ಭಾರತೀಯ ರೈಲ್ವೇ ಇತಿಹಾಸ

ಭಾರತೀಯರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಮತ್ತು ಆರಾಮದಾಯಕವಾಗಿ  ತಲುಪಿಸುವ ಸಾರಿಗೆ ವ್ಯವಸ್ಥೆ ಎಂದರೆ ಅದು ಭಾರತೀಯ ರೈಲ್ವೇ ಸಂಸ್ಥೆ. ಹಾಗಾಗಿಯೇ ಭಾರತೀಯ ರೈಲ್ವೆಯನ್ನು ಭಾರತದ ಜೀವನಾಡಿ ಎಂದು ಕರೆದರೂ ತಪ್ಪಾಗದು. ಪ್ರಸ್ತುತ ನಮ್ಮ ದೇಶದಲ್ಲಿ ಒಂದು ಅಂಕಿ ಅಂಶಗಳ ಪ್ರಕಾರ 13,169 ರಷ್ಟು ಪ್ಯಾಸೆಂಜರ್​ ರೈಲುಗಳು 7325 ನಿಲ್ದಾಣಗಳ ಮಧ್ಯೆ ಸಂಚಾರ ಮಾಡುತ್ತಾ, ಪ್ರತಿ ನಿತ್ಯವೂ ಸುಮಾರು ಮೂರು ಕೋಟಿಯಷ್ಟು ಜನರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತಲುಪಿಸುವ ಜವಾಬ್ಧಾರಿಯನ್ನು ನಿಭಾಯಿಸುತ್ತದೆ. ಹೀಗಾಗಿಯೇ ಪ್ರತೀ ವರ್ಷದ ಬಡ್ಜೆಟ್ಟಿನಲ್ಲಿ ತಮ್ಮ ತಮ್ಮ ಪ್ರದೇಶಗಳಿಗೆ ಹೊಸ ಹೊಸಾ ರೈಲುಗಳನ್ನು ಆರಂಭಿಸಬೇಕೆಂದು ಅನೇಕ ಸಂಸದರು ಹೋರಾಡುತ್ತಿರುತ್ತಾರೆ. ಇಂತಹ ರೈಲ್ವೇ ಇಲಾಖೆಯನ್ನು  ಆರಂಭಿಸಿದವರು ಯಾರು? ಎಂದು ಯಾವುದೇ ಭಾರತೀಯರನ್ನು ಕೇಳಿದಾಕ್ಷಣ ಥಟ್ ಎಂದು, ಬ್ರಿಟೀಷರೇ ಭಾರತದ ರೈಲ್ವೇ ಪ್ರವರ್ತಕರು ಎಂದೇ ಹೇಳುತ್ತಾರೆ.

ಹೌದು ನಿಜ. 1803ರಲ್ಲಿ  ರಿಚರ್ಡ್ ಟ್ರೆವಿಥಿಕ್ ಎಂಬ ಬ್ರಿಟಿಷ್ ಮೆಕ್ಯಾನಿಕಲ್ ಮತ್ತು ಮೈನಿಂಗ್ ಇಂಜಿನಿಯರ್ ಎಂಬುವವರು ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ  ಹಬೆಯಧಾರಿತ ಇಂಜಿನ್ ನಿರ್ಮಿಸಿದರೆ, ಇಂಗ್ಲೇಂಡಿನ ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಸ್ಟೀಫನ್ಸನ್ ಎನ್ನುವವರು ಅದನ್ನು ಮತ್ತಷ್ಟು ಸುಧಾರಿಸಿ ಲೋಕೋಮೋಟೀವ್ ಇಂಜಿನ್ ಕಂಡು ಹಿಡಿದು ರೈಲ್ವೆಯ ಪಿತಾಮಹ ಎನಿಸಿಕೊಂಡರು. ಅವರ ಮಗ ರಾಬರ್ಟ್ 1830 ರಲ್ಲಿ ಮೊದಲ ಬಾರಿಗೆ ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್ ನಡುವೆ ಪ್ರಪಂಚದ ಮೊಟ್ಟ ಮೊದಲ್ ಸಾರ್ವಜನಿಕ ಇಂಟರ್-ಸಿಟಿ ರೈಲ್ವೆ ರೈಲುಮಾರ್ಗವನ್ನು  ಆರಂಭಿಸಿದರು.

ಆದರೆ ಭಾರತಕ್ಕೆ ಮೊಟ್ಟ ಮೊದಲ ರೈಲನ್ನು ತಂದ ಬ್ರಿಟೀಷರಲ್ಲದೇ, ಬ್ರಿಟೀಷರಿಗೇ ಸಾಲ ಕೊಡುವಷ್ಟು ಶ್ರೀಮಂತರಾಗಿದ್ದ, ಮುಂಬೈ ನಗರದ ವಾಸ್ತುಶಿಲ್ಪಿ ಎಂದೇ  ಖ್ಯಾತರಾದ ಶ್ರೀ ಜಗನ್ನಾಥ ಶಂಕರಸೇಟ್ ಮುರ್ಕುಟೆ ಅವರಿಗೆ ಸಲ್ಲುತ್ತದೆ ಎಂದರೆ ಅಚ್ಚರಿ ಆಗಬಹುದು. ಶ್ರೀ ಜಗನ್ನಾಥ ಶಂಕರ್ ಮುರ್ಕುಟೆ ಅವರು 1803 ರ ಫೆಬ್ರವರಿ 10 ರಂದು ಮುರ್ಬಾದ್‌ನಲ್ಲಿ ಮರಾಠಿ ದೈವಜ್ಞ ಬ್ರಾಹ್ಮಣ (ವಿಶ್ವಕರ್ಮ ಬ್ರಾಹ್ಮಣರು) ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಶಂಕರ್ ಮುರ್ಕುಟೆ ಅವರು ಆಭರಣ ಮತ್ತು ವಜ್ರಗಳ ವ್ಯಾಪಾರಿಯಾಗಿದ್ದದಲ್ಲದೇ ಅಂದಿನ ಕಾಲಕ್ಕೇ ಬಹುದೊದ್ಡ  ಹಣಕಾಸು ವ್ಯವಹಾರ ಮಾಡುತ್ತಿದ್ದಂತಹ ಆಗರ್ಭ ಶ್ರೀಮಂತರಾಗಿದ್ದರು. ಅವರ ಖ್ಯಾತಿ ಯಾವ ಪರಿಯಾಗಿತ್ತೆಂದರೆ, ಅರಬ್ಬರು, ಆಫ್ಘನ್ನರು ಮತ್ತು ಇತರ ವಿದೇಶಿ ವ್ಯಾಪಾರಿಗಳು ತಮ್ಮ ಸಂಪತ್ತನ್ನು ಬ್ಯಾಂಕುಗಳಲ್ಲಿ ಇಡುವ ಬದಲು ಶಂಕರ್ ಮರ್ಕುಟೆ ಆವರ ಬಳಿ ನಿಶ್ಚಿಂತೆಯಿಂದ ಇಡುತ್ತಿದ್ದರಂತೆ. ಇನ್ನು ಭಾರತದಲ್ಲಿ ಸಾಮ್ರಾಜ್ಯ ವಿಸ್ತರಣೆ ಮಾಡುವ ಸಲುವಾಗಿ  ಪದೇ ಪದೇ ಯುದ್ಧದಲ್ಲಿ ತೊಡಗಿದ್ದ ಈಸ್ಟ್ ಇಂಡಿಯಾ ಕಂಪನಿಯೂ ಸಹಾ ಶಂಕರ್ ಅವರ ಬಳಿಯೇ ಸಾಲವನ್ನು ತೆಗೆದುಕೊಳ್ಳುತ್ತಿತ್ತು. ಇಂತಹ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟು ಕೊಂಡೇ ಜನಿಸಿದ ಶ್ರೀ ಜಗನ್ನಾಥರಿಗೆ ಇಂಗ್ಲೀಷ್ ಶಿಕ್ಷಣ ದೊರೆತ ಪರಿಣಾಮ, ಉತ್ತಮ ಆಡಳಿತ, ವ್ಯವಹಾರ ಮತ್ತು  ಸಂವಹನೆಯಲ್ಲಿ ಸಿದ್ಧಹಸ್ತರಾಗಿದ್ದು ತಮ್ಮ ತಂದೆಯವರ ಮರಣಾನಂತರ  ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದರು. ಅಂದಿನ ಕಾಲಕ್ಕೆ ಬ್ರಿಟಿಷ್ ಆಳ್ವಿಕೆಗೆ ತಲೆಬಾಗುವವರೇ ಹೆಚ್ಚಾಗಿದ್ದಂತಹ ಸಂಧರ್ಭದಲ್ಲಿ ಉಳಿದವರಿಗಿಂತಲೂ ವಿಭಿನ್ನವಾಗಿ, ಬ್ರಿಟಿಷ್ ಅಧಿಕಾರಿಗಳೇ ಖುದ್ಧಾಗಿ ಇವರ ಬೆಂಬಲ ಮತ್ತು ಸಹಕಾರವನ್ನು ಕೋರುವಷ್ಟರ ಮಟ್ಟಿಗೆ ಪ್ರಭಾವಿಗಳಾಗಿದ್ದರು.

ಸೆಪ್ಟೆಂಬರ್ 15, 1830 ರಂದು, ಇಂಗ್ಲೆಂಡ್‌ನ ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್ ನಡುವೆ ಮೊಟ್ಟ ಮೊದಲ ರೈಲು ಓಡಿದ ಸುದ್ದಿ ವಿಶ್ವಾದ್ಯಂತ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ಆ ವಿಷಯ ಜಗನ್ನಾಥ್ ಶೇಟ್ ಅವರ ಕಿವಿಗೂ ಬಿದ್ದು, ರೈಲ್ವೇ ಸೌಲಭ್ಯವನ್ನು ತಮ್ಮ ಮುಂಬೈ ನಗರಕ್ಕೂ ತರಬೇಕೆಂದು ನಿರ್ಧರಿಸಿ, ತಮ್ಮ ತಂದೆಯವರ ಆತ್ಮೀಯರು ಮತ್ತು  ಹೆಸರಾಂತ ಉದ್ಯಮಿಗಳಾಗಿದ್ದ ಸರ್ ಜಮ್ ಷೆಡ್ ಜೀ ಜೆಜೀ ಭಾಯ್ ಟಾಟಾ  ಅವರೊಂದಿಗೆ  ಸುಧೀರ್ಘವಾಗಿ  ರೈಲ್ವೇ ಸಾರಿಗೆ ವ್ಯವಸ್ಥೆಯ ಸಾಧಕ ಬಾಧಕಗಳ ಕುರಿತಾಗಿ ಚರ್ಚಿಸಿದ್ದಲ್ಲದೇ, ಅಂದಿನ ಖ್ಯಾತ ಬ್ರಿಟಿಷ್ ನ್ಯಾಯಾಧೀಶರಾದ ಸರ್ ಥಾಮಸ್ ಎರ್ಸ್ಕೈನ್ ಪೆರ್ರಿ ಅವರಿಂದ ಕಾನೂನು ಸಲಹೆಯನ್ನೂ ಪಡೆದುಕೊಂಡು ಅಂತಿಮವಾಗಿ ಮುಂಬೈನಲ್ಲಿ ಮೊಟ್ಟ ಮೊದಲ ರೈಲ್ವೇ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಲು ನಿರ್ಧರಿಸಿದರು.

ಹೀಗೆ ನಿರ್ಧರಿಸಿದ ನಂತರ ಜುಲೈ 13, 1844 ರಂದು, ಅಂದಿನ ಬಾಂಬೇ ಪ್ರಾವಿನನ್ಸ್  ಸರ್ಕಾರಕ್ಕೆ ಔಪಚಾರಿಕ ಪ್ರಸ್ತಾವನೆಯನ್ನು ಸಲ್ಲಿಸಿದ ಕೂಡಲೇ, ಬ್ರಿಟಿಷ್ ಆಡಳಿತವೂ ಸಹಾ ಅದಕ್ಕೆ ಪೂರಕವಾಗಿ ಸ್ಪಂದಿಸಿ ಬಾಂಬೆಯಿಂದ ರೈಲ್ವೆ ವಿಸ್ತರಣೆಯ ಕುರಿತು ಪ್ರಾಥಮಿಕ ಅಧ್ಯಯನವನ್ನು ನಡೆಸಿ, ಅಂತಿಮವಾಗಿ ಅಂದಿನ ಬ್ರಿಟಿಷ್ ಅಧಿಕಾರಿಗಳು, ಕೆಲ ವ್ಯಾಪಾರಿಗಳು ಮತ್ತು ಬ್ಯಾಂಕರ್‌ಗಳನ್ನು ಒಟ್ಟುಗೂಡಿಸಿ  ಗ್ರೇಟ್ ಇಂಡಿಯನ್ ಪೆನಿನ್ಸುಲಾ ರೈಲ್ವೆ ಎಂಬ ಸಂಸ್ಥೆಯನ್ನು ಆರಂಭಿಸಿದಾಗ, ಆ ಸಂಸ್ಥೆಯಲ್ಲಿ ಜಗನ್ನಾಥ್ ಮತ್ತು  ಷೆಡ್ ಜೀ ಜೆಜೀ ಭಾಯ್ ಟಾಟಾ ಇಬ್ಬರು ಮಾತ್ರಾ ಭಾರತೀಯ ನಿರ್ದೇಕರಾಗಿದ್ದರು.

ಹೀಗೆ ಜಗನ್ನಾಥ್ ಶೇಟ್ ಅವರ ಕನಸಿನ ಯೋಜನೆಯನ್ನು ಸಾಕಾರ ಗೊಳಿಸಲು ಅವಶ್ಯಕವಿದ್ದ ಭೂಮಿ ಮತ್ತು ಹಣವನ್ನು ಸಹಾ ಒದಗಿಸಿ ಬಾಂಬೆಯ ಬೋರಿ ಬಂದರ್ ನಿಂದ ಬಾಂಬೆಯ ಹೊರವಲಯವಾದ ಥಾಣೆಗೆ ಸುಮಾರು 34 ಕಿಲೋಮೀಟರ್ ದೂರದವರೆಗೂ ರೈಲ್ವೇ ಹಳಿಗಳನ್ನು ಹಾಕಿಸಿ, ಇಂಗ್ಲೇಂಡಿನಿಂದ ಇಂಜಿನ್ ಮತ್ತು ಭೋಗಿಗಳನ್ನು ಖರೀದಿಸಿ, ಏಪ್ರಿಲ್ 16, 1853 ರಂದು, ಮಧ್ಯಾಹ್ನ 3:30 ಕ್ಕೆ, ಮುಂಬೈನ ಬೋರಿ ಬಂದರ್ ನಿಲ್ದಾಣದಿಂದ (ಈಗ ಛತ್ರಪತಿ ಶಿವಾಜಿ ಟರ್ಮಿನಸ್) ಥಾಣೆಯವರೆಗೆ ತನ್ನ ಮೊದಲ ಪ್ರಯಾಣವನ್ನು ಆರಂಭಿಸಿತು. ಒಟ್ಟು 14 ಬೋಗಿಗಳು ಮತ್ತು 3 ಲೋಕೋಮೋಟಿವ್‌ಗಳನ್ನು ಒಳಗೊಂಡಿದ್ದ ಸುಮಾರು 400 ಪ್ರಯಾಣಿಕರನ್ನು ಹೊತ್ತ ಈ ಹೊಸಾ ರೈಲಿಗೆ ಬಗೆ ಬಗೆಯ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಈ ಐತಿಹಾಸಿಕ ಪ್ರವಾಸದಲ್ಲಿ ಪ್ರಯಾಣಿಸಿದ ಆರಂಭಿಕ ಪ್ರಯಾಣಿಕರಲ್ಲಿ ನಿಸ್ಸಂದೇಹವಾಗಿಯೂ ಜಗನ್ನಾಥ ಶಂಕರ ಸೇಟ್ ಮತ್ತು ಜಮ್ ಷೆಡ್ ಜೀ ಜೀಜೀಭಾಯ್ ಟಾಟಾ ಅವರೂ ಸೇರಿದಂತೆ ಅನೇಕ ಬ್ರಿಟೀಷ್ ಅಧಿಕಾರಿಗಳಲ್ಲದೇ ಭಾರತದ ಉಳಿದ ಸಂಸ್ಥಾನಗಳ ರಾಜ ಮಹಾರಾಜರುಗಳು ಸಹಾ ಇದ್ದರು. ಈ ರೀತಿಯಾಗಿ ಚಾಲನೆ ಪಡೆದ ರೈಲಿಗೆ 21-ಗನ್ ಸೆಲ್ಯೂಟ್ ಗಳ ಸರ್ಕಾರಿ ಗೌರವವನ್ನು ನೀಡಲಾಗಿತ್ತು.

ಹೀಗೆ ಜಗನ್ನಾಥ್ ಶೇಟ್ ಎಂಬ ಅಪ್ಪಟ ಭಾರತೀಯರ ಕನಸಿನ ಕೂಸಾದ ಭಾರತೀಯ ರೈಲ್ವೇ ಇಲಾಖೆಗೆ ಅಂದಿನ ಬ್ರಿಟಿಷರು ಕೇವಲ ಮಾರಾಟಗಾರರಾಗಿದ್ದರು. ಜಗನ್ನಾಥ್ ಶೇಟ್ ಅವರ ಕೊಡುಗೆಯನ್ನು ಮೆಚ್ಚಿ 15.02.1991 ರಂದು ಅವರ ಹೆಸರಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಪಶ್ಚಿಮ ರೈಲ್ವೆ (WR) ನಲ್ಲಿರುವ ಮುಂಬೈ ಸೆಂಟ್ರಲ್ ಟರ್ಮಿನಸ್ ಅನ್ನು ನಾನಾ ಶಂಕರ್ ಶೇಟ್ ಸೆಂಟ್ರಲ್ ಟರ್ಮಿನಸ್ ಎಂದು ಮರುನಾಮಕರಣ ಮಾಡಲು ರೈಲ್ವೇ ಇಲಾಖೆಯು ಪ್ರಸ್ತಾಪವನ್ನು ಮಾಡಿದೆ. ನಂತರದ ದಿನಗಳಲ್ಲಿ ಈಶಾನ್ಯ ಭಾರತ, ಮಧ್ಯ ಭಾರತ, ಕರ್ನಾಟಕದ ಕೋಲಾದ ಚಿನ್ನದ ಗಣಿ ಪ್ರದೇಶ ಹೀಗೆ ದೇಶಾದ್ಯಂತ ಇದ್ದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವ ಸಲುವಾಗಿ ಬ್ರಿಟೀಷರು ಭಾರತದಲ್ಲಿ ಗೂಡ್ಸ್ ರೈಲುಗಳನ್ನು ಆರಂಭಿಸಿ ಕ್ರಮೇಣ ಅದೇ ಹಳಿಗಳ ಮೇಲೆ ಪ್ರಯಾಣಿಕರ ಅನುಕೂಲಕ್ಕೆ ಬಳಸಲಾಯಿತು.

ಭಾರತದ ಮೊಟ್ಟ ಮೊದಲ ರೈಲು ಆರಂಭವಾದ ಮುಂಬೈನ ಬೋರಿಬಂದರ್ ಭಾರತದ ಮೊದಲ ರೈಲ್ವೆ ನಿಲ್ದಾಣ ಎಂಬ ಕೀರ್ತಿಗೆ ಭಾಗವಾಗಿ ಅದಕ್ಕೆ ವಿಕ್ಟೋರಿಯಾ ಟರ್ಮಿನಸ್ (VT) ಎಂದೇ ಹೆಸರಾಗಿ ಹೋಯಿತು. 1996ರಲ್ಲಿ ಇದೇ ನಿಲ್ದಾಣವನ್ನು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿ, ನಂತರ  2017ರಲ್ಲಿ ಮತ್ತೆ ಈ ರೈಲ್ವೆ ನಿಲ್ದಾಣಕ್ಕೆ ಛತ್ರಪತಿ ಶಿವಾಜಿ ಟರ್ಮಿನಸ್ ಎಂದು ಹೆಸರನ್ನು ಬದಲಾಯಿಸಿ, ಜನರ ಆಡು ಭಾಷೆಯಲ್ಲಿ ಅದು VT ಯಿಂದ CST ಎಂಬ ಹೆಸರನ್ನು ಪಡೆಯಿತು. ಪ್ರಾರಂಭದಲ್ಲಿ ಬೋರಿಬಂದರ್ ರೈಲ್ವೆ ನಿಲ್ದಾಣವನ್ನು ನಿರ್ಮಿಸಲು ಸುಮಾರು ಒಂಭತ್ತು ವರ್ಷಗಳು ತೆಗೆದುಕೊಂಡಿದ್ದು ಈಗ ಇತಿಹಾಸ.

ಪ್ರಪಂಚಾದ್ಯಂತ ರೈಲುಗಳಲ್ಲಿ ಶೌಚಾಲಯಗಳ ಅಳವಡಿಕೆಯ ಹಿಂದೆಯೂ ಭಾರತೀಯರ ಶ್ರಮವಿದೆ ಎಂದರೆ ಮತ್ತಷ್ಟೂ ಅಚ್ಚರಿಯಾದರೂ ಅದೇ ವಾಸ್ತವದ ಸಂಗತಿಯಾಗಿದೆ. ಭಾರತೀಯರ ಸಹಕಾರದಿಂದ ಭಾರತದಲ್ಲಿ 1853ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಆರಂಭವಾಗ ನಂತರ ದಿನಗಳಲ್ಲಿ ಕ್ರಮೇಣವಾಗಿ ಭಾರತಾದ್ಯಂತ ತನ್ನ ಜಾಲವನ್ನು ವಿಸ್ತರಿಸಿಕೊಂಡಿತು. 1909 ರಲ್ಲಿ ಓಖಿಲ್ ಚಂದ್ರ ಸೇನ್ ಎಂಬ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಗೆ ತುರ್ತಾಗಿ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿ ಉಂಟಾದಾಗ, ಸಾಹಿಬ್‌ಗಂಜ್ ನಿಲ್ದಾಣದಲ್ಲಿ ರೈಲು ನಿಂತಾಗ ಅವರು ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಅವರ ರೈಲು ಹೊರಟುಬಿಟ್ಟಿತ್ತು. ಒಂದು ಕೈಯಲ್ಲಿ ನೀರಿನ ತಂಬಿಗೆ ಹಿಡಿದು ಚಂದ್ರ ಸೇನ್ ರೈಲನ್ನು ಹತ್ತಲು ಓಡಿದರೂ, ರೈಲಿನ ವೇಗ ಹೆಚ್ಚಿದ ಕಾರಣ, ಅವರು ರೈಲನ್ನು ಏರಲು ಸಾಧ್ಯವಾಗಲಿಲ್ಲ. ಚಂದ್ರ ಸೇನ್ ಅವರ ಪರಿಸ್ಥಿತಿಯನ್ನು ಕಂಡು ಅಲ್ಲಿದ್ದವರೆಲ್ಲರೂ ನಕ್ಕಿದ್ದನ್ನು ನೋಡಿ ಕೋಪಗೊಂಡ ಸೇನ್ ಅವರು ಕೂಡಲೇ ಪಶ್ಚಿಮ ಬಂಗಾಳದ ಸಾಹಿಬ್‌ಗಂಜ್ ವಿಭಾಗೀಯ ಕಚೇರಿಗೆ ಪತ್ರ ಬರೆದು ರೈಲಿನಲ್ಲಿ ಶೌಚಾಲಯವಿಲ್ಲದಿದ್ದರಿಂದ ತಾವು ಅನುಭವಿಸಿದ ಕಷ್ಟವನ್ನು ತಿಳಿಸಿ, ಈ ಸಮಸ್ಯೆಗೆ ಪರಿಹಾರವಾಗಿ ರೈಲುಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಬೇಕೆಂದು ತಮ್ಮ ಪತ್ರದಲ್ಲಿ ತಿಳಿಸಿದ್ದರು. ಈ ವಿಷಯವನ್ನು ಆಗಿನ ರೈಲ್ವೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅಂದಿನ ಬ್ರಿಟಿಷ್ ಸರ್ಕಾರದ ಗಮನಕ್ಕೆ ತಂದ ಪರಿಣಾಮ, ದೀರ್ಘ ಕಾಲದ ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ನೈರ್ಮಲ್ಯದ ಅಗತ್ಯವನ್ನು ಎತ್ತಿ ಹಿಡಿಯುವ ಸಲುವಾಗಿ 50 ಮೈಲಿಗಳಿಗಿಂತ ಹೆಚ್ಚು (ಸುಮಾರು 80.5 ಕಿ.ಮೀ) ಪ್ರಯಾಣಿಸುವ ರೈಲುಗಳ ಎಲ್ಲಾ ವರ್ಗದ ಬೋಗಿಗಳಲ್ಲಿಯೂ ಶೌಚಾಲಯದ ವ್ಯವಸ್ಥೆ ಮಾಡಲಾಯಿತು.

ಬೇಸಿಗೆ ಕಾಲದಲ್ಲಿ ಬಿಸಿಲಿನ ಧಗೆಯಿಂದ ರೈಲ್ವೇ ಭೋಗಿಗಳು ಕಾಯುವ ಪರಿಣಾಮ ಭೋಗಿಗಳಲ್ಲಿ ಕುಳಿತುಕೊಳ್ಳಲು ಬಹಳ ತ್ರಾಸದಾಯವಾಗಿದ್ದನ್ನು ಮನಗಂಡು ಮುಂಬೈನ ಬಲ್ಲಾರ್ಡ್ ಪಿಯರ್ ನಿಲ್ದಾಣದಿಂದ ದೆಹಲಿ, ಬಟಿಂಡಾ, ಫಿರೋಜ್‌ಪುರ ಮತ್ತು ಲಾಹೋರ್ ಮೂಲಕ ಪೇಶಾವರ್ (ಈಗ ಪಾಕಿಸ್ತಾನದಲ್ಲಿದೆ) ನಡುವೆ ಸಂಚರಿಸುತ್ತಿದ್ದ ಪಂಜಾಬ್ ಎಕ್ಸ್‌ಪ್ರೆಸ್ (ನಂತರ ಫ್ರಾಂಟಿಯರ್ ಮೇಲ್) ಎಂಬ ರೈಲಿನಲ್ಲಿ ಸೆಪ್ಟೆಂಬರ್ 1, 1928 ರಂದು ಮೊದಲಬಾರಿಗೆ ಹವಾನಿಯಂತ್ರಿತ ಕೋಚ್ ಅಳವಡಿಸುವ ಮೂಲಕ (ಹವಾನಿಯಂತ್ರಣ ತಂತ್ರಜ್ಞಾನ ಇನ್ನೂ ವ್ಯಾಪಕವಾಗಿ ಹರಡದ ಕಾರಣ, ಪ್ರಥಮ ದರ್ಜೆ ಬೋಗಿಗಳಲ್ಲಿ ಐಸ್ ಬ್ಲಾಕ್‌ಗಳನ್ನು ಬಳಸುವ ಮೂಲಕ ತಂಪಾಗಿಸಲಾಗುತ್ತಿತ್ತು) ಭಾರತದ ಮೊತ್ತ ಮೊದಲ ಎಸಿ ರೈಲು ಎಂಬ ಖ್ಯಾತಿಗೆ ಪಾತ್ರವಾಯಿತು. 1956 ರಲ್ಲಿ, ದೆಹಲಿ ಮತ್ತು ಹೌರಾ ನಡುವಿನ  ಪೂರ್ವಾ ಎಕ್ಸ್‌ಪ್ರೆಸ್ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು ಎಂಬ ಖ್ಯಾತಿಯನ್ನು ಪಡೆಯಿತು. 1969 ರಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಸಲಾದ ಹವಾನಿಯಂತ್ರಿತ ಭೋಗಿಗಳು,  ಆಂತರಿಕ ಅಡುಗೆ ಮನೆ ಮತ್ತಿತರ ಸೇವಾ ಅನುಭವದ ಪರಿಕಲ್ಪನೆಯನ್ನು ಹೊಂದಿದ್ದಂತಹ ದೇಶದ ಎಲ್ಲಾ ಪ್ರಮುಖ ನಗರಗಳಿಂದ ದೇಶದ ರಾಜಧಾನಿಯಾದ ದೆಹಲಿಯ ನಡುವೆ ರಾಜಧಾನಿ ಎಕ್ಸ್‌ಪ್ರೆಸ್ ಎಂಬ ರೈಲನ್ನು  ಪರಿಚಯಿಸಿದ ನಂತರ AC-2tire, AC-3 tire ನಂತಹ ಐಶಾರಾಮಿ ರೈಲನ್ನು ಪರಿಚಯಿಸಲಾಯಿತು.

ಪ್ರಸ್ತುತವಾಗಿ ದೇಶೀ ನಿರ್ಮಿತ ಇಂಜಿನ್ ಗಳನ್ನು ಹೊಂದಿರುವಂತಹ ಅತ್ಯಂತ ವೇಗವಾಗಿ ಚಲಿಸುವ  ವಂದೇ ಭಾರತ್ ರೈಲುಗಳು, ರೈಲ್ವೇ  ಪ್ರಯಾಣಿಕರಿಗೂ ವಿಮಾನದಲ್ಲಿ ಪ್ರಯಾಣಿಸುವಂತಹ  ಅನುಭವ ಕೊಡುವ ವಿಸ್ಟಾಡೋಮ್ ಕೋಚುಗಳನ್ನು ಹೊಂದಿರುವ ರೈಲುಗಳು, ದೇಶದ ಪ್ರಮುಖ ತೀರ್ಥ ಕ್ಷೇತ್ರಗಳನ್ನು ಪರಿಚಯಿಸುವ ಮತ್ತು ಗೋಲ್ಡನ್ ಚಾರಿಯಟ್ ರೈಲುಗಳೂ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಅನೇಕ ಐಶಾಶಾಮೀ ರೈಲುಗಳು ಭಾರತೀಯ ರೈಲ್ವೇ ಇಲಾಖೆಯಲ್ಲಿದ್ದು, ಗುಜರಾತ್ ನ ಅಹಮದಾಬಾದ್ ಮತ್ತು ಮುಂಬೈ ನಡುವೆ ಅತ್ಯಂತ ವೇಗವಾಗಿ ಚಲಿಸಬಲ್ಲಂತಹ ಬುಲೆಟ್ ರೈಲಿನ ಹಳಿ ಜೋಡನೆಯ ಕೆಲಸ ಬಹಳಷ್ಟು ಮುಗಿದಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ಸಂಚಾರಕ್ಕೆ ಸಿದ್ಧವಾಗಲಿದೆ. ಅದೇ ರೀತಿ ಹೈಪರ್ ಲೂಪ್ ರೈಲುಗಳ ಪರೀಕ್ಷೆಯೂ ನಡೆಯುತ್ತಿದ್ದು. ಎಲ್ಲವೂ ಪೂರ್ವ ನಿರ್ಧಾರದಂತೆಯೇ ಆದಲ್ಲಿ  ಇನ್ನೂ ಕೆಲವೇ ವರ್ಷಗಳಲ್ಲಿ  ಅದೂ ಸಹಾ ಪ್ರಯಾಣಿಕರ ಅನುಕೂಲಕ್ಕೆ ಲಭ್ಯವಾಗಲಿದೆ

ಹೀಗೆ ಹಳೆಯ ಕಲ್ಲಿದ್ದಲಿನಿಂದ ಚಲಿಸುತ್ತಿದ್ದ ಉಗಿ ಲೋಕೋಮೋಟಿವ್‌  ಇಂಜಿನ್ ನಿಂದ ಡೀಸಲ್ ಇಂಜಿನ್ ಗಳಾಗಿ ಈಗ ಬಹುತೇಕ ಎಲೆಕ್ಟ್ರಿಕಲ್ ಇಂಜಿನ್ ಗಳಾಗಿ ಮಾರ್ಪಾಟಾಗಿರುವ ರೈಲ್ವೇ ಇಲಾಖೆಯ ಪ್ರತಿಯೊಂದು ಹಂತವನ್ನೂ ನಮ್ಮ ಮುಂದಿನ ಜನಾಂಗಕ್ಕೆ ಪರಿಚಯಿಸುವ ಸಲುವಾಗಿ  ದೆಹಲಿಯ ರಾಷ್ಟ್ರೀಯ ರೈಲ್ವೆ ವಸ್ತುಸಂಗ್ರಹಾಲಯದ ನಂತರ ಎರಡನೇ ರೈಲ್ವೇ ವಸ್ತು ಸಂಗ್ರಹಾಲಯವಾಗಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಖ್ಯಾತವಾಗಿರುವ ಮೈಸೂರಿನ  ಕೃಷ್ಣರಾಜ ಸಾಗರ್ ರಸ್ತೆ ಯಲ್ಲಿ  (ಪ್ರಿನ್ಸೆಸ್ ರಸ್ತೆ, CFTRI ಮುಖ್ಯ ದ್ವಾರದ ಎದುರು) ರೈಲ್ವೇ ವಸ್ತು ಸಂಗ್ರಹಾಲಯವನ್ನು 1979 ರಲ್ಲಿ PM ಜೋಸೆಫ್ ಅವರ ಪ್ರಯತ್ನಗಳಿಂದ ಪ್ರಾರಂಭಿಸಲಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಕೆಲವು ಹಳೆಯ ಉಗಿ ಲೋಕೋಮೋಟಿವ್‌ ಇಂಜಿನ್ ಗಳು, ಭೋಗಿಗಳಲ್ಲದೇ, ರೈಲ್ವೆಯ ಬೆಳವಣಿಗೆಯನ್ನು ಪ್ರಸ್ತುತಪಡಿಸುವ ಗ್ರಾಫಿಕ್ಸ್, ಛಾಯಾಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಹೊಂದಿರುವಂತಹ ಗ್ಯಾಲರಿಗಳಿದ್ದರೆ, ವಸ್ತು ಸಂಗ್ರಹಾಲಯದ ಶ್ರೀರಂಗ ಮಂಟಪದಲ್ಲಿ, ಮೈಸೂರಿನ ಮಹಾರಾಜರು ಮತ್ತು ರಾಣಿಯರು ಬಳಸುತ್ತಿದ್ದ ರಾಯಲ್ ರೈಲುಗಳು,  ಹಳೆಯ ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣದ ಕಂಬ ಮತ್ತು ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ತಂತಿ ಬೇಲಿಯನ್ನೂ ಸಹಾ ಕಾಣಬಹುದಾಗಿದೆ.  ಅದೇ ರೀತಿಯಲ್ಲಿ ಹಳೆಯ ರೈಲ್ವೆ ಸಿಗ್ನಲ್‌ಗಳು ಮತ್ತು ದೀಪಗಳೂ ಇಲ್ಲಿದ್ದು, ಚಿಕ್ಕ ಮಕ್ಕಳಿಗೆ ರೈಲು ಪ್ರಯಾಣದ ಅನುಭವನ್ನು ನೀಡುವ ಮೋಜಿನ  ಬ್ಯಾಟರಿ ಚಾಲಿತ ಮಿನಿ-ರೈಲು ಸಹಾ ರೈಲ್ವೇ ವಸ್ತು ಸಂಗ್ರಹಾಲಯದ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ.

ಭಾರತೀಯ ರೈಲ್ವೇ ಇಲಾಖೆಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ನಂತರ, ಇನ್ನೂ ಯಾರಾದರೂ ಬ್ರಿಟಿಷರು ಬಂದ ಮೇಲೆಯೇ ಭಾರತ ಉದ್ದಾರ ಆಗಿದೆ ಎಂಬ ವಿತಂಡ ವಾದ ಮಾಡಿದಲ್ಲಿ, ಬ್ರಿಟೀಷರಾಗಲೀ ಅಥವಾ ಯಾವುದೇ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬರೋದು ಭಾರತವನ್ನು ಉದ್ದಾರ ಮಾಡಲು ಅಲ್ಲಾ.  ಕೇವಲ ಭಾರತವನ್ನು ಲೂಟಿ ಮಾಡಲು ಎಂಬುದನ್ನು ಸ್ಪಷ್ಟ ಪಡಿಸುವುದರ ಜೊತೆಗೆ, ಬ್ರಿಟೀಷರು ಬರುವುದಕ್ಕೂ ಮೊದಲೂ ಭಾರತ ವಿಶ್ವ ಗುರುವಾಗಿತ್ತು.  ಇಂದು ಮತ್ತು ಮುಂದೆಯೂ ವಿಶ್ವ ಗುರುವಾಗಿಯೇ ಉಳಿಯಲಿದೆ ಎನ್ನುವುದನ್ನೂ ಎದೆಯುಬ್ಬಿಸಿ  ಹೇಳೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ

Leave a comment