೆಗೆ ಕರೆದುಕೊಂಡು ಹೋಗಲಾರಂಭಿಸಿದರು.

ಶ್ರೀಯುತ ಕೇತ್ಕರ್ ಅವರು ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಗಂಟೆ ಗಟ್ಟಲೆ ವಿಮಾನವನ್ನು ಸ್ವಚ್ಛಂದವಾಗಿ ಹಾರಿಸುತ್ತಿದ್ದವರು, ಎರಡು ಯುದ್ಧಗಳಲ್ಲಿ ದೇಶದ ಜಯಕ್ಕೆ ಕಾರಣೀಭೂತರಾಗಿದ್ದವರು,  ಅದೊಂದು  ಅಪಘಾತವೊಂದರಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂದು ಶಾಶ್ವತವಾಗಿ ವೀಲ್‌ಚೇರ್‌ಗೆ ಬದ್ಧರಾಗಿದ್ದರು.  ಅಷ್ಟಾದರೂ ಅವರು ಪ್ರತಿ ವರ್ಷ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿದ್ದ  ಗಣರಾಜ್ಯೋತ್ಸವಕ್ಕೆ ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ.  ಅಲ್ಲಿಗೆ ಹೋಗುವುದು  ಕೇವಲ ಪ್ರತೀಕವಷ್ಟೇ ಆಗಿರದೇ, ತಮ್ಮ ಹಳೆಯ ಸಹೋದ್ಯೋಗಿಗಳನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದ್ದ ಕಾರಣ ಈ ಬಾರಿಯೂ ದೆಹಲಿಗೆ ಪ್ರಯಾಣಿಸುತ್ತಿದ್ದರು.

ಹೀಗೆ ಹಲವು ವರ್ಷಗಳಿಂದಲೂ ದೆಹಲಿಗೆ ಪ್ರಯಾಣಿಸಿ ತಮ್ಮ ಸಹೋದ್ಯೋಗಿಗಳನ್ನು ಭೇಟಿ ಮಾಡಿ ಅವರ ಮಕ್ಕಳು  ಮಿಲಿಟರಿ ಅಥವಾ ವಾಯುಪಡೆಯಲ್ಲಿ ಸೇವೆ ಸಲ್ಲಿಸುಸುವ ಮೂಲಕ  ಗೌರವಾನ್ವಿತ  ವೃತ್ತಿ ಜೀವನವನ್ನು ನಡೆಸುತ್ತಿರುವುದನ್ನು ಕೇಳಿದಾಗ, ಕೇತ್ಕರ್ ಅವರಿಗೆ ತಮ್ಮ ಏಕೈಕ ಪುತ್ರ ಭಾರ್ಗವಿ ತಂದೆ ತಾಯಿಯವರ ಆಶಯ ವಿರುದ್ಧವಾಗಿ ಎರಡನೇ ವರ್ಷದ ಪದವಿಯಲ್ಲಿ ಇರುವಾಗಲೇ, ಓದುವುದನ್ನು ಬಿಟ್ಟು ಅನಾರೋಗ್ಯ ಪೀಡಿತ ತಾಯಿ, ತಾನು ಸಾಯುವ ಮೊದಲು ತನ್ನ ಮಗನ  ಮದುವೆಯನ್ನು ನೋಡಲು ಬಯಸಿದ್ದ ವ್ಯಕ್ತಿಯೊಬ್ಬರೊಡನೆ ಮದುವೆಯಾಗಿದ್ದಳು. ಹೀಗಾಗಿ ತಂದೆ ಮತ್ತು ಮಗಳ ಸಂಬಂಧ  ಕಡಿದು ಹೋಗಿ ಅದೆಷ್ಟೋ ವರ್ಷಗಳಾಗಿದ್ದು, ದೆಹಲಿಗೆ ಬಂದಾಗಲೆಲ್ಲಾ ಅವಳ ನೆನಪಾಗಿ ಭಾವನಾತ್ಮಕವಾಗಿ ನೋವನ್ನು ಅನುಭವಿಸುತ್ತಿದ್ದರು.

ಚೆಕ್-ಇನ್ ಮತ್ತು ಭದ್ರತಾ ವಿಧಿವಿಧಾನಗಳೆಲ್ಲವೂ ಸಂಪೂರ್ಣವಾಗಿ ಅಶೋಕ್ ಅವರನ್ನು  ಶಿಷ್ಟಾಚಾರದ ಪ್ರಕಾರವೇ ವಿಮಾನದೊಳಗೆ ವೀಲ್‌ಚೇರ್ ಸಮೇತರಾಗಿಯೇ ಕರೆದೊಯ್ದು, ಅವರಿಗೆ ಅನುಕೂಲ ಆಗಲೆಂದೇ ಮುಂದಿನ ಸಾಲಿನಲ್ಲಿ ಕೂರಿಸಲಾಯಿತು. ನಿಗಧಿತ ಸಮಯಕ್ಕೆ ಸರಿಯಾಗಿ  ವಿಮಾನವು ಉಡಾವಣೆಯಾಗಲು ಸಿದ್ಧವಾಗಿ   ರನ್‌ವೇ ಮೇಲೆ ವೇಗವಾಗಿ ಹೋಗುತ್ತಿರುವುದನ್ನು ವಿಮಾನದ ಕಿಟಕಿಯಿಂದ ನೋಡುತ್ತಿರುವಾಗ  ತಮ್ಮ ಹಾರಾಟದ ದಿನಗಳನ್ನು ನೆನಪಾಗಿ ಭಾವುಕರಾಗಿ, ಆವರಿಗೇ ಅರಿವಿಲ್ಲದಂತೆ, ಅವರ ಕೈಗಳು ಸೀಟಿನ ಹಿಡಿಕೆಯಲ್ಲಿದ್ದ ಜಾಯ್‌ಸ್ಟಿಕ್ ಅನ್ನು ಅನುಕರಿಸುತ್ತಿದ್ದಲ್ಲದೇ, ಅವರ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು.

ಕೆಲ ನಿಮಿಷಗಳ ನಂತರ ವಿಮಾನ ಆಕಾಶದಲ್ಲಿ ಸ್ಥಿರವಾಗುತ್ತಿದ್ದಂತೆಯೇ  ಅಶೋಕ್  ಅವರು ಕುಡಿಯಲು ನೀರನ್ನು ಕೇಳಿದಾಗ, ಗಗನ ಸಖಿಯ ಬದಲಾಗಿ ಸಣ್ಣ ವಯಸ್ಸಿನ ಹುಡುಗನೊಬ್ಬ  ಗಾಜಿನ ಲೋಟದಲ್ಲಿ ನೀರನ್ನು ನೀಡುವ ಮೂಲಕ ಆಶೋಕ್ ಅವರನ್ನು ಅಚ್ಚರಿಗೊಳಿಸಿದನು.  ಅದೇ ಸಮಯದಲ್ಲೇ  ಸ್ಪೀಕರ್‌ಗಳಲ್ಲಿ  ವಿಮಾನದ ಪೈಲೆಟ್ ಅವರ ಘೋಷಣೆ ಆರಂಭವಾಯಿತು.

ಆತ್ಮೀಯ ಪ್ರಯಾಣಿಕರೇ, 6E 6028 ವಿಮಾನಕ್ಕೆ ಸ್ವಾಗತ. ಇಂದು, ನಮ್ಮೊಂದಿಗೆ ಒಬ್ಬ ವಿಶೇಷ ಅತಿಥಿ ಇದ್ದು ಅವರನ್ನು ನಿಮ್ಮೆಲ್ಲರಿಗೂ ಪರಿಚಯಿಸಿಕೊಡುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ. 1A ನಲ್ಲಿ ಕುಳಿತಿರುವ  ನಿವೃತ್ತ ವಿಂಗ್ ಕಮಾಂಡರ್ ಶ್ರೀ ಅಶೋಕ್ ಕೇತ್ಕರ್ ಅವರು ಎರಡು ಯುದ್ಧಗಳಲ್ಲಿ ಭಾರತಕ್ಕೆ ವೀರೋಚಿತವಾಗಿ ಸೇವೆ ಸಲ್ಲಿಸಿರುವುದಲ್ಲದೇ ಶತ್ರುಗಳ ವಿರುದ್ಧ ವಿಜಯಗಳನ್ನು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವರು. ದುರಾದೃಷ್ಟವಷಾತ್ ಅಪಘಾತದಲ್ಲಿ ತಮ್ಮ  ಎರಡೂ ಕಾಲುಗಳನ್ನು ಕಳೆದುಕೊಂಡರೂ, ಅವರ ಹೋರಾಟದ ಮನೋಭಾವವು ಅಚಲವಾಗಿದೆ. ಅವರು ವಾಯುಪಡೆಯಲ್ಲಿ ಕಲಿತ  ಶಿಸ್ತನ್ನೇ ತಮ್ಮ  ವೈಯಕ್ತಿಕ ಜೀವನದಲ್ಲೂ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎಂದರೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಅವರ ಮಗಳು ಮದುವೆಯಾದಾಗ,  ತಮ್ಮ ಮಗಳ  ಸಂಬಂಧವನ್ನು ಕಡಿದುಕೊಂಡಿದ್ದಾರೆ. ಆದರೆ ಅವರ ಏಕೈಕ  ಮಗಳು ಮಾತ್ರಾ ತನ್ನ ತಂದೆಯನ್ನು ಎಂದಿಗೂ ಮರೆಯಲಿಲ್ಲ ಮತ್ತು ಮರೆಯುವುದೂ ಇಲ್ಲ.

ಮದುವೆಯಾದ ನಂತರ ಆ ಮಗಳು ಪೋಷಕರೊಡಗಿನ ಸಂಬಂಧ ಕಳೆದುಕೊಂಡರೂ, ಆಕೆ ತನ್ನ ತಂದೆಯ ಮೇಲೆ ಸದಾ ಕಾಲವೂ ನಿಗಾ ಇಡುತ್ತಲೇ ಇದ್ದಳು. ಮದುವೆಯಾದ ಸ್ವಲ್ಪ ಸಮಯದ ನಂತರ  ಆನಾರೋಗ್ಯ ಪೀಡಿತ ಆಕೆಯ ಅತ್ತೆಯವರು ಅಗಲಿದ ನಂತರ ಅವಳು ತನ್ನ ಅಧ್ಯಯನವನ್ನು ಮುಂದುವರೆಸಿ, ಉನ್ನತ ಅಂಕಗಳೊಂದಿಗೆ ಪದವಿ ಪಡೆದು ಪ್ರತಿಷ್ಠಿತ ವೃತ್ತಿಜೀವನವನ್ನು ಮುಂದುವರಿಸಿದಳು.  ಅಂದು, ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ಹೋದರೂ,  ಅವಳು ತನ್ನ ತಂದೆಯ ಆಶಯದಂತೆ  ವೃತ್ತಿಜೀವನದ ಕನಸನ್ನು ನನಸಾಗಿಸಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಂತೆಯೇ, ಯಾರಿಗೂ ತಿಳಿಯದಿರದ ತಮ್ಮ ವಯಕ್ತಿಕ ವಿಚಾರಗಳು ಈ ರೀತಿಯಾಗಿ ಇಡೀ ವಿಮಾನದ  ಎಲ್ಲಾ ಪ್ರಯಾಣಿಕರಿಗೂ ತಿಳಿಯುತ್ತಿರುವುದನ್ನು ಕಂಡು   ಅಶೋಕ್ ಅವರು  ದಿಗ್ಭ್ರಮೆಗೊಂಡರು.

ತನ್ನ ಮಾತನ್ನು ಮುಂದುವರೆಸಿದ ಆ ವಿಮಾನದ ಪೈಲೆಟ್ ಬಾಬಾ, ಅದು ತಪ್ಪೋ ಸರಿಯೋ ಆದರೂ ನೀವು ಯಾವಾಗಲೂ ನನನ್ನು ಪೈಲೆಟ್ ಮಾಡಬೇಕೆಂದು ಕನಸು ಕಂಡಿದ್ದಿರಿ. ಅಂದು ನಿಮ್ಮ  ಇಚ್ಚೆಯ ವಿರುದ್ಧವಾಗಿ ವಿದ್ಯೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಮದುವೆಯಾಗಿ ಹೋಗಿದ್ದ ನಿಮ್ಮ ಮಗಳು  ಇಂದು ನಿಮ್ಮ ಕನಸನ್ನು ನನಸಾಗಿಸಿ ನಿಮ್ಮ ಮುಂದೆ ಪೈಲೆಟ್ ಆಗಿದ್ದಾಳೆ. ಇಂದಿನ ಈ ವಿಮಾನದ ಪೈಲೆಟ್  ಬೇರೆ ಯಾರೂ ಆಗಿರದೇ,  ನೀವು ಕೋಪಿಸಿಕೊಂಡಿರುವ ನಿಮ್ಮ ಪ್ರೀತಿಯ ಭಾರ್ಗವಿ. ಅಷ್ಟೇ ಅಲ್ಲದೇ, ಕೆಲ ಸಮಯದ ಹಿಂದೆ  ನಿಮಗೆ ನೀರು ಕೊಟ್ಟ ಪುಟ್ಟ ಹುಡುಗ ಬೇರಾರೂ ಆಗಿರದೇ, ಅವನು ನಿಮ್ಮ ಮೊಮ್ಮಗ ಆದಿತ್ಯ ಅರ್ಥಾತ್ ನನ್ನ ಮುದ್ದಿನ ಮಗ ಎಂದು ಹೇಳುತಿದ್ದಂತೆಯೇ, ಈ ರೀತಿಯ ಆಘಾತವನ್ನು ನಿರೀಕ್ಷಸದೇ ಇದ್ದ ಅಶೋಕ್ ಅವರಿಗೆ ಒಂದು ಕಡೆ ಆನಂದ ಮತ್ತು ಮತ್ತೊಂದು ಕಡೆ ದುಃಖ ಹೀಗೆ ಎರಡೂ ಸಮ್ಮಿಳನವಾಗಿ ಕಣ್ಣಿನಲ್ಲಿ ಆನಂದ ಭಾಷ್ಯವನ್ನು ಹರಿಸುತ್ತಾ ಹಿಂದುರಿಗಿ ನೋಡಿದರೆ, ಅವರ ಪಕ್ಕದಲ್ಲೇ ಮುಗ್ಧವಾಗಿ ನಗುತ್ತಾ ನಿಂತಿದ್ದ ಮೊಮ್ಮಗ ಆದಿತ್ಯನನ್ನು ಕಂಡು ಅವರನ್ನು ಬರಸೆಳೆದು ಲೊಚ ಲೊಚನೆ ಮುತ್ತಿನ ಮಳೆಯನ್ನು ಸುರಿಸುತ್ತಿದ್ದಂತೆಯೇ ಕಾಕ್ ಪಿಟ್ ನಿಂದ ಮೈಕನ್ನು ಹಿಡಿದ ತನ್ನ ತಂದೆಯ ಬಳಿ ಬರುತ್ತಿದ್ದ ಭಾರ್ಗವಿ ಕಣ್ಗಳಲ್ಲೂ ಸಹಾ ಧಾರಾಕಾರವಾಗಿ ನೀರು ಸುರಿಯುತ್ತಿತ್ತು.

ಬಾಬಾ. ದಯವಿಟ್ಟು ಕ್ಷಮಿಸಿ. ಅಂದು  ನಾನು ನಿಮ್ಮ ಇಚ್ಛೆಗೆ ವಿರುದ್ಧವಾಗಿ ಹೋಗುವುದರ ಹೊರತಾಗಿ ನನಗೆ ಬೇರೆ ದಾರಿ ಇರಲಿಲ್ಲ. ನಾವು ಈಗ ದೆಹಲಿಯಲ್ಲಿ ವಾಸಿಸುತ್ತಿದ್ದೇವೆ. ದೇವರ ದಯೆಯಿಂದ ನಾನು ಕೈ ಹಿಡಿದ ರಾಹುಲ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಅದ್ಭುತ ವ್ಯಕ್ತಿಯಾಗಿದ್ದು ನನ್ನ ಆಸೆಗಳಿಗೆ ಎಂದೂ ತಣ್ಣೀರೆರಚದೇ, ಇದ್ದ ಕಾರಣ ನಾನು ನಿಮ್ಮ ಆಸೆಯನ್ನು ಪೂರೈಸಿದ ನಂತರ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಒಳ್ಳೆಯ ಘಳಿಯನ್ನು ಹುಡುಕುತ್ತಿದ್ದೆ.  ಅದೃಷ್ಟವಷಾತ್ ನೀವು ಇಂದು  ದೆಹಲಿಗೆ ಹಾರುತ್ತಿದ್ದೀರಿ ಎಂಬ ವಿಷಯ ಅಮ್ಮನಿಂದ ತಿಳಿದ ಕೂಡಲೇ, ನಮ್ಮ ಹಿರಿಯ ಅಧಿಕಾರಿಗಳ ಅಪ್ಪಣೆ ಪಡೆದು ಒಬ್ಬ ಧೀಮಂತ,  ಶೌರ್ಯವಂತ ಯುದ್ದ ವಿಮಾನಗಳ ಪೈಲೆಟ್ ಆದ ನಿಮ್ಮನ್ನು ಈ ವಾಣಿಜ್ಯ ಪೈಲಟ್ ಕರೆದುಕೊಂಡು ಹೋಗುವ ಸುಯೋಗ ದೊರೆತಿದ್ದಕ್ಕಾಗಿ ನನಗೆ ತುಂಬಾ ಹೆಮ್ಮೆಯಾಗುತ್ತಿದ್ದೆ. ಬಾಬಾ, ನಿಮಗೆ ಬಹಳ ದುಃಖವನ್ನು ನೀಡಿದ್ದಕ್ಕಾಗಿ  ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಅವರ ಎರಡೂ ಕೈಗಳನ್ನು ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ತಂದೆಗೆ ಗೌರವ ನೀಡುತ್ತಿದ್ದ ಸಂಗತಿ ಹೃದಯಂಗಮವಾಗಿದ್ದ ಕಾರಣ, ಇಡೀ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರು  ಎದ್ದು ನಿಂದು  ಆ ಹಿರಿಯ ಸೇನಾನಿಗೆ ಗೌರವ ಸಲ್ಲಿಸುತ್ತಿದ್ದರು. ಇದಾವುದರ ಪರಿವೇ ಇಲ್ಲದಿದ್ದ ಅಶೋಕ್  ಮತ್ತು ಅವರ ಮಗಳು ಪರಸ್ಪರ ಆಲಂಗಿಸಿಕೊಂಡು ಒಬ್ಬರನ್ನೊಬ್ಬರನ್ನು ಸಂತೈಸುತ್ತಿದ್ದರೆ, ಅರಿಬ್ಬರಿಗೂ ಅರಿವಿಲ್ಲದಂತೆ ಕಣ್ಗಳಲ್ಲಿ ಸುರಿಯುತ್ತಿದ್ದ ಕಣ್ಣೀರಿನಿಂದಾಗಿ ಅವರಿಬ್ಬರ ವಸ್ತ್ರಗಳು ತೋಯ್ದು ಹೋಗಿದ್ದವು.

ಅಜ್ಜ ಮತ್ತು ಅಮ್ಮ ಇಬ್ಬರನ್ನು ತದೇಕ ಚಿತ್ತದಿಂತ ನೋಡುತ್ತಿದ್ದ ಆದಿತ್ಯ,  ಅಜ್ಜನ ಕೈ ಹಿಡಿದು ಜಗ್ಗಿ ಅಜ್ಜ ಪ್ರತೀ ದಿನ ರಾತ್ರಿ ಮಲಗುವ ಮುನ್ನಾ ಅಮ್ಮ ನಿಮ್ಮ ಸಾಹಸ ಕಥೆಗಳನ್ನು ನನಗೆ ಹೇಳಿದ್ದಾಳೆ. ಹಾಗಾಗಿಯೇ  ನಾನು ಸಹಾ ನಿಮ್ಮಂತೆಯೇ ಫೈಟರ್ ಪೈಲಟ್ ಆಗಿ ನನ್ನ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ಆಸೆ ನನ್ನಲ್ಲಿ ಮೂಡಿದೆ  ಎಂಬುದನ್ನು ಹೇಳಿದಾಗ, ಅಶೋಕ್ ಆವರ ಹೃದಯವು ಹೆಮ್ಮೆಯಿಂದ ಉಕ್ಕಿ ಹರಿಯಿತು.

ಇವೆಲ್ಲಾ ನಡೆಯುತ್ತಿದ್ದ ಸಮಯದಲ್ಲೇ, ವಿಮಾನದ  ಸಹ-ಪೈಲಟ್ ಇನ್ನೇನು ಕೆಲವೇ ನಿಮಿಷಗಳಲ್ಲಿ ದೆಹಲಿಯ ವಿಮಾನ ನಿಲ್ದಾನದಲ್ಲಿ ವಿಮಾನವನ್ನು ಇಳಿಸುತ್ತಿರುವ ಕಾರಣ ಎಲ್ಲರೂ ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತು ಸೀಟ್ ಬೆಲ್ಟ್ ಧರಿಸಿಕೊಳ್ಳಬೇಕು ಎಂಬುದನ್ನು  ಘೋಷಿಸುತ್ತಿದ್ದಂತೆಯೇ ಒಲ್ಲದ ಮನಸ್ಸಿನಿಂದ ತನ್ನ ಕರ್ತವ್ಯವನ್ನು ನಿಭಾಯಿಸುವ ಸಲುವಾಗಿ ಆ ವಿಮಾನದ ಪೈಲೆಟ್ ಭಾರ್ಗವಿ ಕಾಕ್‌ಪಿಟ್‌ಗೆ ಹಿಂತಿರುಗಿದಳು. ಆಮ್ಮ ಆ ಕಡೆ ಹೋಗುತ್ತಿದ್ದಂತೆಯೇ ಆದಿತ್ಯ ಅಜ್ಜನನ್ನು ಹಿಡಿದುಕೊಂಡೇ ಅವರ ಪಕ್ಕದಲ್ಲೇ ಕುಳಿತುಕೊಂಡ ಸ್ವಲ್ಪ ಸಮಯದಲ್ಲಿ ವಿಮಾನ ಅತ್ಯಂತ ಸರಾಗವಾಗಿ ನಿಲ್ದಾಣದಲ್ಲಿ ಇಳಿಯುವ ಪ್ರಕ್ರಿಯೆ ನಡೆಯುತ್ತಿದ್ದಂತೆಯೇ ಅಶೋಕ್ ಅವರ ಆದಿತ್ಯನಿಗೆ ವಿಮಾನ  ಇಳಿಸುವಿಕೆಯ ಕಾರ್ಯ ವಿಧಾನಗಳನ್ನು ಅತ್ಯಂತ ಉತ್ಸಾಹದಿಂದ ವಿವರಿಸಿದರು.

ಹೀಗೆ ಅಂದಿನ ಆ ವಿಮಾನದ ಪ್ರಯಾಣವು  ಭೂತ, ವರ್ತಮಾನ ಮತ್ತು ಭವಿಷ್ಯ ಹೀಗ  ಮೂರು ತಲೆಮಾರುಗಳ ಪೈಲಟ್‌ಗಳನ್ನು ಒಂದು ಮಾಡಿದ್ದಲ್ಲದೇ . ತನ್ಮೂಲಕ  ಹರಿದು ಹೋಗಿದ್ದ ಕುಟುಂಬವನ್ನು ಒಗ್ಗೂಡಿಸಿತ್ತು. ಮನೆಯಿಂದ ಓಡಿ ಹೋಗಿ ಮದುವೆಯಾಗುವ ಹೆಣ್ಣು ಮಕ್ಕಳೆಲ್ಲಾ ಕೆಟ್ಟು ಹೋಗುವುದಿಲ್ಲಾ. ಹಾಗೆಯೇ  ಇಪ್ಪತ್ತು ವರ್ಷಗಳ ಕಾಲ ಹೊತ್ತು ಹೆತ್ತು ಸಾಕಿ ಸಲಹಿದ್ದ ಅಪ್ಪಾ ಅಮ್ಮನನ್ನು ಧಿಕ್ಕರಿಸಿ ಓಡಿ ಹೋಗಿ ಮದುವೆ ಆಗುವುದೂ ಒಳ್ಳೆಯ ಲಕ್ಷಣವಲ್ಲಾ. ಇನ್ನು ತಂದೆ ತಾಯಿಯರೂ ಸಹಾ ತಮ್ಮ ಅಶಯಗಳನ್ನು ಮಕ್ಕಳ ಮೇಲೆ ಅನಗತ್ಯವಾಗಿ ಹೇರುವುದರ ಬದಲು ಮಕ್ಕಳೊಂದಿಗೆ ಮಾತನಾಡಿ ಅವರ ಆಭಿರುಚಿ ಸರಿಯಿದ್ದಲ್ಲಿ ಅದಕ್ಕೆ ಪ್ರೋತ್ಸಾಹಿಸಬೇಕು. ಅವರ ದೃಷ್ಟಿಕೋನ ಸರಿ ಇಲ್ಲದಿದ್ದಾಗ ಮಾತ್ರ ತಿದ್ದುವುದು ಒಳ್ಳೆಯ ಲಕ್ಷಣ.  ಏಕೆಂದರೆ  ಎಲ್ಲರಿಗೂ ಭಾರ್ಗವಿಯ ತರಹ ಮಗಳು ಮತ್ತು ಅದೃಷ್ಟ ಇರೋದಿಲ್ಲಾ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ

ಗೌರವ ಸಮರ್ಪಣೆ:  ಇದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಅನಾಮಿಕ ಲೇಖಕರೊಬ್ಬರ ಈ ಹೃದಯಸ್ಪರ್ಶಿ ಲೇಖನದ ಭಾವಾನುವಾದವಾಗಿದ್ದು. ಲೇಖನದ ಸಂಪೂರ್ಣ ಶ್ರೇಯ ಮೂಲಕ ಲೇಖಕರಿಗೇ ಸಲ್ಲುತ್ತದೆ.

Leave a comment