ಹೇಳಿ ಕೇಳಿ ನಮ್ಮ ದೇಶದಲ್ಲಿ ಶ್ರದ್ಧಾವಂತ ಆಸ್ತಿಕರೇ ಹೆಚ್ಚಾಗಿರುವ ದೇಶವಾಗಿದ್ದು, ಕರ್ನಾಟಕ ಅದರಲ್ಲೂ ಅಭಿಭಜಿತ ದಕ್ಷಿಣ ಕನ್ನಡವಂತೂ ಪರುಶುರಾಮ ಸೃಷ್ಟಿಸಿದ ಕ್ಷೇತ್ರವೆಂದೇ ಪ್ರಸಿದ್ಧವಾಗಿ, ದೇವಾಲಯಗಳ ತವರೂರು ಎನಿಸಿಕೊಂಡಿದೆ. ಹಿಂದೂ ಸಮಾಜವನ್ನು ಪುನರುತ್ಥಾನ ಗೊಳಿಸಿದ ಅಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀ ಕೃಷ್ಣ ಮಂದಿರವನ್ನು ಸ್ಥಾಪಿಸಿ ಅದರ ಸುತ್ತಲೂ ಅಷ್ಟ ಮಠಗಳಿಗೆ ಕಾರಣೀಭೂತರಾಗುತ್ತಾರೆ. ಒಂದು ಕಡೆ ಕರಾವಳಿಯ ಸಮುದ್ರ ಮತ್ತೊಂದು ಕಡೆ ಅಷ್ಟೇ ಸುಂದರವಾದ ಮತ್ತು ಪ್ರಕೃತಿಯ ಮಡಿಲಲ್ಲಿ ಶೋಭಿಸುತ್ತಿರುವ ಶ್ರೀಕ್ಷೇತ್ರವಾಗಿರುವ ಉಡುಪಿಯ ಪರಶುರಾಮ ಸೃಷ್ಟಿಯ ನಾಡಿನಲ್ಲಿ ನಾಗಾರಾಧನೆಯು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ತುಳುನಾಡಿನ ಜನರ ನಂಬಿಕೆಯ ಪ್ರಕಾರ ನಾಗಾರಾಧನೆಯು ಅನೇಕ ದುರಿತಗಳನ್ನು ಪರಿಹರಿಸಬಲ್ಲ ಶಕ್ತಿಯಾಗಿ ಜನಪ್ರಿಯತೆಯನ್ನು ಹೊಂದಿರುತ್ತದೆ ಎಂದೇ ನಂಬಲಾಗುತ್ತದೆ. ಹಾಗಾಗಿ ಬಹುತೇಕರ ಮನೆಯಂಗಳದಲ್ಲಿ ನಾಗ ಬನ ಅಥವಾ ನಾಗ ದೇವತೆಯ ಸಣ್ಣ ಗುಡಿಗಳಿದ್ದು ಅದನ್ನು ಬಹಳ ಶ್ರದ್ಧಾ ಭಕ್ತಿಗಳಿಂದ ಪೂಜಿಸುತ್ತಾರೆ.
ನಾಗ ದೇವರನ್ನು ನಂಬುವುದರಿಂದ ತಮ್ಮ ಕಷ್ಟಗಳನ್ನು ಪರಿಹರಿಸಿಕೊಂಡು ಮೇಲ್ಕಾಲದಲ್ಲಿ ಸುಖ, ಶಾಂತಿ, ನೆಮ್ಮದಿಗಳನ್ನು ಹೊಂದಬಹುದು ಎಂದು ನಂಬುವ ಭಕ್ತ ವರ್ಗದವರ ನಂಬಿಕೆಗಳನ್ನು ಸತ್ಯವಾಗಿರಿಸಿದ ಕೀರ್ತಿ ಇರುವ ಕ್ಷೇತ್ರವೇ ಉಡುಪಿಯ ಆಷ್ಟ ಮಠದಿಂದ ಕೇವಲ 2 ಕಿಲೋಮೀಟರ್ ದೂರವಿದ್ದು, ನೈಸರ್ಗದ ಸೌಂದರ್ಯದಿಂದ ಸುತ್ತುವರಿದಿರುವ ಕುಂಜಿಬೆಟ್ಟು ಸಗ್ರಿಯ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನವಾಗಿದೆ. ಸುಮಾರು ಶತಮಾನಗಳ ಇತಿಹಾಸವಿರುವ ಈ ಕ್ಷೇತ್ರವು ನಾಗ ಸಿದ್ಧಿಯನ್ನು ಪಡೆದ ಸಾಮಗ ವಂಶಸ್ಥರ ಮಾರ್ಗದರ್ಶನದಲ್ಲಿ ಬಹಳ ನೇಮ ನಿಷ್ಟೆಗಳಿಂದ ಅಚ್ಚುಕಟ್ಟಾಗಿ ನಡೆದು ಕೊಂಡು ಬಂದಿದೆ. ಕೀರ್ತಿಶೇಷ ದಿವಂಗತ ಅನಂತ ಸಾಮಗರ ಮಾರ್ಗದರ್ಶನದಲ್ಲಿ ಬಿಂಬ ಪ್ರತಿಷ್ಠೆಯನ್ನು ಹೊಂದಿ, ಬ್ರಹ್ಮಕಲಶದಿಂದ ಬಿಂಬದ ಚೈತನ್ಯವನ್ನು ಏರಿಸಿಕೊಂಡಿದ್ದು ಪ್ರಸ್ತುತ ಅವರ ಮೊಮ್ಮಗನಾದ ಶ್ರೀ ಗೋಪಾಲಕೃಷ್ಣ ಸಾಮಗರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರವು ಮತ್ತಷ್ಟು ಮಗದಷ್ಟು ಬೆಳಗುತ್ತಿದ್ದು ತಮ್ಮ ಅಜ್ಜನವರು ಹಾಕಿಕೊಟ್ಟ ದಾರಿಯಲ್ಲೇ ಸಕಲ ಭಕ್ತಾಭಿಮಾನಿಗಳ ಸಹಕಾರದಿಂದ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಪ್ರತಿ ನಿತ್ಯವೂ ಒಂದಲ್ಲಾ ಒಂದು ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಕಾಲ ಕಾಲಕ್ಕೆ ತಕ್ಕಂತೆ ನಾಗ ಪಂಚಮಿ, ಸುಬ್ರಹ್ಮಣ್ಯ ಷಷ್ಥಿ, ನವರಾತ್ರಿ ಮತ್ತು ದೇವಾಲಯದ ವಾರ್ಷಿಕೋತ್ಸವಗಳನ್ನು ಬಹಳ ಅದ್ದೂರಿಯಂದ ಆಚರಿಸಿಕೊಂಡು ಬಂದಿದ್ದಾರೆ.
ಉಡುಪಿಯ ಸಗ್ರಿಯಲ್ಲಿರುವ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನವು ಸರ್ಪಗಳ ರಾಜನಾದ ವಾಸುಕಿ ಮತ್ತು ಸುಬ್ರಹ್ಮಣ್ಯ ದೇವರಿಗೆ ಸಮರ್ಪಿತವಾಗಿದೆ. ದೇವಾಲಯದ ಇತಿಹಾಸವು ಕ್ಷೀರ ಸಾಗರ ಮಂಥನದಲ್ಲಿ ಅರ್ಥಾತ್ ಸಮುದ್ರ ಮಂಥನದ ಕಾಲದಲ್ಲಿ ಭಗವಾನ್ ವಾಸುಕಿಯ ಪಾತ್ರ ಮತ್ತು ನಂತರದ ಅವನ ವಿಶ್ರಾಂತಿ ಸ್ಥಳದ ಪುರಾಣದೊಂದಿಗೆ ಸಂಕೀರ್ಣವಾಗಿ ಸಂಬಂಧ ಹೊಂದಿದೆ. ಮಂಥನದ ನಂತರ ಭಗವಾನ್ ವಾಸುಕಿಯು ವಿಶ್ರಾಂತಿ ಪಡೆದ ದೇವಾಲಯಗಳಲ್ಲಿ ಇದೂ ಸಹಾ ಒಂದು ಎಂದೇ ನಂಬಲಾಗಿರುವ ಕಾರಣ, ಈ ದೇವಾಲಯವನ್ನು ಐತಿಹಾಸಿಕವಾಗಿ ಮಹತ್ವದ್ದಾಗಿ ಪರಿಗಣಿಸಲಾಗಿದೆ. ಈ ದೇವಾಲಯದ ಮೂಲವನ್ನು 16ನೇ ಶತಮಾನದಷ್ಟು ಹಿಂದಿನದು ಎಂದು ಗುರುತಿಸಬಹುದಾಗಿದ್ದು, ಈ ದೇವಾಲಯದ ಪ್ರಸ್ತುತ ರಚನೆಯನ್ನು 18 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು ಮತ್ತು 1997ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.
ಇಲ್ಲಿನ ದೇವಾಲಯ ಇತಿಹಾಸವೂ ಬಹಳ ರೋಚಕವಾಗಿದ್ದು ಅದಕ್ಕೆೆ ಎರಡು ಐತಿಹ್ಯದ ದೃಷ್ಟಾಂತಗಳನ್ನು ಇಲ್ಲಿನವರು ಹೇಳುತ್ತಾರೆ. ಮೊದಲನೆಯದಾಗಿ ಸುಮಾರು ಮೂರ್ನಾಲ್ಕು ಶತಮಾನಗಳ ಹಿಂದೆ ಇದೇ ಸಾಮಗ ವಂಶಸ್ಥರ ಪೂರ್ವಜರಲ್ಲೊಬ್ಬರು ನೀಲಾವರಕ್ಕೆ ಹೋಗುತ್ತಿದ್ದ ಮಾರ್ಗ ಮಧ್ಯದಲ್ಲಿ ಕಾಳ್ಗಿಚ್ಚಿನಲ್ಲಿ ಸಿಕ್ಕಿ ಸುಟ್ಟು ಕರಕಲಾಗುತ್ತಿರುವ ಸರ್ಪವೊಂದನ್ನು ಕಂಡು ಕೂಡಲೇ ತಮ್ಮ ಬಟ್ಟೆಯ ಸಹಾಯದಿಂದ ಆ ಹಾವನ್ನು ಬೆಂಕಿಯಿಂದ ಪಾರು ಮಾಡಿದರಂತೆ. ಹಾಗೆ ಮಾಡಿದ ಉಪಕಾರದಿಂದ ಸಂತೃಷ್ಟನಾದ ನಾಗದೇವರು, ಅದಕ್ಕೆ ಪ್ರತ್ಯುಪಕಾರವಾಗಿ ನಿಮಗೆ ಏನು ಬೇಕು? ನಗ, ನಾಣ್ಯ, ಆಸ್ತಿ ಅಂತಸ್ತು ಎಂದು ಕೇಳಿದಾಗ, ಸಮಚಿತ್ತದಿಂದ ಸಾಮಗರು ಭಗವಂತಾ, ಅಂತಹದ್ದೇನೂ ನಮಗೆ ಅವಶ್ಯಕತೆ ಇಲ್ಲಾ! ಆದರೆ ನೀನು ಸದಾ ಕಾಲವೂ ನಮ್ಮೊಂದಿಗೆ ಇದ್ದು, ನಿನ್ನ ಅನುಗ್ರಹದಿಂದ ನಮ್ಮ ವಂಶಜರಿಗೆ ವಾಕ್ ಸಿದ್ಧಿಯಾಗಬೇಕು. ತನ್ಮೂಲಕ ನಮ್ಮಿಂದ ಹತ್ತಾರು ಜನರಿಗೆ ಸದಾಕಾಲವೂ ಒಳ್ಳೆಯದಾಗುವಂತೆ ಮಾಡು ಎಂದು ಕೇಳಿಕೊಂಡಿದ್ದಕ್ಕೆ, ನಾಗದೇವರು ತಥಾಸ್ತು ಎಂದು ಹೇಳಿದ ಪರಿಣಾಮ ಇಂದಿಗೂ ಆ ಸಾಮಗರ ಬಳಿ ಪರಿಹಾರ ಕೇಳಿಕೊಂಡು ಬರುವವರಿಗೆ ಸಾಮಗರು ಹೇಳುವ ಬಹುತೇಕ ವಿಷಯಗಳು ನಿಜವಾಗುತ್ತದೆ ಎನ್ನುವುದೇ ಇಲ್ಲಿನ ಆಸ್ಥಿಕರ ನಂಬಿಕೆಯಾಗಿದೆ.
ಮತ್ತೊಂದು ದೃಷ್ಟಾಂತದ ಪ್ರಕಾರ ಶ್ರೀ ವಾದಿರಾಜರು ತಮ್ಮ ಅಮೃತ ಹಸ್ತದಿಂದ ಇದೇ ಸಾಮಗರ ಕುಟುಂಬದ ಪೂರ್ವಜರಿಗೆ ಸರ್ಪನಾಗಫಣ ನೀಡಿದ್ದು, ಅಂದಿನಿಂದ ಇಂದಿನವರೆಗೂ ವಾದಿರಾಜರು ಅನುಗ್ರಹಿಸಿದ ಆ ಸರ್ಪನಾಗಫಣವನ್ನು ಧರಿಸಿಕೊಂಡೇ ಸಾಮಗ ಕುಟುಂಬದವರು ದರ್ಶನ ಸೇವೆ ನಡೆಸುತ್ತಾ ಬಂದಿದ್ದು, ಅದರ ಅನುಗ್ರಹದ ಬಲದಿಂದಲೇ, ದೇವಾಲಯಕ್ಕೆ ಬಂದ ಭಕ್ತಾದಿಗಳ ಸಂಕಷ್ಟಗಳು ಸಾಮಗರ ಕುಟುಂಬಸ್ಥರಿಂದ ದೂರವಾಗುತ್ತಿದೆ ಎಂಬ ನಂಬಿಕೆ ಇದೆ.
ಇನ್ನು ಸಗ್ರಿಯ ಸಾಮಗರ ಕುಟುಂಬಕ್ಕೂ ಉಡುಪಿಯ ಅಷ್ಠ ಮಠಕ್ಕೂ ಅವಿನಾಭಾವ ಸಂಬಂಧವಿದ್ದು, ಪ್ರತೀ ಪರ್ಯಾಯದ ಸಂಧರ್ಭದಲ್ಲಿ ಸರ್ವಜ್ಞ ಪೀಠವನ್ನು ಅಲಂಕರಿಸುವ ಅಷ್ಠ ಮಠದ ಪೀಠಾಧೀಶರು ಉಡುಪಿಯ ಶ್ರೀ ಕೃಷ್ಣ ದೇಗುಲದಲ್ಲಿ ನಡೆಸುವ ನಾಗಮಂಡಲ ಸೇವೆಯಲ್ಲಿ ನಾಗಪಾತ್ರಿಯ ಕರ್ತವ್ಯವನ್ನು ನಿಭಾಯಿಸುವ ಜವಾಬ್ಧಾರಿ ಇದೇ ಸಾಮಗರ ಕುಟುಂಬಕ್ಕಿದ್ದು, ಆ ಸೇವೆಯನ್ನು ತಲ ತಲಾಂತರಗಳಿಂದಲೂ ಸಾಮಗರ ಕುಟುಂಬ ಅನೂಚಾನಾಗಿ ನಡೆದುಕೊಂಡು ಬರುತ್ತಿದೆ. ಅಷ್ಟೇ ಅಲ್ಲದೇ ಅಷ್ಟ ಮಠಕ್ಕೆ ಸಂಬಂಧಿಸಿದ ಎಲ್ಲಾ ನಾಗಕ್ಷೇತ್ರಗಳಲ್ಲಿಯೂ ನಾಗಮಂಡಲಾದಿ ಸೇವೆಯಲ್ಲಿ ಇದೇ ಸಗ್ರಿ ದೇವಾಲಯದ ಸಾಮಗರೇ ನಾಗಪಾತ್ರಿಗಳಾಗಿ ಸೇವೆ ಸಲ್ಲಿಸುವ ಸೌಭಾಗ್ಯವನ್ನು ಭಗವಾನ್ ಶ್ರೀ ಕೃಷ್ಣ ಕರುಣಿಸಿದ್ದಾನೆ.
ಇನ್ನು ಈ ದೇವಾಲಯದಲ್ಲಿ ಪ್ರತೀ ನಿತ್ಯವೂ ಮತ್ತು ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳನ್ನು ಅನಂತ ಸಾಮಗರು ಪ್ರಾರಂಭಿಸಿದ ಕಟ್ಟುಪಾಡಿನ ರೀತಿಯಲ್ಲೇ ನಿರಂತವಾಗಿ ನಡೆದುಕೊಂಡು ಬಂದಿದ್ದಾರೆ. ಸುಬ್ರಹ್ಮಣ್ಯ ಷಷ್ಠಿಯಂದು ನಡೆಯುವ ನಾಗಮಂಡಲ, ಚಂಡಿಕಾಯಾಗ, ಆಶ್ಲೇಷ ಬಲಿದಾನ, ಅನ್ನ ಸಂತರ್ಪಣೆ ಬಹಳ ವಿಶೇಷವಾಗಿದೆ. ಉಳಿದಂತೆ ಪ್ರತೀ ದಿನವೂ ಶ್ರೀ ವಾಸುಕಿ ಸುಬ್ರಹ್ಮಣ್ಯರಿಗೆ ಹರಕೆ ಹೊತ್ತೋ ಇಲ್ಲವೇ ತಮ್ಮ ಇಷ್ಠಾರ್ಥಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಇಲ್ಲಿಗೆ ಬರುವ ಭಕ್ತ ವೃಂದದ ಸಮಕ್ಷಮದಲ್ಲಿ, ಸರ್ಪಸಂಸ್ಕಾರ, ತನು-ತಂಬಿಲ, ಆಶ್ಲೇಷ ಬಲಿದಾನ, ಪವಮಾನ ಹೋಮಾದಿಗಳು ಇಲ್ಲಿ ಬಹುತೇಕ ಪ್ರತಿನಿತ್ಯವೂ ನಡೆದುಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಶ್ರೀ ಅನಂತ ಸಾಮಗರ ಕಾಲದಲ್ಲಿದ್ದ ದೇವಾಲಯ ಶಿಥಿಲಗೊಂಡಿದ್ದ ಕಾರಣ, 1917ರಲ್ಲಿ ಹಳೆಯ ಗರ್ಭಗುಡಿಯ ಬದಲಾಗಿ ಹೊಸದಾಗಿ ದೇವಾಲಯವನ್ನು ನಿರ್ಮಾಣ ಮಾಡಲು ನಿರ್ಧರಿಸಿ, ಶಿಲಾಮಯ ಗರ್ಭಗುಡಿಗೆ ಶ್ರೀ ಫಲಿಮಾರು ಶ್ರೀಗಳಿಂದ ಶಿಲಾನ್ಯಾಸ ನಡೆಸಲಾಗಿತ್ತು. ದೇವಾಲಯ ಸಂಪೂರ್ಣಗೊಂಡ ನಂತರ ಅದಮಾರು ಮಠದ ಶ್ರೀಪಾದರ ಸಮಕ್ಷದಲ್ಲಿ ಇಲ್ಲಿನ ದೇವರಿಗೆ ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಣೆ ಮಾಡಲಾಗಿತ್ತು. ಶ್ರೀ ಪೇಜಾವರ ಶ್ರೀಗಳ ಸಾರಥ್ಯದಲ್ಲಿ ಬ್ರಹ್ಮಕಲಸ, ಪಲ್ಲಪೂಜೆ, ಪೂರ್ಣಮಾನ ಶ್ರೀ ಚಕ್ರಪೂಜೆಗಳೂ ನಡೆದು ಶ್ರೀ ಪೇಜಾವರರಿಗೆ ನಾಣ್ಯಗಳಿಂದ ತುಲಾಭಾರವನ್ನೂ ಸಹಾ ಈ ದೇವಾಲಯದಲ್ಲಿ ಮಾಡಲಾಗಿತ್ತು. ಇತ್ತೀಚೆಗೆ ದೇವಾಲಯದ ಪ್ರಾಂಗಣದಲ್ಲೇ ನಾಗದೇವರ ಮಂಟಪವನ್ನೂ ಕಟ್ಟಿಸಲಾಗಿದ್ದು, ನಾಗ ದೋಷದ ಪರಿಹಾರ ಮತ್ತು ನಾಗ ದೇವರ ಅನುಗ್ರಹಕ್ಕಾಗಿ ಇರುವ ಕೆಲವೇ ಕೆಲವು ದೇವಾಲಯಗಳಲ್ಲಿ ಸಗ್ರಿಯ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಾಲವೂ ಒಂದಾಗಿದೆ ಎನ್ನುವುದು ವಿಶೇಷವಾಗಿದೆ.
ಇದೇ ದೇವಾಲಯದ ಪಕ್ಕದಲ್ಲಿಯೇ ವಿಶಾಲವಾದ ಕಲ್ಯಾಣ ಮಂಟಪವಿದ್ದು ಅಲ್ಲಿ ಪ್ರತಿನಿತ್ಯವೂ ಮದುವೆ, ಮುಂಜಿ ನಾಮಕರಣಗಳಂತಹ ಶುಭ ಸಮಾರಂಭಗಳು ಶ್ರೀ ವಾಸುಕಿ ಸುಬ್ರಹ್ಮಣ್ಯನ ಕೃಪಾಶೀರ್ವಾದದಿಂದ ಸಾಮಗರ ಸಾರರ್ಥ್ಯದಲ್ಲಿ ನಡೆಯುತ್ತಲ್ಲೇ ಇರುವುದು ವಿಶೇಷವಾಗಿದ್ದು, ಭಕ್ತಾದಿಗಳು ತಮ್ಮ ಮನೆಯ ಶುಭ ಕಾರ್ಯಗಳಿಗೆ ಈ ಕಲ್ಯಾಣ ಮಂಟಪವನ್ನು ಸದುಯೋಗವನ್ನು ಪಡೆದುಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನವು ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 9:00 ರವರೆಗೆ ಭಕ್ತಾದಿಗಳ ದರ್ಶನಕ್ಕೆ ತೆರೆದಿದಿದ್ದು, ದೇವಾಲಯದಲ್ಲಿನ ಪೂಜಾ ಕಾರ್ಯಗಳನ್ನು ನಡೆಸುವ ಸಲುವಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು 99645 82799 ಸಂಪರ್ಕಿಸ ಬಹುದಾಗಿದೆ.
ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದುಕೊಂಡ ನಂತರ ಇನ್ನೇಕೆ ತಡಾ, ಇದೇ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಉಡುಪಿಗೆ ಬಂದು ಶ್ರೀಕೃಷ್ಣನ ದರ್ಶನ ಪಡೆದು ಅಲ್ಲಿಂದ ಕೇವಲ ಸ್ವಲ್ಪ ದೂರದಲ್ಲಿಯೇ ಇರುವ ಸುಮಾರು 1,200 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ, ಉಡುಪಿಯ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕಯ್ಯಾಳಿ ದುರ್ಗಾ ದೇವಸ್ಥಾನದ ಕಡಿಯಾಳಿ ಮಹಿಷಮರ್ದಿನಿಯ ದರ್ಶನ ಪಡೆದು ಅಲ್ಲಿಂದ ಸ್ವಲ್ಪ ದೂರದಲ್ಲೇ ಇರುವ ಈ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ