ನಾವೆಲ್ಲಾ ಚಿಕ್ಕವರಿದ್ದಾಗ ನಾವೇನಾದರೂ ತಪ್ಪು ಮಾಡಿದಲ್ಲಿ ಅಥವಾ ಹಠ ಮಾಡಿದಲ್ಲಿ ಪೋಲೀಸರಿಗೆ ಹಿಡಿದು ಕೊಡ್ತೀವಿ ಎಂದು ಭಯ ಪಡಿಸುತ್ತಿದ್ದದ್ದು ಸಹಜವಾಗಿತ್ತು. ಇತ್ತೀಚೆಗೆ ಸಣ್ ವಯಸ್ಸಿನ ಮಗುವೊಂದು ದಾರಿಯಲ್ಲಿ ಹಠ ಮಾಡುತ್ತಿದ್ದಾಗ ಅಲ್ಲೇ ಹೋಗುತ್ತಿದ್ದ ಪೋಲೀಸರನ್ನು ತೋರಿಸಿ ಇದೇ ರೀತಿ ಗಲಾಟೆ ಮಾಡುತ್ತಿದ್ದರೆ, ಆ ಪೋಲೀಸರಿಗೆ ಹಿಡಿದು ಕೊಡುತ್ತೇನೇ ಎಂಬುದನ್ನು ಕೇಳಿಸಿಕೊಂಡ ಆ ಪೋಲಿಸರು ಅಮ್ಮಾ, ಸುಖಾ ಸುಮ್ಮನೇ ಮಕ್ಕಳಿಗೆ ಪೋಲೀಸರನ್ನು ಕಂಡರೆ ಭಯ ಹುಟ್ಟಿಸ ಬೇಡಿ. ಚಂದಮಾಮನಂತೆ ನಾವು ಪೋಲೀಸ್ ಮಾಮ ಎಂದು ಹೇಳಿಕೊಡಿ. ಏಕೆಂದರೆ ನಾವೂ ಸಹಾ ಸಹಜವಾದ ಮನುಷ್ಯರೇ ಎಂದು ಹೇಳುತ್ತಲೇ ತಮ್ಮ ಜೋಬಿನಲ್ಲಿದ್ದ ಚಾಕಲೇಟ್ ಒಂದನ್ನು ಆ ಮಗುವಿನ ಕೈಗಿತ್ತು, ಮಗೂ ನಾನು ಪೋಲಿಸ್ ಮಾಮ ಹೇಳ್ತಾ ಇದ್ದೀನಿ. ಹೀಗೆಲ್ಲಾ ಗಲಾಟೆ ಮಾಡಿ ಅಮ್ಮನಿಗೆ ತೊಂದರೆ ಕೊಡಬಾರದು ಎಂದು ಹೇಳಿ ಮಗುವನ್ನು ಸಮಾಧಾನ ಪಡಿಸಿದ್ದರು. ಪೋಲೀಸರ ಬಗ್ಗೆ ಪೂರ್ವಾಗ್ರಹ ಪೀಡಿತನಾಗಿಯೇ ಇರುವವರು ಇಂತಹ ದೃಶ್ಯವನ್ನು ನೋಡಿ ಪೋಲಿಸರಲ್ಲಿಯೂ ಇಂತಹ ಒಳ್ಳೆಯವರು ಇರುತ್ತಾರೆಯೇ? ಎಂದು ಮೂಗಿನ ಮೇಲೆ ಬೆರಳಿಡುವಂತಾಗಿತ್ತು.
ಅದೇ ರೀತಿಯಲ್ಲಿ ಕೆಲ ವರ್ಷಗಳ ಹಿಂದೆ weekend with ramesh ಕಾರ್ಯಕ್ರಮದಲ್ಲಿ infosys ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿಗಳು ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದ ಜನ, ಶಿಸ್ತು ಸಂಯಮ ಕಾಪಾಡುವುದು ಸ್ವಲ್ಪ ಕಡಿಮೆ ಅವರು ಸದಾ ಕಾನೂನು ಮುರಿಯುವುದರಲ್ಲಿಯೇ ಹೆಚ್ಚಿನ ಸಂತೋಷ ಪಡುತ್ತಾರೆ ಎಂಬರ್ಥದಲ್ಲಿ ಹೇಳಿದ್ದನ್ನು ಕೇಳಿದಾಗ, ಅರೇ ಈ ಮನುಷ್ಯ ಸದಾ ಕಾಲವೂ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ಇರ್ತಾರಲ್ಲಾ ಎಂದೆನಿಸಿದರೂ, ನಿಧಾನವಾಗಿ ಆಲೋಚಿಸಿದಾಗ ಅವರು ಹೇಳಿದ್ದು ಸರಿಯೇ ಎನಿಸಿತು. ಕಾನೂನು ಭಂಜಕರನ್ನು ಕಾನೂನಾತ್ಮವಾಗಿ ಪರಿಪಾಲಿಸಲು ಮತ್ತು ಅವರು ಹದ್ದು ಮೀರಿದಾಗ ಸರಿದಾರಿಗೆ ತರಲು ನಮ್ಮ ಸಮಾಜದಲ್ಲಿ ಆರಕ್ಷಕರ ಪಾತ್ರ ಬಹಳ ಪ್ರಮುಖವಾದದ್ದು ಮತ್ತು ಅವರ ಶ್ರಮದ ಬಗ್ಗೆ ನಮಗೆ ಅಪಾರವಾದ ಗೌರವಿದೆ. ಕರ್ನಾಟಕ ಪೋಲೀಸ್ ಇಲಾಖೆ ಇಡೀ ದೇಶದಲ್ಲಿ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕರು ಎಂದು ಈಗಾಗಲೇ ಹಲವಾರು ಸಂದರ್ಭದಲ್ಲಿ ಸಾಭೀತಾಗಿದೆ.
ಆದರೆ 26.05.2025ರಂದು ಮಂಡ್ಯ ನಗರದ ಸ್ವರ್ಣಸಂದ್ರದ ಬಳಿ ಸಂಚಾರಿ ಪೊಲೀಸರು ತಪಾಸಣೆ ನಡೆಸುವ ಸಂದರ್ಭದಲ್ಲಿ ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ವಾಣಿ- ಮಹೇಶ್ (ಅಶೋಕ್) ದಂಪತಿಯ ಮೂರುವರೆ ವರ್ಷದ ಹೆಣ್ಣು ಮಗು ರಿತೀಕ್ಷಾ ಅದೇ ಪೋಲಿಸರೊಬ್ಬರ ಅಮಾನವೀಯ ದುರ್ವತನೆಯಿಂದ ಸಾವಿಗೀಡಾಗಿರುವ ಘಟನೆ ನಡೆದಿದ್ದು ಆ ರಕ್ಷಕರ ಅಮಾನವೀಯತೆಯಿಂದಾಗಿ ಬಾಳಿ ಬೆಳಗಾಗಬೇಕಿದ್ದ ಹೆಣ್ಣು ಮಗುವಿನ ಸಾವಿಗೆ ಕಾರಣೀಭೂತರಾಗಿದ್ದಾರೆ.
ಗೊರವನಹಳ್ಳಿಯ ರತೀಕ್ಷಾಳಿಗೆ ನಾಯಿ ಕಡಿದಿತ್ತು. ಕೂಡಲೇ ಆಕೆಗೆ ಚಿಕಿತ್ಸೆಯನ್ನು ಕೊಡಿಸುವ ಸಲುವಾಗಿ ಆಕೆಯ ಪೋಷಕರಾದ ವಾಣಿ ಮತ್ತು ಮಹೇಶ್ ಅವರು ಬೈಕಿನಲ್ಲಿ ಕರೆದು ಕೊಂಡು ಹೊರಟಿದ್ದಾರೆ. ಹೊರಡುವ ದಾಂವತದಲ್ಲಿ ಅವರಿಬ್ಬರೂ ತಲೆಗೆ ಶಿರಸ್ತ್ರಾಣವನ್ನು ಧರಿಸದೇ ಹೋಗುತ್ತಿದ್ದ ಸಂದರ್ಭದಲ್ಲಿ ಸ್ವರ್ಣಸಂದ್ರದ ಬಳಿ ಸಂಚಾರಿ ಪೊಲೀಸರು ಬೈಕಿನ ತಪಾಸಣೆಗೆ ಅಡ್ಡಗಟ್ಟಿದ್ದಾರೆ. ಆಗ ಮಹೇಶ್ ಪೊಲೀಸರೊಂದಿಗೆ ಮಾತನಾಡಿ ನನ್ನ ಮಗಳಿಗೆ ನಾಯಿ ಕಚ್ಚಿರುವುದರಿಂದ, ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಕಾರಣ ಹೆಲ್ಮೆಟ್ ಧರಿಸಿಲ್ಲಾ ಎಂದು ಕ್ಷಮೆ ಯಾಚಿಸಿದ್ದನ್ನು ಮನ್ನಿಸಿದ ಆ ಪೊಲೀಸರು ಅವರಿಗೆ ತೆರಳಲು ಅವಕಾಶ ನೀಡಿದ್ದಾರೆ. ಆದರೆ ಸ್ವಲ್ಪ ಮುಂದೆ ಬಂದ ನಂತರ ಮತ್ತೊಬ್ಬ ಪೊಲೀಸ್, ಬೈಕಿನಲ್ಲಿದ್ದ ಮಹೇಶ್ ಅವರನ್ನು ಅಮಾನವೀಯವಾಗಿ ಮತ್ತು ಅಷ್ಟೇ ಅಚಾನಕ್ಕಾಗಿ ಕೈ ಹಿಡಿದು ಎಳೆದ ಪರಿಣಾಮ ಮಗು ಆಯಾ ತಪ್ಪಿ ರಸ್ತೆಗೆ ಬೀಳುತ್ತಿದ್ದಂತೆಯೇ, ಆದೇ ರಸ್ತೆಯಲ್ಲಿ ಹಿಂದೆ ಬರುತ್ತಿದ್ದ ನಂದಿನಿ ಹಾಲಿನ ವಾಹನ ಆ ಪುಟ್ಟ ಕಂದನ ಮೇಲೆ ಹರಿದು, ತನ್ನ ತಂದೆ ತಾಯಿಯರ ಕಣ್ಣ ಮಂದೆಯೇ ಅಪ್ಪಚ್ಚಿಯಾಗಿ ಸ್ಥಳದಲ್ಲೆ ಸಾವನ್ನಪ್ಪಿದೆ.
ಪೋಲೀಸರ ಈ ಅಮಾನವೀಯ ಕುಕೃತ್ಯದಿಂದಾಗಿ ರೊಚ್ಚಿಗೆದ್ದ ಸಾರ್ವಜನಿಕರು ಮತ್ತು ಪೋಷಕರು ಮಂಡ್ಯ ಜಿಲ್ಲಾಸ್ಪತ್ರೆ ಮುಂಭಾಗದ ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ ಪರಿಣಾಮ ಹೆದ್ದಾರಿ ಕೆಲಕಾಲ ಅಸ್ತವ್ಯಸ್ಥವಾಗಿದೆ. ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಂಡ್ಯ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಈ ಘಟನೆಗೆ ಕಾರಣೀಭೂತರದ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯ ಮೂವರು ಎಎಸ್‌ಐಗಳಾದ ಜಯರಾಮ್, ನಾಗರಾಜು ಹಾಗೂ ಗುರುದೇವ್ ಎಂಬುವವರನ್ನು ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ. ಆ ಕ್ಷಣದಲ್ಲಿ ಜನರ ದಿಕ್ಕನ್ನು ತಪ್ಪಿಸುವ ಸಲುವಾಗಿ ಈ ರೀತಿಯ ಅಮಾನತು ಎಂಬ ಪ್ರಸಸನ ನಡೆದು ಕಾಟಾಚಾರಕ್ಕೆ ಈ ಕುರಿತಾಗಿ ತನಿಖೆ ನಡೆದು, ಕೆಲವು ದಿನಗಳ ನಂತರ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಂದಿನಂತೆ ಆದೇ ಪೋಲೀಸರು ಕೆಲಸಕ್ಕೆ ಹಾಜರಾಗುತ್ತಾರೆ. ಆದರೆ ಇನ್ನೂ ಹತ್ತಾರು ವರ್ಷಗಳ ಕಾಲ ಬಾಳಿ ಬೆಳಗಾಗಬೇಕಿದ್ದ ಆ ಪುಟ್ಟ ಕಂದಮ್ಮನ ಪ್ರಾಣಹಾನಿಗೆ ಹೊಣೆಯನ್ನು ಹೊರುವವರು ಯಾರು?
ಇಡೀ ದೇಶವೇ ಡಿಜಿಟಲ್ ಇಂಡಿಯಾ ಎಂದು ಡಿಜಿಟಲೀಕರಣದತ್ತ ಹೋಗುತ್ತಿದೆ. ಪೋಲೀಸ್ ಇಲಾಖೆಯೂ ಸಹಾ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕಂಡ ಕಂಡ ಕಡೆಯಲ್ಲೆಲ್ಲಾ AI Camera ಅಳವಡಿಸಿ ಅದರ ಮೂಲಕ ತಪ್ಪಿತಸ್ಥರನ್ನು ಕಂಡು ಹಿಡಿದು online ಮೂಲಕ Fine ಕಟ್ಟಿಸಿಕೊಳ್ಳುವ ಪದ್ದತಿಯನ್ನು ರೂಢಿ ಮಾಡಿಕೊಂಡಿದ್ದರೂ, ವಿಷಾಧನೀಯವಾದ ಸಂಗತಿಯಿಂದರೆ ಪೋಲೀಸ್ ಇಲಾಖೆಯಲ್ಲಿರುವ ಇನ್ನೂ ಅನೇಕರಿಗೆ ಡಿಜಿಟಲ್ ವ್ಯವಸ್ಥೆ ಅಪಸವ್ಯವೇ ಆಗಿದೆ. ಇತ್ತೀಚೆಗೆ ಸಣ್ಣ ಸಣ್ಣ ತಪ್ಪುಗಳಿಗೂ ದುಬಾರಿ ದಂಡವನ್ನು ಸರ್ಕಾರವೇ ಹೇರಿರುವುದೂ ಸಹಾ ಕೆಲವು ಧೂರ್ತ ಪೋಲೀಸರಿಗೆ ವರದಾನವಾಗಿದ್ದು. ಕಂಡ ಕಂಡ ಕಡೆಯಲ್ಲೆಲ್ಲಾ ಸಾರ್ವಜನಿಕರನ್ನು ತಡೆಹಾಕಿ ಹಿಂದೆಲ್ಲಾ 50-100 ಲಂಚ ಜೋಬಿಗಿಳಿಸಿಕೊಳ್ಳುತ್ತಿದ್ದವರು, ಈಗ ಏನಿದ್ದರೂ 500-1000ಕ್ಕೆ ಬಂದಿದ್ದಾರೆ. ಲಂಚ ಕೊಡಲು ಹಣ ಇಲ್ಲಾ ಎಂದರೆ ದುಬಾರಿ ದಂಡ ಹಾಕುವುದಾಗಿ ಬೆದರಿಸಿ PhonePay, Gpayಗಳ ಮೂಲಕ online money Transfer ಮಾಡಿಸಿಕೊಳ್ಳುವ ಪೋಲೀಸರೂ ಇದ್ದಾರೆ.
“rules are meant to be broken” ಎಂಬ ಆಂಗ್ಲ ನುಡಿಯು, ಕಾನೂನುಗಳು ಇರುವುದೇ ಮುರಿಯಲೆಂದೇ ಎಂಬ ಅರ್ಥ ಬರುವುದಾದರೂ, ನಿಯಮಗಳು ಮುಖ್ಯವಾಗಿದ್ದರೂ, ಕೆಲವೊಮ್ಮೆ ಅವುಗಳಿಂದ ವಿಮುಖವಾಗುವುದೂ ತಪ್ಪಲ್ಲಾ ಅಥವಾ ಅದು ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಾಗಿರಬಹುದು. ಹಾಗಾಗಿ ಅಪ್ಪಾ ಹಾಕಿದ ಆಲದ ಮರ ಎಂದು ಎಲ್ಲಾ ಸಮಯದಲ್ಲೂ ಅದೇ ನಿಯಮಗಳಿಗೆ ಜೋತು ಬೀಳದೇ ಸಮಯ ಸಂಧರ್ಭಗಳನ್ನು ನೋಡಿ ಮಾನವೀಯತೆ ದೃಷ್ಟಿಯಿಂದ ಕೆಲವು ಸಮಯ ನಿಯಮಗಳ ಸಡಿಲಿಕೆಯನ್ನು ಮಾಡಬೇಕಾಗುತ್ತದೆ. ಪರಿಸ್ಥಿತಿಯ ಅನುಗುಣವಾಗಿ ಇಂತಹ ನಿಯಮಗಳ ಸಡಿಲಿಕೆಗೆ ಪೋಲೀಸ್ ಇಲಾಖೆಯಲ್ಲಿಯೂ ಕಾನೂನಾತ್ಮಕವಾಗಿ ಅವಕಾಶವಿದೆ.
ದುರಾದೃಷ್ಟವಷಾತ್, ಕೆಲವು ಅನುಕೂಲಸಿಂಧು ಧೂರ್ತ ಪೋಲೀಸರು ವರ್ಷಕ್ಕೆ 13 ತಿಂಗಳುಗಳ ಸಂಬಳವನ್ನು (ವರ್ಷದ 365 ದಿನಗಳೂ ಹಬ್ಬ ಹರಿದಿನ, ಚಳಿ, ಮಳೆ ಗಾಳಿ ಎಂಬುದನ್ನು ಲೆಖ್ಖಿಸದೇ ರಜಾ ಇಲ್ಲದೇ ಕೆಲಸ ಮಾಡುತ್ತಾರೆ ಎಂದು ಒಂದು ತಿಂಗಳ ಹೆಚ್ಚಿನ ಸಂಬಳವನ್ನು ಕೊಡಲಾಗುತ್ತದೆ) ಸರ್ಕಾರದಿಂದ ಪಡೆದರೂ ಹೆಚ್ಚಿನ ಆದಾಯಕ್ಕಾಗಿ ರಸ್ತೆಯ ಬದಿಯಲ್ಲಿ ಕಳ್ಳರಂತೆ ಕದ್ದು ಮುಚ್ಚಿಕೊಂಡು ನಿಂತು ಇಂತಹ ಅವಘಡಗಳಿಗೆ ಕಾರಣೀಭೂತರಾಗುತ್ತಾರೆ. ಈ ರೀತಿಯಾಗಿ ಪೋಲೀಸ ತಪಾಸಣೆಗೆ ಬೆದರಿಯೇ ನೂರಾರು ಅಪಘಾತಗಳಾಗಿರುವ ವಿಷಯ ತಿಳಿದಿದ್ದರೂ, ಎಂಜಿಲು ಕಾಸಿನಾಸೆಗೆ ಸರ್ಕಾರೀ ಸಮವಸ್ತ್ತದಲ್ಲಿ ಹಗಲು ದರೋಡೆಗೆ ಇಳಿಯುವುದು, ಇನ್ನೂ ಕೆಲವು ಸಲ ವಾಹನಗಗಳ ಕೀಲಿ ಕೈ ತೆಗೆದುಕೊಂಡು ಸತಾಯಿಸುವುದು, ಅನಾವಶ್ಯಕವಾಗಿ ಅವಾಚ್ಯ ಪದಗಳಲ್ಲಿ ನಿಂದಿಸುವುದು, ಹಿಂದಿನಿಂದ ಲಾಠಿಯಲ್ಲಿ ಹೊಡೆಯುವುದು (ಈ ರೀತಿಯ ಹೊಡೆತದಿಂದಾಗಿ ಅದೆಷ್ಟೋ ಜನರ ಬೆನ್ನು, ಸೊಂಟ ಮತ್ತು ಕುತ್ತಿಗೆಗಳಿಗೆ ಶಾಶ್ವತವಾಗಿ ನೋವನ್ನು ಅನುಭವಿಸುವಂತಾಗಿದೆ) ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.
ಹಾಗೆಂದ ಮಾತ್ರಕ್ಕೆ ಪೋಲಿಸರು ಮಾಡುವುದೆಲ್ಲವೂ ತಪ್ಪು ಎಂದೂ ಸಹಾ ಹೇಳುತ್ತಿಲ್ಲ. ಅನೇಕ ಬಾರಿ ಸಿಗ್ನಲ್ ಗಳಲ್ಲಿ ಪೋಲೀಸರು ಇದ್ದರೆ ಮಾತ್ರವೇ ನಮ್ಮ ಜನರು ಕೆಂಪು ದೀಪ ಇದ್ದಾಗ ನಿಲ್ಲುತ್ತಾರೆ. ಅಕಸ್ಮಾತ್ ಆ ಪ್ರದೇಶದಲ್ಲಿ ಪೋಲೀಸರು ಇಲ್ಲದೇ ಹೋದಲ್ಲಿ ಕೆಂಪು ದೀಪವಿದ್ದರೂ ರಾಜಾರೋಷವಾಗಿ ಜೋರಾಗಿ ಹಾರ್ನ್ ಮಾಡುತ್ತಾ ಸಿಗ್ನಲ್ ಜಂಪ್ ಮಾಡುವವರಿಗೇನೂ ಕಡಿಮೆ ಇಲ್ಲಾ. ಅಂತಹ ಸಂಧರ್ಭಗಳಲ್ಲಿ ಈ ಮೊದಲು ಹೇಳಿದಂತೆ ದಂಡಂ ದಶಗುಣಂ ಎನ್ನುವಂತೆ ದಿಜಿಟಲ್ ವ್ಯವಸ್ಥೆಯ ಮೂಲಕ ದಂಡ ಹಾಕಲೇ ಬೇಕು ಎನ್ನುವುದೇ ನಮ್ಮ ವಾದವಾಗಿದೆ.
ಒಬ್ಬ ನಿವೃತ್ತ ಪೋಲೀಸ್ ಅಧಿಕಾರಿಯ ಅಳಿಯನಾಗಿ ಖುದ್ಧಾಗಿ ನಾನು ಕಂಡು ಕೊಂಡಿರುವ ಸತ್ಯವೇನೆಂದರೆ ಎಲ್ಲಾ ಪೋಲಿಸರೂ ಕೆಟ್ಟವರೇನಲ್ಲ. ಹಬ್ಬ ಹರಿದಿನಗಳು ಎನ್ನದೇ, ಮಳೆ ಚಳಿ, ಗಾಳಿ ಎನ್ನದೇ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಪೋಲೀಸರ ಪಾತ್ರ ನಿಜಕ್ಕೂ ಅನನ್ಯವಾಗಿದೆ. ಸಣ್ಣ ಪುಟ್ಟ ಕೌಟುಂಬಿಕ ಸಮಸ್ಯೆಗಳನ್ನು, ಪ್ರೀತಿ ಪ್ರೇಮ ಪ್ರಣಯದ ಸಂಗತಿಗಳನ್ನು ಠಾಣೆಗಳಲ್ಲೇ ಸೌಹಾರ್ದಯುವಾಗಿ ಪರಿಹರಿಸಿದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಪೋಲೀಸ್ ಇಲಾಖೆಯಲ್ಲೂ ಅನೇಕ ದಕ್ಷ ಅಧಿಕಾರಿಗಳು, ಹೃದಯವಂತರು, ಕವಿ ಮನಸ್ಸಿನವರು, ಹಾಡುಗಾರರು, ಕ್ರೀಡಾಪಟುಗಳು, ನಟರುಗಳನ್ನು ಕಾಣ ಬಹುದಾಗಿದೆ. ಹಣ್ಣುಗಳ ಬುಟ್ಟಿಯಲ್ಲಿ ಒಂದೆರಡು ಕೊಳೆತ ಹಣ್ಣುಗಳು ಇಡೀ ಬುಟ್ಟಿಯಲ್ಲಿನ ಹಣ್ಣುಗಳನ್ನು ಕೆಡಿಸುವುದಲ್ಲದೇ, ಕೊಳೆತು ನಾರುವ ಮೂಲಕ ಇಡೀ ವಾತಾವರಣವನ್ನೇ ಕೆಡಿಸುವಂತೆ, ಎಲ್ಲೋ ನೂರರಲ್ಲಿ ನಾಲ್ಕೈದು ಆ ರೀತಿಯ ಕೆಟ್ಟ ಪೋಲಿಸರಿಂದಾಗಿ ಇಡೀ ಪೋಲೀಸರ ಬಗ್ಗೆಯೇ ಜನಸಾಮಾನ್ಯರಿಗೆ ಅಸಹ್ಯ ಉಂಟಾಗುತ್ತಿರುವುದು ನಿಜಕ್ಕೂ ಛೇದಕರವಾಗಿದೆ.
ಜನ ಸಾಮಾನ್ಯರು ಪೋಲಿಸರೂ ಸಹಾ ಮನುಷ್ಯರೇ! ಎಂದೂ ಮತ್ತು ಪೋಲೀಸರೂ ಎಲ್ಲಾ ಜನಸಾಮಾನ್ಯರೂ ಅಪರಾಧಿಗಳಲ್ಲಾ! ಎಂದು ಭಾವಿಸಿ, ಅಣ್ಣ ಬಸವಣ್ಣನವರು ಹೇಳಿರುವಂತೆ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡು ಪೋಲೀಸರು ಜನ ಸಾಮಾನ್ಯರೊಂದಿಗೆ ಮಾನವೀಯತೆ ದೃಷ್ಟಿಯಿಂದ ಸೌಮ್ಯದಿಂದ ವರ್ತಿಸಿದಲ್ಲಿ ಎಲ್ಲವೂ ಸುಗಮವಾಗಿ ಸಾಗಿ ಸಮಾಜದ ಸ್ವಾಸ್ಥ್ಯವೂ ಸುಗಮವಾಗಿರುತ್ತದೆ ಎನ್ನುವ ಆಶಯದೊಂದಿಗೆ ಬಾಳಿ ಬೆಳಕಾಗಬೇಕಾಗಿದ್ದ ಪುಟಾಣಿ ರತೀಕ್ಷಾಳ ಆತ್ಮಕ್ಕೆ ಭಗವಂತ ಸದ್ಗತಿಯನ್ನು ಕೊಡಲಿ ಮತ್ತು ಒಬ್ಬ ಪೋಲೀಸನ ಅಮಾನವೀಯತೆಯಿಂದಾಗಿ ಮಗಳ ಕಳೆದುಕೊಂಡ ರತೀಕ್ಷಾಳ ಪೋಷಕರಾದ ವಾಣಿ ಮತ್ತು ಮಹೇಶ್ ದಂಪತಿಗಳಿಗೆ ಮಗಳ ಅಕಾಲಿಕ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಪೋಲಿಸರ ಅಳಿಯ, ಉಮಾಸುತ