ಮೈಸೂರು ಎಂದ ತಕ್ಷಣ ನಮಗೆ ನನೆಪಾಗೋದೇ, ಕರ್ನಾಟಕದ ಸಾಂಸ್ಕೃತಿಕ ನಗರಿ, ಮೈಸೂರು ಜಗತ್ರ್ಪಸಿದ್ಧ ಅರಮನೆ, ಸದಾ ಕಾಲವೂ ಜನಪರ ಆಡಳಿತ ನಡೆಸಿ ಇದೇ ದೇಶಕ್ಕೇ ಮಾದರಿಯಾದ ಮೈಸೂರಿನ ಅರಸರುಗಳು, ದಸರಾ ಮತ್ತು ಚಾಮುಂಡಿ ಬೆಟ್ಟ. ನಮ್ಮ ಪುರಾಣಗಳ ಪ್ರಕಾರ ಮೈಸೂರಿನಲ್ಲಿ ಪ್ರಜಾ ಪೀಡಕನಾಗಿದ್ದ ಮಹಿಷಾಸುರ ಎಂಬ ಕ್ರೂರ ರಾಕ್ಷಸನನ್ನು ಚಾಮುಂಡಿ ದೇವಿಯು ಸಂಹರಿಸಿದ ಕಾರಣ ಅ ಊರಿಗೆ ಮಹಿಷನ ಊರು, ಮಹಿಷೂರು ನಂತರದ ದಿನಗಳಲ್ಲಿ ಜನರ ಆಡು ಭಾಷೆಯಲ್ಲಿ ಮೈಸೂರು ಎಂದಾಗಿದೆ ಎಂದು ಬಲ್ಲವರ ಅಭಿಪ್ರಾಯವಾಗಿದೆ.
ಪ್ರಾಚೀನ ಹಿಂದೂ ಧರ್ಮಗ್ರಂಥವಾದ ಸ್ಕಂದ ಪುರಾಣದಲ್ಲಿ ಈ ಪ್ರದೇಶವನ್ನು ತ್ರಿಮುತ ಕ್ಷೇತ್ರ ಎಂದು ಉಲ್ಲೇಖಿಸಲಾಗಿದ್ದು, ಚಾಮುಂಡಿ ಬೆಟ್ಟವೂ ಸೇರಿದಂತೆ ಈ ಸ್ಥಳವು ಎಂಟು ಬೆಟ್ಟಗಳಿಂದ ಸುತ್ತುವರೆದಿದ್ದು ಈ ಹಿಂದೆ, ಅಲ್ಲಿ ಶಿವನಿಗೆ ಅರ್ಪಿತವಾದ ಶ್ರೀ ಮಹಾಬಲೇಶ್ವರ ದೇವಾಲಯ ಇದ್ದ ಕಾರಣ ಈ ಬೆಟ್ಟವನ್ನು ಮಾರ್ಬಲ ಅಥವ ಮಹಾಬಲ ಬೆಟ್ಟವೆಂದು ನಂತರ ಮಹಾಬಲಾದ್ರಿ ಎಂದು ಕರೆಯಲಾಗುತ್ತಿತ್ತು. ಮೈಸೂರು ಬೆಟ್ಟವನ್ನು ಕರೆಯಲಾಗುತ್ತಿತ್ತಂತೆ. ಸುಮಾರು ಹತ್ತನೆಯ ಶತಮಾನದ ಹೊತ್ತಿಗಾಗಲೇ ಈ ಕ್ಷೇತ್ರವನ್ನು ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಅಲ್ಲಿದ್ದ ಶ್ರೀ ಮಹಾಬಲೇಶ್ವರ ದೇವಸ್ಥಾನ ಹೊಯ್ಸಳರ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ 1128ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆಯೂ ಶಾಸನವಿದೆ.
ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಈ ಮಹಾಬಲೇಶ್ವರ ತಪ್ಪಲಿನಲ್ಲಿ ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವಂತಹ ಒಂದು ರಾಜ್ಯವನ್ನು ಕಟ್ಟುವ ಮೂಲಕ ಮೈಸೂರಿನ ಅರಸರ ಸಾಮ್ರಾಜ್ಯ ಆರಂಭವಾಗಿ ಅವರು ಇದೇ ಬೆಟ್ಟದ ಮೇಲೆ ತಮ್ಮ ಆರಾಧ್ಯ ದೇವಿ ಶ್ರೀ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪನೆ ಮಾಡಿ ಅದನ್ನು ಚಾಮುಂಡಿ ಬೆಟ್ಟ ಎಂದು ಕರೆದರು ಎನ್ನಲಾಗುತ್ತದೆ.
ಅಲ್ಲಿಂದ ಸುಮಾರು ನೂರೈವತ್ತು ವರ್ಷಗಳ ಕಾಲ ಹಾಗೂ ಹೀಗೂ ಆಳ್ವಿಕೆ ನಡೆಸಿದ ನಂತರ 1859-1873ರ ಸಮದಲ್ಲಿ ಮೈಸೂರು ಅರಸದಲ್ಲಿ ಒಬ್ಬರಾಗಿದ್ದ ಶ್ರೀ ದೊಡ್ಡ ದೇವರಾಜ ಒಡೆಯರ್ ಅವರು ಆ ಚಾಮುಂಡಿ ಬೆಟ್ಟದಲ್ಲಿದ್ದ ಕಾಪಾಲಿಕರನ್ನು ಬಲಿಹಾಕಿ, ಚಾಮುಂಡಿ ಬೆಟ್ಟದಲ್ಲಿ ಅದುವರೆಗೂ ರೂಢಿಯಲ್ಲಿದ್ದಂತಹ ನರಬಲಿ ಮತ್ತು ಪ್ರಾಣಿ ಬಲಿಗಳನ್ನು ನಿಷೇಧಿಸಿ, ಆ ರೀತಿಯ ಬಲಿಗಳನ್ನು ಚಾಮುಂಡಿ ಬೆಟ್ಟದ ಹಿಂಭಾಗದ ತೆಪ್ಪಲಿನಲ್ಲಿರುವ ಉತ್ತನಹಳ್ಳಿಯ ಶ್ರೀ ಮಾರಮ್ಮ ದೇವಸ್ಥಾನಕ್ಕೆ ಸ್ಥಳಾಂತರಿಸುವುದಲ್ಲದೇ, ಜನಸಾಮಾನ್ಯರು ಸುಲಭವಾಗಿ ದೇವಿಯ ದರ್ಶನ ಪಡೆಯಲು ಸುಲಭವಾಗುವಂತಾಗಲು ಸುಮಾರು 1008 ಮೆಟ್ಟಿಲುಗಳನ್ನು ಕಟ್ಟಿಸುತ್ತಾರೆ. ಸುಮಾರು 800 ಮೆಟ್ಟಲಿನ ಮಧ್ಯೆ ಸಮತಟ್ಟಾದ ಜಾಗದಲ್ಲಿ ಭಾರತದಲ್ಲೇ ೩ನೇ ಅತಿ ದೊಡ್ಡದಾದ ಏಕಶಿಲಾ ನಂದಿಯನ್ನು ಪ್ರತಿಷ್ಠಾಪಿಸುತ್ತಾರೆ. ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿರುವ ಒಂಟಿ ಕಾಲಿನ ನಂದಿ ಮೊದಲೇ ಸ್ಥಾನ ಮತ್ತು ಪ್ರಸ್ತುತ ಆಂಧ್ರ ಪ್ರದೇಶದ ಭಾಗವಾಗಿರುವ ಲೇಪಾಕ್ಷಿಯಲ್ಲಿರುವ ನಂದಿಯು ಮೈಸೂರಿನ ನಂದಿಗಿಂತಲೂ ಸ್ವಲ್ಪ ಎತ್ತರದಲ್ಲಿದ್ದು ಎರಡನೇ ಸ್ಥಾನಗಳಿಸಿದ್ದರೂ, ನೋಡಲು ಅತ್ಯಂತ ಆಕರ್ಷಣೀಯವಾಗಿರುವ ಮತ್ತು ಶಿಲ್ಪ ಶಾಸ್ತ್ರದ ತಾಳಮಾನಕ್ಕೆ ಅನುಗುಣವಾಗಿ ಒಂದು ನಂದಿಗೆ ಇರಬೇಕಾದಂತಹ ಎಲ್ಲಾ ಗುಣ ಲಕ್ಷಣಗಳೂ ಈ ನಂದಿಗೆ ಇರುವದಲ್ಲದೇ, ಹೊರಗಿನಿಂದ ಕೆತ್ತಿಸಿ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡದೇ, ಅಲ್ಲಿಯೇ ಇದ್ದ ಬೆಟ್ವನ್ನೇ ಕೊರೆದು ನಿರ್ಮಾಣ ಮಾಡಿರುವ ಈ ಏಕಶಿಲಾ ಮಹಾನಂದಿಯೇ ಅತ್ಯಂತ ಹೆಚ್ಚು ಸುಂದರವಾಗಿ ಕಾಣುತ್ತದೆ. ನಂತರದ ಸ್ಥಾನದಲ್ಲಿ ಬೆಂಗಳೂರಿನ ಬಸವನ ಗುಡಿಯ ಬಸವಣ್ಣ, ಹಳೇಬೀಡು ಮತ್ತು ಹಂಪಿಯ ಬಸವಣ್ಣ ಮುಂತಾದ ನಂದಿಗಳು ಬರುತ್ತವೆ. ಮುಂದೆ 1827ರಲ್ಲಿ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಈ ಮೆಟ್ಟಿಲುಗಳನ್ನು ನವೀಕರಿಸಲಾಯಿತು.
ಶಿವನ ವಾಹನವಾದ ಈ ನಂದಿಯ ಪ್ರತಿಮೆ ಸುಮಾರು 24 ಅಡಿ ಉದ್ದ 11 ಅಡಿ ಅಗಲ ಮತ್ತು 11 ಅಡಿ ಎತ್ತರವಾಗಿದ್ದು ಇದು ನಾಲ್ಕು ಅಡಿಯ ಎತ್ತರದ ಪೀಠದ ಮೇಲೆ ಬಲಗಾಲು ಮಾಡಿಚಿ ಕೊಂಡು ಮತ್ತು ಎಡಗಾಲು ಇನ್ನೇನೇ ಏಳಲು ಸಿದ್ಧವಾಗಿರುವಂತೆ ಆಸೀನವಾಗಿರುವಂತಹ ನಂದಿಯನ್ನು ಕೆತ್ತಲಾಗಿದ್ದು, ನಂದಿಯ ಸುತ್ತಲೂ ಸುಮಾರು ಜನರು ಪ್ರದಕ್ಷಿಣೆ ಮಾಡುವಷ್ಟು ವಿಶಾಲವಾದ ಸ್ಥಳವು ಅಲ್ಲಿದೆ. ಇಡೀ ಮಹಾ ನಂದಿ ವಿಗ್ರಹದಲ್ಲಿ ಸೂಕ್ಷ್ಮ ಕುಸುರಿ ಕೆತ್ತನೆಗಳ ಅಲಂಕಾರಗಳು ಎದ್ದು ಕಾಣುವಂತಿದ್ದು ಅದರಲ್ಲೂ ಕೊರಳಿನ ಸುತ್ತಲೂ ಕಟ್ಟಿರುವಂತಹ ಗೆಚ್ಚೆಗಳು ಕೊರಳಿನ ಗಂಟೆ, ಕಾಲ್ಕಡಗ ಮತ್ತು ಹಸುವಿನ ಗೂರಸುಗಳನ್ನು ಅತ್ಯಂತ ಸ್ಪಷ್ಟವಾಗಿ ಕಾಣಬಹುದಾಗಿದ್ದು ಇದು ಅನಾಮಿಕ ಶಿಲ್ಪಿಯ ಕಲಾವಂತಿಕೆ ಮತ್ತು ಸೃಜನಶೀಲತೆಯನ್ನು ಎತ್ತಿ ತೋರಿಸುತ್ತದೆ. ಹೀಗೆ ಮಹಾಬಲನ ಕ್ಷೇತ್ರವಾಗಿದ್ದ ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಶಿವ ದೇವಾಲಯಗಳಲ್ಲಿಯೂ ಶಿವನ ಮುಂದೆ ಶಿವನ ವಾಹನ ನಂದಿಯು ಇರುವಂತೆ ಇಲ್ಲಿಯೂ ಸಹಾ ಈ ಬೃಹದಾಕಾರದ ನಂದಿಯನ್ನು ನಿರ್ಮಾಣಮಾಡಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಎತ್ತರದ ಯಾವುದೇ ಮೇಲ್ಛಾವಣಿ ಇಲ್ಲದೇ ಮಳೆ, ಬಿಸಿಲು ಗಾಳಿಯ ರಭಸಕ್ಕೆ ಸಿಕ್ಕಿರುವುದಲ್ಲದೇ, ಭಕ್ತಾದಿಗಳು ಭಕ್ತಿಯಿಂದ ಅದರ ಮೇಲೆ ಸುರಿಯುತ್ತಿದ್ದ ಎಣ್ಣೆಯಿಂದಾಗಿ ಬಹಳ ಕಪ್ಪಾಗಿ ಕಾಣುತ್ತಿದ್ದ ಈ ನಂದಿಗೆ ಕೆಲ ವರ್ಷಗಳ ಹಿಂದೆ Sand blast ಮಾಡಿಸುವ ಮೂಲಕ ಅದರ ಮೇಲಿದ್ದ ಎಲ್ಲಾ ರೀತಿಯ ಕಲೆಗಳನ್ನೂ ತೆಗೆದು ಹಾಕಿ ಮೂಲ ಪ್ರತಿಮೆಯು ಸುಂದರವಾಗಿ ಕಾಣುವಂತೆ ಮಾಡಿದ್ದಾರೆ.
ಪ್ರತೀ ವರ್ಷ ಕಾರ್ತೀಕ ಮಾಸದ 3ನೇ ಸೋಮವಾರದ ಹಿಂದಿನ ದಿನ ಭಾನುವಾರದಂದು ಬಹಳ ಸಂಭ್ರಮ ಸಡಗರಗಳಿಂದ ಮತ್ತು ಅದ್ದೂರಿಯಿಂದ ಮಹಾಭಿಷೇಕ ಬೆಟ್ಟದ ಬಳಗ ಚಾರಿಟೇಬಲ್ ಟ್ರಸ್ಟ್, ಸುತ್ತೂರು ಶ್ರೀ ದೇಶೀಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ಶಾಖಾ ಮಠದ ಶ್ರೀಗಳು, ಹೊಸಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮಹಾನಂದಿಗೆ ಲೋಕ ಕಲ್ಯಾಣಾರ್ಥವಾಗಿ ಮತ್ತು ಸಕಲರ ಒಳಿತಿಗಾಗಿ ಚಾಮುಂಡೇಶ್ವರಿ ಮತ್ತು ಮಹಾ ನಂದಿಗೆ ಪಂಚಾಮೃತ ಸ್ನಾನ, ಫಲಾಮೃತ, ರಸಾಂಮೃತ, ಗಂಧ ಪಂಚಾಭಿಷೇಕ, ಪಂಚಾಕಾಭಿಷೇಕ, ಸುಗಂಧ ದ್ರವ್ಯ ಅಭಿಷೇಕ ಸೇರಿದಂತೆ ಹತ್ತಾರು ಬಗೆಯ ಅಭಿಷೇಕಗಳನ್ನು ಮಾಡುವ ಸಂಪ್ರದಾಯವನ್ನು ಕಳೆದ ೨೦ಕ್ಕೂ ಅಧಿಕ ವರ್ಷಗಳಿಂದ ರೂಡಿಯಲ್ಲಿಟ್ಟುಕೊಂಡಿದ್ದು, ಚಾಮುಂಡಿ ಬೆಟ್ಟದ ಈ ಮಹಾನಂದಿಯ ಮಹಾಭಿಷೇಕಕ್ಕೆ ಮೈಸೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಿಂದ ಸಾವಿರಾರು ಜನರು ಅಲ್ಲಿಗೆ ಬಂದು ಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದವನ್ನು ಸ್ವೀಕರಿಸಿ ಸಂತೃಪ್ತರಾಗುತ್ತಾರೆ.
ಉಳಿದಂತೆ ಪ್ರತೀ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಅಲ್ಲಿರುವ ಅರ್ಚಕರು ಮಹಾನಂದಿಗೆ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸುವುದಲ್ಲದೇ, ಅಗತ್ಯ ಇರುವವರಿಗೆ ಭಯವನ್ನು ಹೋಗಲಾಡಿಸಿ ಧೈರ್ಯವನ್ನು ತುಂಬಬಲ್ಲಂತಹ ನಂದೀ ದಾರವನ್ನೂ ಸಹಾ ಕಟ್ಟುವ ಪರಿಪಾಠವಿದೆ. ಮೆಟ್ಟಿಲುಗಳನ್ನು ಹತ್ತಿ ಬಸವಳಿದವರಿಗೆ ದಣಿವಾರಿಸಿಕೊಳ್ಳುವ ಸಲುವಾಗಿ ಮಹಾ ನಂದಿಯ ಅಕ್ಕ ಪಕ್ಕದಲ್ಲೇ ಬಾಟೆಲ್ ನೀರು, ಕಬ್ಬಿನ ಹಾಲು, ವಿವಿಧ ರೀತಿಯ ತಂಪುಪಾನೀಯಗಳು ಮತ್ತು ಕತ್ತರಿಸಿದ ಹಣ್ಣುಗಳೂ ಸಹಾ ಲಭ್ಯವಿದೆ.
ಈ ಮಹಾ ನಂದಿಯ ದರ್ಶನವನ್ನು ಪಡೆಯಲು ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಮಾರ್ಗದ ಮಧ್ಯೆ ಬಲಕ್ಕೆ ತಿರುಗುವ ರಸ್ತೆ ಹಾಳಾಗಿರುವ ಕಾರಣ ಬಹಳ ದಿನಗಳಿಂದಲೂ ನಿರ್ಭಂಧಿಸಿರುವ ಕಾರಣ ಮೆಟ್ಟಿಲುಗಳನ್ನು ಹತ್ತಿ ಕೊಂಡು ಬರುವವರು ಇಲ್ಲವೇ ಚಾಮುಂಡಿ ಬೆಟ್ಟದ ಹಿಂದಿರುವ ಮೈಸೂರು ರಿಂಗ್ ರಸ್ತೆಯ ಮೂಲಕವಿರುವ ಮತ್ತೊಂದು ರಸ್ತೆಯಲ್ಲಿ ಬಂದಲ್ಲಿ ನೇರವಾಗಿ ನಂದಿಯ ದರ್ಶನವನ್ನು ಪಡೆದುಕೊಂಡು ನಂತರ ಮತ್ತೆ ಸ್ವಲ್ಪ ದೂರ ಹಿಂದೆ ಬಂದು ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿ ಚಾಮುಂಡೇಶ್ವರಿಯ ದರ್ಶನವನ್ನು ಪಡೆಯಬಹುದಾಗಿದೆ.
ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಕುಟುಂಬ ಸಮೇತ ಮೈಸೂರಿಗೆ ಹೋಗಿ ಅಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಸಂಧರ್ಭದಲ್ಲಿ ಮಹಾನಂದಿಯ ದರ್ಶನವನ್ನೂ ಪಡೆದು ನಿಮ್ಮ ಅನುಭವವನ್ನು ನಮ್ಮೊಂಡಿಗೆ ಹಂಚಿಕೊಳ್ತೀರಿ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಉತ್ತಮ ವಿವರಣೆ ಮತ್ತು ನಿಜ ಇತಿಹಾಸ ಕುರಿತ ಅತ್ಯುತ್ತಮ ಲೇಖನ ಅಭಿನಂದನೆಗಳು
LikeLike