ಇತ್ತೀಚಿನ ದಿನಗಳಲ್ಲಿ ಉಡುಪಿ, ಕುಂದಾಪುರ, ಕೆರಾಡಿ ಎನ್ನುತ್ತಿದ್ದಂತೆಯೇ, ಥಟ್ಟನೆ ನೆನಪಾಗುವುದೇ ಕಾಂತಾರ ಚಲನ ಚಿತ್ರ ಮತ್ತು ಆ ಚಿತ್ರ ನಿರ್ದೇಶಕರಾದ ರಿಷಬ್ ಶೆಟ್ಟಿಯವರು. ರಿಷಭ್ ಶೆಟ್ಟಿಯವರ ಹುಟ್ಟೂರು ಕೆರಾಡಿಯಿಂದ ಸುಮಾರು 1 ರಿಂದ 1.5 ಕಿಮೀ ದೂರ ಡಾಂಬರ್ ರಸ್ತೆಯಲ್ಲಿ ಪ್ರಯಾಣಿಸಿ ಅಲ್ಲಿಂದ ಕಾಡಿನಂತಹ ಪ್ರದೇಶದಲ್ಲಿ ಬಲಕ್ಕೆ ತಿರುಗುತ್ತಿದ್ದಂತೆಯೇ ಒಂದು ರೀತಿಯ ಹೊಸಾ ಅನುಭವ ಉಂಟಾಗುತ್ತದೆ. ಅಲ್ಲಿಯವರೆಗೂ ನಗರದ ಗಿಜಿ ಗಿಜಿ ಸದ್ದುಗದ್ದಲದಿಂದ ವಿಚಲಿತರಾಗಿದ್ದ ಜೀವಕ್ಕೆ ಇಲ್ಲಿನ ಪ್ರಶಾಂತತೆ ರಮಣೀಯ ಅನುಭವವನ್ನು ನೀಡುತ್ತದೆ. ಕಲ್ಲು ಮತ್ತು ಜಿಗಟು ಮಣ್ಣಿನಿಂದ ಕೂಡಿರುವ ಈ ರಸ್ತೆಯು ಕೊಲ್ಲೂರು ಬಳಿಯ ಕೊಡಚಾದ್ರಿಗೆ ಜೀಪ್ ಗಳಲ್ಲಿ ಹೋಗುವಾಗ ಆಗುವ ಅನುಭವವನ್ನು ನೆನೆಪಿಸುತ್ತದೆ ಎಂದರೂ ತಪ್ಪಾಗದು. ಸ್ಥಳೀಯರು ಹೇಳುವ ಪ್ರಕಾರ ಅದೃಷ್ಟವಿದ್ದಲ್ಲಿ ಅಪರೂಪಕ್ಕೆ ಈ ಕೆರಾಡಿ ಅರಣ್ಯದಲ್ಲಿ ಸಾಗುವಾಗ ಕಾಡೆಮ್ಮೆ, ಜಿಂಕೆ, ನವಿಲು ಮತ್ತು ತೋಳಗಳನ್ನೂ ಕಾಣಬಹುದಂತೆ. ನಾವು ಹೋಗುವ ಹಿಂದಿನ ದಿನ ಸ್ವಲ್ಪ ಮಟ್ಟಿಗಿನ ಮಳೆ ಆಗಿದ್ದ ಕಾರಣ ಅಲ್ಲಿನ ಮಣ್ಣಿನ ನೆಲ ಜಾರುತ್ತಿದ್ದು ವಾಹನ ಚಲಾಯಿಸುವುದು ತುಸು ತ್ರಾಸದಾಯಕವೆನಿಸಿದರೂ ಅವೆಲ್ಲವನ್ನೂ ದಾಟಿ ಸಮತಟ್ಟಾದ ಜಂಬ್ಬಿಟ್ಟಿಗೆಯ ಪ್ರದೇಶಕ್ಕೆ ತಲುಪಿ ಅಲ್ಲಿಂದ ಸುಮಾರು ಅರ್ಥ ಕಿಮೀ ಪ್ರಯಾಣಿಸುತ್ತಿದ್ದಂತೆಯೇ ತಗ್ಗಿನಲ್ಲಿರುವ ಒಂದು ಹಳೆಯ ಮನೆಯಂತೆ ಕಾಣುವ ದೇವಾಲಯವೇ ಮೂಡುಗಲ್ ಶ್ರೀ ಕೇಶವನಾಥೇಶ್ವರ ದೇವಾಲಯ.

ಈ ಕೇಶವನಾಥೇಶ್ವರನ ದೇವಾಲಯ ಇನ್ನೂ ಹೆಚ್ಚಿನ ಪ್ರಸಿದ್ಧಿ ಪಡೆದಿಲ್ಲವಾದರೂ ನಾವು ಹೋಗುವಾಗ ಅದಾಗಲೇ ಹತ್ತಾರು ಕಾರುಗಳು ಅಲ್ಲಿದ್ದರೂ, ಹೆಚ್ಚಿನ ಜನಸಂದಣಿ ಇಲ್ಲದ ಕಾರಣ ಇನ್ನೂ ಅಲ್ಲಿನ ಪರಿಸರ ಚೆನ್ನಾಗಿಯೇ ಇದೆ. ಮಂಗಳೂರು ಹೆಂಚಿನ ಮನೆಯಂತೆ ಕಾಣುವ ಆ ದೇವಾಲಯದ ಎದುರಿನಲ್ಲೇ ದೇವಾಲಯದ ಅರ್ಚಕರ ಮನೆ ಇದ್ದು ಅಲ್ಲೊಂದು ಸಣ್ಣದಾದ ಗೂಡಂಗಡಿಯಲ್ಲಿ ಚಾಕ್ಲೆಟ್ ಬಿಸ್ಕತ್, ತಂಪು ಪಾನೀಯ ಮತ್ತು ಬಾಟೆಲ್ ನೀರು ಸಿಗುತ್ತದೆ. ದೇವಾಲಯದ ಹೊರಗೆ ನಮ್ಮ ಪಾದರಕ್ಷೆಗಳನ್ನು ಬಿಚ್ಚಿ ದೇವಾಲಯದ ವಿಶಾಲವಾದ ಪ್ರಾಂಗಣದೊಳಗೆ ಕಾಲು ಇಡುತ್ತಿದ್ದಂತೆಯೇ, ಬಲಬದಿಯಲ್ಲಿ ಶ್ರೀ ವೀರಭದ್ರನ ಸಣ್ಣದಾದ ಗುಡಿ ಮತ್ತು ಎಡ ಬದಿಯಲ್ಲಿ ಹುಲಿಯ ದೇವಾಲಯವಿದೆ. ಆವೆರಡಕ್ಕೂ ನಮಸ್ಕರಿಸಿ ಮುಂದೆ ಹೋಗುತ್ತಿದ್ದಲ್ಲಿ ದೇವರಿಗೆ ಅರ್ಚನೆ ಚೀಟಿ ಮತ್ತು ಪ್ರಸಾದಗಳನ್ನು ಕೊಡುವ ಕೌಂಟರ್ ಇದ್ದು ಅದನ್ನು ದಾಟಿ ಕೊಂಡು ಹೋದಾಗಲೇ ಒಂದು ಸುಂದರವಾದ ಮತ್ತು ಅಷ್ಟೇ ಅಭೂತಪೂರ್ವವಾದ ನೀರಿನಿಂದ ಆವೃತವಾಗಿರುವ ಗುಹೆಯೊಳಗೆ ಶ್ರೇ ಕೇಶವನಾಥೇಶ್ವರನ ದರ್ಶನ ಪಡೆಯುವ ಸುಯೋಗ ದೊರೆಯುತ್ತದೆ.
ಜಂಬ್ಬಿಟ್ಟಿಗೆಯಲ್ಲಿ ಕೊರೆದಂತಿರುವ ಸುಮಾರು ಅರರಿಂದ ಏಳು ಅಡಿ ಎತ್ತರ ಮತ್ತು ಸುಮಾರು 40-50 ಅಡಿ ನೀರಿನಿಂದ ಆವೃತವಾಗಿರುವ ವಿಶಾಲವಾದ ಗುಹಾಂತರ ದೇವಾಲವಾಗಿದ್ದು ಇದನ್ನು ಯಾರು ಎಂದು ನಿರ್ಮಿಸಿದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಈ ಹಿಂದೆ ಕೇವಲ ದೇವರ ದೀಪದ ಬೆಳಕು ಬಿಟ್ಟರೆ ಬೇರೇನು ಇರದೆ ಕತ್ತಲಿನಿಂದ ಆವೃತ್ತವಾಗಿದ್ದ ಈ ಗುಹಾಂತರ ದೇವಾಲಯದಲ್ಲಿ ಇಂದು ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆಯಿಂದಾಗಿ ಭಕ್ತಾದಿಗಳು ಸುಲಭವಾಗಿ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದೆ. ಸುಮಾರು ಮಂಡಿಯಷ್ಟು ಎತ್ತರದ ನೀರಿನಿಂದ ಆವೃತವಾಗಿರುವ ಗುಹೆಯೊಳಗೆ ಕಾಲಿಡುತ್ತಿದ್ದಂತೆಯೇ, ಬೇಸಿಗೆಯ ಬಿಸಿಲಿನಿಂದ ಬಸವಳಿದ್ದ ಜೀವಕ್ಕೆ ಆಗುವ ತಣ್ಣನೆಯ ಅನುಭವ ವರ್ಣಿಸುವುದಕ್ಕಿಂತಲೂ ಅನುಭವಿಸಿದರೆ ಮತ್ತಷ್ಟು ಆನಂದವಾಗುತ್ತದೆ. ಅದೇ ರೀತಿಯಲ್ಲಿ ಆ ನೀರಿನಲ್ಲಿ ಹಲವು ಬಗೆಯ ಮೀನುಗಳು ಸಹಾ ಕಾಲುಗಳನ್ನು ಮುತ್ತಿಕ್ಕುವುದು ಬಹಳ ಮುದ ನೀಡುತ್ತದೆ. ವರ್ಷವಿಡೀ ಅದೇ ಮಟ್ಟದಲ್ಲಿರುವ ನೀರು ಭಾರೀ ಮಳೆಗಾಲದಲ್ಲಿ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ ಎನ್ನುತ್ತಾರೆ ಅಲ್ಲಿನ ಅರ್ಚಕರು. ಸ್ಥಳೀಯರ ನಂಬಿಕೆಯ ಪ್ರಕಾರ ಈ ಗುಹೆಯಲ್ಲಿರುವ ನೀರು ದೂರದ ಕಾಶಿ ಮತ್ತು ರಾಮೇಶ್ವರದಿಂದ ಸುರಂಗದ ಮೂಲಕ ಬರುತ್ತದೆ ಎನ್ನುವ ಪ್ರತೀತಿ ಇದೆ. ಅದೇ ರೀತಿಯಲ್ಲಿ ಈ ಗುಹೆಯೊಳಗಿನಿಂದಲೇ ಶಿವನು ಕಾಶಿ ತಲುಪಿದ್ದಾರೆ ಎಂಬ ಪ್ರತೀತಿಯೂ ಇದ್ದು, ನಂತರದ ದಿನಗಳಲ್ಲಿ ಹಲವಾರು ಋಷಿ ಮುನಿಗಳು ಇಲ್ಲಿ ತಪಸ್ಸನ್ನು ಇಲ್ಲಿ ಆಚರಿಸಿದ್ದಾರೆ ಎಂಬ ನಿದರ್ಶನಗಳೂ ಇವೆ.
ಇಲ್ಲಿನ ಅರ್ಚಕರು ಹೇಳುವ ಪ್ರಕಾರ ಬಹಳ ಹಿಂದೆ ಇಲ್ಲಿನ ಭೂಮಾಲೀಕನೊಬ್ಬರ ಗದ್ದೆಗೆ ನಿಗೂಢ ಪ್ರಾಣಿ ದಾಳಿ ಮಾಡುವ ಮೂಲಕ ಅವರ ಬೆಳೆಗಳನ್ನು ಹಾನಿ ಮಾಡುತ್ತಿತ್ತು. ಹೇಗಾದರೂ ಮಾಡಿ ಆ ಪ್ರಾಣಿಯನ್ನು ಹಿಡಿಯಬೇಕೆಂಬ ಉದ್ದೇಶದಿಂದ ಭೂಮಾಲೀಕರು, ರಾತ್ರಿ ಹೊತ್ತು ತಮ್ಮ ಗದ್ದೆಯನ್ನು ಕಾಯುತ್ತಿರುವ ಸಂದರ್ಭದಲ್ಲಿ ಒಂದು ಗೋವು ಅವರ ಗದ್ದೆಯ ಕಡೆಗೆ ಬರುತ್ತಿರುವುದನ್ನು ಗಮನಿಸಿ ಅದನ್ನು ಬೆನ್ನತ್ತಿದಾಗ ಆ ಗೋವು ಇಲ್ಲಿರುವ ಗುಹೆಯೊಳಗೆ ಪ್ರವೇಶಿಸಿದಾಗ ಅದರ ಹಿಂದೆಯೇ ಬಂದ ಭೂಮಾಲೀಕರು ಅದೇ ಸ್ಥಳಕ್ಕೆ ಬರುತ್ತಿದ್ದಂತೆಯೇ, ಆ ಹಸು ಇದ್ದಕ್ಕಿದ್ದಂತೆಯೇ ಮಾಯವಾಗುತ್ತದೆ. ಕತ್ತಲಿನಿಂದ ಆವೃತ್ತವಾಗಿದ್ದ ಗುಹೆಯಿಂದ ಹೊರಬರಲು ತಿಳಿಯದೇ, ಭಗವಂತನ ಸ್ಮರಣೆ ಮಾಡಿದ ಸಂದರ್ಭದಲ್ಲಿ ಗುಹೆಯ ಹೊರಭಾಗದಿಂದ ಸಣ್ಣ ಜ್ಯೋತಿಯೊಂದು ಕಾಣಿಸಿದಾಗ ಅದನ್ನೇ ಅನುಸರಿಸಿ ಭೂಮಾಲೀಕ ಗುಹೆಯಿಂದ ಹೊರಬರುತ್ತಾರಂತೆ. ಇಂತಹ ವಿಸ್ಮಯಕಾರಿ ಅನುಭವಿಂದ ಪುನೀತರಾದ ಆ ಭೂಮಾಲಿಕರು ಗೋವು ದಾಳಿ ಮಾಡಿದ್ದ ಆ ಗದ್ದೆಯನ್ನು ಗುಹೆಯೊಳಗಿದ್ದ ಶ್ರೀ ಕೇಶವನಾಥನಿಗೆ ಉಂಬಳಿಕೊಟ್ಟರಂತೆ. ಇನ್ನು ಈ ಆದ್ಭುತ ಗುಹೆಗೆ ಸಮಾನಾಂತರವಾಗಿ ಅಶ್ವಥಕಟ್ಟೆಯಿದ್ದು ರಾತ್ರಿ ವೇಳೆ ಅಶ್ವಥಕಟ್ಟೆಗೂ ಗುಹೆಗೆ ನೇರಾ ಬೆಳಕಿನ ರೇಖೆಗಳು ಹಾದುಹೋಗುವುದನ್ನು ಅಲ್ಲಿನ ಅರ್ಚಕರು ನೋಡಿದ್ದಾರಂತೆ
ಮೂಲತಃ ಇಲ್ಲಿನ ದೇವರು ಉದ್ಭವ ಲಿಂಗವಾಗಿದ್ದು ಅದು ಜಲಾವೃತವಾಗಿರುವ ಕಾರಣ, ಪ್ರಸ್ತುತವಾದ ಆ ಲಿಂಗದ ಸುತ್ತಲೂ ಸಿಮೆಂಟ್ ರಿಂಗ್ ಒಂದನ್ನು ಹಾಕಿದ್ದು ಪ್ರತೀ ದಿನವೂ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದ ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳೆಲ್ಲರೂ ಆ ಲಿಂಗವನ್ನು ಸ್ಪರ್ಶಿಸಬಹುದಾಗಿದೆ. ಬಹುಶಃ ದಕ್ಷಿಣ ಭಾರತದಲ್ಲಿ ಗೋಕರ್ಣದಲ್ಲಿ ಮತ್ತು ಇದೇ ದೇವಾಲಯದಲ್ಲಿ ದೇವರನ್ನು ಸ್ಪರ್ಶಿಸುವ ಅವಕಾಶವನ್ನು ಕಲ್ಪಿಸಿದ್ದಾರೆ ಎಂದರೂ ತಪ್ಪಾಗದು. ಅದೇ ನೀರಿನ ಮಧ್ಯೆಯೇ ಅಗಲವಾದ ಕಟ್ಟೆಯನ್ನು ಕಟ್ಟಿ ಅದರ ಮೇಲೆ ಶ್ರೀ ಕೇಶವನಾಥನ ಸುಂದರವಾದ ವಿಗ್ರಹವನ್ನು ಪ್ರತಿಸ್ಠಾಪನೆ ಮಾಡಲಾಗಿದ್ದು ಅದರ ಮುಂದೆ ಸಂದರವಾದ ನಂದಿಯನ್ನೂ ಸ್ಥಾಪನೆ ಮಾಡಿದ್ದು ಆ ನಂದಿಯ ಕಿವಿಯಲ್ಲಿ ತಮ್ಮ ಕೋರಿಕೆಯನ್ನು ಅರಿಕೆ ಮಾಡಿಕೊಂಡಲ್ಲಿ ಅದು ಭಗವಂತನಿಗೆ ತಲುಪುತ್ತದೆ ಎಂಬ ನಂಬಿಕೆ ಇದೆ.
ಅ ನಂದಿಯ ಪಕ್ಕದಲ್ಲೇ ಚಂಡಿಕೇಶ್ವರನ ಲಿಂಗವೂ ಇದ್ದು ಸ್ವಾಮಿಯ ಉದ್ಭವ ಲಿಂಗ ಮತ್ತು ಪ್ರಸ್ತುತ ಕೇಶವನಾಥನ ದರ್ಶನ ಪಡೆದ ನಂತರ ಚಂಡೇಕೇಶ್ವರ ಬಳಿ ಚಪ್ಪಾಳೆ ತಟ್ಟುವುದು ಇಲ್ಲವೇ ಚಿಟಿಕೆ ಹೊಡೆಯುವುದು ವಾದಿಕೆಯಾಗಿದೆ. ಶಿವ ಪುರಾಣದ ಉಲ್ಲೇಖದಂತೆ, ಪರಶಿವನ ಪರಮ ಭಕ್ತನಾದ ಚಂಡಿಕೇಶ್ವರನು ಸದಾಕಾಲವೂ ಶಿವನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ಹಾಗಾಗಿ ಶಿವಾಲಕ್ಕೆ ತೆರಳುವ ಭಕ್ತರು, ಶಿವಾಲಯದಿಂದ ಚಂಡಿಕೇಶ್ವರನಿಗೆ ತಿಳಿಸದಂತೆ ದೇವರ ಪ್ರಸಾದ, ದೇವರ ನಿರ್ಮಾಲ್ಯವೂ ಸೇರಿದಂತೆ ಯಾವುದನ್ನೂ ಹೊರಗೆ ಕೊಂಡೊಯ್ಯುವಂತಿಲ್ಲ. ಧ್ಯಾನದಲ್ಲಿ ನಿರತನಾಗಿರುವ ಚಂಡಿಕೇಶ್ವರನಿಗೆ ಚಿಟಿಕೆ ಇಲ್ಲವೇ ಚಪ್ಪಾಳೆ ತಟ್ಟಿ, ನಮ್ಮತ್ತ ಚಂಡಿಕೇಶ್ವರನ ಗಮನ ಸೆಳೆದ ನಂತರವಷ್ಟೇ ಅದನ್ನು ಹೊರಗೆ ತೆಗೆದುಕೊಂಡು ಹೋಗಬೇಕು ಹಾಗಾಗಿಯೇ, ದೇವರ ನಿರ್ಮಾಲ್ಯಗಳಾದ ಬಿಲ್ವಪತ್ರೆ, ಹೂವ್ವು, ವಿಭೂತಿ ಅಥವ ಪ್ರಸಾದಗಳನ್ನು ಚಂಡಿಕೇಶ್ವರನಿಗೆ ತೋರಿಸಿಯೇ ಹೊರಗೆ ತೆಗೆದುಕೊಂಡು ಹೋಗಬೇಕೆಂಬ ನಿಯಮವಿದ್ದು ಈ ದೇವಾಲಕ್ಕೆ ಬರುವ ಬಹಳಷ್ಟು ಭಕ್ತಾದಿಗಳು ಈ ವಿಷಯ ತಿಳಿದೋ ತಿಳಿಯದೋ ಚಂಡಿ ಕೇಶ್ವರನ ಬಳಿ ಚಪ್ಪಾಳೆ ಇಲ್ಲವೇ ಚಿಟಿಕೆ ಹೊಡೆದು ಹೋಗುತ್ತಾರೆ.
ಈ ದೇವಾಲಯದಲ್ಲಿ ಶಿವರಾತ್ರಿ ಮತ್ತು ಇತರೇ ಹಬ್ಬ ದಿನಗಳಲ್ಲಿ ವಿಶೇಷ ಪೂಜೆಯನ್ನು ಮಾಡಿದರೆ, ಎಳ್ಳು ಅಮಾವಾಸ್ಯೆಯ ಸಂದರ್ಭದಲ್ಲಿ ಇಲ್ಲಿ ಜಾತ್ರೆಯ ರೂಪದಲ್ಲಿ ಆಚರಣೆ ಮಾಡಲಾಗುತ್ತಿದ್ದ ಅಂದು ಇಡೀ ದಿನ ಅಲ್ಲಿ ವಿವಿಧ ಪೂಜೆ ಪುನಸ್ಕಾರಗಳಲ್ಲದೇ ಅನೇಕ ಧಾರ್ಮಿಕ ಚಟುವಟೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆದರಿಸುವ ಸಂಪ್ರದಾಯವಿದ್ದು ಈ ಸಮಯದಲ್ಲಿ ಪುರಾತನ ಶ್ರೀ ಕೇಶವನಾಥೇಶ್ವರ ಗುಹಾ ದೇಗುಲದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಳು ಸುತ್ತಮುತ್ತಲಿನ ಪ್ರದೇಶವಲ್ಲದೇ ರಾಜ್ಯದ ಹಲವು ಕಡೆಗಳಿಂದ ಸಾವಿರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುತ್ತಾರೆ. ಕೇಶವನಾಥೇಶ್ವರ ದೇವಾಲಯಕ್ಕೂ ಅದರ ಸಮೀಪದಲ್ಲೇ ಇರುವ ಮೇಳ್ಯ ಕೆರೆಗೂ ಸಂಪರ್ಕವಿದ್ದು ಈ ಕೆರೆಯಲ್ಲಿ ಎಳ್ಳಮವಾಸ್ಯೆಯಂದು ಸ್ನಾನ ಮಾಡಿದ ನಂತರವೇ ಶ್ರೀ ಕೇಶವನಾಥನ ದರ್ಶವನ್ನು ಪಡೆಯುವ ಸಂಪ್ರದಾಯವಿದೆ. ಅಲ್ಲಿ ದೇವರಿಗೆ ಅರ್ಪಿಸುವ ಹೂವಿನ ಎಸಳುಗಳು ಎಳ್ಳಮವಾಸ್ಯೆಯ ದಿನದಂದು ಮೇಳ್ಯ ಕೆರೆಯಲ್ಲಿ ತೇಲುತ್ತಿರುವುದನ್ನು ಕಾಣಬಹುದಂತೆ.
ಇಲ್ಲಿ ನಿತ್ಯವೂ ಪೂಜೆಯ ನಂತರ ಆ ನೀರಿನಲ್ಲಿರುವ ಮೀನುಗಳಿಗೆ ಆಹಾರವನ್ನು ಹಾಕಲಾಗುತ್ತದೆ ಮತ್ತು ಸೋಮವಾರದಂದು ಅನ್ನ ಸಂತರ್ಪಣೆಯ ವ್ಯವಸ್ಥೆ ಇದ್ದು ಅರ್ಚಕರು ಪ್ರತೀ ದಿನ 1:30ರ ವರೆಗೂ ದೇವಾಲಯದಲ್ಲಿ ಇರುವುದರಿಂದ ಭಕ್ತರು ಆದಷ್ಟು ಮಧ್ಯಾಹ್ನದೊಳಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಉಳಿದಂತೆ ಈ ಪ್ರದೇಶದಲ್ಲಿ ಏನೂ ಸಹಾ ಸಿಗದ ಕಾರಣ ದೂರದ ಊರಿನಿಂದ ದೇವಾಲಯಕ್ಕೆ ಬರುವವರು, ಮುಂಚಿತವಾಗಿ ದೇವಾಲಯದ ಅರ್ಚಕರಾದ ಶ್ರೀ ರಾಘವೇಂದ್ರ ಕುಂಜತ್ತಾಯ (91) 9480320652, 734 938 3731 ಅವರಿಗೆ ಕರೆ ಮಾಡಿ ತಿಳಿಸಿದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಈ ದೇವಾಲಯ ಉಡುಪಿಯಿಂದ ಸುಮಾರು 75 ಕಿಲೋಮೀಟರ್ ದೂರದಲ್ಲಿದ್ದರೆ, ಕುಂದಾಪುರದಿಂದ 32 ಕಿಮೀ ಕಮಲಶಿಲೆಯಿಂದ 13 ಕಿಮೀ ದೂರದಲ್ಲಿದ್ದು ಮಳೆಗಾಲದ ಹೊರತಾಗಿ ಉಳಿದ ಸಮಯದಲ್ಲಿ ಸುಲಭವಾಗಿ ಬಂದು ಸುಂದರವಾದ ಪ್ರಕೃತಿಯ ಮಡಿಲಲ್ಲಿ ನೀರಿನಿಂದ ಆವೃತವಾಗಿರುವ ಶ್ರೀ ಕೇಶವನಾಧೇಶ್ವರನನ್ನು ದರ್ಶನ ಪಡೆಯಬಹುದಾಗಿದೆ. ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಮಳೆ ಸ್ವಲ್ಪ ಕಡಿಮೆ ಆದ ನಂತರ ಸ್ವಲ್ಪ ಸಮಯ ಮಾಡಿಕೊಂಡು ಕುಟುಂಬದೊಂದಿಗೆ ಮೂಡುಗಲ್ಲಿಗೆ ಹೋಗಿ ಅಲ್ಲಿನ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ