ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ

ಎಲ್ಲರಿಗೂ ತಿಳಿದಿರುವಂತೆ ತಾಯಿ ಭುವನೇಶ್ವರಿ ದೇವಿಯನ್ನು  ಕರ್ನಾಟಕದ ರಾಜ್ಯ ದೇವತೆ ಅರ್ಥಾತ್ ಕನ್ನಡ ದೇವತೆ ಎಂದು ಪೂಜಿಸಲಾಗುತ್ತದೆ. ಇಂತಹ ಭುವನೇಶ್ವರಿ ದೇವಿಯು ಪಾರ್ವತಿ ದೇವಿಯ ಹತ್ತು ಮಹಾ ವಿದ್ಯಾ ದೇವತೆಗಳಲ್ಲಿ ಒಬ್ಬಳಾಗಿದ್ದು, ನಾಲ್ಕನೆಯವಳಾಗಿ ತಾಯಿ ದುರ್ಗೆಯ ಒಂದು ಅಂಶವಾಗಿದ್ದಾಳೆ. ಭುವನೇಶ್ವರಿ ಎಂಬುದು ಸಂಸ್ಕತ ಪದವಾಗಿದ್ದು ಭುವನ ಎಂದರೆ ವಿಶ್ವ ಎಂಬರ್ಥವಾಗಿದ್ದು ಭುವನೇಶ್ವರಿ ಎಂದರೆ ವಿಶ್ವಕ್ಕೇ ಒಡತಿ ಅರ್ಥಾತ್  ವಿಶ್ವಕ್ಕೇ ತಾಯಿ ಎಂಬ ಅರ್ಧವಿದೆ. ಇಂತಹ ಭುವನೇಶ್ವರಿಯ  ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವಿರುವ ದೇವಾಲಯವು  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ ಕೇವಲ 8 ಕಿಮಿ ದೂರ ಭುವನಗಿರಿಯಲ್ಲಿದ್ದು ಆ ದೇವಾಲಯದ ದರ್ಶನ ಮಾಡಿಕೊಂಡು ಬರೋಣ ಬನ್ನಿ.

ಹಂಪೆಯ ವಿರೂಪಾಕ್ಷ ದೇವಸ್ಥಾನದಲ್ಲಿ ವಿಜಯನಗರದ ಅರಸರು ಸ್ಥಾಪಿಸಿದ ಶ್ರೀ ಭುವನೇಶ್ವರಿ ದೇವಿಯ ಸಣ್ಣ ಗುಡಿಯಲ್ಲಿ ಭುವನೇಶ್ವರಿಯ ವಿಗ್ರಹವಿದ್ದರೂ, ಶ್ರೀ ಭುವನೇಶ್ವರಿ ದೇವಿಗೆ ತನ್ನದೇ ಆದ  ಕರ್ನಾಟಕ ರಾಜ್ಯದ ಅತ್ಯಂತ ಪುರಾತನ ದೇವಾಲಯ ಇರುವ ಏಕೈಕ ಸ್ಥಳವೇ ಭುವನಗಿರಿ ಎಂದು ಇತಿಹಾಸಕಾರರು ಹೇಳುತ್ತಾರೆ. ಕನ್ನಡಿಗರ ಕುಲ ದೇವತೆ ತಾಯೆ ಭುವನೇಶ್ವರಿ ದೇವಿಯ ಈ ದೇವಾಲಯವು ಉತ್ತರ ಕನ್ನಡದ ಸಿರ್ಸಿ ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ ಸುಮಾರು 8 ಕಿಲೋ ಮೀಟರ್ ದೂರವಿರುವ ಭುವನಗಿರಿ ಎಂಬ ಪ್ರದೇಶದಲ್ಲಿದೆ. ಮಲೆನಾಡ ಹಸಿರಿನ ನಡುವೆ ಸುಮಾರು 300 ಅಡಿ ಎತ್ತರದ ಪ್ರಶಾಂತವಾದ ಸುಂದರ ಮಲೆನಾಡಿನ ಪರಿಸರವಿರುವ ಗುಡ್ಡದ ಮೇಲಿದ್ದು ಈ ಹಿಂದೆ ಸುಮಾರು 350 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗಿತ್ತು. ಈಗ ವಾಹನಗಳು ಸರಾಗವಾಗಿ ಹೋಗುವಂತಹ ರಸ್ತೆಯನ್ನು ಮಾಡಲಾಗಿದೆ.

ಭುವನಗರಿಯ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಶ್ರೀಧರ ಭಟ್ (9481869938) ಅವರು  ಅಲ್ಲೇ ಹತ್ತಿರದ ಮುತ್ತಿಗೆ ಎಂಬ ಗ್ರಾಮದವರಾಗಿದ್ದು, ತಲ ತಲಾಂತರಗಳಿಂದಲೂ ವಂಶಪಾರಂಪರ್ಯವಾಗಿ ಬೆಳಿಗ್ಗೆ ಮಧ್ಯಾಹ್ನ ಮತ್ತು ಸಂಜೆಯ ಸಮಯ ತ್ರಿಕಾಲ ಪೂಜೆಯನ್ನು ಬಹಳ ನೇಮ ನಿಷ್ಠೆಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಅವರು ಹೇಳುವ ಪ್ರಕಾರ ಈ ದೇವಾಲಯಕ್ಕೆ ಸುಮಾರು ಸಾವಿರ ವರ್ಷಕ್ಕೂ ಹಳೆಯ ಇತಿಹಾಸವಿದ್ದರೂ, ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ದಾಖಲೆಯ ಕಡತಗಳು ನಾಪತ್ತೆಯಾಗಿರುವ ಹಿನ್ನೆಲೆ ಕ್ರಿ.ಶ. 1600ರ ನಂತರದ ಇತಿಹಾಸವಿದೆ ಮಾತ್ರ ಈಗ ಲಭ್ಯವಿದೆ

ಇದೇ ಪ್ರದೇಶದಲ್ಲೇ ಭುವನಾಸುರ  ಎಂಬ ರಾಕ್ಷಸನನ್ನು ದೇವಿ ಸಂಹಾರ ಮಾಡಿದ ಕಾರಣ ಈ ಪ್ರದೇಶಕ್ಕೆ ಭುವನಗಿರಿ ಮತ್ತು ಆ ದೇವಿಗೆ  ಭುವನೇಶ್ವರಿ  ಎಂಬ ಹೆಸರು ಬಂದಿದ್ದು, ಕನ್ನಡಿಗರ ಮೊದಲ ರಾಜ ವಂಶಸ್ಥರಾದ ಕದಂಬರು ತಮ್ಮ ಇದೇ ದೇವಿಯನ್ನು ತಮ್ಮ ನಾಡದೇವತೆಯಾಗಿ ಪೂಜಿಸುತ್ತಿದ್ದದ್ದಲ್ಲದೇ, ಅವರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ದೇವಾಲಯ ಕಟ್ಟುವ ಕೆಲಸ ಪ್ರಾರಂಭವಾದರೂ ಅನೇಕ ಕಾರಣಗಳಿಂದ  ಆ ದೇವಾಲಯ ಪೂರ್ಣವಾಗಿರಲಿಲ್ಲ. ಆನಂತರ ವಿಜಯನಗರದ ಸಾಮ್ರಾಜ್ಯದವರೂ ತಾಯಿ ಭುವನೇಶ್ವರಿಯನ್ನೇ ತಮ್ಮ ನಾಡದೇವತೆಯಾಗಿಸಿಕೊಂಡಿದ್ದಲ್ಲದೇ  ಪ್ರತೀ ಕೆಲಸವನ್ನು ಮಾಡುವ ಮುನ್ನಾ ತಾಯಿ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯ ಆರಂಭಿಸುತ್ತಿದ್ದರು. ಇದೇ ಕಾರಣದಿಂದಲೇ ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ತಾಯಿ ಭುವನೇಶ್ವರಿಗೊಂದು  ಸಣ್ಣ ಗುಡಿಯೊಂದನ್ನು ಕಟ್ಟಿಸಿರುವುದನ್ನು ನೆನಪಿಸಿಕೊಳ್ಳ ಬಹುದಾಗಿದೆ  ನಂತರ ವಿಜಯನಗರದ ರಾಜನಾದ ತಿರುಮಲನು ಬಿಜಾಪುರ ದೊರೆ ಆದಿಲ್ ಷಾನ ಚಿತ್ರಹಿಂಸೆಯನ್ನು ಸಹಿಸಲಾರದೆ, ವಿಜಯನಗರ ಸಾಮ್ಗ್ರಾಜ್ಯದ ಮಾಂಡಲೀಕರಾಗಿದ್ದ ಶ್ವೇತಪುರ (ಇಂದಿನ ಬಿಳಗಿ) ದೊರೆಗಳ ಸಹಾಯದಿಂದ ತನ್ನ ರಾಜ್ಯವನ್ನು ಪೆನ್ನುಗುಡಿಗೆ (ಇಂದಿನ ಚಂದ್ರಗುತ್ತಿ)  ಸ್ಥಳಾಂತರಿಸಿದಾಗ   ದೇವಾಲಯ ಕಟ್ಟಿಸುವ ಮತ್ತೆ ಕಾರ್ಯ  ಕೈಗೆತ್ತಿಕೊಳ್ಳಲಾಯಿತು. ಅಂದು ಬಿಳಗಿ ಸಾಮ್ರಾಜ್ಯವು ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯಿಂದ ಉಡುಪಿ ಜಿಲ್ಲೆಯ ಗಂಗೊಳ್ಳಿ ನದಿಯವರೆಗೆ ಹರಡಿದ್ದು, ಬಿಳಗಿಯ ಅರಸರು ಮಾಹಾ ಪರಾಕ್ರಮಿಗಳು ಮತ್ತು ಅಪ್ಪಟ ಕನ್ನಾಡಾಭಿಮಾನಿಗಳಾಗಿದ್ದರಿಂದ, ಕನ್ನಡ ಮಾತೆ ಭುವನೇಶ್ವರಿ ದೇವಿಗೆ ಸಮರ್ಪಿತವಾಗಿ ಈ ದೇವಾಲಯದ ಜೀರ್ಣೋದ್ಧಾರವನ್ನು ಕೈಗೆತ್ತಿಕೊಂಡು ಅಂತಿಮವಾಗಿ ಬಿಳಗಿ ಸಾಮ್ರಾಜ್ಯದ ಅರಸ ಬಸವೇಂದ್ರರ ಕಾಲದಲ್ಲಿ ಈ ದೇವಾಲಯ ಸಂಪೂರ್ಣಗೊಂಡು ಕನ್ನಡತಿಯ ತೇರು ಎಳೆಯುವ ಮೂಲಕ ತಾಯ್ನುಡಿಯ ಪೂಜೆಗೆ ಅಧಿಕೃತ ಮುನ್ನುಡಿ ಬರೆದಿದ್ದರು.

ಅಂದಿನಿಂದಲೂ ಇಂದಿನ ವರೆಗೂ ವರ್ಶದ 365 ದಿನಗಳಲ್ಲಿ ಇಲ್ಲಿ ಕನ್ನಡಮಾತೆಯಾದ ಭುವನೇಶ್ವರೀ ದೇವಿಗೆ ತ್ರಿಕಾಲ ಪೂಜೆ ಸಾಂಗೋಪಾಗವಾಗಿ ನಡೆದುಕೊಂಡು ಬರುತ್ತಿದೆ. ಈ ಶ್ರೀಕ್ಷೇತ್ರವೂ ಶಕ್ತಿಸ್ಥಳವಾಗಿದ್ದು ನಮಗೆ ಕಾಣಸಿಗುವುದು ಉತ್ಸವಮೂರ್ತಿಯಾಗಿದ್ದು ನಿತ್ಯಪೂಜೆಯು ಆ ಉತ್ಸವ ಮೂರ್ತಿಯ ಪದತಳದಲ್ಲಿವ ಉದ್ಭವ ಲಿಂಗ ರೂಪದಲ್ಲಿರುವ ಶ್ರೀ ಭುವನೇಶ್ವರಿ ದೇವಿಯ ಮೂಲ ಬಿಂಬಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಈ ದೇವಾಲಯದ ಬಳಿ ತಪ್ಪಲಿನಲ್ಲಿಯೇ ಸುಮಾರು 1 ರಿಂದ 1.2 ಎಕರೆಯಷ್ಟು ವಿರ್ಸ್ತೀರ್ಣವಿರುವ ಒಂದು ಸುಂದರ ಪುಷ್ಕರಣಿ ಅರ್ಥಾತ್ ಕಲ್ಯಾಣಿ ಇದ್ದು ವರ್ಷ ಪೂರ್ತಿಯೂ ಇಲ್ಲಿ  ತಿಳಿ ನೀರಿನಿಂದ ತುಂಬಿಕೊಂಡಿರುತ್ತದೆ. ಈ  ಕಲ್ಯಾಣಿಯ ನೀರು ಕೇವಲ ದೇವಾಲಕ್ಕಾಗಿಯೇ ಮೀಸಲಾಗಿದ್ದು ಇಲ್ಲಿನ ನೀರನ್ನು ಜಾನುವಾರುಗಳಿಗಾಗಲಿ,  ಈಜುವುದಕ್ಕಾಗಲೀ ಬಟ್ಟೆಗಳನ್ನು ಒಗೆಯುವುದಕ್ಕಾಗಲೀ ನಿಷೇಧವಿದೆ. ಅದೇ ರೀತಿ ಈ ಕಲ್ಯಾಣಿಯಲ್ಲಿರುವ ಮೀನನ್ನು ಹಿಡಿಯುವುದನ್ನೂ ನಿರ್ಭಂಧಿಸಲಾಗಿದೆ. ಪ್ರತೀ ದಿನ ದೇವಾಲಯದ ಅರ್ಚಕರ ಸಹಾಯಕರು ಇದೇ ಕಲ್ಯಾಣಿಯಿಂದ ಕೊಡದಲ್ಲಿ ನೀರನ್ನು ತೆಗೆದುಕೊಂಡು ಮೆಟ್ಟಿಲಿನ ಮೂಲಕ ದೇವಾಲಯಕ್ಕೆ ಹೋಗಿ ಆ ನೀರಿನಲ್ಲಿಯೇ ದೇವಿಗೆ ಆಭಿಷೇಕ ಮಾಡಿ ಪೂಜಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.

ಪ್ರತೀ ನಿತ್ಯ ತ್ರಿಕಾಲ ಪೂಜೆ ನಡೆಯುತ್ತಿದ್ದರೂ, ಹಬ್ಬ ಹರಿದಿನಗಳಂದು ವಿಶೇಷ ಪೂಜೆಯಲ್ಲದೇ, ವೈಶಾಖ ಬಹುಳ ಅಮಾವಾಸ್ಯೆಯಂದು ಈ ದೇವಾಲಯದ ವಾರ್ಷಿಕೋತ್ಸವವಾಗಿದ್ದು ಅಂದು ಸಣ್ಣ ಪ್ರಮಾಣದಲ್ಲಿ ಯಜ್ಞ ಯಾಗಾದಿಗಳನ್ನು ಮಾಡಲಾಗುತ್ತದೆ. ಶ್ರಾವಣ ಮಾಸದ ಶುಕ್ರವಾರ ಶನಿವಾರದಂದು ನಡೆಯುವ ವಿಶೇಷ ಪೂಜೆಗೆ ಬಹಳ ಭಕ್ತಾದಿಗಳು ಆಗಮಿಸಿದರೆ,  ಆಶ್ವೀಜ ಪಾಡ್ಯದಿಂದ ದಶಮಿಯವಗಿನ ನವರಾತ್ರಿಯ ದಸರಾ ಹಬ್ಬದಲ್ಲೂ ಸಹಾ  ದಿನವಿಡೀ ಪೂಜೆ ಪುನಸ್ಕಾರಗಳು, ಪಂಚಾಮೃತ ಆಭಿಷೇಕ ಅಮ್ಮನವರಿಗೆ ವಿಶೇಷ ಪೂಜೆ  ನಡೆದರೆ,  ವಿಜಯದಶಮಿಯಂದು ವಿಜಯೋತ್ಸವದ ಪ್ರತೀಕವಾಗಿ  ಕುಂಕುಮಾರ್ಚನೆ ಮತ್ತು ತುಲಾಭಾರ ಸೇವೆ ಮಾಡಲಾಗುತ್ತದೆ.  ಕಾರ್ತೀಕ ಶುದ್ಧ ಹುಣ್ಣಿಮೆಯಂದು  ದೇವಾಲಯದ  ಅಡಿಯಲ್ಲಿರುವ ಕಲ್ಯಾಣಿಯಲ್ಲಿ ತೆಪ್ಪೋತ್ಸವವನ್ನು ಏರ್ಪಡಿಸಲಾಗುತ್ತದೆ. ಅಂದು ಬೆಳಿಗ್ಗೆ ಧಾತ್ರಿ ಹೋಮ ಮಾಡಿ ಮಧ್ಯಾಹ್ನ  ವನಭೋಜನದ ನಂತರ ಸಂಜೆ ಕಲ್ಯಾಣಿಯ ಸುತ್ತಲೂ ದೀಪ ಹಚ್ಚಿಸಿ ಕಾರ್ತೀಕ  ದೀಪೋತ್ಸವದ ಜೊತೆಗೆ ಕಲ್ಯಾಣಿಯ ಮಧ್ಯೆ ತೆಪ್ಪದಮೇಲೆ ಉತ್ಸವ ಮೂರ್ತಿಯನ್ನಿಟ್ಟು ತೆಪ್ಪೋತ್ಸವನ್ನು ನಡೆಸಲಾಗುತ್ತದೆ.  ರಾತ್ರಿ 10ರ ನಂತರ ರಂಗೋತ್ಸವ ನಡೆಯುತ್ತದೆ. ಇನ್ನು  ಮಾಘ ಶುದ್ಧ ದ್ವಾದಶಿಯಿಂದ,  ಮಾಘ ಬಹುಳ ಬಿದಿಗೆಯ ವರೆಗೂ 6 ದಿನಗಳ ಕಾಲ ವಿಶೇಷ ಜಾತ್ರೆಯ ಸಂಧರ್ಭವಾಗಿದ್ದು  ಆ ಹೂವಿನ ತೇರಿನ ವಿಶೇಷ ರಥೋತ್ಸವಕ್ಕೆ ಸುತ್ತಮುತ್ತಲಿನ  ಭಕ್ತಾದಿಗಳಷ್ಟೇ ಅಲ್ಲದೇ ಪರ ರಾಜ್ಯ ಮತ್ತು ದೇಶ ವಿದೇಶಗಳಿಂದಲೂ ಸಾವಿರಾರು ಜನರು ಬರುತ್ತಾರೆ. ಆ ದಿನಗಳಲ್ಲಿ ತಾಯಿಗೆ ತ್ರಿಕಾಲ ಪೂಜೆಯ ಜೊತೆ ಬಲಿ ಪೂಜೆ ನಡೆಯುತ್ತದೆ.  ಮಾಘ ಶುದ್ಧ ಹುಣ್ಣಿಮೆಯಂದು  ಮಹಾ ಚಂದನ ರಥೋತ್ಸವದ ಕಾರ್ಯಕ್ರಮವಾಗಿದ್ದು ಅಂದು  ಚಂಡಿ ಪಾರಾಯಣ ನಡೆದ ನಂತರ ದೇವಾಲಯದಲ್ಲಿರುವ ಮೂರೂ ರಥಗಳನ್ನು ಏಕಕಾಲದಲ್ಲಿ ಎಳೆಯಲಾಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಮಕ್ಕಳ ಮದುವೆ ಆಗದವರು ಅಥವಾ ಮದುವೆಯಾಗಿ ಮಕ್ಕಳಾಗದವರು ದೇವಿಗೆ ಉಡಿ ತುಂಬಿಸಿ ಹರಕೆ ಮಾಡಿಕೊಂಡಲ್ಲಿ  ಅದಷ್ಟು  ಶೀಘ್ರವಾಗಿ ಮದುವೆ  ಇಲ್ಲವೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಸ್ಥಳೀಯರದ್ದಾಗಿದೆ. ಅದೇ ರೀತಿಯಲ್ಲಿ  ನವೆಂಬರ್ 1 ಕನ್ನಡ ರಾಜ್ಯೋತ್ಸವದಂದೂ ಸಹಾ ವಿವಿಧ ಕನ್ನಡ ಸಂಘಟನೆಗಳ ಕೆಲ ಕನ್ನಡ ಹೋರಾಟಗಾರರು ಇಲ್ಲಿಗೆ ಬಂದು ಕನ್ನಡ ಪರ ಘೋಷಣೆಗಳನ್ನು ಹಾಕಿ ಹೋಗುತ್ತಾರಂತೆ

ಈ ಭುವನೇಶ್ವರಿ  ದೇವಾಲಯದ ಪ್ರಾಂಗಣದಲ್ಲಿ ದೇವಲ ತಾಯಿ ಭುವನೇಶ್ವರಿಯಲ್ಲದೇ, ಶ್ರೀ ಗಣಪತಿ, ಶ್ರೀ ಗೋಪಾಲಕೃಷ್ಣ, ನಂದೀಕೇಶ್ವರ ಮತ್ತು ನಾಗರದೇವತೆಗಳ ಸಣ್ಣ ಸಣ್ಣ ಗುಡಿಗಳಿದ್ದು ಪ್ರತೀ ದಿನವೂ ಆ ದೇವರುಗಳಿಗೂ ಪೂಜೆ ಮತ್ತು ಮಹಾ ಮಂಗಳಾರತಿ ಮಾಡುವುದು ಇಲ್ಲಿನ ಪದ್ದತಿಯಾಗಿದೆ.  ವರ್ಷದ ಎಲ್ಲಾ ದಿನಗಳಲ್ಲಿಯೂ ಬೆಳಿಗ್ಗೆಯಿಂದ ಸಂಜೆಯವರೆಗೂ ಭಕ್ತಾದಿಗಳ ದರ್ಶನಕ್ಕೆ ತೆರೆದಿರುವ ದೇವಾಲಯ, ತ್ರಿಕಾಲ ಸಮಯದಲ್ಲಿ ಮಾತ್ರ ವೇದೋಕ್ತ ಮಂತ್ರಗಳೊಂದಿಗೆ ನೈವೇದ್ಯ ಅಂಧಾಭಿಷೇಕ ಮಾಡಲಾಗುತ್ತದೆ. ಇದೇ ದೇವಾಲಯಕ್ಕೆ ಹೊಂದಿಕೊಂಡೇ ಕಲ್ಯಾಣ ಮಂಟಪವಿದ್ದು ಅಲ್ಲಿ ಮದುವೆ, ಮುಂಜಿ ನಾಮಕರಣಗಳಂತಹ ಶುಭಕಾರ್ಯಕ್ರಮಗಳನ್ನು ಮಾಡಬಹುದಾಗಿದೆ.

ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ತಾಯಿ ಭುವನೇಶ್ವರಿ ದೇವಿ ನಲೆಸಿರುವ ಸುತ್ತಮುತ್ತಲೂ ನಿತ್ಯ ಹರಿದ್ವರ್ಣ ಕಾನನದಿಂದ ಆವೃತವಾಗಿರುವ ಈ ದೇವಾಲಯದ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕೆ ತಡಾ. ಆತೀ ಶೀಘ್ರದಲ್ಲೇ ಸ್ವಲ್ಪ ಸಮಯ ಮಾಡಿಕೊಂಡು ಭುವನಗಿರಿಯ ಭುವನೇಶ್ವಶ್ವರಿ ತಾಯಿಯ ದರ್ಶನ ಪಡೆದು ಅಲ್ಲಿಂದ ಶಿರಸಿ ಮಾರಿಕಾಂಬೆ, ಶಾಲ್ಮಲಾ ನದಿ ತಟದಲ್ಲಿರುವ ಸಹಸ್ರ ಲಿಂಗ, ಸೊಂದಾ ವಾದಿರಾಜ ಮತ್ತು ಸ್ವರ್ಣವಲ್ಲಿ ಮಠದ ಜೊತೆ ಯಾಣಕ್ಕೂ ಭೇಟಿ ನೀಡಿ ನಿಮ್ಮ ಅನುಭವವನ್ನು ನಮ್ಮೊಂಡಿಗೆ  ಹಂಚಿಕೊಳ್ತೀರಿ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ 2025ರ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ತುಮಕೂರು ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಗಿದೆ

Leave a comment