ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ

ಭಾರತ ದೇವಾಲಯಗಳ ತವರೂರಾಗಿದೆ. ಪ್ರತೀ ಹಳ್ಳಿಹಳ್ಳಿಯಲ್ಲೂ ಒಂದಲ್ಲಾ ಒಂದು ದೇವರ ದೇವಾಲಯಗಳಿದ್ದು  ಆಸ್ತಿಕ ಜನರು ವರ್ಷದ ೩೬೫ ದಿನಗಳೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನನ್ನು ಪೂಜಿಸಿ ಸಂಭ್ರಮಿಸುತ್ತಲೇ ಇರುತ್ತಾರೆ. ಅದೇ ರೀತಿಯಲ್ಲೇ  ಒರಿಸ್ಸಾದ ಪುರಿಯಲ್ಲಿಯೂ ಸಹಾ ಜಗನ್ನಾಥನ ವಾರ್ಷಿಕ ರಥಯಾತ್ರೆ ಮತ್ತು ಕೆಲವು ನಿರ್ಧಿಷ್ಟ ವರ್ಷಗಳಿಗೊಮ್ಮೆ ನಡೆಯುವ ನಭಕಳೇಬರ ಉತ್ಸವಗಳು ಬಹಳ ಪ್ರಸಿದ್ದಿಯಾಗಿದ್ದು ಅವರುಗಳ ಬಗ್ಗೆ ತಿಳಿಯೋಣ ಬನ್ನಿ.

ದೇವಾಲಯ ಸ್ಥಾಪನೆ

ಒಂದು ಜನಪದ ಕಥೆಯ ಪ್ರಕಾರ  ಶ್ರೀ ಜಗನ್ನಾಥ ಅಲ್ಲಿನ ಬುಡಕಟ್ಟು ಜನರ ದೇವರಾಗಿದ್ದು  ಅವನ ಮೂಲ ಹೆಸರು ನೀಲಮಾಧವ ಎಂಬುದಾಗಿದೆ.  ಒರಿಸ್ಸಾದ ನೀಲಾಚಲ ಭಾಗದ ಸೌರಾ ಬುಡಕಟ್ಟು ಜನಾಂಗ ಮತ್ತು ಅಲ್ಲಿಯ ರಾಜ ವಿಶ್ವವಸುವಿಗೆ ಜಗನ್ನಾಥನೇ  ಆರಾಧ್ಯದೈವ. ಅದೊಮ್ಮೆ ಮಾಳವದ ರಾಜ ಇಂದ್ರದ್ಯುಮ್ನನಿಗೆ ಕಾಡಿನಲ್ಲಿರುವ ನೀಲಮಾಧವ ದೇವರ ಮಹಿಮೆ ತಿಳಿದು ಅದರ ಕುರಿತಾಗಿ ಹೆಚ್ಚಿನ ವಿಚಾರವನ್ನು ತಿಳಿದು ಬರುವಂತೆ ತನ್ನ ಮಂತ್ರಿ ವಿದ್ಯಾಪತಿಗೆ ಆಜ್ಞಾಪಿಸುತ್ತಾನೆ.  ರಾಜನ ಆಶಯದಂತೆಯೇ ವಿದ್ಯಾಪತಿಯು ಆ ಬುಡಕಟ್ಟು ಜನಾಂಗದ ನಾಯಕ ವಿಶ್ವವಸುವಿನ ಬಳಿ ಬಂದು ಆತನ ಸ್ನೇಹಗಳಿಸಿ, ತನಗೆ  ನೀಲಮಾಧವನ ಮಂದಿರವನ್ನು ತೋರಿಸಲು ಕೇಳಿಕೊಂಡಾಗ,  ನಾಡಿನಿಂದ ಬಂದವನು ತಮ್ಮ ದೈವವನ್ನು ಅಪಹರಿಸಬಹುದು ಇಲ್ಲವೇ ನಾಶಗೊಳಿಸಬಹುದು ಎಂಬ ಭಯದಿಂದ ಅವನಿಗೆ ತೋರಿಸಲು ಒಪ್ಪವುದಿಲ್ಲ.

 

ಆದರೆ ಹಿಡಿದ ಕೆಲಸವನ್ನು ಬಿಡದೇ ಮಾಡುವ ಛಲದಂಕ ಮಲ್ಲನಾದ  ವಿದ್ಯಾಪತಿ ಅಲ್ಲಿಯೇ ಕೆಲಕಾಲವಿದ್ದು ಅಲ್ಲಿನ ಜನರ ಮತ್ತು ರಾಜನ ವಿಶ್ವಾಸ ಗಳಿಸಿ ವಿಶ್ವವಸುವಿನ ಮಗಳನ್ನೇ ಮದುವೆಯಾಗುವ ಮೂಲಕ ಸಂಬಂಧಿಯಾದ ನಂತರ ಮತ್ತೆ ತನ್ನ ಮಾವನಾದ ವಿಶ್ವವಸುವಿಗೆ ನೀಲಮಾಧವನನ್ನು ತೋರಿಸಲು ಕೇಳಿಕೊಳ್ಳುತ್ತಾನೆ.  ಇಷ್ಟು ದಿನ ತಮ್ಮೊಂದಿಗೆ ಇದ್ದದ್ದಲ್ಲದೇ ತಮ್ಮ ಮಗಳನ್ನು ಮದುವೆ ಮಾಡಿಕೊಂಡ ಕಾರಣ ಇವನನ್ನು ಹೇಗೆ ನಂಬುವುದು ಎಂಬ  ಜಿಜ್ಞಾಸೆಯಿಂದ ಮತ್ತೆ ತೋರಿಸಲು ಆರಂಭದಲ್ಲಿ  ಒಪ್ಪದೇ ಹೊದರೂ ಅಂತಿಮವಾಗಿ ಆತನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿ ನೀಲಮಾಧವನ ಗುಹೆಗೆ ಕರೆದು ಕೊಂಡು ಹೋಗುತ್ತಾನೆ.  ಮಾವನಿಗಿಂತಲೂ ಬುದ್ಧಿವಂತನಾದ ಅಳಿಯ ವಿದ್ಯಾಪತಿಯು ತನ್ನ ಮಾವನಿಗೆ ತಿಳಿಯಂತೆ ಜೋಬಿನಲ್ಲಿ  ಸಾಸಿವೆ ಕಾಳನ್ನು  ಮುಚ್ಚಿಟ್ಟುಕೊಂಡು  ಮಾವ  ಕಣ್ಣೂ ಕಟ್ಟಿ ಕರೆದೊಯ್ಯುವ ದಾರಿಯುದ್ದಕ್ಕೂ ಸಾಸಿವೆ ಕಾಳನ್ನು ಚೆಲ್ಲುತ್ತಾ ಹೋಗಿರುತ್ತಾನೆ. ನೀಲಮಾಧವನ ಗುಹೆ ತಲುಪಿದ ನಂತರ ಅವನ ಕಣ್ಣಿನ ಪಟ್ಟಿಯನ್ನು ಬಿಚ್ಚಿದಾಗ ಸ್ವಾಮಿಯ  ದಿವ್ಯ ಪ್ರಭೆಯನ್ನು ನೋಡಿ ಅಚ್ಚರಿಗೊಳಗಾದ ವಿದ್ಯಾಪತಿಗೆ ಅಲ್ಲಿ ಸಾಕ್ಷಾತ್ ವಿಷ್ಣುವೇ  ಸೆಲೆಸಿರುವುದನ್ನು ಅರಿತುಕೊಳ್ಳುತ್ತಾನೆ. ನೀಲಮಾಧವನ ಗುಹೆಯಿಂದ ಹಿಂದುರಿಗಿದ ಕೆಲ ದಿನಗಳ ನಂತರ ತನ್ನ ಮಾವನಿಗೆ ತಿಳಿಯದಂತೆ ರಾಜ ಇಂದ್ರದ್ಯುಮ್ನನ ಬಳಿಗೆ ಬಂದು ತಾನು ನೋಡಿದ್ದನ್ನು ತಿಳಿಸುತ್ತಾನೆ.

ಇಂತಹ ಸುದಿನಕ್ಕಾಗಿಯೇ ಕಾಯುತ್ತಿದ್ದ ರಾಜ ಇಂದ್ರದ್ಯುಮ್ನನು ತಡಮಾಡದೇ, ನೀಲಮಾಧವನನ್ನು  ನೋಡಲು ವಿದ್ಯಾಪತಿಯೊಂದಿಗೆ ಹೊರಡುತ್ತಾನೆ.  ಅಂದು ವಿದ್ಯಾಪತಿಯು ಚೆಲ್ಲಿದ್ದ ಸಾಸಿವೆ ಕಾಳುಗಳು ಈ ಹೊತ್ತಿಗೆ ಸಸಿಗಳಾಗಿ ಬೆಳೆದು ಅವರಿಗೆ ನೀಲಮಾಧವನ ಗುಹೆಗೆ ಸರಿಯಾದ ಮಾರ್ಗದರ್ಶಿಯಾಗುತ್ತದೆ. ಹೀಗೆ ರಾಮ ಮತ್ತು ಮಂತ್ರಿ ಇಬ್ಬರೂ  ಗುಹೆಗೆ ಹೋಗಿ ನೋಡಿದರೆ ಎಲ್ಲವೂ ಬರೀ ಕಗ್ಗತ್ತಲೆ. ಅಂದು ನಿಸ್ವಾರ್ಥ ಭಕ್ತ ವಿಶ್ವವಸುವಿಗೆ ಕಾಣಿಸಿಕೊಂಡಿದ್ದ ನೀಲಮಾಧವ ಇಂದು ಸ್ವಾರ್ಥಕ್ಕಾಗಿ ಬಂದಿದ್ದ ರಾಜ ಇಂದ್ರದ್ಯುಮ್ನ ಮತ್ತು   ವಿದ್ಯಾಪತಿಗೆ ಕಾಣದೇ  ಹೋದಾಗ ಭಗವಂತನ ಮರ್ಮವನ್ನರಿತ ರಾಜನು ನೀಲಮಾಧವನ ದರ್ಶನವಿಲ್ಲದೆ ಈ ಪ್ರದೇಶದಿಂದ ಹಿಂದಿರುಗುದಿಲ್ಲಾ ಎಂದು ಶಪಥ ಗೈದು, ಅಲ್ಲಿಯೇ  ತಪಸ್ಸು ಮಾಡುವಾಗ, ಅದೊಮ್ಮೆ  ಅವನ ಕನಸಿನಲ್ಲಿ ಬಂದ ನೀಲಮಾಧವನು  ಹತ್ತಿರದ ಸಮುದ್ರದಲ್ಲಿ ತೇಲಿಬರುವ ಮರದ ಕೊರಡಿನಲ್ಲಿ ತನ್ನ ಅಣ್ಣ ಬಲಭದ್ರ, ತಂಗಿ ಸುಭದ್ರಾ ಮತ್ತು ಸುದರ್ಶನ ಚಕ್ರದ ಮೂರ್ತಿಗಳನ್ನು ಮಾಡಿ ಪೂಜಿಸುವಂತೆ ಹೇಳುತ್ತಾನೆ. ನೀಲಮಾಧವನ ಆಣತಿಯಂತೆಯೇ ರಾಜನು ಮಾಡಿ ಅದೇ ಸ್ಥಳದಲ್ಲೇ ಪ್ರಸ್ತುತವಾದ ಜಗನ್ನಾಥನ ಮಂದಿರವನ್ನು ನಿರ್ಮಿಸುತ್ತಾನೆ.

ರಾಜ ಇಂದ್ರದ್ಯುಮ್ನನಿಗೆ ಸಮುದ್ರದಲ್ಲಿ ಸಿಕ್ಕ ಮರದ ಕೊರಡಿನಿಂದ ವಿಗ್ರಹಗಳನ್ನು ಮಾಡಿಕೊಡುವ ಹಿಂದೆಯೂ ಮತ್ತೊಂದು ರೋಚಕವಾದ ಕಥೆ ಇದೆ. ಸಮುದ್ರದಲ್ಲಿ ಸಿಕ್ಕ ಮರದ ಕೊರಡನ್ನು ಕೆತ್ತಲು ಸ್ಥಳೀಯ  ಕುಶಲಕರ್ಮಿಗಳು ಎಂತಹ  ಉಪಕರಣಗಳನ್ನು ಬಳಸಿದರೂ ಆ ಮರದ ಒಂದು ಚೂರು ಚಕ್ಕೆಯೂ  ಅದುರದೇ ಹೋದಾಗ, ರಾಜನು ವಿಧಿ ಇಲ್ಲದೇ, ಚಿಂತಾಕ್ರಾಂತನಾಗಿದ್ದಾಗ, ಸ್ವತಃ ದೇವಶಿಲ್ಪಿ ವಿಶ್ವಕರ್ಮನೇ  ರಾಜನನ್ನು ಭೇಟಿಯಾಗಿ  ಒಂದು ಷರತ್ತಿನ ಮೂಲಕ  ತಾನೇ ವಿಗ್ರಹಗಳನ್ನು ಮಾಡಿಕೊಡುವುದಾಗಿ ತಿಳಿಸುತ್ತಾನೆ.  ಇಡೀ  ವಿಗ್ರಹಗಳ ಕೆತ್ತನೆ ಕೆಲಸ ಪೂರೈಸಲು  ಇಪ್ಪತ್ತೊಂದು ದಿನಗಳು  ಆಗುತ್ತದೆ, ಆ ಇಪ್ಪತ್ತೊಂದು ದಿನಗಳ ಕಾಲ ಯಾರೂ ಸಹಾ ತನ್ನ ಕೋಣೆಯ ಬಾಗಿಲನ್ನು ತೆರೆಯಬಾರದು ಎಂದು ಹೇಳುತ್ತಾನೆ. ವಿಶ್ವಕರ್ಮನ ಈ  ಷರತ್ತಿಗೆ ರಾಜನು ಒಪ್ಪಿದ ಕಾರಣ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿದೆ ಎನ್ನುವಾಗ, ವಿಗ್ರಹಗಳು ಮುಗಿಯಲು ಇನ್ನೇನು ಮೂರು ದಿನಗಳು ಬಾಕಿ ಇರುವಾಗ ಕುತೂಹಲ ತಾಳಲಾರದೆ ರಾಣಿಯು ಹದಿನೆಂಟನೇ ದಿನಕ್ಕೆ ವಿಶ್ವಕರ್ಮನ ಕೋಣೆಯ ಬಾಗಿಲನ್ನು ತೆರೆದ ಕೂಡಲೇ ತನ್ನ ವಚನ ಭಂಗವಾಗಿದ್ದಕ್ಕಾಗಿ  ವಿಶ್ವಕರ್ಮ ಅದೃಶ್ಯನಾದ ಕಾರಣ,  ಅನುಪಾತವಿಲ್ಲದ ದೇಹ, ಮುಖಭರ್ತಿ ಕಣ್ಣುಗಳು, ಮರದ ಗಂಟಿನ ಉಬ್ಬು ಮೂಗು, ಮಕ್ಕಳ ಗೀಚಿನಂತಹ ಬಾಯಿ, ಕಿವಿಯಿಂದ ಹೊರಚಾಚಿದ ಮೋಟು ಕೈಗಳು ಇರುವ ವಿಗ್ರಹವಿದ್ದರೂ, ಇಡೀ ವಿಶ್ವದ ಆಸ್ತಿಕ ಬಂಧುಗಳನ್ನು ತನ್ನೆಡೆಗೆ ಸೆಳೆಯಬಲ್ಲ ಚುಂಬಕ ಶಕ್ತಿ ಅಪೂರ್ಣ ವಿಗ್ರಹಕ್ಕೆ ಇರುವುದೇ ವಿಶೇಷವಾಗಿದೆ. ಅನೇಕರು  ಹೇಳುವಂತೆ ಆ ಜಗನ್ನಾಥನ ದುಂಡನೆಯ ಕಣ್ಣುಗಳ ಕಣ್ಣುಗಳನ್ನು ಒಮ್ಮೆ ನೋಡಿದರೆ ಸಾಕು ಮತ್ತೆ ಮತ್ತೆ ನೋಡ ಬೇಕು  ಎನಿಸುವಂತಿದೆ.

ನಭಕಳೇಬರ್ ಉತ್ಸವ

ಒಂದು ಐತಿಹ್ಯದ ಪ್ರಕಾರ, ಭಗವಾನ್ ಶ್ರೀ ಕೃಷ್ಣನು ತನ್ನ ದೇಹವನ್ನು ತೊರೆದಾಗ, ಅವನ ಅಂತಿಮ ಸಂಸ್ಕಾರ ಮಾಡಿದಾಗ ಅವನ  ಇಡೀ ದೇಹವು ಪಂಚಭೂತಗಳಲ್ಲಿ ವಿಲೀನವಾಗಿ ಹೋದರೆ, ಅವನ ಹೃದಯ ಮಾತ್ರಾ ಸಾಮಾನ್ಯ ಮನುಷ್ಯನಂತೆ ಬಡಿಯುತ್ತಾ ಸುರಕ್ಷಿತವಾಗಿದು ಅದೇ ಹೃದಯವೇ ಇಂದಿಗೂ ಜಗನ್ನಾಥನ ಅ  ಮರದ ವಿಗ್ರಹದೊಳಗೆ ನೆಲೆಸಿದ್ದಾನೆ ಮತ್ತು ಆ ಹೃದಯವು ಬಡಿತವು ಇಂದಿಗೂ ಕೇಳಿಸುತ್ತದೆ ಎನ್ನುವುದೇ ಎಲ್ಲರ ನಂಬಿಕೆಯಾಗಿದೆ.

ಹಾಗಾಗಿಯೇ ಪ್ರತೀ  8, 12, ಅಥವಾ 19 ವರ್ಷಗಳಿಗೊಮ್ಮೆ ಅಧಿಕ ಆಷಾಢ ಬರುವ ವರ್ಷದಲ್ಲಿ ಈ ಮೂರೂ ವಿಗ್ರಹಗಳನ್ನು ಬದಲಿಸುವ ಸಂಪ್ರದಾಯವಿದೆ. ಈ ರೀತಿಯಾಗಿ ವಿಗ್ರಹವನ್ನು ಬದಲಿರುವ ಏಳು ತಿಂಗಳು ಮೊದಲು ತ್ರಿಮೂರ್ತಿಗಳನ್ನು ಕೆತ್ತಲು ಬೇಕಾಗಿರುವ ಎಲ್ಲಾ ಗುಣ ಲಕ್ಷಣಗಳನ್ನು ಹೊಂದಿರುವ ಬೇವಿನ ಮರವನ್ನು ಹುಡುಕಿ ಆದರಿಂದ ಮೂರ್ತಿಗಳನ್ನು ಕೆತ್ತಲಾಗುತ್ತದೆ. ಹೊಸಾ ವಿಗ್ರಹಗಳ ಪ್ರತಿಷ್ಠಾಪನೆಯ ಮುನ್ನ ಸ್ನಾನಮಾಡಿ ಆರೋಗ್ಯ ತಪ್ಪಿ ಕತ್ತಲ ಕೋಣೆಯನ್ನು ಸೇರಿ ನಂತರ  ಹೊಸಾ ದೇಹದೊಂದಿಗೆ  ನಳನಳಿಸುವ ಹೊಸ ರೂಪವನ್ನು ಪಡೆಯುತ್ತಾರೆ. ಈ ಪ್ರಕ್ರಿಯೆಗೆ ನಭಕಳೆಬರ್ ಅರ್ಥಾತ್ ನವ ಕಳೇಬರ ಉತ್ಸವ ಎಂದು ಕರೆಯಲಾಗುತ್ತದೆ.

 

ಇನ್ನು ಹಳೇ ವಿಗ್ರಹಗಳಿಂದ ಹೊಸ ವಿಗ್ರಹ ಬದಲಿಸುವ ವೇಳೆ ಇಡೀ ಪುರಿ ನಗರದಲ್ಲಿ ವಿದ್ಯುತ್ ಕಡಿತಗೊಳಿಸಿ ಕತ್ತಲೆ ಮಾಡಲಾಗುತ್ತದೆ. ಹೀಗೆ ದೀಪ ಆರಿಸುವ ಹೊತ್ತಿಗೆ ಇಡೀ ದೇವಾಲಯದ ಸಂಕೀರ್ಣವನ್ನು CRPF ಯೋಧರು ಸುತ್ತುವರೆದು ಕೇವಲ ದೇವಾಲಯ ಸಿಬ್ಬಂದಿಗಳ ಹೊರತಾಗಿ ಉಳಿದವರಿಗೆ ದೇವಾಲಯದ ಪ್ರವೇಶ ಇರುವುದಿಲ್ಲ. ಇಂತಹ ಬಿಗಿ ಭದ್ರತೆಯಲ್ಲಿ ಕೈಗಳಿಗೆ ಗವಸು ಹಾಕಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡ  ಅಲ್ಲಿನ ಅರ್ಚಕರು ಹಳೆಯ ವಿಗ್ರಹದಿಂದ ಹೊಸಾ ವಿಗ್ರಹಕ್ಕೆ  ಬ್ರಹ್ಮ ದ್ರವ್ಯ (ಹೃದಯ) ವನ್ನು ತೆಗೆದು ಹೊಸ ವಿಗ್ರಹಕ್ಕೆ ಸುರಿಯುತ್ತಾರೆ. ಈ ಬ್ರಹ್ಮ ಪದಾರ್ಥ ಯಾವುದು ಎಂಬುದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ.  ಇಲ್ಲಿಯವರೆಗೆ ಯಾರೂ ನೋಡಿಲ್ಲ. ಸಾವಿರಾರು ವರ್ಷಗಳಿಂದ ಇದು ಒಂದು ವಿಗ್ರಹದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತಿದೆ. ಈ ರೀತಿಯ ಪ್ರಕ್ರಿಯಲ್ಲಿ ಭಾಗವಹಿಸಿರುವ  ಕೆಲವು ಪುರೋಹಿತರು ಹೇಳುವಂತೆ ಆ ನವ ದ್ರವ್ಯವು  ಮೊಲದಂತೆ ಜಿಗಿಯುವುದನ್ನು ಅನುಭವಿಸಿದ್ದಾರಂತೆ. ಈ ರೀತಿಯಾಗಿ ಕತ್ತಲೆಯಲ್ಲಿ ಒಂದೇ ಕಡೆ ಹುಟ್ಟು ಮತ್ತು ಸಾವುಗಳು ಒಟ್ಟಿಗೆ ಸಂಭವಿಸುವ ಏಕೈಕ ಪ್ರಸಂಗ  ಇದೊಂದೇ ಇರುಬಹುದೋ ಏನೂ?  ಬ್ರಹ್ಮದ್ರವ್ಯವನ್ನು ಬದಲಿಸಿದ ನಂತರ ಹಳೆಯ ವಿಗ್ರಹಗಳನ್ನು ಹತ್ತಿರದ ಕೊಳದಲ್ಲಿ ವಿಸರ್ಜಿಸಿದ ನಂತರ  ಸ್ನಾನ ಮಾಡಿ ಕೇಶ ಮುಂಡನ ಮಾಡಿಸಿ ಕೊಂದು ತಮ್ಮ ಸಮೀಪದ ಬಂಧುವೇ ತೀರಿಕೊಂಡಂತೆ ರೋಧಿಸಿದರೆ, ಹೊಸ ಜಗನ್ನಾಥನನ್ನು ಸೃಷ್ಟಿಸಿದವರು ಮತ್ತು ಸಕಲ ಭಕ್ತಾದಿಗಳು ಸಿಹಿ ಹಂಚಿ ಹೊಸಾ ಜಗನ್ನಾಧನ ಜನನದ ಸಂಭ್ರಮ ಪಡುತ್ತಾರೆ.

ರಥಯಾತ್ರೆ

ಪ್ರತಿವರ್ಷದ ಆಷಾಢ ಶುಕ್ಲ ದ್ವಿತೀಯದಂದು ಆರಂಭವಾಗಿ ಅಲ್ಲಿಂದ ನಿರಂತರವಾಗಿ ಅತ್ಯಂತ ಸಡಗರ ಸಂಭ್ರಮಗಳಿಂದ ವೈಭೋವೋಪೇತವಾಗಿ 7 ದಿವಸಗಳ  ಕಾಲ ನಡೆಯುವ ರಥಯಾತೆಯಲ್ಲಿ ಸಾಕ್ಷತ್ ಶ್ರೀ ಕೃಷ್ಣನೇ ಜಗನ್ನಾಥನಾಗಿ, ಜೊತೆಗೆ ಅವನ ಅಣ್ಣ  ಬಲಭದ್ರ ಅರ್ಥಾತ್ ಬಲರಾಮ ಮತ್ತು ತಂಗಿಯಾದ ಸುಭದ್ರೆಯ ಜೊತೆಗೆ ನಗರ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದ್ದು  ಅದಕ್ಕಾಗಿ ಪ್ರಪಂಚಾದ್ಯಂತ ಲಕ್ಷಾಂತರ ಜನರು ಅಲ್ಲಿಗೆ ಬರುತ್ತದೆ.

ಸಾಮಾನ್ಯವಾಗಿ ಬಹುತೇಕ ದೇವಲಗಳಲ್ಲಿ ಮೂಲ ವಿಗ್ರಹ ಮತ್ತು  ಉತ್ಸವಮೂರ್ತಿ ಎಂಬ ಎರೆಡೆರಡು ವಿಗ್ರಹಗಳಿದ್ದರೆ, ಪುರಿಯಲ್ಲಿ ಮಾತ್ರಾ ಮೂಲವಿಗ್ರಹಗಳನ್ನೇ ರಥಯಾತ್ರೆಯಲ್ಲಿ ಬಳಸಿಕೊಳ್ಳಲಾಗುತ್ತದೆ.  ಪ್ರತಿವರ್ಷವೂ ಹೊಸದಾಗಿ  ಮೂರು ರಥಗಳನ್ನು ನಿರ್ಮಿಸಲಾಗುತ್ತದೆ.  ಮೊದಲು 14 ಚಕ್ರಗಳಿರುವ ತಳಧ್ವಜ ರಥದಲ್ಲಿ ಅಣ್ಣ ಬಲಭದ್ರನನ್ನು ನಂತರ  12 ಚಕ್ರಗಳಿರುವ ದರ್ಪದಾಳನ ರಥದಲ್ಲಿ ತಂಗಿ ಸುಭಧ್ರೆಯನ್ನು ಕೂರಿಸಿ ನಂತರ   16 ಚಕ್ರಗಳಿರುವ  ನಂದಿಘೋಷ ರಥದಲ್ಲಿ ಜಗನ್ನಾಥ ಸ್ವಾಮಿಯನ್ನು ಸಾವಿರ ವರ್ಷಗಳ ಪುರಾತನ ಮಂದಿರದಿಂದ ಹೊರತಂದು  ಆಲಂಕೃತ ರಥಗಳಲ್ಲಿ ಕುಳ್ಳಿರಿಸಿ ಲಕ್ಷಾಂತರ ಜನರ ಸಮ್ಮುಖದಲ್ಲಿ  ಸೆಣಬಿನಿಂದ ಮಾಡಲ್ಪಟ್ಟ ಹಗ್ಗದಿಂದ ಸುಮಾರು ಮೂರು ಕಿಲೋಮೀಟರು ದೂರವಿರುವ ಗುಂಡೀಚ ಮಂದಿರದವರೆಗೆ ಎಳೆಯಲಾಗುತ್ತದೆ. ಶ್ರೀ ಜಗನ್ನಾಥ ಮಂದಿರದಿಂದ ಹೊರಟು ರಥಬೀದಿಯ ಮತ್ತೊಂದು ತುದಿಯ ನಿಗಧಿತ ಸ್ಥಳಕ್ಕೆ ತಲುವಲು ಕೆಲವೊಮ್ಮೆ ಎರಡು ದಿನಗಳಾದರೂ ಆಗಬಹುದು. ಸೂರ್ಯಾಸ್ತವಾದ ಕೂಡಲೇ, ರಥಬೀದಿಯಲ್ಲೇ ರಥವನ್ನು ನಿಲ್ಲಿಸಿ ಮಾರನೆಯ ದಿನ ಸೂರ್ಯೋದಯವಾದ ನಂತರ ಎಳೆಯುವ ಸಂಪ್ರದಾಯವಿದೆ.

ಈ ರೀತಿಯ ರಥಯಾತ್ರೆಗೂ ಒಂದು ಸುಂದರವಾದ ಕಥೆ ಇದೆ.  ಬೃಂದಾವನವನ್ನು ತೊರೆದು ಮಥುರೆಗೆ ತೆರಳಿದ ಕೃಷ್ಣ ಮತ್ತೆ ಹಂಬಲಿಸಿ ಬೃಂದಾವನಕ್ಕೆ ಭೇಟಿಕೊಡುವ ಸಂಕೇತವಾಗಿಯೇ ಈ ರಥಯಾತ್ರೆ ನಡೆಸಕಾಗುತ್ತದೆ ಎನ್ನುವ ನಂಬಿಕೆಯಿದೆ. ಗುಂಡೀಚ ಮಂದಿರ ಕೃಷ್ಣನ ಚಿಕ್ಕಮ್ಮನ ಮನೆಯಾಗಿದ್ದು ಅಲ್ಲಿ ಕೇವಲ ಚಿಕ್ಕಮ್ಮನಷ್ಟೆ ಅಲ್ಲದ್ದೇ ರಾಧೆಯೊಡಗೂಡಿ ತನ್ನೆಲ್ಲಾ  ಗೋಪಿಕಾ ಸ್ತ್ರೀಯರೂ ಮುರಳಿಗಾಗಿ ಕಾಯುತ್ತಿರುತ್ತಾರೆ. ಹೀಗೆ ರಥಯಾತ್ರೆಯ ಮೂಲಕ  ಅವರು ತನ್ನ ಚಿಕ್ಕಮ್ಮನ ಮನೆಗೆ ಬಂದು ಗೋಪಿಕಾ ಸ್ರೀಯೊರಡನೆ ರಾಸಲೀಲೆಯಲ್ಲಿ ಭಾಗವಹಿಸಲು ಇಚ್ಚಿಸುತ್ತಾನಾದರೂ,  ಶ್ರೀ ಜಗನ್ನಾಥ ಮಂದಿರದಲ್ಲಿರುವ  ಅವನ ಪತ್ನಿಯಾಗಿ ಲಕ್ಷ್ಮಿಯು ಶ್ರೀ ಕೃಷ್ಣನು ತನ್ನ  ಗೋಪಿಕೆಯರೊಂದಿಗೆ ಚೆಲ್ಲಾಟವಾಡುವುದಕ್ಕೆ ಹೋಗಲು ಬಿಡುವುದಿಲ್ಲ. ಹಾಗಾಗಿ  ಜಗನ್ನಾಥನು  ಶ್ರೀ ಲಕ್ಷ್ಮಿಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಬರುವ ಸಂಪ್ರದಾಯವೂ ರೂಢಿಯಲ್ಲಿದ್ದು ಹಾಗೆ ಲಕ್ಷ್ಮಿಯನ್ನು ಕೂಡಿ ಹಾಕಿದ ನಂತರವೇ ತನ್ನ ಅಣ್ಣ ಮತ್ತು ತಂಗಿಯರೊಡನೆ ಗುಂಡೀಚ ಮಂದಿರದಲ್ಲಿರುವ ತನ್ನ  ಚಿಕ್ಕಮ್ಮನ ಮನೆಗೆ ಸುಮಾರು ಒಂಬತ್ತು ದಿನಗಳು ಬರುತ್ತಾನೆ.

ಹೀಗೆ ವರ್ಷಕ್ಕೊಮ್ಮೆ ಬರುವ ಕೃಷ್ಣನನ್ನು ಸ್ವಾಗತಿಸಿ ಅವನ ಸಕಲ ಇಷ್ಟಗಳನ್ನೂ ಪೂರೈಸಲು ಬೃಂದಾವನದಲ್ಲಿ ಸಿದ್ಧವಾಗಿರುತ್ತದೆ ಅದರಲ್ಲೂ ಕೃಷ್ಣನಿಗೆ ಇಷ್ಟವಾದ ಪೋಡ ಪಿಟ್ಟಾ ಎಂಬುವ  ಅವಲಕ್ಕಿಯ ಸಿಹಿಯನ್ನು ಹೇರಳವಾಗಿ ಮಾಡಲಾಗಿರುತ್ತದೆ. ಇತ್ತ ತನ್ನನ್ನು ಕೊಠಡಿಯಲ್ಲಿ ಕೂಡಿ ಹಾಗಿ ಬೃಂದಾವನಕ್ಕೆ ಬಂದಿರುವ ವಿಷಯವನ್ನು ಅರಿತ  ಲಕ್ಷ್ಮಿಯು ರಥಯಾತ್ರೆಯ ಐದನೇ ದಿನ ತನ್ನ ಪತಿಯನ್ನು ಹುಡುಕಿಕೊಂಡು ಬಂನೇರವಾಗಿ ಅವನ ಚಿಕ್ಕಮ್ಮನ ಮನೆಯಾದ ಗುಂಡೀಚಕ್ಕೆ ಬಂದು ಕೃಷ್ಣನ ಮೇಲೆ ಕೊಂಚ  ಕೋಪವನ್ನು ತೋರಿಸಿ ಅವನು ಹಿಂದಿರುಗುವ ಸಮಯದಲ್ಲಿ ತೊಂದರೆ  ಅನುಭವಿಸುತ್ತಾ ಬರಲಿ  ಎನ್ನುವ ಆಶಯದಿಂದ  ಅವನ ರಥವನ್ನು ಸ್ವಲ್ಪ ಭಂಗ ಮಾಡಿ ಹೋಗುತ್ತಾಳೆ.

ರಥ ಯಾತ್ರೆಯ  ಒಂಬತ್ತನೇ ದಿನ ತಮ್ಮ  ಸಹೋದರ ಮತ್ತು ಸಹೋದರಿಯೊಡನೆ ಮತ್ತೆ ರಥವೇರಿ ಜಗನ್ನಾಥ ಮಂದಿರಕ್ಕೆ ವಾಪಸು ಬರುವುದನ್ನು ಬಹುಡ ಯಾತ್ರಾ ಅರ್ಥಾತ್ ಹಿಂದಿರುಗುವ ಯಾತ್ರೆ ಎಂದು ಕರೆಯಲಾಗುತ್ತದೆ.  ಕೃಷ್ಣ ಬರುವುದನ್ನೇ ಎದುರು ನೋಡುತ್ತಿರುವ  ಲಕ್ಷ್ಮೀ ದೇವಿಯು  ಭಾವ ಬಲಭದ್ರ ಮತ್ತು ನಾದಿನಿ ಸುಭದ್ರೆಯನ್ನು ಯಾವುದೇ ತೊಂದರೆಇಲ್ಲದೇ ಗುಡಿಯೊಳಗೆ ಸೇರಿಸಿಕೊಂಡು  ಜಗನ್ನಾಥನನ್ನು ಮಾತ್ರಾ ಬಡಪಟ್ಟಿಗೆ ಒಳಗೆ  ಸೇರಿಸದೇ  ತಡೆಯುತ್ತಾಳೆ.  ಆಗ ಲಕ್ಷ್ಮೀ ದೇವಿಯನ್ನು ಹೇಗೆ ಒಲಿಸಿಕೊಳ್ಳಬೇಕು ಎಂದು ಅರಿತಿರುವ ಜಗನ್ನಾಥನು ಅವಳಿಗೆ  ರಸಗುಲ್ಲಾ ತಿನ್ನಿಸಿ ವಶ ಕೊಳ್ಳುವ ಸಮಯದಲ್ಲೇ, ಆಕೆಯೂ ಶ್ರೀಕೃಷ್ಣ ತನ್ನ ಗೋಪಿಕೆಯರನ್ನು ಮರೆಯುವಂತೆ ಮಾಡಲು ಆತನ ಮೇಲೆ ಮಂತ್ರದ್ರವ್ಯಗಳನ್ನು ಸಿಂಪಡಿಸಿ  ಒಳಗೆ ಸೇರಿಸಿಕೊಳ್ಳುತ್ತಾಳೆ. ದುರಾದೃಷ್ಟವಷಾತ್ ಆ ಮಂತ್ರದ್ರವ್ಯದ ಶಕ್ತಿ ಕೇವಲ ಒಂದು ವರ್ಷಕ್ಕಷ್ಟೆ ಸೀಮಿತವಾಗಿದ್ದು ಯಥಾ ಪ್ರಕಾರ  ಮುಂದಿನ ವರ್ಷದ ರಥಯಾತ್ರೆಯಲ್ಲಿ ಕೃಷ್ಣ ಅದೇ ಚಾಳಿಯನ್ನು ಮುಂದುವರೆಸುವುದು ವಿಪರ್ಯಾಸ.

ಈ ರೀತಿಯಲ್ಲಿ ಪುರಿಯಲ್ಲಿ ಜಗನ್ನಾಥನ ರಥಯಾತ್ರೆಯು ನಡೆಯುವ ಸಂಧರ್ಭದಲ್ಲಿ ವಿಪರೀತ ಬಿಸಿಲು ಇರುವ ಕಾರಣ,  ರಥಬೀದಿ ಬಹುತೇಕ ಕಡೆಯಗಳಲ್ಲಿ ಭಕ್ತರ ಮೇಲೆ ನೀರನ್ನು ಸಿಂಪಡಿಸುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆಯಲ್ಲದೇ,  ಉಚಿತವಾಗಿ ಊಟೋಪಚಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಬಹುತೇಕ  ಕಾರ್ಪರೇಟ್ ಸಂಸ್ಥೆಗಳು ಮತ್ತು ಇತರೇ ಖಾಸಗಿ ವ್ಯಕ್ತಿಗಳು ಮತ್ತು ಇಸ್ಕಾನ್ ಸಂಸ್ಥೆ ಮಾಡಲಾಗುತ್ತದೆ. ದೂರ ದೂರದಿಂದ ಅಪರೂಪದ ಈ ರಥಯಾತ್ರೆಯನ್ನು ಕಾಣಲು ಬರುವ ಭಕ್ತಾದಿಗಳು ಎರಡೂ ಕೈಗಳನ್ನೆತ್ತಿ ಬಹಳ ಭಕ್ತಿ ಮತ್ತು ಪ್ರೀತಿಯಿಂದ ಮುಗಿಲೆತ್ತರಕ್ಕೆ ಜೈ ಜಗನ್ನಾಥ್ ಎಂಬ ಘೋಷಣೆಗಳನ್ನು ಕೂಗಿದರೆ ಮತ್ತೇ ಕೆಲವರು ಜೈ ಕಾಲಿಯ ಎಂಬ ಘೋಷಣೆಯನ್ನೂ ಕೂಗುತ್ತಾರೆ. ಕಾಲಿಯ ಎಂದರೆ ಒರಿಯಾ ಭಾಷೆಯಲ್ಲಿ ಕರಿಯ  ಎಂಬ ಅರ್ಥವಿದ್ದು ತಮ್ಮ ಪ್ರೀತಿ ಪಾತ್ರನಾದ ಕೃಷ್ಣ  ಕಪ್ಪು ಬಣ್ಣದವನಾಗಿರುವ ಕಾರಣ ಅವರನ ಮೇಲಿನ ಪ್ರೀತಿ ಮತ್ತು ಸಲಿಗೆಯಿಂದಾಗಿ ಕಾಲಿಯಾ ಎಂದೇ ಸಂಬೋಧಿಸುವುದು ಹೆಚ್ಚು ಅಪ್ಯಾಯ ಮಾನ ಎನಿಸುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

.

Leave a comment