ಕೊಟ್ಟಿಯೂರು ವೈಶಾಖ ಮಹೋತ್ಸವ

ನಮ್ಮ ಸನಾತನ ಧರ್ಮದಲ್ಲಿ ವರ್ಷದ 365 ದಿನಗಳೂ  ಒಂದಲ್ಲಾ ಒಂದು ಹಬ್ಬವನ್ನು ಆಚರಿಸುತ್ತಲೇ ಇರುತ್ತೇವೆ. ಹಾಗಾದರೆ, ಈ ಹಬ್ಬಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದೇ? ಎಂದು ಕೇಳಿದರೆ,  ಪ್ರತಿಯೊಂದು ಹಬ್ಬದ ಹಿಂದೆಯೂ ಒಂದು ವೈಜ್ಞಾನಿಕ ಕಾರಣ ಇಲ್ಲವೇ ಪೌರಾಣಿಕ ಹಿನ್ನಲೆ ಇರುವ ಕಾರಣ  ಅಯಾಯಾ ಹಬ್ಬಗಳನ್ನು  ಆಯಾಯಾ ದಿನಗಳಲ್ಲೇ  ಇಂತಷ್ಟು ದಿನಗಳಲ್ಲಿಯೇ  ಮಾಡಬೇಕು ಎಂಬ ನಿಯಮವಿದೆ. ದೇವರ ನಾಡು ಎಂದೇ ಖ್ಯಾತವಾಗಿರುವ  ಕೇರಳದ ಕೊಟ್ಟಿಯೂರು ಎಂಬ ದಟ್ಟ  ಕಾಡಿನಿಂದ ಆವೃತವಾಗಿರುವ ಬಾವಲಿ ನದಿಯ ಎದುರು ಬದಿಯಲ್ಲಿರುವ ಎರಡು ದೇವಾಲಯಗಳಲ್ಲಿ ವರ್ಷಕ್ಕೆ ಕೇವಲ 28 ದಿನಗಳ ಕಾಲ ವೈಶಾಖ ಮಾಸದಲ್ಲಿ ಮಾತ್ರವೇ ತೆರೆದಿದ್ದು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ ವೈಶಾಖ ಮಹೋತ್ಸವದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಕೇರಳದ ಕಣ್ಣೂರು ಜಿಲ್ಲೆಯ ಭಾಗವಾಗಿರುವ ಮತ್ತು ತಲಶ್ಶೇರಿಯಿಂದ 60 ಕಿಲೋ ಮೀಟರ್ ದೂರದಲ್ಲಿರುವ ವಾವಲಿ ಅಥವಾ ಬಾವಲಿ ನದಿ ತಟದಲ್ಲಿರುವ ಕೊಟ್ಟಿಯೂರಿನ ಶಿವ ದೇವಾಲಯವು ತನ್ನ ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ವಿಶ್ವ ವಿಖ್ಯಾತವಾಗಿದ್ದು  ದಕ್ಷಿಣ ಕಾಶಿ ಎಂದೂ ಸಹಾ ಪ್ರಸಿದ್ಧವಾಗಿದೆ. ಇದೇ ಸ್ಥಳದಲ್ಲೇ ಪರ ಶಿವನ ಮೊದಲನೇ ಪತ್ನಿ ದಾಕ್ಷಾಯಿಣಿಯ ತಂದೆ ದಕ್ಷನು  ಯಾಗವನ್ನು ಮಾಡಿ ಆ ಯಾಗಕ್ಕೆ ಸ್ಮಶಾನವಾಸಿ ಭಸ್ಮಧಾರಿ ಶಿವವನ್ನು  ಆಹ್ವಾನಿಸದೇ ಇದ್ದಾಗ ಬೇಸರಗೊಂಡ ದಾಕ್ಷಾಯಿಣಿ ಅದೇ ಯಜ್ಞ ಕುಂಡದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಸ್ಮರಣೆಗಾಗಿ ಪ್ರತೀ ವರ್ಷ ವೈಶಾಖ ಮಾಸದಲ್ಲಿ ಕೇವಲ 28 ದಿನಗಳ ಕಾಲ ಇಲ್ಲಿರುವ ಒಂದು ದೇವಾಲಯವು ತೆರೆದಿದ್ದು ಅಲ್ಲಿ ನಡೆಯುವ ವೈಶಾಖ ಪೂಜೆಯ ಭಾಗವಾಗಲು ಪ್ರಪಂಚಾದ್ಯಂತ ಇರುವ ಲಕ್ಷಾಂತರ ಭಕ್ತಾದಿಗಳು ಇಲ್ಲಿ ಬರುತ್ತಾರೆ.

ಬಾವಲಿ ನದಿಯ ಎರಡು ಭಾಗಗಲ್ಲಿ ಎರಡು ದೇವಾಲಯಗಳಿದ್ದು  ದೇವಾಲಯದ ಉತ್ತರದ ಭಾಗ ಅರ್ಥಾತ್ ಈ  ಬದಿಯಲ್ಲಿ ಶಾಶ್ವತವಾದ  ತ್ರುಚ್ಚೆರುಮಾನ ವಡಕ್ಕೇಶ್ವರಂ ದೇವಸ್ಥಾನವಿದ್ದು ಇದಕ್ಕೆ  ಇಕ್ಕರೆ ಕೊಟ್ಟಿಯೂರ್  ಎಂದೂ ಕರೆಯಲಾಗುತ್ತದೆ. ಸಾಂಪ್ರದಾಯಿಕ ನಲುಕೆಟ್ಟು ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸುವ ಈ ದೇವಾಲಯವು ವೈಶಾಖ ಉತ್ಸವ ಹೊರತಾಗಿ ಮಿಕ್ಕೆಲ್ಲಾ ದಿನಗಳೂ ಭಕ್ತಾದಿಗಳ ದರ್ಶನಕ್ಕೆ ತೆರೆದಿದ್ದರೆ, ಇನ್ನು ದಡದ ಎದುರು ಬದಿ  ಇರುವ ಮತ್ತೊಂದು ದೇವಾಲಯವನ್ನು ಅಕ್ಕರೆ ಕೊಟ್ಟಿಯೂರ್  ಎಂದು ಕರೆಯಲಾಗುತ್ತಿದ್ದು ಇದು ದಟ್ಟವಾದ ಕಾಡಿನಿಂದ ಕೂಡಿದ್ದು, ಪ್ರತಿ ವರ್ಷ ವೈಶಾಖ ಹಬ್ಬದ ಸಮಯದಲ್ಲಿ ಮಾತ್ರ ತಾತ್ಕಾಲಿಕ ಗುಡಾರದ ರೂಪದಲ್ಲಿ ಕಟ್ಟಲಾಗುವ  ದೇವಾಲಯದಲ್ಲಿ ಸ್ವಯಂಭೂ ಮಹಾ ಶಿವನ ದರ್ಶನ ಭಕ್ತಾದಿಗಳಿಗೆ ತೆರೆದಿರುತ್ತದೆ.

ಈ ಹಿಂದೆ ಈ ಪ್ರದೇಶವನ್ನು ಪುರಳಿಮಲದ ಕಟ್ಟನ್ ರಾಜವಂಶದವರು  ಆಳಿದ್ದರಿಂದ ಇದಕ್ಕೆ ಕಟ್ಟಿ-ಯೂರ್  ಎಂಬ ಹೆಸರು ಬಂದಿದ್ದು ನಂತರ  ಜನರ ಆಡು ಮಾತಿನಲ್ಲಿ ಅಪಭ್ರಂಶವಾಗಿ ಕೊಟ್ಟಿಯೂರು ಎಂಬ ಹೆಸರು ಆ ಊರಿಗೆ ಬಂದಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.  ನಂತರದ ದಿನಗಳಲ್ಲಿ ಚಿರಕ್ಕಲ್ ರಾಜಮನೆತನದ ರಾಜಾಶ್ರಯ ಮತ್ತು  ಪ್ರೋತ್ಸಾದಿಂದಾಗಿ ಈ ದೇವಾಲಯ ಅತ್ಯಂತ ಮುನ್ನಲೆಗೆ ಬಂದಿದೆ. ಸಾಧಾರಣವಾಗಿ ಪ್ರತೀ ವರ್ಷ ಮೇ, ಜೂನ್ ಅಥವಾ ಜುಲೈ  ತಿಂಗಳಿನಲ್ಲಿ,  ಹಿಂದೂ ಪಂಚಾಂಗದ ವೈಶಾಖ ಮಾಸ, ಸ್ವಾತಿ ನಕ್ಷತ್ರದಿಂದ ಜ್ಯೇಷ್ಠ ಮಾಸದ ಚಿತ್ರ ನಕ್ಷತ್ರದವರೆಗೆ 28 ದಿನಗಳ ಕಾಲ ನಡೆಯುತ್ತದೆ. ಇದು ಮಲಯಾಳಂ ಪಂಚಾಗದ ಪ್ರಕಾರ ಮೇಡಂ-ಎಡವಂ ನಿಂದ ಎಡವಂ-ಮಿಥುನಂ ನಕ್ಷತ್ರದ ವರೆಗೆ ಹೇರಳವಾಗಿ ಮಳೆ ಬೀಳುವ ಸಮಯದಲ್ಲೇ ನಡೆಯುವ ಈ ತೀರ್ಥಯಾತ್ರೆಯಲ್ಲಿ ಬಾವಲಿ ನದಿಯ ನೀರಿನ ಹರಿವು ಶುದ್ಧೀಕರಣಕ್ಕೆ ಸೂಕ್ತವಾಗಿದೆ ಮತ್ತು ಪವಿತ್ರ ಕೊಳವಾದ ತಿರುವಂಚಿರಾ ನೀರಿನಿಂದ ತುಂಬಿರುತ್ತದೆ.

ವರ್ಷದ ಉಳಿದೆಲ್ಲಾ ದಿನಗಳೂ  ಭಕ್ತಾದಿಗಳ ದರ್ಶನಕ್ಕೆ ಲಭ್ಯವಿರುವ  ಪರಶುರಾಮರಿಂದ ಸ್ಥಾಪಿಸಲ್ಪಟ್ಟಿದೆ ಎಂದು  ನಂಬಲಾಗಿರುವ  ಇಕ್ಕರೆ ಕೊಟ್ಟಿಯೂರು ದೇವಾಲಯ ವೈಶಾಖ ಉತ್ಸವದ  ಸಮಯದಲ್ಲಿ ಮಾತ್ರಾ ಮುಚ್ಚಿರುತ್ತದೆ. ಇನ್ನು ಈಗಾಗಲೇ ತಿಳಿಸಿರುವಂತೆ  ಉತ್ತರ ದಂಡೆಯಲ್ಲಿರುವ ಅಕ್ಕರೆ  ಕೊಟ್ಟಿಯೂರಿನ ಮಣಿಥರ ಎಂಬ ಸ್ಥಳದಲ್ಲಿ ಪರಶಿವನು  ಸ್ವಯಂಭು ಶಿವಲಿಂಗವಾಗಿ ನೆಲೆಸಿದ್ದರೆ, ಅವನ ಪತ್ನಿ  ಪಾರ್ವತಿ ದೇವಿಯ ಗುಡಿಯು ದೇವಾಲಯದ ಪ್ರಾಂಗಣದಲ್ಲೇ ಇದ್ದು ಅದಕ್ಕೆ  ಅಮ್ಮರಕ್ಕಲ್ ಥರ ಎಂದು ಕರೆಯಲಾಗುತ್ತದೆ. ಸ್ವಾರಸ್ಯಕರವಾದ ಸಂಗತಿಯೆಂದರೆ ಈ ವೈಶಾಖ ಉತ್ಸವದ ಸಂಧರ್ಭದಲ್ಲಿಯೇ ಮುಂಗಾರು ಮಳೆಯೂ ಆ ಪ್ರದೇಶದಲ್ಲಿ ಚುರುಕಾಗಿರುವ ಕಾರಣ ಬಾವಲಿ ನದಿಯು ಅತ್ಯಂತ ರಭಸವಾಗಿ ಮತ್ತು ತುಂಬಿ ಹರಿಯುವ ಮೂಲಕ ಈ ಹಬ್ಬಕ್ಕೆ ಮತ್ತಷ್ಟು ಕಳೆಯನ್ನು ಕೊಡುತ್ತದೆ.

ಈ ಹಬ್ಬವು ಹಿಂದೂ ಪುರಾಣಗಳಲ್ಲಿ ಮಹತ್ವದ ಘಟನೆಯಾದ ದಕ್ಷ ಯಾಗವನ್ನು ಸ್ಮರಿಸುತ್ತದೆ. ಪ್ರಯಾಗದಲ್ಲಿ ನಡೆಯುವ ಕುಂಭಮೇಳದಂತೆಯೇ, ಈ ತೀರ್ಥಯಾತ್ರೆಯೂ ಧಾರ್ಮಿಕ ಶುದ್ಧೀಕರಣವನ್ನು ಒಳಗೊಂಡಿದೆ. ಶಾಶ್ವತ ರಚನೆಗಳಿಲ್ಲದ ಕಾರಣ ಈ ಸ್ಥಳವನ್ನು ಸಾಂಪ್ರದಾಯಿಕ ದೇವಾಲಯ ಎಂದು ವರ್ಗೀಕರಿಸಲಾಗಿಲ್ಲ. ಬದಲಾಗಿ, ಯಜ್ಞ ಭೂಮಿ ಎಂದು ಕರೆಯಲ್ಪಡುವ ತಾಳೆ ಎಲೆಗಳಿಂದ ನಿರ್ಮಿಸಲಾದ ತಾತ್ಕಾಲಿಕ ಆಶ್ರಮವು ಆಚರಣೆಗಳ ಕೇಂದ್ರ ಬಿಂದುವಾಗಿದೆ.  ಈ ವೈಶಾಖ ಮಹೋತ್ಸವದಲ್ಲಿ ಅನೇಕ ಧಾರ್ಮಿಕ ಆಚರಣೆಗಳು ರೂಢಿಯಲ್ಲಿದ್ದು  ಅವುಗಳಲ್ಲಿ ದೇವರಿಗೆ ಅರ್ಪಿಸುವ  ವಿಶಿಷ್ಟವಾದ ತುಪ್ಪದ ಅಭಿಷೇಕ, ನೆಯ್ಯಟ್ಟಂ ಸಮಾರಂಭವೂ ಸೇರಿದಂತೆ ವಿಸ್ತಾರವಾದ ಆಚರಣೆಗಳು ಮತ್ತು ಅರ್ಪಣೆಗಳನ್ನು ಒಳಗೊಂಡಿದೆ. ಮುತ್ತಿರೇರಿಕಾವುನಿಂದ ದಕ್ಷನನ್ನು ವೀರಭದ್ರ ಸಂಹರಿಸಿದಂತಹ ಕತ್ತಿಯನ್ನು ತರುವುದು, ಭಂಡಾರಂ ಎಳುನ್ನಲ್ಲತ್  ಅರ್ಥಾತ್  ಎರಡು ಆನೆಗಳ ಮೇಲೆ  ಚಿನ್ನ, ಬೆಳ್ಳಿ ಪಾತ್ರೆಗಳು ಮತ್ತು ಆಭರಣಗಳನ್ನು ಮನಾಥನ ಗ್ರಾಮದಿಂದ ಕೊಟ್ಟಿಯೂರಿಗೆ ಸಾಗಿಸುವುದು, ಎಳನೀರ್ ವೈಪ್ಪು ಮತ್ತು ಎಳನೀರಟ್ಟಂ  ಎಂಬ ಸೇವೆಯ ಹೆಸರಿನಲ್ಲಿ  ಸ್ವಾಮಿಗೆ ಎಳನೀರಿನ ಅಭಿಷೇಕ ಮಾಡುವುದು,  ರೋಹಿಣಿ ಆರಾಧನೆ ಎಂಬ ಅಚರಣೆಯಲ್ಲಿ ಸ್ವಯಂಭೂ ಶಿವಲಿಂಗವನ್ನು ಅಲ್ಲಿನ ಅರ್ಚಕರು ಭಕ್ತಿಪೂರ್ವಕವಾಗಿ  ಅಪ್ಪಿಕೊಳ್ಳುವುದಾದರೇ, ಎಲ್ಲದ್ದಕ್ಕಿಂತಲೂ ಅತ್ಯಂತ ಆಕರ್ಷಣೆಯೆಂದರೆ ಮಂಡಿ ಎತ್ತರದ ನದಿಯ ನೀರಿನಲ್ಲಿ ಎತ್ತರೆತ್ತರದ ಆನೆಗಳ ಮೇಲೆ  ಎಳುನ್ನಲ್ಲಿಪ್ಪು ಅರ್ಥಾತ್  ಶಿವ ಮತ್ತು ಪಾರ್ವತಿಯ ವಿಗ್ರಹಗಳೊಂದಿಗೆ ಮೆರವಣಿಗೆಯಾಗಿದೆ. ಈ ಮೆರವಣೆಗೆಯ ನಂತರ ಹಬ್ಬದ ಮತ್ತೊಂದು ಪ್ರಮುಖ ಭಾಗವೆಂದರೆ ಆನಾಯೂಟು ಅರ್ಥಾತ್ ಆನೆಗಳಿಗೆ ಆಹಾರವನ್ನು ನೀಡುವುದು.  ಇದರ ಸೊಬಗನ್ನು ನೋಡುವ ಸಲುವಾಗಿಯೇ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು  ಇಲ್ಲಿಗೆ ಬರುತ್ತಾರೆ. 2025 ರಲ್ಲಿ ಕೊಟ್ಟಿಯೂರಿನ ವೈಶಾಖ ಮಹೋತ್ಸವವು ಜೂನ್ 8 ರಿಂದ ಆರಂಭವಾಗಿದ್ದು  ಜುಲೈ 4 ರವರೆಗೆ ಬಹಳ ಅದ್ದೂರಿಯಿಂದ ನಡೆಯಲಿದ್ದು ಜೂನ್ 10 ರಿಂದ ಜೂನ್ 30ರ ಮಧ್ಯಾಹ್ನದವರೆಗೆ ಮಹಿಳೆಯರಿಗೆ  ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿದೆ.

ಹಬ್ಬದ ಸಮಯದಲ್ಲಿ, ಹತ್ತಾರು ಸಾವಿರ ಯಾತ್ರಿಕರು  ದಕ್ಷನ ಯಜ್ಞ ಭೂಮಿ ಎಂದೇ ಪ್ರಸಿದ್ಧವಾಗಿರುವ  ಅಕ್ಕರೆ ಕೊಟ್ಟಿಯೂರಿನ ವೈದಿಕ ಸ್ಥಳದಲ್ಲಿ ನಿರ್ಮಿಸಲಾದ ತಾತ್ಕಾಲಿಕ ದೇವಾಲಯದಲ್ಲಿ ನಡೆಯುವ  ಪೂಜೆಗೆ ಸೇರುತ್ತಾರೆ. ಈ ಪೂಜೆಯು ದೇವಾಲಯದ ಕೇಂದ್ರಬಿಂದು ಆಗಿರುವ ಸ್ವಯಂಭು ಶಿವಲಿಂಗಕ್ಕೆ  ಭಕ್ತರು ಶುದ್ಧೀಕರಣವನ್ನು ಮಾಡುತ್ತಾರೆ. ಸಾಂಪ್ರದಾಯಿಕ ದೇವಾಲಯಗಳಲ್ಲಿ  ಇರುವಂತೆ ಇಲ್ಲಿನ ತಾತ್ಕಾಲಿಕ ದೇವಾಲಯದಲ್ಲಿ ಶ್ರೀಕೋವಿಲ್  ಅರ್ಥಾತ್ ಗರ್ಭಗೃಹದ  ಬದಲಾಗಿ,  ನದಿಯ ಕಲ್ಲುಗಳಿಂದ ಮಾಡಿದ ಎತ್ತರದ ವೇದಿಕೆಯ ಮೇಲೆ ನಿಂತಿದ್ದು, ಅದರ ಸುತ್ತಲೂ ಕೊಳವಿದೆ. ಕೊಳದ ನೀರು ಬಾವಲಿ ನದಿಗೆ ಹರಿಯುತ್ತದೆ. ಮೇಲಿನಿಂದ ನೋಡಿದಾಗ, ಇಡೀ ದೇವಾಲಯವು ಶಿವಲಿಂಗದಂತೆ ಕಾಣಿಸುತ್ತದೆ.  ಈ ಮುಖ್ಯ ದೇವಾಲಯದ ಪಕ್ಕದಲ್ಲೇ ಅಮ್ಮರಕಲ್ ಥರಾ  ಅರ್ಥಾತ್ ಮಣಿತಾರಾ ಎಂಬ ಎತ್ತರದ ವೃತ್ತಾಕಾರದ ವೇದಿಕೆಯಿದ್ದು ಅಲ್ಲಿಯೇ ದಾಕ್ಷಾಯಿಣಿ ಯಜ್ಞ ಕುಂಡಕ್ಕೆ ಹಾರಿದಳು ಎನ್ನುವ ನಂಬಿಕೆ ಇದೆ.  ಇದೇ ಸ್ಥಳದಲ್ಲಿ ಒಂದು ದೈತ್ಯ ಜಯಂತಿ ವಿಲಕ್ಕು ಅರ್ಥಾತ್ ಲಕ್ಷ್ಮಿ ದೀಪದ ರೂಪಾಂತರ ಮತ್ತು ತಾಳೆ ಎಲೆ ಛತ್ರಿಯ ಕೆಳಗೆ ಭಗವತಿ ಕನ್ನಡಿ ವಿಗ್ರಹವಿದೆ. ಈ ಪ್ರದೇಶಕ್ಕೆ  ಆದಿ ಗುರು ಶಂಕರಾಚಾರ್ಯರೂ ಸಹಾ ಬಂದು ಇಲ್ಲಿನ ಬಾವಲಿ ನದಿಯಲ್ಲಿ ಮಿಂದು ಇಲ್ಲಿನ ವಡಕ್ಕೇಶ್ವರಂ ಮತ್ತು ಸ್ವಯಂಭೂ ಲಿಂಗಕ್ಕೆ  ಪೂಜೆ ಮಾಡಿ ಭಕ್ತಿಯಿಂದ ಪ್ರಾರ್ಥಿಸಿದ ನಂತರ ತಮ್ಮ ಪ್ರಯಾಣವನ್ನು ಮುಂದುವರೆಸಿದರು ಎಂಬ ನಂಬಿಕೆ ಇದೆ.

ಕೇರಳದ ಉಳಿದ ದೇವಾಲಯಗಳಲ್ಲಿ ನಡೆಯುವಂತಹ ವಿಶೇಷವಾದ ಆನೆಗಳ ಉತ್ಸವ ಅಥವಾ ಸಿಡಿಮದ್ದುಗಳ  ಅಬ್ಬರವಿಲ್ಲದೇ, ಇಲ್ಲಿನ ಪುರೋಹಿತರಿಂದ ವೇದ ಪಠಣದ ಜೊತೆ ಸ್ವಾಮಿಗೆ ಷೋಢಶೋಪಚಾರದ ಪೂಜೆ ಮತ್ತು  ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಲವು ಧಾರ್ಮಿಕ ಆಚರಣೆಗಳಿಗೆ ಮಾತ್ರಾ ಸೀಮಿತವಾಗಿದ್ದು ಭಕ್ತಾದಿಗಳೇ ನೇರವಾಗಿ ಸ್ವಾಮಿಯ ಮೇಲೆ ಬೆಳ್ಳಿ ಮತ್ತು ಚಿನ್ನದ ಕೊಡಗಳಿಂದ ಜಲಾಭಿಷೇಕ ಮಾಡಬಹುದಾಗಿರುವ ಕಾರಣ, ವಾಗಿರುವುದರಿಂದ ಇದನ್ನು ಕೊಟ್ಟಿಯೂರು ಉಲ್ಲಾಸ ಇಲ್ಲವೇ ಉತ್ಸವ ಎಂದು ಕರೆಯುವುದಕ್ಕಿಂತಲೂ ಕೊಟ್ಟಿಯೂರು ತೀರ್ಥಯಾತ್ರೆ ಎನ್ನುವುದೇ ಸೂಕ್ತವಾಗಿದೆ.

ಈ ಪ್ರದೇಶದ ದೇವಾಲಯಗಳಲ್ಲಿ ಶಿವನೇ ಪ್ರಧಾನ ದೇವರಾಗಿದ್ದರೂ, ಈ ವೈಶಾಖ ಉತ್ಸವದಲ್ಲಿ ರೋಹಿಣಿ ಆರಾಧನೆಯ ಮೂಲಕ ಮಹಾವಿಷ್ಣುವಿಗೂ ಪ್ರಾಮುಖ್ಯತೆ ಕೊಡಲಾಗಿರುವುದು ವಿಶೇಷವಾಗಿದೆ. ರೋಹಿಣಿ ಆರಾಧನೆಯ ಸಮಯದಲ್ಲಿ  ಸ್ಥಳೀಯ ವೈಷ್ಣವ ಕುಟುಂಬದ ಮುಖ್ಯಸ್ಥ ಕುರುಮತ್ತೂರು ನಾಯಕನ್ ಬ್ರಾಹ್ಮಣರು ವಿಷ್ಣುವಿನ ಪ್ರಾತಿನಿಧ್ಯವೆಂದು ಪರಿಗಣಿಸಲ್ಪಟ್ಟ ಈ ಭಟ್ಟತಿರಿಪ್ಪಾದವರು ನಂಬೂದಿರಿ ಪುರೋಹಿತರುಗಳು ಈ ಮೊದಲೇ ತಿಳಿಸಿದಂತೆ ರೋಹಿಣಿ ನಕ್ಷತ್ರದಂದು ಆಲಿಂಗನ ಪುಷ್ಪಾಂಜಲಿ ಎಂಬ ಸೇವೆಯ ರೂಪದಲ್ಲಿ ಅಲ್ಲಿನ ಸ್ವಯಂಭು ಶಿವಲಿಂಗವನ್ನು ತಮ್ಮ ಕೈ ಮತ್ತು ಕಾಲಿನಿಂದ ಅಪ್ಪಿಕೊಳ್ಳುತ್ತಾರೆ. ಈ ರೀತಿಯ ಕ್ರಿಯೆಯು ದಕ್ಷ ಯಾಗದ ಸಮಯದಲ್ಲಿ ಸತಿಯ ದುರಂತದ ಸಮಯದಲ್ಲಿ ಶಿವನು ಅಸಹನೀಯವಾಗಿದ್ದಂತಹ ಪೌರಾಣಿಕ ಘಟನೆಯನ್ನು ಸ್ಮರಿಸುತ್ತದೆ. ಈ ರೋಹಿಣಿ ಆರಾಧನೆಯು ದುಃಖಿತ ಶಿವನನ್ನು  ಮಹಾ ವಿಷ್ಣುವು ತನ್ನ ಕೈ ಕಾಲುಗಳಿಂದ ಆಲಿಂಗನ ಮಾಡಿ ಸಂತೈಸುವ ಸಾಂಕೇತಿಕ ಪ್ರಾತಿನಿಧ್ಯವಾಗಿದೆ.

ಇನ್ನು ದಕ್ಷನ ತಲೆಯನ್ನು ವೀರಭದ್ರ ಕಡೆದ ನಂತರ ಆತನ ಗಡ್ಡವನ್ನು ಅಲ್ಲೇ ಹತ್ತಿರದ ಕಾಡಿನಲ್ಲಿ ಬಿಸಾಡಿದ್ದನ್ನು ವಡಪ್ಪು ಎನ್ನಲಾಗುತ್ತದೆ. ಎಳೆಯ ಬಿದಿರು ತುಂಡುಗಳನ್ನು ನೀರಿನಲ್ಲಿ ಕೆಲ ಕಾಲ ನೆನೆಸಿ ಅದನ್ನು ಕಲ್ಲಿನಿಂದ ಚಜ್ಜಿ ಆದರಿಂದ ಬರುವ ನಾರನ್ನು ಕಬ್ಬಿಣದ ಬಾಚಣಿಗೆಯಿಂದ ಬಾಚಿ ಕೂದಲಿನ ರೂಪದಲ್ಲಿರುವುದನ್ನೇ ವಡಪ್ಪು ಎನ್ನಲಾಗುತ್ತದೆ. ಈ ರೀತಿಯ ವಡಪ್ಪನ್ನು ಇಲ್ಲಿಗೆ ಬರುವ ಭಕ್ತಾದಿಗಳು ಪ್ರಸಾದ ರೂಪದಲ್ಲಿ ತಮ್ಮ ಮನೆಗೆ ತೆಗೆದುಕೊಂಡು ಪೂಜಿಸಿದಲ್ಲಿ  ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವ ನಂಬಿಕೆ ಇದೆ.

ಇಲ್ಲಿಗೆ ಬರುವ ಅನೇಕ ಭಕ್ತಾದಿಗಳು ಹೆಚ್ಚಿನವರು ವಿವಾಹ ಆಗದವರು, ವಿವಾಹವಾದರೂ ಪತಿ ಪತ್ನಿಯ ಸಮಸ್ಯೆ ಎದುರಿಸುತ್ತಿರುವವರು,  ಸಂತಾನ ಇಲ್ಲದವರು, ವಿವಾಹ ವಿಚ್ಡೇದನ ಆಗಿದ್ದವರು ಬರುತ್ತಾರೆ.  ಈ ರೀತಿಯ ಸಮಸ್ಯೆ ಇದ್ದವರು ಭಕ್ತಿಯಿಂದ ಇಲ್ಲಿಗೆ ಬಂದು ತಮ್ಮ ಅಭಿಲಾಷೆಯನ್ನು ಸ್ವಯಂಭೂ ಶಿವನಿಗೆ ತಿಳಿಸಿ ಬೆಳ್ಳಿಯ ಕೊಡಪಾನ ಸಮರ್ಪಣೆ ಸೇವೆಯ  ಅರ್ಥಾತ್ ಅಲ್ಲಿರುವ ಬೆಳ್ಳಿಯ ಬಿಂದಿಗೆಯಲ್ಲಿ ನೀರಿನಿಂದ ಅಭಿಷೇಕ ಮಾಡಿಸಿ ಬಂದಲ್ಲಿ ಸತಿಯನ್ನು ಕಳೆದುಕೊಂಡಂತಹ ಸ್ಥಿತಿ ತನ್ನ ಭಕ್ತರಿಗೆ ಬಾರದಿರಲಿ ಎಂಬ ಆಶಯದಿಂದ ಶಿವನು ಅವರಿಗೆ ಹರಸುವುದರಿಂದ  ಮುಂದಿನ ವರ್ಷ ಆಗುವಷ್ಟರಲ್ಲಿ ಅವರ ಅಭೀಪ್ಸೆಗಳೆಲ್ಲವೂ ಈಡೇರಿ ಮರು ವರ್ಷ ಅಲ್ಲಿಗೆ ಬಂದು ಸ್ವರ್ಣ ಕೊಡಪಾನ ಸೇವೆ ಸಲ್ಲಿಸುವಂತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಇಲ್ಲಿಗೆ ಬರುವ  ಭಕ್ತರು ಬ್ರಾಹ್ಮೀ ಮಹೂರ್ತದದಲ್ಲಿ ಅಲ್ಲಿನ ನದಿಯಲ್ಲಿ ಸ್ನಾನ ಮಾಡಿ ಶುಚಿರ್ಭೂತವಾಗಿ ಕಲ್ಲಿಗೆ ಕಲ್ಲಿಗೆ ತಿಕ್ಕಿದಲ್ಲಿ ಬರುವ ಭಸ್ಮವನ್ನೇ ತಮ್ಮ ಹಣೆಗೆ ಧರಿಸಿ, ಪಂಚೆ ಮತ್ತು ಶಲ್ಯದೊಂದಿಗೆ ದೇವರ ದರ್ಶನ ಮಾಡುವ ಸಂಪ್ರದಾಯವಿದೆ.

ಕೊಟ್ಟಿಯೂರು ದೇವಸ್ಥಾನವು ದೂರದ ಸ್ಥಳವಾಗಿರುವುದರಿಂದ ಕಣ್ಣೂರಿನ ವಿಮಾನ ನಿಲ್ದಾಣ ಇಲ್ಲವೇ ರೈಲ್ವೇ ನಿಲ್ದಾಣದ ವರೆಗೂ ಬಂದು ಅಲ್ಲಿಂದ ರಸ್ತೆಯ ಮೂಲಕ ಈ ದೇವಾಲಯವನ್ನು ತಲುಪಬಹುದಾಗಿದೆ ಸ್ವಂತ ವಾಹನದಲ್ಲಿ ಬರುವವರು  ಕೊಟ್ಟಿಯೂರು  ಹತ್ತಿರದ ಇರಿಟ್ಟಿನಲ್ಲಿ ಬಜೆಟ್ ಸ್ನೇಹಿ ಲಾಡ್ಜ್‌ಗಳಿಂದ ಹಿಡಿದು ಮಧ್ಯಮ ಶ್ರೇಣಿಯ ಹೋಟೆಲ್‌ಗಳವರೆಗೆ ಇರುವ ವಸತಿ ಗೃಹದಲ್ಲಿ ತಂಗಿ ಅಲ್ಲಿಂದ  ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ಬರುಬಹುದಾಗಿದೆ. ಕೇರಳದ ಉಳಿದ ದೇವಾಲಯಗಳಂತೆ ಇಲ್ಲಿಯೂ ಸಹಾ ಸಾಂಪ್ರಾದಾಯಿಕ ಉಡುಗೆ ತೊಡುಗೆ ಉಟ್ಟವರಿಗೆ ಮಾತ್ರಾ ಪ್ರವೇಶ ಇರುವ ಕಾರಣ ಮಹಿಳೆಯರು ಸೀರೆ ಮತ್ತು  ಪುರುಷರು ಪಂಚೆ ಮತ್ತು ಶಲ್ಯಗಳಲ್ಲಿ ಈ ದೇವಾಲಯಕ್ಕೆ ಬಂದು ಅಲ್ಲಿನ  ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಕೊಟ್ಟಿಯೂರಿನ ವೈಶಾಖ ಉತ್ಸವವಕ್ಕೆ ಬಂದವರೂ ಹಾಗೆಯೇ ಅಲ್ಲಿನ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಅನುಭವವನ್ನೂ ಪಡೆಯಬಹುದಾಗಿದ್ದು, ಹತ್ತಿರದ ಆಕರ್ಷಣೆಗಳಲ್ಲಿ ಒಂದಾದ ಪ್ರಶಾಂತವಾದ ಪಾಲ್ಚುರಾಮ್ ಜಲಪಾತಗಳು, ಐತಿಹಾಸಿಕ ಪಳಸ್ಸಿ ಅಣೆಕಟ್ಟು ಮತ್ತು ಸುಂದರವಾದ ಅರಲಂ ವನ್ಯಜೀವಿ ಅಭಯಾರಣ್ಯಗಳಲ್ಲಿ  ಚಾರಣ, ಪಕ್ಷಿ ವೀಕ್ಷಣೆ ಮತ್ತು ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳನ್ನು ನೋಡಿ ಆನಂದಿಸಬಹುದಾಗಿದೆ ಇದಲ್ಲದೇ,  ಈ ಪ್ರದೇಶವು ಸಾಂಪ್ರದಾಯಿಕ ಕೇರಳ ಪಾಕಪದ್ಧತಿಗೆ ಹೆಸರುವಾಸಿಯಾಗಿರುವ ಕಾರಣ, ಅಧಿಕೃತವಾಗಿ ಅಲ್ಲಿನ ಸ್ಥಳೀಯ ಭಕ್ಷ್ಯಗಳನ್ನು ಸವಿದು ಅಲ್ಲಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment