ಹೆತ್ತವರಿಗೆ ತಮ್ಮ ಮಕ್ಕಳಿಗೆ ಬುದ್ಧಿ ಹೇಳುವ ಹಕ್ಕಿಲ್ಲವೇ?

ಇತ್ತೀಚೆಗೆ ಸಂಬಂಧೀಕರ ಸಮಾರಂಭಕ್ಕೆ ಹೋಗಿದ್ದಾಗ, ಮತ್ತೊಬ್ಬ ಹತ್ತಿರದ ಸಂಬಂಧೀಕರು ಬಂದಿದ್ದ ಎಲ್ಲರಿಗೂ ತಮ್ಮ ಮಗಳ ಮದುವೆ ಆಮಂತ್ರಣ ಪತ್ರಿಕೆಯನ್ನು ಕೊಡುತ್ತಿದ್ದರು. ಸುಮಾರು 22ರ ಪ್ರಾಯದ ಆ ಹುಡುಗಿ ಕೇವಲ ಒಂದು ವರ್ಷದ ಹಿಂದೆಯಷ್ಟೇ ಪದವಿಯನ್ನು ಮುಗಿಸಿ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿ ಇಲ್ಲದಿರುವ ಮತ್ತು ಆಕೆಯ ತಂಗಿಯೂ ಪಿಯೂಸಿ ಓದುತ್ತಿರುವ ಕಾರಣ ತನ್ನ ಮನೆಯ ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ವಿಚಾರ ತಿಳಿಯಿತು. ಇದೇ ಸಮಯದಲ್ಲಿ ಸುಮಾರು 25ರ ಪ್ರಾಯದ  ಇನ್ನೂ ಮದುವೆ ಆಗದಿರುವ ಹುಡುಗಿ ತನ್ನ ತಾಯಿಯ ಬಳಿ ಬಂದು, ನೋಡಮ್ಮಾ, ಅವರ ಅಪ್ಪಾ ಅಮ್ಮಾ ಆವಳನ್ನು ಹೇಗೆ ಭಾವನಾತ್ಮಕವಾಗಿ ಮೋಸ (emotional blackmail) ಮಾಡಿ ಬಿಟ್ಟಿದ್ದಾರೆ. ಈಗ ಮದುವೆ ಆಗದೇ ಹೋದಲ್ಲಿ ಇನ್ನು 4-5 ವರ್ಷ ಗುರುಬಲ ಇಲ್ಲ. ಅದೂ ಅಲ್ಲದೇ ನಿನ್ನ ಮದುವೆ ಆದ 2-3 ವರ್ಷಗಳಲ್ಲೇ ನಿನ್ನ ತಂಗಿಯ ಮದುವೆಯನ್ನೂ ಮಾಡಬೇಕಿದೆ ಎಂದು ಹೇಳಿದ್ದನ್ನು ಕೇಳೀ ಅವಳು ಇಷ್ಟು ಬೇಗ ಮದುವೆ ಮಾಡಿಕೊಳ್ಳುತ್ತಿದ್ದಾಳೆ ಎಂದು ಅಕ್ಷೇಪ ಮಾಡುತ್ತಿರುವುದೂ ಕಿವಿಗೆ ಬಿತ್ತು.

ಇತ್ತೀಚೆಗೆ ಮಕ್ಕಳು ಅದರಲ್ಲೂ ಬಹುತೇಕ ಹೆಣ್ಣು ಮಕ್ಕಳು ತಮ್ಮ ತಂದೆ ತಾಯಿಯರ ಮಾತನ್ನು ಕೇಳಲೇ ಬಾರದು ಎಂದು ನಿರ್ಧರಿದಂತಿದೆ. ತಂದೆ ತಾಯಿ ಹೇಳುವುದೆಲ್ಲಾ ತಪ್ಪು. ಮಗಳೇ ವಯಸ್ಸಾಯಿತು ಮದುವೆ ಆಗು ಎಂದರೆ ಸಾಕು ಯಾಕಾದ್ರೂ ನಿಮ್ಮ ಮಗಳಾಗಿ ಹುಟ್ಟಿದೆನೋ? ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ. ನನಗೆ ಸೇರಿದ ಅಸ್ತಿಯನ್ನು ನನಗೆ ಕೊಟ್ಟು ಬಿಡಿ. ನಮಗೆ ಯಾವಾಗ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ತಂದೆ ತಾಯಿಯರ ಬಾಯಿ ಬಡಿಯುವುದನ್ನು ಕೇಳುವಾಗ ನಿಜಕ್ಕೂ ಬೇಸರ ಮತ್ತು ಅಚ್ಚರಿ ಮೂಡಿಸುತ್ತದೆ. ಅದೆಷ್ಟೋ ಮನೆಗಳಲ್ಲಿ ಭಗವಂತನಲ್ಲಿ ಕಾಡೀ ಬೇಡಿ ಮಕ್ಕಳನ್ನು ಪಡೆದು, ತಾವು ಅನುಭವಿಸಿದ ಕಷ್ಟವನ್ನು ತಮ್ಮ ಮಕ್ಕಳು ಅನುಭವಿಸಬಾರದು ಎಂದು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ, ಸಾಲ ಸೋಲ ಮಾಡಿ ಮಕ್ಕಳಿಗೆ ಓಳ್ಳೆಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಿ ಐಶಾರಾಮ್ಯವಾಗಿ ಬೆಳೆಸಿದರೂ ಮಕ್ಕಳು ಹೇಳಿದ ಮಾತು ಕೇಳದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.

8-9 ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿ ಬೆಳಸಿದ ಮಕ್ಕಳು ಸ್ವಲ್ಪ ಬುದ್ದಿ ಬರುತ್ತಿದ್ದಂತೆಯೇ ತಂದೆ ತಾಯಿಯ ಮಾತನ್ನು ಧಿಕ್ಕರಿಸಿ 3-6 ತಿಂಗಳುಗಳ ಹಿಂದೆ WhatsApp, Facebook, Instagram ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರೇ ಹೆಚ್ಚು ಎಂದು ತಂದೆ ತಾಯಿಯರನ್ನು ಧಿಕ್ಕರಿಸಿ ಓಡಿ ಹೋಗುವ ಇಲ್ಲವೇ ಅದನ್ನು ವಿರೋಧ ಪಡಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಪೋಷಕರನ್ನು ಭಯಕ್ಕೀಡು ಮಾಡುತ್ತಿವೆ. 

ನನ್ನ ಆತ್ಮೀಯ ಗೆಳೆಯನ ಒಬ್ಬನೇ ಒಬ್ಬ ಮಗ  ಪದವಿಯ ಅಂತಿಮ ವರ್ಷದಲ್ಲಿದ್ದ. ಅಪ್ಪ ಅಮ್ಮನಿಗಿಂತ ಬಹಳ ಎತ್ತರವಾಗಿ ಬೆಳಿದ್ದದ್ದಲ್ಲದೇ, ಜಿಮ್ ಹೋಗಿ ತಕ್ಕ ಮಟ್ಟಿಗೆ ತನ್ನ ದೇಹವನ್ನು ಕಸುವುಗೊಳಿಸಿ ಬಹಳ ಆಕರ್ಷಣೀಯವಾಗಿ ಕಾಣಿಸುತ್ತಿದ್ದ. ಅದಕ್ಕೆ ತಕ್ಕಂತೆ ಅಪ್ಪಾ, ಸುಮಾರು ಎರಡು ಲಕ್ಷಕ್ಕೂ ಅಧಿಕ ಮೊತ್ತದ ಬೈಕ್ ಕೊಡಿಸಿದ್ದ. ಕೆಲವೇ ಕೆಲವು ದಿನಗಳ ಹಿಂದೆ ಅಪ್ಪಾ ಅಮ್ಮಾ ಮತ್ತು ಅಜ್ಜಿಯನ್ನು ಕಾರಿನಲ್ಲಿ ಕೂರಿಸಿ ಕೊಂಡು ದೇವಾಲಯಕ್ಕೆ ಬಂದಿದ್ದಾಗ, ವಾಹ್!! ಮಗ ಇಷ್ಟು ದೊಡ್ಡವಾಗಿ ಬಿಟ್ಟಾ ಎಂದು ಸಂತೋಷ ಪಟ್ಟಿದ್ದೆ. ಆದರೆ ಮೊನ್ನೆ ಇದ್ದಕ್ಕಿದ್ದಂತೆಯೇ ಮತ್ತೊಬ್ಬ ಸ್ನೇಹಿತ ಕರೆ ಮಾಡಿ ವಿಷಯ ಗೊತ್ತಾಯ್ತಾ? ಶ್ಯಾಮ್ ಮಗ (ಹೆಸರು ಬದಲಿಸಲಾಗಿದೆ) ಅದ್ಯಾವುದೋ ಹುಡುಗಿಯನ್ನು ಪ್ರೀತಿಸಿದ್ದನಂತೇ. ಅಪ್ಪಾ ಅಮ್ಮಾ ಬೇಡ ಅಂದಿದ್ದಕ್ಕೆ ಬೇಸರಗೊಂಡು ಅತ್ಮಹತ್ಯೆ ಮಾಡಿಕೊಂಡು ಬಿಟ್ನಂತೇ!! ಎಂದಾಗ ಒಂದು ಕ್ಷಣ ಆಕಾಶವೇ ನನ್ನ ಮೇಲೆ ಬಿದ್ದ ಅನುಭವವಾಗಿದ್ದಂತೂ ಸುಳ್ಳಲ್ಲಾ. ಮೊನ್ನೆ ಮೊನ್ನೆಯಷ್ಟೇ ನೋಡಿ ಮಾತನಾಡಿಸಿದ್ದ ಹುಡುಗ ವಯಸ್ಸಾದ ಅಜ್ಜಿಯ ಪ್ರೀತಿ ಪಾತ್ರವಾದ ಮೊಮ್ಮಗ. ಕೇಳಿದ್ದನ್ನೆಲ್ಲಾ ಪ್ರೀತಿಯಿಂದ ತೆಗೆಸಿಕೊಡುವ ಅಪ್ಪಾ ಅಮ್ಮನ ಒಬ್ಬನೇ ಮುದ್ದು ಮಗ ಇಷ್ಟು ಚಿಕ್ಕವಯಸ್ಸಿನಲ್ಲೇ ಇಷ್ಟು ದುರ್ಬಲ ಹೃದಯಹೀನನಾಗಿ ಬಿಟ್ಟನೇ? ಛೇ! ಹೀಗೇಕೆ ಮಾಡಿಕೊಂಡ? ಎಂಬ ಪ್ರಶ್ನೆ ಇನ್ನೂ ಕಾಡುತ್ತಲೇ ಇರುವುದರಿಂದ ಮಗನನ್ನು ಕಳೆದುಕೊಂಡ ಗೆಳೆಯನನ್ನು ಮಾತನಾಡಿಸದೇ ಚಡಪಡಿಸುತ್ತಿದ್ದೇನೆ.

13 Apr 2025 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನ ಮೆಡಿಕಲ್ ಸ್ಟೋರ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಷಯ ಮತ್ತಷ್ಟು ಗಾಭರಿ ಹುಟ್ಟಿಸುತ್ತದೆ. ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ (49 ವರ್ಷ) ಎಂಬ ವ್ಯಕ್ತಿ ರಾತ್ರಿ 1 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡಿದ್ದಾರೆ. ರಿಷಿರಾಜ್ ಅವರ ಮಗಳು ಸುಮಾರು 15 ದಿನಗಳ ಹಿಂದೆ ತನ್ನ ಪೋಷಕರ ವಿರುದ್ಧವಾಗಿ ನೆರೆಯ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಪೋಲಿಸರ ಸಹಾಯದಿಂದ ಆಕೆಯನ್ನು ಪತ್ತೆಹಚ್ಚಿ ಇಂದೋರ್‌ಗೆ ಕರೆತಂದು, ಮಗಳನ್ನು ತಮ್ಮ ಸುಪರ್ಧಿಗೆ ಒಪ್ಪಿಸಬೇಕೆಂದು ನ್ಯಾಯಾಲಯಕ್ಕೆ ಕೋರಿಕೊಂಡಾಗ, ವಿಚಾರಣೆಯ ಸಮಯದಲ್ಲಿ, ಮಗಳು ತಾನು 18 ವರ್ಷವನ್ನು ಮೀರಿದ್ದು ಕಾನೂನು ಬದ್ಧವಾಗಿ ಮದುವೆಯಾಗಿರುವ ಕಾರಣ, ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಿದ್ದೇನೆ ಹಾಗಾಗಿ ತನ್ನ ಪತಿಯೊಂದಿಗೆ ಹೋಗಲು ನಿರ್ಧರಿಸಿರುವುದಾಗಿ ಹೇಳಿದ್ದಾಳೆ.

ಇದರಿಂದ ಬಹಳವಾಗಿ ನೊಂದು ಖಿನ್ನತೆಗೆ ಜಾರಿದ್ದ ರಿಷಿರಾಜ್, ತನ್ನ ಮಗಳ ಆಧಾರ್ ಕಾರ್ಡ್‌ ಪ್ರಿಂಟೌಟ್‌ನ ಹಿಂಬದಿಯಲ್ಲಿ ಡೆತ್ ನೋಟ್ ನಲ್ಲಿ ಮಗಳೇ ಹರ್ಷಿತಾ, ನೀನು ಮಾಡಿದ್ದು ಸರಿಯಲ್ಲ. ನೀನು ತಪ್ಪು ಮಾಡಿದೆ. ನಿನ್ನೀ ಕಾರ್ಯದಿಂದಾಗಿ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗಾಡಲು ಆಗದೇ ನಮ್ಮ ಇಡೀ ಕುಟುಂಬ ನಾಶವಾಗಿದೆ. ನಿನ್ನನ್ನೂ ಸೇರಿದಂತೆ ಯಾರೂ ಸಹಾ ತಂದೆ ತಾಯಿಯ ನೋವನ್ನು ಅರ್ಥ ಮಾಡಿಕೊಳ್ಳಲಿಲ್ಲ. ನಾನು ಬಯಸಿದ್ದಲ್ಲಿ ನಿಮ್ಮಿಬ್ಬರನ್ನೂ ಕೊಲ್ಲಬಹುದಿತ್ತು. ಆದರೆ, ನಾನೇ ಮುದ್ದು ಮಾಡಿ ಬೆಳೆಸಿದ ನನ್ನ ಮಗಳನ್ನು ಕೈಯ್ಯಾರೇ ಹೇಗೆ ಕೊಲ್ಲಲಿ? ಹಾಗಾಗಿ ನಾನೇ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಗುಂಡು ಹಾರಿಸಿಕೊಂಡು ಸತ್ತು ಹೋಗಿರುವ ಧಾರುಣ ಸಂಗತಿ ನಡೆದಿದೆ.

ಇದಕ್ಕೆ ತದ್ವಿರುದ್ಧವಾದ ಮತ್ತೊಂದು ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದ್ದು, 20 ವರ್ಷದ ತನು ಗುರ್ಜರ್‌ ಎಂಬ ಯುವತಿಗೆ ಭಾರತೀಯ ವಾಯುಪಡೆಯ (IAF) ಸಿಬ್ಬಂದಿಯ ಜೊತೆ ಮದುವೆ ಮಾಡಲು ತಂದೆ ತಾಯಿಯರು ನಿಶ್ಚಯಿಸಿದರು. ಆದರೆ, ಆಕೆ ಸುಮಾರು ಆರು ವರ್ಷಗಳಿಂದ ಅವರದ್ದೇ ಸಮುದಾಯದ ಪಿನ್ಹತ್ (ಆಗ್ರಾ) ಮೂಲದ ಭಿಖಮ್ ಮಾವೈ ‘ವಿಕಿ’ ಎಂಬ ನಿರುದ್ಯೋಗಿ ವ್ಯಕ್ತಿಯೊಂದಿಗೆ ಪ್ರೇಮವಿರುವ ಕಾರಣ, ತಂದೆ ತಾಯಿ ತೋರಿಸಿದ ಯುವಕನ ಜೊತೆ ಮದುವೆ ಆಗಲು ನಿರಾಕರಿಸಿದ್ದ ವಿಷಯ ಊರಿನಲ್ಲಿ ಎಲ್ಲರಿಗೂ ತಿಳಿದು ದೊಡ್ಡ ರಂಪವಾಗಿದ್ದಕ್ಕೆ ಮರ್ಯದೆಗೆ ಅಂಜಿದ ಢಾಬಾ ಮಾಲೀಕ ಮಹೇಶ್ ಗುರ್ಜರ್ ತನ್ನ ಸಂಬಂಧಿಯೊಂದಿಗೆ ಸೇರಿಕೊಂಡು ಮಗಳ ಮದುವೆಗೆ ನಾಲ್ಕು ದಿನಗಳ ಮೊದಲು ಮಗಳಿಗೆ ನಾಲ್ಕು ಗುಂಡುಗಳನ್ನು ಹಾರಿಸಿ ಕೊಂದು ಹಾಕಿರುವ ಬರ್ಬರ ಘಟನೆ ನಡೆದಿದೆ.

ಈ ಹತ್ಯೆ ನಡೆಯುವ ಕೆಲವೇ ಘಂಟೆಗಳ ಹಿಂದೆ ಅ ಯುವತಿ ತನ್ನ ಜೀವಕ್ಕೆ ಅಪಾಯವಿದ್ದು ಅದಕ್ಕೆ ತನ್ನ ಕುಟುಂಬದವರೇ ನೇರ ಹೊಣೆ ಎಂದು ಹೇಳಿದ್ದ ವಿಡಿಯೋ ಬಹಿರಂಗವಾಗಿ, ಸ್ಥಳೀಯ ಪೊಲೀಸರು ಹುಡುಗಿ ಮತ್ತು ಅವಳ ತಂದೆಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ಮಾಡಿದ್ದಲ್ಲದೇ, ಆ ಯುವತಿಯನ್ನು ನಾರಿ ನಿಕೇತನಕ್ಕೆ ಸ್ಥಳಾಂತರಿಸಲು ಪೋಲೀಸರು ಹೇಳಿದಾಗ ಅದಕ್ಕೆ ನಿರಾಕರಿಸಿದ್ದ ಯುವತಿ ಈಗ ತನ್ನ ಹೆತ್ತವರಿಂದಲೇ ಹೆಣವಾಗಬೇಕಾಯಿತು.

ಇನ್ನು ಅಷ್ಟೆಲ್ಲಾ ದೂರವೇಕೇ? ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನಪ್ರಿಯತೆ ಪಡೆದ ಪೃಥ್ವಿ ಭಟ್, Family roundನಲ್ಲಿ ತನ್ನ ತಂದೆಯೊಂದಿಗೆ appa… I Love you paa.. ಎಂಬ ಹಾಡನ್ನು ಹಾಡಿದ್ದಲ್ಲದೇ, ಅದೇ ವೇದಿಕೆಯಿಂದಲೇ ತನ್ನ ಇದುವರೆವಿಗಿನ ಎಲ್ಲಾ ಏಳಿಗೆಗೆ ತನ್ನ ತಂದೆಯೇ ಕಾರಣ ಎಂದು ಹೇಳಿದಾಗ, ಅಬ್ಬಾ ತಂದೆ ಮಗಳು ಎಂದರೆ ಹೀಗಿರ ಬೇಕು ಎಂದು ಎಲ್ಲರೂ ಆಕೆಯನ್ನು ಕೊಂಡಾಡಿದ್ದರು. ಆದರೆ ಆ ಅಪ್ಪಾ ಮಗಳ ಮಧುರ ಬಾಂಧವ್ಯ ಕೇವಲ ಕೆಲವೇ ದಿನಗಳಿಗಷ್ಟೇ ಸೀಮಿತವಾಗಿ ಇತ್ತೀಚೆಗೆ ಅದೇ ಖ್ಯಾತ ಗಾಯಕಿ ಪ್ರಥ್ವಿ ಭಟ್‌ ತನ್ನ ಪೋಷಕರ ಆಶಯಕ್ಕೆ ವಿರುದ್ಧವಾಗಿ ಜೀ ಟಿವಿಯಲ್ಲೇ ಕೆಲಸ ಮಾಡುತ್ತಿರುವ ಅಭಿಷೇಕ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ಇದರ ಕುರಿತಾಗಿ ಆಕೆಯ ತಂದೆ ಶಿವ ಪ್ರಸಾದ್‌ ಭಟ್ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾಗ, ಪ್ರೇಮದ ಮುಂದೆ ಹೆತ್ತವರ ಕಣ್ಣೀರಿಗೆ ಬೆಲೆಯೇ ಇಲ್ಲವೇ? ಅಂದು ವೇದಿಕೆಯಲ್ಲಿ ತಂದೆಯೊಂದಿಗೆ ತೋರಿದ ಪ್ರೀತಿ ಕೃತ್ರಿಮವೇ? ಎಂದು ಅನಿಸಿದ್ದಂತೂ ಸುಳ್ಳಲ್ಲ.

ಹೆತ್ತವರ ವಿರೋಧ ಕಟ್ಟಿಕೊಳ್ಳುವುದು ಕೇವಲ ಹುಡುಗಿಯರಿಗಷ್ಟೇ ಸೀಮಿತವಾಗದೇ, ಹುಡುಗರೂ ಸಹಾ ತಂದೆ ತಾಯಿಯರಿಗೆ ನೋವು ಕೊಡುವ ಸಂಗತಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, 21 ವರ್ಷದ ಯುವಕ ರೋಹಿತ್ ತನ್ನ ಪೋಷಕರ ವಿರುದ್ಧವಾಗಿ 19 ವರ್ಷದ ಪ್ರೇಯಸಿ ಜೊತೆ ಜನ ನಿಬಿಡ ರಾಮ್‌ಗೋಪಾಲ್ ಜಂಕ್ಷನ್ ಮಾರುಕಟ್ಟೆಯಲ್ಲಿ ನೂಡಲ್ಸ್ ತಿನ್ನುತ್ತಿದ್ದ ವಿಷಯ ತಿಳಿದ ಆತನ ಪೋಷಕರೇ ಧರ್ಮದೇಟು ಹಾಕಿದ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.

ರೋಹಿತ್ ತನ್ನ ಗೆಳತಿಯೊಂದಿಗೆ ನೂಡಲ್ಸ್ ತಿನ್ನುತ್ತಿದ್ದಾಗ ಆತನ ಹೆತ್ತವರಾದ ಶಿವಕರನ್ ಮತ್ತು ಸುಶೀಲಾ ಸ್ಥಳಕ್ಕೆ ಆಗಮಿಸಿ ತಮ್ಮ ಮಗನೊಂದಿಗೆ ವಾಗ್ವಾದ ನಡೆಸಿ ನೋವಿನಿಂದ ನೋಡ ನೋಡುತ್ತಲೇ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ತನ್ನ ಪ್ರಿಯಕರನ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯಲು ಬಂದ ಆತನ ಪ್ರೇಯಸಿಯ ಮೇಲೂ ಆ ಪೋಷಕರು ಹಲ್ಲೆ ಮಾಡಿದ್ದು, ಈ ವಿಚಾರ ತಿಳಿದ ಕೂಡಲೇ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ದಿವಾದ ಹೇಳಿದ್ದಲ್ಲದೇ, ಇದೇ ರೀತಿಯಲ್ಲಿ ಜಗಳ ಮುಂದುವರೆದರೆ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರ ವಹಿಸಿ ಕಳುಸಿದ್ದಾರೆ.

ಇದೆಲ್ಲಾ ಹದಿಯರೆಯದ ವಯಸ್ಸಿನ ಹುಡುಗರು ಇಂದಿನ ಸಿನಿಮಾಗಳಿಂದ ಪ್ರೇರಿತವಾಗಿ ಪ್ರೀತಿ ಗೀತಿಗೆ ಬಿದ್ದು ಈ ರೀತಿ ಆಡುತ್ತಾರೆ ಎಂದರೆ, ಇಲ್ಲೊಬ್ಬ ತಂದೆ ಇಲ್ಲದ ಸಣ್ಣ ವಯಸ್ಸಿನ ಹುಡುಗ ಪರೀಕ್ಷೆಯಲ್ಲಿ ಸರಿಯಾಗಿ ಅಂಕ ಗಳಿಸಲಿಲ್ಲ ಎಂಬ ಬೇಸರದಿಂದ ನಿನಗಾಗಿ ಕಷ್ಟ ಪಡುತ್ತಿರುವುದನ್ನು ನೋಡಿಯೂ ನೀನು ಈ ರೀತಿ ಸೋಮಾರಿಯಾಗಿರುವುದು ಸರಿಯೇ? ಎಂದು ತಾಯಿ ತಿಳಿ ಹೇಳಿದ್ದಕ್ಕೇ ಕೋಪಗೊಂಡ ಆ ಬಾಲಕ, ತಾಯಿಗೆ ಬುದ್ದಿ ಕಲಿಸುತ್ತೇನೆ ಎಂದು ಚಾಕು ತೆಗೆದುಕೊಂಡು ತನ್ನ ಕೈಗೀರಿಕೊಂಡಾಗ ಅಣ್ಣನ ಕೈನಿಂದ ಧಾರಾಕಾರವಾಗಿ ರಕ್ತ ಸೋರುತ್ತಿದ್ದದನ್ನು ನೋಡಿದ ಅವನ ತಮ್ಮ ಅಮ್ಮನಿಗೆ ಹೇಳಿದಾಗ ಅಧಿಕ ಮಾಸದಲ್ಲಿ ಬರಗಾಲ ಎನ್ನುವಂತೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ವಾಭಿಮಾನಿಯಾಗಿ ಕಷ್ಟ ಪಟ್ಟು ದುಡಿದು ಸಾಕುತ್ತಿದ್ದ ಆಕೆಗೆ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ಮತ್ತಷ್ಟು ಹಣ ಖರ್ಚಾಗಿದ್ದಲ್ಲದೇ, ಪೋಲೀಸರಿಂದ ಕೇಸ್ ಬೇರೆ ನಿಭಾಯಿಸಬೇಕಾಗಿರುವುದು ದುಃಖದ ಸಂಗತಿ.

ಮಗ ಓದಿ ದೊಡ್ಡ ಇಂಜಿನೀಯರ್ ಆಗಬೇಕು ಎಂಬ ಅಸೆಯಿಂದ ಮನೆಯಿಂದ ತುಸು ದೂರದ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ ತಂದೆ, ಆತನ ಎಲ್ಲಾ ಆಶಯಗಳನ್ನೂ ಪೂರೈಸಿದರೂ ಕಾಲೇಜು ಸೇರಿ ಮೂರು ತಿಂಗಳು ಆಗುತ್ತಿದ್ದಂತೆಯೇ, ಕಾಲೇಜಿಗೆ ಹೋಗಿ ಬರುವುದು ತ್ರಾಸದಾಯಕ ಹಾಗಾಗಿ ಹತ್ತಿರದ ಪಿಜಿಗೆ ಸೇರಿಸಬೇಕೆಂದು ಮಗ ದಂಬಾಲು ಬಿದ್ದ. ಅದೇ ಊರಿನಲ್ಲಿಯೇ ಮಗನನ್ನು ಪಿಜಿಗೆ ಸೇರಿಸುವುದನ್ನು ಇಚ್ಚಿಸದ ಪೋಷಕರು ಅದನ್ನು ಖಡಾಖಂಡಿತವಾಗಿ ನಿರಾಕರಿಸಿದ ಪರಿಣಾಮ ಮನೆಯಲ್ಲಿ ಸ್ವಲ್ಪ ವಾಗ್ವಾದ ನಡೆದು, ಮಗ ಸರಿಯಾಗಿ ಕಾಲೇಜಿಗೇ ಹೋಗದ ಕಾರಣ, ಪರೀಕ್ಷೆ ಬರೆಯುವಷ್ಟು ಹಾಜರಾತಿ ಇಲ್ಲದ (attendence shortage) ಕಾರಣ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅನುಮತಿ ಕೊಡುವುದಿಲ್ಲ ಎಂದು ಹೇಳಿದಾಗ, ತಮ್ಮದಲ್ಲದ ತಪ್ಪಿಗೆ ಪೋಷಕರು ಕಾಲೇಜಿಗೆ ಬಂದು ಶಿಕ್ಷಕರ ದಂಬಾಲು ಬಿದ್ದು, ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ತಪ್ಪೊಪ್ಪಿಗೆಯ ಪತ್ರ ಬರೆಯಬೇಕಾದಂತಹ ಹೃದಯವಿದ್ರಾವಕ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ.

ಅನುಭವದ ಹೆತ್ತ ತಂದೆ ತಾಯಿಯರೇ ಪ್ರತ್ಯಕ್ಷ ದೇವರು. ಅವರು ಹೇಳಿದ್ದೇ ವೇದ ವಾಕ್ಯ ಎಂದು ನಂಬುತ್ತಿದ್ದಂತಹ ಕಾಲವೆಲ್ಲಾ ಮರೆಯಾಗಿ, ಇಂದು ಮೆಕಾಲೆ ಶಿಕ್ಷಣ ಪದ್ದತಿ ಮತ್ತು ಪಾಶ್ಚಾತ್ಯೀಕರಣದ ಅಂಧ ಅನುಸರಣೆಯಿಂದಾಗಿ, ಅಪ್ಪಾ ಹಾಕಿದ ಆಲದ ಮರಕ್ಕೇ ನಾವೇಕೆ ನೇಣು ಹಾಕಿ ಕೊಳ್ಳಬೇಕು? ಅಪ್ಪಾ ಅಮ್ಮನಿಗೆ ಏನೂ ತಿಳಿಯುವುದಿಲ್ಲಾ, ಅವರು ಹೇಳುವುದೆಲ್ಲಾ ಹಳೆಯ ಸಂಗತಿ, ಎಂಬ ಮನಸ್ಥಿತಿಯಿಂದ ತಂದೆ ತಾಯಿಯರಿಗೇ ಸೇರಿಗೆ ಸವ್ವಾ ಸೇರು ಎಂದು ವಿರೋಧ ವ್ಯಕ್ತ ಪಡಿಸುತ್ತಿರುವ, ವಾದ ಮಾಡುವಾಗ ಪರಿಸ್ಥಿತಿ ವಿಕೋಪಕ್ಕೆ ಬಂದರೆ, ಆತ್ಮಹತ್ಯೆಗೆ ಶರಣಾಗುವ ಮೂಲಕ ಪೋಷಕರಿಗೆ ಮತ್ತಷ್ಟು ನೋವನ್ನುಂಟು ಮಾಡುವ ದುರ್ಬಲ ಮನಸ್ಸಿನ ಇಂದಿನ ಜನಾಂಗದ ಮಕ್ಕಳನ್ನು ಸರಿ ದಾರಿಗೆ ತರುವುದು ಹೇಗೇ? ಎಂಬ ಚಿಂತೆ ಇಂದಿನ ಬಹಳಷ್ಟು ಪೋಷಕರದ್ದಾಗಿದೆ. ನಮ್ಮ ಹಣೆಬರಹವನ್ನು ನಿರ್ಧರಿಸುವವರು ನಾವೇ. ಅದಕ್ಕಾಗಿ ಯಾರನ್ನೂ ದೂರಬಾರದು ಅಥವಾ ಶ್ಲಾಘಿಸಬಾರದು. ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಇಂದಿನ ಜನಾಂಗದ ಮಕ್ಕಳಿಗೆ ತಿಳಿಸುವುದಾದರೂ ಹೇಗೇ? ಈ ಕುರಿತಂತೆ ಯಾರಾದರೂ ತಿಳಿದವರು ಈ ಸಮಸ್ಯೆಗೆ ಸೂಕ್ತ ಉತ್ತರ ನೀಡ ಬಲ್ಲಿರೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment