ಮೈಸೂರು ಕರಗ

ಅರೇ ಕರಗ ನಡೆಯೋದು ಬೆಂಗಳೂರಿನಲ್ಲಿ. ಮೈಸೂರಿನಲ್ಲಿ ನಡೆಯೋದು ದಸರಾ ಅಲ್ವಾ? ಬಹುಶ ಶೀರ್ಷಿಕೆ ಏನೋ ತಪ್ಪಾಗಿರಬೇಕು ಎಂದು ಭಾವಿಸುವರೂ ಅಚ್ಚರಿ ಪಡುವಂತೆ, ಕಳೆದ ನೂರು ವರ್ಷಗಳಿಂದಲೂ ಮೈಸೂರಿನ  ನಜರ್ಬಾದ್‌ನ ಇಟ್ಟಿಗೆ ಗೂಡಿನಲ್ಲಿರುವ ಶ್ರೀ ಮಾರಮ್ಮನವರ ದೇವಸ್ಥಾನ ದಲ್ಲಿ ಕರಗ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ  ಆಚರಿಸಿಕೊಂಡು ಬರುತ್ತಿದ್ದು ಈ ಬಾರಿಯ ಉತ್ಸವ 2025ರ ಏಪ್ರಿಲ್‌ 29ರಿಂದ ಮೇ 4ರವರೆಗೆ 101 ನೇ ವರ್ಷದ ಮೈಸೂರು ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಪ್ರತೀ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯ ಬಳಿಯ ಧರ್ಮರಾಜ ದೇವಸ್ಥಾನದಲ್ಲಿ  ದ್ರೌಪತಿ ದೇವಿಯ ಮಕ್ಕಳು ಎಂದೇ ಕರೆಯಲ್ಪಡುವ ವಹ್ನಿಕುಲ ಕ್ಷತ್ರಿಯರು ಬಹಳ ಅದ್ದೂರಿಯಿಂದ ಸಾವಿರಾರು ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ.  ಈ ಕರಗಕ್ಕೇ ತನ್ನದೇ ಆದ ವೈಶಿಷ್ಟ್ಯವಿದ್ದು, ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದಾಗಿದೆ. ಕರಗ(ಕರಕ) ಎಂಬ ಪದಕ್ಕೆ ‘ಕುಂಭ’ ಎಂಬ ಅರ್ಥವೂ ಇದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ.

ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಟ್ಟು ಕ್ರಮೇಣ ಕರ್ನಾಟಕದ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ.

ಈ ರೀತಿಯ ಕರಗ ಮೈಸೂರಿನಲ್ಲಿ ಆಚರಿಸಲು ಆರಂಭಿಸಿದ ಹಿಂದಿನ ಕಥೆಯು ಬಹಳ ರೋಚಕವಾಗಿದ್ದು ಸುಮಾರು ಒಂದು ನೂರು ವರ್ಷಗಳ ಹಿಂದೆ ಇಡೀ ಮೈಸೂರಿನಲ್ಲಿ ಮಳೆಯಾಗದೇ ಕ್ಷಾಮ ಆವರಿಸಿ, ಪ್ರಜೆಗಳಿಗೆ ಊಟಕ್ಕೂ ಪರದಾಡ ಬೇಕಾದಂತಹ ಪರಿಸ್ಥಿತಿ ಇರುವಾಗ, ಗಾಯದ ಮೇಲೆ ಬರೆ ಎನ್ನುವಂತೆ  ಸಾಂಕ್ರಾಮಿಕ ರೋಗವೂ ವಕ್ಕರಿಸಿದ ಪರಿಣಾಮ ಪ್ರತಿನಿತ್ಯವೂ ನೂರಾರು ಮಂದಿ  ಸಾವನ್ನಪ್ಪಿದಾಗ, ಮೃತರ ಅಂತ್ಯಸಂಸ್ಕಾರ ನಡೆಸುವುದೇ ಊರ ಜನರ ಪ್ರತಿನಿತ್ಯದ ಕಾಯಕವಾಗಿ ಹೋದಾಗ, ಇದರ ಪರಿಹಾರಾರ್ಥವಾಗಿ ಊರಿನ ಆಸ್ತಿಕ ಬಂಧುಗಳು  ನಾಡ ದೇವತೆಯ ಚಾಮುಂಡಿ ದೇವಿಗೆ ಹಬ್ಬವನ್ನು ಮಾಡಲು ನಿರ್ಧರಿಸಿದಾಗ ಆರಂಭವಾದದ್ದೇ ಈ  ಮೈಸೂರು ಕರಗ.

 

ಬೆಂಗಳೂರಿನಲ್ಲಿ ವಹ್ನಿಕುಲ ಕ್ಷತ್ರಿಯರು (ತಿಗಳರು) ಧರ್ಮರಾಯನ ದೇವಾಲಯದಲ್ಲಿ ಚೈತ್ರ ಮಾಸದ ಹುಣ್ಣಿಮೆಯಂದು ದ್ರೌಪತಿ ದೇವಿಯ ಆರಾಧನೆ ಮಾಡಿದರೆ, ಮೈಸೂರಿನಲ್ಲಿ ಮಡಿವಾಳ ವಂಶಸ್ಥರು ನಜರ್ಬಾದ್‌ನ ಇಟ್ಟಿಗೆ ಗೂಡಿನಲ್ಲಿರುವ ಶ್ರೀ ಮಾರಮ್ಮನವರ ದೇವಸ್ಥಾನದಲ್ಲಿ ಯುಗಾದಿಯ ಅಮಾವಾಸ್ಯೆ ನಂತರದ ಶ್ರೀ ಮಾರಿಯಮ್ಮ ದೇವಿಗೆ ಊರಿನವರೆಲ್ಲರೂ ಅರಿಶಿನ ನೀರಿನ ಅಭಿಷೇಕ ನೆರವೇರಿಸಿ, ದೇವಿಗೆ ತಂಪೆರೆದು ಸಂಜೆ ದೇವಿಯ ತವರು ಮನೆಯಾದ ಮಡಿವಾಳರ ಮನೆಯಲ್ಲಿ ಸಾಂಪ್ರದಾಯಿಕ ವಿಭೂತಿ ಪೂಜೆ ನೆರವೇರಿಸಿ ಎಲ್ಲರಿಗೂ ವಿಭೂತಿ ಪ್ರಸಾದ ವಿನಿಯೋಗದೊಂದಿಗೆ ಮೈಸೂರಿನ ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ ಮಾಡಲಾಗುತ್ತದೆ.

 

ಸರಿಯಾಗಿ ಒಂದು ಶತಮಾನದ ಹಿಂದೆ ಸಣ್ಣ ಗುಡಿಸಲಿನಲ್ಲಿ ಆರಂಭವಾದ ಈ ಮೈಸೂರು ಕರಗ ಅಲ್ಲಿಗಷ್ಟೇ ಸೀಮಿತವಾಗಿದ್ದಾಗ, 1928-29ರರಲ್ಲಿ  ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ಕೃಷ್ಣರಾಜ ಒಡೆಯರ್‌ ಮತ್ತು  ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದಂತಹ  ಸರ್‌ ಮಿರ್ಜಾ ಇಸ್ಮಾಯಿಲ್‌ ಇಬ್ಬರೂ ಮತ್ತೊಂದು ಕಾರ್ಯಕ್ರಮ ಮುಗಿಸಿಕೊಂಡು ಅರಮನೆಗೆ ಹಿಂದಿರುಗುವಾಗ ಈ  ಕರಗವನ್ನು ನೋಡಿ ಬಹಳ ಆನಂದಿತರಾಗಿ ಅರೇ ಇದು ಕೇವಲ ಕರಗವಾಗಿರದೇ, ಇದೊಂದು ಸಣ್ಣ ದಸರಾ ಕಾರ್ಯಕ್ರಮ ಎಂದು ಬಣ್ಣಿಸಿದ್ದರಂತೆ.  ಹೀಗೆ ರಾಜರ ಮನ್ನಣೆಯೂ ದೊರೆತ ನಂತರ ಅಂದಿನಿಂದ ಇಂದಿನವರೆಗೂ ಕೇವಲ ಮೈಸೂರ ಕರಗವಷ್ಟೇ ಆಗಿರದೇ, ಮಿನಿ ದಸರ  ಎಂದೇ  ಪ್ರಖ್ಯಾತವಾಗಿ ನೂರುವರ್ಷಗಳನ್ನು ಪೂರೈಸಿ ನೂರಾ ಒಂದನೇ ವರ್ಷದ ಸಂಭ್ರಮಾಚರಣೆಗೆ ಸಿದ್ದವಾಗಿದೆ.

ಲೋಕ ಕಲ್ಯಾಣಕ್ಕಾಗಿ ಮತ್ತು ಅನ್ಯೋತ್ಯ ಸಹಾಯಾರ್ಥಕ್ಕಾಗಿ ದುಷ್ಟ ಶಕ್ತಿಯ ನಿವಾರಕಿ, ಮಹಿಶಾಸುರ ಮರ್ಧಿನಿ,  ದುಷ್ಟರ ಶಿಕ್ಷಕಿ, ಶಿಷ್ಟರ ರಕ್ಷಕಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಹಾಗೂ ಸಾಂಕ್ರಾಮಿಕ ರೋಗ, ಕ್ಷಾಮ, ಬರ ನೀಗಿಸಲು, ಮಳೆಯ ಅಧಿದೇವತೆ  ಶ್ರೀ ಮಾರಿಯಮ್ಮನನ್ನು ಪೂಜಿಸುವ ಕರಗ ಮಹೋತ್ಸವದಲ್ಲಿ ಕೇವಲ ಮೈಸೂರಿಗರಷ್ಟೇ ಅಲ್ಲದೇ, ರಾಜ್ಯದ ವಿವಿಧ ಭಾಗಗಳಿಂದ ಮತ್ತು ಹೊರ ರಾಜ್ಯ ಮತ್ತು ವಿದೇಶಗಳಿಂದಲೂ ಭಕ್ತಾದಿಗಳು ಮೈಸೂರಿಗೆ ಆಗಮಿಸಿ  ಅಲ್ಲಿರುವ ಸಕಲ ದೇವತೆಗಳಿಗೆ ಭಕ್ತಿಯಿಂದ ಪೂಜಿಸಿ ಸಂತೃಪ್ತರಾಗುತ್ತಾರೆ. ಇದೇ ಸಮಯದಲ್ಲಿ ವಿವಾಹವಾಗದ ಕನ್ಯೆಯ ಮನೆಯಲ್ಲಿ ಕರಗ ಕೂರಿಸಿ  ಮಾಂಗಲ್ಯ ಪೂಜೆ ಮಾಡಿ ಸುಮಂಗಲಿಯರೆಲ್ಲರೂ ಸೇರಿಕೊಂಡು ದೇವಿಗೆ ಮಾಂಗಲ್ಯ ತೊಡಿಸಿ ಮಡಿಲಕ್ಕಿ ತುಂಬಿ ಮುತ್ತೈದೆ ಭಾಗ್ಯಕ್ಕಾಗಿ ಬೇಡಿದರೆ ಮದುವೆ ಆಗುತ್ತದೆ ಎಂಬ ನಂಬಿಕೆ ಇದ್ದರೇ, ಅದೇ ರೀತಿ ಮದುವೆಯಾಗಿ ಸುಮಾರು ವರ್ಷಗಳ ಕಾಲ ಮಕ್ಕಳಾಗದಿರುವವರು, ಸಂತಾನ ಪ್ರಾಪ್ತಿಗಾಗಿ ತಾಯಿಗೆ ಸೀರೆ ಮತ್ತು ಕುಪ್ಪಸವಿಟ್ಟು ಪೂಜೆ ಮಾಡಿದರೆ  ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ವಿದ್ಯಾರ್ಥಿಗಳೂ ಸಹಾ ದಸರಾದ ಏಳನೇ ದಿನ ಸರಸ್ವತಿ ಪೂಜೆಯಂದು  ಪಟ್ಟದ ಬೊಂಬೆ ಮುಂದೆ ಪುಸ್ತಕಗಳನ್ನಿಟ್ಟು ಪೂಜಿಸುವಂತೆ ಈ ಕರಗದ ಸಮಯದಲ್ಲೂ ತಮ್ಮ ಮನೆಯಲ್ಲಿ ಕುಳ್ಳರಿಸಿದ ದೇವಿಯ ಮುಂದೆ ತಮ್ಮ ಪುಸ್ತಕಗಳನ್ನಿಟ್ಟು  ಒಳ್ಳೆಯ ವಿದ್ಯೆ ಮತ್ತು ಬುದ್ಧಿ ನೀಡು ಎಂದು ತಾಯಿಯನ್ನು ಪೂಜಿಸುವ ಸಂಪ್ರದಾಯವೂ ಇದೆ.

ಕರಗದ ಕೊನೆಯ ದಿನ ಮಧ್ಯಾಹ್ನ 12ಕ್ಕೆ ದೇವಾಲಯದಲ್ಲಿ ತಾಯಿಗೆ ಅಂಬಲಿ ಪೂಜೆಯ ನಂತರ ಅರಿಶಿನ ನೀರಿನ ಓಕುಳಿ, ಸಂಜೆ 4 ಕ್ಕೆ ಭಕ್ತಾಧಿಗಳಿಂದ ತಂಬಿಟ್ಟು ಆರತಿ ಎಲ್ಲವೂ ಮುಗಿದ ನಂತರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ  ಶ್ರೀ ಮಾರಮ್ಮನವರ  ದೇವಸ್ಥಾನದಿಂದ ಹೊರಟು ಮೈಸೂರು ನಗರದ ಅರಮನೆ ಆಫೀಸ್ ರಸ್ತೆ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ನಲ್ಲಪ್ಪ ಠಾಣಾ ರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಮಿಷನ್ ಆಸ್ಪತ್ರೆ ರಸ್ತೆ, ಕಬೀರ್ ರಸ್ತೆ, ಕಾಳಮ್ಮ ಗುಡಿ ರಸ್ತೆ, ಇರ್ವಿನ್ ರಸ್ತೆ, ಕುರುಬಗೇರಿ, ಕುಂಬಾರಗೇರಿ, ಅಶೋಕ ರಸ್ತೆ, ನಜರ್ಬಾದ್, ಮೃಗಾಲಯ ರಸ್ತೆಯ ಮಾರ್ಗವಾಗಿ ಸಾಗಿ ಪುನಃ  ಶ್ರೀ ಮಾರಮ್ಮನ ದೇವಸ್ಥಾನಕ್ಕೆ ಹಿಂದಿರುಗುವಷ್ಟರಲ್ಲಿ ಮಾರನೇ ದಿನ ಬೆಳಿಗ್ಗೆ  ಗಂಟೆ  9 ಆಗಿರುತ್ತದೆ. ಬೆಂಗಳೂರಿನಲ್ಲಿ ದ್ರೌಪತಿಯ ಒಂದೇ ಕರಗವಿದ್ದರೆ, ಮೈಸೂರಿನಲ್ಲಿ ವಿಶೇಷವಾಗಿ ತಾಯಿ ಚಾಮುಂಡಿ ಮತ್ತು ಶ್ರೀ ಮಾರಮ್ಮ ಹೀಗೆ ಇಬ್ಬರು ದೇವತೆಗಳ ಪ್ರತೀಕವಾಗಿ ಎರಡೆರಡು ಕರಗಗಳು ಒಟ್ಟಿಗೆ ಹೊರುವುದು ವಿಶೇಷವಾಗಿದೆ. 

ಹೀಗೆ ಮೈಸೂರಿನ ಈ ಕರಗ ಸಂಚರಿಸುವ  ಎಲ್ಲ ಬೀದಿಗಳಲ್ಲೂ ಸಾರ್ವಜನಿಕರು ತಮ್ಮ ಮನೆಯ ಮುಂದೆ ಸಾರಿಸಿ ಗುಡಿಸಿ ಚಂದದ ರಂಗೋಲಿಯನ್ನಿಟ್ಟು ಸ್ವಾಗತಿಸಿ ತಮ್ಮ ಮನೆಯ ಮುಂದೆ ಕರಗ ಬಂದಾಗ ಮಂಗಳಾರತಿ ಮಾಡಿದರೆ, ಇನ್ನೂ ಕೆಲವರುಗಳ ಮನೆಯಲ್ಲಿ  ದೇವಿಯನ್ನು ಕೂರಿಸಿ ಅದಕ್ಕೆ ಪೂಜೆ ಮಾಡಿ, ತಮ್ಮ ಮನೆಯ ಮುಂದೆ ಕರಗ ಬಂದಾಗ ಅದಕ್ಕೆ ಭಕ್ತಿಯಿಂದ ಪೂಜೆ ಮಾಡಿ ಹಾಲು, ಮಜ್ಜಿಗೆ, ಪಾನಕ, ಕೋಸಂಬರಿ ಹೀಗೆ ನಾನಾ ವಿಧದ ಪ್ರಸಾದಗಳನ್ನು ನೈವೇದ್ಯ ಮಾಡಿ  ನಂತರ ಅದನ್ನೇ ಪೂಜೆಗೆ ಬಂದವರೆಲ್ಲರಿಗೂ  ಪ್ರಸಾದ ರೂಪದಲ್ಲಿ ವಿತರಿಸುವುದನ್ನು ಇಲ್ಲಿ ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಆನಂದ. ಕರಗ ಮಹೋತ್ಸವ ಎಲ್ಲರೂ ಸುಸಂಪನ್ನವಾಗಿ ಮುಗಿದ ನಂತರ  ಮಹಾಮಂಗಳಾರತಿ ಮಾಡಿ ಕರಗವನ್ನು ಪಶ್ಚಿಮ ವಾಹಿನಿಯಲ್ಲಿ  ವಿಸರ್ಜನೆ ಮಾಡಿ, ಮತ್ತೆ ಮುಂದಿನ ವರ್ಷ ಮತ್ತಷ್ಟೂ ಆದ್ದೂರಿಯಾಗಿ ಈ ಕರಗ ಮಹೋತ್ಸವವನ್ನು ಮಾಡುವ ಸಂಕಲ್ಪದೊಂದಿಗೆ  ಮೈಸೂರು ಕರಗ ಮಹೋತ್ಸವಕ್ಕೆ ಅಂತಿಮ ತೆರೆ ಬೀಳುತ್ತದೆ.

ಮೈಸೂರಿನ ಕರಗದ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ನಂತಹ ಇನ್ನೇಕೆ ತಡಾ ಹೇಗೂ ಇಂದು ಮತ್ತು ನಾಳೆ ರಜೆ ಇರುವ ಕಾರಣ, ಸ್ವಲ್ಪ ಸಮಯ ಮಾಡಿಕೊಂಡು ಮೈಸೂರಿಗೆ ಹೋಗಿ ಮೈಸೂರು ಕರಗ ಮಹೋತ್ಸವದಲ್ಲಿ ಪಾಲ್ಗೊಂಡು ತಾಯಿ ಚಾಮುಂಡೇಶ್ವರಿ ಮತ್ತು ಶ್ರೀ ಮಾರಿಯಮ್ಮನನ್ನು ಪೂಜಿಸಿ ದೇಶದಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗ, ಕ್ಷಾಮ ಇಲ್ಲವೇ ಬರ ಬಾರದೇ, ಪ್ರಸಕ್ತ ಯುದ್ಧದ ಭೀತಿಯನ್ನು ನಿವಾರಿಸಬೇಕೆಂದು ಕೇಳಿಕೊಂಡು ನಿಮ್ಮ   ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ

Leave a comment