17 ವರ್ಷಗಳ ನಂತರ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ RCB ತಂಡ ಜೂನ್ 3 2025ರ ತಡರಾತ್ರಿ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ PBKS ತಂಡವನ್ನು 6 ರನ್ನುಗಳಿಂದ ಸೋಲಿಸಿ 18 IPL CUP ಗೆಲ್ಲುತ್ತಿದ್ದಂತೆಯೇ ಪ್ರಪಂಚಾದ್ಯಂತ RCB ತಂಡದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಆತುರಾತುರದಲ್ಲಿ ಆ ಗೆಲುವನ್ನು ಸಂಭ್ರಮಿಸಬೇಕು ಎನ್ನುವ ಕೆಲವರ (ಅದರ ಕುರಿತು ತನಿಖೆ ನ್ಯಾಯಾಲಯದಲ್ಲಿ ನಡೆಯುತ್ತಿದೆ) ಹಪಾಹಪಿಯಲ್ಲಿ ಮಾರನೇ ದಿನವೇ, 2025ರ ಜೂನ್ 4ರಂದು 35000 ಜನರು ಕುಳಿತುಕೊಳ್ಳಬಹುದಾದಂತಹ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭಕ್ಕೆ 1-2 ಲಕ್ಷ ಅಭಿಮಾನಿಗಳು ಏಕಾಏಕಿ ನುಗ್ಗಿದಾಗ ನಡೆದ ತಳ್ಳಾಟ ಮತ್ತು ಒಬ್ಬರ ಮೇಲೆ ಒಬ್ಬರು ಬಿದ್ದು ಕಾಲ್ತುಳಿತದ ಪರಿಣಾಮ 11ಕ್ಕೂ ಹೆಚ್ಚಿನ ಜನರು ಅಸುನೀಗಿದರೆ 50ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವಾಗಲೇ, ನಮ್ಮ ಪಕ್ಕದ ರಾಜ್ಯವಾದ ತೆಲಂಗಾಣದ ಗುಂಟೂರಿನಲ್ಲಿ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರ ರೋಡ್ ಶೋನಲ್ಲಿ ಪಕ್ಷದ ಅಭಿಮಾನಿಯೊಬ್ಬರು ಪಲ್ನಾಡು ಜಿಲ್ಲೆಯ ಲಾಲ್‌ಪುರಂ ಹೆದ್ದಾರಿಯಲ್ಲಿ ಸಾಗುತ್ತಿದ್ದ ಜಗನ್ ಮೇಲೆ ಹತ್ತಿರದಿಂದ ಹೂವು ಸುರಿಯಲು ಯತ್ನಿಸುವಾಗ ಜಗನ್ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಸಂಗತಿ ನಿಜಕ್ಕೂ ಆಘಾತಕಾರಿಯಾಗಿದೆ.
ಪಲ್ನಾಡು ಜಿಲ್ಲೆಯ ರೆಂಟಪಲ್ಲೆ ಗ್ರಾಮದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮಾಜಿ ಸರಪಂಚ್ ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಅವರ ಕು ಕುಟುಂಬವನ್ನು ಸಂತೈಸಲು ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿಯವರು ಹೋಗಿದ್ದಂತಹ ಸಂಧರ್ಭದಲ್ಲಿ ಅಪಾರವಾದ ಜನಸ್ತೋಮ ನೆರೆದಿದ್ದನ್ನು ಕಂಡ ಜಗನ್ ಚಲಿಸುತ್ತಿದ್ದ ತಮ್ಮ ಕಾರಿನಿಂದ ಬಾಗಿಲನ್ನು ಸ್ವಲ್ಪ ತೆರೆದು ಅದರ ಮೇಲೆ ನಿಂತು ಕೊಂಡು ತಮ್ಮ ಅಭಿಮಾನಿಗಳತ್ತ ಕೈ ಬೀಸುತ್ತಾ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿರುವಾಗ, ಆ ರೋಡ್ ಷೋ ನಡೆಯುತ್ತಿದ್ದ ಹತ್ತಿರದ ವೆಂಗಲಾಯಪಾಲೆಂ ಗ್ರಾಮದ ನಿವಾಸಿಗಳಾದ 55 ವರ್ಷದ ಚೀಲಿ ಸಿಂಗಯ್ಯ ಎಂಬುವರು ಬಹಳ ಉತ್ಸಾಹದಿಂದ ಜಗನ್ ಅವರ ಮೇಲೆ ಹೂವುಗಳನ್ನು ಹಾಕಲು ಇಚ್ಚಿಸಿದ್ದಾರೆ. ಆದರೆ ಅವರು ನಿಂತಿದ್ದ ಸ್ಥಳಕ್ಕೂ ಜಗನ್ ಕಾರ್ ಚಲಿಸುತ್ತಿದ್ದ ಸ್ಥಳಕ್ಕೂ ಸ್ವಲ್ಪ ದೂರ ಇದ್ದ ಕಾರಣ, ಆದಷ್ಟು ಹತ್ತಿರದಿಂದ ತಮ್ಮ ನೆಚ್ಚಿನ ನಾಯಕನನ್ನು ನೋದಿ ಕಣ್ತುಂಬಿಸಿಕೊಳ್ಳುವ ಸಲುವಾಗಿ ಮತ್ತು ಆತನ ಮೇಲೆ ಹೂವಿನ ಮಳೆಯನ್ನು ಗೈಯ್ಯಲು ಆತುರದಿಂದ ಅಕ್ಕ ಪಕ್ಕ ನೋಡದೇ ಮುನ್ನುಗುತ್ತಿದ್ದಂತೆಯೇ, ಸಿಂಗಯ್ಯ ಅವರಿಗೆ ಜಗನ್ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ.
ಅಚಾನಕ್ಕಾಗಿ ಡಿಕ್ಕಿ ಹೊಡೆದ ಪರಿಣಾಮ ಆಯ ತಪ್ಪಿದ ಸಿಂಗಯ್ಯನವರು ನೇರವಾಗಿ ಜಗನ್ ಅವರಿದ್ದ ಕಾರಿನ ಮುಂಭಾಗದ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಜಗನ್ ಅವರ ಕಾರಿನ ಚಾಲಕರಿಗೆ ಏನು ಆಗುತ್ತಿದೆ ಎಂದು ತಿಳಿಯುವಷ್ಟರ ಹೊತ್ತಿನಲ್ಲಿ ಜಗನ್ ಆವರ ಕಾರಿನ ಬಲಬದಿಯ ಚಕ್ರದ ಕೆಳಗೆ ಸಿಂಗಯ್ಯನವರ ಕುತ್ತಿಗೆ ಒಂದು ರೀತಿಯ ತಡೆಗೋಡೆಯಂತೆ ಸಿಲುಕಿಕೊಂಡು ಸುಮಾರು 100-150 ಮೀಟರ್ ದೂರ ಚಲಿಸಿದೆ. ಇದ್ಯಾವುದರ ಪರಿವೇ ಇಲ್ಲದೇ ಜಗನ್ ಮತ್ತೊಂದು ತುದಿಯಲ್ಲಿ ನಗುನಗುತ್ತಲೇ ತಮ್ಮ ಅಭಿಮಾನಿಗಳತ್ತ ಕೈ ಚಾಚುತ್ತಲೇ ಇದ್ದಾರೆ.

ಈ ದುರ್ಘಟನೆ ಸಂಭವಿಸಿದ ಕೂಡಲೇ ಇದನ್ನು ಕಂಡ ಅಲ್ಲಿನ ಜನ ಜೋರಾಗಿ ಕಿರುದುತ್ತಿದ್ದಂತೆಯೇ ಜಗನ್ ಅವರ ಕಾರಿನ ಚಾಲಕ ಕಾರನ್ನು ನಿಲ್ಲಿಸಿ ಸಿಂಗಯ್ಯನವರನ್ನು ತಕ್ಷಣ ಹತ್ತಿರದ ಸರ್ಕಾರೀ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ದರೂ, ಅದಾಗಲೇ ತೀವ್ರತರನಾಗಿ ಗಾಯಗೊಂಡು ವಿಪರೀತ ರಕ್ತಸ್ರಾವದಲ್ಲಿ ಮುಳುಗಿದ್ದ ಸಿಂಗಯ್ಯನವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹೀಗೆ ಜಗನ್ ಕಾಇಗೆ ಸಿಲುಕಿ ನಜ್ಜುಗುಜ್ಜಾಗಿ ಮೃತರಾದ ಸಿಂಗಯ್ಯನವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರೂ ಥೂ! ಛೀ! ಎಂದು ರಾಜಕಾರಣಿಗಳನ್ನು ಉಗಿಯುತ್ತಿದ್ದಾರೆ.
ಇದೇ ರೀತಿಯಲ್ಲಿ 2024ರ ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ-2 ಸಿನಿಮಾದ ಮೊದಲ ಪ್ರದರ್ಶನದ ಸಮಯದಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ನಟ ಮತ್ತು ಪುಷ್ಪ ಚಿತ್ರದ ನಾಯಕ ನಟ ಅಲ್ಲು ಅರವಿಂದ್ ಆ ಸಿನಿಮಾ ಮಂದಿರಕ್ಕೆ ಭೇಟಿ ನೀಡಿದಾಗ ತಮ್ಮ ನೆಚ್ಚಿನ ನಾಯಕನನ್ನು ಹತ್ತಿರದಿಂದ ನೋಡುವ, ಆತನಿಗೆ ಹಸ್ತಲಾಘವ ನೀಡಿ ಸಂಭ್ರಮಿಸುವ, ಅವಕಾಶ ಸಿಕ್ಕಲ್ಲಿ ಆತನೊಂದಿಗೆ ಫೋಟೋ ಒಂದನ್ನು ತೆಗೆಸಿಕೊಳ್ಳುವ ಭರದಲ್ಲಿ ವಿಪರೀತವಾದ ತಳ್ಳಾಟ ನಡೆದು ಅಂತಿಮವಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ನಡೆದ ಕಾಲ್ತುಳಿತದಲ್ಲಿ 35 ವರ್ಷದ ರೇವತಿ ಎಂಬ ಮಹಿಳೆಯೊಬ್ಬರು ಸಾವನ್ನಪ್ಪಿದ್ದರೆ ಅವರ ಎಂಟು ವರ್ಷದ ಮಗ ಶ್ರೀ ತೇಜ ತೀವ್ರತರವಾಗಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಉತ್ತಮರೀತಿಯ ಚಿಕಿತ್ಸೆಯ ಪರಿಣಾಮ ಪ್ರಾಣಾಪಾಯದಿಂದ ಪಾರಾದರೂ, ತಾಯಿಯನ್ನು ಕಳೆದುಕೊಂಡು ತಬ್ಬಲಿ ಆಗಿದ್ದಂತೂ ಸುಳ್ಳಲ್ಲ. ಇದೇ ಕುರಿತಾಗಿ ಅಲ್ಲಿನ ಸರ್ಕಾರ ಪುಷ್ಪ ಚಿತ್ರದ ನಾಯಕ ನಟ ಅಲ್ಲು ಅರವಿಂದ್ ಅವರೇ ಈ ಅವಘಡಕ್ಕೆ ಕಾರಣ ಎಂದು ಅವರ ವಿರುದ್ಧ ದೂರನ್ನು ಧಾಖಲಿಸಿದ ಪರಿಣಾಮ ಅಲ್ಲೂ ಅರವಿಂದ್ ಕೆಲವು ದಿನಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿ ಈಗ ಬೇಲ್ ಮೇಲೆ ಹೊರಗೆ ಬಂದಿದ್ದು ಈ ಘಟನೆಯ ಕುರಿತಂತೆ ವಿಚಾರಣೆ ನಡೆಯುತ್ತಿದೆ.
ಅಚ್ಚರಿಯ ವಿಷಯವೇನೆಂದರೆ ರೇಣುಕಾಸ್ವಾಮಿ ಹತ್ಯೆಯ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಪ್ರಕರಣವೂ ಅತಿರೇಕದ ಅಭಿಮಾನದಿಂದಲೇ ಆಗಿತ್ತು. ರೇಣುಕಾಸ್ವಾಮಿ ದರ್ಶನ್ ಅವರ ಪರಮ ಅಭಿಮಾನಿಯಾಗಿದ್ದು, ಆತನಿಗೆ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯ ಜೀವನದಲ್ಲಿ ಪವಿತ್ರಾ ಗೌಡಳ ಪ್ರವೇಶ ಹಿಡಿಸಲಿಲ್ಲಾ. ಹಾಗಾಗಿಯೇ ಅದೆಷ್ಟೋ ಕಷ್ಟ ಪಟ್ಟು ಪ್ರವಿತ್ರ ಗೌಡಳ ಮೊಬೈಲ್ ನಂಬರ್ ಪಡೆದುಕೊಂಡು ಆರಂಭದಲ್ಲಿ ಅತ್ಯಂತ ಸಂಭಾವಿತನಾಗಿಯೇ, ದಯವಿಟ್ಟು ನೀವು ದರ್ಶನ್ ಕುಟುಂಬದಿಂದ ದೂರ ಇರಿ ಎಂದು ಕೋರಿಕೊಂಡಿದ್ದಾನೆ. ನಂತರದ ದಿನಗಳಲ್ಲಿ ಅವನ ಕೋರಿಕೆಗೆ ಪವಿತ್ರಾಳಿಂದ ಬಂದ ಪ್ರತ್ಯುತ್ತರಗಳಿಂದ ಕೆರಳಿ, ಆಶ್ಲೀಲ ಸಂಭಾಷಣೆಗೆ ಇಳಿದು, ತನ್ನ ನೆಚ್ಚಿನ ನಾಯಕನ ಕುಟುಂಬದ ಬಗ್ಗೆಯ ಕಕ್ಕುಲತೆಯಿಂದಾಗಿ ಬೇಡದ ವಿಷಯಕ್ಕಾಗಿ ಮೋರಿಯಲ್ಲಿ ಬಿದ್ದ ಹೆಣವಾಗಿ ಬಹಳ ಸಂಭಾವಿತರು, ಸಂಪ್ರದಾಯಸ್ಥರಾದ ವಯೋವೃದ್ಧ ತಂದೆ ತಾಯಿ ಮತ್ತು ಗರ್ಭಿಣಿ ಮಡದಿಯನ್ನು ಅನಾಥರನ್ನಾಗಿ ಮಾಡಿ ಹೋಗಿದ್ದದ್ದು ಈಗ ಇತಿಹಾಸ.
ಹೌದು ನಿಜ, ತಮ್ಮ ನೆಚ್ಚಿನ ರಾಜಕೀಯ ನಾಯಕರು, ಸಿನಿಮಾ ನಟ/ನಟಿಯರು, ಸಂಗೀತಗಾರರು, ವಿವಿಧ ಕ್ರೀಡೆಗಳ ಆಟಗಾರರನ್ನು ಅಭಿಮಾನದಿಂದ ತಮ್ಮ ಆರಾಧ್ಯದೈವ ಎಂಬಂತೆ ಪ್ರೀತಿಸುವುದು ತಪ್ಪಲ್ಲಾ. ಆದರೆ ಅದೇ ಪ್ರೀತಿ ಹುಚ್ಚು ಪ್ರೀತಿಯಾಗಿ ಈ ರೀತಿಯಾಗಿ ಅವಘಡಗಳು ಸಂಭವಿಸಿ ಸಾವು ನೋವುಗಳಾದಲ್ಲಿ, ಹಾಗೆ ಅಚಾನಕ್ಕಾಗಿ ಅಸುನೀಗಿದವರನ್ನೇ ಅವರನ್ನೇ ನಂಬಿಕೊಂಡಿದ್ದ ಅವರ ಕುಟುಂದವರ ಪಾಡೇನು? ಎಂಬುದರ ಬಗ್ಗೆ ಸ್ವಲ್ಪ ಯೋಚಿಸಬೇಕಿದೆ. ದುರ್ಘಟನೆ ನಡೆದ ಒಂದೆರಡು ದಿನ ಅಥವಾ ಒಂದು ವಾರ ಅಬ್ಬಬ್ಬಾ ಹೆಚ್ಚೆಂದರೆ ಒಂದು ತಿಂಗಳುಗಳ ಕಾಲ ಅವರಿವರು ಬಂದು ಸ್ವಾಂತನ ಹೇಳುತ್ತಾರೆ. ಸರ್ಕಾರ ಮತ್ತು ಕೆಲ ಸಂಘಟನೆಗಳು ಒಂದಷ್ಟು ಪರಿಹಾರವನ್ನು ನೀಡಬಹುದು ಆದರೆ, ಹಾಗೆ ಕೊಟ್ಟ ಹಣ ಎಷ್ಟು ದಿನ ತಾನೇ ಉಳಿದೀತು? ಕುಟುಂಬದ ಆದಾಯದ ಮುಖ್ಯ ಸೆಲೆಯೇ ಕಳೆದುಕೊಂಡು ನಿರ್ಗತಿಕರಾಗುತ್ತಿರುವುದು ವಿಷಾಧನೀಯವಾಗಿದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿಯಾದ ಅಂಧ ಅಭಿಮಾನವೇ ಪ್ರಾಣಕ್ಕೇ ಕುತ್ತಾಗದಿರಲಿ, ಆಪತ್ತು ತಾರದಂತಿರಲಿ ಎಂದು ಎಂದು ಆಶಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ