ಕಳೆದ ವಾರ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಎದುರಿಗಿರುವ ಶ್ರೀ ಬೇಡಿ ಆಂಜನೇಯಸ್ವಾಮಿಯ ದೇವಾಲಯ ಮತ್ತು ಅದರ ಐತಿಹ್ಯದ ಬಗ್ಗೆ ತಿಳಿದುಕೊಂಡಿದ್ದೆವು. ದೇವನೊಬ್ಬ ನಾಮ ಹಲವು ಎನ್ನುವ ಆಡು ಮಾತಿಗೆ ಸ್ವಲ್ಪ ತದ್ವಿರುದ್ಧ ಎನ್ನುವಂತೆ ಬೇಡಿ ಹನುಮಾನ್ ಎಂಬ ಹೆಸರಿನಲ್ಲೇ ಒರಿಸ್ಸಾದ ಪುರಾಣ ಪ್ರಸಿದ್ಧ ಪುರಿ ಜಗನ್ನಾಥನ ಸನ್ನಿಧಿಯಲ್ಲಿ ಮತ್ತೊಂದು ದೇವಾಲವಿದ್ದು, ಅಲ್ಲಿನ ಐತಿಹ್ಯ ಬಹಳ ಕುತೂಹಲಕಾರಿಯಾಗಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ದೇಗುಲ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಪುರಿ ಜಂಕ್ಷನ್‌ನಿಂದ 1.5 ಕಿಲೋ ಮೀಟರ್ ಮತ್ತು ಜಗನ್ನಾಥ ದೇವಾಲಯದಿಂದ ಸುಮಾರು 3.5 ಕಿಲೋ ಮೀಟರ್ ದೂರದಲ್ಲಿರುವ ಚಕ್ರ ತೀರ್ಥ ರಸ್ತೆಯಲ್ಲಿರುವ ಶ್ರೀ ಚಕ್ರ ನಾರಾಯಣ ದೇವಾಲಯದ ಪಶ್ಚಿಮಕ್ಕೆ ಸಮುದ್ರ ತೀರದಲ್ಲಿ ಶ್ರೀ ಬೇಡಿ ಹನುಮಾನ್ ದೇವಾಲಯವಿದೆ. ಈ ದೇವಾಲಯವನ್ನು ದರಿಯಾ ಮಹಾವೀರ ಮಂದಿರ ಎಂದೂ ಕರೆಯಲಾಗುತ್ತದೆ. ಒರಿಯಾ ಭಾಷೆಯಲ್ಲಿ ದರಿಯಾ ಎಂದರೆ ಸಮುದ್ರ ಮತ್ತು ಮಹಾವೀರ ಎನ್ನುವುದು ಹನುಮಂತನ ಮತ್ತೊಂದು ಹೆಸರಾಗಿರುವ ಕಾರಣ ಈ ದೇವಾಲಯಕ್ಕೆ ದರಿಯಾ ಮಹಾವೀರ ಮಂದಿರ ಎಂಬ ಹೆಸರು ಬಂದಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದ್ದು, ಇದು ಪುರಿಯ ಜಗನ್ನಾಥ ದೇವಾಲಯದ ನಂತರ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯಗಳಲ್ಲಿ ಒಂದಾಗಿದ್ದು, ಪುರಿಗೆ ಬಂದ ಭಕ್ತಾದಿಗಳು ಬೇಡಿ ಹನುಮಂತನ ದರ್ಶನ ಮಾಡದೇ ಹೋದಲ್ಲಿ ಪುರಿಗೆ ಬಂದ ಪುಣ್ಯವು ಲಭಿಸುವುದಿಲ್ಲಾ ಎಂಬ ನಂಬಿಯೇ ಇದ್ದು, ಶ್ರೀಜಗನ್ನಾಥನ ದರ್ಶನ ಪಡೆದ ನಂತರ ಭಕ್ತರು ಇಲ್ಲಿಗೆ ಬಂದು ಹನುಮಂತನ ದರ್ಶನ ಪಡೆದು ಸಂತೃಪ್ತರಾಗುತ್ತಾರೆ.
ಅಚ್ಚರಿಯ ವಿಚಾರವೆಂದರೆ, ತಿರುಮಲದಲ್ಲಿ ಬೇಡಿ ತೊಟ್ಟಿರುವ ಬಾಲ ಆಂಜನೇಯನ ವಿಗ್ರಹವಿದ್ದರೆ, ಇಲ್ಲಿ ವೀರ ಹನುಮಂತನನ್ನು ಸರಪಳಿಗಳಿಂದ ಬಂಧಿಸಲಾಗಿದ್ದು, ತನ್ನ ಎಡಗೈಯಲ್ಲಿ ಲಾಡು ಮತ್ತು ಬಲಗೈಯಲ್ಲಿ ಗಧೆಯನ್ನು ಹಿಡಿದಿದ್ದಾನೆ. ಈ ರೀತಿಯಾಗಿ ಬೇಡಿ ತೊಟ್ಟು ಕೈಗಳಲ್ಲಿ ಲಾಡು ಹಿಡಿದಿರುವ ಹನುಮಂತನ ಹಿಂದೆಯೂ ಒಂದು ರೋಚಕವಾದ ಕಥೆ ಇದೆ.
ಪುರಿಯಲ್ಲಿರುವ ಜಗನ್ನಾಥ ಮಂದಿರವು ಸಮುದ್ರ ದಂಡೆ ಪಕ್ಕದಲ್ಲೇ ಇರುವ ಕಾರಣ, ಸಮುದ್ರ ಅಲೆಗಳು ಜಗನ್ನಾಥನ ದೇವಾಲಯಕ್ಕಾಗಲೀ, ಅಥವಾ ಪುರಿ ಪಟ್ಟಣಕ್ಕೆ ಪ್ರವೇಶಿಸದಂತೆ ಕಾಯುವ ಜವಾಬ್ಧಾರಿಯನ್ನು ರಾಮನ ಅಪರಾವತಾರವಾದ ಜಗನ್ನಾಥನು ಹನುಮಂತನಿಗೆ ವಹಿಸಿರುತ್ತಾನೆ. ಬಹಳ ವರ್ಷಗಳ ಕಾಲ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿದ್ದರೆ, ಅದೊಮ್ಮೆ ವಿಪರೀತ ಮಳೆ ಸುರಿದು ಸಮುದ್ರವೂ ಭೋರ್ಗರೆಯುತ್ತಾ, ಸಮುದ್ರದ ನೀರು ಪುರಿ ನಗರವನ್ನು ಪ್ರವೇಶಿಸಿದ್ದಲ್ಲದೇ ಜಗನ್ನಾಧನ ದೇವಾಲಯಕ್ಕೂ ಪ್ರವೇಶಿಸಿ ದೇವಾಲಯವನ್ನು ಗಣನೀಯವಾಗಿ ಹಾನಿಯನ್ನುಂಟು ಮಾಡಿದಾಗ, ಭಯ ಭೀತರಾದ ಭಕ್ತರು ಜಗನ್ನಾಥನನ್ನು ಪ್ರಾರ್ಥಿಸುತ್ತಾರೆ. ಅರೇ, ಸಮುದ್ರದ ನೀರು ದೇವಾಲಯಕ್ಕೆ ಪ್ರವೇಶಿಸದಂತೆ ನೋಡಿಕೊಳ್ಳುವುದಕ್ಕಾಗಿಯೇ ಹನುಮಂತನನ್ನು ನೇಮಿಸಿರುವಾಗ, ಸಮುದ್ರ ನೀರು ನಗರವನ್ನು ಹೇಗೆ ಪ್ರವೇಶಿಸಿತು? ಎಂದು ತಿಳಿಯಲು ಸ್ವತಃ ಜಗನ್ನಾಥನೇ ಸಮುದ್ರದ ತೀರಕ್ಕೆ ಬಂದು ನೋಡಿದಾಗ ಅಲ್ಲಿ ಹನುಮಂತನು ಕಾಣಿಸುವುದಿಲ್ಲ. ಸ್ವಲ್ಪ ಸಮಯದ ನಂತರ ಹನುಮಂತನು ಆ ಪ್ರದೇಶಕ್ಕೆ ಹಿಂದಿರುಗಿದಾಗ ಅಲ್ಲಿನ ಅವ್ಯವಸ್ಥೆಯನ್ನು ನೋಡಿ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತಾನು ಅಗ್ಗಾಗ್ಗೇ ಅಯೋಧ್ಯೆಗೆ ಲಾಡು ತಿನ್ನುವ ಸಲುವಾಗಿ ಯಾರಿಗೂ ತಿಳಿಸದೇ ಹೋಗುವುದನ್ನು ರೂಢಿ ಮಾಡಿಕೊಂಡಿದ್ದು, ಇಂದೂ ಸಹಾ ತಾನು ಅಯೋಧ್ಯೆಗೆ ಹೋಗಿದ್ದೆ ಎನ್ನುವುದನ್ನು ಒಪ್ಪಿ ಕೊಂಡು ತನ್ನ ತಪ್ಪನ್ನು ಮನ್ನಿಸಬೇಕೆಂದು ಕೋರಿಕೊಳ್ಳುತ್ತಾನೆ.
ತನಗೆ ತಿಳಿಸದೇ ಅಯೋಧ್ಯೆಗೆ ಹೋಗಿರುವ ಸುದ್ದಿಯನ್ನು ತಿಳಿದ ಜಗನ್ನಾಥನು, ಇನ್ನು ಮುಂದೆ ಹನುಮಂತನು ಆ ರೀತಿಯ ತಪ್ಪುಗಳನ್ನು ಮಾಡದೇ ಇರುವಂತೆ ಆತನ ಕೈ ಕಾಲುಗಳಿಗೆ ಬೇಡಿಯನ್ನು ತೊಡಿಸಿ, ಹಗಲು ರಾತ್ರಿ ಎನ್ನದೇ, ಆಚಂದ್ರಾರ್ಕವಾಗಿ ಸಮುದ್ರ ತೀರದಲ್ಲೇ ಜಾಗರೂಕನಾಗಿ ನಿಂತಿದ್ದು, ಸಮುದ್ರದ ನೀರು ಮತ್ತೊಮ್ಮೆ ಈ ರೀತಿಯಾಗಿ ನಗರಕ್ಕೆ ಮತ್ತು ಜಗನ್ನಾಥನ ದೇವಾಲಯಕ್ಕೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ಆಜ್ಞಾಪಿಸುವುದಲ್ಲದೇ, ಹನುಮಂತ ಮತ್ತೊಮ್ಮೆ ಅಯೋಧ್ಯೆಗೆ ಲಾಡು ತಿನ್ನಲು ಹೋಗದೇ ಇರುವಂತೆ ಮಾಡುವ ಸಲುವಾಗಿ ಅಲ್ಲಿನ ಜನರೇ ಆತನಿಗೆ ಲಾಡುವನ್ನು ನೈವೇದ್ಯವಾಗಿ ಸಮರ್ಪಿಸ ಬೇಕು ಎಂದು ತಿಳಿಸುತ್ತಾನೆ. ಹಾಗಾಗಿಯೇ ಸ್ವಾಮಿಯ ಕೈಗಳಲ್ಲಿ ಲಾಡು ಇದ್ದು, ಹೀಗೆ ಕೈಕಾಲುಗಳನ್ನು ಚಿನ್ನದ ಸರಪಳಿಯಿಂದ ಅರ್ಥಾತ್ ಚಿನ್ನದ ಬೇಡಿಯಿಂದ ಬಂಧಿಸಲ್ಪಟ್ಟ ಕಾರಣ ಅಂದಿನಿಂದ ಅವನನ್ನು ಬೇಡಿ ಹನುಮಾನ್ ಅಥವಾ ಸಂಕೋಲೆ ಹಾಕಿದ ಹನುಮಾನ್ ಎಂದು ಕರೆಯಲಾಗುತ್ತದೆ. ಅಂದಿನಿಂದ ಸಮುದ್ರವು ನಗರದೊಳಗೆ ಪ್ರವೇಶಿಸಿಲ್ಲ ಎಂಬ ಜನಪ್ರಿಯ ನಂಬಿಕೆ ಇದೆ.
ಬೇಡಿ ಹನುಮಾನ್ ದೇವಾಲಯದ ಹೊರ ಗೋಡೆಗಳ ಮೇಲೆ ವಿವಿಧ ದೇವತೆಗಳ ಚಿತ್ರಗಳನ್ನು ಕೆತ್ತಲಾಗಿದ್ದು ಅವುಗಳಲ್ಲಿ ತನ್ನ ಮಡಿಲಲ್ಲಿ ಮಗನನ್ನು ಹಿಡಿದಿರುವ ಅಂಜನಾ ದೇವಿಯ ಚಿತ್ರವನ್ನು ದೇವಾಲಯದ ಪಶ್ಚಿಮ ಭಾಗದ ಗೋಡೆಯ ಮೇಲೆ ಕೆತ್ತಲಾಗಿದೆ. ಉತ್ತರ ಭಾಗದ ಗೋಡೆಯ ಮೇಲೆ ಅಲಂಕೃತ ಪೀಠದ ಮೇಲೆ ಸ್ತ್ರೀ ದೇವತೆಗಳಿವೆ. ದಕ್ಷಿಣ ಭಾಗದ ಗೋಡೆಯ ಮೇಲೆ ಗಣೇಶನ ಚಿತ್ರವನ್ನು ಕೆತ್ತಲಾಗಿದೆ. ಪ್ರತೀ ಶನಿವಾರ ಮತ್ತು ಹಬ್ಬ ಹರಿದಿನಗಳಲ್ಲದೇ, ಪಣ ಸಂಕ್ರಾಂತಿ, ಹನುಮಾನ್ ಜಯಂತಿ, ರಾಮ ನವಮಿ ಹಬ್ಬದಂದು ಇಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅಂದಿನ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ದೇಶ ವಿದೇಶಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಬೇಡಿ ಹನುಮಂತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಪ್ರತೀ. ದಿನ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ದೇವಾಲಯವು ಭಕ್ತಾದಿಗಳ ದರ್ಶನಕ್ಕೆ ಲಭ್ಯವಿದ್ದು ದೇವಾಲಯಕ್ಕೆ ಪ್ರವೇಶಿಸಲು ಪ್ರತಿ ವ್ಯಕ್ತಿಗೆ ರೂ.5 ಶುಲ್ಕವಿದೆ. ಈ ದೇವಾಲಯದ ಆವರಣದಲ್ಲಿ ಬೇಡಿ ಹನುಮನಲ್ಲದೆ, ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಗುಡಿಯೂ ಇದ್ದು ಅದಕ್ಕೂ ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.
ದೇವಾಲಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿದ್ದು ಅಲ್ಲಿಗೆ ಹೋಗಿ ದೇವಾಲಯದ ಪ್ರದಕ್ಷಿಣೆ ಹಾಕಿ ಸ್ವಾಮಿಯ ದರ್ಶನ ಪಡೆದು ಅಲ್ಲಿನ ಘಂಟಾನಾದದ ಸದ್ದನ್ನು ಕೇಳಿಸಿಕೊಳ್ಳುತ್ತಾ ಸ್ವಲ್ಪ ಕಾಲ ದೇವಾಲಯದ ಆವರಣದಲ್ಲೇ ಇದ್ದಲ್ಲಿ ಭಕ್ತರಿಗೆ ಸುಖಃ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ, ದುರಾದೃಷ್ಟವಷಾತ್ ಇಂದು ಬಹುತೇಕ ದೇವಾಲಯಗಳಲ್ಲಿ ಭಕ್ತರ ಈ ನಂಬಿಕೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಅನೇಕರು ಇದ್ದು, ಈ ದೇವಾಲಯದಲ್ಲಿಯೂ ಅರ್ಚಕರ ಸೋಗಿನಲ್ಲಿ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅತ್ಯಂತ ವಿನಮ್ರವಾಗಿ ಬಹಳ ನಾಜೂಕಿನಿಂದ ಪೂಜೆಯ ರೂಪದಲ್ಲಿ ಹನುಮಂತನ ಸಣ್ಣ ಸಣ್ಣ ವಿಗ್ರಹವನ್ನು ಕೈಗೆ ನೀಡಿ ಪ್ರಾರ್ಥನೆ ಮಾಡಲು ಸೂಜಿಸಿ, ಪೂಜೆಯನ್ನು ಮಾಡಿದ ನಂತರ ವಿಪರೀತವಾಗಿ ಹಣ ಕೀಳುವ ಕೆಟ್ಟ ಸಂಪ್ರದಾಯವಿದ್ದು, ಭಕ್ತಾದಿಗಳು ಅಂತಹ ಪಂಡಾಗಳಿಂದ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ.
ಪುರಿಯಲ್ಲಿರುವ ಬೇಡಿ ಹನುಮಾನ್ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ ಇನ್ನೇಕೆ ತಡಾ, ಹೇಗೂ ಈಗ ಪುರಿಯ ಜಗನ್ನಾಥನ ರಥಯಾತ್ರೆ ನಡೆಯುತ್ತಿದ್ದು, ಸ್ವಲ್ಪ ಸಮಯ ಮಾಡಿಕೊಂಡು ಶ್ರೀ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರ ದರ್ಶನ ಪಡೆದು, ಶ್ರೀ ಬೇಡಿ ಹನುಮಂತನ ದರ್ಶನವನ್ನು ಮಾಡಿ ಶಾಂತಿ ಮತ್ತು ಸಮೃದ್ಧಿಯನ್ನು ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ