ತಿರುಪತಿಯ ತಿಮ್ಮಪ್ಪನಿಗೆ ಕೇವಲ ನಮ್ಮ ಭಾರತವಷ್ಟೇ ಅಲ್ಲದೇ ಪ್ರಪಂಚಾದ್ಯಂತ ಕೋಟ್ಯಾಂತರ ಭಕ್ತರು ಇದ್ದು, ಪ್ರಪಂಚದ ಅತ್ಯಂತ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ತಿರುಪತಿ ತಿಮ್ಮಪ್ಪನಿಗೂ ಅಗ್ರ ಸ್ಥಾನವಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಈಗ ಸಕಲ ರೀತಿಯ ಅವಕಾಶಗಳು ಇದ್ದರೂ, ಬಹುತೇಕರು, ತಿರುಪತಿಯ ವರೆಗೂ ಬಸ್ಸು, ಕಾರು ರೈಲುಗಳಲ್ಲಿ ಹೋಗಿ ತಿರುಪತಿಯ ಬೆಟ್ಟದ ತಪ್ಪಲಿನಿಂದ ಅಲಿಪಿರಿ ಮೂಲಕವಾಗಿ ಸಪ್ತಗಿರಿ ಒಡೆಯನ ದರ್ಶನ ಪಡೆಯಲು ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ ಮತ್ತು ವೆಂಕಟಾದ್ರಿ ಎಂಬ ಪವಿತ್ರ ಏಳು ಬೆಟ್ಟಗಳ ಸರಿಸುಮಾರು 3,550 ಮೆಟ್ಟಿಲುಗಳನ್ನು ಒಳಗೊಂಡಿರುವ ಸುಮಾರು 9 ಕಿಲೋಮೀಟರ್ ದೂರವನ್ನು ಸಾಧಾರಣವಾಗಿ 3 ರಿಂದ 5 ಗಂಟೆಗಳಲ್ಲಿ ಗೋವಿಂದನ ಸ್ಮರಣೆಯನ್ನು ಮಾಡಿಕೊಂಡು ಹತ್ತುವುದಕ್ಕೇ ಇಚ್ಚಿಸುತ್ತಾರೆ. ಈ ರೀತಿಯಾಗಿ ಪಾದಯಾತ್ರೆಯ ಮೂಲಕ ತಿರುಮಲ ಬೆಟ್ಟಗಳ ಸುಂದರ ಮತ್ತು ವರ್ಣಮಯ ಕಾಡುಗಳ ಮೂಲಕ ಹಾದುಹೋಗುವ ಅತ್ಯಂತ ಅಪಾಯಕಾರಿ ಪ್ರಯಾಣವಾಗಿದ್ದರೂ ಭಗವಂತನ ನಾಮಸ್ಮರಣೆಯ ಮತ್ತು ಆತನ ಮೇಲಿನ ಅಚಲವಾದ ನಂಬಿಕೆಯ ಮುಂದೆ ಆ ಭಯ, ಆಯಾಸ ಎಲ್ಲವೂ ನಗಣ್ಯ ಎನಿಸುತ್ತದೆ.
ಹೀಗೆ ತಿರುಪತಿಯಿಂದ ತಿರುಮಲಕ್ಕೆ ಹೋಗಿ ಅಲ್ಲಿ ಮತ್ತೆ ಗಂಟೆ ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಕೆಲವೇ ಕೆಲವು ಕ್ಷಣಗಳ ಕಾಲ ತಿಮ್ಮಪ್ಪನ ದರ್ಶನ ಪಡೆದ ನಂತರ ಯಥಾ ಶಕ್ತಿ ತಮ್ಮ ಕಾಣಿಕೆಯನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಸಮರ್ಪಿಸಿ ಅಲ್ಲಿ ಕೊಟ್ಟ ನೈವೇದ್ಯದ ಪ್ರಸಾದವನ್ನು ಸ್ವೀಕರಿಸಿ ಮತ್ತೆ ವಿಶ್ವವಿಖ್ಯಾತ ತಿರುಪತಿ ಲಡ್ದುವಿಗೆ ಸರದಿ ಸಾಲಿನಲ್ಲಿ ನಿಂತು ಲಡ್ಡುವನ್ನು ಪಡೆದು ಹೊರಗೆ ಬಂದ ತಕ್ಷಣ ಅಬ್ಬಾ ನಮ್ಮ ಜೀವನ ಸಾರ್ಥಕವಾಯಿತು ಎಂದು ಕೊಳ್ಳುವುದಲ್ಲದೇ. ಏಳುಕೊಂಡಲವಾಡ, ತಿಮ್ಮಪ್ಪ ಮತ್ತೆ ಮತ್ತೆ ನಿನ್ನ ದರ್ಶನಕ್ಕೆ ಹೀಗೆಯೇ ಬರುವಂತಹ ಆವಕಾಶವನ್ನು ನೀಡು ಎಂದು ಕೇಳಿಕೊಂಡು ತಮ್ಮ ತಮ್ಮ ಊರುಗಳ ಕಡೆಗೆ ಹಿಂದಿರುಗುತ್ತಾರೆ.
ಆದರೆ ತಿಮ್ಮಪ್ಪನ ಗುಡಿಯ ದೇವಸ್ಥಾನದ ಮಹಾದ್ವಾರದಿಂದ ಕೂಗಳತೆಯ ದೂರದಲ್ಲೇ ಇರುವ ದೇವಾಲಯದಲ್ಲಿ ಕೈಗಳಿಗೆ ಬೇಡಿಗಳನ್ನು ಹಾಕಿಕೊಂಡು ಕುಳಿತಿರುವ ಬೇಡಿ ಆಂಜನೇಯನ ದರ್ಶನವನ್ನೇ ಮಾಡದೇ ಹೋಗುವುದು ನಿಜಕ್ಕೂ ವಿಪರ್ಯಾಸವೇ ಸರಿ. ಇದು ವಿಪರ್ಯಾಸ ಎನ್ನುವುದಕ್ಕಿಂತಲೂ ಬಹುತೇಕರಿಗೆ ಈ ವಿಷಯ ತಿಳಿಯದಿರುವ ಕಾರಣ, ಅಂಜನೀಪುತ್ರ ಆಂಜನೇಯನ ದರ್ಶನ ಮಾಡದೇ ಹೋಗಿರುತ್ತಾರೆ ಎಂದರೂ ತಪ್ಪಾಗದು.
ನಮ್ಮ ಕನ್ನಡಿಗರ ಪ್ರಕಾರ ಮತ್ತು ಐತಿಹಾಸಿಕ ಕುರುಹುಗಳ ಪ್ರಕಾರ ಆಂಜನೇಯ ನಮ್ಮ ಕರ್ನಾಟಕದ ಕಿಷ್ಕಿಂದಾ ಪ್ರದೇಶದ ಅಂಜನಾ ಪರ್ವತದವನು. ಅದಕ್ಕೆ ಪುರಾವೆ ಎನ್ನುವಂತೆ ತ್ರೇತಾಯುಗದಲ್ಲಿ ಸೀತೆಯನ್ನು ಹುಡುಕುತ್ತಾ ಬಂದ ರಾಮ ಲಕ್ಷ್ಮಣರಿಗೆ ಇದೇ ಪ್ರದೇಶದಲ್ಲಿಯೇ ಮೊದಲು ಶಬರಿ ಸಿಕ್ಕಿದ್ದು ನಂತರ ಆಂಜನೇಯ ಪರಿಚಯವಾಗಿ ಅವನ ಮೂಲಕ ಸುಗ್ರೀವನ ಪರಿಚಯವಾಗಿ ಅಲ್ಲಿಯೇ ವಾಲಿಯ ವಧೆಯನ್ನು ಮಾಡಿದ ಕಥೆ ಎಲ್ಲರಿಗೂ ತಿಳಿದಿದೆ. ಈ ಎಲ್ಲಾ ಪೌರಾಣಿಕ ಅಂಶಗಳಿಗೂ ಪೂರಕವಾಗಿ ಆ ಪ್ರದೇಶದಲ್ಲಿ ಕುರುಹುಗಳಿವೆ. ಆದರೆ, ತಿರುಪತಿಯ ಕೆಲವು ವಿದ್ವಾಂಸರುಗಳು ಮತ್ತು ಅಲ್ಲಿನ ವಿಶ್ವವಿದ್ಯಾಲಯದ ಇತಿಹಾಸಕಾರರ ಪ್ರಕಾರ, ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿ ಹಾಗಾಗಿ ಈ ರೀತಿಯಾಗಿ ಆಂಜನೇಯನು ಬೇಡಿ ತೊಡಿಸಿಕೊಂಡು ಒಂದೇ ಸ್ಥಳದಲ್ಲಿ ಇರುವುದರ ಹಿಂದೆಯೂ ಒಂದು ರೋಚಕವಾದ ದಂತ ಕಥೆ ಇದ್ದು ಅದನ್ನು ಸವಿಸ್ಥಾರವಾಗಿ ತಿಳಿಯೋಣ ಬನ್ನಿ.
ಅದೊಮ್ಮೆ ಸದಾಕಾಲವೂ ಒಂದು ಕಡೆ ನಿಲ್ಲದಂತಹ ಬಹಳ ಚೇಷ್ಟೆಯ ಚಾಳಿಯವನಾದ ಅಂಜನಾ ದೇವಿಯ ಪುತ್ರ ಬಾಲ ಹನುಮಾನ್ ತಿರುಮಲ ಬೆಟ್ಟಗಳನ್ನು ಬಿಟ್ಟು ಒಂಟೆಯನ್ನು ಹಿಡಿದು ಎಲ್ಲೆಲ್ಲೋ ಅಲೆಯಲು ಹೋಗಲು ಇಚ್ಚಿಸಿದಾಗ, ಸಹಜವಾಗಿಯೇ ಮಾತೃವಾತ್ಸಲ್ಯದಿಂದ ತನ್ನ ಪ್ರೀತಿಯ ಮಗ ಹಾಗೆ ಊರೂರು ಅಲೆಯುವುದನ್ನು ತಡೆಯುವ ಸಲುವಾಗಿ, ತಾಯಿ ಅಂಜನಾ ದೇವಿಯು ಆಂಜನೇಯನ ಎರಡೂ ಕೈ ಮತ್ತು ಕೈಕಾಲುಗಳಿಗೆ ಬೇಡಿಯನ್ನು ತೊಡಿಸಿ ಆಂಜನೇಯನನ್ನು ಕಟ್ಟಿ ಹಾಕುತ್ತಾಳೆ.
ತನ್ನ ತಾಯಿಯ ಈ ರೀತಿಯಾದ ಹಠಾತ್ ಕೆಲಸದಿಂದ ತುಸು ಬೇಸರಗೊಂಡ ಆಂಜನೇಯ, ಅಮ್ಮಾ! ಈ ಬೇಡಿಗಳಿಂದ ನನಗೆ ಎಂದು ಮುಕ್ತಿ ದೊರೆಯುತ್ತದೆ? ಎಂದು ಕೇಳಿದಾಗ, ಅಯ್ಯೋ, ಕಂದಾ! ಬೇಸರ ಮಾಡಿ ಕೊಳ್ಳದಿರು. ನಿನ್ನ ಮೇಲಿನ ಪ್ರೀತಿ ಮತ್ತು ಕಾಳಜಿಯಿಂದ ನೀನು ಎಲ್ಲೂ ಹೋಗಬಾರದೆಂದು ಈ ರೀತಿಯಾಗಿ ಕಟ್ಟಿ ಹಾಕಿದ್ದೇನೆ. ಈಗ ತುರ್ತು ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದು, ಅಲ್ಲಿಂದ ಹಿಂದುರಿಗಿದ ಕೂಡಲೇ ನಿನ್ನನ್ನು ಬಂಧನದಿಂದ ಮುಕ್ತಿ ಗೊಳಿಸುತ್ತೇನೆ ಎಂದು ಹೇಳಿ ತನ್ನ ಪಾಡಿಗೆ ತಾನು ಹೋಗಿ ಬಿಡುತ್ತಾರೆ.
ತಾಯಿಯ ಮೇಲಿನ ಶಧ್ಧೆ, ಭಕ್ತಿ ಮತ್ತು ಗೌರವದಿಂದ, ಬಹಳ ವಿಧೇಯತೆಯಿಂದ ಅಮ್ಮ ಹಿಂತಿರುಗಿ ಬರುವವರೆಗೂ ಅಷ್ಟೇ ಅಲ್ವೇ? ಎಂದು ತಿಳಿದು ಹಾಗೆಯೇ ಅಲ್ಲಿಯೇ ಆಂಜನೇಯ ಕುಳಿತುಕೊಳ್ಳುತ್ತಾನೆ. ಆದರೆ ಹನುಮನನ್ನು ಅಲ್ಲಿಯೇ ಏಕಾಂಗಿಯಾಗಿ ಬಿಟ್ಟು, ಅಂಜನಾ ದೇವಿಯು ಕೆಲವು ಕಾರಣಗಳಿಂದಾಗಿ ತಿರುಮಲ ಬೆಟ್ಟಗಳನ್ನು ತೊರೆದು ಹಿಮಾಲಯದ ಆಕಾಶ ಗಂಗೆಯ ಬಳಿ ಶಾಶ್ವತವಾಗಿ ನೆಲಸಿದ ಕಾರಣ, ತಾಯಿಗೆ ಕೊಟ್ಟ ಮಾತಿನಿಂದಾಗಿ, ಪ್ರಾಮಾಣಿಕವಾಗಿ ಬಾಲ ಹನುಮಾನ್ ಇಂದಿಗೂ ಅದೇ ತಿರುಮಲ ಬೆಟ್ಟಗಳ ಮೇಲೆ ತಿರುಮಲ ದೇವಸ್ಥಾನದ ಪವಿತ್ರ ಮಹಾದ್ವಾರದ ಮುಂದೆಯೇ, ಹಿಮಾಲಯದಿಂದ ತನ್ನ ತಾಯಿ ಹಿಂತಿರುಗುವುದಕ್ಕಾಗಿಯೇ ಕಾಯುತ್ತಾ ಕುಳಿತ ಪರಿಣಾಮವಾಗಿ ಅಲ್ಲೊಂದು ಗುಡಿಯ ನಿರ್ಮಾಣವಾಗಿದೆ ಎಂಬ ಕಥೆ ಇದೆ.
ಆಂಜನೇಯನ ತಾಯಿ ಅಂಜನಾದೇವಿಯಿಂದ ಈ ರೀತಿಯ ತಪ್ಪುಗಳು ಆಗಿದ್ದರೂ, ಶ್ರೀ ವೆಂಕಟೇಶ್ವರ ಸ್ವಾಮಿ ಮಾತ್ರಾ, ತನ್ನ ಪರಮ ಶಿಷ್ಯ ಬಾಲ ಹನುಮಂತನನ್ನು ನಿರ್ಲಕ್ಷಿಸದೇ, ತನ್ನ ದೇವಾಲಯದ ಮುಂದೆ ಏಕಾಂಗಿಯಾಗಿ ಕುಳೀತಿರುವುದನ್ನು ನೋಡಿ, ಕಾಳಜಿಯಿಂದ ಅವನ ತಾಯಿ ಹಿಂತಿರುಗುವವರೆಗೂ ಅವನನ್ನು ಚೆನ್ನಾಗಿ ನೋಡಿಕೊಳ್ಳುವಂತೆಯೂ ಮತ್ತು ಪ್ರತಿ ದಿನವೂ ಸಮಯಕ್ಕೆ ಸರಿಯಾಗಿ ಬಾಲ ಹನುಮಂತನಿಗೆ ಆಹಾರವನ್ನು ಅರ್ಪಿಸುವಂತೆ ತನ್ನ ದೇವಾಲಯದ ಅರ್ಚಕರಿಗೆ ಆಜ್ಞಾಪಿಸುತ್ತಾನೆ.
ಸ್ವಾಮಿಯ ಆಣತಿಯ ಮೇರೆಗೆ ಅಂದಿನಿಂದ ಇಂದಿನವರೆಗೂ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ವರಾಹಸ್ವಾಮಿಗೆ ಪ್ರತಿ ದಿನವೂ ನೈವೇದ್ಯವನ್ನು ಅರ್ಪಿಸಿದ ನಂತರ ಅದೇ ನೈವೇದ್ಯವನ್ನು ಈ ಬೇಡಿಗಳೊಂದಿಗೆ ಬಂಧನವಾಗಿರುವ ಆಂಜನೇಯನಿಗೂ ಅರ್ಪಿಸಲಾಗುತ್ತದೆ.
ಉಳಿದ ಭಕ್ತಾದಿಗಳು ಏನು ಮಾಡಿದರೂ, ತಿರುಪತಿಗೆ ಪಾದಯಾತ್ರೆಗೆ ಭಕ್ತಾದಿಗಳು ಮಾತ್ರಾ, ತಮ್ಮ ಪಾದ ಯಾತ್ರೆ ಮುಗಿದು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ನಂತರ, ತಪ್ಪದೇ ಈ ಬೇಡಿ ಆಂಜನೇಯಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಏಳು ಬೆಟ್ಟಗಳನ್ನು ಏರಲು ತಮಗೆ ಶಕ್ತಿ ನೀಡಿದ್ದಕ್ಕಾಗಿ ಬಾಲ ಹನುಮಂತನಿಗೆ ಧನ್ಯವಾದಗಳನ್ನು ಅರ್ಪಿಸಿ ಅವನ ಆಶೀರ್ವಾದವನ್ನು ಪಡೆಯುತ್ತಾರೆ.
ಆನಂತರ ಅದೇ ಪಾದಯಾತ್ರೆಯ ಯಾತ್ರಿಕರು ಶ್ರೀವಾರಿ ದೇವಸ್ಥಾನದ ಮಹಾದ್ವಾರದ ಎದುರು ಇರುವ ಸದಾಕಾಲವೂ ಉರಿಯುತ್ತಿರುವ ಎಣ್ಣೆ ದೀಪ, ಅಖಂಡ ಜ್ಯೋತಿ ಅರ್ಥಾತ್ ಆಖಿಲಂದಂ ಇರುವ ಕಡೆ ಬಂದು ಅಲ್ಲಿ ತೆಂಗಿನಕಾಯಿಯ ನೈವೇದ್ಯ ಮಾಡಿಸಿ ಕರ್ಪೂರ ಆರತಿಯನ್ನು ಬೆಳಗಿಸಿ ತಮ್ಮ ಪಾದಯಾತ್ರೆಯನ್ನು ಕೊನೆಗೊಳಿಸುವುದು ಒಂದು ರೀತಿಯ ಅಲಿಖಿತ ರೂಢಿಯಾಗಿದೆ.
ತಿರುಮಲದ ಬೇಡಿ ಆಂಜನೇಯನ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಮುಂದಿನ ಬಾರಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಂತರ ತಪ್ಪದೇ ಬೇಡಿ ಆಂಜನೇಯನ ಗುಡಿಗೂ ಹೋಗಿ ಸ್ವಾಮಿಗೆ ಒಂದು ನಮಸ್ಕಾರಗಳನ್ನು ಹಾಕಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿ ಕೊಳ್ತೀರಿ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಇದುವರೆವಿಗೂ ತಿಳಿಯದ ವಿಷಯವನ್ನು ಮನದಟ್ಟು ಮಾಡುವಂತೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
LikeLiked by 1 person
ಧನ್ಯೋಸ್ಮಿ
LikeLike