ಅಯೋಧ್ಯೆಯ ಶ್ರೀ ಮೂಲ ರಾಮ

ಪ್ರಭು ಶ್ರೀರಾಮ ಸಕಲ ಸನಾತನಿಗಳ ಆರಾಧ್ಯ ದೈವ. ಅಂತಹ ಪುರುಶೋತ್ತಮನ ಜನ್ಮಸ್ಥಳವಾದ  ಅಯೋಧ್ಯೆಯಲ್ಲಿದ್ ದೇವಾಲಯವನ್ನು  ಮತಾಂಧ ಬಾಬರ್ ಮತ್ತು ಆತನ ಸಹಚರರು ಧ್ವಂಸಗೊಳಿಸಿ ಅದನ್ನು ಬಾಬರ್ ಮಸೀದಿಯನ್ನಾಗಿಸಿದ ನಂತರ  ಹಲವು ಶತಮಾನಗಳ ಕಾಲ ಲಕ್ಷಾಂತರ ರಾಮಭಕ್ತರ ಹೋರಾಟ ಮತ್ತು  ಬಲಿದಾನಗಳ ಪರಿಣಾಮವಾಗಿ 2024ರ ಜನವರಿ 22 ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿದೆ. 2025ರ ಜೂನ್ 3ರಂದು ನಡೆದ ಎರಡನೇ ಪ್ರಾಣಪ್ರತಿಷ್ಠಾಪನೆ ಸಂಧರ್ಭದಲ್ಲಿ ಅಯೋಧ್ಯೆಯ ರಾಮ ಮಂದಿರದ ಮೊದಲನೇ ಮಹಡಿಯಲ್ಲಿ ಶ್ರೀರಾಮ,ಸೀತೆ, ಲಕ್ಷಣ, ಭರತ ಶತ್ರುಘ್ನರೊಂದಿಗೆ ಆಂಜನೇಯ ಇರುವಂತಹ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.  ಹಾಗಾದರೆ, ಬಾಬರ್ ಆಕ್ರಮಣ ಮಾಡಿದ ಕಾಲದಲ್ಲಿ ಆ ದೇವಾಲಯದಲ್ಲಿ ಇದ್ದ ಶ್ರೀ ರಾಮನ ಮೂರ್ತಿ ಈಗ ಎಲ್ಲಿದೇ?  ಮತ್ತು ಹೇಗಿದೆ? ಎನ್ನುವ ಕುತೂಹಲಕ್ಕೆ ನಮ್ಮ ಇಂದಿನ ದೇಗಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಕರ್ನಾಟಕಕ್ಕೂ ರಾಮಾಯಣಕ್ಕೂ ಅವಿನಾಭಾವ ಸಂಬಂಧ. ಪ್ರಭು ಶ್ರೀರಾಮನು 14 ವರ್ಷಗಳ ಕಾಲದ ವನವಾಸದಲ್ಲಿ ಬಹುತೇಕ ಸಮಯವನ್ನು ಕರ್ನಾಟಕದಲ್ಲೇ ಕಳೆದಿದ್ದಾನೆ ಎನ್ನುವುದಕ್ಕೆ ಹತ್ತು ಹಲವಾರು ಕುರುಹುಗಳಿದ್ದು ಅದರ ಸಂಪೂರ್ಣ ಮಾಹಿತಿಯನ್ನು ಈ ಲಿಂಕ್ ಮೂಲಕ ತಿಳಿಯಬಹುದಾಗಿದೆ. ಇನ್ನು ರಾಮನ ಪರಮ ಭಕ್ತ ಕಿಷ್ಕಿಂದೆಯ ಆಂಜನೇಯ ನಮ್ಮ ಕರ್ನಾಟಕದ ಆಂಜನಾಪರ್ವತದ ಪ್ರದೇಶದವನು. ಇನ್ನು ಪ್ರಸ್ತುತವಾಗಿ ಅಯೋಧ್ಯೆಯಲ್ಲಿ ವಿರಾಜಮಾನರಾಗಿರುವ ಬಾಲ ರಾಮನ ಮೂರ್ತಿಯ ಕೆತ್ತನೆ ಮಾಡಿದ್ದು ಸಹಾ ಕನ್ನಡಿಗ ಶಿಲ್ಪಿ  ಶ್ರೀ ಅರುಣ್ ಯೋಗಿರಾಜ್. ಅಂತಹ ಪವಿತ್ರ ಮೂರ್ತಿಯನ್ನು ನಿರ್ಮಿಸಲು ಬಳಸಿದ ಕೃಷ್ಣವರ್ಣದ  ಕಲ್ಲು ಸಹಾ ಮೈಸೂರಿನ ಹೆಗ್ಗಡದೇವನ ಕೋಟೆಯ ಪ್ರದೇಶದ್ದಾಗಿದ್ದರೇ, ಇನ್ನು ಮಂದಿರಕ್ಕೆ ಬಳಸಿದ  ಶೇ 60ರಷ್ಟು ಕೆಂಪು ಕಲ್ಲು ಸಹ ಕರ್ನಾಟಕ್ಕದ್ದೇ ಆಗಿದೆ.

1528  ಮೊಘಲ್ ಧಾಳಿಕೋರನಾದ ಬಾಬರ್ ನ ಸೇನಾನಿ ಮೀರ್ ಬಾಕಿ ತನ್ನ ಒಡೆಯ ಬಾಬರ್ ನನ್ನು ಮೆಚ್ಚಿಸುವ ಸಲುವಾಗಿ ಅಯೋಧ್ಯೆಯಲ್ಲಿದ್ದ  ಪ್ರಭು ಶ್ರೀರಾಮನ ದೇವಾಲಯವನ್ನು ಧ್ವಂಸ ಮಾಡಿ  ಅದೇ ದೇವಾಲಯದ ಗೋಪುರವನ್ನು ಕೆಡವಿ ಮಿನಾರ್ ಗಳನ್ನು ಕಟ್ಟಿಸಿ ಅದಕ್ಕೆ ಬಾಬರೀ ಮಸೀದಿ ಎಂದು ಮರು ನಾಮಕರಣ ಮಾಡಿದನು. ಈ ಕುಕೃತ್ಯದ ವಿರುದ್ಧ ಪ್ರತಿಭಟನೆಯ   ಹೋರಾಟದಲ್ಲಿ ಸುಮಾರು 2,000 ಕ್ಕೂ ಹೆಚ್ಚಿನ ಜನರು ಅಂದು ಸಾವನ್ನಪ್ಪಿದರು. ಈ ರೀತಿ ಮಂದಿರ ಅಪವಿತ್ರ ಗೊಂಡಾಗ ಅಲ್ಲಿನ ಮೂಲ  ವಿಗ್ರಹ ಉಳಿದರೆ ದೇಶಕ್ಕೆ ಮಾದರಿ ಎಂದು ತಿಳಿದ ಅಂದಿನ ಅಯೋಧ್ಯೆಯ ರಾಮ ಮಂದಿರದ ಅರ್ಚರಾಗಿದ್ದಂತಹ ಶ್ರೀ ಶ್ಯಾಮಾನಂದ ಮಹಾರಾಜ್‌ ಅವರು ಯಾರಿಗೂ ತಿಳಿಯದಂತೆ ಆ ಮೂಲ ವಿಗ್ರಹವನ್ನು ದೇವಾಲದಿಂದ ತೆಗೆದುಕೊಂಡು ಸರಯೂ ನದಿಯಲ್ಲಿ ಮುಳುಗಿಸಿಟ್ಟು ಮುಚ್ಚಿಡುತ್ತಾರೆ. ಸುಮಾರು ನೂರಾರು ವರ್ಷಗಳ  ಕಾಲ ಬಾಬರ್ ಮತ್ತು ಅವನ ಮುಂದಿನ ಸಂತತಿ ಮೂಲ ರಾಮ ವಿಗ್ರಹಕ್ಕೆ ಹುಡುಕುತ್ತಿದ್ದರೆ,  ಶ್ರೀ ಶ್ಯಾಮಾನಂದ ಮಹಾರಾಜರು  ಬಹಳ ಸುರಕ್ಷಿತವಾಗಿ ಆ ಮೂಲ ವಿಗ್ರಹವನ್ನು ಸರಯೂ ನದಿಯಿಂದ ಹೊರತೆಗೆದು.  ಮಹಾರಾಷ್ಟ್ರದ  ಪೈಟಾನ್‌ನಲ್ಲಿದ್ದ ಶ್ರೀ ಏಕನಾಥ ಮಹರಾಜ್‌ ಅವರಿಗೆ ಶ್ರೀ ರಾಮ, ಸೀತಾ, ಲಕ್ಷ್ಮಣ ಮೂರ್ತಿಗಳನ್ನು ಹಸ್ತಾಂತರಿಸಿ ಅದನ್ನು ಅವರ  ಆಶ್ರಮದಲ್ಲಿಟ್ಟು ಕೊಂಡು ಪೂಜಿಸಲು ಸೂಚಿಸಿದರಂತೆ.

ಆದರೆ ದತ್ತೋಪಾಸಕನಾದ ನಾನು ಶ್ರೀ ರಾಮನ ಮೂರ್ತಿಯನ್ನು ಹೇಗೆ ಪೂಜಿಸಲಿ? ಎಂದು ಏಕನಾಥ ಮಹರಾಜ್‌ ಅವರು ಪ್ರಶ್ನಿಸಿದಾಗ,  ಅದರ ಬಗ್ಗೆ ಹೆಚ್ಚಿನ ತಲೆ ಕೆಡಸಿಕೊಳ್ಳದೇ, ದೇವನೊಬ್ಬ ನಾಮ ಹಲವು ಎನ್ನುವಂತೆ ರಾಮ ಮತ್ತು ದತ್ತಾತ್ರೇಯ ಇಬ್ಬರೂ ಒಂದೇ.  ಸದ್ಯಕ್ಕೆ ಪೂಜೆ ಮಾಡಿಕೊಂಡು ಹೋಗಿ  ಸೂಕ್ತ ಸಮಯದಲ್ಲಿ ನಾನು ಹೇಳಿದವರಿಗೆ  ಈ ವಿಗ್ರಹಗಳನ್ನು  ಹಸ್ತಾಂತರಿಸಿ ಎಂದು ತಿಳಿಸಿದ್ದಕ್ಕೆ  ಒಪ್ಪಿಕೊಂಡ ಏಕನಾಥ್ ಮಹಾರಾಜರು ಕೆಲವರ್ಷಗಳ ಕಾಲ ಆ ವಿಗ್ರಹಗಳಿಗೆ ಪೂಜೆ ಸಲ್ಲಿಸಿ ನಂತರ ಆ ವಿಗ್ರಹಗಳನ್ನು ರಾಮದಾಸ್‌ ಸ್ವಾಮಿ  ಎಂಬುವರಿಗೆ ಅವರಿಗೆ ಹಸ್ತಾಂತಸುತ್ತಾರೆ. ಈ ರೀತಿಯಾಗಿ ಅಯೋಧ್ಯೆಯ ಮೂಲದ ಮೂರ್ತಿಗಳನ್ನು ರಾಮದಾಸ್ ಸ್ವಾಮಿಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾದ ಸಮರ್ಥ ರಾಮದಾಸರು ಮತ್ತು ಅವರ ಶಿಷ್ಯವೃಂದದ ಬಳಿಯೇ ಸುಧೀರ್ಘವಾದ ಕಾಲ ಇದ್ದು  ನಂತರ ಅದು ಕರ್ನಾಟಕದ ಹರಿಹರ ಸ್ವಾಮಿಗಳಿಗೆ ಹಸ್ತಾಂತರ ಮಾಡಿದಾಗ, ಹರಿಹರ ಸ್ವಾಮಿಗಳು ಆ ಮೂರ್ತಿಯನ್ನು ತುಂಗಭದ್ರಾ ತಟದಲ್ಲಿ ಆಳವಾದ ಗುಂಡಿಯನ್ನು ತೋಡಿಸಿ  ಈ ವಿಗ್ರಹವನ್ನು ಭೂ ಸಮಾಧಿ ಮಾಡಿಸಿ ಅದರೊಂದಿಗೆ ಇದು ಮೂಲ ರಾಮನ ವಿಗ್ರಹ ಮತ್ತು ಅದರ ಸಂಪೂರ್ಣ ಇತಿಹಾಸವದ  ಕಲ್ಲಿನ ಶಾಸನವನ್ನೂ ಕೆತ್ತಿಸಿ ಅದನ್ನೂ ಸಹಾ ಆ ವಿಗ್ರಹದ ಜೊತೆಯಲ್ಲೇ ಭೂಮಿಯಲ್ಲಿ ಆಡಗಿಸಿಡುತ್ತಾರೆ.

ಸುಮಾರು 1920ರ ಸಮಯದಲ್ಲಿ ದೇವನಹಳ್ಳಿಯ ಮೂಲದವರು ಎನ್ನಲಾದ ಆದಿ ಗುರು ಶ್ರೀ ಶಂಕರಾಚಾರ್ಯರಂತೆ ಭಾರತದವನ್ನು ಹಲವಾರು ಬಾರಿ ಪರ್ಯಟನೆ ಮಾಡಿ, ಹಿಂದೂ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದ್ದ, ಸಮರ್ಥ ರಾಮದಾಸರ 11 ನೇ ಶಿಷ್ಯರಾಗಿದ್ದ ಸ್ವಾಮಿ ನಾರಾಯಣ ಮಹಾರಾಜ್  ಅವರು  ಪ್ರಸ್ತುತ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ದಾವಣಗೆರೆಯ ಹರಿಹರದ ತುಂಗಾಭದ್ರಾ ನದಿ ತಟದಲ್ಲಿರುವ ಶ್ರೀ ಹರಿಹರೇಶ್ವರ ದೇವಾಲಯದಿಂದ 3-4 ಕಿಮೀ ದೂರದಲ್ಲಿರುವ ಪ್ರದೇಶಕ್ಕೆ ಮೊಟ್ಟ ಮೊದಲ ಬಾರಿಗೆ ಬರುತ್ತಾರೆ. ಆರಂಭದಲ್ಲಿ ಭಜನೆ ಮತ್ತು ಸತ್ಸಂಗಗಳ ಮೂಲಕ ಅಲ್ಲಿನ ಜನರ ಮನಸ್ಸನ್ನು ಗೆದ್ದ ಶ್ರೀಗಳಿಗೆ ತುಂಗಭದ್ರಾ ನದಿಯ ತಟದಲ್ಲಿ ಸುಮಾರು ಅರ್ಧ ಅಡಿ ಎತ್ತರ ಶ್ರೀ ಆಂಜನೇಯನ ವಿಗ್ರಹ ಸಿಕ್ಕಾಗ ಹರಿಹರದ ಅಂದಿನ ಶಾನುಭೋಗರಾಗಿದ್ದ ಶ್ರೀ ಸೀನಪ್ಪನರಿಂದ ರಾಮನ ದೇವಾಲಯವನ್ನು  ಕಟ್ಟಿಸಲು ಗುದ್ದಲಿ ಪೂಜೆ ಮಾಡಿಸುತ್ತಾರೆ. ಅರೇ ಗುರುಗಳೇ ಕೇವಲ ಆಂಜನೇಯನ ಪ್ರತಿಮೆ ಸಿಕ್ಕಿದ್ದಕ್ಕೇ ರಾಮನ ದೇವಾಲಯವನ್ನು ಕಟ್ಟಿಸುತ್ತಿದ್ದೀರಲ್ಲಾ? ಎಂದು ಪ್ರಶ್ನಿಸಿದ್ದಕ್ಕೇ ಮೊದಲು  ದೇವಾಲಯನ್ನು ಕಟ್ಟಿಸಿ ಆನಂತರ ರಾಮನು ಬರುತ್ತಾನೆ ಎಂದು ಹೇಳಿ ಸುಮಾರು 8 ವರ್ಷಗಳ ಕಾಲದ ನಂತರ  ದೇವಾಲಯ ಸಂಪೂರ್ಣವಾಗಿ ಅಲ್ಲಿ ಅರ್ಧ ಅಡಿಯ ಆಂಜನೇಯನನ್ನು ಪ್ರತಿಷ್ಠಾಪಿಸಿದ ಕೆಲ ಸಮಯದ ನಂತರದ ಮತ್ತೊಮ್ಮೆ ಎಲ್ಲರನ್ನೂ ಕರೆದುಕೊಂಡು ಹೋಗಿ ಅದೇ ತುಂಗಭದ್ರಾ ನದಿಯ ತಟದಲ್ಲಿ ಭೂಮಿಯನ್ನು ಅಗೆಸಿ ಅಲ್ಲಿ ಹರಿಹರಸ್ವಾಮಿಗಳು ಇರಿಸಿದ್ದ ಮೂಲರಾಮನನ್ನು ಹೊರ ತೆಗಿಸಿ ಅದನ್ನು ಆ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದ್ದಲ್ಲದೇ, ಇದು ಮೂಲ ರಾಮನು ಹೌದೇ ಅಲ್ಲವೇ? ಎಂದು ಪ್ರಶ್ನಿಸಿದವರಿಗೆ  ಆ ವಿಗ್ರಹದ ಜೊತೆ ದೊರೆತಿದ್ದ ಶಾಸನವನ್ನೇ ಪುರಾವೆಯನ್ನಾಗಿ ತೋರಿಸಿ ಎಲ್ಲರ ಬಾಯಿ ಮುಚ್ಚಿಸುತ್ತಾರೆ.

ಸದ್ಗುರು ಸಮರ್ಥ ನಾರಾಯಣ ಮಹಾರಾಜ್  ತಮ್ಮ ಆಶ್ರಮದಲ್ಲಿ ಪ್ರತಿಷ್ಠಾಪಿಸಿದ ಶ್ರೀ ರಾಮ ಲಕ್ಷ್ಮಣ, ಸೀತಾ ದೇವಿಯ ಮೂಲ  ವಿಗ್ರಹಗಳಿಗೆ  ಅಂದಿನಿಂದ ಇಂದಿನವರೆಗೂ ಬಹಳ ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದು, ಇಂದಿಗೂ ಸಹಾ ಆ ದೇವರುಗಳ ದರ್ಶನ ಮಾಡಬಹುದಾಗಿದೆ. ಸ್ವಾಮಿಗಳು ನಿರಂತರವಾಗಿ  ಲೋಕ ಕಲ್ಯಾಣಾರ್ಥವಾಗಿ  ವಿವಿಧ ಹೋಮ ಹವಾನಾದಿಗಳನ್ನು ಮಾಡಿಸುತ್ತಲೇ ಬಂದು  1986ರಲ್ಲಿ ಅತ್ಯಂತ ಅದ್ದೂರಿಯಾಗಿ ಅಶ್ವಮೇಧ ಯಾಗವನ್ನು ಮಾಡಿಸಿದ್ದಲ್ಲದೇ ಅದಾದ ನಂತರ 100 ಕೋಟಿ  ರಾಮ ತಾರಕ ನಾಮ ಯಜ್ಞವನ್ನೂ ಮಾಡಿಸಿದ್ದಲ್ಲದೇ, ದೇಶದ ನಾನಾ ಭಾಗಗಳಲ್ಲಿಯೂ  ರಾಮ ತಾರಕ ನಾಮ ಯಜ್ಞವನ್ನು ಮಾಡಿಸುತ್ತಾರೆ, 80ರ ದಶಕದಲ್ಲಿ ರಾಮ ಮಂದಿರದ ವ್ಯಾಜ್ಯ ನ್ಯಾಯಲಯದಲ್ಲಿ ಇರುವಾಗ ಇವರೂ ಸಹಾ ಮೊತ್ತ ಮೊದಲ ಬಾರಿಗೆ ತಮ್ಮ ಬಳಿ ಅಯೋಧ್ಯೆಯ  ಮೂಲ ವಿಗ್ರಹಗಳು ಇವೆ ಮತ್ತು ಮಂದಿರ ಕಟ್ಟಿದ ನಂತರ ಇದೇ ಮೂರ್ತಿಗಳನ್ನು ಅಲ್ಲಿ ಮರು ಪ್ರತಿಷ್ಠಾಪನೆ ಮಾಡಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಮೂಲ ರಾಮನನ್ನು ಇಡೀ ದೇಶದ ಜನರಿಗೆ ಮತ್ತೊಮ್ಮೆ ನೆನಪಿಸಿ ಕೊಡುತ್ತಾರೆ. 1990ರ ಜುಲೈ 5ರಂದು ಸದ್ಗುರು ಸಮರ್ಥ ನಾರಾಯಣ ಮಹಾರಾಜ್ ಇಹಲೋಕವನ್ನು ತ್ಯಜಿಸಿದಾಗ ಮೂಲ ರಾಮ ದೇವರ ಎದುರಿನಲ್ಲೇ ಗುರುಗಳ ಸಮಾಧಿಯನ್ನು ಕಟ್ಟಿಸಿ ಅದಕ್ಕೂ ಸಹಾ ಪ್ರತಿನಿತ್ಯ ಪೂಜೆಯನ್ನು ಮಾಡಲಾಗುತ್ತಿದೆ.

ಸದ್ಗುರು ಸಮರ್ಥ ನಾರಾಯಣ ಮಹಾರಾಜರ ಆಶ್ರಮದಲ್ಲಿ ಮೂಲ ರಾಮನಷ್ಟೇ ಅಲ್ಲದೇ ಗುರು ದತ್ತಾತ್ರೇಯರ ಪ್ರತಿಮೆಯೂ ಇದ್ದು, ಈ ಆಶ್ರಮದಲ್ಲಿ ಶಿವ ಪಂಚಾಯತನದ ಪದ್ದತಿಯಲ್ಲಿ ಅರ್ಥಾತ್  ಶಿವ, ಗಣಪತಿ, ದುರ್ಗೆ, ವಿಷ್ಣು ಮತ್ತು ಸೂರ್ಯನಾರಾಯಣರ ವಿಗ್ರಹಗಳಿಗೆ  ಪ್ರತಿ ದಿನವೂ ತುಂಗಭದ್ರಾ ನದಿಯ ನೀರಿನಿಂದ ಅಭಿಷೇಕ ಮಾಡಿ  ಪೂಜೆ ಮಾಡಲಾಗುತ್ತದೆ. ಇಲ್ಲಿ ದಿನ ನಿತ್ಯವೂ ದಾಸೋಹದ ವ್ಯವಸ್ಥೆ ಇದೆ.

ಇದೇ ದೇವಾಲಯದ ಪ್ರಾಂಗಣದಲ್ಲೇ  ಪ್ರಪ್ರಂಚದ ಯಾವ ಭಾಗದಲ್ಲೂ ಸಹಾ ಕಾಣದೇ ಇರುವ ಜೋಡಿ ಆಂಜನೇಯರ ದೇವಾಲಯ ಬಹಳ ವಿಶೇಷವಾಗಿದ್ದು  ಅದರಲ್ಲಿ ಒಂದು ಕೈ ಮುಗಿದು ನಿಂತಿರುವ ರಾಮ ದಾಸನ ಭಂಗಿಯಲ್ಲಿರುವ ಆಂಜನೇಯನದ್ದಾದರೇ, ಮತ್ತೊಂದು ಸಂಜೀವಿನಿ ಪರ್ವತವನ್ನು  ಎತ್ತಿ ಹಿಡಿದಿರುವ ರೂಪದ ಆಂಜನೇಯನದ್ದಾಗಿದೆ. ಈ ಜೋಡಿ ಆಂಜನೇಯರ ಮಧ್ಯದಲ್ಲೇ ಶ್ರೀ ವರಾಹಸ್ವಾಮಿಯ ತೊಡೆಯ ಮೇಲೆ ಶ್ರೀ ಲಕ್ಷ್ಮಿ ಆಸೀನವಾಗಿರುವ ವಿಗ್ರಹವೂ ಇದ್ದು ಅದೂ ಸಹ ಬಹಳ ನಯನಮನೋಹರವಾಗಿದೆ.  ಇದಲ್ಲದೇ ಅಂದಿನ ಕಾಲದಲ್ಲಿ ವಸಿಷ್ಠರ ಆಶ್ರಮದಲ್ಲಿದ್ದ ಕೇಳಿದ್ದೆಲ್ಲವನ್ನು ಕೊಡುತ್ತಿದ್ದ ಕಾಮಧೇನುವಿನ ವಿಗ್ರಹವೂ ಈ  ಆಶ್ರಮದಲ್ಲಿದ್ದು  ಆ ಆಶ್ರಮದ ವಿಶೇಷ ಆಕರ್ಷಣೆಯಾಗಿ  ದೊಡ್ಡದಾದ ಗೋಶಾಲೆಯೂ ಇದ್ದು ಬಹಳ ಅಲ್ಲಿರುವ ಗೋವುಗಳೊಂದಿಗೆ ಕೆಲ ಕಾಲ ಕಳೆದಲ್ಲಿ ನಮ್ಮ  ಎಲ್ಲ ಕಷ್ಟಗಳನ್ನೂ ಮರೆತು ಉಲ್ಲಾಸಭರಿತವಾಗುವುದರಲ್ಲಿ ಸಂದೇಹವೇ ಇಲ್ಲಾ.

ಹರಿಹರದಿಂದ ಹೊಸಪೇಟೆ ಹೋಗುವ ಮಾರ್ಗದ ಮಧ್ಯೆ ಹರಿಹರದ ಬಸ್ ನಿಲ್ದಾಣದಿಂದ ಸುಮಾರು 3-4 ಕಿಮೀ ದೂರದ ಗುತ್ತೂರು ಕ್ರಾಸ್ ಬಳಿ  ಇರುವ ಮೂಲ ರಾಮನ ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ಮೂಲ ರಾಮನ ಪ್ರತಿಮೆಯ ಎದುರು ಎರಡು ಕೈಗಳಿಂದ ಹಿಡಿದುಕೊಂಡಿರುವ ಶಿವನ ಲಿಂಗವಿದೆ. ಸ್ಥಲೀಯರು ಹೇಳುವ ಪ್ರಕಾರ ಆರಂಭದಲ್ಲಿ ಲಿಂಗದ ಮೇಲೆ ಕೈಗಳನ್ನು ಕೇವಲ ಬರೆಯಲಾಗಿತ್ತಂತೆ. ನಂತರ ದಿನಗಳಲ್ಲಿ  ಪವಾಡದ ರೀತಿಯಲ್ಲಿ  ಆ ಕೈಗಳು ಕೆತ್ತನೆ ಮಾಡಿರುವ ರೀತಿಯಲ್ಲಿ ಮೂಡಿ ಬಂದಿದ್ದು ಅದು ದಿನೇ ದಿನೇ ಬೆಳೆಯುತ್ತಿದೆಯಂತೆ.

ಶತಮಾನಗಳಿಂದ ಸಮರ್ಥ ನಾರಾಯಣ ಮಹಾರಾಜರ ಆಶ್ರಮದಲ್ಲಿರುವ ಅಯೋಧ್ಯೆಯ ಮೂಲ ರಾಮನ ಮೂರ್ತಿಗಳ ಬಗ್ಗೆ ತನಿಖೆ ನಡೆಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯದ ಕೇಂದ್ರ ತಂಡ, ಗುಪ್ತಚರ ಅಧಿಕಾರಿಗಳು ಮತ್ತು ಭಾರತೀಯ ಪುರಾತತ್ವ ಸಮೀಕ್ಷೆ (ASI) ಅಧಿಕಾರಿಗಳು ಸಹಾ ಆ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮೂಲ ರಾಮನ ವಿಗ್ರಹಗಳು ಮತ್ತು ಅವುಗಳ ಇತಿಹಾಸದ ವಿವರಗಳನ್ನು ಪಡೆದುಕೊಂಡಿರುವುದು  ಗಮನಾರ್ಹವಾಗಿದ್ದು ವಿಗ್ರಹಗಳ ಇತಿಹಾಸದ ಬಗ್ಗೆ ಯಾವುದೇ ವರದಿಯನ್ನು ಇದುವರೆವಿಗೂ ಬಹಿರಂಗ ಪಡಿಸಿಲ್ಲವಾದ ಕಾರಣ, ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಮತ್ತು ಹರಿಹರ ಸ್ವಾಮಿಗಳ ಶಿಲಾಶಾಸನದಲ್ಲಿರುವಂತೆ ಇದೇ ಮೂಲ ರಾಮ ಎನ್ನುವುದು ಸಕಲ ಆಸ್ತಿಕರ ನಂಬಿಕೆಯಾಗಿದೆ.

ಅಯೋಧ್ಯೆ ಮೂಲ  ರಾಮನ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ ಇನ್ಣೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಹರಿಹರಕ್ಕೆ ಬಂದು ತುಂಗಭದ್ರಾ ನದಿಯಲ್ಲಿ ಮಿಂದು ಶುಚಿರ್ಭೂತರಾಗಿ ಶ್ರೀ ಹರಿಹರೇಶ್ವರನ ದರ್ಶನ ಪಡೆದು  ಅಲ್ಲಿಂದ  ಸಮರ್ಥ  ನಾರಾಯಣ ಮಹಾರಾಜರ ಆಶ್ರಮದಲ್ಲಿ ಮೂಲ ರಾಮನಷ್ಟೇ ಅಲ್ಲದೇ ಅಲ್ಲಿನ ಸಕಲ ದೇವರ ದರ್ಶನದ ಜೊತೆ ನಾರಾಯಣ ಮಹಾರಾಜರ ಸಮಾಧಿಯ ದರ್ಶನ  ಪಡೆದು, ಗೋಶಾಲೆಯ ಗೋವುಗಳೊಡನೆ ಕೆಲ ಕಾಲ ಕಳೆದು ಅಲ್ಲಿನ ದಾಸೋಹದಲ್ಲಿ ಪ್ರಸಾದವನ್ನು ಸ್ವೀಕರಿಸಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment